‘ಪಂಚತಂತ್ರ’ ಮೆಲುಕು ಹಾಕಿದಾಗ…

ಟಿ.ಪಿ.ಮಹಾರಥಿಯವರ ‘ಪಂಚತಂತ್ರ’ ಕೃತಿ ಕನ್ನಡಕ್ಕೆ ಅನುವಾದಿಸುವ ಹೊಣೆ ನನ್ನ ಪಾಲಿಗೆ ಬಿಟ್ಟರು ಈಟೀವಿ ನಿರ್ವಾಹಕರು. ಮಕ್ಕಳು ಹಾಗೂ ದೊಡ್ಡವರಿಗೂ ಪ್ರಿಯವಾಗುವ ಬೊಂಬೆಯಾಟವಾಗಿ ಕಿರುತೆರೆಯಲ್ಲಿ ಅದು ಬರುವುದೆಂದಾಗ-ಪಪೆಟೆಯರ್ ಆದ ನನಗೂ ಅದು ಪ್ರಿಯವೆನಿಸಿತು. ಅನುವಾದ ಕಾರ್ಯ ಮುಗಿಸಿ ಕೂತಾಗ ಅದರಲ್ಲಿನ ಬಹಳಷ್ಟು ಸಾಲುಗಳು ಎಲ್ಲರ ಬದುಕಿಗೂ ಅನ್ವಯವಾಗುವಂಥವು ಎನಿಸಿತು.

ರಂಗಭೂಮಿ ಮಾತ್ರವಲ್ಲ ಚಿತ್ರರಂಗ ಹಾಗೂ ಪತ್ರಿಕಾ ರಂಗದಲ್ಲೂ ನಾನು ಆಸಕ್ತನಾದುದರಿಂದ ಮತ್ತೆ ಓದಲು ಕುಳಿತಾಗ ಬೇರೆ ಬೇರೆ ಅರ್ಥಗಳು ಮಿಂಚುವಂತೆ ಮಾಡಿತು. ಆ ಸಾಲುಗಳು… ಅವುಗಳ ಟಿಪ್ಪಣಿ ಇಲ್ಲಿದೆ.

‘ಒಳ್ಳೆ ಸ್ನೇಹಿತರನ್ನು ಗಳಿಸುವ ವಿಧಾನ ಮಾತ್ರವಲ್ಲ ಸಮಯ ಸಂದರ್ಭಕ್ಕೆ ಅನುಗುಣವಾಗಿ ಎಂಥ ಗೆಳೆಯರಿಂದ ದೂರವಿರಬೇಕು ಎನ್ನುವುದನ್ನು ಅರಿಯುವುದು ಅವಶ್ಯಕ’ ಎಂಬುದಕ್ಕೆ ವರ್ಧಮಾನನ ಕತೆ ಹೇಳುತ್ತಾರೆ ವಿಷ್ಣು ಶರ್ಮರು.

ಚಿತ್ರರಂಗ, ನಾಟಕರಂಗ ಹಾಗೂ ಪತ್ರಿಕಾರಂಗದಲ್ಲಿ ಅಡ್ಡಾಡುತ್ತಿರುವ ನಮ್ಮ ನಿಮ್ಮಂತಹವರು ಆತ್ಮಾವಲೋಕನ ಮಾಡಿಕೊಂಡಾಗ ಮಾತ್ರ ಯಾರು ನಕಲಿ-ಯಾರು ಅಸಲಿ ಎಂಬುದು ಅರ್ಥವಾದೀತು. ಇನ್ನಾದರೂ ನೀವು ನಿಮ್ಮ ಸ್ನೇಹಿತರ ಆಯ್ಕೆ ಬಗ್ಗೆ ಚಿಂತಿಸಬಹುದಲ್ಲವೆ?

