ಫೋಟೋ ಸೆಷನ್ಸ್

ಚಲನಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಫೋಟೋ ಸೆಷನ್ಸ್ ಈಗ ಮಾಮೂಲು. ಸಿನಿ ಕ್ರೇಜ್ ಹೆಚ್ಚಿರುವುದರಿಂದ ಹಾಗೂ ಹೊಸ ನಟೀಮಣಿಯರಿಗೆ ಇದೀಗ ಅವಕಾಶ ಹೆಚ್ಚು ಲಭಿಸುತ್ತಿರುವುದರಿಂದ ‘ಫೋಟೋ ಸೆಷನ್ಸ್’ ಹೆಚ್ಚಿ ‘ಸೆನ್ಸೆಷನಲ್’ ಎನ್ನುವಂಥ ಸೆಕ್ಸಿ ಫೋಟೋಗಳು ಈಗ ಧಾರಾಳವಾಗಿ ಹೊರಬರುತ್ತಿವೆ. “ಮದರಾಸ್-ಬೊಂಬಾಯಿ-ಕಲ್ಕತ್ತಾ ಕೇರಳದಿಂದೇಕೆ ಕಲಾವಿದೆಯರನ್ನು ಕರೆಸುತ್ತೀರಿ: ನಾವೂ ಯಾವ ಬಿಚ್ಚಮ್ಮನಿಗೇನು ಕಡಿಮೆ ಇಲ್ಲ ‘ಧಮ್’ ಇದ್ದರೆ ಕನ್ನಡಿಗರಿಗೇ ಅವಕಾಶ ಕೊಡಿ” ಎಂಬ ಕೂಗೂ ಎದ್ದಿದೆ ಈಗ.

ನಟೀಮಣಿಯೊಬ್ಬಳು ಪರಭಾಷೆಯಿಂದ ಬಂದರೆ ಮುಹೂರ್ತ ದಿನದಿಂದಲೇ ಆಕೆ ‘ಫೋಟೋ ಸೆಷನ್’ಗೆ ಬೇಡಿಕೆ ಹೆಚ್ಚುತ್ತದೆ. ಅನೇಕ ವೇಳೆ ಆಚಿನಿಂದ ಬಂದ ಪರಭಾಷಾ ಗಿಣಿಗಳಿಗೆ ಅವರೂರಿನಲ್ಲಿ ‘ಕ್ಯಾರೇ’ ಎನ್ನುವವರೂ ಇರುವುದಿಲ್ಲ. ಆಕೆ ಅಲ್ಲಿ ಎಕ್ಸ್ ಟ್ರಾ ನಟಿಯೇ ಇರಬಹುದು ನಿರ್ಮಾಪಕ ನಿರ್ದೆಶಕರು ಸ್ಟಾರ್ ಟ್ರೇಟ್‌ಮೆಂಟ್ ಕೊಟ್ಟಾಗ-ಕ್ಯಾಮರಾ ಮುಂದೆ ಅವರು ನೀಡುವ ಪೋಸುಗಳನ್ನು ನೋಡಬೇಕು…

ದೇವಲೋಕದಿಂದ ದಾರಿತಪ್ಪಿ ಬಂದ ಅಪ್ಸರೆ ಕನ್ಯೆಯೇನೋ ಎಂಬಂತಿರುತ್ತದೆ ಅವರ ಹಾವ, ಭಾವ, ಬೆಡಗು-ಬಿನ್ನಾಣ… ಎಷ್ಟೋ ಚಿತ್ರಗಳ ಹೀರೋಯಿನ್‌ಗಳು ಒಂದು ದಿನ ಮಾತ್ರ ಶೂಟಿಂಗ್ ಭಾಗವಹಿಸಿ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿ ಅದು ಹಳೆಯ ಪತ್ರಿಕೆಯಾಗುವುದರಲ್ಲಿ ಆಕೆಗೇನೂ ನಟನೆ ಬರುವುದಿಲ್ಲ ಎಂದು ‘ಗೇಟ್ ಪಾಸ್’ ಕೊಟ್ಟಿರುವ ಬಿಸಿಬಿಸಿ ಸುದ್ದಿಗಳನ್ನು ನೀವು ಪತ್ರಿಕೆಗಳಲ್ಲಿ ಓದಿರುತ್ತೀರಿ.

