ನಿರೀಕ್ಷೆ

ಮನೆಯ ಮಂಗಳಮೂರ್‍ತಿ ಮೌನದಾಳದಿ ಮುಳುಗಿ
ಕಣ್ಣ ರತ್ನದ ಖಣಿಯ ದೀಪಿಸಿಹಳು-
‘ಸಂಜೆಯಾಯಿತು ಈಗ ಬಂದೆ ಬರುವರು’ ಎಂದು
ಒಂದೆ ಚಿಕ್ಕೆಯ ತೆರದಿ ಜಾನಿಸಿಹಳು.

ತುಂಬುಗೈ ಬಾಗಿಲಿಗೆ ಇಂಬುಗೊಟ್ಟಿದೆ, ಕಾಲ
ತುದಿಬೆರಳು ಹೊಸತಿಲಕ ಹೂವಾಗಿದೆ!
ನೆಟ್ಟ ದಿಟ್ಟಿಯು ದಾರಿ ನೋಡಿ ನಿಟ್ಟುಸಿರಿಡಲು-
ಜಡೆಯುದ್ದಕೂ ಚಿಂತೆ ಹೊಯ್ದಾಡಿದೆ!

ಏನೊ ನೆನಪಾದಂತೆ ಒಳಗೆ ಮೆಲ್ಲಗೆ ನುಸುಳಿ
ದೀಪವಂಟಿಸಿ ಸುಪ್ರಸನ್ನ ಮೊಗದಿ
ಚೆನ್ನೆ! ಹೆಜ್ಜೆಯ ಗುರುತನೆಂದೊ ಅರಿತವಳಂತೆ
ಬಂದೆ ಬರುವಳು ಇದಿರುಗೊಂಬ ಭರದಿ.

ಹಗಲುಗನಸೇ ಮಾಗಿ, ಬೈಗು ಸುಂದರವಾಗಿ
ಪೂರ್‍ಣಗೊಂಡಿದೆ ಬಾನ ಸ್ವರ್‍ಣನಕ್ಷೆ;
ಹೆಣ್ಣು ಜೀವದ ಹಲವು ಬಯಕೆ ಬಣ್ಣವ ಕೂಡಿ
ಮೂಡಿ ನಿಂತಂತಿಹುದು ಈ ನಿರೀಕ್ಷೆ.

ಸ್ನಿಗ್ಧನೋಟದೊಳಖಿಲ ಬ್ರಹ್ಮಾಂಡ ಮಿದುಗೊಂಡು
ಮೆಲಿತು ನಾಲ್ವಾತಿನಲಿ ತೇಲುತಿಹುದು-
ಬಾನು ಬುವಿಗಳ ತುಟಿಗೆ ಹುಣ್ಣಿಮೆಯ ಮುತ್ತಿಟ್ಟು
ಬರುವ ಬೆಳದಿಂಗಳವ ಹೋಲುತಿಹುದು.

ಪಡುವಣದ ಸಂಜೆವಣ್ ನಡುಮನೆಗೆ ಬಂದಂತೆ
ರಾಗಪುಲಕಿತ ಎದೆಯನಾಳುತಿಹಳು-
ಮಳೆಬಂದ ಮರುಚಣದ ಇಳೆಯ ಹೊಸತನದಂತೆ
ಅಡಿಗಡಿಗು ಈ ಬಾಳ ಬೆಳಗುತಿಹಳು
*****