ಕನ್ನಡ ಚಿತ್ರಗಳು ಮತ್ತು ‘ಕೊಲಾಜ್’

`ರೀಮೇಕ್ ಚಿತ್ರಗಳಿಗೆ ಇನ್ನು ಶೇ. ೧೦೦ ಟ್ಯಾಕ್ಸ್‌ ಫ್ರೀ ಇಲ್ಲ’ ಎಂದು ಸರಕಾರದ ಅಧಿಕೃತ ಪ್ರಕಟಣೆ ಬಂದ ಮರುಘಳಿಗೆ ಹೈಸ್ಪೀಡ್‌ನಲ್ಲಿ ಹೊರಟಿದ್ದ ಕನ್ನಡ ಚಿತ್ರ ನಿರ್ಮಾಪಕರನೇಕರು ಸಡನ್ ‘U’ ಟರ್ನ್ ತೆಗೆದುಕೊಂಡು ಇನ್ನು ನಾವು ಮಾಡುವುದೆಲ್ಲ ಸ್ವಮೇಕ್ ಚಿತ್ರಗಳೇ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಹೀಗಾದಾಗ ಯಾವುದು ರೀಮೇಕ್, ಯಾವುದು ಸ್ವಮೇಕ್ ಎಂದು ಪತ್ತೆ ಹಚ್ಚಲು ಎಲ್ಲ ಸಿನಿ ನೋಡುಗರೂ ಪತ್ತೇದಾರರಾಗಬೇಕಾಗಿ ಬಂದಿರುವುದು ಅನಿವಾರ್ಯ. ಕನ್ನಡ ಕಲೆ ಸಂಸ್ಕೃತಿಯ ಆಧಾರಿತ ಚಿತ್ರ ಎಂದು ಹೇಳಿದಾಗ ಅಕ್ಷರ ಮಾಧ್ಯಮದಲ್ಲಿ ಅರಳಿದ ಕೃತಿ ಸಿಲ್ಲಿ ಲಾಯಿಡ್‌ನಲ್ಲಿ ಹೇಗೆ ಮೂಡಿ ಬಂದಿದೆ ಎಂಬುದನ್ನು ಓದುಗನೂ ತೂಗಿ ವಿವೇಚಿಸುತ್ತಾನೆ. ಆದರೆ ಅಲ್ಲೂ ಚಾಪೆಯ ಕೆಳಗೆ ತೂರುವವರಿರುತ್ತಾರೆ ಎಂಬುದಕ್ಕೆ ‘ಮುಂಗಾರಿನ ಮಿಂಚು’ ಚಿತ್ರವೇ ಸಾಕ್ಷಿ. ಉಷಾ ನವರತ್ನರಾಮ್ ಅವರ ಈ ಕೃತಿ ‘ವಾಕಿಂಗ್ ಇನ್ ದಿ ಕೌಡ್ಸ್‌’ನ ಪಡಿಯಚ್ಚು. ಆದರೆ ಇದು ಕನ್ನಡ ಕೃತಿ ಆಧಾರಿತ ಚಿತ್ರವೆಂದು ಪ್ರಶಸ್ತಿಯನ್ನೂ ತಂದು ಕೊಟ್ಟಿತು ರಾಜೇಂದ್ರಸಿಂಗ್ ಬಾಬು ಅವರಿಗೆ.

ಇಂಥ ಉದಾಹರಣೆಗಳು ಮಾದರಿಯಾದಾಗ ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎಂಬ ಗಾದೆ ಮಾತು ಸತ್ಯವಾಗುತ್ತ ಹೋಗುತ್ತದೆ. ಅದರಿಂದಾಗಿಯೇ ಹಲವರು ಚಾಪೆ ಕೆಳಗೆ ತೂರಿದ್ದನ್ನು ಕಂಡು ರಂಗೋಲೆ ಕೆಳಗೆ ತೂರುವವರೂ ಅತಿಯಾಗುತ್ತ ಹೋದದು.

