೧
ನಗರ ಮಧ್ಯಕೆ ನುಗ್ಗಿ ದೂರದ ದಿಗಂತಗಳ
ಕನಸು ಕಾಣುತ್ತಿರುವ ಟಾರು ಬೀದಿ-
ಸಂತೆ ಮೂಟೆಯ ಹೊತ್ತ ಬಾಡಿಗೆಯ ಚಕ್ಕಡಿಗೆ
ಸನಿಹದಲ್ಲಿಯೆ ಬೇರೆ ಹೊರಳು ಹಾದಿ.
ಓಣಿ ಓಣಿಯ ಸುತ್ತಿ ಸಂದಿ-ಗೊಂದಿಗೆ ಹಾಯ್ದು
ಇದ್ದಲ್ಲಿಯೇ ಇಹುದು ಬೀದಿನಾಯಿ-
ಗಂಟೆ ಗಂಟೆಯ ನಡುವೆ ಕಾಲ ಚಡಪಡಿಸಿಹುದು
ಇಲ್ಲಿಗೂ ಬಂದೆಯ ನೀನು, ಬೊಂಬಾಯಿ!
ಈ ಸಮಾಂತರ ಹಳಿಯ ಮೇಲೆ ಓಡುವ ರೈಲು
ವಕ್ರರೇಖೆಗೆ ತಿರುಗಿ ನೂರು ಮೈಲು
ಎಲ್ಲ ರಾಜ್ಯದ ಗಡಿಯ ತುಳಿದು ದಾಟುತ್ತಿಹುದು
ಕೆಂಪು ಹಸುರಿನ ದೀಪ ಎರಡು ಕೈಲು!
ಕಣಿವೆ ಬೆಟ್ಟದ ಅಂಕುಡೊಂಕಿನಲಿ ಒಡಮುರಿದು
ಕಡಲ ಹುಡುಕುವ ನದಿಗು ಬೇರೆ ದಾಹ:
ಮಳೆಗಾಲ ಬೇಸಿಗೆಯ ಹರೆಯ ಮುಪ್ಪಿನ ತಿರುವು
ತಳದ ಒರತೆಗೆ ನೂರು ಸೆಲೆಯ ಸ್ನೇಹ.
ಏಳು ಹೊರಸಿನ ನುಲಿಯ ಬಿಟ್ಟರೂ ತಳ ಮುಟ್ಟಿ
ಬರುವ ಭರವಸೆಯಿಲ್ಲ, ಬೋಳು ಬಾವಿ;
ಪಾವಟಿಗೆ ತುಂಬ ಹಾವಸೆಗಟ್ಟಿದಿಳಿಜಾರು
ಎಷ್ಟು ಕುಡಿದರು ಆರದಂಥ ಬಾಯಿ!
೨
ಮರಿಗೆ ಮರಿಯಿಕ್ಕಿರುವ ಶೂನ್ಯ ಮಂಡಲ, ಕೆಳಗೆ
ತಿರುಗೆ ತಿರುಗುತ್ತಿರುವ ಪೃಥ್ವಿಗೋಲ,
ಜಾಳಿಗೆಯ ಬಿಚ್ಚಿರುವ ಬುಗುರಿಗಿನ್ನೂ ನಿದ್ದೆ
ದೀರ್‍ಘ ವರ್‍ತುಲದಲ್ಲಿ ಸ್ವಪ್ನಲೋಲ.
ತೆರೆದ ಕಣ್ಣಿನ ತಾರೆ, ತೇಲು ನೌಕೆಯ ಮೋಡ
ಮಳೆಯಿಳಿದ ಸಲಕೊಮ್ಮೆ ಹೊಸತು ನೀರು.
ನಿಂತಲ್ಲಿಯೇ ನೀಲಿಗಟ್ಟಿರುವ ಆಕಾಶ-
ನೆಲದ ಬಸಿರೊಳು ಸದಾ ಹಚ್ಚ ಹಸುರು.
ಗಾಳಿಪಟ ಹೆಡೆ ತೆರೆದು ಆಡುವಾಗಲು ಜಗ್ಗಿ
ಕೊಸರಿಕೊಂಡೇಳುವದು ಒಡಲ ಸೂತ್ರ;
ಕಡಲಿನುದ್ದಕು ಒಳಗೆ ಹರಿವ ಉಷ್ಣ ಪ್ರವಾಹ-
ಮೇಲೆ ತೆರೆಯಾಡುವದು ಬೇರೆ ಪಾತ್ರ.
ಸಂಜೆ ಕತ್ತಲೆಯೊಡನೆ ಹತ್ತು ಸಾವಿರ ದೀಪ
ಬೆಳಕು ಬಟ್ಟೆಯ ಕಳಚಿ ನಿಂತ ನಿಲುವು-
ನಿಂತ ನೀರೆಲ್ಲವೂ ತಿಳಿದು ತಳ ಕಂಡಾಗ
ದುಷ್ಯಂತನಿಗೆ ಬೇರೆ ಅರಿವು-ಮರೆವು.
ಈಚೆ ಬಾಗಿಲಿನಲ್ಲಿ ಬೆಳಕು ಕರಗುತ್ತಿರಲು
ಇರುಳು ತೆರೆವುದು ಮರೆಯ ವಸ್ತು ಕೋಶ;
ನಡುವೆ ಪಡಸಾಲೆಯಲಿ ನೆರಳು ಹೊಡಮರಳುವದು
ಇವನ ಎದೆಯೊಳು ಸದಾ ಸಂಧಿ ಪ್ರಕಾಶ!
*****
