ನಮ್ಮ ಸುತ್ತಿನ ಹಲವರು

ಬೆಂಗಳೂರು ‘ಗುಲಾಬಿ ನಗರ’ವೆನ್ನುತ್ತಾರೆ. ಯಾವುದೇ ರಂಗದಲ್ಲಿ ಒಂದು ಸುತ್ತು ಹಾಕಿ ಸೂಕ್ಷ್ಮವಾಗಿ ಗಮನಿಸಿದರೆ ಇದು ‘ಲಾಬಿ ನಗರ’ವೆಂದು ಸ್ಪಷ್ಟವಾಗುತ್ತದೆ. ರಾಜಕೀಯ ರಂಗದಲ್ಲಿ ‘ಲಾಬಿ’ಗೆ ಅಗ್ರಮಾನ್ಯತೆ. ಚಿತ್ರರಂಗ ನಾನೇನು ಕಮ್ಮಿ ಎಂದು ತರಹಾವಾರಿ ಮೀಸೆಗಳನ್ನು ತಿರುವುದರತ್ತಲೇ ಇರುತ್ತದೆ. ಪತ್ರಕರ್ತರೂ ಖಂಡಿತಾ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ.

ಕೆಲವರು ಕೆಲವು ಸಂದರ್ಭದಲ್ಲಿ ತುಂಬ ಖಾರವಾಗಿ ಪ್ರತಿಕ್ರಿಯಿಸುತ್ತಾರೆ. ಇನ್ನು ಹಲವರು ತಮ್ಮ ಹಾಸ್ಯಪ್ರಜ್ಞೆ ಯಿಂದ ಇಕ್ಕಟ್ಟನ್ನು ಸಲೀಸಾಗಿ ಬಿಡಿಸಿ ನಗೆ ಹೊನಲಿಗೆ ದಾರಿ ಮಾಡುತ್ತಾರೆ. ಅಂಥ ಮಂದಿ ಇದ್ದಾಗ ವಾತಾವರಣದಲ್ಲಿ ಸಂಭ್ರಮ ಲವಲವಿಕೆ ಉಕ್ಕುತ್ತದೆ. ರವಿಚಂದ್ರನ್ ಪ್ರೆಸ್‌ಮೀಟ್ ಅದಕ್ಕೊಂದು ಒಳ್ಳೆ ಉದಾಹರಣೆ. ಕೆಲವು ಬಾರಿ ದೂರದ ಊರುಗಳಿಗೆ ವ್ಯಾನ್‌ನಲ್ಲಿ ಕರೆದೊಯ್ಯುವಾಗ ಖುಶಿ, ಹಾಸ್ಯವಾಡುವುದು ಸುಧೀಂದ್ರನಂಥ ಪ್ರಚಾರಕರ್ತ ನಿದ್ದಾಗ. ಆತನ ಮಾತು ಕೇಳಿದಾಗ ಅನೇಕ ವೇಳೆ ನಾಡಿಗೇರ್, ಬೀಚಿ, ನಾ. ಕಸ್ತೂರಿ ಮುಂತಾದವರ ‘ಜೋಕು’ ಗಳಿಗಿಂತ ಇದೇನು ಕಮ್ಮಿ ಇಲ್ಲ ಎನಿಸುತ್ತದೆ. ಚಿತ್ರರಂಗದ ಒಳ ಹೊರಗುಗಳನ್ನು ಚೆನ್ನಾಗಿ ಬಲ್ಲ ಈ ವ್ಯಕ್ತಿ ಲಘು ಶೈಲಿಯಲ್ಲೇ ತನ್ನ ಅನುಭವಗಳನ್ನು ಅಕ್ಷರಕ್ಕಿಳಿಸಿದರೆ ನಿಜಕ್ಕೂ ಅದೊಂದು ಚಿತ್ರರಂಗದ ಇತಿಹಾಸವೇ ಆದೀತು.

ಒಬ್ಬ ಚಿತ್ರೋದ್ಯಮಿ ತನ್ನ ಮಗಳಿಗೆ ವರಾನ್ವೇಷಣೆಯ ಸಂಭ್ರಮದಲ್ಲಿದ್ದರಂತೆ.