ಕಾಡು ಪ್ರಾಣಿಗಳ ಚಕ್ರವರ್ತಿ ಸಿಂಹನ ಕೋಪಕ್ಕೆ ತುತ್ತಾಗಿ ಕರಟಕ ದಮನಕರೆಂಬ ನರಿಗಳು ಆಸ್ಥಾನದಿಂದಾಚೆ ಅಟ್ಟಲ್ಪಟ್ಟಿದ್ದಾರೆ. ಒಳ್ಳೆ ಸಮಯ ಹೊಂಚುಹಾಕಿ ದಮನಕನೆಂಬ ನರಿ ಒಂದು ದಿನ ಬಂದು ಸಿಂಹವನ್ನು ಯಾಮಾರಿಸಿ, ಮತ್ತೆ ತನ್ನ ಸ್ಥಾನಗಿಟ್ಟಿಸುವ ತಂತ್ರ ಹೂಡಿದೆ.

ನರಿ: ನಾನು ನಿಮ್ಮ ಆಜನ್ಮ ಸೇವಕ ತಮಗೊದಗಿರುವ ಸಮಸ್ಯೆ ಬಗೆಹರಿಸಲು ನಾನು ಬಂದಿರುವೆ.

ಸಿಂಹ: ನಮಗೆಂತಹ ಸಮಸ್ಯೆ… ಅಕಸ್ಮಾತ್ ಅಂಥ ಸಮಸ್ಯೆ ಇದ್ದರೂ ನಿನ್ನಂತಹ ಒಂದು ಸಣ್ಣ ಜಂತು ನಮಗೇನು ಸಹಾಯ ಮಾಡುವುದು ಸಾಧ್ಯ?

ನರಿ: ಹೀಗೆ ನಮ್ಮನ್ನು ತ್ಯಾಜ್ಯ ಮಾಡುವುದು ಸರಿಯಲ್ಲ. ನಾನು ಆಕಾರದಲ್ಲಿ ಸಣ್ಣ ಇರಬಹುದು ಬುದ್ಧಿಯಿಂದಲ್ಲ.

ರೇಷ್ಮೆ ನೇಯ್ಗೆ ಪುಟ್ಟ ಹುಳದಿಂದ
ಚಿನ್ನ ಹುಟ್ಟುವುದು ಕಲ್ಲಿನಿಂದ
ಕಮಲ ಅರಳುವುದು ಮಣ್ಣಿನಿಂದ
ಬೆಂಕಿ ಧಗಧಗಿಸುವುದು ಮರದಿಂದ
ಪ್ರತಿಭಾವಂತ ಬೆಳಗುವುದು ಮಾತಿನ ಜಾಣ್ಮೆಯಿಂದ…

ಎಂದ ಮೇಲೆ ಹುಟ್ಟಿನ ಆಕಾರ ಮತ್ತು ಅಳತೆ ಮಾತೇಕೆ ಬೇಕು?

ರಾಜಕಾರಣ-ಚಿತ್ರರಂಗದಲ್ಲಿ ಶಾಶ್ವತ ಮಿತ್ರರು – ಶಾಶ್ವತ ಶತ್ರುಗಳು ಎಂದೇನಿಲ್ಲ. ಎಲ್ಲ ರಂಗದಲ್ಲೂ ಅಷ್ಟೆ ಅನುಕೂಲಸಿಂಧುಗಳೇ ತುಂಬಿ ತುಳುಕಿರುವ ದಿನವಿದು.

‘ಅಪಕಾರಿ ಮನುಷ್ಯ’ ಈ ಸಾಲುಗಳು ಓದಿ:

ಬಾವಿಯಲಿ ಬಿದ್ದಿರುವ ಹಾವು ದಯಾರ್ನವನನ್ನು ನನ್ನನ್ನೂ ಬಚಾವ್ ಮಾಡು ಎನ್ನುತ್ತದೆ.

ದಯಾರ್ನವ: ನಿನ್ನ ನೋಡಿದರೆ ಸಾಕು ಎಲ್ಲ ಗಡಗಡ ನಡುಗುತ್ತಾರೆ. ಅಂಥ ವಿಷ ಜಂತು ನೀನು, ಹಾವಿನ ಕೈಲಿ ಕಚ್ಚಿಸಿಕೊಂಡು ಸಾಯುವುದು ನನಗಿಷ್ಟವಿಲ್ಲ.

