ಗಾಂಧೀನಗರಿಗರಿಗೊಂದು ಆತ್ಮೀಯ ಪತ್ರ
‘ಜೀನಾ ಯಹಾಂ ಮರಾ ಯಹಾ’ ಎಂದು ಚಿತ್ರರಂಗದಲ್ಲಿ ನಾನಾ ಸರ್ಕಸ್ ಮಾಡುತ್ತಿರುವ ನಿರ್ಮಾಪಕ ನಿರ್ದೆಶಕರೆ, ನಟ-ನಟಿಯರೆ, ವಿತರಕ ಮಿತ್ರರೇ, ೨೦೦೧ಕ್ಕೆ ಮುಪ್ಪು ಅಡರಿ ೨೦೦೨ ಜಗಜಗಿಸಿ ಸಂಭ್ರಮಿಸಿ-ನಳನಳಿಸಿ ಪ್ರತ್ಯಕ್ಷವಾಗಲು ಉಳಿದಿರುವುದು ಕೇವಲ ೮೨ ಗಂಟೆಗೆ ಮಾತ್ರ.
ಅಂದು ಹಳೆಬಾಗಿಲಿಗೆ ಹೊಸ ತೋರಣ ಕಟ್ಟಲೂ ಬಿಡುವಿಲ್ಲದೆ ರೀಮೇಕ್ ಚಿತ್ರ ಸುತ್ತುವುದರಲ್ಲಿ ನೀವೆಲ್ಲ ಮುಳುಗಿಹೋಗಿದ್ದೀರಿ ಚಿಂತೆಯಿಲ್ಲ.
ಹೀಗೆನ್ನುತ್ತಿರುವ ನನ್ನನ್ನು ನೀವು ಪ್ರತಿಯೊಬ್ಬರು ಬಲ್ಲಿರಿ. ನೀವು ತೀರ ಸಣ್ಣವರಾಗಿದ್ದಾಗ ನನ್ನನ್ನು ‘ಚೆಂಡು’ ಎಂದು ಭಾವಿಸಿ ಆಡಿದ್ದೀರಿ. ಭ್ರಷ್ಟ ಅಧಿಕಾರಿಗಳು ಲಂಚ ತಿನ್ನುವಂತೆ-ನನ್ನನ್ನು ಬಕಬಕ ತಿಂದಿದ್ದೀರಿ. ಈ ಮಾತು ಹೇಳಿದ ನಾನು ಎದುರು ಸಿಕ್ಕರೆ ಕಪಾಲಕ್ಕೆ ಬಾರಿಸುತ್ತೀರಿ ಎಂದೂ ನನಗೆ ಗೊತ್ತು. ಆದರೆ, ನಾನು ಅಷ್ಟು ಸುಲಭವಾಗಿ ನಿಮ್ಮ ಕೈಗೆ ದಕ್ಕುವವನಲ್ಲ.
ಹೇಳಿ ನಾನು ಯಾರಿರಬಹುದು? ನನಗೆ ರೇಷನ್ ಕಾರ್ಡಿಲ್ಲ ನಾನು ಮತದಾರನಲ್ಲ ಯಾವ ಪಾರ್ಟಿಗೂ ವೋಟ್ ಹಾಕಿದವನೂ ಅಲ್ಲ. ಇನ್ನೂ ಹೊಳೆಯಲಿಲ್ಲವೇ? ನಾನು ನಿಮಗೆ ಪಲ್ಯವಾಗಿದ್ದೇನೆ, ಗೊಜ್ಜಾಗಿದ್ದೇನೆ. ಹುಳಿಯಾಗಿದ್ದೇನೆ, ನೀವು ತೀರ್ಥಂಕರರಾದಾಗ ನಾನು ನಿಮ್ಮ ಸಂಗಾತಿಯಾಗಿದ್ದೇನೆ. ಪರೆ ಕಳಚಿದಷ್ಟು ಫ್ರೆಷ್ ಆಗುತ್ತಾ, ರಾಜಕಾರಣಿಯಂತೆ ಕ್ಷಣಕ್ಷಣಕ್ಕೂ ಬಣ್ಣ ಬದಲಾಯಿಸುತ್ತಾ, ಶ್ರೀಸಾಮಾನ್ಯನ ಕಣ್ಣಿನಲ್ಲಿ ನೀರು ತರಿಸುತ್ತಿದ್ದರೂ ಎಲ್ಲರಿಗೂ ಪ್ರಿಯವಾಗಿರುವ ವಸ್ತು ನಾನು.