ಇದು ಅನುಭವವೇ ಇಲ್ಲದೆ ಸ್ಟಾರಿಣಿಯಾಗಿ ಬಂದವರ ಕತೆ. ಸ್ಟಾರ್ ಆಗಲು ಕನಸುವ ನಟ-ನಟಿಯರು ಫ್ಯಾನ್ಸಿ ಡ್ರೆಸ್‌ನಂತೆ ವಿವಿಧ ಪೋಷಾಕುಗಳಲ್ಲಿ ಬೇರ್ ಮಿನಿಮಮ್ ಡ್ರೆಸ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ‘ಫೋಟೋ ಸೆಷನ್’ ಬಹಳೆಡೆ ಭರ್ಜರಿ ನಡೆಯುತ್ತದೆ. ನಿರ್ಮಾಪಕ- ನಿರ್ದೆಶಕರಿಗೆ ನಟ-ನಟಿಯರನ್ನು ಪರಿಚಯಿಸಲೆಂದೇ ಹಲವು ವ್ಯಕ್ತಿಗಳು ಹುಟ್ಟಿಕೊಂಡಿರುವುದೂ ಉಂಟು ಗಾಂಧೀನಗರದಲ್ಲಿ.

ತುಂಬ ಕಾಳಜಿ ವಹಿಸಿ ಹೊಸ ಮುಖಗಳನ್ನು ಪರಿಚಯಿಸುವ ಯೋಗ್ಯರ ಕೈಗೂ ಆ ಫೋಟೋಗಳು ಹೋಗುತ್ತವೆ ‘ಹೇಗೋ ಹಣ ಸಂಪಾದಿಸಿದರಾಯಿತು’ ಎಂದುಕೊಂಡ ಆಯೋಗ್ಯರ ಕೈಗೂ ಆ ಫೋಟೋಗಳು ಹೋಗುವುದುಂಟು. ಅದು ಯಾರ ಕೈ ಸೇರುತ್ತದೆ ಎನ್ನುವುದು ನಟೀಮಣಿಯರ ಅದೃಷ್ಟದ ಮೇಲೆ ನಿಂತಿರುತ್ತದೆ.

ನಟಿಯಾಗ ಬಯಸುವ ಶ್ರೀಮಂತ ಮನೆತನದವರು ‘ಫೋಟೋ ಸೆಷನ್’ಗೆ ನೀರಿನಂತೆ ಹಣ ಖರ್ಚುಮಾಡುತ್ತಾರೆ.

ಚಿತ್ರ ಮುಹೂರ್ತ ಸಮಾರಂಭಗಳಲ್ಲಿ, ಶತದಿನೋತ್ಸವಗಳಲ್ಲಿ, ಕ್ಯಾಸೆಟ್ ಬಿಡುಗಡೆ ಸಮಾರಂಭಗಳಲ್ಲಿ ಪ್ರೆಸ್‌ಮೀಟ್ ೧೫ ನಿಮಿಷಕ್ಕೆ ಮುಗಿದರೆ ‘ಫೋಟೋ ಸೆಷನ್’ ಗಂಟೆಗಟ್ಟಲೆ ನಡೆಯುತ್ತದೆ. ಬಹಳಷ್ಟು ಕಾರ್ಯಕ್ರಮಗಳಲ್ಲಿ ಹಿಂದೆ ಕೂತವರಿಗೆ ಫೋಟೋಗ್ರಾಫರುಗಳೇ ಅಡ್ಡಗೋಡೆಯಾಗಿರುತ್ತಾರೆ. ಅತ್ತ ಏನು ನಡೆಯುತ್ತಿದೆ ಎಂಬುದನ್ನು ರನ್ನಿಂಗ್ ಕಾಮೆಂಟರಿ ಕೊಟ್ಟರೆ ಮಾತ್ರ ಅರಿಯುವುದು ಸಾಧ್ಯ.

