೧
ಬಿಸಿ ಬಿಸಿ ಜ್ವರ ಹೊದ್ದು
ಕುದಿಯುತ್ತ ಮಲಗಿದ್ದೆ
ಹೊರಗೆ ಐಸ್ ಕ್ಯಾಂಡಿಯವನು
ಕೂಗಿಕೊಳ್ಳುತ್ತಿದ್ದ
ಈಗೆಲ್ಲ ಕಣ್ತುಂಬ ಫಕ್ತ ಚಿನ್ಹೆಗಳು ಕಪ್ಪು ಅವಕಾಶ
ಮೋಡ ಮುಚ್ಚಿದ ಗಗನ
ರೂಹು ತಾಳದೆ ಬಿದ್ದ ಬೆನಕನ ಮಣ್ಣು
ಟರರ್ ಸ್ಕೂಟರಿಳಿದ ಡಾಕ್ಟರು
ಮುಟ್ಟಿ ನಕ್ಕು ನೋವು ಚುಚ್ಚಿ
ಚಾ ಕುಡಿದು ಹೊರ
ಹಜಾರದಲ್ಲಿ ಊರಿನ ಪೊಕಳೆ ಕೊಚ್ಚಿ
ಹೊರಟರು….
ತಿಳಿಯುವದೆಲ್ಲ ನನಗೇ – ಜ್ವರಕ್ಕಲ್ಲ
ಚೆಪ್ಪೆಗಂಜಿ ಅಪ್ಪೆಮಿಡಿ ತಿಕ್ಕಿದ ನಾಲಿಗೆಗೆ
ಸ್ವಾಸ್ಥ್ಯದ ಶಬ್ದಗಳು ರುಚಿಸಲಿಲ್ಲ
ಅರೆ ತೆರೆ ನಿದ್ರೆ ಮಬ್ಬು ಮಂಪರದಲ್ಲಿ
ಹಾಯುತ್ತಿದ್ದವು ಹಲವು ಆಕಾರ
ಚಡ್ಡಿ ಸೀರೆ ಧೋತರ
-ಒಂದೊಂದಕ್ಕೂ ಒಂದು ರಕ್ತಮಾಂಸದ ಕಥೆ
ಕಲ್ಲಂಗಡಿ ಹಲಸು ಕಳಲೆ ಏಡಿ
ತೂರೆ ಬಂಗಡೆ – ಗಳೆಲ್ಲ ಅಪಥ್ಯವಂತೆ
ಮುಚ್ಚಿದರೂ ಕಾಣುತ್ತವೆ ಕಣ್ಣು ಮುಚ್ಚದಿದ್ದರೂ
ಸಂಸ್ಥಾ ಕಾಂಗ್ರೆಸ್ಸು ಬಂತಂತೆ
ಪೇಟೆಯಲ್ಲಿ ಸೀತಾರಾಮ ಸೀಯಾಳದಂಗಡಿ ತೆರೆದನಂತೆ
ಹಡಗೆಲ್ಲೋ ಮುಳುಗಿಲ್ಲಿ ನಾಟು ತೇಲಿ ಬಂತಂತೆ
ದರ್‍ಜಿ ಕಿಟ್ಟನ ಮಷಿನ್ನು ಕಳುವಾಯಿತಂತೆ
ನನ್ನ ಸಹಪಾಠಿ ಕಲ್ಯಾಣಿಯ ಕಲ್ಯಾಣವಂತೆ….
