ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ನಾನು ಕಲಾವಿದ, ಚಿತ್ರಗಳ ಸೃಷ್ಟಿಕರ್‍ತ, ಪ್ರತಿಕ್ಷಣವೂ ಚಿತ್ರ ನಿರ್ಮಾಣ
ಎಲ್ಲ ಮುಗಿದ ನಂತರ ನಿನ್ನ ಸನ್ನಿಧಿಯಲ್ಲಿ ಅವೆಲ್ಲದರ ನಿರ್‍ನಾಮ
ನೂರು ಆಕಾರಗಳ ಅವಾಹನೆ ನನ್ನಿಂದ, ಜೀವ ಪ್ರತಿಷ್ಠಾಪನ
ಮತ್ತೆ ನಿನ್ನ ಆಗಮನ, ಅವೆಲ್ಲದರ ಸಜೀವ ದಹನ
ನೀನೆ ಮಧು ಪರಿಚಾರಕನೊ, ಇಲ್ಲ ಅವನ ಶತ್ರು ಸದಾ ಸ್ವಸ್ಥ ಚಿತ್ತನೊ
ನಾನು ಕಟ್ಟಿದ ಪ್ರತಿ ಮನೆಯ ವಿನಾಶಕನೊ ನೀನು?
ನಿನ್ನೊಳಗೆ ಕರಗಿದೆ ನನ್ನಾತ್ಮ, ಆಗಿಹೋಯಿತು ಮಿಲನ
ನಾನು ನಿನ್ನಾತ್ಮದ ಆರಾಧಕ, ಮಿಲನದಲ್ಲಿ ಆ ಸುಂಗಂಧದ ಸಂಚಲನ
ನನ್ನ ದೇಹದ ಪ್ರತಿಯೊಂದು ಹನಿ ರಕ್ತ ಚೀರಿತು
ಈ ನೆಲದ ಧೂಳಿಗೆ ಮತ್ತೆ ಮತ್ತೆ ಹೇಳಿತು
“ನಾನು ನಿನ್ನ ವರ್‍ಣದೊಳಗೆ ಸದಾ ವಿಲೀನ
ನಿನ್ನ ಪ್ರೇಮದ ಪಾಲುದಾರ ನಾನು”
ಈ ಜೇಡಿಮಣ್ಣು ಮತ್ತು ನೀರಿನ ಮನೆ ನೀನಿಲ್ಲದೆ ಭಣಭಣ
ಇಲ್ಲಿಗೆ ನೀನು ಬರುವುದಿಲ್ಲ! ಇಗೋ ಈ ಕ್ಷಣವೆ ಇಲ್ಲಿಂದ ನನ್ನ ಪಲಾಯನ
*****
