ಪರಮೇಶಿ ಅವತ್ತು ಎಲ್ಲಿ ಮಲಕ್ಕೊಂಡಿದ್ದನೋ ಏನೋ ಮೇಲಿಂದ ಮೇಲೆ ಆಕಳಿಸಿದ. ರಾತ್ರಿ ಸರಿಯಾಗಿ ನಿದ್ದೆ ಮಾಡಲಾಗಿರಲಿಲ್ಲ. ಯಾರಾದರೂ ಹೆಂಗಸರು ಕರೆದಾರೆಂಬ ಭಯಕ್ಕೆ ಎಲ್ಲೋ ಒಂದು ಕಡೆ ಮಲಗಿದ್ದು ಎದ್ದಿದ್ದ. ಆ ಊರಿಗೆ ಅವನು ಯಾರೋ ಏನೋ? ಅಪರಿಚಿತ. ಕೇವಲ ಎರಡು ದಿನಗಳ ಹಿಂದೆಯಷ್ಟೆ ಆ ಊರಿಗೆ ಬಂದಿದ್ದ. ಕಳೆದ ಊರಲ್ಲಿ ಕತ್ತರಿ ಕೆಲಸ ಬಿಟು ಬಿಡುವುದೆಂದು ನಿರ್ಧರಿಸಿದ್ದ. ತನ್ನನ್ನು ಸಲಿಂಗರತಿಗೆ ಒತ್ತಾಯಿಸಿದ್ದ ಮಾರವಾಡಿಯ ಜೇಬನ್ನೇ ಅವನು ಕೊನೆಯದಾಗಿ ಕತ್ತರಿಸಿದ್ದು. ಆಗ ಅವನ ಕರುಳು ಚುರುಕ್ಕೆಂದಿತ್ತು. ತನ್ನ ಕೆಲಸ ತನಗೇ ಹಿಡಿಸಲಿಲ್ಲ. ಇದೇ ಊರಲ್ಲಿದ್ದರೆ ಕರುಳು ಸೆಳೆಯುತ್ತದೆ…. ಅದಕ್ಕೆಂದೇ ಊರು ಬಿಟ್ಟು ಬಂದಿದ್ದ. ಬಂದಂಥ ಊರನ್ನು ಅವನು ಎಂದೂ ನೊಡಿರದಿದ್ದರೂ ಅದು ಅವನಿಗೆ ಅಪರಿಚಿತವೇನಲ್ಲ. ಪಾದಾರ್ಪಣ ಮಾಡುತ್ತಲೆ ಊರಿನ ಜಾತಕ ಅವಲೋಕಿಸಿ ಬಿಡುವ ಪರಮೇಶಿ ಅನಕ್ಷರಸ್ಥನೇನಲ್ಲ. ಮಾತೃಭಾಷೆಯೊಂದೇ ಅಲ್ಲದೆ; ಅಂಗ್ರೇಜಿಯಂಥ ಭಾಷೆಯ ಪರಿಚಯವೂ ಅವನಿಗುಂಟು. ಶಾಲೆ ಕಟ್ಟೆ ತುಳಿಯದಿದ್ದರೂ ಅವನು ಸಕಲಕಲಾವಲ್ಲಭನಾಗಿದ್ದ. ಇದಕ್ಕೆ ಅನುಕೂಲವಾಗಿ ಅವನಿಗೆ ಹಿಂದೆ, ಮುಂದೆ, ನನ್ನವರು ತನ್ನವರು ಯಾರೂ ಇರಲಿಲ್ಲ. ಪರಮೇಶಿ ಎಂಬುದು ಅವನು ತನಗೆ ತಾನು ಇಟ್ಟುಕೊಂಡ ಅನೇಕ ಹೆಸರುಗಳ ಪೈಕಿ ಅದೂ ಒಂದು.
ಇಂಥ ಪರಮೇಸಿಗೆ ಮೊನಚಾದ ಕತ್ತರಿಯನ್ನು ಯಾವ ನದಿಗೆ ತಾನು ಎಸೆದದ್ದು ಎಂದು ಕೂಡಲೇ ನೆನಪಾಗಲಿಲ್ಲ. ನಾಡಿನ ಎಲ್ಲ ನದಿಗಳು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಿದ್ದರೆ ಕತ್ತರಿ ಎಸೆದ ನದಿ ಮಾತ್ರ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತಿರುವುದು. ಆ ನದಿಯ ದಡದಲ್ಲೊಂದು ದೇವಾಲಯ ಇದ್ದುದು ನೆನಪಾಯಿತು. ಆ ದೇವಾಲಯದಲ್ಲಿ ತಾನು ಒಂದು ರಾತ್ರಿ ಕಳೆದದ್ದು ನೆನಪಾಯಿತು. ಯಾಕೆ ಅವೆಲ್ಲ ನೆನಪಾಗಬೇಕು? ನದಿ, ಭೂಮಿ, ಬೆಟ್ಟ, ಕಾಡುಗಳ ಬಗ್ಗೆ ತಿಳಿದುಕೊಳ್ಳಲು ತಾನೇನು ಭೂಗೋಳ ತಜ್ಞನೇನು? ಕರಗಲ್ಲು ಕಾಟಿದ ಕೂಡಲೆ ಊರನ್ನು ಸಂಪೂರ್ಣ ಮರೆತುಬಿಡುವ ಪರಮೇಶಿ ಸಮಾಜ ವಿಜ್ಞಾನಿಯಂತೂ ಖಂಡಿತ ಅಲ್ಲ.
ಹುಲಿಗೆ ಯಾವ ಕಾಡಾದರೇನು;
ಪರಮೇಶಿಗೆ ಯಾವ ಊರಾದರೇನು?
ಆ ಎಲ್ಲ ಊರುಗಳಂತೆ ಆ ಊರಲ್ಲೂ ಅವನು ಎಲ್ಲೋ ಮಲಗಿಕೊಂಡ, ಹೇಗೋ ಎದ್ದ. ಎಸೆದ ಕತ್ತರಿಯನ್ನು ಮರೆತ. ಅಂದಾಕ್ಷಣ ಅವನ ಕೋಮಲ ದೇಹ ದುಡಿಮೆಗೆ ದೂರದ ಮಾತು. ಕತ್ತರಿ ಇರದಿದ್ದರೆ ಏನಾಯಿತು? ಬದುಕಲಿಕ್ಕೆ ದಾರಿಗಳಿಗೇನು ಬರವೆ?
ಅವತ್ತು ರಾತ್ರಿ ಅವನು ಆ ಊರ ಒಂದು ಕಡೆ ನಡೆಯುತ್ತಿದ್ದ. ಊರ ಹೊರಗಿದ್ದ ಲೇಡೀಸ್ ಹಾಸ್ಟೆಲ್ ಅವನ ಕಣ್ಣಿಗೆ ಎದ್ದು ಕಂಡಿತು. ಅದರ ಒಂದೊಂದು ಕೋಣೆಯಲ್ಲಿ ತಾನು ಬದುಕುವ ಸೋಪಾನಗಳಿರಬಹುದೆಂದು ಊಹಿಸಿದ.
