ಶೂನ್ಯದ ಗುಟ್ಟು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಮುಂಜಾವಿನಲ್ಲಿ ಚಂದ್ರ ಕಾಣಿಸಿಕೊಂಡು
ಕೆಳಗಿಳಿದು ಬಂದ, ನನ್ನನ್ನೆ ನೋಡಿದ
ಬೇಟೆ ಹದ್ದು ಗಕ್ಕನೆರಗಿ ಹಿಡಿದಂತೆ ಹಕ್ಕಿ
ಹೊತ್ತು ನನ್ನನ್ನು ಆಕಾಶಕ್ಕೆ ಹಾರಿದ

ನನ್ನನ್ನು ನೋಡಿಕೊಂಡೆ ನಾನು ಇರಲೇ ಇಲ್ಲ
ಚಂದ್ರನ ಬೆಳಕಿನಲ್ಲಿ ನನ್ನ ದೇಹ ಆತ್ಮವೇ ಅಗಿಬಿಟ್ಟಿತ್ತು
ಆತ್ಮದೊಳಗೆ ನಾನು ಪ್ರಯಾಣ ಮಾಡಿದೆ
ಬರೀ ಚಂದ್ರನೆ ಕಂಡ ಎಲ್ಲೆಲ್ಲೂ ಬರೀ ಚಂದ್ರನೆ
ಶೂನ್ಯದ ಗುಟ್ಟೆಲ್ಲ ಬಿಚ್ಚಿಟ್ಟ ಹಾಗೆ

ದೇವಲೋಕದ ನವ ನೆಲೆಗಳೆಲ್ಲ ಚಂದ್ರನಲ್ಲಿ ಕರಗಿ ಹೋದವು
ಜೀವದ ಹಡಗು ಸಮುದ್ರದಲ್ಲಡಗಿ ಕೂತಿತು
ಸಮುದ್ರ ಉಕ್ಕಿತು ಅರಿವು ಮರಳಿತು ಸುತ್ತ ದನಿ ಹರಡಿತು
ಎತ್ತ ತಿರುಗಿದರೂ ಅದೇ ದನಿ
ಎದ್ದಿತು. ಬಿದ್ದಿತು

ಕಡಲ ನೊರೆ ನೊರೆಯುಕ್ಕಿತ್ತು, ಪ್ರತಿನೊರೆಯ ನಡುವಿಂದ
ಏನೂ ಎದ್ದು ಮೈತಾಳಿ ಬಂದಿತ್ತು
ಪ್ರತಿ ನೊರೆ ನರಜಿನ ಮೈ ಸಮುದ್ರದ ಕುರುಹು ಪಡೆದು
ಮತ್ತದೇ ಸಮುದ್ರದಲ್ಲಿ
ಬಯಲಾಗಿ ಬಿಟ್ಟಿತ್ತು
ತಬ್ರೀಜಿನ ಅದೃಷ್ಟವಿರದೆ
ಚಂದ್ರನೂ ಸಿಗುವುದಿಲ್ಲ, ಸಮುದ್ರವೂ ಆಗಲಾಗುವುದಿಲ್ಲ
*****