ಮತ್ತೆ ಮತ್ತೆ ಪಾರಜ ತಿವಿಯುವ ಜ್ವರ
ದುಃಖ ಭಯ ಭೀತ ಕಾತರ ಬೆರೆತ ಒಂಟಿ ಉದ್ಗಾರ
ಪಕ್ಕದಲ್ಲೇ ಸೂರ್‍ಯ
ಥಳಥಳಿಸುವ ಉಪ್ಪು ಕಡಲು
ಎಲ್ಲವೂ ಫೇರಿ ಹೊರಟು
ನನ್ನ ಮಂಚದ ಸುತ್ತ…. ದಿಂಬಿನ ಸುತ್ತ…. ತಲೆಯ ಸುತ್ತ…
ತಣ್ಣೀರು ಪಟ್ಟಿಯ ಸುತ್ತ… ಸುತ್ತುತ್ತ
ಅಯ್ಯೋ ನಿತ್ರಾಣ ಬಳಲುತ್ತ
ರಾತ್ರಿ ಉರಿಯಬೇಕಿದ್ದ ದೀಪಗಳು
ಹಗಲೇ ಉರಿದು ಎಣ್ಣೆ ತೀರುತ್ತ
ಊಹೆಯೂ ಸತ್ಯ
ಅದೃಶ್ಯವೂ ದೃಶ್ಯ
ಬಾಟಲಿಯಲ್ಲಿಯ ಕೆಂಪು ಸಿಹಿ ಒಗರು ಹುಳಿ ಮಿಕ್ಸಚರ್
ಕಮ್ಮಿಯಾಗುತ್ತ ಬಂತು
ಬಚ್ಚಲಲ್ಲಿ ಬತ್ತಲಾಗದೆ ದಿನಗಳಾಯಿತು
ಉತ್ಕಟ ಮನೋನಾಲಿಗೆ ಎದ್ದ ಭೂತಗನ್ನಡಿಯಲ್ಲಿ…
ಮನೆ-ಅದಕ್ಕಂಟಿ ಅಂಗಳ ಅದಕ್ಕಂಟಿ ಬೀದಿ
ಅದಕ್ಕಂಟಿ ಊರು-ಅದಕ್ಕಂಟಿ ಜೀವ…
ಅದಕ್ಕಂಟಿ ಕಾಲ…
ಲಬ್‌ಡಬ್ ಕ್ಷೀಣ ಹೃದಯದ ಬಡಿತ
ಕೇಳುತ್ತ ಕೇಳುತ್ತ ಅದೇ ನಾನಾದಂತೆ
ಚಪ್ಪಲಿ ಸವೆದಷ್ಟೂ ಮಣ್ಣೂ ಸವೆಯಲೇಬೇಕಷ್ಟೆ!
೨
ಒಜ್ಜೆಯಾಗಿ ಇಳಿದಿದ್ದ ನಿಮಿಷಗಳೆಲ್ಲ
ಹಗುರಾಗಿ ಮೇಲೇರುತ್ತಿದ್ದಂತೆ
ಧಳ್ ಧಳಾ ಬೆವರು ಸ್ನಾನ
ಹಗುರು ನೆಮ್ಮದಿ ಹೊದ್ದ ಅಶಕ್ತ ಜೀವ
ಡಾಕ್ಟರು ಅಡ್ಡಿಲ್ಲ ಅಂದರು
ಹಗಲು ಹನ್ನೆರಡಕ್ಕೆ ಬಿಸಿ ಬಿಸಿ ನೀರು
ನೀಲಗಿರಿ ತೈಲ ಅಮ್ಮನಿಂದ ಮಿಂದುಜ್ಜಿಸಿಕೊಂಡೆ
ಹೊರ ಬಂದೆ….
ಅದೇ ಅಂಗಳ
ಅದೇ ಕೆಂಪು ದಾಸಾಳ
ಎದುರುಮನೆ ಕೊಟ್ಟಿಗೆ
ಸಾರಿಸಿದ ಓಣಿ
ಗಿಣಿ ಗಿಣಿ ಪೇಪರು ಸೈಕಲ್ಲು
ಅದೇ ದೀರ್‍ಘ ಸತತ ಹಿನ್ನೆಲೆ ಸಂಗೀತ
ಜಾಗಟೆ ಶಂಖ ಮಣ್ಣಿನ ಲಾರಿ ಬಾವಿ ಗಡಗಡೆ
ಊರು ಬೀದಿ ತಲೆ
ತಲೆಗೊಂದು ಒಡಲು
ನೊರೆ ನೊರೆ ಏರಿಳಿವ ಕಡಲು
*****
