ಕವಿತೆ ಬರೆಯುತ್ತೇನೆಯೆ ನಾನು?
ಇಲ್ಲ ಬಿಡು
ನಿನಗಾಗಿ ನಾನು ಸತ್ತುಕೊಳ್ಳುವದಿಲ್ಲ
ಇಲ್ಲದವುಗಳ ಬಿಚ್ಚಿ ತೆತ್ತುಕೊಳ್ಳುವದಿಲ್ಲ
ಮೊಲೆಯಿರದ ಮೊಳಕೆಗಳ ಬಿತ್ತುಕೊಳ್ಳುವುದಿಲ್ಲ
ನೀನೇನೋ ಅಂದುಕೊಂಡಿದ್ದೀಯ
ಎಂದು ಅವರಂತಾಗಲು
ವ್ಯಕ್ತಿತ್ವ ಸ್ಖಲಿಸಿಕೊಂಡು
ಆಕಾಶದಲ್ಲಿಯೇ ಮನೆ ಕಟ್ಟಿಕೊಳ್ಳುವುದಿಲ್ಲ.
ತಪ್ಪಿಸಿಕೊಳ್ಳುತ್ತ
ಹಗುರು ನೆವಗಳ ಕೊರತೆ
ಹಗಲೆಲ್ಲ ನಾನಾಗಿ ಹೊದ್ದುಕೊಳ್ಳುತ್ತೆ
ಹಾಲು ಮಗುವಿನ ಹಿತ ಭೇದಿಯಲ್ಲಿ
ಬಾಲಿಶಬಾಲ್ಯ ಮುತ್ತಿಕ್ಕಿ ಅದ್ದಿಕೊಳ್ಳುತ್ತೆ
ಜತೆಗೆ ಹಿಂದಿನ ಗೋಲಿಗಳೆಲ್ಲ
ಇಂದಿನ ನೀನಾಗಿ ಹರಡಿಕೊಳ್ಳುತ್ತೆ
ಯಾವುದಕ್ಕೂ ಬೇಕು ನೋಡು ಒಂದು ಇತಿಹಾಸ
ಒಪ್ಪಿಕೊಳ್ಳಲಿ ಬಿಡಲಿ
ನಾನೀಗಲು ಮಗುವಾಗಲಾರೆ
ಅವಾಸ್ತವ ನಗುವೂ ಆಗಲಾರೆ
ಆದಷ್ಟು ಯತ್ನಿಸುತ್ತೇನೆ ನೋಡು
ನೀನಾಗಲು
ತಪ್ಪಿದರೆ ನಿನ್ನ ಬಗೆಗಿನ ನನ್ನ ಕವಿತೆಯಾಗಲು.
*****