ಮಧುಚಂದ್ರ

ಬಾ ಮಲ್ಲಿಗೆ
ಬಾ ಮೆಲ್ಲಗೆ
ನನ್ನೆದೆ ಮೆಲ್ವಾಸಿಗೆ
ಇಳೆಗಿಳಿದಿದೆ
ಬೆಳುದಿಂಗಳು
ನಮ್ಮೊಲುಮೆಯ ಕರೆಗೆ!

ಚೆಲುವಾಗಿದೆ
ಬನವೆಲ್ಲವು
ಗೆಲುವಾಗಿದೆ ಮನವು;
ಉಸಿರುಸಿರಿಗು
ತಂಪೆರಚಿದೆ
ನಿನ್ನದೆ ಪರಿಮಳವು.

ತಿಂಗಳ ತನಿ-
ವೆಳಕಲಿ ಮೈ-
ದೊಳೆದಿಹ ಮನದನ್ನೆ!
ಮಂಗಳವೀ
ಮನೆಯಂಗಳ
ಚೆಂಗಲವೆಯ ಚೆನ್ನೆ.

ಹಿತವಾಗಿದೆ
ಮೆಲ್ಲೆಲರುಲಿ
ಮಿತವಾಗಿದೆ ಮೌನ;
ಜೊತೆಗೂಡುತ
ಮಾತಾಡಿವೆ
ಅರೆನಿದ್ದಯೊಳೇನ?

ಲೋಕದ ಮೈ-
ನೋವಿಗೆ ಶ್ರೀ
ಗಂಧದ ತನಿಲೇಪ;
ಆಕಾಶದ
ಗುಡಿಯಿಂದಲೆ
ಹೊರಸೂಸಿದೆ ಧೂಪ.

ಒಳಿತೆಲ್ಲವು
ಬೆಳಕಾಯಿತು
ಬಾನ್‌ ಕರೆಯಿತು ಜೇನು;
ಆನಂದದ
ಕಡಲಾಳದಿ
ನಾವಾದೆವೆ ಮೀನು.

ಎವೆಯಿಕ್ಕದೆ
ಮಿನುಗುತ್ತಿವೆ
ಚಿಕ್ಕೆಯ ಹನಿದೀಪ
ತಮ್ಮಷ್ಟಕೆ
ಜಾನಿಸುತಿವೆ
ಯಾವುದೊ ಸವಿನೆನಪ.

ಬಾ ಮಲ್ಲಿಗೆ
ಬಾ ಮೆಲ್ಲಗೆ
ನನ್ನೆದೆ ಮೆಲ್ವಾಸಿಗೆ-
ಇಳೆಗಿಳಿದಿದೆ
ಬೆಳುದಿಂಗಳು
ನಮ್ಮೊಲುಮೆಯ ಕರೆಗೆ!
*****