ಸುಬ್ಬಣ್ಣ ಎಂಬವರು ಸುಮ್ಮನೇ ಆದವರೇ?
ಜನ ಬದುಕಲೆಂದು ತಪ ತಪಿಸಿದವರು.
ಭೂಮಿ ಬರಿ ಮಣ್ಣಾಗಿ ನಮಗೆ ತೋರಿದ್ದಾಗ
ಹಸಿರಿನ ಪವಾಡಗಳ ತೋರಿದವರು.
ಮಣ್ಣಿನಿಂಗಿತ ಅದರ ಎಲೆ ಅಡಿಕೆ ಜೀವರಸ
ಮುಕ್ಕುಳಿಸಿ ಅರಳಿದವರು.
ಮಲೆನಾಡ ಮರವಾಗಿ ಎತ್ತರದ ಕಾಡಾಗಿ
ಸೂರ್ಯನ್ನ ಕುಡಿದು ಸುಡದವರು.
ಹೆಕ್ಕಿ ತಂದವರಿವರು ಹೊಳೆವ ಬೆಳಕಿನ ಮುತ್ತು
ಸಂಸಾರ ಸಾಗರದ ಆಳದಿಂದ
ತಂದಥ ಬೆಳಕನ್ನ ನಿಜದ ಎಚ್ಚರದಲ್ಲಿ
ಬಡ್ಡಿ ಬೀಳದ ಹಾಗೆ ಬಳಸಿದವರು.
ಆಚೆ ಈಚೆಗಳನ್ನ ಗದ್ಯವೂ ಪದ್ಯವೂ
ಆಗಿಸದೆ ನೇರಕ್ಕೆ ನೋಡಿದವರು.
ಏಡ್ಸುರೋಗದ ಭಯಕೆ ಬಿಳಿಚಿರುವ ನಗರಕ್ಕೆ
ಔಷಧಿಯ ಗಾಳಿಗಳ ಕಳಿಸಿದವರು.
ಬೀಸಣಿಕೆಯಿಂದ ಬಿರುಗಾಳಿ ಹುಟ್ಟಿಸಿದವರು
ಬೆರಳಿಂದ ಸಿಡಿಲುಗಳ ಮಣಿಸಿದವರು.
ಯಾವ ಬಲವಂತಕ್ಕು ಬಗ್ಗರೀ ಸುಬ್ಬಣ್ಣ
ತಪ್ಪಿಗಿಂತಾ ಹೆಚ್ಚು ಕ್ಷಮಿಸಿದವರು
ಎಲ್ಲಾ ಪ್ರಮಾಣಗಳು ಹೊಲಬುದಪ್ಪಿರುವಾಗ
‘ಬದುಕಿರಯ್ಯಾ’ ಎಂಬ ದನಿ ಕೇಳಿಸಿ
ಜಂಗು ತಿಂದಿರುವೆಮ್ಮ ಬದುಕನ್ನ ತೊಳೆದವರು.
ತಮ್ಮ ಕಣ್ಣಿನ ಹೊಳೆವ ಬೆಳಕಿನಲ್ಲಿ.
ಸುಬ್ಬಣ್ಣ ಎಂಬವರು ಸುಮ್ಮನೇ ಆದವರೇ?
ಹೌದೆಂಬ ನಡೆಯ ನುಡಿಗಟ್ಟಿದವರು.
ನಾಗರಿಕ ನಾಗಾಲೋಕದ ಈಚೆ ಬದಿಯಲ್ಲೆ
ಕಲ್ಯಾಣ ಕಟ್ಟಿದವರು.
*****