ಹೌದು! ಆತ ಬೈಗುಳಪ್ರಿಯ ಆದ್ದರಿಂದಲೇ ಮೇಲಿಂದ ಮೇಲೆ ಆ ಹಾಡನ್ನು ಗೊಣಗುತ್ತಲೇ ಇರುತ್ತಾನೆ.
“ಬಡತನವೇನು-ಸಿರಿತನವೇನು
ಎಲ್ಲಾ ನನಗೊಂದ
ಆದರು ನಾನು ಬಯಸುತ್ತೇನೆ ಸಿರಿತನವೆ ಮುಂದೆ
ಸುಳ್ಳೇನು ಸತ್ಯವೇನು
ಎಲ್ಲ ನನಗೊಂದೆ
ಆದರು ನಾನು ಆಗುತ್ತೇನೆ
ಸುಳ್ಳಿನ ಸರದಾರ ಮುಂದೆ
ಜೋಗುಳವೇನು-ಬೈಗುಳವೇನು
ಎಲ್ಲಾ ನನಗೊಂದೆ
ಆದರು ನಾನು ಆಗಿದ್ದೇನೆ
ಬೈಗುಳ ಪ್ರಿಯ ಇಂದೇ
‘ಜೋಗುಳ’ ಈಗ ಚಲನಚಿತ್ರವೂ ಆಗುತ್ತಿದೆ. ಜೋಗುಳ ಎಂಬ ಪದವೇ ಕೇಳಲು ಮೃದು ಮಧುರ. ಈ ಲೋಕದಿಂದ ನಿದ್ರಾಲೋಕಕ್ಕೆ ಕರೆದೊಯ್ಯುವ ಗಾನ ಮಾಧುರ್ಯ ಜೋಗುಳಕ್ಕಿದೆ. ಮಗುವಿಗಾಗಿ ಹಾಡುವ ಈ ಹಾಡು ಕೇಳಿದರೆ ಹಂಡೆ ಹಾಲು ಕುಡಿದಷ್ಟು ಸಮಾಧಾನವಾಗುತ್ತದೆ.
ಅಳಬೇಡ ಕಂದಮ್ಮ ಅಳಬೇಡವೆಂಬೆ
ನಾಕೆಮ್ಮೆ ಕರೆದ ನೊರೆಹಾಲು ಸಕ್ಕರೆಯ ನಾ ನೀಡುವೆ
ಎಂಥ ವಿಪರ್ಯಾಸ ನೋಡಿ. ಈ ಫಿಲ್ಮೀ ಯುಗದಲ್ಲಿ ಎಲ್ಲ ಮಹಿಳೆಯರಿಗೂ ಪರ್ಸನಾಲಿಟಿ ಮೇನ್‌ಟೇನ್ ಮಾಡಿ ಕೊಳ್ಳುವ ತವಕ.
ಆದ್ದರಿಂದಲೇ ಎದೆಹಾಲು ಕನಸಾಗಿ ಬಾಟಲಿ ಹಾಲು ಕುಡಿದು ಮುದ್ದು ಕಂದಮ್ಮಗಳಿಗೆ ಮಿಲ್ಕ್ ಪೌಡರ್ ಹಾಲೇ ಸಿಹಿಸಿಹಿ ಖೀರು.
ಮಗು ರಟ್ಟೆ ಹಿಡಿದು ಅತ್ತು ರಂಪಾಟ ಮಾಡಿ ತಂದೆ-ತಾಯಿಯ ಸಹನೆ ಪರೀಕ್ಷಿಸಿದಾಗ ಜೋಗುಳ-ಬೈಗುಳವಾಗುತ್ತದೆ. ಯಾವಾಗಲೂ ಅಷ್ಟೆ ಬೈಗುಳ ಎದುರಾಳಿಯನ್ನು ಕೆರಳಿಸುತ್ತದೆ. ಎಲ್ಲೋ ಅವಿತಿದ್ದ ಕೋಪವನ್ನು ಮೂಗಿನ ತುದಿಗೆ ತರುತ್ತದೆ.
