ಪ್ರಶಸ್ತಿ

ಪ್ರಶಸ್ತಿ ಪ್ರದಾನ ಸಮಾರಂಭದ ಎಷ್ಟೋ ದಿನಗಳ ಮೊದಲು…

“ಬದುಕು ಅಂದ್ರೆ ಬಣ್ಣದ ಸಂತೆ ಅಂತ ತಿಳಕೊಂಡವರೇ ಹೆಚ್ಚು, ತಮಗೆ ಬೇಕಾದ, ತಮ್ಮ ಮನಸ್ಸಿಗೆ ತಕ್ಕ ವ್ಯಾಪಾರ ಮಾಡಬಹುದು, ಬಣ್ಣ ಬಳಿದುಕೊಳ್ಳ ಬಹುದು ಅನ್ನೋ ಕಲ್ಪನೆ, ಭ್ರಮೆಗಳಿಂದ ಬಳಲೋರೆ ಹೆಚ್ಚು! ಈ ಕಳ್ಳರು ತಮಗೆ ಬೇಕಾದ ಬಣ್ಣ ಬಳಕೊಳ್ಳೋ ಸೋಗಿನಲ್ಲಿ ಇನ್ನೊಬ್ಬರನ್ನು ಮರಳು ಮಾಡ್ತಾರಲ್ಲ ಅನ್ನೋ ಸಂಕ್ಟಾ ನಂದು…” ಹೀಗೆ ಇನ್ನೂ ಏನೇನೇನೋ ಅಂತ ಗೊಣಗು ಶೆಟ್ಟಿ – ಹೌದು, ಈ ಹಣವುಳ್ಳ ಶೆಟ್ಟಿ ಅನ್ನೋ ಪ್ರಾಣಿಗೆ ಅದು ನಾನು ಇಟ್ಟ ಹೆಸರು – ಗೊಣಗಿಕೊಳ್ಳುತ್ತಲೇ ಇದ್ದ. ಅದೇನೋ ಇಂತಹವರ ಮುಂದೆ ಅವರ ಮಾತು ಕೇಳುತ್ತಿರುವಂತೆ ನಟಿಸುತ್ತಾ ತನ್ನೊಳಗೇ ನಾನು ಮುಳುಗಿಕೊಳ್ಳಬಹುದಾದ ಛಾತಿ ನನಗೆ ಸಿದ್ಧಿಸಿದೆ (ಅದೂ ಇತ್ತೀಚೆಗೆ, ಈ ಎಲ್ಲ ಮುಂಡೇಗಂಡರ ಸವಾಸ ಆದಮೇಲೆ, ಎಂದೇ ಹೇಳಲೇ?) ಅಥವಾ ನಾನು ಒಬ್ಬ ನಟನಲ್ಲವೇ? ಕಲಾವಿದನಲ್ಲವೇ? ಅಭಿನಯ, ತೆರೆಗೆ – ಪರದೆಗೆ – ಕ್ಯಾಮರಾಕ್ಕೆ ಮಾತ್ರ ಯಾಕೆ ಸೀಮಿತವಾಗಿರಬೇಕು? ನಿಜಜೀವನದಿಂದ ನಟನೆಗೆ, ಅಭಿನಯಕ್ಕೆ ವಿಷಯವನ್ನು, ಪಾತ್ರಗಳನ್ನು ಎಳೆದುಕೊಳ್ಳುವಂತೆ, ಸೃಷ್ಟಿಸಿಕೊಳ್ಳುವಂತೆ, ಈ ಪಾತ್ರಗಳಿಂದ, ಅಭಿನಯದಿಂದ ಜೀವನಕ್ಕೂ ಏನಾದರೂ ಕೊಂಡೊಯ್ಯುವುದು ಸಾಧ್ಯವೇ? ಅಥವಾ ನಾವು ಅನುಭವಿಸಿದ, ಪ್ರಸ್ತುತ ಪಡಿಸಿದ, ಧ್ಯಾನಿಸಿದ ಪಾತ್ರಗಳು ನಮ್ಮನ್ನು, ನಮ್ಮ ಕಲ್ಪನೆಯನ್ನು ನಿರಂತರವಾಗಿ ತುಂಬಿಕೊಳ್ಳುತ್ತವೆಯೋ? ಶೂಟ್…ಈ ದಿನ ಏನಾದರೂ ಸ್ವಲ್ಪ ವಿಸ್ಕಿ ಜಾಸ್ತಿ ಆಯ್ತಾ? ದಿನಗಳು ಹೀಗೇ ಮುಂದುವರೆಯುತ್ತವೆಯಾ?

