ಸಾ.ರಾ. ಗೋವಿಂದು ನಾಯಕನಾಗಿರುವ ಮೊದಲ ಚಿತ್ರದ ಹೆಸುರ ‘ದಡ್ಡರು ಸಾರ್ ದಡ್ಡರು’ ಆ ಮುಹೂರ್ತಕ್ಕೆಂದು ಹೊರಟಾಗ ಈ ಚಿತ್ರ ಚೆನ್ನಾಗಿ ಮಾಡಿದರೆ ತುಂಬ ಒಳ್ಳೆ ವಿಡಂಬನಾತ್ಮಕ ಚಿತ್ರವಾದೀತು ಎಂದುಕೊಂಡು ಆ ಕುರಿತು ತುಂಬ ಗಂಭೀರವಾಗಿ ಯೋಚಿಸತೊಡಗಿದೆ.
ಮೆಟಡಾರ್ ಅರಳೇಪೇಟೆ ಪೊಲೀಸ್ ಸ್ಟೇಷನ್ ಎದುರು ಬಂದಾಗ ಅಲ್ಲಿ ನೂರಾರು ಜನ ‘ಕ್ಯೂ’ ನಿಂತಿದ್ದರು. ಅದು ಶಾಸ್ತ್ರ ಹೇಳುವ, ಯಂತ್ರಕಟ್ಟುವ, ಭೂತ ಪ್ರೇತ ಬಿಡಿಸುವ ಮಾಂತ್ರಿಕನ ಒಂದು ಪುಟ್ಟ ಕೋಣೆ, ಅದರ ಮುಂದೆ ಮೂಢನಂಬಿಕೆಗೆ ಬಲಿಯಾದ ಮಂದಿಯ ‘ಕ್ಯೂ’ ಅದು. ಆ ಮಾಯಾವಿ ಸೊಗಸಾದ ಮನೆ ಕಟ್ಟಿಕೊಂಡಿದ್ದಾನೆ. ಫುಲ್ ಸೂಟಿನೊಂದಿಗೆ ಕಾರಿನಲ್ಲಿ ಬರುತ್ತಾನೆ. ಕಾರು ದೂರದಲ್ಲಿ ಪಾರ್ಕ್‌ಮಾಡಿ-ಒಳಗೆ ಹೋದ ನಂತರ ಚಡ್ಡಿ ಹಾಕಿ ಕುಳಿತು ಶಾಸ್ತ್ರ ಹೇಳುತ್ತಾನೆ. ಭಸ್ಮ ಕೊಡುತ್ತಾನೆ, ಮಾತಿನ ಜಾಣ್ಮೆಯಿಂದ ಬಂದವರನ್ನು ರಮಿಸುತ್ತಾನೆ. ಯಾವ ಪತ್ರಿಕೆ, ಚಾನೆಲ್‌ಗಳ ಪ್ರಚಾರವು ಇಲ್ಲದೆ ಆತ ಹಣ ದೋಚುತ್ತಾನೆ. ಮುಢಾತ್ಮರು ಆಸ್ಪತ್ರೆಗೆ ಹೋಗುವುದೂ ಬಿಟ್ಟು ಅಲ್ಲಿ ಹಣ ಸುರಿಯುತ್ತಾರೆ.
ಇಲ್ಲಿ ಯಾರನ್ನು ‘ದಡ್ಡರೂ ಸಾರ್ ದಡ್ಡರು’ ಎಂದು ಹೇಳೋಣ?
ಜನರ ಅಜ್ಞಾನ ಬಳಸಿ ಅದನ್ನು ಕ್ಯಾಷ್ ಆಗಿ ಕನ್ವರ್ಟಿಸುತ್ತಿರುವ ಆ ಮಾಯಾವಿಯನ್ನೋ ಇಲ್ಲವೇ ಟೋಪಿ ಹಾಕಿಸಿಕೊಳ್ಳಲು ‘ಕ್ಯೂ’ ನಿಲ್ಲುತ್ತಿರುವ ಹುಚ್ಚರನ್ನೋ?
ಇಲ್ಲಿ ಅಂತಲ್ಲ, ಎಲ್ಲೆಡೆ ಇಂಥ ಮಂದಿ ಸಾಂಕ್ರಾಮಿಕವಾಗುತ್ತಿದ್ದಾರೆ.