ಪೈಸಲ್ಲಾದವರಂತೆ ಎಲ್ಲರೂ ಮಲಗಿಕೊಂಡಾದ ಮೇಲೆ ಪರಮೇಶಿ ಹಾಸ್ಟೆಲ್ಲಿನ ಹಿಂಬದಿಗೆ ಹೋದ. ಮೇಲಿಂದ ಕೆಳಗೆ ಇಳಿ ಬಿದ್ದಿದ್ದ ಪೈಪಿನ ಗುಂಟ ಮರಕೋತಿಯಂತೆ ಸರಸರ ಮೇಲೇರಿದ. ಹಾರೊಡಿದಿದ್ದ ಕಿಟಕಿಯ ಮೂಲಕ ಕೋಣೆಯೊಳಗೆ ನುಸುಳಿದ. ಇಲ್ಲಾಣು ಹಿಡಿದಿದ್ದ ಜಂತಿಗೆ ಅದುವರೆಗೆ ನೇತು ಬಿದ್ದಿದ್ದ ತೂಗು ಬಾವಲಿಯೊಂದು ಪಟಪಟ ರೆಕ್ಕೆ ಬಡಿದು ಹಾರಾಡಿ ಕಿಟಕಿ ಮೂಲಕ ಹೊರಹಾಯಿತು. ಎದೆ ದಸಕ್ಕಂತು. ತನ್ನ ಪುಣ್ಯ; ಅಲ್ಲಿ ಯಾರೂ ಇರಲಿಲ್ಲ. ಗೇಣೆತ್ತರ ಕಸ ಇತ್ತು. ಕೈಯಿಂದ ಸವರಾಡಿದ. ಕೆಲವು ಚೇಳುಗಳು ಆ ಸವರಾಟಕ್ಕೆ ಹೆದರಿ ದೂರ ಸರಿದು ಅಡಗಿದವು. ಹಾಗೆ ಕೆಲವು ಸೆಕೆಂಡುಗಳು ಕಳೆದ ಅವನಿಗೆ ಮೂಲೆಯಲ್ಲಿದ್ದ ಟ್ರಂಕು ಸ್ಪರ್ಶಕ್ಕರಿವಾಯಿತು. ಅದನ್ನು ಹಾಗೆ ಎತ್ತಿಕೊಂಡ. ಬಂದ ದಾರಿ ಗುಂಟ ವಾಪಾಸಾದ. ಅವನು ಇಳಿದುಕೊಂಡಿದ್ದ ಜಾಗ ಜನನಿಬಿಡವಾಗಿತ್ತು.
ಬೆಳಗಿನ ಎಳೆ ಬೆಳಕಲ್ಲಿ ಟ್ರಂಕು ಅವನ ಕಣ್ಣಿಗೆ ಕೋರೈಸಿತು. ಆ ಟ್ರಂಕಿನ ಯಜಮಾನಿ ತನ್ನಷ್ಟೇ ವಯಸ್ಸಿನ ಯುವತಿ ಅಂತ ಅವನಿಗೆ ಹೇಗೆ ಗೊತ್ತು? ಭಾಗೀರಥಿ ಎಂಬ ಆಕೆ ಪ್ರೇಮ ಪ್ರಕರಣಕ್ಕೆ ಸಿಕ್ಕು ಪಬ್ಲಿಕ್ ನ್ಯೂಸಾಗಿ ಪ್ರಿಯತಮ ಕೈಕೊಟ್ಟ ಪರಿಣಾಮದಿಂದಾಗಿ ಆ ಊರೊಳಗೇ ಇರುವ ಹುಲಿಗುಡ್ಡದ ಗವಿಯೊಳಗೆ ಆತ್ಮಹತ್ಯೆ ಮಾಡಿಕೊಂಡಿರತು ಸುದ್ದಿ ಅವನಿಗೆ ಬಿಡಿಸಿ ಹೇಳಲು ಟ್ರಂಕಿಗೆ ನಾಲಿಗೆ ಇರಲಿಲ್ಲ. ಸುಲಭವಾಗಿ ಅದಕ್ಕಿದ್ದ ಬೀಗ ಮುರಿದ. ಮುಚ್ಚಳ ತೆರೆದ. ಉಸಿರು ಬಿಟ್ಟು ಒಳಗೆ ಕಣ್ಣಾಡಿಸಿದ. ಅಲ್ಲಿ ದುಮ್ಮು ಹಿಡಿದ ಪುಸ್ತಕಗಳಿದ್ದವು. ಅವುಗಳ ಕೆಳಗೆ ಸರ್ಟಿಫಿಕೇಟುಗಳ ಫೈಲು ಇತ್ತು. ಇನ್ನೂ ಹುಡುಕಿದ ಪರಮೇಶಿಗೆ ಪುಟ್ಟ ಹಣದ ಗಂಟು ಸಿಕ್ಕಿತು. ಅದು ಒಳಗಲಂಗಗಳಲ್ಲಿತ್ತು. ಟ್ರಂಕನ್ನು ಜೋಪಾನವಾಗಿ ಭದ್ರಪಡಿಸಿದ.
ಅವನು ಸ್ಪಲ್ಪ ವಿದ್ಯೆ ಬಲ್ಲವೆನೆಂದು ಹೇಳಿದೆನಲ್ಲ! ತಾನು ಸಂತೋಷ ಅನುಭವಿಸುವಾಗೆಲ್ಲ ಅವನಗೆ ನ್ಯೂಸ್ ಪೇಪರು ಓದುವುದು ಮುಖ್ಯ ಹವ್ಯಾಸಗಳಲ್ಲೊಂದು. ಅಂತಯೇ ಒಂದು ವೃತ್ತ ಪತ್ರಿಕೆ ಕೊಂಡ. ಅದು ಆ ರಾಜ್ಯದ ಅತ್ಯಧಿಕ ಪ್ರಸಾರದ ದಿನಪತ್ರಿಕೆ. ಮುಖಪುಟದಲ್ಲಿ ರಾಜಕೀಯದ ಮಾಮೂಲು ವರಸೆ ಕುಸ್ತಿ ಪಟ್ಟುಗಳಿದ್ದವು. ಎರಡನೆಯ ಪುಟದಲ್ಲಿ ಕಳವು ಕೊಲೆಗೆ ಸಂಬಂಧಿಸಿದ ಸಂಗತಿಗಳಿದ್ದವು. ಮೂರನೆ ಪುಟದಲ್ಲಿ ಕೊಲೆಗಾರರ ಫೋಟೋಗಳೂ; ರಾಜಕೀಯ ನಾಯಕರ ಫೋಟೋಗಳೂ ಇದ್ದವು. ಅವುಗಳಲ್ಲಿ ಎಷ್ಟು ಮಿಕ್ಸಾಗಿದ್ದವೆಂದರೆ, ಯಾರು ಕೊಲೆಗಾರರೋ ಯಾರು ನಾಯಕರೋ ಎಂಬಂತೆ… ಅವರೆಲ್ಲ ತಮಗೆ ಚಿರಪರಿಚಿತರೆಂಬಂತೆ ಚರನಗೆಯೊಂದಿಗೆ ನೋಡಿದ. ಇನ್ನು ನಾಲ್ಕನೆ ಪುಟಕ್ಕೆ ಬಂದರೆ; ಅಲ್ಲೆಲ್ಲ ಉದ್ಯೋಗ ವಾರ್ತೆಗಳು; ತನಗೊಮದು ಉದ್ಯೋಗವಿದ್ದಿದ್ದರೆ ತಾನು ಕತ್ತರಿಗೆ ಶರಣು ಹೋಗುತ್ತಿರಲಿಲ್ಲವೇನೋ? ಅವನಿಗೆ ಆ ಕಾಲಂ ಸಂಬಂಧಿಸಿದುದಲ್ಲ, ಆದರೂ ಮಾಮೂಲಿನಂತೆ ಓದಿದ.