“ಅಲ್ಲ ತಮ್ಮಾ, ಸಿನಿಮಾನೇನೋ ಮಾಡಿದ್ದಾಯ್ತು, ಇನ್ನೇನು ಚಿತ್ರೀಕರಣನೂ ಮುಗೀತಾ ಬಂತು, ಮುಂದುಕೇನಾರೂ ಮಾಡ್ತೀನಂತ ಪೇಪರ್ ಸಹಿ ಮಾಡೀಯೇನೂ? ಯಾಕೆ ಕೇಳ್ದೆ ಅಂದ್ರೆ, ಈ ಸಿನಿಮಾ ಏನಾರ ಅವಾರ್ಡ್ ಬಂತು, ರೊಕ್ಕಾ ಮಾಡ್ತು ಅಂತ ತಿಳಿ, ಅಗದಿ ಛೊಲೋತ್ನಾಗಿ ಇನ್ನೂ ಒಂದು ಸಿನಿಮಾ ಮಾಡಬೇಕು ಅಂತ ಆಸಿ ಐತಿ…ಹ್ಹಿಹ್ಹಿಹ್ಹೀ…”

ಥೂ, ಬಾರೀ ಭೋಳೇ ಮನಶ್ಶಾನಪಾ ಇವಾ, ಒಂಥರಾ…”ಹಂಗೇನೂ ಇಲ್ಲಾ, ಯಾವ್ದೂ ಕರೆಂಟ್ ಆಫರ್ ಅಥವಾ ಕಮಿಟ್‌ಮೆಂಟ್ ಅಂತ ಏನೂ ಇಲ್ಲ ಶೆಟ್ರೆ”. ಗೊಣಗು ಶೆಟ್ಟಿ ಕಣ್ಣುಗಳು ಹೀರುತ್ತಿದ್ದ ವಿಸ್ಕಿಯ ಮೇಲೆ ಬಿದ್ದ ತಿಳಿ ಹಳದಿ ಬಣ್ಣವನ್ನು ಪ್ರತಿಬಿಂಬಿಸುತ್ತಿದ್ದವು. ಏನೋ ನಿರಾಳ ಅನ್ನಿಸ್ತಾ ಇದೆ, ಈ ಸಿನಿಮಾ ಮಾಡಿ, ಒಂಥರಾ ಸುಖಾ ಆಯ್ತು. ಗೊಣಗು ಶೆಟ್ಟಿ, ಆ ವಿಚಾರವಾದಿ ಡೈರೆಕ್ಟರ್, ನನ್ನ ಮೈಯೆಲ್ಲವನ್ನು ಇವತ್ತಿಗೂ ಕಂಪಿಸುವಂತೆ ಮಾಡಬಲ್ಲ ವಿಸ್ಕಿಯನ್ನೂ ಮೀರಿ ಕಿಕ್ ಕೊಡಬಲ್ಲ ಮಾದಕ ಕಂಗಳ ಕ್ಲಾರಾ, ತಲೆ ಹರಟೆ ಲೈಟ್‌ಬಾಯ್ ಇವರಿಂದೆಲ್ಲ ಬೇಗ ಬಿಡುಗಡೆ ಸಿಗಬಹುದಾದುದನ್ನು ನೆನೆದೇ ಮೈಮನಗಳು ಅದೆಷ್ಟು ಹಗುರವಾಗುತ್ತಿವೆ…
*
*
*
ಪ್ರಶಸ್ತಿ ಪ್ರದಾನ ಸಮಾರಂಭದ ಎಷ್ಟೋ ವರುಷಗಳ ಹಿಂದೆ…

“ಉದ್ದಕೆ ಕೂದಲು ಬಿಟಗಂಡು, ಚೆಂದ ಕ್ರಾಪ್ ಮಾಡಿ, ನಿತಗಂಡು ಬಿಟ್ಟ ಮಾತ್ರಕ್ಕೆ ಹೀರೋ ಆಗಂಗಿಲ್ಲ, ಸ್ವಲ್ಪ ಮೈ ಬಗಸು, ಪಾತ್ರಗಳನ್ನು ಕಣ್ಣು ಮುಂದೆ ತಂದಕಾ, ಪುರುಸೊತ್ತು ಸಿಕ್ಕಾಗ ಅದರ ನಡವಳಿಕೆ ಬಗ್ಗೆ ಧ್ಯಾನ ಮಾಡು…ನಿನಗೆ ನಟ ಅಂತ ಕೊಡೋ ರೊಕ್ಕಾ ಬರೀ ನೀನು ಇಲ್ಲಿ ಬಂದು ನಿಂತಾಗ ಮಾತ್ರಕ್ಕಲ್ಲ, ನಿನ್ನ ಪ್ರತೀ ಒಂದು ನಿಮಿಷಕ್ಕೂ ಅಂತ ತಿಳಕೋ…”

ಶಿವಣ್ಣನವರ ಗರಡಿಯಲ್ಲಿ ನಾನು ಪಳಗುತ್ತಿರುವುದು ಒಂದು ರೀತಿಯಲ್ಲಿ ಒಳ್ಳೇದೇ. ಸ್ವಲ್ಪ ಮುನಿಸು, ಬಿಗಿ ಜಾಸ್ತಿ, ಸಗಣಿಯನ್ನು ಸಗಣಿ ಎಂದು ಯಾವ ಸಂಕೋಚವೂ ಇಲ್ಲದೇ ನೇರವಾಗಿ ಹೇಳೋ ನಿಷ್ಠುರ ಸ್ವಭಾವದವರಾದರೂ, ಆಸಾಮಿ ನನ್ನನ್ನ ಚೆನ್ನಾಗಿ ನೋಡಿಕೋತಾರೆ, ಸ್ವಲ್ಪ ಶಿಸ್ತನ್ನು ಕಲಿಸ್ತಾರೆ ಅಂತಲ್ಲವೇ ನಾನು ಈ ಚಿಕ್ಕ ಪಾತ್ರನೂ ಒಪ್ಪಿಕೊಂಡಿದ್ದು? ಸಾಯಂಕಾಲ ಸನ್‌ಸೆಟ್ಟು ಅಂತಾ ಶುರು ಮಾಡಿ ರಾತ್ರಿ ಹನ್ನೊಂದರವರೆಗೂ ನಿಲ್ಲಿಸಿಕೊಳ್ಳೋ ಮನುಷ್ಯಾ “ಬೆಳಿಗ್ಗೆ ಸನ್‌ರೈಸ್ ಆರೂ ಹತ್ತಕ್ಕಿದೆ, ಐದೂವರೀಗೆಲ್ಲ ಇಲ್ಲಿ ಬಂದಿರಬೇಕು…” ಅಂತ ಡಿಮ್ಯಾಂಡ್ ಮಾಡ್ತಾರಲ್ಲ, ಅದೇ ದೊಡ್ಡ ಪಜೀತಿ, ಅಲ್ಲಿ ಇಲ್ಲ ಅನ್ನಂಗಿಲ್ಲ, ಇಲ್ಲಿ ಬಂದು ಅನುಭವಿಸಂಗಿಲ್ಲ, ಯಾವನೋ ಕಾರ್ ಡ್ರೈವರ್ ಬಂದು ಬಾಗಿಲು ಬಡಿದು ಎಬ್ಬಿಸಿ ಕರಕೊಂಡು ಹೋದರೆ, ಇನ್ಯಾವನೋ ಬಂದು ಬ್ರೇಕ್‌ಫಾಸ್ಟ್ ಕೊಡ್ತಾನೆ, ಬೆಳಿಗ್ಗೆ ಏಳೋ ಮುಂದೆ “ಥೂ, ಇವನಮ್ಮನ್” ಅಂತ ಬೈಕೊಂಡೇ ಏಳೋದಿದೆ. ಈವಯ್ಯಾ ಬಾರೀ ಶಿಸ್ತಿನ ಮನುಷ್ಯಾ ಅಂತ ಬೆಲೆ ಕೊಟ್ಟಿದ್ದು ಸ್ವಲ್ಪ ಜಾಸ್ತೀನೇ ಆತೇನೋ? ಅದೇ ಮೊನ್ನೆ ಸುಧೀರ ಅಂತಿದ್ನಲ್ಲ, “ಗುರೂ, ಮೊದಮೊದಲು ಇದೆಲ್ಲಾ ಹಿಂಗೇನೇ, ಒಂದ್ಸಾರಿ ಅದೃಷ್ಟ ಖುಲಾಯಿಸ್ತು ಅನ್ನು – ಕೇವಲ ಒಂದೇ ಒಂದು ಸಿನಿಮಾ ಸಾಕು ಶಿವಾ, ಎಲ್ಲಾ ಬಂದು ನಿನ್ನ ಕಾಲು ಬುಡಕೇ ಬೀಳ್ತಾರೆ…, ಆರ್ಟಿಫೀಶಿಯಲ್ ಸನ್‌ರೈಸೂ, ಸನ್‌ಸೆಟ್ಟೂ ಮಾಡಿ ನಿನ್ನ ಟೈಮಿನಾಗೆ ನಿನ್ನ ಕರೆಸಿಕಂತಾರೆ…”ಅಂತ ಏನೇನೋ ಭ್ರಮೆ ಹತ್ತಿಸಲು ಶುರುಮಾಡಿದ್ದ. ಬದುಕು ಎಂದರೆ ಮರೀಚಿಕೆ ಅನ್ನೋ ಕಾಣದ ನೆಲೆ ಮುಟ್ಟೋ ಪ್ರಯತ್ನಾ ಅಂತ ಈ ಬುದ್ಧಿಗೇಡಿಗೆ ತಿಳದಿದ್ರೆ ಇಷ್ಟೊತ್ನಾಗೆ ಇಲ್ಯಾಕೆ ಇರತಿದ್ದಾ?! ಒಂದರ ಮೇಲೆ ಒಂದು ಅಂತ ಗೇಯ್ದಿದ್ದು ಸಾಕು, ಏಣಿ ಹತ್ತಿ ಮೇಲೆ ಹೋದಂತೆ, ಹೆಚ್ಚು-ಹೆಚ್ಚು ಗೋಡೆಗೆ ಒರಗಿದ್ದೂ ಸಾಕು. ಈ ನೆಲೆ ಕಾಣೋಕೆ ಹೊಂಟ ಯಾವ ನನಮಗನೂ ಉದ್ಧಾರಾದಂಗಿಲ್ಲ, ಹಂಗಂತ ಅಂದ್ಕಂಡ್ ಅಂದ್ಕಂಡೇ “ಸಾಕಪ್ಪಾ ಸಾಕು, ಇದೊಂದರಿಂದ ಮುಕ್ತಿ ಕೊಟ್ಟು ಬಿಡು” ಅಂತ ಕೈಗೆತ್ತಿಕೊಂಡ ಕೆಲಸವೆಲ್ಲ ಮುಗಿಯೋ ಮುಂಚೆ ಒಳ್ಳೇ ಪರೀಕ್ಷೆಗೆ ತಯಾರಾಗೋ ಶಾಲೆ ಹುಡುಗನಂಗೆ ಇದೊಂದ್ ಪರೀಕ್ಷೆ ಮುಗುದ್‌ರ ಸಾಕು ಅಂತ ಅನ್ನಿಸಲಿಕ್ಕೆ ಹತ್ತಿದೆ. ಇದೇ ಬದುಕೋ ಅಥವಾ ಇದೇ ಬದುಕಿನ ಒಂದು ಭಾಗವೋ, ಅಥವಾ ಬದುಕೇ ಇಂತಹದುರೆಲ್ಲದುದರಿಂದ ಕೂಡಿ ಮಾಡಿದ ಸಂಕೀರ್ಣವೋ?
*
*
*
ಪ್ರಶಸ್ತಿ ಪ್ರದಾನ ಸಮಾರಂಭದ ಒಂದು ವಾರದ ಮೊದಲು…

ತಗಳಪ್ಪಾ, ಇಷ್ಟು ದಿನ ಇವರುಗಳೆಲ್ಲಾ ಎಲ್ಲಿದ್ದರೋ? ಅಥವಾ ಈಗ ತಾನೇ ನನ್ನ ಕಣ್ಣ ಮುಂದೆ ನಾಯಿ ಕೊಡೆಗಳಂತೆ ಹುಟ್ಟಿಕೊಂಡವರೋ ಅನ್ನೋ ಥರಾ ಈ ಪತ್ರಿಕೆಯವರು ನನ್ನ ಜೀವಾ ತಿನ್ನೋಕೆ ಸುರು ಮಾಡಿದರಲ್ಲ! ಹಂಗಾದ್ರೆ ನನ್ನ ಪ್ರೈವಸಿ ಅಂಥಾ ಸ್ವಲ್ಪಾನೂ ಇಲ್ಲವೇ? ನನ್‌ಮಕ್ಳು! ಸಿನಿಮಾ ಮಾಡ್ದೋರು ಯಾರೋ, ಅಭಿನಯ ಅಂಥಾ ಅನುಭವಿಸಿದೋರು ಯಾರೋ? ಈಗ ಬಂದವರೆ, ಎಲ್ಲಾ ಥರದ ಪ್ರಶ್ನೆಗಳನ್ನ ಕೇಳ್‌ಕೊಂಡು. ಇನ್ನು ಮುಂದೆ ಏಜೆಂಟರನ್ನ ಹಿಡಿದಾಗ, ಸೆಕರೇಟರಿಗಳನ್ನ ಆರಿಸುವಾಗ ಇಂತಾ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ಆಗುತ್ತಾ, ಉತ್ತರ ಗೊತ್ತಾ ಅಂತಲೇ ಕೇಳಿಕೊಂಡೇ ಸೇರಿಸಿಕೊಳ್ಳಬೇಕು! ಆವಾಗಲಾದರೂ ಇವರಿಂದ ಸ್ವಲ್ಪ ರಿಲೀಫ್ ಸಿಗುತ್ತೆ – “ನಮ್ಮ ಏಜೆಂಟರನ್ನು ಕೇಳ್ಕೊಳ್ಳಿ” ಎಂದು ಕೈತೊಳೊಕೋ ಬಹುದು. ಮೊನ್ನೆ ಯಾವುದೋ ಒಬ್ಬ ಮಿಟುಕಲಾಡಿ, ಹೊಟೇಲಿನಲ್ಲಿ ಅವಲತ್ತಿಕೊಂಡಿದ್ಲಲ್ಲಾ… “ಬದುಕಿನ ಭಿನ್ನ ಮುಖಗಳನ್ನು ಅನುಭವಿಸಿ, ಒಂದೇ ಪಾತ್ರದ ಮೂಲಕ ಹಲವು ಸನ್ನಿವೇಶಗಳಲ್ಲಿ ಎಲ್ಲರ ಜೊತೆ ಹಂಚಿಕೊಂಡು ಯಶಸ್ವಿ ಆಗಿದ್ದೀರಲ್ಲಾ ಸಾರ್, ನಿಮ್ಮ ಈ ಅದ್ಭುತ ನಟನಾ ಕೌಶಲ್ಯದ ಗುಟ್ಟೇನು? ಇಂತಹವುಗಳಿಗೆಲ್ಲಾ ಏನು ಸ್ಪೂರ್ತಿ?” ಅಯ್ಯಬ್ಬಾ!…ಎಂಥಹ ಪ್ರಶ್ನೆ! ಎಲ್ಲೋ ಬಯ್‌ಹಾರ್ಟು ಮಾಡಿಕೊಂಡು ಬಂದ್ಲೋ, ಇಲ್ಲಾ ಅವಳ ಕೆಲಸವೇ ಇಂತಹ ಪ್ರಶ್ನೆಗಳನ್ನು ಕೇಳೊದೋ, ಸಕತ್ತಾಗಿ ತಲೆ ತಿಂದು ಬಿಟ್ಲು. ಅಲ್ಲಾ, ಬದುಕಂತೆ, ಭಿನ್ನ ಮುಖವಂತೆ, ಅನುಭವಿಸೋದಂತೆ! ಈ ಅನುಭವಿಸಿ ನಟಿಸೋದು ಅಂದ್ರೇನು? ಹಂಗೇನಾದ್ರೂ ಮಾಡಿದ್ರೂ ಇವಳಂಥವರ ಲೆವಲ್‌ನಲ್ಲಿ ಅಭಿವ್ಯಕ್ತಗೊಳಿಸೋದು ಹ್ಯಾಗೆ? ನಟಿಸಿದವನಿಗೆ ಮಾತನಾಡುವ ಪರಿಯೂ, ಅಭಿವ್ಯಕ್ತಿಗೊಳಿಸುವ ಕಲೆಯೂ ಸಿದ್ಧಿಸಿರಬೇಕೆಂದೇನೂ ಇಲ್ಲವಲ್ಲ? ಯಾರೋ ಬರೆದು ಕೊಟ್ಟ ಸ್ಕ್ರಿಪ್ಟನ್ನು ರಾತ್ರೀ-ಹಗಲೂ ಉರು ಹೊಡೆದು, ಅನುಭವಿಸಿದವರಂತೆ ಮುಖ ಮಾಡಿ, ಕ್ಯಾಮೆರಾ, ಲೈಟ್, ಕಟ್ ಅನ್ನೋ ಗಜಗೊಂದಲದಲ್ಲಿ, ಸುತ್ತಲೂ ಹಿಂಸಿಸುತ್ತಿರುವ ಚೌಕಟ್ಟಿನ್ನಲ್ಲಿದ್ದುಕೊಂಡೂ ಶಾಂತ ಮನಸ್ಥಿತಿಯ ಸೀನ್‌ಗಳನ್ನು ಮನಸ್ಸಿಗೆ ತಂದುಕೊಂಡು ಇತರ ಕಲಾವಿದರ ಗೊಂದಲಗಳ ನಡುವೆ ಕಕ್ಕಿಕೊಳ್ಳುವುದನ್ನು ಕಲೆ-ನಟನೆ ಎಂದು ಬಲವಾಗಿ ನಂಬಿಕೊಂಡಿರುವ ನಂಬಿಕಸ್ತರ ನಡುವೆ ನಾನು ಹಾಡಿದ್ದೆಲ್ಲವೂ ಹಾಡೇ! ಶಿಟ್, ಇದೂ ಒಂದು ಬದುಕು, ಡೊಂಬರಾಟ ಅಂತ ಯಾರೂ ಯಾಕೆ ಕರೆದಿಲ್ಲವೋ? ಅದೇನೋ ಆಯ್ಕೆ ಸಮಿತಿ ಅಂತೆ, ನಾಮಿನೇಷನ್ ಅಂತೆ, ಪ್ರಶಸ್ತಿ ಅಂತೆ, ಹೆಸರಂತೆ, ಗೌರವವಂತೆ…ಇತ್ಯಾದಿಯಾಗಿ ಎರಡು ದಿನಗಳ ಹಿಂದೆಯಷ್ಟೇ ಕೊರೆದು ಹೋಗಿದ್ದ ಗೊಣಗು ಶೆಟ್ಟಿ – ಎರಡು ಕಿವಿಯವರೆಗೆ ಬಾಯಿ ಹರಡಿ ನನ್ನನ್ನೇ ನುಂಗೋ ಹಾಗೆ ನಕ್ಕು, ತನ್ನ ಭೀಮ ಕೈಗಳಿಂದ ನನ್ನ ಕೈಗಳನ್ನು ಅಪ್ಪಚ್ಚಿಯಾಗುವಂತೆ ಕುಲುಕಿ, ಇನ್ನೂ ಒಂದು ಸಿನಿಮಾ ಅಂತ ಪೇಪರ್ ಮೇಲೆ ಸೈನ್ ಹಾಕಿಸ್‌ಕೊಂಡು, ಒಂದು ದೊಡ್ಡ ತಂಡದೊಡನೆ ಬಂದು ಹೋದ್ನಲ್ಲಾ…ಇದೇನು ನಿಜವೋ ಕನಸೋ?