ಯಾರು ದಡ್ಡರು? ನಾಲಿಗೆಯ ಮೇಲೆ ನಿಗವಿಲ್ಲದ-ತಾನೊಬ್ಬ ಮಹಾರೌಡಿ ಎಂದು ಭ್ರಮಿಸಿ ಎಲ್ಲ ತನ್ನ ಕಾಲಾಳುಗಳು ಎಂಬಂತೆ ಸಭಾ ಮರ್ಯಾದೆಯನ್ನೂ ಮರೆತು- ‘ವದ್‌ಬಿಡ್ತೀನಿ ಕತ್ತರಿಸ್‌ಬಿಡ್ತೀನಿ ಮೆಟ್ಟಿನಲ್ಲಿ ಹೊಡೀತೀನಿ ಎಂದು ಅಬ್ಬರಿಸುವ ಗೋಮುಖವ್ಯಾಘ್ರ ದಡ್ಡನೋ, ಕೊಳಚೆಯ ಮೇಲೆ ಕಲ್ಲೆಸೆದು ನಾವೇಕೆ ‘ಚೀಪ್’ ಆಗೋಣ ಎಂದು ತೆಪ್ಪಗಿರುತ್ತಾರಲ್ಲ ಅವನು ದಡ್ಡನೋ?
ಇಂಥ ವ್ಯಕ್ತಿಗಳನ್ನು ನೀವು ಕಂಡಿರುತ್ತೀರಿ-ಅಂಥ ಗೊಂದಲಕ್ಕೆ ನೀವು ಸಿಕ್ಕಿರುತ್ತೀರಿ.
ಒಂದೂರಿನಲ್ಲಿ ಒಬ್ಬ ರಾಜ. ಅವನ ಸುತ್ತ ಪರಾಕು ಪಂಪನ್ನೊತ್ತುವ ಹೊಗಳು ಭಟ್ಟರು. ಆ ಆಸ್ಥಾನದಲ್ಲಿ ಪೀಕೇಶಿಗೆ ಅಗ್ರಮಾನ್ಯತೆ. ಈ ಪೀಕೇಶಿ ತನ್ನ ಸ್ವಾರ್ಥಸಾಧನೆಗಾಗಿ ಊರವರೆಲ್ಲರನ್ನೂ ದಡ್ಡರು ಎನ್ನುತ್ತಿದ್ದ ಸದಾ ಗಡ್ಡ ಕೆರೆದುಕೊಳ್ಳುತ್ತ. ಅಸಹನೆ ಮತ್ತು ಹೊಟ್ಟೆಕಿಚ್ಚು ಅವನಿಗೆ ಅಂಟುಜಾಡ್ಯವಾಗಿತ್ತು.
ತಾನೊಪ್ಪಿದವರು ಮಾತ್ರ, ಅವನಿಗೆ ಜೈ ಎಂದವರು ಮಾತ್ರ-ಅವನ ದೃಷ್ಟಿಯಲ್ಲಿ ಒಳ್ಳೇ ಲೇಖಕರು ನಟರು, ಗಾಯಕರು-ಪತ್ರಕರ್ತರು.
ಮಿಕ್ಕವರೆಲ್ಲರನ್ನೂ ಕಾಲಿನಡಿಯ ಕೆರ ಎನ್ನುತ್ತಿದ್ದ ಕುಹಕಿ-ನಯವಂಚಕ. ಆ ಆಸ್ಥಾನಕ್ಕೆ ಬಂದ ಆ ಪರಿಚಯಸ್ಥನೊಬ್ಬ ರಾಜರ ಎದುರು ಬಂದು ಸವಾಲೊಡ್ಡಿದ್ದ.
ಆತ: ಮಹಾಸ್ವಾಮಿ ತಮ್ಮ ನಾಡಿನಲ್ಲೆಷ್ಟು ಜನ ಕುರುಡರಿದ್ದಾರೆ ಎಂಬ ಅಂಕಿ-ಅಂಶ ತಮ್ಮಲ್ಲಿದೆಯೆ?
ಮಹಾರಾಜ: ಈ ಪ್ರಶ್ನೆಗೆ ಉತ್ತರ ನಮ್ಮ ಆಸ್ಥಾನ ವಿದ್ವಾಂಸ ಪೀಕೇಶಿ ಚಿಟಿಕೆಯಲ್ಲಿ ಉತ್ತರ ಹೇಳುತ್ತಾನೆ? ಯಾರಲ್ಲಿ ಕರೆಯಿರಿ ಪೀಕೇಶಿಯನ್ನು ಎಂದರು.
