ಚಂದಿರ

ನೀಲ ನಿರ್ಮಲದಾಗಸದಿ ನಿಶ್ಚಿಂತನಾಗಿಹ ಚಂದಿರ
ಬಾನು ತೊಳಗಿದೆ, ಬುವಿಯು ಬೆಳಗಿದೆ ಶುದ್ಧ ಪಳುಕಿನ ಮಂದಿರ.

ನಿನ್ನ ನಗೆ ತನಿವೆಳಕ ತುಳುಕಿಸಿ ಸೂರೆಯಾಗಿದೆ ಸುಂದರ
ನಿನ್ನ ದಯೆ ಸುಧೆಯಾಗಿ ಸುರಿದಿದೆ ಬೆಳ್ಳಿಗಿರಣದ ಹಂದರ.

ಚಿಕ್ಕೆ ಚಕ ಚಕ ಜೊನ್ನ ಪೂರದಿ ತೇಲಿಮುಳುಗಿವೆ ಮೋಹನ
ಜಗದ ಜಡ ಬಡ ಜೀವಗೇಹದಿ ಶಾಂತಿಯಮೃತದ ಸೇಚನ.

ಬಾನ ಮೂಲೆಯ ಮೋಡಪಡೆ ಮುದಗೊಂಡು ಬರುತಿದೆ ತೇಲುತ
ಮದುಮಗನ ಸ್ವಾಗತಿಸೆ ನಿಬ್ಬಣ ಹೊರಟ ಸಂಭ್ರಮ ಹೋಲುತ.

ಶಾಂತಿ ಬೆಳುದಿಂಗಳಿನ ಹಾಲಲಿ ಕರಗಿದಂತಿದೆ ತಿಂಗಳ
ಸುಯ್ಯೆಲರು ಹಾಯಾಗಿ ತೀಡಿದೆ ಹದುಳವೆನೆ ಶುಭಮಂಗಳ.

ದೂರದಿಂದಲಿ ಕೇಳಬರುತಿದೆ ಕೊಳಲ ಕೊರಳಿನ ಗಾಯನ
ಸುಗ್ಗಿಯಲಿ ಹಿರಿಹಿಗ್ಗಿ ರಿಂಗಣಗುಣಿದು ಹಾಡಿದೆ ಜನಮನ.

ಇಂಥ ಸಮಯದಿ ಹಂಬಲದಿ ಬಾಯ್ದೆರೆದ ಸಿಂಪಿದು ಭಾವನ
ತರಗೆಲೆಯು ಗಿರುಕೆನಲು ಮೌನವೆ ಬಿಕ್ಕಿದೊಲು ಬರಿ ಕಲ್ಪನ.
*****