*
*
*
ಪ್ರಶಸ್ತಿ ಪ್ರದಾನ ಸಮಾರಂಭದ ಹಿಂದಿನ ದಿನ…

ಇವತ್ತು ಬೆಳಿಗ್ಗೆ – ಬೆಳಿಗ್ಗೆ ಅಂದ್ರೆ ಬೆಳಿಗ್ಗೆ ಏನಲ್ಲ, ಸುಮಾರು ಹನ್ನೊದೂವರೆ ಆಗಿದೆ, ಅದೆಷ್ಟು ವರ್ಷ ಆಯ್ತೋ, ನಿತ್ಯವೂ ಸೂರ್ಯನಿಗೆ ಪೈಪೋಟಿ ಕೊಡೋ ಹಾಗೆ ನಿಯಮಿತವಾಗಿ ಎದ್ದು ಕೈಂಕರ್ಯಕ್ಕೆ ತೊಡಗಿ? – ಎಚ್ಚರ ಆಗಿದ್ದು ನನ್ನ ಪುಣ್ಯಕ್ಕೆ ಅರಚುವ ಗಂಟಲಿನ ಗೊಣಗು ಶೆಟ್ಟಿಯ ಮಾತಿನಿಂದಂತೂ ಅಲ್ಲ, ಒಂಥರಾ ಅನಿರೀಕ್ಷಿತವಾಗಿ ಕ್ಲಾರಾ ಫೋನ್ ಮಾಡಿದ್ಲು, ನನ್ನ ಜೊತೆ ಮಾತಾಡಬೇಕಂತೆ, ತಿರುಗಾಡಬೇಕಂತೆ ಇವೊತ್ತು, ಇತ್ಯಾದಿ, ಇತ್ಯಾದಿ. “ಹೇ, ಹಾಯ್!” ಅಂತ ಪ್ರತೀ ಸಾರಿ ಶುರೂ ಮಾಡೋ ಇವಳು ಶೂಟಿಂಗ್ ಮಾಡೋವಾಗ ಖರ್ಚಿಗೆ ಸಿಕ್ಕಿದ್ದು ಸಾಲ್ದು ಅಂತಾ ಇಲ್ಲೂ ಬಂದು ಪೀಡಿಸ್ತಾಳೆ! ನಾನು “ಬೇಡ, ಸುಮ್ಮನೇ ವೃಥಾ ಪಬ್ಲಿಸಿಟಿ ಯಾಕೆ?” ಅಂದ್ರೆ “ನಿನಗ್ಗೊತ್ತಾಗಲ್ಲ ಸುಮ್ನೆ ಇರು” ಅತ್ಮ ದೊಡ್ಡ ಜಗದ್ಗುರುಗಳ ಹಾಗೆ ಉಪದೇಶ ಮಾಡ್ತಾಳೆ!, “ಬಂದು ಸಾಯಿ” ಅಂತ ಮನಸ್ಸಿನಲ್ಲಿ ಹೇಳಿಕೊಂಡು “ಹ್ಞೂ” ಅಂದಿದ್ದಕ್ಕೆ – “ಸಾಯಂಕಾಲ ನಾಕೂ ಮುಕ್ಕಾಲಿಗೆ…” ಅಂತ ಅಂದು ಕಿಲಕಿಲ ನಕ್ಕಳು, ನಾನು ಫೋನು ಕುಕ್ಕಿದೆ.

ಯಾರ್ಯಾರಿಗೆ ಯಾವ ಕಷ್ಟವೋ ಯಾರಿಗೆ ಗೊತ್ತು? ಕಲೆ-ನಟನೆ ಅಂತ ತಾವು ಏನು ಮಾಡಿದ್ರೂ, ಆಲೋಚಿಸಿಕೊಂಡರೂ ಜನ ಸಮರ್ಥನೆ ಕೊಡೋ ಮಟ್ಟಿಗೆ ಬಂದಿದ್ದಾರೆ. ಕಲೆ-ನಟನೆ ಅನ್ನೋ ಹೆಸರಿನಲ್ಲಿ ಅವರಿವರ ಮಂಚದ ಮೇಲೆ ಅವರನ್ನೇ ಕಳಕೊಂಡು ನರಳಾಡಿ-ಹೊರಳಾಡಿ ಅವರನ್ನೇ ಗುರುತಿಸಲು ಹೊಡೆದಾಡೋರ ಬಾಳು ಎಷ್ಟೊಂದು ಭಯಾನಕ? ಎಷ್ಟೊಂದು ಘೋರ? ಎಲ್ಲಾನೂ ಮಂದಿಗಾಗಿ, ಹೊಟ್ಟೆಗಾಗಿ ಅನ್ನೋ ಸರಕು ಎಷ್ಟು ದಿನಗಳವರೆಗೆ ಕರಗದೇ ಉಳಿದೀತು? ನನ್ಹತ್ರಾನೇ ಚದುರಂಗ ಆಡೋ ಗೊಣಗು ಶೆಟ್ಟಿ, ಇನ್ನು ಕ್ಲಾರಾಳಂತಹವರಿಂದ ಏನೇನನ್ನು ಆಡಿಸುತ್ತಾನೋ? ನನಗೂ ವಯಸ್ಸಾಯ್ತು, ಅಥವಾ ಶಿವಣ್ಣ ಹೇಳಿದಂತೆ ಅನುಭವದ ಮೂಸೆಯಲ್ಲಿ ಬದುಕು ಕುದ್ದಿದ್ದಾಯ್ತು. ಕ್ಲಾರಾ ಇರಲಿ, ಯಾರ ಜೊತೆ ನಟಿಸುವಾಗ್ಲೂ, ತಬ್ಬಿಕೊಂಡಾಗಲೂ, ಹತ್ತಿರ-ಹತ್ತಿರದಲ್ಲಿ ಇದ್ದಾಗಲೂ ಸದಾ ಕೆಲಸದ ಮೇಲೇನೇ ಗಮನ ಹೋಗ್ತಾ ಇದೆ, ಯಾರದ್ದು ಏನೇ ಹರಕೊಂಡು ಹೋಗುತ್ತಿರಲಿ, ನನ್ನ ಪಾತ್ರಕ್ಕೆ ಸಮಾಧಾನದ ಜೀವ ಬರೋವರೆಗೆ, ಬುದ್ಧಿಜೀವಿ ಡೈರೆಕ್ಟರ್‌ನ ಕೂಗು ನಿಲ್ಲೋವರೆಗೆ, ಸುತ್ತೆಲ್ಲಾ ಮಂಗ್ಯಾನ ಮುಖಗಳಂತೆ ಇರೋ ಕೊನೇ ಪಕ್ಷ ಹದಿನೈದು ಮಂದಿ ಮುಂದೆ ಇಂಥಾವೆಲ್ಲಾ ಹೆಂಗಾದ್ರೂ ಬರೋಕೆ ಸಾಧ್ಯ? ಒಂದು ಒಳ್ಳೆ ಪಾತ್ರ ನಿರ್ಮಿಸೋ ಕರ್ತೃ, ಅದನ್ನು ಜನಮನದಲ್ಲಿ ನಿಲ್ಲುವಂತೆ ಮಾಡೋ ರೂವಾರಿ, ಇನ್ನು ಅದನ್ನು ಅನುಭವಿಸಿ ಅಭಿವ್ಯಕ್ತಿಸೋ ಜನಗಳಿಗೆ ಈ ಲೋಕದ ವ್ಯಾಪಾರೀ ಮನೋಭಾವನೇನೂ ಬರ್ಲೇ ಬೇಕಾ? ಮೊನ್ನೆ ಆ ತರಲೆ ಲೈಟ್‌ಬಾಯ್ ಹೇಳ್ಲಿಲ್ಲಾ “ನಿಮಗೇನು ಬಿಡಿ ಸಾರ್, ಯಾವುದಕ್ಕೂ ಕಮ್ಮೀ ಇಲ್ಲಾ!” ಅಂತ ಕಣ್ಣು ಮಿಟುಕಿಸಿ? ಕಳ್‌ನನ್‌ಮಕ್ಳು ಏನಂತ ತಿಳಕೊಂಡವರೋ? ಇವರೇ ಅನ್ಸತ್ತೇ, ಆ ಪೇಪರ್‌ನೋರಿಗೆ ಒಂದಿದ್ದನ್ನ ಹತ್ತು ಮಾಡಿ ಹೇಳಿ ಜೀವಾ ತಿನ್ನೋರು…ಈ ಕ್ಲಾರಾ ಬಂದು ಏನಾರ ಹಾಳು ಬಡಿಸಿಕೊಂಡು ಹೋಗ್ಲಿ, ನಂಗೇನು ಆಗಿಲ್ಲ, ಅಂತ ದುತ್ ಅಂತ ಇರಬೇಕು ಅಂತಾ ಆಲೋಚಿಸಿಕೊಂಡ ಮಗ್ಗುಲಿಗೇ ಹಂಗಾಗೋ ಛಾನ್ಸಸ್ ಕಡಿಮೆ ಅಂತ ಅನ್ನಿಸಿದ್ದು ಇತ್ತೀಚಿನ ದಿನಗಳ ಮತ್ತೊಂದು ವಿಶೇಷ!
*
*
*
ಪ್ರಶಸ್ತಿ ಪ್ರದಾನ ಸಮಾರಂಭ…

ಈ ಪ್ರಶಸ್ತಿ ಸಮಾರಂಭ ಹೊಸದೇನೂ ಅಲ್ಲ, ಹಿಂದೆ ಎಷ್ಟೋ ಬಾರಿ ಇಲ್ಲಿ ಬಂದಿದ್ದಿದೆ, ಜನರ ಗುಂಗಿನಲ್ಲಿ ಕಲೆತು ಕರಗಿ ಹೋದದ್ದಿದೆ. ಆದರೆ ಇವತ್ತಿನದ್ದೇನೋ ವಿಶೇಷ – ನನ್ನ ಹೆಸರನ್ನು ಶ್ರೇಷ್ಠ ನಟರಲ್ಲಿ ಒಬ್ಬನಾಗಿ ನಾಮಿನೇಟ್ ಮಾಡಿದಾರಂತೆ! ಗೊಣಗು ಶೆಟ್ಟಿ, ಕ್ಲಾರಾ ಎಲ್ಲರೂ ವಿಶೇಷ ಕಕ್ಕುಲತೆ ತೋರುವವರೇ – ಈ ಗೊಣಗು ಶೆಟ್ಟಿಗೆ ನನಗಿಂತಾ ಅವನ ಸಿನಿಮಾ ನಾಮಿನೇಟ್ ಮಾಡಿದ್ರೆ ಇನ್ನೂ ಹೆಚ್ಚು ಸಂತೋಷವಾಗುತ್ತಿತ್ತೆನ್ನುವುದು ಬೇರೆ ವಿಚಾರ. ನಿನ್ನೆ ಸಂಜೆ ಈ ಕ್ಲಾರಾ ಅದೆಷ್ಟು ವಿಶೇಷ ಕಾಳಜಿ ವಹಿಸಿದಳು! “ನಾಳೆ ಯಾವ ಸೂಟ್ ಹಾಕ್ತಿ?”, “ನಾಳೆ ಯಾವ ಟೈ ಕಟ್ತಿ?” ಇತ್ಯಾದಿ, ಇತ್ಯಾದಿ… ಅವಳಿಗೆಲ್ಲ ಉತ್ತರ ಕೊಡಬೇಕಾದರೆ ಅವತ್ತು ಆ ಹೊಟೇಲಿನಲ್ಲಿ ಸಿಕ್ಕ ಮಿಟುಕಲಾಡಿ ರಿಪೋರ್ಟರ್‌ಗೆ ಉತ್ತರ ಕೊಡುವುದೇ ಸುಲಭ ಎನ್ನಿಸಿತ್ತು. “ಏ, ನಾಳೆ ಏನಾದ್ರೂ…ಛೇ ಏನಾದ್ರೂ ಯಾಕೆ?…ನಾಳೆ ಶ್ರೇಷ್ಠ ನಟ ಅಂತ ಪ್ರೈಜ್ ಸಿಕ್ಕಿ ದಾಗ ನಮ್ಮನ್ನೆಲ್ಲಾ ಮರೀಬೇಡ, ಮುಖ್ಯವಾಗಿ ನಮ್ಮ ನಿರ್ಮಾಪಕ-ನಿರ್ದೇಶಕ ತಂಡದವರಿಗೆ ಒಂದು ಧನ್ಯವಾದವನ್ನೇ ಅರ್ಪಿಸು, ಶೆಟ್ರನ್ನ ಮರೆತು ಬಿಟ್ಟೀಯಾ, ಎಲ್ಲಾನು ಒಂದು ಲಿಸ್ಟ್ ಬರ್‌ಕೊಡಲಾ?” ಅಂತ ಮಾನಸಿಕವಾಗಿ ಸಾಕಷ್ಟು ತಯಾರೀನೂ ಕೊಟ್ಟಿದ್ಲು, ನನ್ನ ಯಾವತ್ತಿನ ಧೋರಣೆ – ‘ಪ್ರೈಜ್ ಬಂದ ಮೇಲೆ ನೋಡ್ಕೊಂಡ್ರಾಯ್ತು!’