ಹಾವು: ನಾನು ಸಾವಿನ ನಿಯೋಗಿಯಲ್ಲ. ತೀರಾ ಅನಿವಾರ್ಯವಿಲ್ಲದೆ ಹೋದರೆ ನಾನು ಯಾರನ್ನೂ ಕಚ್ಚಲ್ಲ. ನಿಂಗೆ ಮಾತ್ರ ನಾನು ತೊಂದರೆ ಮಾಡಲ್ಲ ಅಂತ ಪ್ರಮಾಣ ಮಾಡ್ತೀನಿ.

ದಯಾರ್ನವ: ಸಮಯ ಸಾಧಕರ ಥರ ನಾಟಕ ಮಾಡ್ತಿಲ್ಲ ತಾನೆ?

ಹಾವು: ಖಂಡಿತಾ ಇಲ್ಲ ಪ್ರಮಾಣವಾಗೂ ಇಲ್ಲ

ಕಾರ್ಯವಾಸಿ ಕತ್ತೆ ಕಾಲು ಕಟ್ಟು ಎನ್ನುವ ಮಂದಿ ಎಲ್ಲಿ ಇಲ್ಲ ಹೇಳಿ? ಹೀಗೆ ಹೇಳುವ ಮಂದಿ ಕೆಲಸವಾದ ನಂತರ ಹೇಗೆ ನಡೆದುಕೊಳ್ಳುತ್ತಾರೆ ಎಂದು ಹೇಗೆ ಹೇಳುವುದು.
ಅವರದೇನು ತಪ್ಪಿಲ್ಲ ಪಾಪ! ಹಸಿವು ಅನ್ನೋದು ಎಲ್ಲ ಸದ್ಗುಣಗಳನ್ನೂ ಮರೆಸತ್ತೆ. ವಿಶ್ವಾಮಿತ್ರನಂಥ ಮಹರ್ಷಿ ನಾಯಿ ಮಾಂಸ ತಿನ್ನಲಿಲ್ಲವೆ ಹಸಿವು ಹಿಂಗಿಸ್ಕೊಳ್ಳಕ್ಕೆ… ಅಂದ್ಮಲೆ ಈ ಕಲಿಯುಗದಲ್ಲಿ ಎಂತೆಂಥವರು ಇರಬಹುದು…. ಚಿಂತಿಸಬೇಕಾದವರು ನೀವು.

ಸಂದರ್ಶನ, ಸ್ನೇಹಹಸ್ತ, ಅಧಿಕಾರದ ಕುರ್ಚಿ, ಕಾಲೇಜಿನಲ್ಲಿ ಗೆಳೆಯರ ಒಡನಾಟ, ಸಿನಿ ಪತ್ರಿಕೆಗಳ ಗಾಸಿಪ್ ಕಾಲಂ, ನಿರ್ಮಾಪಕ-ನಿರ್ದೇಶಕ ನಟ-ನಟಿಯರ ನಂಟು ಮುಂತಾದವುಗಳನ್ನು ಬಲ್ಲಮಂದಿ ‘ಪಂಚತಂತ್ರ’ದಲ್ಲಿ ಕಾಗೆ-ಇಲಿ ಸಂಭಾಷಣೆ ಓದುವುದು ಅಗತ್ಯ.
* * *

ಕಾಗೆ: ಹೇ ಇಲಿಯೇ-ನಾನಿಲ್ಲಿ ಬಂದಿರುವುದು ನಿನ್ನ ಸ್ನೇಹ ಹಸ್ತ ಯಾಚಿಸಿ? ದಯಮಾಡಿ ನನಗೊಂದು ಸಂದರ್ಶನ ನೀಡು?

