ಉತ್ತರ ದಿಕ್ಕಿಗೆ ರಾಣಿಯೊಬ್ಬಳು
ಇದ್ದಳು ಬಲು ಹಿಗ್ಗಿ
ಎತ್ತರದಲ್ಲಿ ರಾಣಿಯಿದ್ದಳು
ಕಣ್ಣುಗಳಿಗೆ ಸುಗ್ಗಿ
ಆಳನು ಕರೆದಳು ಪಟ್ಟದ ರಾಣಿ
ಆಳು ಬಾರೊ ನನ್ನ
ಜೀತಗಾರನ ಜೊತೆಗೆ ಕರೆದಳು
ಪ್ರೀತಿ ಮಾಡೊ ನನ್ನ
ಆಳು: ಕೊಕ್ಕರೆಯೊಂದು ಮೀನ ಪ್ರೀತಿಸಿತು
ಈ ಪ್ರೇಮದ ಗುಟ್ಟೇನು
ಮಸೆದ ಕತ್ತಿಯು ಕೊರಳ ಪ್ರೀತಿಸಿತು
ಈ ಒಲವಿನ ಪರಿಯೇನು?
ರಾಣಿ: ಮನದಾಳದ ನೋವೇರುತಲಿರುವುದು
ತಲೆಯ ತಿಕ್ಕು ಬಾರೋ
ಕಣ್ಣ ಕೊಳದಲ್ಲಿ ಮುಖವ ನೋಡುವೆನು
ಎದೆಯ ಹೊಕ್ಕು ಬಾರೋ
ಆಳು: ನೆಲ ಮುಗಿಲುಗಳ ಸಂಗಮವಿಲ್ಲ
ಪ್ರೀತಿಯ ಎಲ್ಲೆಯ ಅರಿತಿಲ್ಲ
ಹಂಗಿನ ಅರಮನೆ ಭಂಗದ ಗುಡಿಸಲು
ಮನಸುಗಳೊಪ್ಪಿ ಬೆರೆತಿಲ್ಲ
ಜೀತಗಾರನು ಜೀವ ಭಯದಲ್ಲಿ
ಊರು ಬಿಡುವೆನೆಂದ
ಬೇಲಿ ಮರೆಯಲ್ಲಿ ಹೆಣ ಬಿದ್ದಿತ್ತು
ನೋಡಿ ಪ್ರೇಮದಂದ
*****