ಯಾರೊ ಹೇಳಿದರು “ಒಳ್ಳೆ ಗಂಡು ಮಹರಾಯ. ಟ್ರೈಮಾಡು. ಆತ ‘ಸ್ಟೇಟ್ಸ್’ನಲ್ಲಿರುವ” ಎಂದರಂತೆ.

ತಕ್ಷಣ ಆತ ತಕ್ಷಣ ಸಿಡಿಮಿಡಿಗೊಂಡು “ಭೆ-ಭೆ-ಸ್ಟೇಟ್ಸ್ನವನು ಬೇಕಿಲ್ಲ. ನರ್ತಕಿ ಅಥವಾ ಸಾಗರ್ ಚಿತ್ರಮಂದಿರದಲ್ಲಿದ್ದರೆ ಹೇಳು” ಎಂದು ಹೌಹಾರಿದರಂತೆ.

ನಂತರ ಆತ ‘ಅಯ್ಯಾ ನಾನು ಹೇಳಿದ್ದು-ಸ್ಟೇಟ್ಸ್ ಟಾಕೀಸಲ್ಲ. ಅಮೆರಿಕಾ’ ಎಂದಾಗ ಚಿತ್ರೋದ್ಯಮಿಗೆ ಹೊಸ ಉಸಿರು ಬಂತಂತೆ.

ಈಗ ಚಿತ್ರರಂಗಕ್ಕೆ ಮಾಡೆಲ್‌ಗಳನೇಕರನ್ನು ಕರೆತರುತ್ತಿದ್ದಾರೆ. ಬಿಚ್ಚಮ್ಮಗಳು ಬಾಡಿ ಬಿಲ್ಡರ್‌ಗಳು ತಮ್ಮ ಅಂಗಾಂಗ ಪ್ರದರ್ಶನವನ್ನೇ ಅಭಿನಯವೆಂದು ಭ್ರಮಿಸುವವರೂ ಈಗ ನಮ್ಮಲ್ಲಿದ್ದಾರೆ. ಟೀವಿಗಳು ಬಂದ ಮೇಲಂತೂ ಜಾಹಿರಾತುಗಳ ದರ್ಬಾರು ಅತಿಯಾಗಿ ಕತೆ, ಕಾದಂಬರಿಗಳ ಅಂತಃಸ್ಸತ್ವವನ್ನು ನುಂಗಿ ನೀರು ಕುಡಿಯಲು ಸೀರಿಯಲ್‌ಗಳ ಮಧ್ಯೆ ಅಡ್ವ‌ಟೈಸ್‌ಮೆಂಟ್ HUMPಗಳು ಅತಿಯಾಗುತ್ತಿವೆ. ಈಗ ಯಾರು ಬೇಕಾದರೂ ಹೀರೋ-ಹೀರೋಯಿನ್‌ಗಳಾಗ ಬಹುದಾದ ಕಾಲ. ಈಗ ಯಾರು ಏನು ಮಾಡಿದರೂ ನಡೆಯುತ್ತದೆ. ಅದಕ್ಕೇ ಬೇಕಿರುವುದು ಪುಟಗಟ್ಟಲೆ ಜಾಹಿರಾತು.

ಅದಕ್ಕೆ ವೈಎನ್‌ಕೆ ಹೇಳಿದ್ದು

‘ಜಾಹಿರಾ-ಥೂ’ ಎಂದಳು
ಅದೇ ಜಾಹಿರಾತು’ ಎಂದು

ಹೀಗೆ ‘ಎಂಜ’ಲನ್ನೇ ಕ್ಯಾಚ್ ಹಿಡಿದು ಮಹಾಪ್ರಸಾದವೆಂದು ಸ್ವೀಕರಿಸುವುದು ಅಭ್ಯಾಸವಾಗಿದ್ದರಿಂದಲೇ ‘ರೀಮೇಕ್ ಚಿತ್ರಗಳು’ ಒಂದಾದ ಮೇಲೊಂದು ಬರತೊಡಗಿದ್ದು.