ಪೀಕೇಶ ಬಂದ. ಸಮಸ್ಯೆ ಅವನ ಮುಂದಿಟ್ಟರು.
ಪೀಕೇಶಿ: ಅದೇನು ಮಹಾಸ್ವಾಮಿ… ಎಲ್ಲ ಕುರುಡರೂ ಆಸ್ಥಾನಕ್ಕೆ ದಯಮಾಡಿಸಬೇಕು- ಮಹಾರಾಜರೊಂದು ಭರ್ಜರಿ ಭೋಜನ ಕೂಟ ಇಟ್ಟಿದ್ದಾರೆ ಎಂದು ತಮಟೆ ಹೊಡಿಸಿದರಾಯಿತು.
ಬಂದಿದ್ದಾತ ಗಹಗಹಿಸಿ ನಕ್ಕ. ಪೀಕೇಶಿಗೆ ಯಾರೋ ಕಪಾಲಕ್ಕೆ ಹೊಡೆದಂತಾಯಿತು.
ಮಹಾರಾಜರಿಗೆ ಪೀಕೇಶಿಯ ಬಗ್ಗೆ ಬೇಸರವಾಯಿತು.
ಮಹಾರಾಜ: ಎಲ್ಲಕ್ಕೂ ನಾನು ಪೀಕೇಶಿಯನ್ನು ನೆಚ್ಚಿದ್ದು-ಎಲ್ಲ ಪಂಚಾಯಿತಿ ವ್ಯವಹಾರ ಅವನಿಗೆ ಬಿಟ್ಟದ್ದು ತಪ್ಪು ಎನಿಸುತ್ತದೆ. ಬೇರೆ ಯಾರಾದರೂ ಸರಿ ನಮ್ಮ ಊರಿನಲ್ಲಿ ಎಷ್ಟು ಮಂದಿ ಕುರುಡರಿದ್ದಾರೆ ಎಂದು ಹೇಳುವುದಿದ್ದರೆ ಮುಂದೆ ಬನ್ನಿ.
ನಿಶ್ಯಬ್ದ. ಕ್ಷಣಕಾಲ ಮೌನ.
ಮಹಾರಾಜ: ಐದು ನಿಮಿಷ ಕಾಲಾವಕಾಶ ನೀಡುವೆ.
ನಂತರ ‘ಕುರುಡರ ಅನ್ವೇಷಣೆಗೊಂದು ಕಮಿಟಿ ಮಾಡಿ ಆರು ತಿಂಗಳು ಟಿ.ಎ. ಡಿ.ಎ. ಕೊಟ್ಟು ಟೈಂಕೊಡಿ’ ಎಂದ ಒಬ್ಬ.
ಮಗದೊಬ್ಬ ‘ಅದನ್ನ ತಿಳಿದು ನಮಗೇನಾಗಬೇಕು?’ ಎಂದ. ಅದೊಂದು ವ್ಯರ್ಥಾಲಾಪ ವೆನಿಸಿದಾಗ ಮಹಾರಾಜ ‘ಆತ’ನತ್ತ ತಿರುಗಿ
ಮಹಾರಾಜ: ಈ ಪ್ರಶ್ನೆಗೆ ಉತ್ತರ ತಾವೇ ಹೇಳಿ ಎಂದಾಗ ನಗೆ ಪ್ರವೀಣ ಪೀಕೇಶಿ ‘ಮುಗೀತು ಮುದುಕನ ಕಥೆ’ ಎಂದು ಗಹಗಹಿಸಿ ನಕ್ಕ.
ಮಹಾರಾಜ: (ರೇಗಿ) ಏ ಊಸರವಳ್ಳಿ… ಮೊದಲು ಹಿರಿಯರಿಗೆ ಮರ್ಯಾದೆ ಕೊಡುವುದು ಕಲಿ
ಬೆಪ್ಪನಂತೆ ಬಾಯಿಮುಚ್ಚಿ ತೆಪ್ಪಗೆ ನಿಂತ ಪೀಕೇಶಿ.
ಆತ: ಸ್ವಾಮಿ, ಈ ನಾಡಿನಲ್ಲಿ ನೂರಕ್ಕೆ ೯೯ ಜನ ಕುರುಡರು ಇದಾರೆ ಮಹಾಸ್ವಾಮಿ.