ಫೋನ್ ನಂಬರ್, ಡೋರ್ ನಂಬರ್ ಕೇಳಲೇ ಬೇಡಿ. ಎಲ್ಲ ಮನೆ ಫೋನ್ ನಂಬರ್‌ಗಳೂ ನನ್ವೆ. ನನ್ನನ್ನು ಅರೆಸ್ಟ್ ಮಾಡಲು ಟಾಡಾ, ಫೋಟೋ ಕಾಯಿದೆಗಳನ್ನು ಬೆನ್ನಟ್ಟಲೇಬೇಕಿಲ್ಲ.
ಹೌದು! ನಾನು ಈರುಳ್ಳಿ, ಹಿಂದೆ ಮಾಜಿ ಸಚಿವ ನಾಣಯ್ಯನವರು ಫಿಲಂ ಚೇಂಬರ್ಸ್ ಸುವರ್ಣಮಹೋತ್ಸವದಲ್ಲಿ ಎಲ್ಲೋ ತೆಪ್ಪಗಿದ್ದ ನನ್ನನ್ನು ಎಳೆತಂದು ಈರುಳ್ಳಿ-ಬೆಳ್ಳುಳ್ಳಿ ಮಾರುವವರು ಕೆಲಸಕ್ಕೆ ಬಾರದ ಕಾಲಕಸ ಎಂಬುದನ್ನು ನಾನಿನ್ನು ಮರೆತಿಲ್ಲ. ಇಂಥ ಮಾತುಗಳನ್ನು ಅಂದಿನಿಂದ ಇಂದಿನವರೆಗೂ ಬಹುಮಂದಿ ಮಾತನಾಡುತ್ತಾ ಈರುಳ್ಳಿ ಹೆಚ್ಚುವಾಗ ಬೇರೆಯವರ ಕಣ್ಣಲ್ಲಿ ನೀರು ತರಿಸುತ್ತಿದ್ದ ನನ್ನ ಕಣ್ಣಿನಲ್ಲೇ ನೀರು ಸುರಿವಂತೆ ಮಾಡುತ್ತಿದ್ದಾರೆ. ನನ್ನ ಪಾಲಿಗೆ ನಿಜಕ್ಕೂ ಇದೊಂದು ಮಾಯದಗಾಯ.
೨೦೦೧ರಲ್ಲಿ ಚಿತ್ರ ನಿರ್ಮಿಸಲು ಹೊರಟವರೆಲ್ಲ ಮಹಾ ಶ್ರೀಮಂತರಾಗಿ ಜನ್ಮ ತಾಳಿದವರೆ ಎಂಬುದನ್ನು ಚೆಕ್ ಮಾಡಿ ನೋಡಿ. ಕತ್ತಿ-ಚಾಕು-ಚೂರಿ ಪ್ರವೀಣರು ಅಲ್ಲಿದ್ದಾರೆ. ಗಾಂಧೀ ನಗರದಲ್ಲಿ ಕಾಫಿ ಸಪ್ಲೆ ಮಾಡುತ್ತಿದ್ದವರು ಕೋಟಿ ಕೋಟಿ ವೆಚ್ಚದ ಚಿತ್ರ ತೆಗೆಯಲು ಮುಂದಾಗಿದ್ದಾರೆ. ಅಂಡರ್‌ವರ್ಲ್ಡ್‌ನಲ್ಲಿ ಮೊದಲಿನವರೆನಿಸಿದವರು ಸಾಧು-ಸಂತರಂತೆ ಮುಖವಾಡ ಧರಿಸಿ ಸಿನಿದಂಧೆಗಿಳಿದಿದ್ದಾರೆ. ಪೇನಾ ಹಿಡಿದು ಪ್ರಸಿದ್ಧರಾದವರು ಸಿನಿರಂಗಕ್ಕೆ ಡೈವ್ ಹೊಡೆದಿದ್ದಾರೆ. ಪತ್ರಕರ್ತ ಮಿತ್ರರು ನೋಡೇಬಿಡೋಣ ಒಂದು ಕೈ ಎಂದು ನುಗ್ಗಿದ್ದಾರೆ. ಕಲೆಗೆ ಅವರಿವರೆಂಬ ಭೇದವಿಲ್ಲ. ಅದು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಅವರ ಶ್ರದ್ಧೆ, ಶಿಸ್ತು ನಿಯತ್ತು ಗಮನಿಸಿ ಕೆಲವರನ್ನು ಕೈಹಿಡಿದು ಎತ್ತುತ್ತದೆ, ಹಲವರನ್ನು ಎಂದೆಂದೂ ತಲೆ ಎತ್ತದಂತೆ ಮುಳುಗಿಸುತ್ತದೆ, ಮತ್ತೆ ಹಲವರ ಮನೆ-ಮಠ ಮಾರಿಸುತ್ತದೆ, ಇಂತಿಂತಹವರು ಮಾತ್ರ ಚಿತ್ರ ಮಾಡಬೇಕೆಂದು ಅದು ಎಂದೂ-ಎಲ್ಲೂ ಹೇಳಿಲ್ಲ.