ಗ್ರಾಮಸೇವಿಕಾ ಹುದ್ದೆಗಳಿಗಾಗಿ ಅರ್ಹ ತರುಣಿಯರಿಂದ ಅರ್ಜಿಗಳನ್ನು ಕರೆದಿದ್ದರು. ಗ್ರಾಮಸೇವಿಕಾ ಮತ್ತು ಅರ್ಹ ತರುಣಿ ಎಂಬೆರಡು ಶಬ್ದಗಳು ಪರಮೇಶಿಯ ದೇಹದೊಳಗೆ ಹೊಕ್ಕು ಸುಗ್ಗಿ ಆಡಿದವು. ಅವನಿಗೆ ಏನೋ ಹೊಳೆಯಿತು. ಟ್ರಂಕು ತೆರೆದ. ಫೈಲಲ್ಲಿದ್ದ ಸರ್ಟಿಫಿಕೇಟುಗಳನ್ನು ಕ್ಷುಣ್ಣವಾಗಿ ಪರಿಶೀಲಿಸಿದ. ಅವುಗಳಲ್ಲಿದ್ದ ಎಷ್ಟೋ ವಿವರಗಳಿಗೆ ತನ್ನನ್ನು ಹೋಲಿಸಿದ. ತಾಳೆಯಾದವು. ಅದಕ್ಕೆ ತಕ್ಕ ಉಡುಪು ಖರೀದಿಸಿದ. ಶಿಫಾನ್ ಸೀರೆಯೊಳಗೆ ಮುದ್ದಾಗಿ ಕಂಡ ಅವನು ಭಾಗೀರಥಿ ಎಂಬ ಹೆಸರಿನಲ್ಲಿ ಲಾಡ್ಜ್ ವೈಕುಂಠದಲ್ಲಿ ರೂಮು ಬಾಡಿಗೆ ಹಿಡಿದ. ಲಾಡ್ಜ್ ಮಾಲೀಕ ರಾಘವೇಂದ್ರನೇ ಖುದ್ದು ‘ಎಸ್ ಮೇಡಂ’ ಅಂತ ಆತನ (ಸಾರಿ) ಆಕೆಯ ಸೇವೆಗೆ ನಿಂತ. ಪರಮೇಶಿ (ಸ್ಸಾರಿ) ಭಾಗೀರಥಿ ತನ್ನ ಪ್ಲಕ್ ಮಡಿದ ಹುಬ್ಬು ಹಾರಿಸಿ ಕಾಡಿಗೆ ಲೇಪಿತ ತುದಿಗಣ್ಣುಗಳಿಂದ ಮೋಹಕವಾಗಿ ನಕ್ಕು ರಾಘವೇಂದ್ರನನ್ನು ಪ್ರಥಮ ನೋಟಕ್ಕೆ ಪರವಶಗೊಳಿಸಿದ್ದಳು. ಎಲ್ಲರಂತೆ ಅಳ್ಳೆದೆಯ ಅವನೂ ಕಬ್ಬಿಣದ ಚೂರಿನಂತಾಗಿ ಆಕೆಯಿಂದ ಅಡ್ವಾನ್ಸು ಪಡೆಯಲಿಲ್ಲ. ಊಟ ತಿಂಡಿಯಲ್ಲೂ ಕನ್ಸೇಷನ್ ತೋರಿಸಿದ. ಭಾಗೀರಥಿಗೂ ಇಷ್ಟೇ ಬೇಕಾಗಿತ್ತು. ಮನೆಗೆದ್ದು ಮಾರು ಗೆಲ್ಲು ಎಂಬಂತೆ ಆಕೆ ಲಾಡ್ಜಿನ ಮಾಲಿಕನನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಳು(ನು). ಅಲ್ಲದೆ ಆ ಲಾಡ್ಜಿನ ಗಿರಾಕಿಗಳು ದುಂಬಿಗಳಂತೆ ಸುಳಿದಾಡುವರು. ತಮ್ಮ ಕಣ್ಣೇಟುಗಳಿಗೆ ಆಕೆ ಮಾಗಿ ಇವತ್ತು ಬೀಳಬಹುದು ನಾಳೆ ಬೀಳಬಹುದು ಅಂತ ಒದ್ದಯಾಗತೊಡಗಿದರು. ಹೀಗಾಗಿ ವೈಕುಂಠಂ ಲಾಡ್ಜಿಗೆ ಶುಕ್ರದೆಸೆ ಒದಗಿತ್ತು.
ಲಾಡ್ಜಿನ ಗಿರಾಕಿಗಳೊಂದಿಗೆ ಚಿನ್ನಾಟವಾಡಲು ಪರಮೇಶಿಗೆ/ಭಾಗೀರಥಿಗೆ ಸಮಯವೆಲ್ಲಿ!? ತನ್ನ ಹೆಸರು ಭಾಗೀರಥಿ; ತಾನೊಬ್ಬ ಸುಂದರ ಯುವತಿ. ತನು ಮುಗಿಲಮಲ್ಲಿಗೆ! ಗಂಡಸರು ಕಣ್ಣೋಟದಿಂದ ಸವಿಯಬಹುದು. ಅಂಥ ಕಷ್ಟದ ಸಂದರ್ಭಗಳಲ್ಲಿ ಮಾತ್ತ ತನ್ನ ಕೋಮಲ ದೇಹದ ನಿರ್ದಿಷ್ಟ ಭಾಗಗಳನ್ನು ಸ್ಪರ್ಶಿಸಲು ಅವಕಾಶ ಕೊಡುವುದು, ಹೀಗೆ ಯೋಚಿಸಿ ಪರಮೇಶಿ ತನ್ನ ದೇಹವನ್ನು ತಾನು ಭಾಗೀರಥಿ ಎಂದು ಪರಿಭಾವಿಸಿಕೊಂಡ. ಅವನ ದೇಹ ಕೂಡ ಅವನ ಆಲೋಚನೆಗೆ ತಕ್ಕಂತೆ ಇತ್ತು, ಅದನ್ನು ತಿದ್ದಿ ತೀಡಬಲ್ಲ ಕೌಶಲ್ಯ ಕೂಡ ಅವನಿಗೆ ಲಾಗಾಯ್ತಿನಿಮದ ಇತ್ತು ಬೇರೆ!