ಹಾಗೆಂದ ಮಾತ್ರಕ್ಕೆ ಫೋಟೋಗ್ರಾಫರುಗಳನ್ನು ಅನ್ನುವುದೂ ತಪ್ಪಾಗುತ್ತದೆ. ಅವರು ಆ ಗಳಿಗೆಯಲ್ಲಿ ಚಿತ್ರ ತೆಗೆಯದಿದ್ದರೆ ಮಾರನೆ ಬೆಳಗ್ಗೆ ಪತ್ರಿಕೆಗಳಲ್ಲಿ ಫೋಟೋಗಳು ಬರುವುದೂ ಸಾಧ್ಯವಿಲ್ಲ.

ಇದು ಪ್ರಚಾರ ಯುಗವಾದ್ದರಿಂದ ಪತ್ರಿಕೆಗಳಲ್ಲಿ ಮಿಂಚಲೆಂದೇ ಆ ಹೊತ್ತಿಗೆ ಹಾಜರಾಗುವ ಪ್ರಚಾರಪ್ರಿಯರೂ ಈಗ ಹೆಚ್ಚಿದ್ದಾರೆ.

ಎಷ್ಟೋ ಸಂಸ್ಥೆಗಳ ವಾರ್ಷಿಕೋತ್ಸವಗಳಲ್ಲಿ ಫೋಟೋ ಸೆಷನ್‌ಗೆ ಮಾತ್ರ ಹಾಜರಾಗುವ ಶಿಸ್ತುಗಾರ ಪುಟ್ಟಸ್ವಾಮಿಗಳೂ ಇದ್ದಾರೆ. ಹೀಗಾಗಿ ದುಡಿವವರು ಒಬ್ಬರು ಕಾಣಿಸಿಕೊಳ್ಳುವವರು ಮತ್ತೊಬ್ಬರು ಆಗಿರುತ್ತಾರೆ.

ಕ್ಲಿಕ್ ಮಾಡಿದ ಫೋಟೋಗಳೆಲ್ಲ ಚೆನ್ನಾಗಿಯೇ ಬರುತ್ತವೆ ಎಂದು ಹೇಳಲಾಗುವುದಿಲ್ಲ. ಭರ್ಜರಿ ಫಂಕ್ಷನ್‌ಗಳಿಗೆ ಒಳ ಹೋಗಲು ಕ್ಯಾಮರಾ ಒಂದು ಪಾಸ್ ಪೋರ್ಟ್… ಪ್ರೆಸ್ ಫೋಟೋಗ್ರಾಫರ್ಸ್ ಎಂದರಾಯಿತು. ಒಳಗೆ ಹೋಗಿಯಾದ ಮೇಲೆ ಕೆಲವರಂತೂ ಒಂದಾದ ಮೇಲೊಂದರಂತೆ ಫೋಟೋ ಕ್ಲಿಕ್ ಮಾಡುತ್ತಲೇ ಹೋಗುತ್ತಾರೆ. ಕ್ಯಾಮರಾದಲ್ಲಿ ರೀಲ್ ಇದೆಯೋ ಇಲ್ಲವೋ ಎಂಬುದನ್ನು ಪರಮಾತ್ಮನೇ ಹೇಳಬೇಕು.

ಒಮ್ಮೆ ಒಬ್ಬಾತ ಸರಸರ ಪ್ರೆಸ್‌ ಮೀಟ್‌ಗೆ ಬಂದ. ತನಗೆ ಬೇಕಾದವರ ಫೋಟೋಗಳು ಕ್ಲಿಕ್ಕಿಸಿದ.