ಯೋಚಿಸಿ ನೋಡಿ
-ಹೆಂಡದ ಹಣದಿಂದ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ ಬಂದಾಗ ಅದರಲ್ಲಿ ಮಲ್ಲಿಗೆಯ ಕಂಪಿತ್ತೇ ಹೊರತು-ಹೆಂಡದ ವಾಸನೆ ಇರಲಿಲ್ಲ ಅಲ್ಲವೇ?
ಬಸ್ ಕಂಡಕ್ಟರ್ ಆಗಿದ್ದ ರಜನೀಕಾಂತ್ ಇಂದು ತಮಿಳು ಚಿತ್ರರಂಗದ ಸಾಮ್ರಾಟ. ಒಂದು ಕಾಲಕ್ಕೆ ಆತ ‘ರೈಟ್’ ಎಂದರೆ ಬಿಟಿಎಸ್ ಬಸ್ ಮಾತ್ರ ಚಲಿಸುತ್ತಿತ್ತು ಇಂದು ಆತ ‘ರೈಟ್’ ಎಂದರೆ ಇಡೀ ತಮಿಳು ಚಿತ್ರರಂಗದ ನಿರ್ಮಾಪಕರೆಲ್ಲ ಕೋಟಿ ಕೋಟಿ ವೆಚ್ಚಿಸಿ ‘ಲೆಫ್ಟ್‌ರೈಟ್’ ಹೇಳಿ ಮುನ್ನಡೆಯಲು ಅನುವಾಗಿ ನಿಂತಿದ್ದಾರೆ ತುದಿಗಾಲಿನಲ್ಲಿ.
ಇಂದು ಗೂಂಡಾಗಳು, ಕೊಲೆಗಾರರು, ಜನತೆಗೆ ಪಂಗನಾಮ ಹಾಕಿ ಬಚಾಯಿಸಿ ಕೊಂಡವರು ಮಂತ್ರಿಗಳಾಗಬಹುದಂತೆ ಹಾಗೆ ಈರುಳ್ಳಿ ಮಾರುವವ, ಎಣ್ಣೆ ಅಂಗಡಿಯವ, ಬೊಂಡಾ ಮಾರುವವ, ಈರುಳ್ಳಿ ವ್ಯಾಪಾರಿ ಯಾಕೆ ಚಲನಚಿತ್ರ ನಿರ್ಮಾಪಕ- ನಿರ್ದೇಶಕರಾಗಬಾರದು?
ಟಿವಿಯಲ್ಲಿ ಮಾಡುವವರು ಸಿನಿಮಾದಲ್ಲಿ ಮಾಡಬಾರದು; ಸಿನಿಮಾದಲ್ಲಿ ಮಾಡುವವರು ಟಿವಿಯಲ್ಲಿ ಅಭಿನಯಿಸಬಾರದು ಎಂದು ಯಾರೇ ಹೇಳಲಿ ಆ ಮಾತಿಗೆ ಅರ್ಥವಿದೆಯೇ?
