೧
ಮನೆಯೊಳಗೆ ಅತ್ತಿತ್ತ ಕಾಲು ಸುಳಿದಾಡುತ್ತಿವೆ
ಕಂಡು ಕಂಡೂ ಕಣ್ಣು ಹುಡುಕುತಿಹವು;
ಸುಮ್ಮ ಸುಮ್ಮನೆ ಕಿವಿಗಳೇನೊ ಆಲಿಸಿದಂತೆ-
ತಮ್ಮ ರೂಢಿಗೆ ತಾವೆ ನಾಚುತಿಹವು.
ಅಡುಗೆ ಮನೆಯೊಳು ಬರಿಯ ಹೊಗೆಯಾಡಿದಂತಿಹುದು
ದಿನದ ಗುಂಜಾರವದ ನಿನದವಿಲ್ಲ;
ನಡುಮನೆಗು ಪಸರಿಸುವ ನಗೆಯ ಸುಳಿವೇ ಇಲ್ಲ
ಸಜ್ಜೆವನೆ ಪಡಿಪಾಟು ಶಿವನೆ ಬಲ್ಲ.
೨
ಸಂಜೆ ಮನೆಗೈತರಲು ಪ್ರೇಮಪೂರ್‍ಣಿಮೆ ನಗಲು
ಹುಣ್ಣಿಮೆಗು ಹೊಸಬಣ್ಣ ಮೂಡುತಿತ್ತು;
ಇಡಿಯ ದಿನದಾಯಸವು ಮಂದಹಾಸದಿ ಕರಗಿ
ಸ್ವಚ್ಛಂದ ಛಂದದಲಿ ಹಾಡುತಿತ್ತು.
ಗಾಳಿಯಲೆಗೂ ನಲುಮೆ ಬೆರಳನಾಡಿಸಿದಂತೆ
ತರಳೆಯೊಲವಿನ ಹೊಳವುದೋರುತಿತ್ತು;
ಬೆಣ್ಣೆಯೊಳಗಿನ ಕೂದಲೆಳೆಯ ಹೊರದೆಗೆವನಿತು
ನಯವಾಗಿ ದಿನಬಳಕೆ ಸಾಗುತಿತ್ತು.
೩
ತವರುಮನೆ ನೆನೆದೊಡನೆ ಹಗಲೆಲ್ಲ ಹಿಗ್ಗಿದಳು
ನನ್ನ ಅನುಮತಿಗೆನಿತೊ ಅಮೃತಧಾರೆ-
ಮರುಗಳಿಗೆಯಲಿ ಮತ್ತೆ ಇರುಳು ಕೊರಳನ್ನಪ್ಪಿ
‘ಅಗಲಲಾರೆನು’ ಎಂಬ ಕಣ್ಣಧಾರೆ!
ಅವಳಿಗೋ ಮೊದಲ ಸಲ ತವರುಮನೆ ಹಂಬಲವು-
ನನಗೊ ಅಗಲಿಕೆಯೊಂದು ಮಧುರಶಾಪ,
ಹೆತ್ತ ತಾಯ್ತಂದೆಗಳ ಕರುಳ ಮಲ್ಲಿಗೆಯರಳ
ಕಳಿಸಿರುವೆ ನಾಲ್ಕು ದಿನ ಇರಲಿ ಪಾಪ!
೪
ಅಂದು ಆಗಿನ ಬುದ್ಧಿ ಇಂದಿಗಿರಬೇಕಲ್ಲ-
ಸಾಕು ಸಾಕೆನಿಸಿಹುದು ಮೂಕ ಮನಕೆ,
ಏಕಾದರೂ ಕಳಿಸಿ ಏಕಾಕಿಯಾದೆನೋ-
(ಪತ್ರ ಬಂದಿದೆ; ಆದರಷ್ಟೆ ಸಾಕ?)
ಒಂದು ತೋಪಿನ ಮರದಿ ಕುಳಿತ ಬೆಳವನಹಕ್ಕಿ
ಕಳುಹಿಸಲು ಕೂಜನದ ಪ್ರಣಯಗೀತ-
ಸ್ವಚ್ಚನೊತ್ತಲು ಬಲ್ಬು ಬೆಳಕು ಚಿಮ್ಮುವ ತೆರದಿ
‘ಕೂ’ ಎಂದು ಅದರ ಸವಿ ಎದೆಯ ಮಿಡಿತ!
* * * *
ಇಂದು ಬಂದಿಹ ಓಲೆಯಲ್ಲಿ ಮರುಕದ ಸಾಲು;
“ರವಿವಾರ ದಿನ ನೀವು ಬರಲೆಬೇಕು;”
ಅದು ಎಲ್ಲ ಸರಿ, ಆದರಿಂದು ಮಂಗಳವಾರ
ನಾಲ್ಕು ದಿನಗಳನಂತು ನೂಕಬೇಕು?
*****