ಪ್ರಶೋತ್ತರದಲ್ಲಿ ‘ಚಿತ್ರ-ವಿಚಿತ್ರ’ ಪ್ರಶ್ನೆಗಳನ್ನು ಎಸೆದ. ನಟೀಮಣಿಗೆ ಕೈಕುಲುಕಿ ಸರಸರ ಹೊರಟ.

ಈಗ ಯುವ ಪತ್ರಕರ್ತರೂ ಬಹಳ ಮಂದಿ ಇರುವುದರಿಂದ ಅವನ್ಯಾರೆಂಬ ತಿಳಿವ ಸಹಜ ಕುತೂಹಲದಿಂದ ಹೊರಟವನನ್ನು ತಡೆದು ಕೇಳಿದೆ.

‘ತಾವು ಯಾವ ಪ್ರೆಸ್ಸು’

‘ಇಂಟೀರಿಯರ್’

‘ಅದು ಇಂಗ್ಲೀಷ್ ಪತ್ರಿಕೇನಾ?’

‘ಅಲ್ಲ ಇಂಟೀರಿಯ‌ರ್ ಪ್ರಿಂಟಿಂಗ್ ಪ್ರೆಸ್’

‘ಆದರೆ ಓನರ್ರಾ ನೀವು’

‘ಅಲ್ಲ-ಅಲ್ಲಿ ಕಂಪಾಸಿಟರು’ ಎಂದು ಹೇಳಿ ಸರಸರನೆ ನಡೆದೇ ಬಿಟ್ಟ. ನಾನು ತೆಪ್ಪಗಾಗದೆ ವಿಧಿ ಇರಲಿಲ್ಲ.

ಮತ್ತೊಂದು ಸಾಹಿತ್ಯ ಕಾರ್ಯಕ್ರಮ. ಏರ್ಪಡಿಸಿದ್ದವರು ಕನ್ನಡದ ಹೋರಾಟಗಾರರು.

ಅದು ಖ್ಯಾತ ಸಾಹಿತಿಗೆ ಸನ್ಮಾನ. ಕಾರ್ಯಕ್ರಮ ಮುಗಿದ ನಂತರ ಫೋಟೋ ಸೆಷನ್ ಇತ್ತು. ಎಲ್ಲ ನಿಂತರು ‘ನಾ ಮುಂದು ತಾ ಮುಂದು’ ಎಂದು ನುಗ್ಗಿ.

ಫೋಟೋಗ್ರಾಫರ್ ಎಲ್ಲರನ್ನೂ ಬ್ಯಾಲೆನ್ಸ್ ಆಗುವಂತೆ ನಿಲ್ಲಿಸಿ ‘ಓನ್-ಟು-ಥ್ರೀ’ ಹೇಳಿ ಕ್ಲಿಕ್ ಮಾಡಿದ.

‘ಥ್ರೀ’ ಎನ್ನುವ ಹೊತ್ತಿಗೆ ಓರಾಟಗಾರರೆಲ್ಲ ಮುಂದೆ ನುಗ್ಗಿ ಖ್ಯಾತ ಸಾಹಿತಿ ಹಿಂದೆ ಬಿದ್ದಿದ್ದರು. ಇಂಥವಂತೂ ಎಲ್ಲೆಡೆ ಸಾಮಾನ್ಯ.

