ಹೊಸ ಬಾಳಿನ ಯೋಜನೆ

ಇದು ನೆಲದ ತುಂಡಲ್ಲ
ಐದು ಖಂಡದ ಅಖಂಡ ಜೀವ ಪಿಂಡ.
ಇದರ ಬದುಕಿನ ಮೇರೆ ಭೋರ್‍ಗರೆವ ಸಾಗರವು
ಜೊಂಡು ಪಾಚಿಯ ಚಿಕ್ಕ ಹೊಂಡವಲ್ಲ.

ವಿಶ್ವದಂಚಿನವರೆಗು ತೇಲಿಬಿಡು ನೌಕೆಗಳ
ಸಪ್ತಸಾಗರಗಳನು ಸುತ್ತಿಬರಲಿ;
ಕಳಿಸಿದರೆ ಕಳಿಸು ಬೆಲೆ ಬಾಳುವಂತಹ ಸರಕು
ಎಲ್ಲ ಬಂದರುಗಳಿಗು ಹಾದು ಬರಲಿ.

ಹಿಮಗಿರಿಗೆ ದಾರಿಯನು ಕೊರೆದು ಏರುವ ವೀರ
ಏರಯ್ಯ ನೂರು ಶಿಖರ.
ಇಳಿದು ಬಾ ಮತ್ತೆ, ಭಾಗೀರಥಿಯ ತೆರದಲ್ಲಿ
ಅಲ್ಪರಿದು ಬೆಂಗಾಡಿನುದ್ದಕು ಸುರಿದು-
ದೂರವಿದೆ ನಮ್ಮ ತೀರ.

ಇಂಚುಪಟ್ಟಿಯ ಹಚ್ಚಿ ನಾಡಿನುದ್ದಗಲಗಳ
ಅಳೆಯುವದು ಬೇಡ ತಮ್ಮ,
ನಡು ನಡುವೆ ಗಡಿ ಕೊರೆದು ಆಡದಿರು ‘ಹುಡುತುತು’
ಹೂಡದಿರು ಹೋರಿಗಳ ಸುಮ್ಮ ಸುಮ್ಮ.

ಕಾರ ಹುಣ್ಣಿವೆ ಬರಲಿ, ತೋರಣವ ಕಟ್ಟೋಣ
ಕರಿ ಹರಿದು ಮೆರೆಸೋಣ ಕಹಳೆ ಹಚ್ಚಿ-
ಆ ವರೆಗು ಈ ಹೊಲದ ಬದುಕು ಹದಗೊಳಿಸೋಣ
ರಂಟೆ ಕುಂಟೆಯ ಹಿಡಿದು ಬೆವರು ಹರಿಸಿ.

ಬಾ ಬಂಧು, ಹೆಗಲು ಕೊಡು, ನಡುದಾರಿಯಲಿ ನಿಂತ
ಈ ರಥವ ಸಾಗಿಸೋಣ.
ಮಿಣಿಗೆ ಸಾವಿರ ಕೈಗಳಾದರೂ ಸಾಲದೋ
‘ದಣಿದೆ’ವೆಂದರೆ ಗಾಲಿ ಸಾವಿರ ಮಣ.

ಇದು ನಮ್ಮ ದೇವರ ಜಾತ್ರೆ, ತುಂಬು ಪ್ರಾಣದ ಪಾತ್ರೆ
ಗಂಟೆ ಬಡಿ, ಅಂಗಾರ ಹಣೆಗೆ ಹಚ್ಚು,
ಹೊರಡು ಪಂಡರಪುರದ ತನಕ ದಿಂಡೀಯಾತ್ರೆ
ಆಸೇತು ಹಿಮಗಿರಿಗೆ ಹಡದಿ ಹಾಸು.

ಏರು ದೇವರಗುಡ್ಡ, ಕೇಳದವನೇ ದಡ್ಡ:
‘ಏಳ್ಕೋಟಿಗೇಳ್ಕೋಟಿಗೇಳ್ಕೋಟಿಗೋ’
ಇನ್ನು ಮುನ್ನೂರ್‍ಕೋಟಿ ಜಾಂಗಟೆಯ ಬಡಿದಿಹವು
ತೆರವಿರುವ ಕಡೆಯಲ್ಲಿ ಬರಮಾಡಿಕೊ.

ಕೊಲ್ಲಾರಿ ಚಕ್ಕಡಿಗಳೆಲ್ಲ ‘ನಿನ್ನಾಲ್ಕುಧೋ’
ಏಳು ಕೊಳ್ಳದ ತಾಯಿ ಎಲ್ಲರಮ್ಮ;
ಎಲ್ಲ ಸುಖ ದುಃಖಗಳ ಹಡಲಿಗೆಯ ಹೊತ್ತೇವು
ಭಾರತದ ಭಂಡಾರ ಬೆಳೆಯಲಮ್ಮ.

