೧
ಅಂಚೆಯಾಳು ಬಂದನೇನು?
ತಂದನೇನು ಓಲೆಯ?
ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ?
ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ?
ಅವನ ಬರವ ಹಾರೈಸುತ
ಯೋಚನೆಯೊಡನೋಲವಿಸುತ
ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ
ದೂರ ಸಾರಿ ಹೋದ ಗೆಳೆಯರೊಲವಿಗಿಂತು ತಪಿಸುತ
ಖಿನ್ನನಾಗಿ ಬಿನ್ನನಾಗಿ ಮುದುಡಿಕೊಂಡು ಕುಳಿತಿಹೆ;
ನನ್ನ ನಾನೆ ಮರೆತಿಹೆ!
ನೆನಹು ಕೋದ ಜಪಮಣಿಯನು
ಎಣಿಸುತಿರುವ ವಿರಹಿಣಿ
(ತಾನೆ ತನ್ನ ಅರಗಿಣಿ!)
ಎಂತುಟಾಸೆವಟ್ಟು, ಮೂಗವಟ್ಟು ಕುಳಿತು ನೆನೆವಳೊ
ಅಂತುಟಾಸೆ ನನಗೆ ಅಂಚೆಯವನದೇಕೆ ಬಾರನೊ!
ಸುದ್ದಿಯೊಂದ ತಾರನೊ!
೨
ಬಾಲ್ಯದೊಂದು ಚಿಕ್ಕ ಕೃತಿ
ಅದರ ಮಧುರ ವಿಸ್ಮೃತಿ
ಅಂಚೆಮನೆಯು ಇರದ ಹಳ್ಳಿ
(ಸುತ್ತಮುತ್ತು ಡಬಗಳ್ಳಿ)
ಅಲ್ಲಿ ವಾರಕ್ಕೊಮ್ಮೆ ಬಂದು
ಮುದ್ರಾಂಕಿತ ಪತ್ರ ತಂದು
ಹಂಚುತಿದ್ದ ಅಂಚೆಗಾರ;
ನಮ್ಮ ಊರಿಗವನು ದೇವದೂತ ವಿವಿಧ ಸುದ್ದಿಸಾರ-
ಖಾಕಿ ಚಣ್ಣ,
ಬಗಲ ಚೀಲ,
ಹೆಗಲಿನಿಂದ ಜೋತ ಕೊಡೆ,
ದೊಡ್ಡ ಹೆಜ್ಜೆ, ಬೀಸು ನಡೆ,-
ಅವನ ನಗೆಯ ಬಗೆಯ ಕಂಡು
ಕೈಯ ಚಾಚಿ ಪತ್ರ ಕೊಂಡು
ಓಡುತಿರಲು, ಮನೆಯ ತುಂಬ ಹರುಷದೊಂದು ಹಬ್ಬವು!
ಅಂದಿನಂದ ಬಿಸವಂದದ ದಿನಗಳಿನ್ನು ಬಾರವು
೩
ಇಂದು ಯಾವ ಆಸರ?
ಶಾಂತಿಗಾಗಿ ಬಾಯಾರಿದೆ; ಬೇರೂರಿದೆ ಬೇಸರ!
ನಿದ್ದೆಯಿರದ ಆಕಳಿಕೆ
ಎತ್ತಲೂನು ಮಗ್ಗಲೂರಗುಡಲಾರದ ಬಳಲಿಕೆ!
ನನಗೆ ಮರಹು ಅಲಸಿಕೆ
ಎಡೆಗೊಂಡಿದೆ; ನಡುವೆ ಮೌನವೆಳೆದಂತಿದೆ ಜವನಿಕೆ.
ಗೆಳೆಯರೆಲ್ಲ ಶಪಿಸಿ ಬರೆಯಲವರ ಕೋಪತಾಪಕೆ
ಸಣ್ಣದೊಂದು ಓಲೆ ಕೂಡ ಬರೆಯನವರ ಶಮನಕೆ.
ಹೊತ್ತನೆಲ್ಲ ವ್ಯರ್ಥಗಳೆವ ಅರ್ಧಮರ್ಧ ಸಾಹಸಿ
ಅಯ್ಯೊ ನಾನು ಆಲಸಿ!
ಇನ್ನು ನನ್ನ ಮನ್ನಿಸಿ.
ಆದರೂನು ಕಾಯುತಿರುವ,
ಯಾರದಾದರೊಂದು ಓಲೆ
(ಇರಲಿ ಬರಿಯ ಎರಡು ಸಾಲೆ)
ಬಾರದೇನು? ತಾರದೇನು ಸ್ನೇಹಗೊಂಡ ಸೂತ್ರವ?
ಕಣ್ಣ ಮುಂದೆ ಕುಣಿಸದೇನು ಬಣ್ಣಗೊಂಡ ಪಾತ್ರವ?
ಲಿಪಿಯೋದ್ಭವರಾಗಿ ಇಳಿಸರೇನು ಮೌನಭಾರವ?
ಎಂದಿಗೇನು?
ಅಂದು ಇಂದು
ಅಂಚೆಯಾಳು ನನ್ನ ಬಂಧು.
ನನ್ನ ಆಸೆ ಒಂದೆ ಒಂದು:
ಓಲೆ ಬರಲಿ
ಬಾರದಿರಲಿ
ಅಂಚೆಯವನು ಮಾತ್ರ ದಿನವು
ನನ್ನ ಕಣ್ಣನೆದುರು ಬಂದು ನಕ್ಕಾದರು ಹೋಗಲಿ.
*****