ಗಾಂಧಿ ಕುರಿತ ಪ್ರಶ್ನೆಗಳಿಗೆ ನೇರ ಉತ್ತರಿಸುವ ಬದಲು, ಚಿಕ್ಕ ಚಿಕ್ಕ ಟಿಪ್ಪಣಿಗಳ ಮೂಲಕ ನನ್ನ ಪ್ರತಿಸ್ಪಂದನೆಯನ್ನು ಕೊಡುತ್ತೇನೆ.
*
*
*
ಗಾಂಧಿ ಯಾವುದೋ ವಿಶಿಷ್ಟ ತತ್ವಪಾಕವನ್ನು ತಯ್ಯಾರಿಸಿ ಹಂಚಲಿಲ್ಲ. ಸಂಸಾರಸ್ಥ ಸಾಮಾನ್ಯ ಜನರು ಮತ್ತು ಆ ಜನರ ಸಮುದಾಯಗಳು ಸಹಸ್ರಾರು ವರ್ಷಗಳಿಂದ ಹೇಗೆ ಬಾಳಿಕೊಂಡು ಬಂದವು ಎನ್ನುವುದನ್ನು, ಜನರದ್ದೇ ಬದುಕಿನ ಆಳದಿಂದ ಶೋಧಿಸಿ ಕಾಣಲು ಮತ್ತು ಕಾಣಿಸಲು ಪ್ರಯತ್ನಿಸಿದರು. ಈ ಮನುಷ್ಯ ಕುಲವು, ಪರಿಸರ ಜೀವಜಾಲದ ನಡುವೆ ಮತ್ತು ತಮ್ಮ ತಮ್ಮೊಳಗೆ ಹೊಂದಾಣಿಕೆ ಮಾಡಿಕೊಳ್ಳುತ್ತ, ತನ್ನ ಭೌತಿಕ ಮತ್ತು ಭೌತಿಕೇತರವಾದ ಹಸಿವುಗಳನ್ನು ದುಡಿದು ಇಂಗಿಸಿಕೊಳ್ಳುತ್ತ, ತನ್ನ ಸಂತಾಪವನ್ನು ಸಾಕಿಕೊಳ್ಳುತ್ತ ಬಾಳಿಕೊಂಡಿದೆಯಲ್ಲ ಇದು ಹೇಗೆ ಎಂಬುದನ್ನು ಶೋಧಿಸಲು ಅವರು ಯತ್ನಿಸಿದರು. ಪ್ರೀತಿ, ಸಹನೆ, ಅಹಿಂಸೆ, ತ್ಯಾಗ ಮುಂತಾದ ಸತತವೂ ಅಲ್ಲಿ ಅವರಿಗೆ ಕಾಣಿಸಿದಂಥವು.
ಜತೆಗೆ, ಈ ಮನುಷ್ಯಕುಲವು ಸತತವೂ ಸಕಾಷ್ಟಗಳಲ್ಲಿ ನವೆದುಕೊಳ್ಳುತ್ತ ಬಂದಿದೆ ಎಂಬುದನ್ನೂ ಅದಕ್ಕೆ ಕಾರಣವಾದ ಮನುಷ್ಯನ ಚಪಲ-ದುರಾಶೆ-ಅಸಹನೆ-ಹಿಂಸೆ ಇತ್ಯಾದಿಗಳನ್ನೂ ಹುಡುಕಿ ಕಾಣಿಸಿದರು, ಗಾಂಧಿ. ಅಂಡರೆ, ಸಮುದಾಯ ಪ್ರಜ್ಞೆಯ ಅತ್ಯಂತ ಆಳದಲ್ಲಿರುವ ವಿವೇಕಗಳಾವುವು ಮತ್ತು ಅವನ್ನು ಕವಿದು ಮುಚಿಬಿಟ್ಟಿರುವ ಅವಿವೇಕ ಚಪಲಗಳು ಯಾವುವು ಎಂಬುದನ್ನು ಅವರು ಎತ್ತಿ ಕಾಣಿಸಿದರು.