ಹಾಗಾಗಿಯೇ ಅಲ್ಲವೆ ಮುನಿವರೇಣ್ಯರು ತಪಸ್ಸಿಗೆ ಕುಳಿತಾಗ ತಪೋಭಂಗಕ್ಕೆ ಬಂದ ಅಪ್ಸರೆಯು ಶಾಪಕ್ಕೆ ಈಡಾದುದು. ಈ ಕೋಪದ ಹಣೆ ಬರಹವೇ ಅಷ್ಟು ಅಧಿಕಾರದ ದರ್ಪ-ಉರಿಯುವ ಬೆಂಕಿಗೆ ತುಪ್ಪ. ಅಧಿಕಾರದ ಅಮಲು-ಕುಡಿತದ ಅಮಲು ಎರಡರ ಪರಿಣಾಮವೂ ಒಂದೇ, ಆಗಲೇ ಬೈಗುಳಗಳ ಚಲಾವಣೆಯಾಗಿ ದ್ವೇಷ ಹೆಡೆಯಾಡುವುದು. ಓಹೋ! ಬೈಗುಳದಲ್ಲೂ ಅದೆಷ್ಟು ಬಗೆ.
ಜೋಗುಳ ಹಾಡುವ ತಾಯಿ, ತಂಗಿ, ಅಕ್ಕ ಮಗುವನ್ನು ಮುದ್ದಿಸುವಾಗಲೂ ಬೈಯುತ್ತಾರೆ. ಅದು ಪ್ರೀತಿಯ ಬೈಗುಳ-ಕೇಳಿದರೆ ಖುಶಿಯಾಗುವ ಬೈಗುಳ.
…’ಥೂ ಕಳ್ಳ… ಛೀ ಕಳ್ಳ… ಏ ತುಂಟ.. ಪೋಲಿ… ಶತಪೋಲಿ… ಏನು ನನ್ನೆ ವದೀತೀಯಾ.. ಇನ್ನೊಂದು ಸರ್ತಿ ಒದ್ದರೆ-ಗುಮ್ಮನಿಗೆ ಹೇಳಿಕಳಿಸಿ ವದಿಸ್ತೀನಿ-ಹುಶಾರ್’
ಅದೇ ಕೊಳಗೇರಿಯತ್ತ ಬನ್ನಿ-ಕುಡುಕ ಗಂಡ ಹೆಂಡತಿಯನ್ನು ಬೈಗುಳಾಷ್ಟಕದಿಂದ ಹಿಂಸಿಸಿ-ಅಬ್ಬರಿಸುತ್ತಾನೆ.
‘ಥೂ-ಹಲ್ಕಾರಂಡೆ-ಈಗ ನಿನ್ನ ಬಟವಾಡೆ ಹಣದಾಗೆ ಕ್ವಾಲ್ಟರ್‌ತರನಿಲ್ಲ-ಜೀವ ತೆಗೆದ್‌ಬಿಡ್ತೀನಿ ಲೌಡಿ’
ಅದೇ ಎಂ.ಜಿ. ರೋಡಿಗೆ ಬನ್ನಿ.
