ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಧಣಿಗೇ ಮುಕ್ತಿ ಕೊಟ್ಟ ಜೀತದಾಳು ನಾನು
ಗುರುವಿಗೇ ತಿರುವಿದ್ಯೆ ಕಲಿಸಿದವನು
ನಿನ್ನೆ ತಾನೇ ಹುಟ್ಟಿದ ಆತ್ಮ ನಾನು
ಇಷ್ಟಾದರೂ ಪ್ರಾಚೀನ ಲೋಕಗಳನ್ನು ನಿರ್‍ಮಿಸಿದವನು
ನಾನು ಹಾಗೇ ಮೆತ್ತಗೆ ಕರಗುವ ಮೇಣ
ಆದರೂ ಉಕ್ಕನ್ನು ಉಕ್ಕಾಗಿಸಿದ ಜಂಭದವನು
ಅಂಧರಿಗೆ ದಿವ್ಯದರ್‍ಶನದ ಚಿತ್ರಕಾರ ನಾನು
ಮತಿಗೇಡಿಗಳಿಗೆ ಮತಿ ನೀಡಿದವನು
ಕಾಳ ಶೋಕದ ಕಗ್ಗತ್ತಲಲ್ಲಿ ಕಪ್ಪು ಮೋಡದವನು
ಹಾಗೆಯೇ ಹಬ್ಬದಲ್ಲಿ ಹರ್‍ಷದ ಮಳೆಯಾದವನು
ನಾನೇ ಮಹಾ ವಿಸ್ಮಯದ ಧರಿತ್ರಿ
ನನ್ನದೇ ಪ್ರೇಮದಗ್ನಿಯಿಂದ ಆಕಾಶಕ್ಕೆ ವಾಯು ತಂದ ಕೀರ್‍ತಿ
ಈ ಗುಲಾಮನಿಗೆ ನಿನ್ನ ರಾತ್ರಿ ದೊರೆಯ ನೆನಕೆ
ಹೀಗಾಗಿ ನನ್ನ ದೊರೆಗೆ ಇಡೀ ರಾತ್ರಿ ಸಂತಸದ ನಿದ್ರೆ
ನಿನ್ನೆ ರಾತ್ರಿ ರಂಪ ರಂಕಲು ಮಾಡಿದ್ದು ನಾನೆ
ಎಂದು ದೂರಬೇಡ ಧಣಿ, ನನ್ನ ಕುಡಿಸಿ ಚಿತ್ತಾಗಿಸಿದ್ದು ನೀನೆ
ಮೌನ, ಕನ್ನಡಿಗೆ ತುಕ್ಕು ಹಿಡಿಯುತ್ತಿದೆ
ಅದಕ್ಕೆ ಎದುರಾದೆ, ಅದು ಪ್ರತಿಭಟಿಸಿತು.
*****