ನಿರ್ದಿಷ್ಟ ಕಛೇರಿಯಿಂದ ಗ್ರಾಮಸೇವಿಕಾ ಹುದ್ದೆಗೆ ಸಂಬಂಧಿಸಿದಂಥ ಅರ್ಜಿ ಪಡೆದುಕೊಂಡು ಬಂದನು ಪರಮೇಶಿ. ಛೇ .. ಛೇ.. ಭಾಗೀರಥಿ; ಅರ್ಜಿಗೆ ಸರ್ಟಿಫಿಕೇಟುಗಳ ನಕಲು ತೆಗೆಸಿ ಲಗತ್ತಿಸಿದಳು. ಮೆಡಿಕಲ್ ಆಫೀಸರಿಂದ ‘ಫಿಜಿಕಲ್ ಫಿಟ್‌ನೆಸ್’ ಸರ್ಟಿಫಿಕೆಟನ್ನೂ; ತಾಲ್ಲೂಕು ಮ್ಯಾಜಿಸ್ಟ್ರೇಟರಿಂದ ಅಫಿಡೆವಿಟ್ಟನ್ನೂ ಮತ್ತು ಸ್ಥಳೀಯ ಶಾಸಕರಿಂದ ಪರಿಚಯ ಪತ್ರವನ್ನೂ ಪಡೆದು ಅರ್ಜಿಗೆ ಲಗ್ತಿಸಬೇಕಿತ್ತು.
ಭಾಗೀರಥಿ ಹಾಸ್ಟಿಟಲ್ಲಿಗೆ ಹೋದಳು. ಡಾಕ್ಟರುಗಳೆಲ್ಲ ‘ಮೇಡಂ ವಾಟ್ ಕೆನ್ ಐ ಹೆಲ್ಪ್ ಯು’ ಅಂತ ಬಂದರು…. ಉತ್ತರವಾಗಿ ಆಕೆ ಮುಗುಳ್ನಕ್ಕಳು….
“ಮೆಡಿಕಲ್ ಆಫೀಸ್‌ರವರನ್ನು ಕಾಣಬೇಕಿತ್ತು” ಆಕೆಯ ಕೋಮಲ ಕಂಠ ಉಲಿಯಿತು.
“ಓಹ್; ಇದು ನಮ್ ಎಂಓನ ಗಿರಾಕಿ” ಒಬ್ಬ ಗೊಣಗಿದ.
“ಎಂಓ ರಿಲೀ ಲಕ್ಕಿ” ಮತ್ತೊಬ್ಬ.
ಮಗುದೊಬ್ಬ ಡಾಕ್ಟರ್ ಭಾಗೀರಥಿಯ ಚಂದ್ರ ಬೆಳಕಿನ ನೀಳ ಬೆರಳುಗಳನ್ನು ಹಿಡಿಯಲೆತ್ನಿಸಿ ‘ಎಂಓ’ ರ ಆಫೀಸಿನ ಸ್ಕ್ರೀನ್ ಡೋರ್ ತೆಗೆದು ಒಳಗೆ ಬಿಟ್ಟ.
ಸ್ಟೆನೋ ಅದೇನೋ ಡಿಕ್ಟೇಟ್ ಮಾಡುತ್ತಿದ್ದ ಎಂಓಗೆ ಭಾಗೀರಥಿಯನ್ನು ಕಂಡ ಕೂಡಲೇ ಏಂಜೆಲ್ ಬಂದಿರಬೇಕೆಂದೆನಿಸಿತು. ಸ್ಟೆನೋಳನ್ನು ಹೊರಗೆ ಕಳಿಸಿ ಆಕೆಯನ್ನು ಸ್ವಾಗತಿಸುತ್ತಾ ’ಈ ನಿಮ್ಮ ಸುಂದರ ದೇಹದ ಯಾವ ಪಾರ್ಟ್‌ಗೆ ಏನಾಗಿದೆ ಹೇಳಿ ಮೇಡಂ, ನಾನೇ ಖುದ್ದು ತಪಾಸಣೆ ಮಾಡುವೆ” ಎಂದು ಸ್ಟೆತಸ್ಕೋಪಿನೊಡನೆ ಎದೆಗೆ ಗುರಿ ಇಟ್ಟು ಧಾವಿಸಿದ.
ಆಕೆ ಕಿಲಕಿಲಗುಟ್ಟಿ ಹಿಮದೆ ಸರಿದಳು. ನೋ…. ನೋ…. ಕೋಗಿಲೆಗೆ ಅತ್ತೆಯಂತೆ….
ತನ್ನ ಎಡಗೈಯ ಬೆರಳುಗಳನ್ನು ಸ್ಪರ್ಶಿಸಲು ಅವಕಾಶ ಕೊಟ್ಟಳು. ಅವನು ಸ್ಪರ್ಶಿಸಿದ “ಸ್ಟಾರ್ಟಿಂಗೇ ಇಷ್ಟು ಚೆನ್ನಾಗಿರಬೇಕಾದ್ರೆ ಇನ್ನು ಎಂಡಿಂಗ ಹೇಗಿರಬೇಡ” ಎಂದು ಯೋಚಿಸಿ ಕಂಪಿಸಿದ ಎಂಓ.
ಆತನಿಂದ ತನ್ನ ಕೈ ಬಿಡಿಸಕೊಂಡಳು(ನು). ಮೆಲ್ಲಗೆ ಅವನ ಗಲ್ಲವನ್ನೊಮ್ಮೆ ಚಿವುಟಿ ಭಾಗೀರಥಿ ಗ್ರಾಮಸೇವಿಕಾ ಹುದ್ದೆಗೆ ತಾನು ಪ್ರಯತ್ನಿಸುತ್ತಿರುವುದನ್ನು; ಅದಕ್ಕೆ ‘ಎಂಸಿ’ ಬೇಕಾಗಿರುವುದನ್ನು ವಿವರಿಸಿದನು(ಳು). ಫೀಜಿನ ರೂಪವಾಗಿ ಆಕೆಯ ಗಲ್ಲವನ್ನು ಕಚ್ಚಿಬಿಡಬೇಕೆಂದು ಧಾವಿಸಿದ. ಮೆಲ್ಲಗೆ ಮುದ್ದುಕೊಡಿಸಿಕೊಂಡಳು. ಆತ ಆಕೆಯ ದೇಹದ ಅಂಗೋಪಾಂಗಗಳು ದೃಢವಾಗಿಯೂ…. ಆರೋಗ್ಯವಾಗಿಯೂ ಇರುವುದಾಗಿ ಎಂಸಿ ರೆಡಿ ಮಾಡಿ ಕವರಲ್ಲಿಟ್ಟು ಕೊಡುತ್ತ ‘ಉಡ್‌ಲ್ಯಾಂಡ್ಸ್ ಥರ್ಟಿಟೂ’ ಎಂದು ಎರಡು ಮೂರು ಸಾರಿ ಹೇಳಿದ. ಅದನ್ನು ಪಡೆದು ಆಕೆ ‘ಓಹ್ ನ್ಹಾಟಿ ಬಾಯ್’ ಎಂದು ಮುಗುಳ್ನಕ್ಕು ವಾಪಸಾದಳು.
