ನಕಲಿ ರಾಜಕುಮಾರ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ನಕಲಿ ರಾಜಕುಮಾರ ಏರಿ ಆಟದ ಕುದುರೆ
ಹಾಕಿ ಪುಟಾಣಿ ಜೀನು ತಲೆಗೂ ಸ್ವರ್‍ಣ ವಸ್ತ್ರ ಧರಿಸಿದ

ಮೃತ್ಯುವನ್ನು ನಂಬದ ಈ ನಕಲಿ ಕೇಳಿದ- “ಎಲ್ಲಿ ಎಲ್ಲಿ ಆ ಪ್ರಳಯ?”
ಆರು ದಿಕ್ಕುಗಳಿಂದ ಮುತ್ತಿ ಬಂದ ಮೃತ್ಯು ಮೂದಲಿಸಿತು-”

ಮೃತ್ಯು ಕೇಳಿತು- “ಕತ್ತೆ, ಎಲ್ಲಿ ನಿನ್ನ ಕೆನೆದಾಟ, ಎಲ್ಲಿ ಆ ಹಾರಾಟ?
ಗಿರಲು ಮೀಸೆಗಳಲ್ಲಿ, ಬಿಂಕದ ಮೂಗೆಲ್ಲಿ? ಎಲ್ಲಿ ರೋಷದ ಅರ್‍ಭಟ?

ಆ ಸುಂದರ ಪ್ರತಿಮೆಗಳೆಲ್ಲಿ? ಆನಂದಾತಿಶಯವೆಲ್ಲಿ?
ಶಯನದ ಸಜ್ಜೆ ಎಲ್ಲಿ! ಈಗ ಇಟ್ಟಿಗೆಯ ತಲೆದಿಂಬೆ? ನೆಲವೆ ಹಾಸಿಗೆಯೆ?

ತ್ಯಜಿಸಿ ಬಿಡು ನಿದ್ರಾಹಾರ, ನಿಜ ಧೈರ್‍ಯದ ಕಡೆಗೆ ನಡೆ
ಅನಂತದ ರಾಜಕುಮಾರನಾಗು, ಬೇಡ ಈ ಪುಟಾಣಿ ಪದ್ಧತಿಗಳ ಪಡೆ

ಆ ಆತ್ಮವನ್ನು ಅನಾತ್ಮವಾಗಿಸಬೇಡ, ಸಗಣಿಯಾಗಿಸಬೇಡ ತಿನ್ನುವನ್ನ
ಸಗಣಿ ತಿಪ್ಪೆಯೊಳಗೆ ಎಸೆದಿದ್ದಿ ಮುತ್ತು ರತ್ನವನ್ನ

ಈ ಮುತ್ತು ರತ್ನಕ್ಕಾಗಿ ನಮಗೆ ಸಗಣಿಯ ನಂಟು
ಆತ್ಮವೇ ನೀನು ಚೂರಾಗು, ಅಹಂಕಾರದ ಮುದ್ದೆಯ, ಮುತ್ತನ್ನು ಹುಡುಕು

ದೇವ ಮಾನವನ ಕಂಡಾಗ ನರನಾಗಿ ಸೇವೆಮಾಡು
ದಿಗ್ಭ್ರಮೆ, ತಲ್ಲಣ ಕಾಡಿದವೆ? ಗಂಟಿಕ್ಕದಿರು ಹುಬ್ಬು

ಇದು ನನ್ನ ಅಣಕ, ದೇಹವೇ, ನಾನೇ ಈ ನಕಲಿ ರಾಜಕುಮಾರ
ಎಷ್ಟು ದಿನ ನಿನಗೆ ಈ ಪುಟಾಣಿ ಜತೆಗೆ ವಾಕ್ ಸಂವಾದ?

ತಬ್ರೀಜಿನ ಶಂಸ್, ನೀನೇ ಜೀವಜಲ
ಕಣ್ಣೀರಿನ ಕಂಗಳಿಗಲ್ಲದೆ ಮತ್ತಾವುದಕ್ಕೆ ಸಿಕ್ಕಿತು ಈಜಲ?
*****