‘ಸ್ವಮೇಕ್ ಎಂದು ತುತ್ತೂರಿ ಊದಿದ ಮರುಘಳಿಗೆ ಕಥೆಯ ಸನ್ನಿವೇಶಗಳನ್ನ ಗುಮಾನಿಯಿಂದ ನೋಡಬೇಕೆನಿಸಿದ್ದು ಈ ಕಾರಣಕ್ಕೇ. ಈಗ ಬಹಳಷ್ಟು ಚಿತ್ರಗಳಲ್ಲಿ ಹತ್ತಾರು ಚಿತ್ರಗಳಿಂದಾಯ್ದು ಬೇರೆ ಬೇರೆ ಬಿಡಿ ಬಿಡಿ ಸನ್ನಿವೇಶಗಳು-ಕೂಡಿಕೊಳ್ಳುತ್ತಾ ಬಂದಿವೆ. ಹಿಟ್ ಆದ ಪರಭಾಷಾ ಚಿತ್ರದ ಕಥೆಯ ಎಳೆ ಹಿಡಿದು-ಅದಕ್ಕೆ ಯಶಸ್ವಿಯಾದ ಚಿತ್ರಗಳ ಘಟನೆಗಳನ್ನು ಪೋಣಿಸಿ ಕನ್ನಡಿಗರಿಗೆ ಒಂದು ಸ್ವಮೇಕ್ ಹಾರ ಹಾಕುವ ಮಹಾಮಹಿಯರು ಇನ್ನು ಮುಂದೆ ಇನ್ನೂ ಹೆಚ್ಚುತ್ತಾರೆ.

‘ಕನ್ನಡ ಚಿತ್ರಗಳ ಕಥೆಯೂ ಈಗ ಕೆಟ್ಟ ‘ಕೊಲಾಜ್’ ಆಗುತ್ತದೆ. ಎಂದೆ ಮೊನ್ನೆ ಒಂದು ಕಡೆ.’

`ಚಿತ್ರಕಲೆಯಲ್ಲಿ ಕೊಲಾಜ್ ಕೂಡ ಒಳ್ಳೆ ಪ್ರಕಾರ. ಆ ‘ಫಾರಂ’ ಚಿತ್ರರಂಗದವರನ್ನೂ ಆಕರ್ಷಿಸಿದ್ದರೆ ತಪ್ಪೇನು?’ ಎಂದರು ಒಬ್ಬ ಕಲಾಪ್ರೇಮಿಗಳು.

ಆಗ ಅವರ ಮಗನನ್ನು ಕೇಳಿದೆ

‘ಕೊಲಾಜ್ ಸ್ಪೆಲಿಂಗ್ ಹೇಳು ಮಗು!

‘College’ ಎಂದ.

‘ಅದು ಕಾಲೇಜ್. ನಾನು ಹೇಳ್ತಿರೋದು ಕೊಲಾಜ್’

‘ತಕ್ಷಣ ಹುಡುಗ ಡಿ.ಕೆ. ಭಾರದ್ವಾಜರ ‘ಡಿಕ್ಷನರಿ’ ರೆಫರ್‌ಮಾಡಿ ‘ಕೊಲಾಜ್’ ಅನ್ನುವ ಪದವೇ ಇಲ್ಲ ಇದರಲ್ಲಿ’ ಎಂದ.

‘ಕೊಲಾಜ್ ಎನ್ನುವುದು ಫ್ರೆಂಚ್ ಪದ. ಅದಕ್ಕೆ ಇಂಗ್ಲೀಷ್ ಡಿಕ್ಷನರೀಲಿ ಆ ಹೆಸರಿಲ್ಲ’ ಎಂದೆ.

ಆನಂತರ ಆ ಕುರಿತೇ ಬಹಳೆಡೆ ಚರ್ಚೆಯಾಯಿತು.

‘ಕಲಾಕೃತಿಯನ್ನು ರಚಿಸ ಕೂತ ಪೈಂಟರ್ ತನ್ನ ಆಶಯ ಬಿಂಬಿಸಲನುವಾಗುವಂತೆ ಬೇರೆ ಬೇರೆ ಚಿತ್ರಗಳನ್ನು, ಸೂಕ್ತ ಕಂಡ ವಸ್ತುಗಳನ್ನು ಅಂಟಿಸುತ್ತಾ ಹೋಗುತ್ತಾನೆ. ಬಳೆ ಚೂರು, ಬಣ್ಣದ ಬಟ್ಟೆ, ಅಚ್ಚಾದ ಚಿತ್ರ, ಹರಕಲು ರಗ್ಗು, ತುಂಡು ರೊಟ್ಟು.. ಹೀಗೆ… ಅಂತಿಮವಾಗಿ ಚಿತ್ರ ಕಲಾಪ್ರದರ್ಶನಕ್ಕೆ ಹೋಗುವ ಮೊದಲು ಒಂದು ಕಲಾತ್ಮಕ ರೂಪು ಪಡೆದಿರುತ್ತದೆ-ಆತ ಸೃಜನಶೀಲ ಕಲಾವಿದನಾಗಿದ್ದರೆ. ಇಲ್ಲವಾದಲ್ಲಿ ಅದೊಂದು ಕೆಟ್ಟ ಕೊಲಾಜ್ ಎನಿಸಿಕೊಳ್ಳುತ್ತದೆ.’