ಭಾಗೀರಥಿಯೊಳಗಿನ ಪರಮೇಸಿ ಯೋಚಿಸಿದ ‘ಈ ಪ್ರಪಂಚ ಅದೆಷ್ಟು ವಂಡರ್‌ಫುಲ್ಲಾಗಿದೆ’.
ಭಾಗೀರಥಿ ವೇಷದ ಪರಮೇಶಿ ಮ್ಯಾಜಿಸ್ಟ್ರೇಟರ ಕಛೇರಿಗೆ ಹೋದಾಗಲೂ ಇದೇ ಅನುಭವವಾಯಿತು.
ಶಿರಸ್ತೇದಾರ ಆಕೆ(ತ)ಯನ್ನು ಕೋರ್ಟಿನ ಎಲ್ಲರಿಗೆ ತನ್ನ ಹೆಂಡತಿಯ ತಂಗಿ ಎಂದೇ ಪರಿಚಯಿಸಿದ. “ಇಂಥ ಸುಂದರ ಸೊಸೆ ಹೊಂದಿರುವ ನಿನ್ನ ಅದೃಷ್ಟಕ್ಕೆ ಎಣೆಯೇ ಇಲ್ಲ” ಎಂದು ಮುಂದಿನ ತಿಂಗಳು ರಿಟೈರಾಗಿಲಿದ್ದ ವೆಂಕಣ್ಣ ಉಗ್ಗಡಿಸಿದನು.
ಶಿರಸ್ತೇದಾರನೇ ಖುದ್ದು ನಿಮತಿದ್ದು ಅಫಿಡವಿಟ್ ಟೈಪ್ ಮಾಡಿಸಿ ಮ್ಯಾಜಿಸ್ಟ್ರೇಟರ ಸಹಿ ಮಾಡಿಸಿ ಕೊಡುತ್ತ “ನಾವೂ ನಿಮ್ಮವರೆ…. ಬೇರೆ ಅಂತ ತಿಳ್ಕೋಬೇಡಿ ನನ್ನ ನಿಮ್ಮೋರು ಅಂತ ತಿಳ್ಕೋಳ್ಳಿ. ನಮ್ಮನೇನ ನಿಮ್ಮನೆ ಅಂತ ತಿಳ್ಕೋಳ್ಳಿ” ಎಂದು ಪಿಸುನುಡಿದ.
“ಋಣ ಇದ್ರೆ ಆದೀತು ಭಾವಾ” ಅಂತ ಕಚಗುಳಿ ಇಟ್ಟು ವಾಪಾಸಾದಳು ಭಾಗೀರಥಿ.
ಇನ್ನು ಬಾಕಿ ಇರುವುದೆಂದರೆ ಶಾಸಕರಿಂದ ‘ಪರಿಚಯ, ನಡತೆ ಪತ್ರ’ ಬರೆಯಿಸಿಕೊಂಡು ಬರುವುದು.
ಶಾಸಕರನ್ನು ರಾತ್ರಿ ಕಾಣುವುದು ನಿನ್ನಂಥ ಸುಂದರಿಯರ ಮೈಗೆ ಹಿತವಲ್ಲವೆಂದು ಲಾಡ್ಜ್‌ನ ಗೋವಿಂದ ಬುದ್ಧಿ ಹೇಳಿದ. ಆಯ್ತು ಅಂತ ಬೆಳಿಗ್ಗೆ ಹತ್ತೂವರೆಗೆ ಹೋದಳು.
ಶಾಸಕರು ಆಕೆಯನ್ನು ನೋಡುತ್ತಲೆ “ನಿಮೇಗೇನು ಹೊತ್ತುಗೊತ್ತು ಇಲ್ವೇನಮ್ಮಾ ಕಾಣಲು. ಪರಿಚಯ ಪತ್ರ ಕೊಡಲು ದೇನು ಹೊತ್ತಾಗೊತ್ತಾ. ರಾತ್ರಿ ಎಂಟಾದ ಮೇಲೆ ಪರ್ಸನಲ್ಲಾಗಿ ಬಂದು ಕಾಣಮ್ಮಾ ತಂಗಿ” ಎಂದು ಹೇಳಿ ಕಳಿಸಿದರು.
ಸರಿ ಅಂತ ರಾತ್ರಿ ಹೋದಳು. ಪರ್ಸನಲ್ಲಾಗಿದ್ದ ಶಾಸಕರು ಪೆಟ್ರೋಲು ಹಾಕಿಕೊಂಡು ರಾಪಾಗಿದ್ದರು. ‘ಬಾರೆ ನನ್ನ ಗಜಲಿಂಬೆ ಹಣ್ಣೇ’ ಅಂತ ಸ್ವಾಗತಿಸಿದರು. ಭಾಗೀರಥಿ/ಪರಮೇಸಿ ಸೀದ ಹೋಗಿ ಶಾಸಕರ ತೊಡೆ ಏರಿ ಕುಳಿತಳು. ಆತ ಸೀದ ಕಿಬ್ಬೊಟ್ಟೆಗೇ ಕೈಹಾಕಿದ.
“ರಾಜಾ…. ಇವತ್ತು ಮಧ್ಯಾಹ್ನ ಮೆನ್ಸಸ್ಸಾಯ್ತು. ನಾಡಿದ್ದು ಪರ್ಸನಲ್ಲಾಗಿ ಕಂಡರಾಗದೆ” ಪರಮೇಶಿ (ಸಾರಿ) ಭಾಗೀರಥಿ ಅವನ ಮರ್ಮಾಂಗ ಮುಟ್ಟಿ ಮುಳ್ಳು ತುಳಿದವಳಂತೆ ಬೆಚ್ಚಿದಳು.