*
*
*
ಗಾಂಧಿ ಪ್ರಕ್ರಿಯೆ ವ್ಯಕ್ತಿಯದಷ್ಟೇ ಆಗಿ ಉಳಿಯಲಿಲ್ಲ. ಅದು ನಮ್ಮ ರಾಷ್ಟ್ರ ಸಮುದಾಯದ ಸ್ವಾತಂತ್ರ್ಯ ಹೋರಾಟದ ಕೇಂದ್ರದಲ್ಲಿ ನಡೆದದ್ದು ಮತ್ತು ಆ ಹಿನ್ನೆಲೆಯಲ್ಲಿ ಇದು ಸಾಮುದಾಯಿಕ ಯುಗ ಪ್ರಕ್ರಿಯೆಯಾಯಿತು. ಅಂದರೆ, ಭಾರತದ ರಾಷ್ಟ್ರ ಸಮುದಾಯವು ಸ್ವಾತಂತ್ರ್ಯ ಹೋರಾಟದ (ಪೂರ್ವ-ಪಶ್ಚಿಮ, ಪ್ರಾಚೀನ-ಅರ್ವಾಚೀನ, ಆಕ್ರಮಣ-ಅನುಸಾಂಧಾನ- ಇತ್ಯಾದಿ ಇತ್ಯಾದಿ ಹೋರಾಟ ಕೂಡಾ) ಬಹು ದೊಡ್ಡ ಸಂಕಷ್ಟದಲ್ಲಿ ತನ್ನ ಸಮುದಾಯಪ್ರಜ್ಞೆಯ ಆಳದಲ್ಲಿರುವ ವಿವೇಕಗಳನ್ನು ಶೋಧಿಸಿ ಶೋಧಿಸಿ ಮೇಲಕ್ಕೆತ್ತಿಕೊಳ್ಳಲು ನಡೆಸಿದ ಸಾಮುದಾಯಿಕ ಹೆಣಗಾಟದ ಪ್ರಕ್ರಿಯೆ ಇದು. ಈ ಪ್ರಕ್ರೆಯೆಯೇ ಗಾಂಧಿಯೆಂಬ ಆ ಕನ್ನಡಿಯಲ್ಲಿ ತನ್ನ ಪೂರ್ವ ವಿವೇಕಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿತು.
ಗಾಂಧಿ ವ್ಯಕ್ತಿಯಾಗಿ, ತಾನು ಕಂಡದ್ದನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲಿಕ್ಕೆ ಜೀವಮಾನ ಪೂರ್ತಾ, ದಿನದಿನವೂ ಕ್ಷಕ್ಷಣವೂ ಹೆಣಗಾಡಿದ. ವೈಯಕ್ತಿಕ ನೆಲೆಯಲ್ಲಿ ಅದು ಅಧ್ಯಾತ್ಮಿಕ ಸಾಧನೆ ಸಾಮುದಾಯಿಕ ನೆಲೆಯಲ್ಲಿ ಅದೇ ಸ್ವ್ರಾಜ್ಯ ಅಥವಾ ಜನತಂತ್ರ ರಾಜಕಾರಣ. ಆ ಬಗೆಯ ಆಧ್ಯಾತ್ಮಿಕ-ಜನತಂತ್ರ ಸಿದ್ಧಿಯು ಯಾವನೊಬ್ಬನಿಂದ ಉಳಿದವರಿಗೆ, ಹಂಚಿ ದೊರಕುವಂಥದಲ್ಲ. ಮನುಷ್ಯನೊಬ್ಬೊಬ್ಬನೂ ತಾನೇ ತನ್ನ ಬದುಕಿನಲ್ಲೇ ದಿನ ದಿನವೂ ಎಚ್ಚರದಿಂದ ಹೆಣಗುತ್ತ ಸಾಧಿಸಿಕೊಳ್ಳಬೇಕಾದ್ದು ಇದು. ಈ ದೇಶದ ನಾವುಜನತಂತ್ರ ರಾಜಕಾರಣವನ್ನು ಒಪ್ಪಿಕೊಳ್ಳ್ಯ್ವ ಮೂಲಕ ಮೇಲಿನ ದಿವ್ಯವನ್ನು ಒಪ್ಪಿ ಹಿಡಿದ್ದೇವೆ.