ಭಾರೀ ಕರತಾಡನಗಳ ಮಧ್ಯೆ ಎಷ್ಟೊಂದು ಮಂದಿ ಎದ್ದರು, ಹೋದರು. ಈ ಸೇರಿದ ಜನಗಳಂತೂ ಒಂಥರಾ ನಾಯಿ ನನಮಕ್ಳು! ಆಯ್ಕೆಯಾದವರ ಹೆಸರು ಓದಿದಾಗಲೂ, ಅವರು ನಿಂತಾಗಲೂ, ಕುಂತಾಗಲೂ, ತಮ್ಮ ಕಡೆಯವರನ್ನು ಅಪ್ಪಿಕೊಂಡಾಗಲೂ ಪ್ರತಿಯೊಂದಕ್ಕೂ ತಾರಕ ಸ್ವರದಲ್ಲಿ ಅರಚುವ ಬೇವರ್ಸಿಗಳು. ಯಾರ್ಯಾರು ಪರಿಶ್ರಮ ಪಟ್ಟು ಇಲ್ಲಿ ಮೆಟ್ಲು ಹತ್‌ತಾರೋ? ಯಾರ್ಯಾರು ಹೆಂಗಂಗೆ ಬಂದು ಇಲ್ಲಿ ಸೇರಿಕೊಂತಾರೋ? ಬಳುಕುವವರಿಗೆ, ಮಿಟುಕುವವರಿಗೆ, ಮಿಂಚುವವರಿಗೆ, ಮಾತಿನ ಮಲ್ಲರಿಗೆ ಹೇಳಿ ಮಾಡಿಸಿದ ಜಾಗ ಇದು. ಕಣ್ಣು ಕೋರೈಸೋ ಬೆಳಕು, ಆಯ್ಕೆಯಾಗಿ ಹರ್ಷಾನಂದ ಅನುಭವಿಸುತ್ತಿರುವವರನ್ನು, ಎದೆ ತಿದಿಯ ಹಾಗೆ ಹಿಗ್ಗಿ-ಕುಗ್ಗುತ್ತಿರುವವರನ್ನೂ ನಿರ್ದಾಕ್ಷಿಣ್ಯವಾಗಿ ಬೆಳಗಿ ಎಲ್ಲರಿಗೂ ಎಲ್ಲವನ್ನೂ ತಿಳಿಸಿಬಿಡಬಲ್ಲೆ ಅಂತ ಹೆಮ್ಮೆಯಿಂದ ಬೀಗುತ್ತಾ ಹಲವಾರು ವರ್ತುಲ-ವರ್ತುಲಾಕಾರವಾಗಿ ಹಲವಾರು ತೆರತೆರನ ಬಣ್ಣಗಳಿಂದ ವಿಜೃಂಬಿತವಾಗಿ, ಹಲವಾರು ಕೋನಗಳಿಂದ ನಿಮ್ಮೆಲ್ಲರಿಂದ ಅಳೆದು ತೋರಿಸಲು ಸಾಧ್ಯವಾದದ್ದನ್ನು ನಾನು ಮಾಡಿ ತೋರಿಸಬಲ್ಲಂಥ ‘ನನ್ನ ಬದುಕೇ ಧನ್ಯ!’ ಎಂದು ಮೆರೆಯುತ್ತಿತ್ತು.

ಹಿಂಗೇ ಇವೆಲ್ಲ ಆಗುತ್ತಿರುವ ಒಂದು ಘಳಿಗೆಯಲ್ಲಿ ಸುತ್ತಲಿನ ಗದ್ದಲದಲ್ಲಿ, ಮನಸ್ಸಿನ ತುಮುಲದಲ್ಲಿ, ಅನುಭವಿಸುತ್ತಿರುವ ತಳಮಳಗಳ ಮಧ್ಯೆ ಕೆಲವೊಮ್ಮೆ ವೇದಿಕೆಯಿಂದ ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯದಂತಿರುವಾಗ ನನ್ನ ಹೆಸರು ಆಯ್ಕೆ ಮಾಡಿದವರು ಘೋಷಿಸುತ್ತಿರುವಾಗ ಒಂದೇ ಸಮನೇ ಕ್ಲಾರಾ ಮತ್ತು ಗೊಂದಲ ಶೆಟ್ಟಿ ಎಲ್ಲರೂ ನನ್ನ ಕಡೆಗೆ ಮುನ್ನುಗ್ಗತೊಡಗಿದರು. ನಡೀಬಾರ್ದಿದ್ದು ಏನಾದ್ರೂ ನಡೀತಾ ಎಂದು ಅಂತಃಪ್ರಜ್ಞೆ ಯೋಚಿಸಿ ಮುಗಿಸೋದರೊಳಗೆ “ನಾನು ಈ ವರ್ಷದ ಶ್ರೇಷ್ಠ ನಟನಾಗಿದ್ದೇನೆ” ಅನ್ನೋದು ವಾಸ್ತವದ ಮಿಂಚಿನಂತೆ ಬೆಳಗಿ ಗೊಣಗು ಶೆಟ್ಟಿಯ ಕಠಿಣ ಮುಷ್ಟಿಯಿಂದ ಬಿಡಿಸಿಕೊಳ್ಳೋ ತವಕ, ಕ್ಲಾರಾಳಾ ಆತ್ಮೀಯ ನಗೆಯ ಸಂಭ್ರಮಗಳ ನಡುವೆ, ಎಲ್ಲರ ಒಂದೇ ಕಡೆ ಕೇಂದ್ರೀಕೃತವಾದ ನೋಟದಲ್ಲಿ ಕರಗದೇ, ಹೆಚ್ಚಿದ ಕರತಾಡನಗಳ ಲಯಕ್ಕೆ ಕಂಪಿಸದೆ ವೇದಿಕೆಗೆ ಬಂದಿದ್ದಾಯ್ತು.