“ನಾಡಿದ್ದು ಖಂಡಿತ ಬರಬೇಕು ಡಾರ್ಲಿಂಗ್” ಅಂತ ವಚನ ಪಡೆದು ಆಕೆ(ತ) ಕೇಳಿದ ಸರ್ಟಿಫಿಕೇಟ್ ಕೊಟ್ಟು ‘ಆಟೋ ಚಾರ್ಜು’ ಅಂತ ನೂರರ ಐದು ನೋಟು ಕೊಟ್ಟು ಕಳಿಸಿದರು ಶಾಸಕ ದೇ. ಭ. ಸಂ. ಎಕ್ಸ್.
ಆಕೆ ಥ್ಯಾಂಕ್ಯು ಹೇಳಿ ಮರಳಿದಳು.
****
ಅಂಚೆಯ ಮೂಲಕ ಕಳಿಸಿದರೆ ಒಳ್ಳೆಯದಲ್ಲೆಂದು ತಾನೇ ಖುದ್ದು ಹೋಗಿ ಅಪ್ಲಿಕೇಷನ್ ನಿಗದಿತ ಆಫೀಸಿಗೆ ಕೊಟ್ಟು ಬಂದಳು. ಅಂದಮೇಲೆ ಇಂಟರ್‌ವ್ಯೂ ಕಾರ್ಡ್ ಬರದಿರುತ್ತದೆಯೇ? ಬಂತು.
ನಿಗದಿತ ವೇಳೆಗೆ ಒನ್ನವರ್ ಮುಂಚಿತವಾಗಿ ಸಂದರ್ಶನ ಸ್ಥಳವನ್ನು ತಲುಪಿಸಳು(ನು) ಅವಳ(ನ)ಂತೆಯೇ ಅನೇಕ ಮಹಿಳೆಯರು ಸಂದರ್ಶನಾರ್ಥಿಗಳಾಗಿ ಹಾಜರಿದ್ದರು ಅಲ್ಲಿ.
ಅವರೆಲ್ಲ ಭಾಗೀರಥಿಯಷ್ಟು ಸುಂದರಿಯರಲ್ಲದಿದ್ದರೂ ಕುರೂಪಿಗಳೇನೂ ಆಗಿರಲಿಲ್ಲ. ಅವರೆಲ್ಲ ಪರಮೇಶಿಯ ಕಡೆ ನೋಡಿದರು. ಇವಳೇನು ಊರ್ವಶಿಯೋ, ರಂಭೆಯೋ, ಮೆನಕೆಯೋ, ತಿಲೋತ್ತಮೆಯೋ…. ಸಿನಿಮಾ ನಟಿಯೋ…. ಪ್ರಪಂಚದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಿಹಿಸಿ ಬಂದವಳೋ…. ಮುಂತಾಗಿ ಅವರೆಲ್ಲ ಮನದೊಳಗೆ ಗೊಣಗಿಕೊಂಡರು.
ಸಂದರ್ಶನ ಸುರುವಾಗಲು ಕನಿಷ್ಟ ತಾಸಾದರೂ ಬೇಕಿತ್ತು. ಅಭ್ಯರ್ಥಿಣಿಯರೆಲ್ಲ ಭಾಗಿರಥಿಯನ್ನು ಮುತ್ತಿ ಯಾವೂರು ಏನ್ಕಥೆ ಎಂದು ಪ್ರಶ್ನಿಸಿದರು. ಸರಳವಾಗಿ ಉತ್ತರಿಸಿ, ಪರಮೇಶಿ ಅವರಿಗೆಲ್ಲ ಸುಲಭವಾಗಿ ಒಲಿದಳು. ಕನಕವಲ್ಲಿ, ವಿಜಯಲಕ್ಷ್ಮ, ಸುನೀತಾ, ಹಸೀನಾಬೇಗಂ, ಎಲಿಜಬೆತ್, ಎಲ್ಲಮ್ಮ ಮುಂತಾದ ಹಲವು ಕನ್ಯಾ(!)ಮಣಿಗಳು ಭಾಗೀರಥಿಗೆ ಗೆಳತಿಯರಾಗಿಬಿಟ್ಟರು.
ಭಾಗೀರಥಿ ಎಂಬ ಲಲನಾಮಣಿ ತನ್ನ ಗೆಳತಿಯಾದ ಸಂತೋಷಕ್ಕೆ ಸುನೀತಾ ಕಾಫಿ ಕೊಡಿಸಿದಳು…. ಕ್ಯಾಂಟಿನ್ನಿನಲ್ಲಿ. ಅಷ್ಟು ದೂರದಲ್ಲಿದ್ದ ಅಶ್ವಥ್ ಮರದಡಿ ಜ್ಯೋತಿಷಿಯೊಬ್ಬ ವಿರಾಜಮಾನನಾಗಿದ್ದ. ಅವನು ಪತಂಜಲಿ ಮಹರ್ಷಿಯ ಮೊಮ್ಮಗನಂತೆ ಕೋರೈಸಿದ್ದ. ಕಂಚಿನ ಕಂಠದಿಂದ ಕೂಗಿ ಕೂಗಿ ಕರೆಯುತ್ತಿದ್ದ. ಭಾಗೀರಥಿ ಎಲ್ಲರನ್ನು ಕರೆದುಕೊಂಡು ಅವನ ಬಳಿಗೆ ಹೋದಳು.
ಕನಕವಲ್ಲಿಗೆ ಮಕ್ಕಳ ಯೋಗವಿಲ್ಲ ಎಂದು ಜ್ಯೋತಿಷಿ ಹೇಳಿದ.
ಎಲಿಜಬತ್‌ಗೆ ಮದುವೆಯಾಗಿದಿದ್ದರೂ ಮಕ್ಕಳು ಖಂಡಿತ ಆಗುವುದಾಗಿ ಹೇಳಿದ.
ಎಲ್ಲಮ್ಮನಿಗೆ ಜೂಜುಕೋರ ಗಂಡು ಸಿಗುವುದಾಗಿ ಹೇಳಿದ.
ವಿಜಯಲಕ್ಷ್ಮ, ಸುನೀತಾ, ಬೇಗಂ ತಮ್ಮ ಭವಿಷ್ಯ ತಿಳಿಯಲು ಹೆದರಿದರು. ಅವರೆಲ್ಲರು ತನ್ನ ಭವಿಷ್ಯ ತಿಳಿಯುವಂತೆ ಒತ್ತಾಯಿಸಿದಾಗ ಭಾಗೀರಥಿ ಜ್ಯೋತಿಷಿ ಎದುರು ಕೈ ಚಾಚಿದಳು.