ದೆಹಲಿಯ ಎನ್.ಎಸ್.ಡಿ. ನಾಟಕಶಾಲೆಯವರು ಈ ಬಾರಿ ಕಥಾ ಕೊಲಾಜ್ ರಂಗಕ್ಕೆ ತರುತ್ತಿದ್ದಾರೆ. ಅದು ಗೊತ್ತಲ್ವ!

‘ಎನ್‌ಎಸ್‌ಡಿ ನೇತಾರರಾದ ಪ್ರೊ. ಡಿ.ಆರ್. ಅಂಕುರ್ ಕಥೆಯನ್ನು ರಂಗಕ್ಕೆ ತರುವಾಗ ಮೂಲಸ್ವರೂಪ ಬದಲಿಸಬಾರದು ಎನ್ನುತ್ತಾರೆ. ಕಥೆಯಲ್ಲಿ ಹೊಸದಾಗಿ ಸೂತ್ರಧಾರನನ್ನು ಸೃಷ್ಟಿಸಬಾರದು ಎನ್ನುತ್ತಾರೆ. ರಂಗಸ್ಥಳವನ್ನು ಎಲ್ಲಾ ಆಧುನಿಕ ರಂಗತಂತ್ರಗಳಿಂದ ಮುಕ್ತಗೊಳಿಸುವುದಕ್ಕೆ ಪ್ರಯತ್ನಿಸಬೇಕು ಎನ್ನುತ್ತಾರೆ. ಹೀಗಾದಾಗ ಓದಿಗೆ ಮಾತ್ರ ಸೀಮಿತವಾಗಿದ್ದ ಕತೆಗಳು ರಂಗದಲ್ಲಿ ದೃಶ್ಯವಾಗಿ ಅಕ್ಷರಸ್ಥ ಅನಕ್ಷರಸ್ಥರನ್ನು ಏಕಕಾಲದಲ್ಲಿ ತಲುಪುತ್ತದೆ. ರಂಗಭೂಮಿ ಆ್ಯಕ್ಟರ್ಸ್ ಥಿಯೇಟರ್ ಎಂಬುದು ಕಥಾಕೊಲ್ಹಾಜ್‌ನಿಂದ ಸಾಬಿತ್ ಆಗುವುದು ನಿಜವಾದರೂ ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಸಂಗೀತ ಸ್ಪರ್ಧೆ, ಬೆಳಕುವಿನ್ಯಾಸ ತ್ಯಾಜ್ಯ ಎನ್ನುವುದು ಶ್ರೀಮಂತರಂಗ ಭೂಮಿಯನ್ನು ಬಡಕಲಾಗಿಸಿದಂತೆ. ಹೀಗೆ ಕೊಲಾಜ್‌ನ ಪರಿಣಾಮಗಳ ಬಗ್ಗೆ ಚರ್ಚೆ ನಡೆದಿದೆ ಎಲ್ಲೆಡೆ.

ಸಿನಿಮಾ ಲಕ್ಷಾಂತರ ಕೋಟ್ಯಾಂತರ ಹಣಕ್ಕೆ ಕೈಚಾಚುವ ಉದ್ಯಮವಾದ್ದರಿಂದ ಬಹಳೆಡೆ ಯಿಂದ ಕದ್ದಮಾಲುಗಳು ಚಿತ್ರದಲ್ಲಿ ಕೊಲಾಜನ್ನು ಮೂಲೆಗೆ ತಳ್ಳಿ ಗೊಜ್ಜಾಗಿ ಕೂತಿದೆ. ಕುರುಡ, ಕಿವುಡ, ಮೂಗರ ನಾಟಕವೊಂದು ಜನಪ್ರಿಯವಾದರೆ ಅದು ಚಿತ್ರವಾಗುವಾಗ ವಿಕಾರ ರೂಪ ತಾಳಿರುತ್ತದೆ ಅದೇ ಕಥೆಗೊಂದು ತಿರುವು ನೀಡಿ. ಮೊನ್ನೆ ಮುಹೂರ್ತ ಮಾಡಿದ ನಿರ್ಮಾಪಕರೊಬ್ಬರು ಹೇಳುತ್ತಿದ್ದರು ‘ತಮಿಳಿನಲ್ಲಿ ಹಿಟ್ ಚಿತ್ರಗಳನ್ನು ನೀಡಿದವರ ಕೈಲಿ ಕಥೆ ಬರೆಸಿದ್ದೇವೆ. ಇದೊಂದು ಸ್ವಮೇಕ್ ಚಿತ್ರಸ್ವಾಮಿ’ ಎಂದರು.

