ಆತನ ಕೈ ಬಟ್ಟಲು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಈ ಸಾವಿರ ನಾನು-ನಾವುಗಳ ಮಧ್ಯ ನನಗೆ ಗೊಂದಲ
ನಿಜಕ್ಕೂ ನಾನ್ಯಾರು? ನನ್ನ ಪ್ರಲಾಪಕ್ಕೆ ಕಿವಿಕೊಡಬೇಡ, ಬಾಯಿಕಟ್ಟಲೂ ಬೇಡಿ

ಸಂಪೂರ್‍ಣ ಹುಚ್ಚ ನಾನು, ದಾರಿಯಲ್ಲಿ ಗಾಜಿನ ಪಾತ್ರೆ ಇಡಬೇಡಿ
ಇಟ್ಟರೆ ನಾನು ಕಂಡದ್ದೆಲ್ಲ ಒದ್ದು ಚೂರು ಚೂರು

ಪ್ರತಿ ಕ್ಷಣವೂ ನಿನ್ನ ಭ್ರಮೆಯಿಂದಾಗಿ ನನಗೆ ಮಹಾಗೊಂದಲ
ನೀನು ಆನಂದಮಯವೆ? ನಾನೂ ಹಾಗೆ, ನೀನು ದುಃಖಿಯೇ? ನಾನೂ ಅಷ್ಟೆಯೆ

ನೀನು ನನಗೆ ಕಹಿಕೊಟ್ಟೆ, ನಾನೂ ಕಹಿಯಾದೆ
ನೀನು ನನಗೆ ಕಾಂತಿ ನೀಡಿದೆ, ನಾನೂ ಕಾಂತಿಯುಕ್ತನಾದೆ

ನಮ್ಮಿಬ್ಬರ ನಡುವೆ ನೀನೆ ಮೂಲ, ಯಾರು ನಾನು?
ನಿನ್ನ ಕೈಯ ಕನ್ನಡಿ ನಾನು, ಏನು ತೋರುತ್ತಿಯೊ ಅದರ ಪ್ರತಿಫಲನ

ನಂದನವನದ ದೇವದಾರು ವೃಕ್ಷ ನೀನು, ನಾನು ನಿನ್ನ ನೆರಳು
ಗುಲಾಬಿಯ ನೆರಳಾದ ನಾನು, ಗುಲಾಬಿಯ ಪಕ್ಕ ಗೂಡಾರವಿಟ್ಟೆ

ಪ್ರತಿ ಕ್ಷಣವೂ ನಾನೂ ಎದೆಯ ಬಟ್ಟಲಿಂದ ರಕ್ತ ಹೊರಚೆಲ್ಲಿದೆ
ಸಾಖಿಯ ಬಾಗಿಲಿಗೆ ಆ ಬಟ್ಟಲು ಮತ್ತೆ ಮತ್ತೆ ಚಚ್ಚಿದೆ

ಸೆರಗು ಹಿಡಿಯಲು ಪ್ರತಿಕ್ಷಣ ಕೈ ಚಾಚಿದೆ
ಹರಿಯಲಿ ಬಟ್ಟೆ, ಕಪಾಳ ಮೋಕ್ಷವಾಗಲಿ ಎಂದು ಹಂಬಲಿಸಿದರೆ

ಹೃದಯ ಮಧ್ಯದಲ್ಲಿ ಸಲಾಹಿದಿಲ್ ಉದೀನನ ಪ್ರಭೆಯ ಪ್ರಕಾಶ
ಈ ಲೋಕದಲ್ಲಾದ ಹೃದಯದ ದೀಪ

ನಾನು ಯಾರು?
ಆತನ ಕೈಬಟ್ಟಲು
*****