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನೇ ಬಂಡವಾಳ ಮಾಡಿಕೊಂಡು ನಿರ್ಮಾಪಕ, ನಿರ್ದೇಶಕ, ಕಲಾವಿದರ ಸಂಘ ಮಾಡಿಕೊಂಡು ಪರಸ್ಪರ ದ್ವೇಷಾಸೂಯೆ ಹಾಗೂ ಸ್ವಾರ್ಥಸಾಧನೆಯಿಂದ ಇನ್ನೊಬ್ಬನನ್ನು ತುಳಿಯುವುದೇ ಗುರಿ ಮಾಡಿಕೊಂಡು, ಕಾಳಿಂಗ ಮರ್ದನ ಪ್ರಯೋಗ ಸಿನಿರಂಗದಲ್ಲಿ ಮಾಡಹೊರಟರೆ ಅದು ಯಾವ ನ್ಯಾಯ?
ಒಮ್ಮೆ ಹಿಂತಿರುಗಿ ನೋಡಿ, ಕಣಗಾಲ್ ಪುಟ್ಟನ ‘ಕನ್ನಡ ಚಿತ್ರರಂಗದ ಆಸ್ತಿ ಎಂದು ಹಾಡಿ ಹೊಗಳುವ ನಟ-ನಟಿ ನಿರ್ದೇಶಕರಿಗೇನೂ ಕಡಿಮೆ ಇಲ್ಲ. ಆರಂಭಕ್ಕೆ ಅವರು ಪೋಟೋಗ್ರಾಫರ್ ಆಗಿ ತೆಗೆದದ್ದು ಹೆಣಗಳ ಫೋಟೋಗಳನ್ನು. ಆ ಮಹನೀಯ ಕಡೆಗೆ ಕಗ್ಗಲ್ಲನ್ನು ಸುಂದರ ಕಲಾ ಶಿಲ್ಪ ಕಡೆವ ಮಹಾಮಾಂತ್ರಿಕನಾದ.
೨೦೦೨ರ ಸಂಭ್ರಮದಂದು ಈ ಎಲ್ಲ ಅಂಶ ನೆನಪಿಸಲೆಂದೇ ಈರುಳ್ಳಿ ಮೋಡಿಯಿಂದ ಉರುಳಿ ಬಂದೆ. ನಾನು ಈ ಹೊಸ ವರುಷ ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಮುಖಗಳನ್ನು ತೆರೆಗೆ ಆಹ್ವಾನಿಸಿದೆ. ಕನ್ನಡ ಚಿತ್ರರಸಿಕರು ಹೊಸ ಪ್ರತಿಭೆಗಳಿಗೆ ಪ್ರೀತಿಯ ಸ್ವಾಗತ ಕೋರಿದ್ದಾರೆ. ರೀಮೇಕ್‌ಗೆ ಮಾರ್ಚಿಯಿಂದ ಯಾವುದೇ ಸರ್ಕಾರಿ ಸೌಲಭ್ಯವಿರುವುದಿಲ್ಲ ಎಂಬ ಕಟ್ಟೆಚ್ಚರಿಕೆ ನೀಡಿ ಆಗಿದೆ.
“ನಿಮ್ಮ ಸರ್ಕಾರದ ಸಹಾಯ ಬೇಕಿಲ್ಲ-ಅವಾರ್ಡ್ ಬೇಕಿಲ್ಲ-ಟ್ಯಾಕ್ಸ್ ಫ್ರೀ ಬೇಕಿಲ್ಲ ಎನ್ನುವವರು ನಾವು ಎಲ್ಲಿಂದಲೋ ಹಣ ತಂದು ಸುರಿಯುತ್ತೇವೆ” ಎನ್ನುವವರು ಇಲ್ಲೂ ಇದ್ದಾರೆ. ಪರಭಾಷೆಯಿಂದ ಬರುವ ನಿರ್ಮಾಪಕ, ನಿರ್ದೇಶಕರೂ, ಫೈನಾನ್ಸ್‌ರ್ಗಳೂ ಇದ್ದಾರೆ.
ಈ ಪ್ರಜಾಪ್ರಭುತ್ವ ಯುಗದಲ್ಲಿ ಯಾರು-ಯಾರನ್ನು ತಡೆಯಬಲ್ಲರು. ವಾಕ್ ಸ್ವಾತಂತ್ರ್ಯಕ್ಕೆ ಕೊನೆ ಮೊದಲೆಲ್ಲಿ?
