ಇರುವಿಕೆಯ ಹಡಗು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಈ ಚೆಲುವ ಜೀವ ಬದಲಾಗಿ ಸರಿಯಾಗಿ ಮೂರು ದಿನ
ಸಕ್ಕರೆ ಎಂದೂ ಕಹಿಯಲ್ಲ. ಇಂದೇಕೆ ಸಿಹಿಯೂ ಹುಳಿ?
ಮಧುಪಾತ್ರೆ ಜೀವ ಜಲವಿದ್ದ ಚಿಲುಮೆಯಲ್ಲಿಟ್ಟೆ
ನೀರು ಪೂರಾ ರಕ್ತ ಸಿಕ್ತವಾದದ್ದ ಕಣ್ಣಾರೆ ಕಂಡೆ
ಎರಡು ಲಕ್ಷ ಗುಲಾಬಿ ಬೆಳೆವ ನಂದನವನ
ಹಣ್ಣು ಹೂ ಚಿಗುರುಗಳ ಬದಲಿಗೆ ಬರೀ ಕಲ್ಲು ಮುಳ್ಳು ಮರುಭೂಮಿ
ಭೂತ ವೈದ್ಯನುದ್ಯೋಗವೇ ಮಂತ್ರ ಪಠನ
ಭೂತ ಮುಖಕ್ಕೆ ಯಂತ್ರಜಾಲ ನಿರ್ಮಾಣ
ಲಕ್ಷ ಮಂತ್ರ ಪಠಿಸಿದರೂ ವ್ಯರ್ಥವಾಯಿತಲ್ಲ
ಭೂತಗಣ ದಿಗ್ಧಂಧನಕ್ಕೆ ಬಾರಲೇ ಇಲ್ಲ.
ಭೂತದ ಹುಬ್ಬಲ್ಲಿ ಯಾವುದೋ ಪ್ರಾಚೀನ ರೋಷ
ಲೈಲಳ ಗಂಟಿಕ್ಕಿದ ಹುಬ್ಬು ಮಜನೂವಿನ ಸರ್ವನಾಶ
ಬಾ, ಬಾ, ನೀನಿಲ್ಲದ ನಾನು ಜೀವ ಹೀನ
ನೋಡು, ನೋಡು ನೀನಿಲ್ಲದ ನನ್ನ ಕಣ್ಗಳ ರಕ್ತಯಾನ
ನಿನ್ನ ಚಂದ್ರಮುಖ ಜ್ಯೋತಿಸ್ಪರ್ಶ, ಕಣ್ಣಿಗೆ ಹೊಸ ಕಾಂತಿ
ಮನುಕುಲಕ್ಕೆ ಮೀರಿದ ನನ್ನೆಲ್ಲ ಪಾಪಮುಕ್ತಿ
ಹೃದಯ ತಿರುತಿರುಗಿ ಕೇಳಿತು : ನನ್ನ ಪಾಪ ಸ್ವರೂಪವೇನು?
ಪ್ರತಿ ಕಾರಣದ ಜತೆಗುಂಟು ಅದರ ಪರಿಣಾಮ
ಕಟ್ಟ ಕಡೆಯ ದಂಡಾಧಿಕಾರಿಯ ಧ್ವನಿ ಕೇಳಿಸಿತು
“ಆತ್ಮ ಶೋಧನೆ ಬೇಡ, ಅಪರಾಧ ಈಗಿನದಲ್ಲ”
ಕೊಡುಗೆಯೂ ದೇವನದೆ, ಕೊಳ್ಳೆಯೂ ದೇವನದೆ
ತಂದವನೂ ಆತನೆ, ತೆಗೆವನೂ ಆತನೆ, ಎಲ್ಲ ತರ್ಕಹೀನ
ಬಾ, ಬಾ, ಈಗಲಾದರೂ ಇದು ಅವನ ಕೃಪೆ
ಗೊಣಗದೆ ತೆಗೆದ ಸ್ವರ್ಗದ ಬಾಗಿಲು
ಮುಳ್ಳುಗಳಾಚೆಗಿನ ಹೂವು, ಕಲ್ಲ ಕಠಿಣದಾಚಿಗಿನ ಕಾರುಣ್ಯ
ಈ ದಿವ್ಯ ಕೃಪೆ ಅನಂತ, ಇರುವಿಕೆಯ ಹಡಗಿಗೆ ಸಾವಿರ ಕೀಲಿ ಕೈ
*****