ಸರಿ, ವೇದಿಕೆಗೇನೋ ಬಂದಿದ್ದಾಯ್ತು, ಕ್ಲಾರಾ ಈ ಮೊದಲೇ ಹೇಳಿ ಸಿದ್ಧಪಡಿಸಿದಂತೆ ಇನ್ನು ಥ್ಯಾಂಕ್ಯೂ ಲಿಸ್ಟನ್ನು ಓದಬೇಕಲ್ಲ ಅನ್ನುವಷ್ಟರಲ್ಲಿ “ಓದದಿದ್ದರೆ ಏನು?” ಅಂತ ಯಾರೋ ಪ್ರಶ್ನೆ ಕೇಳಿದಂತೆನಿಸಿತು. ಮೈಕಿನ ಮುಂದೆ ನಿಂತಿದ್ದಾಯ್ತು – ಆ ಸಮಾರಂಭ ನಡೆಯುತ್ತಿರುವ ಭವನದ ಆಧಾರ ಸ್ತಂಭಗಳೂ ಸಹ ‘ಈ ರೀತಿ ಸೈಲೆನ್ಸ್ ಯಾವತ್ತೂ ಅನುಭವಿಸಿದ್ದೇ ಇಲ್ಲ’ ಅನ್ನೋ ರೀತಿ ನನ್ನೆಡೆಗೇ ಕೃತಜ್ಞವಾಗಿ ನೋಡುತ್ತ ಕಂಗೊಳಿಸುತ್ತಿರುವಾಗ – ಇನ್ನು ಮಾತನಾಡದೇ ವಿಧಿ ಇಲ್ಲ ಎಂದು ” ಈ ಪ್ರಶಸ್ತಿ, ಈ ಬಹುಮಾನ ಎಲ್ಲವೂ ನಮ್ಮ ಜನಗಳಿಗೆ ಸೇರಿದ್ದು – ಯಾರ ನೋವಿನ ಗಾಥೆ ಚಿತ್ರ ಕಥನವಾಯ್ತೋ, ಯಾರ ನಲಿವು ಅದರ ಜೊತೆಗೂಡಿತೋ – ಯಾರ ಅನುಭವ ಈ ರೀತಿ ಹರಳುಗಟ್ಟಿತೋ – ಇನ್ನು ಯಾರ್ಯಾರೋ – ನಾನು ನೋಡದ, ನೋಡಿರುವ, ಅರಿಯದ ವ್ಯಸ್ತ ವ್ಯಸನಗಳಿಗೇ ಬೀಡುಕಟ್ಟಿದ ಬದುಕನ್ನು ಬದುಕಿದ ಜನರಿಗೆ ಈ ಪ್ರಶಸ್ತಿ ಸೇರಿದ್ದು …” ಅಷ್ಟು ಹೇಳಿ ನನ್ನ ಮಾತು ಮುಗಿಯಿತು ಅನ್ನೋ ಹಾವದೊಡನೆ – ಈ ಡೈಲಾಗ್ ಯಾರೂ ಬರ್ದು ಕೊಡದೆ ಈ ಸಂದರ್ಭದಲ್ಲಿ ಬಂದದ್ದಾದರೂ ಹೇಗೆ ಅಂತ? ಕರತಾಡನಗಳ ನಡುವೆ – “ಮತ್ತೆ ಕರ್ಕಷ…” ಅಂತ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುವ ಆಧಾರ ಸ್ತಂಭಗಳ ನಡುವೆ, ಈ ಭಾರಿ ನಿನ್ನ ಮೇಲೇ ಕೇಂದ್ರೀಕೃತವಾಗಿ ಇನ್ನೇನು ಸುಟ್ಟೇ ಬಿಡುತ್ತೇವೆ ಎಂದು ಅಟ್ಟಹಾಸದಲ್ಲಿ ಬೀಗುತ್ತಿರುವ ಥರಾವರಿ ಲೈಟುಗಳ ಮಧ್ಯೆಯಲ್ಲಿ ನಾನು ಕುಳಿತ ಕುರ್ಚಿ ಕಡೆ ಬಂದಾಗ ಗೊಣಗು ಶೆಟ್ಟಿ ಮುಖ ಗಂಟು ಹಾಕಿಕೊಂಡಿದ್ದರೆ, ಕ್ಲಾರಾಳ ಮುಖ, ಕಣ್ಣುಗಳು ಯಾವುದೋ ಅವ್ಯಕ್ತ ಸಂತೋಷವನ್ನು ಯಶಸ್ವಿಯಾಗಿ ನಟಿಸಿ ಅದರ ಛಾಯೆಯಲ್ಲೇ ಮೂಡುತ್ತಿದ್ದ ನಗುವನ್ನು ಪ್ರತಿಬಿಂಬಿಸಿ, “ಪರವಾಗಿಲ್ಲ, ಚೆನ್ನಾಗೇ ಮಾತಾಡ್ದೆ” ಎಂಬ ಭಾವವನ್ನು ಸೂಚಿಸುತ್ತಿದ್ದವು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.