ಹಗಲೆಂದರೆ ಇವಳು ಕಾಣುವ ಕನಸು
ಹೊತ್ತು ತರಬೇಕು ಇವಳಿದ್ದಲ್ಲಿ,
ನಿದ್ದೆ-ಮಂಪರು-ಕನಸು-ಕಂಪನ;
ಕದಡಿ ಹಾಕುತ್ತಾಳೆ ಕತ್ತಲ ಪೀಪಾಸೆಯಲ್ಲಿ
ರಾತ್ರಿ ಚಾದರದಡಿಗೆ ದಂಡು ದಂಡು
ಮಂದಿ ಬಂದು ಬೀಳುತ್ತಾರೆ
ಉಂಡಷ್ಟೂ (ಸಹ) ಭೋಗ
ಕೊಂಡಷ್ಟೂ (ಸ)ರಾಗವೆಂದು.
ಸಾವಿರ ಗಂಡರಿಗೆ ಮೊಲೆಯುಣಿಸಿ
ಲಾಲಿ ಹಾಡುತ್ತಾಳೆ,
ಅವರು ಅಲ್ಲೇ…. ಹಾಗೇ….
ತಣ್ಣಗೆ, ಅವಳ ಮಡಿಲಲ್ಲಿ
ಮಲಗುವ ಹಾಗೆ.
ಇವಳ ಕತ್ತಲ ಅಹಂಕಾರಕ್ಕೆ
ಸೊಕ್ಕಿ ಉಕ್ಕುತ್ತದೆ ಕಡಲು
ಹರಳ ಬಿರಿಬಿಟ್ಟರೆ ಅಲ್ಲಿ,
ಸಿಕ್ಕಲ್ಲಿ ಹೊಕ್ಕು ನಲುಗುವ
ಒಂಟಿ ಮಲ್ಲಿಗೆ ಹೂವು;
ಕೆಳಗೆ ಝುಳು ಝುಳು ಧಾರಾಕಾರ
ಹರಿವ ಹುಣ್ಣಿಮೆ ಬೆಳಕು
ಇವಳು ಕತ್ತಲ ಕನ್ಯೆ!
ಅಡಗಿದ್ದ ಸೂರ್ಯನ್ನ
ಆಕಾಶಕ್ಕೆ ಕೊಡವಿ,
ಮತ್ತೆ ಮುಡಿ ಕಟ್ಟುತ್ತಾಳೆ.
*****
ಕೀಲಿಕರಣ: ಕಿಶೋರ್ ಚಂದ್ರ