ತಾತನ ಮನೆಯಲ್ಲೊಬ್ಬ ‘ಪುಟ್ಟ’ ಎಂಬ ಫೋಟೋಗ್ರಾಫ‌ರ್ ಇದ್ದ ಬಾಡಿಗೆಗೆ. ಅವನೊಮ್ಮೆ ಊರಿಗೆ ಹೊರಡುವ ಸಂಭ್ರಮದಲ್ಲಿದ್ದ. ಎಲ್ಲಾ ಪ್ಯಾಕ್ ಮಾಡಿಕೊಂಡು ಹೊರಟಾಗ ಊರಿನಿಂದ ತಾತನ ಮುದ್ದಿನ ಮೊಮ್ಮಗು ಬಂತು. ತಕ್ಷಣ ತಾತ ‘ಮೊಮ್ಮಗುವಿನೊಂದಿಗೆ ಒಂದು ಫೋಟೋ ತೆಗೆ ಪುಟ್ಟ’ ಎಂದರು. ಅವನಿಗೂ ಹೊರಡುವ ಆತುರ. ಆದರೂ ಒತ್ತಾಯಕ್ಕೆ ಮಣಿದು ಒಂದು ಫೋಟೋ ಕ್ಲಿಕ್ ಮಾಡಿ ‘ಊರಿಂದ ಬಂದಮೇಲೆ ‘ತಾತ-ಮೊಮ್ಮಗನ ಭರ್ಜರಿ ಫೋಟೋ ಸೆಷನ್ ಮಾಡ್ತೀನಿ’ ಎಂದು ಹೇಳಿ ಹೊರಟ.

೧೫ ದಿನ ಬಿಟ್ಟು ಫೋಟೋಗ್ರಾಫರ್ ಪುಟ್ಟ ಬಂದದ್ದನ್ನು ಕಾಯುತ್ತಿದ್ದ ತಾತ ಹೇಳಿದ ‘ಮೊಮ್ಮಗುವಿನ ಫೋಟೋ ಕೊಡು ಮರಿ’ ಎಂದಾಗ ಪುಟ್ಟ ನಕ್ಕು, ‘ಅವತ್ತು ಅದರಲ್ಲಿ ರೀಲೇ ಇರಲಿಲ್ಲ. ಸುಮ್ಮನೆ ಕ್ಲಿಕ್ ಮಾಡಿದೆ. ಕರ್ಕೊಂಬನ್ನಿ, ಮೊಮ್ಮಗೂನ ಈಗ ಒಂದು ಫೋಟೋ ಸೆಷನ್ನೇ ಮಾಡ್ತೀನಿ’ ಎಂದಾಗ ತಾತ ಸಪ್ಪಗಾಗಿ ‘ಟೈಫಾಯಿಡ್ ಬಂದು ನನ್ನ ಮೊಮ್ಮಗ ತೀರ್ಕೊಂಡ’ ಎಂದಾಗ ಸಪ್ಪಗಾದ ಪುಟ್ಟನನ್ನು ‘ಗಿಲ್ಟ್ ಕಾಂಪ್ಲೆಕ್ಸ್’ ಕಾಡುತ್ತಿತ್ತು.

‘ಫೋಟೋ ಸೆಷನ್’ನಂತೆ ಅಸೆಂಬ್ಲಿ ಸೆಷನ್, ಮೀಟಿಂಗ್ ಸೆಷನ್, ಜಗಳದ ಸೆಷನ್, ಫೈಟಿಂಗ್ ಸೆಷನ್, ಹುಚ್ಚನಂತೆ ಕೋಪ ಕಾರಿಕೊಳ್ಳೋ ಸೆಷನ್, ಸಖತ್ತಾಗಿ ಗುಂಡು ಹಾಕಿ ತಾನೊಬ್ಬ ಮಹಾತ್ಮನಂತೆ ಗುಂಡು ಹಾಕೋರನ್ನ ಬೈಯ್ಯೋ ಸೆಷನ್ ಹೀಗೆ ಬಗೆ ಬಗೆ ತಮಾಷೆ ಮಂದಿಯ ಪ್ರೊಸಷನ್ನೇ ಮಾಡಬಹುದು ಎನಿಸುತ್ತಿದೆ ಮುಂದೆ ಎಂದಾದರೊಮ್ಮೆ.
*****
(೧೭-೦೫-೨೦೦೨)