‘ಬ್ಲಡಿ ಬಾಸ್ಟರ್ಡ್-ನನ್ನ ಡಾಟರ್‌ಗೆ ಡೌ ಹಾಕ್ಕೊಂಡು ಇನ್ನೊಂದು ಸರ್ತಿ ಈ ಕಡೆ ಬಂದರೆ I will Kick you’
ದೂರ್ವಾಸಮುನಿಯಂತೆ ಬಾಸ್ ಇರುವ ಕಛೇರಿಗೆ ಹೋಗಿ ನೋಡಿ-ಆತ ಬೈಯುವ ರೀತಿ What is this nonsence- ಇರ್ರೆಸ್ಪಾನ್ಸಿಬಲ್ ಫೂಲ್-ಬಿ ಕೇರ್‌ಫುಲ್, ಇನ್ ಪ್ಯೂಚರ್, ಅದರ್‌ವೈಸ್ I will ಸಸ್ಪೆಂಡ್ ಯು’
ಇನ್ನು ಸಿನಿರಂಗದತ್ತ ಬನ್ನಿ. ಇಲ್ಲಿ ನಿಜ ಜೀವನದ ರೌಡಿಗಳನೇಕರು ಇಂದು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಅದಕ್ಕೆ ‘ಕರಿಯ’ ಒಳ್ಳೆ ಉದಾಹರಣೆ. ಅದರಲ್ಲಿ ೨೩ ಮಂದಿ ರೌಡಿಗಳು ಅಭಿನಯಿಸುತ್ತಿದ್ದಾರಂತೆ. ಅವರು ಸೆಟ್ ಮೇಲೆ ಬಂದಾಗ ಅವರು ಚೆನ್ನಾಗಿ ಮಾಡಲಿ- ಮಾಡದಿರಲಿ ಹೊಸಬರಿಗೆ ಸೂಚನೆ ನೀಡುವಂತೆ ಗದರಿ ಹೇಳುವಂತಿಲ್ಲ. ಅದರಿಂದ ಕರಿಯ ನಿರ್ದೇಶಕ-ಕೋಪ ಬಂದರೂ ನುಂಗಿಕೊಂಡು-ತುಂಬ ವಿನಯದಿಂದ ‘ಅಣ್ಣಾವ್ರೇ-ಆ ಡೈಲಾಗ್ ಈ ಕಡೆ ತಿರುಗಿಕೊಂಡು-ಸ್ವಲ್ಪ ನಗ್ತಾ ಹೇಳಿ… ಹುಂ.. ಶುರು ಮಾಡ್ಕಳ್ಳಿ ಗುರುವೆ’ ಅಂತಿದ್ನಂತೆ ಸೆಟ್ ಮೇಲೆ.
ಭಾಷಾ ಬಳಕೆಯ ಮಹತ್ವ-ಬೈಗುಳದಿಂದಾಗಬಹುದಾದ ಅನಾಹುತ ಬಲ್ಲ ಜಾಣ ಆತ.
ರೌಡಿಗಳು ಈಗ ಕತ್ತಿ-ಚಾಕು-ಚೂರಿಗೆ ಗುಡ್ ಬೈ ಹೇಳಿ ನೆಮ್ಮದಿಯ ಬದುಕು ಬಾಳಲು ಕನಸುತ್ತಿದ್ದಾರೆ. ಆದರೀಗ ರೌಡಿಗಳನ್ನು ಮೀರಿಸುವಂತೆ ಮಹಾಮಹಿಮರು ಎಲ್ಲ ರಂಗದ ಅಖಾಡಗಳಿಗೂ ಇಳಿಯುತ್ತಿದ್ದಾರೆ. ಅವರು ಹೇಳಿದ್ದೇ ವೇದವಾಕ್ಯವಾಗಬೇಕು ಎಂಬುದವರ ಇಂಗಿತ. ಆದರೆ ಯಾರೇ ಆಗಲಿ ಯಾರನ್ನೇ ಬೈಯುವ ಮುನ್ನ ನಾನೂ ಗಾಜಿನ ಮನೆಯಲ್ಲಿ ವಾಸಿಸುತ್ತಿರುವೆ ಎಂಬುದನ್ನು ಮರೆಯಬಾರದಲ್ಲವೆ? ಅಷ್ಟು ಅರ್ಥಮಾಡಿಕೊಂಡಲ್ಲಿ ಬೈಗುಳವೂ ಜೋಗುಳವಾದೀತು.
*****
(೧೨-೦೭-೨೦೦೨)