ಕಟ್ಟಬೇಕಿನಾಡ ತೊಟ್ಟು ಹೊಸ ದೀಕ್ಷೆಯನು
ಕಷ್ಟಗಳ ಕಂಕಣವ ಕೈಗೆ ಕಟ್ಟಿ,
ಹಳ್ಳಿ ದಿಳ್ಳಿಯವರೆಗೆ ನೂರು ದಾರಿಯ ಸಮೆದು
ಎಲ್ಲರಿಗು ಹಂಚೋಣ ಬುತ್ತಿ-ರೊಟ್ಟಿ.

ಹೆಣ್ಣು ಗಂಡೂ ಕೂಸು-ಕುನ್ನಿ ಮುಪ್ಪಿನ ಮುದುಕ
ಅವರವರ ಪಾಲಿಗಿದೆ ಪಂಚಾಮೃತ;
ಮಂತ್ರಿಗಳ ಮಂತ್ರಕ್ಕೆ ಉದುರುವುದೆ ಮಾಂಗಾಯಿ?
ಮಂತ್ರಶಕ್ತಿಯು ದೈವ ಪಂಚಾಯತ.

ತಾವು ಬಂದರದಾರು? ನಾಮಾಂಕಿತವದೇನು?
ಒಡನುಡಿವಿರಾ ಸ್ವಾಮಿ, ಇವ ಸಾರಥಿ.
‘ಹೇಳುತ್ತೇನೆ ಕೇಳು,’ ‘ಅದೇನಿರುವುದು ಹೇಳು’
ಬೆಳೆತನಕ ಈ ಭೂಪರೊಂದೆ ರೀತಿ.

ಈಗ ಬೆಳಗಾಯಿತೆ? ಬಣ್ಣ ತೊಳೆಯಲಿ ಸೋಗು
ನಿಮ್ಮ ಕೆಲಸಕೆ ನೀವು ನಡೆಯಿರಣ್ಣ,
ರಾಮನಿಗೆ ಆರಾಮವಿದ್ದುದಾವಾಗಯ್ಯ?
ಭೀಮಾರ್‍ಜುನರು ಕೂಡ ಸೊರಗಿ ಸಣ್ಣ.

ಈ ಚರಿತ್ರೆಗೆ ನೂರು ಹೋರಾಟಗಳ ನಂಟು
ಪುಟಪುಟವ ಮೂಸೆಯಲಿ ಪುಟವಿಕ್ಕಲು-
ಅಲ್ಲಿ ಚಿನ್ನದ ಜೊತೆಗೆ ಮಣ್ಣು ಕಲ್ಲಿನ ರಾಶಿ
ಸತ್ತ ಎಮ್ಮೆಗೆ ಹತ್ತು ಸೇರು ಹಾಲು.

ಮಧುರ ಕವಿ ಶಾಸನದ ತಾಯಿ ಹಾಲೆರೆವಂದು
ನಾಡಮಕ್ಕಳ ಕಿವಿಯೊಳೊರೆದಳಿಂತು;
“ಕೆರೆಯಂ ಕಟ್ಟಿಸು, ಬಾವಿಯಂ ಸವೆಸು ದೇವಾ-
ಗಾರಮಂ ಮಾಡಿಸಂ” ಬೆದಯ ಮಾತು.

ಬನ್ನಿ ಯೋಚಿಸಿ ಕುಳಿತು, ಸಂಕೋಚ ಬದಿಗಿರಿಸಿ
ನಾಡಿನೇಳ್ಗೆಗೆ ಹುಡುಕಿ ಹಂಚಿಕೆಯನು;
ಧೂಳು ಜಾಡಿಸಿ ಸುರುಳಿ ಬಿಚ್ಚಿದ ನಕಾಶದಲಿ
ಮೂಡಿಸಿರಿ ಹೊಸಬಾಳ ಸಂಚಿಕೆಯನು.

ಹರಿವ ಹೊಳೆಗಳು ನಿಂತು ಕಾಲುವೆಯ ಕೈಚಾಚಿ
ಮೇಳದಲಿ ಕರೆಯುತಿವೆ ಹಾಲು ಜೇನು.
ಏಳಿ ಗುದ್ದಲಿ ಹಿಡಿದು ಬಡತನದ ಯುದ್ಧಕ್ಕೆ
ನೋಡಿ ನಾಚಲಿ ಮೋಡ, ತೆರೆದ ಬಾನು.