ಆ ಹಸ್ತ ಅವನ ಕಣ್ಣು ಕುಕ್ಕಿತು. ನೋಡುವ ನೆಪದಲ್ಲಿ ಅದನ್ನು ಮೃದುವಾಗಿ ಹಿಚುಗಿದ. “ಇದೊಂದು ಅಮೋಘ ಹಸ್ತ. ಇಂಥ ಹಸ್ತವನ್ನು ತಾನೆಂದೂ ನೋಡಿರಲಿಲ್ಲ ಎಂಬುದಾಗಿ ಹೊಗಳಲಾರಂಭಿಸಿದ. ಮಣಿಕಟ್ಟಿಗೆ ತುಸು ಮೇಲಿದ್ದ ವಕ್ರಾಕಾರದ ರೇಖೆ ತೋರಿಸಿ ಅದು ತ್ರೇತಾಯುಗದಲ್ಲಿ ಸೀತೆಗೂ; ದ್ವಾಪರಯುಗದಲ್ಲಿ ದ್ರೌಪದಿಗೂ; ಕಲಿಯುಗದಲ್ಲಿ ಅದು ಇರುವುದಾದರೆ ಭಾಗೀರಥಿಯ ಬೆಣ್ಣೆಯಂತಹ ಹಸ್ತದಲ್ಲಿ ಮಾತ್ರ”.
ಜ್ಯೋತಿಷಿಯ ಮಾತು ಕೇಳಿ ಪರಮೇಶಿಗೆ ನಗು ಬಂತು. ತನ್ನ ಗೆಳತಿಯರ ಕಡೆ ನೋಡಿ ಮುಗುಳ್ನಕ್ಕನು.
“ನನ್ನ ವಿವಾಹ…. ಮ್ಯಾರೇಜು ಎಂದಾಗುವುದು?” ತುಂಟತನ ಭಾಗೀರಥಿಯ ಧ್ವನಿಯಲ್ಲಿತ್ತು.
“ಅಮ್ಮಾ ನಿಮ್ಮ ಮದುವೆಯೇ ತಾಯಿ! ನಿಮ್ಮನ್ನು ಮದುವೆಯಾಗಲು ದೊಡ್ಡ ಶ್ರೀಮಂತರು ನಾಮುಂದು ತಾಮುಂದು ಅಂತ ಲೈನಾಗಿ ನಿಲ್ತಾರೆ” ಜ್ಯೋತಿಷಿ ಚಾಮುಂಡಿ ಫೋಟೋಕ್ಕೆ ಲೋಬಾನದ ಹೊಗೆ ಹಾಕಿ ಹೇಳಿದ.
“ನಿಮ್ಮ ಮದುವೆಗೆ ನಮ್ಮನ್ನು ಮರೀಬ್ಯಾಡ್ರಿ” ಗೆಳತಿಯರು ಕಿಚಾಯಿಸಿದರು.
“ತಪ್ಪದೆ!” ಭಾಗೀರಥಿ ಮುಗುಳ್ನಕ್ಕು ಜ್ಯೋತಿಷಿಗೆ ಮತ್ತೊಂದು ಪ್ರಶ್ನೆ ಕೇಳಿದಳು. “ನನಗೆ ಮಕ್ಳೆಷ್ಟು ಕಣ್ರೀ”.
ಜ್ಯೋತಿಷಿ ಮಂತ್ರಪಠಿಸಿ ಕವಡೆ ಹಾಕಿಸಿದ.
“ಅಮ್ಮಾ ನೀನು ಸಾಕ್ಷಾತ್ ಸಂತಾಲಕ್ಷ್ಮೀ ಕಣಮ್ಮಾ. ಹನ್ನೆರಡು ಗಂಡು ಹದಿನೇಳು ಹೆಣ್ಣು”.
“ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡ್ರೆ!” ಎಲಿಜಬತ್ ಚಿಟಿಕೆ ಹಾರಿಸಿದಳು.
“ಯಾವ ಆಪರೇಷನ್ನಿನಿಂದಲೂ ತಡೆಗಟ್ಟಲು ಸಾಧ್ಯವಿಲ್ಲ!”
“ನನ್ ವುಡ್‌ಬಿ ಗಂಡ ಆಪರೇಷನ್ ಮಾಡಿಸಿಕೊಂಡ್ರೆ” ಭಾಗೀರಥಿಯ ತುಂಟತನದ ಪ್ರಶ್ನೆ.
“ಬೇರೊಬ್ಬನ ಜೊಗೆ ಮಲಗಿ ಮಕ್ಳು ಪಡೆಯುವಿ ಕಣಮ್ಮಾ”.
ಜ್ಯೋತಿಷಿ ಕೊಟ್ಟ ಉತ್ತರದಿಂದ ಎಲ್ಲರೂ ನಗೆಗಡಲಿನಲ್ಲಿ ತೇಲಿಹೋದರು. ಭಾಗೀರಥಿಯನ್ನು ಮುತ್ತಿ ಗೆಳತಿಯರು ತಮಾಷೆ ಮಾಡಿದರು.
ಸಂದರ್ಶನ ಪ್ರಾರಂಭವಾಗಿತ್ತು.
ನಂಬರ್ ಕೂಗಿದಂತೆ ಒಬ್ಬೊಬ್ಬರಾಗಿ ಒಳಗೆ ಹೋಗಿಬಂದರು. ಜವಾನ ಬಾಗಿಲಬಳಿ ನಿಂತು “ಟ್ವೆಂಟಿಸಿಕ್ಸ್… ಭಾಗೀರಥಿ” ಎಂದೆರಡು ಬಾರಿ ಕೂಗಿದನು.
ಭಾಗೀರಥಿ ವ್ಯಾನಿಟಿ ಬ್ಯಾಗು ಮುಂಗೈಗಿಳಿಬಿಟ್ಟು ಸೀರೆ ನಿರಗಿ ಸರಿಪಡಿಸಿಕೊಂಡಳು(ನು). ಆಕೆಯ ಚಿನ್ನದ ನೊಸಲ ಮೇಲೆ ಮುಂಗುರುಳು ಕುಣಿಯುತ್ತಿತ್ತು. ಸಂದರ್ಶನದ ಕೋಣೆ ಕಡೆ ಹಂಸನಡೆಗೆ ಹಾಕಿದಳು.
ದೊಡ್ಡ ಟೇಬಲ್ ಸುತ್ತ ಕೂತಿದ್ದರು ಸರಕಾರಿ ಅಧಿಕಾರಿಗಳು.
ಕಾಳಿದಾಸನ ಕಾವ್ಯವೇ ಹೆಣ್ಣಿನ ರೂಪದಲ್ಲಿ ಒಳಬಂದಿತೇ?
ರವಿವರ್ಮನ ಚಿತ್ರಕ್ಕೆ ಜೀವ ಬಂದು ಭಾಗೀರಥಿಯಾಗಿರುವುದೇ?….
ಕಾವ್ಯರಸಿಕರಾಗಿದ್ದ ಅವರೆಲ್ಲ ಭಾಗೀರಥಿಯನ್ನು ತೀರಾ ಹತ್ತಿರದಿಂದ ಆಸ್ವಾದಿಸಿದರು. ಆಕೆ ತನ್ನ ಬ್ಲೌಜಿನ ಸ್ಪ್ರೇ ಮಾಡಿಕೊಂಡಿದ್ದ ಚಾಲಿ ಇಂಟಿಮೇಟ್ ಅವರೆಲ್ಲರ ಮೂಗು ತಲುಪಿ ತಳ ಬೆಚ್ಚಗೆ ಮಾಡಿತ್ತು.