ಇಲಿ: ಬೇಕಿಲ್ಲ ನನಗೆ ನಿನ್ನ ಸ್ನೇಹ. ನಿನಗೆ ‘ಹಲೋ’ ಎಂದರೆ ನಿನ್ನ ಪಾಲಿಗೆ ಆಹಾರ ವಾಗುತ್ತೀನಿ ನಾನು. ನಾವಿಬ್ಬರು ಸ್ನೇಹಿತರಾಗುವುದು ಹೇಗೆ ಸಾಧ್ಯ? ಸರಿಸಮಾನ ಸ್ಕಂದರಲ್ಲಿ ಮಾತ್ರ ಗೆಳೆತನದ ನಂಟಿರುವುದು ಸಾಧ್ಯ. ಶತ್ರುವಿನ ಒಡನಾಟ ಸೆರಗಿನಲ್ಲಿ ಕೆಂಡವಿದ್ದಂತೆ.

ಕತೆ ಹೇಗೆ ಮುಂದುವರಿಯಿತು ಎನ್ನುವುದು ಬೇರೆ ಮಾತು… ಆದರೆ ಆ ಸಾಲುಗಳನ್ನು ಓದಿದಾಗ ಇದು ಇಂದಿನ ಬದುಕಿನ ನಿತ್ಯಪತ್ವ ಎನಿಸುವುದಿಲ್ಲವೆ ನಿಮಗೆ… ಆದರಿಂದಲೇ ಹೇಳುವುದು “ಶ್ರೀಮಂತಿಕೆ ಕಾರಣಕ್ಕೆ ಬರೋ ಹೊಗಳಿಕೆಗಳು ಹೊಗಳಿಕೆಗಳಲ್ಲ- ತನ್ನ ವ್ಯಕ್ತಿತ್ವ ಹಾಗೂ ಸ್ವಭಾವದಿಂದ ಬರೋ ಮೆಚ್ಚಿಗೆ ನಿಜವಾದದ್ದು” ಎಂದು. ಕೇರ್ ಆಫ್ ಫುಟ್‌ಪಾತ್ ಆಗಿದ್ದವನು ಕೋಟ್ಯಾಧೀಶ್ವರನಾಗಬಾರದು ಎಂದೇನಿಲ್ಲ. ಅದರಿಂದಾಗಿಯೇ ಆಸ್ತಿ ಅಂತಸ್ತಿಗೆ ಒಂದು ಕೊನೆ ಅಂತಿಲ್ಲ. ಯಾವಾಗ್ಲೂ ಅಷ್ಟು ಹಣ ಬೆಳೀತಾ ಹೋಗುತ್ತೆ-ಬೆಳೆಯುವ ಮಗುವಿನಂತೆ. ಅದನ್ನ ಕಾಪಾಡೋದು ಮುಖ್ಯ ಅನ್ನುವುದು ಮರೀಬಾರದಷ್ಟೆ ‘ಪಂಚತಂತ್ರ’ ಮತ್ತೆ ಮೆಲುಕು ಹಾಕಿದಾಗ ಅಂಥ ಸಾಲುಗಳನೇಕವು ಬದುಕಿಗೆ ಮಾರ್ಗಸೂಚಿ ಯುವ ಜನಾಂಗಕ್ಕೆ ಎನಿಸಿತು.

‘ಜಾಣನಾದವ ಸಣ್ಣದರ ಸಲುವಾಗಿ ದೊಡ್ಡ ಕೆಲಸಗಳನ್ನು ಕೈಬಿಡಬಾರದು

‘ನಿಯತ್ತಿಲ್ಲದ ನಾಯಿ ಏನು ಒಳ್ಳೆ ಸಾಧನೆ ಮಾಡೀತು?’

‘ಜೀರ್ಣವಾಗೋದಕ್ಕಿಂತ ಜಾಸ್ತಿ ಯಾಕೆ ತಿನ್ನಬೇಕು?’

ಇಂಥ ಅಣಿಮುತ್ತುಗಳನ್ನು ಜೀರ್ಣಿಸಿಕೊಂಡಾಗ ಬದುಕು ಸುಂದರವಾದೀತು.
*****
(೦೬-೦೯-೨೦೦೨)