ಪೀಕೇಶಿ: (ಅಬ್ಬರಿಸಿ) ಬಾಯಲ್ಲಿ ಹೇಳಿದರೆ ಆಗಲಿಲ್ಲ. Prove ಮಾಡಿ ತೋರಿಸಕ್ಕೆ ಹೇಳಿ ಮಹಾಸ್ವಾಮಿ
ಎಂದು ನಸುಗುನ್ನಿಯಂತೆ ನಿಂತ.
ಆತ: ನಾಳೆ ಸಂಜೆ ನಿಖರವಾಗಿ ಹೇಳುವೆ ನನಗೊಬ್ಬ ಗುಮಾಸ್ತನನ್ನ ಕೊಡಿ
ಮಹಾರಾಜ : ಆಯಿತು.
ಅಂದಿನ ಸಭೆ ಬರಖಾಸ್ತಾಯಿತು. ಮಾರನೆ ಬೆಳಿಗ್ಗೆ ಮಾರ್ಕೆಟ್ ಚೌಕದಲ್ಲಿ ಆತ ಹರಕಲು ಕಂಬಳಿ ಹೊದ್ದು ಹೊಲಿಯುತ್ತ ಕುಳಿತ. ಬಂದವರೆಲ್ಲ ‘ಏನು ರಾರ್ಯೆ, ಏನು ಮಾಡ್ತಿದೀರಿ’ ಎನ್ನುತ್ತ ಹೋದರು. ಅದೆಲ್ಲ ಬರೆಸುತ್ತ ಹೋದ. ಸಂಜೆ ಬಂದು ಲೆಕ್ಕಕೊಟ್ಟ “ನೋಡಿ ಸ್ವಾಮಿ, ನಾನು ಹೊಲಿಯುತ್ತ ಕೂತಿರುವುದು ನೋಡಿಯೂ ೧೦೦ರಲ್ಲಿ ೯೦ ಜನ ಏನ್ಮಾಡ್ತಿದೀರಿ ಅಂದ್ರು, ಆದರೆ ಒಬ್ಬ ಹಳ್ಳಿ ಮುಕ್ಕ ಯಾರನ್ನ ನಾವು ದಡ್ಡ ಅಂತೀವಿ ಆ ಎಪ್ಪ, ‘ಏನು ಸೋಮೆ ಮಾರ್ಕೆಟ್ ಚೌಕದಾಗೆ ಒಲೀತಾ ಕುಂತ್ಕಂಡಿದೀರಿ’ ಅಂದ
ಎಂದು ಲೆಕ್ಕ ಕೊಟ್ಟಾಗ ಪೀಕೀಶಿ ಸುಸ್ತು.
ಮಹಾರಾಜ: ನಾನು ಯಾರ್ಯಾರನ್ನೋ ಮಹಾಮೇಧಾವಿ ಎಂದುಕೊಂಡಿದ್ದೆನೋ ಅವನು ಮಹಾ ದಡ್ಡ ಎಂದು ನೀವು ತೋರಿ ನನಗೆ ಜ್ಞಾನೋದಯ ಉಂಟು ಮಾಡಿದೀರಿ ಎಂದು ‘ಕಂಠೀಹಾರ’ ಉಡುಗೊರೆಯಾಗಿತ್ತು ಕಳಿಸಿದರು ಮಹಾರಾಜರು ಆತನಿಗೆ.
ಪೀಕೇಶಿ ತಲೆ ತಲೆ ಚಚ್ಚಿಕೊಂಡ. ತನ್ನ ಗೆಳೆಯರೆದುರು ‘ಮಹಾರಾಜರೂ ಅಷ್ಟೆ ಅವರಿಗೇನು ಕೇಡು. ಅವರೂ ‘ದಡ್ಡರು ಸಾರ್ ದಡ್ಡರು’ ಎಂದು ಹಾಡುಕಟ್ಟಿದ.
ಯಾರು ದಡ್ಡರು-ಯಾರು ಜಾಣರು… ಸಮಯ ಸಾಧಕರಾರು? ಹಾಡಿ ಹೊಗಳುವವರು ಯಾರು?
ಬೆಳ್ಳಗಿದ್ದದ್ದೆಲ್ಲ ಹಾಲು ಎಂದುಕೊಳ್ಳೋಣವೆ ಎಂಬ ಚಿಂತೆಗೆ ನನ್ನನ್ನು ಹಚ್ಚಿದು ‘ದಡ್ಡರು ಸಾರ್ ದಡ್ಡರು’ ಚಿತ್ರದ ಹೆಸರು.
*****
(೨೧-೦೬-೨೦೦೨)
