ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ನಾನೊಂದು ಮರ ಕಂಡೆ, ಹಾಗೆ ಬೆಂಕಿಯನ್ನು ಕಂಡೆ
ಕರೆ ಕೇಳಿಸಿತು-ಚಿನ್ನ, ಆ ಅಗ್ನಿ ನನ್ನ ಕೂಗಿತೆ?
ಒಡಲು ಬೆಂದು ಕಾಡು ಹೊಕ್ಕಿ, ದಿವ್ಯ ಕೃಪೆ ಕರುಣಿಸಿದ
ಅನ್ನ ಪಾನವನುಂಡು ಈ ಮರುಭೂಮಿಯಲ್ಲಲೆದಾಡಿದೆ, ನಲವತ್ತು ವರುಷ
ಹಡಗು ಕಡಲುಗಳ ಬಗ್ಗೆ ಪ್ರಶ್ನೆಬೇಡ, ಬನ್ನಿ ನೋಡಿ ಪವಾಡ
ಈ ಒಣ ನೆಲದ ಮೇಲೆ ನಾನು ಹಡಗು ನಡೆಸಿದ ಜಾಡ
ಬಾ ಆತ್ಮವೇ, ನೀನೆ ಮೋಸೆಸ್, ಈ ದೇಹವೇ ನಿನ್ನ ದಂಡ
ನೀನೆತ್ತಿಕೊಂಡರೆ ನಾನು ದೇವ ದಂಡ, ಅತ್ತ ತಳ್ಳಿದರೆ ನಾನು ತೆವಳುವ ಸರ್‍ಪ
ನೀನು ಕ್ರಿಸ್ತ, ನಾನು ಹಕ್ಕಿ, ಜೇಡಿ ಮಣ್ಣಿಂದ ನೀನು ಮಾಡಿದ ಹಕ್ಕಿ
ನೀನು ಉಸಿರೂದು, ನನ್ನ ಪ್ರಯಾಣ ಆ ಕ್ಷಣವೇ ದಿಗಂತಕ್ಕೆ
ನಾನು ಪ್ರವಾದಿ ಒರಗಿದ ಮಸೀದಿಯ ಕಂಭ
ಆತ ಬೇರೆ ಕಂಭಕ್ಕೊರಗಿದನೆ? ವಿರಹದ ಚೀರು ನನ್ನಿಂದ
ದೊರೆಗಳ ದೊರೆಯೆ, ಆಕಾರಗಳ ಸೃಷ್ಟಿಸುವ ನಿರಾಕಾರಿಯೆ
ನನ್ನನ್ನೂ ಯಾವ ಆಕಾರದೊಳಗೆ ದೂಡುತ್ತಿದ್ದಿ! ಇದೆಲ್ಲತಿಳಿಯದ ಮಾಯೆ!
ಈಗ ಆನು ಹೆಬ್ಬಂಡೆ ಇದೀಗ ಕಬ್ಬಿಣ ಮತ್ತೆ ಕಾಲಾಗ್ನಿ
ಈಗ ನಾನು ಭಾರವಿರದ ತಕ್ಕಡಿ ಮತ್ತಾದ ಭಾರ ಮತ್ತು ತಕ್ಕಡಿ
ಈ ದೇಹ ಬರೀ ಕುರುಹು, ಅದು ಶಾಶ್ವತವೆ?
ದೇಹವೂ ಶಾಶ್ವತವಲ್ಲ, ಕುರುಹು ಅಲ್ಲ
ನನ್ನವನಿಗೆ ಹಾಗೆಂದು ಗೊತ್ತು
*****