ನೆಲದೆಲ್ಲ ಹೊಲ-ಹಸಿರು, ಕಾಯಿ ತೆನೆಗಳ ಕುಸುರು
ದುಡಿವ ಬಡವನ ಹೊಟ್ಟೆ ತಣ್ಣಗಿರಲಿ;
ಗಿರಣಿ ಕಾರ್‍ಖಾನೆಗಳ ಕರ್‍ಕಶದ ತರ್‍ಕಕ್ಕೆ
ಗರತಿ ಹಾಡಿನ ಮಧುರ ಸಂಪರ್‍ಕವಿರಲಿ,

ಊರು ಕೇರಿಗೆ ನಿಲಿಸಿ ಸಾಲು ದೀಪದ ಕಂಬ
ಶಾಲೆಯಂಗಳ ತುಂಬ ನಗೆಮಲ್ಲಿಗೆ.
ಸೊಂಟದಲಿ ಕೊಡವಿಟ್ಟು ತುಂಟ ಮಗುವನ್ನೆತ್ತಿ
ಹೊಂಟ ಮುತ್ತೈದೆಯರ ತುಂಬಿದ ಬಗೆ.

ಎತ್ತು, ಚಕ್ಕಡಿ, ಕಾರು, ಬಸ್ಸು, ಟಾಂಗಾ, ರೈಲು
ಬೋಟು, ಹಡಗು, ವಿಮಾನ, ಚಂದ್ರಯಾನ;
ಅಂಚೆ, ಬಾನುಲಿ, ತಂತಿ ಇಡಿ ಪ್ರಪಂಚದ ಹಂತಿ-
ನುರಿಸಿ ಹೊಂದಿಸಿಕೊಳಲಿ ನವಜೀವನ.

ಯಂತ್ರ ನಡೆಯಲಿ, ಜನ ಸ್ವತಂತ್ರ ಬುದ್ಧಿಯದಿರಲಿ
ಪಂಚ ವರ್‍ಷದ ಹೊಸತು ಹಂಚಿಕೆಯಲಿ.
ಮಂತ್ರ ಮಾಟಗಳಿಂದ ಮಾವು ಕಾಯಾಗುವದೆ?
ನೀರು, ಗೊಬ್ಬರ, ಗಾಳಿ ಹೀರಿಕೊಳಲಿ.

ಎಲ್ಲು ಮಿನುಗುವ ತಾರೆ, ಕಲ್ಲು ಕಬ್ಬಿಣ ಗಾರೆ
ಕಣ್ಣು ತುಂಬುವ ಹೋರೆ ಬಾನಂಚಿಗೆ.
ಅಜ್ಜ ಬಿತ್ತಿದ ಬೀಜ ಮೊಳಕೆಗಂಡಿವೆ ಈಗ
ಕಸ ಕೀಟಗಳ ಕಿತ್ತು ಗುಡಿಸಿ ಹೊರಗೆ,

ಹೆಜ್ಜೆ ಹೆಜ್ಜೆಗೆ ನಿಧಿಯ ಕೊಪ್ಪರಿಗೆ ಕಾದಿಹುದು
‘ಎತ್ತೂ ಕತ್ತೇ’ ಎಂದು ಕೂಗಿಕೊಂಡು-
ಎಡವಿ ಬೀಳುವದೊಂದೆ, ಹಿಡಿದು ಅಗೆದವರಿಲ್ಲ
ನಡು ಕಟ್ಟಿ ನಿಂತವರು ಪಡೆಯಬಹುದು.

ವಿಶ್ವದೀ ವರ್‍ತುಲದ ಮಧ್ಯಬಿಂದುವಿನಲ್ಲಿ
ಕ್ರಿಸ್ತ, ಕೃಷ್ಣನು, ಬುದ್ಧ, ಬಸವ, ಗಾಂಧಿ-
ನೂರು ತೇಜದ ಗೋಲ ತಿರುಗುತಿವೆ ಪರಿಘದಲಿ
ಊರುಗೋಲಿಗೆ ಸಾಕ್ಷಿ ನಕ್ಷತ್ರ ವೀಧಿ.

ಕೂಡಿ ಬಾಳುತ ಕೂಡಿ ಬೆಳೆಯೋಣ ಕಾಂತಿಯಲಿ
ಸೂರ್‍ಯಪಾನದ ಹಾಗೆ ವೀರ್‍ಯ ತಳೆದು,
ಸಕಲ ಜೀವದ ಭಾವ ಹಿಗ್ಗಿ ಪರಿಮಳಿಸಿರಲಿ
ಬರುವ ಸುಗ್ಗಿಗೆ ನೂರು ಬೀಜ ಹಿಡಿದು.
*****