ರೀಮೇಕ್ ಚಿತ್ರಗಳಾದಾಗಲು ಗ್ರಾಮೀಣ ಸೊಗಡು ಉಳಿಸಿಕೊಳ್ಳಲು ಹಲವು ಸಣ್ಣಪುಟ್ಟ ಬದಲಾವಣೆ ಮಾಡುತ್ತಿರುವವರು ನಿರ್ದೇಶಕ ಎಸ್. ಮಹೇಂದರ್.

ರೀಮೇಕ್ ಚಿತ್ರ ಮಾಡುವಾಗ-‘ಪ್ರೇಂ ಟು ಪ್ರೇಂ’ ಭಟ್ಟಿ ಇಳಿಸುವ ನಿರ್ದೇಶಕರಿಗೇನೂ ನಮ್ಮಲ್ಲಿ ಕಮ್ಮಿ ಇಲ್ಲ. ‘ನಿನ್ನೇ ಪ್ರೀತಿಸುವೆ’ ನಿರ್ದೇಶಿಸಿದ ಆಕ್ಷನ್ ಫಿಲಂ ಡೈರಕ್ಟರ್ ಓಂಪ್ರಕಾಶ್‌ ರಾವ್‌ ಹೆಸರು ಬದಲಾಯಿಸಿದರೆ ಇನ್ನೇನು ಆಭಾಸವಾದೀತೋ ಎಂದು ‘ನಿನ್ನೇ ಪ್ರೇಮಿಸ್ತಾ’ ಎಂಬುದನ್ನ ‘ನಿನ್ನೇ ಪ್ರೀತಿಸುವೆ’ ಎಂದು ಹೆಸರಿಸಿದ್ದಾರೆ.

ಜೋಗಿ ಅವರು ಈ ಕುರಿತು ಬರೆಯುತ್ತಾ ‘ಕನ್ನಡದಲ್ಲಿ ‘ನಿನ್ನನ್ನೇ’ ಅನ್ನುವುದನ್ನು ‘ನಿನ್ನೇ’ ಅನ್ನುವ ಪರಿಪಾಠ ಇಲ್ಲ’ ಎಂದಿದ್ದಾರೆ.

ಅದು ಸತ್ಯವೂ ಹೌದು. ಈಗ ಕನ್ನಡ ಚಿತ್ರಕ್ಕೆ ‘ಬಟ್ಲರ್ ಇಂಗ್ಲೀಷ್ ಟೈಟಲ್ ಕೊಡುತ್ತಿರುವವರು ನಾಳೆ ‘ನಿನ್ನೇ ಪ್ರೀತಿಸುವೆ’ಯನ್ನೇ ಮಾದರಿ ಮಾಡಿಕೊಂಡು, ಮೊನ್ನೆ ಪ್ರೀತಿಸುವೆ, ಆಚೆಮೊನ್ನೆ ಪ್ರೀತಿಸುವೆ ಎಂಬ ಹುಚ್ಚು ಟೈಟಲ್‌ಗಳನ್ನು ಇಡಬಹುದು-ಇಲ್ಲವೆ ನಾಳೆ ಪ್ರೀತಿಸುವೆ, ನಾಡಿದ್ದು ಪ್ರೀತಿಸುವೆ ಈ ಕ್ಷಣ ಪ್ರೀತಿಸುವೆ, ಅರ್ಧಘಂಟೆ, ಪ್ರೀತಿಸುವೆ, ಎಂದು ಪ್ರೀತಿಗೂ ಕಾಲ್‌ಷೀಟ್ ನೀಡಬಹುದು.

ಕನ್ನಡದ ಬಗ್ಗೆ ಪ್ರೀತಿ ಇರುವವರು ಹೆಸರಿಡುವಾಗಲಾದರೂ ಸ್ವಲ್ಪ ತಲೆಕೆರೆದುಕೊಳ್ಳುವುದು ಲೇಸು. ಟೈಟಲು ವಿಚಿತ್ರವಾದಂತೆ ಚಿತ್ರವೂ ವಿಚಿತ್ರವಾದರೆ, ಅದೊಂದು ಕೆಟ್ಟ ಚಿತ್ರವಾಗಿ ಅಂಥ ಚಿತ್ರ ನೋಡುವುದು ‘ಚಿತ್ರಹಿಂಸೆ’ಯಾಗುತ್ತದೆ.

ರಾಜಕಾರಣದಲ್ಲಿ ಅಧಿಕಾರದ ಕುರ್ಚಿ ಹಿಡಿಯಲು ‘ಲಾಬಿ’ ನಡೆಯುತ್ತದೆ ಈ ಗುಲಾಬಿ ನಗರದಲ್ಲಿ. ಹಾಗೆ ಚಿತ್ರರಂಗದಲ್ಲಿ ಕೆಲವರನ್ನು ಮೇಲೆತ್ತಲು-ಹಲವರನ್ನು ಪಾತಾಳಕ್ಕೆ ತುಳಿಯಲು ನಿರಂತರ ‘ಲಾಬಿ’ ನಡೆಯುತ್ತಲೇ ಇರುತ್ತದೆ. ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ ಇವರ ಹೆಜ್ಜೆ ಕಂಡುಹಿಡಿಯುವುದೇ ಕಷ್ಟ.

‘ಆತ ಅದ್ಭುತವಾದ ನಟ-ಈಕೆ ಅದ್ಭುತವಾದ ನಟಿ’ ಎಂದು ರಾಜಾರೋಷವಾಗಿ ಬರೆದು ಹೆಸರು ಹಾಕಿಕೊಂಡು ಅದಕ್ಕೆ ಸಕಾರಣಗಳನ್ನು ಕೊಟ್ಟರೆ ಪರವಾಗಿಲ್ಲ. ಅಂಥ ಅಭಿಪ್ರಾಯ ಒಪ್ಪಬಹುದು. ಆದರೆ ಕೆಲವರು ಮೈಗೆಲ್ಲ ಎಣ್ಣೆ ಸವರಿಕೊಂಡು ‘ಆಯಿಲ್‌ಕುಮಾರ್’ ಆಗಿರುತ್ತಾರೆ. ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವರ್ಗಕ್ಕೆ ಸೇರಿದವರು ಇಂಥ ಮಂದಿ.

ಒಬ್ಬ ರಾಜಕಾರಣಿಯನ್ನು ಮೊನ್ನೆ ಕಂಡಿದ್ದೆ.

ರಾಜಕಾರಣಿ: ‘ನಾನು ಬೆಳಿಗ್ಗೆ ಒಂದು ಪಾರ್ಟಿ, ಮಧ್ಯಾಹ್ನ ಒಂದು ಪಾರ್ಟಿ, ಸಂಜೆಗೊಂದು ಪಾರ್ಟಿ, ರಾತ್ರಿ ಎಲ್ಲ ಒಟ್ಟಿಗೆ ಸೇರುತ್ತೇವೆ. ಅದೇ ಕಾಕ್‌ಟೇಲ್ ಪಾರ್ಟಿ’ ಎಂದು ಗಹಗಹಿಸಿ ನಕ್ಕ.

‘ಪತ್ರಕರ್ತನ ಎದುರಿಗೇ ಹೀಗೆ ಹೇಳ್ತಿದೀರಲ್ಲ’ ಎಂದೆ.

ತಪ್ಪೇನು ಎಲ್ಲ ರಂಗದವರ ಹಣೇಬರಹವೂ ಅಷ್ಟೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ- ಗೇಣು ಬಟ್ಟೆಗಾಗಿ-ಇಲ್ವೆ ಸಿಲ್ಕು ಸೀರೆಗಾಗಿ ಅಂತ ಅನ್ನೋದು ಗೊತ್ತಿರೋದು ತಾನೆ’ ಎಂದ.

ಆಗಲೇ ಪಿ. ಕಾಳಿಂಗರಾಯರ ‘ನಗೆಯು ಬರುತಿದೆ’ ಹಾಡು ಅಲೆ ಅಲೆಯಾಗಿ ತೇಲಿ ಬಂದದ್ದು.
*****
(೧೫-೦೮-೨೦೦೨)