*
*
*
ಕಳೆದ್ ಐವತ್ತು ವರ್ಷಗಳಲ್ಲಿ ನಮ್ಮ ಪ್ರಯತ್ನವು ಕ್ರಮೇಣ ಕ್ಷಯಿಸುತ್ತ ನಾವು ಸೋಲುತ್ತ ಬಂದಿದ್ದೇವಾದರೆ, ಮುಂದಿನ ಐವತ್ತು ವರ್ಷಗಳಲ್ಲಾದರೂ, ಕ್ರಮೇಣ, ತಾಳ್ಮೆಯಿಂಡ ದಿನ ದಿನವೂ ಎಚ್ಚರದಿಂದಿದ್ದು ವಿವೇಕವನ್ನು ಸ್ವಲ್ಪ ಸ್ವಲ್ಪ ರೂಢಿಸಿಕೊಳ್ಳುತ್ತ ಮೇಲಕ್ಕೆದ್ದು ಬಾಳಿಕೊಳ್ಳುತ್ತೇವೆ – ಅಂತ ನಾವೂ ಒಬ್ಬೊಬ್ಬರೂ ಸಂಪಲ್ಪಿಸಿ ಹಾಗೆ ಆಚರಿಸಬೇಕು. ಅದೊಂದೇ ದಾರಿ. ಅದು ಬಿಟ್ಟರೆ ಈ ದೇಶಕ್ಕೂ ಮನುಷ್ಯ ಕುಲಕ್ಕೂ ಭವಿಷ್ಯವಿಲ್ಲ. ಅಮೇರಿಕದ ತೀರ ಈಚಿನ ಭಯಂಕರ ಘಟನೆಯು ಅಂತಿಮ ಘಂಟೆಯನ್ನು ಬಾರಿಸಿದೆ. ಹಿಂಸೆಯು ಹಿಂಸೆ ಮತ್ತು ವಿನಾಶಗಳನ್ನು ಮಾತ್ರ ಹಡೆಯಬಲ್ಲುದು.
*
*
*
ಒಟ್ಟಿನಲ್ಲಿ – ಪ್ರಶ್ನೆಗಳಿಗೆ ಯಾವ ಮಹಾತ್ಮನು ಕೂಡಾ ಪರಿಹಾರದ ಉತ್ತರ ಹೇಳಲಾರ; ನನ್ನಿಂದ ಮೊದಲಾಗಿ ನಾವು ಒಬ್ಬೊಬ್ಬರೂ ನಮ್ಮಲ್ಲೇ ಪ್ರಶ್ನೆಗಳನ್ನೂ ಅವಕ್ಕೆ ಉತ್ತರಗಳನ್ನೂ ಶೋಧಿಸಿ ಕಂಡುಕೊಳ್ಳುತ್ತ ಬಾಳಿಕೊಳ್ಳಬೇಕು – ಬಾಳುವುದಿದ್ದರೆ.
ಅದೇ ಗಾಂಧಿ ಪ್ರಕ್ರಿಯೆ.
*****
ಸಂದರ್ಭಸೂಚಿ: ೨೦೦೦-ರಲ್ಲಿ ಸಂಯುಕ ಕರ್ನಾಟಕ ಪತ್ರಿಕೆಯ ಗಾಂಧಿ ಕುರಿತ ಸೌರಭ ಸಂಚಿಕೆಗೆಂದು ಕೇಳಲಾದ ಪ್ರಶ್ನೆಗಳಿಗೆ ಉತ್ತರವಾಗಿ ಬರೆದ ಬರಹ.
