ಗುರುತು

ಅಲ್ಲಿ ರಸ್ತೆಯ ಮೇಲೆ ಸಿಕ್ಕಾಗ ಹಲೋ ಎಂದೆವು
ಅಲ್ಲೇ ನಾವು ನಂತರ ನಕ್ಕೆವಿರಬೇಕು
ಈಗ ಮರೆಯುತ್ತಿದ್ದೇವೆ
ಭಾವಗಳನ್ನು ಕ್ಲಿಷ್ಟ ಸ್ವಭಾವಗಳನ್ನು ಸುಪ್ತ ಅಭಾವಗಳನ್ನು
ತಿರುವುಗಳಲ್ಲಿ ನೀವೆಲ್ಲ ಸಿಗರೇಟು ಹಚ್ಚಿದ್ದು
ನನಗೆ ಬಲವಂತ ಮಾಡಿದ್ದು ನಾನು ಚಟ
ಇಲ್ಲದ ತಪ್ಪಿಗೆ ದಾಕ್ಷಿಣ್ಯದ ದಕ್ಷಿಣೆ ಎತ್ತಿ
ಕ್ಯಾನ್ಸರ್ ಪುರಾಣ ಬಿಚ್ಚಿದ್ದು
ದೇಶಾವರಿ ನಕ್ಕಿದ್ದು
ಈಗ ಮರೆಯುತ್ತಿದ್ದೇವೆ-ಅಲ್ಲ?

ಆ ಅಂಗಡಿಯ ದೊಗಳೆ ಬಾಗಿಲುಗಳಲ್ಲಿ ನನ್ನ
ಕೂರಿಸಿದಿರಿ ತಂಟೆಗೆ ಎರಡು ಬಾರಿಸಿದಿರಿ ಬೆಪ್ಪು
ತಕ್ಕಡಿಯಲ್ಲಿಟ್ಟು ತೂಗಿ ಹಣೆಬರಹ ಬೈದಿರಿ
ಕೀರ್‍ದಿ ಕಡ್ತ ತೆರೆದು
ಜನ್ಮಾಂತರಗಳ ಲೆಕ್ಕ ವ್ಯಥೆ ವ್ಯವಕಲನ
ಬೇರೀಜು ತೇಪೆ ಹಾಕಿದಿರಿ-ಹೌದಲ್ಲ-
ನಂತರ ಕಮಟು ಬಿಳಿ ದಿಂಬಿಗೊರಗಿ
ಟಾರು ಕುದಿಯುವ ಬಿಸಿಲ ಝಳ ನಿಟ್ಟಿಸಿದ್ದು
ಚಿಂದಿವಸ್ತ್ರದ ಕಾಗೆ ಗೊಂಬೆ ನೇತಾಡಿದ್ದು
ಗುದಾಮಿನಲ್ಲಿ ಹುಳಬಿದ್ದು ಚೀರಿದ್ದು
ಇದೇ ನಾವು ನೀವು
ಈಗ ಮರೆಯುತ್ತಿದ್ದೇವೆ-ಅಲ್ಲ?

ಮತ್ತೆ ಹೊರಬಿದ್ದು ಆ ಬಂಗಾರಿಯ ಹಿತ್ತಲಲ್ಲಿ ಹಾಡೇ
ಹಗಲು ಕತ್ತಲು ಬಯಸಿದಿರಿ ಬಯಸಿ ಚಿಂವ್ ಚಿಂವ್
ಗುಬ್ಬಚ್ಚಿ ಮುಟ್ಟಿ ಪಾಪ ಬಹಿಷ್ಕಾರ ಹಾಕಿಸಿದಿರಿ
ನನ್ನ ಹಿಂದೆ ಹಿಂದೇ ಬಿಟ್ಟು ಅರಿವೇ ಇಲ್ಲದ ಸೋಗು ನಲಿದಿರಿ
ವ್ಯವಹಾರ ಸಂಬಳ ಹೆಣ್ಣು
ರಥೋತ್ಸವ ಹಾಲಿನ ಬಿಲ್ಲು ಕಾರ್‍ತಿಕ ಕಾಮ ಕೇಳಿ
ದರೂ ಕೇಳದ ದಿನರಾತ್ರಿಗಳಿಗೂ ಹೊರತಾದ ಆ
ಗತಿಗೆ ಬಿಚ್ಚಿದಿರಿ ಕೊಂಚ ಬೆಚ್ಚಿದಿರಿ ಕೂಡ
ನನ್ನನ್ನೂ ತೊಡಗಿಸಿಕೊಂಡಿರಿ-ಆಮೇಲೆ?

ಧೋಧೋ ಸಮುದ್ರ ಸುಯ್ಲುಕ್ಕಿ
ಪಿರಿ ಪಿರಿ ಸಾಹಿತ್ಯ ಚಲ್ಲಾಪಿಲ್ಲಿ ಚದುರಿ
ಕೊಚ್ಚೇ ಹೋಗಿದ್ದು ನಾವತ್ತದ್ದು ಅದನ್ನೇ
ನಗು ಅಂತ ಕರೆದದ್ದು ದತ್ತಕ ತಕೊಂಡದ್ದು
ನೃತ್ಯ ನಿಂತರೂ ರಂಗದ ಮೇಲೆ ನೆರಳುಗಳು ಕುಣಿದದ್ದು
ಸುಖಸಂತೋಷದಿಂದಿದ್ದದ್ದು
ನಾವೇ
ಹೌದು ನಾವೇ ಈಗ ಮರೆಯುತ್ತಿದ್ದೇವೆ-ಅಲ್ಲ?

ಇದೇನಾ ವರ್‍ತಮಾನ? ಇಷ್ಟೇನಾ ನಿಮ್ಮರ್‍ಥ ತೀರ್‍ಮಾನ?
ಅರೆ ಕನ್ನಡಕ ಮಡಿಸಿಟ್ಟು ಹೊರಟೇ ಬಿಟ್ಟಿರಲ್ಲ
ಪರಸ್ಪರ ಗುರುತೇ ಕಳಚಿಬಿಟ್ಟಿರಲ್ಲ
ಹೌದಲ್ಲ, ಅಂದ ಹಾಗೆ
ಇಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಸತ್ತಿದ್ದು
ನಮ್ಮ ನಾವೇ ಕಳೆದಿದ್ದು
ನಮಗೆಲ್ಲಿ ಗೊತ್ತಾದೀತು?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