‘ಈಗ ಒಂದು ಸ್ವಮೇಕ್ ಚಿತ್ರ ನೋಡಲು ಹೋದರೆ ಒಂದೇ ಟಿಕೇಟಿಗೆ ಹತ್ತಾರು ಸಿನಿಮಾಗಳನ್ನು ನೋಡುವಂತೆ ಮಾಡಿರುವುದಕ್ಕೆ ಹೆಮ್ಮೆ ಪಡಬೇಕು’ ಎಂದರು ಒಬ್ಬ ನಿರ್ದೇಶಕರು.

‘ಕೊಲಾಜ್’ ಎಂದರೆ ನಿಮಗೇನು ಅನ್ನಿಸುತ್ತೆ’ ಅಂದೆ ಒಬ್ಬ ಪತ್ರಕರ್ತರನ್ನು.

‘ನಾನೊ ಹೇಳಿಕೇಳಿ Invisible Journalist. ಎಲ್ಲಿಗೂ ಬರದಿರಬಹುದು. ಆದರೆ ಎಲ್ಲೆಲ್ಲಿಂದಲೋ-ಹ್ಯಾಗೆ ಹಾಗೋ ವಿಷಯ ಸಂಗ್ರಹಿಸಿ-ವಂಡರ್‌ಫುಲ್ ಸ್ಟೋರಿ ಮಾಡ್ತೀನಲ್ಲ ಅದು ಕೊಲಾಜ್ ಅಲ್ವೇ’ ಎಂದರು.

ಆಗ ಹೇಳಿದೆ. ‘ಒಂದು ಫ್ಯಾನ್ಸಿಡ್ರೆಸ್ಸ್ ಕಾಂಪಿಟೇಷನ್ ಇತ್ತು. ಒಬ್ಬ ವ್ಯಕ್ತಿ ಕಾರ್ಯದರ್ಶಿಗೆ ಚೆಳ್ಳೆಹಣ್ಣು ತಿನ್ನಿಸಬೇಕೂಂತ ತನ್ನ ಹೆಸರಿನಲ್ಲಿ ‘Invisible Man’ ಅಂತ ಹೆಸರು ಕೊಟ್ಟ, ಹೆಸರು ಕರೆದರು. ಈತ ಹೋಗಲಿಲ್ಲ. ಫಲಿತಾಂಶ ಹೇಳುವಾಗ “1 ಪ್ರೈಜ್ ಇನ್‌ವಿಸಿಬಲ್ ಮ್ಯಾನ್” ಎಂದರು. ಆಗ ಈತ ಹೋದ. ಇಲ್ಲಿ ಆ ಪ್ರೈಜ್ ಇನ್‌ವಿಸಿಬಲ್ ಮ್ಯಾನ್ ತೆಗೆದುಕೊಂಡುಹೋದ ಆಗಲೆ’ ಎಂದು ಕಾರ್ಯದರ್ಶಿ ಹೇಳಿದಾಗ ವ್ಯಕ್ತಿ ಇಂಗುತಿಂದ ಮಂಗನಂತಾದ.

ಇನ್ನು ಮುಂದೆ ಯಾವುದೇ ಹೊಸ ಕನ್ನಡ ಚಿತ್ರ ಬಂದರೂ ಅದು ಎಷ್ಟು ಚಿತ್ರಗಳಿಂದಾಗ ‘ಕೊಲಾಜ್’ ಎಂದು ನೀವು ಹೇಳಬೇಕು ಸ್ವಾಮಿ?
*****
(೨೪-೦೫-೨೦೦೨)