ಬೀಸುವ ಗಾಳಿಯ ತಡೆಯುವರಾರು? ಹರಿಯುವ ನೀರಿಗೆ ತಡೆ ಎಲ್ಲಿ? ಬೆಳಕನು ಬಂಧಿಸಿ ಹಿಡಿಯುವರಾರು? ಈ ಹೊಸ ವರುಷದಲ್ಲಿ ಅವರವರ ಅಭಿರುಚಿಗೆ ತಕ್ಕಂತ ಚಿತ್ರ ಅವರವರು ಮಾಡುತ್ತಾರೆ. “ಅಂಥ ವೇಳೆ ಸದಭಿರುಚಿ, ಸದ್ವರ್ತನೆಗೆ ಮಹತ್ವ ದೊರೆತು ಕತ್ತಿ-ಚಾಕು ಸಂಸ್ಕೃತಿ ದೂರವಾಗಿ ಪ್ರೀತಿ, ಪ್ರೇಮ, ವಾತ್ಸಲ್ಯದ ಕಂಪು ಈ ನಾಡಿನಲ್ಲಿ ಪಸರಿಸಲಿ” ಎಂಬ ಶುಭ ಸಂದೇಶ ಕೋರಲು ಬಂದ ನನ್ನನ್ನು ಹೊಟೇಲಿನ ಭಟ್ಟ ಬಿಗಿಮುಷ್ಟಿಯಲ್ಲಿ ಹಿಡಿದು ಮಣೆಯ ಮೇಲಿಟ್ಟ ಈರುಳ್ಳಿ ಚಕಚಕ ಕತ್ತರಿಸುತ್ತಿರುವ ಚಾಕುವಿನಿಂದ, ಆತನ ಕಣ್ಣಲ್ಲಿ ಸಹಜವಾಗಿ ನೀರಿದೆ. ನನ್ನ ಕಣ್ಣಲ್ಲೂ ನೀರು ಬರುತ್ತಿದೆ. ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕರನ್ನು ಕಂಡು ನನ್ನ ಅಂತರಾಳದ ನೋವನ್ನು ತೋಡಿಕೊಳ್ಳಲಾಗಲಿಲ್ಲ ಎಂದು. ಹಾಗೆಂದುಕೊಳ್ಳುತ್ತಿರುವಾಗಲೇ ಒಂದು ಸಂತಸದ ಸುದ್ದಿ ಬಂದಿದೆ. ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಚಲನಚಿತ್ರೋದ್ಯಮಿಗಳೆಲ್ಲ ಒಂದು ಭರ್ಜರಿ ನ್ಯೂ ಇಯರ್ ಪಾರ್ಟಿ ಏರ್ಪಡಿಸಿದ್ದಾರಂತೆ. ಪತ್ರಕರ್ತರೂ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರಲಿರುವರಂತೆ. ಚಿತ್ರೋದ್ಯಮಿಗಳ ಬಾಯಿಗೆ ನಾನು ಆಹಾರವಾಗುತ್ತೇನಲ್ಲ ಎಂಬುದೊಂದೇ ನನಗೆ ಸಂತೋಷ.
ನನ್ನ ರುಚಿ ನೋಡಿದ ನಂತರವಾದರೂ ನನ್ನ ಬವಣೆ ಕುರಿತು ಚಿತ್ರರಂಗದ ಮಂದಿ ಕೆಲದಿನವಾದರೂ ಅಂತರಂಗದ ಸಭೆಗಳಲ್ಲಿ ಗುಂಡು ಪಾರ್ಟಿಗಳಲ್ಲಿ ನನ್ ಚಿಂತನೆಗಳನ್ನು ಮನಬಿಚ್ಚಿ ಮಾತನಾಡಿಯಾರೆಂದು ಆಶಿಸುವೆ.
೨೦೦೨ ಎಲ್ಲರಿಗೂ ಒಳಿತಾಗಲಿ ಎಂದಾಶಿಸುವೆ.
ನ್ಯೂ ಇಯರ್ ಪಾರ್ಟಿ ಅಗೋ ಆರಂಭ.. ತಿನ್ನಿ ತಿನ್ನಿ… ಚೆನ್ನಾಗಿ ತಿನ್ನಿ… ಆದರೆ ತಿಂದ ಮನೆಗೆ ಮಾತ್ರ ಯಾರೂ ಎಂದೂ ಎರಡು ಬಗೆಯಬೇಡಿ.. ವೃತ್ತಿನಿಷ್ಠೆ ಮರೆಯದಿರಿ. ನಿಮ್ಮ ಒಲವಿನ ಈರುಳ್ಳಿ.
*****
(೦೪-೧೨-೨೦೦೨)
