ನೆನ್ನೆ ದಿನ

ನೆನ್ನೆ ದಿನ
ನನ್ನಜನ
ಬೆಟ್ಟದಂತೆಬಂದರು.
ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ
ಇರುವೆಯಂತೆ ಹರಿವ ಸಾಲು ಹುಲಿ ಸಿಂಹದ ದನಿಗಳು
ಧಿಕ್ಕಾರ ಧಿಕ್ಕಾ ಅಸಮಾನತೆಗೆ
ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ
ಲಕ್ಷಾಂತರ ನಾಗರುಗಳು ಹುತ್ತ ಬಿಟ್ಟು ಬಂದಂತೆ
ಊರ ತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು
ಬೀದಿಯಲ್ಲಿಗಲ್ಲಿಯಲ್ಲಿ
ಬೇಲಿ ಮಳೆಂ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿಧಣಿಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ಹರಿದರು.
ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂಠ ಕೇಳಿದೊಡನೆ
ಅವರ ದನಿ ಇಂಗಿತು
ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ
ಛಡಿಯ ಏಟು ಹೊಡೆದವರ
ಕುತ್ತಿಗೆಗಳ ಹಿಂಡಿದರು.
ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ
ತರಗೆಲೆ ಕಸ ಕಡ್ಡಿಯಾಗಿ
ತೇಲಿ ತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.