ಪ್ರಯಾಣ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಮರಕ್ಕೆ ಕಾಲೊ ರೆಕ್ಕೆಯೊ ಇದ್ದಲ್ಲಿ
ಅದಕ್ಕೆ ಕೊಡಲಿ ರಂಪಗಳ ಭಯವಿಲ್ಲ

ಸೂರ್‍ಯನಿಗೆ ರೆಕ್ಕೆಯೊ ಕಾಲೋ ಇಲ್ಲದೆ
ಮುಂಜಾವಿನ ಲೋಕಕ್ಕೆ ಬೆಳಕು ಹೇಗೆ?

ಸಾಗರದ ಉಪ್ಪು ನೀರು ಚಿಮ್ಮದೆ ಆಕಾಶಕ್ಕೆ
ವನರಾಜಿ ಮಳೆಯಿಲ್ಲದೆ ಚಿಗುರಿತು ಹೇಗೆ?

ಹನಿ ತವರು ಬಿಟ್ಟು ಹೊರ ಹೋಯಿತು
ಮತ್ತೆ ತವರಿಗೆ ತೆರಳಿ ಚಿಪ್ಪೊಳಗೆ ತೆವಳಿ ಮುತ್ತಾಯಿತು

ತಂದೆಯಿಂದ ಬೇರಾದ ಕಂದ ಜೋಸೆಫ್ ಅತ್ತದ್ದು
ದಾರಿ ಮಧ್ಯದಲ್ಲೆ ನೂರು ನಾಡುಗಳ ದೊರೆತನ ಪಡೆದದ್ದು

ನಿನಗೆ ಕಾಲಿಲ್ಲವೆ? ನಿನ್ನೆ ಆಯ್ಕೆ ಮಾಡಿಕೊ ದಾರಿ
ಕನಕ ರತ್ನದಂತೆ ಪ್ರತಿಫಲಿಸಲಿ ಸೂರ್‍ಯ ಕಿರಣಾವಳಿ

ದೊರೆ, ಇದು ಆತ್ಮದೊಳಗಿಂದ ಆತ್ಮಕ್ಕೆ ಪ್ರಯಾಣ
ಇಂಥ ಪ್ರಯಾಣದಿಂದಲೇ ನೆಲ ಚಿನ್ನದ ಗಣಿ

ಹುಳಿ ಕಹಿಯ ದಾಟಿ ಸಿಹಿಯ ಕಡೆ ಹೋಗು
ಸಾವಿರ ಹಣ್ಣು ಕಹಿ ಕಳೆದುಕೊಂಡಂತೆ ಮಾಗು

ಸ್ವೀಕರಿಸು, ಶಂಸ್ ಸೂರ್‍ಯನಿಂದ ಮಾಧುರ್‍ಯ
ಹಣ್ಣಿಗೆ ಕಾಂತಿ ನೀಡುವುದೇ ಸೂರ್‍ಯ ಕಾರ್‍ಯ
*****