“ಭಾಗೀರಥಿ ನಿಮ್ಮ ಸೈಜೇನು?” ಸೋಷಿಯಲ್ ವೆಲ್‌ಫೇರ್ ಆಫೀಸರ್ ಕೇಳಿದ.
“ಥರ್ಟಿಸಿಕ್ಸ…. ಟ್ವೆಂಟಿಸಿಕ್ಸ್…. ಫಾರ್ಟಿಸಿಕ್ಸ್” ಆಕೆಯ ಮಧುರ ಕಂಠ ಉಲಿಯಿತು.
“ಓಹ್ ಫೈನ್ ವೆರೆ ಫೈನ್!”
“ನೀವು ಆಫ್ಟರ್‌ಆಲ್ ಗ್ರಾಮಸೇವಿಕಾ ಕೆಲಸ ಸೇರಲು ಇಚ್ಛಿಸಿರುವುದಕ್ಕೆ ಕಾರಣಗಳೇನು?” ರಿಕ್ರೂಟ್‌ಮೆಂಟ್‌ಕಮೀಟಿ ಛೇರ್ಮನ್ ಪಶುಪತಿ ಕೇಳಿದ.
“ಜನಸೇವೆಯೇ ನನ್ನ ಬಾಳಿನ ಉಸಿರು. ಸರಕಾರದ ಸೇವೆ ಮಾಡಿ ಧನ್ಯಳಾಗಬೇಕೆಂದಿರುವೆನು”. ಭಾಗೀ ನಾಟಕೀಯವಾಗಿ ಹೇಳಿದಳು.
“ಓಹ್ ವಂಡರ್‌ಫುಲ್!”
“ಅದು ಸರಿ… ಹಳ್ಳಿ ಊರುಗಳಲ್ಲಿ ಜನ ನಿನ್ನ ಸೇವೆ ಮಾಡ್ತಾರಲ್ಲ ಅದ್ಕೇನಂತೀಯಮ್ಮಾ?” ವುಮೆನ್ಸ್ ಕಾಲೇಜು ಪ್ರಿನ್ಸಿಪಾಲ್ ಸಂತಾನಂ ಕೇಳದೆ ಇರಲಿಲ್ಲ.
“ಅವರನ್ನು ನಿಭಾಯಿಸುವ ಕಲೆ ನನ್ಗೆ ಚೆನ್ನಾಗಿ ಗೊತ್ತು ಸಾರ್”.
“ನಿಭಾಯಿಸುವಾಗ ಮುಂದಕ್ಕೆ ಬಂದ್ರೆ ಏನ್ಮಾಡ್ತೀಯಾ?”
“ಅಬಾರ್ಷನ್ ಮಾಡಿಸ್ಕೋತಾಳೆ” ಪಂಚತಂತ್ರದ ದುರ್ಗಸಿಂಹ ಹೇಳುತ್ತಲೆ ಎಲ್ಲರೂ ಗೊಳ್ಳನೆ ನಕ್ಕರು.
ಕಂದಾಯ ಸಚಿವರ ಸಂಬಂಧಿ ಆ ವಿವೇಕಾನಂದ ಕೆಮ್ಮಿ ವಾತಾವರನ ತಿಳಿಗೊಳಿಸಿದರು.
“ರವಿಯಾಕಾಶಕೆ ಭೂಷಣಂ, ರಜನಿಗೆ ಚಂದ್ರ ಭೂಷಣಂ, ಭಾಗೀರಥಿ ನಮ್ಮ ಕಂದಾಯ ಇಲಾಖೆಗೆ ಭೂಷಣಂ.”
ಎಲ್ಲರೂ ಗೊಳ್ಳೆಂದು ನಕ್ಕರು.
‘ಏಸಿ’ಯೆ ಅಕ್ಕಪಕ್ಕದವರೊಂದಿಗೆ ಪಿಸಿ ಪಿಸಿ ಮಾತಾಡಿ ತನ್ನ ನಿರ್ಧಾರ ಪ್ರಕಟಿಸಿದ.
“ಕಂಗ್ರಾಜ್ಯುಲೇಷನ್ ಭಾಗೀರಥಿ. ನಾವೆಲ್ಲ ಗ್ರಾಮಸೇವಿಕಾ ಹುದ್ದೆಗೆ ನಿನ್ನನ್ನು ಅಲಂಕರಿಸುವುದೆಂದು ತೀರ್ಮಾನಿಸಿದ್ದೇವೆ.”
“ಥ್ಯಾಂಕ್ಯೂ ಸಾರ್…. ಥ್ಯಾಂಕ್ಯು ಟು ಎವ್ವರಿ ಬಡಿ”.
“ಈಗ್ಲೆ ಅಪಾಯಿಂಟ್‌ಮೆಂಟ್ ಆರ್ಡರ್ ಕೊಟ್‌ಬಿಡ್ತೀವಿ. ನೀನು ಹುಷಾರಿಂದ ಕೆಲ್ಸ ಮಾಡಬೇಕಮ್ಮಾ ಹಳ್ಳಿಯೂರಲ್ಲಿ…. ಹಳ್ಳಿ ಊರುಗಳಲ್ಲಿ ಗಂಡಸರು ಎಂಥೆಂಥ ಪವಾಡ ಮಾಡಿಬಿಡ್ತಾರೆಂಬುದಕ್ಕೆ ಎಷ್ಟೋ ಎನ್ನೆವಲ್‌ಗಳೇ ಪ್ರತ್ಯಕ್ಷ ಸಾಕ್ಷಿ….”
“ಹಾಗೆ ಒಂದು ಮಾತು ನೆನಪಿಟ್ಕೊ ಭಾಗೀ” ದುರ್ಗಸಿಂಹ ಏಸಿಯ ಮಾತು ಅರ್ಧಕ್ಕೆ ಕಟ್ ಮಾಡಿ ಹೇಳಿದನು. “ನಾವೂ ಆಗಾಗ್ಗೆ ನಿನ್ನ ಕಾರ್ಯಕ್ಷೇತ್ರಕ್ಕೆ ಬೆಟ್ಟಿಕೊಟ್ಟು ನಿನ್ನ ಯೋಗಕ್ಷೇಮ ವಿಚಾರಿಸ್ತಿರ್‍ತೀವಿ. ನೀನೂ ಅಷ್ಟೆ, ನನ್ನಂಥೋರ ಕ್ಷೇಮದ ಕಡೆಗೆ ಗಮನ ಕೊಡ್ತಿರು…. ಅದೂ ಅಲ್ದೆ ನಾವೆಲ್ಲ ಒಂದೇ ಡಿಪಾರ್ಟ್‌ಮೆಂಟ್ನೋರು ಬೇರೇ, ನಮ್ ಮಧ್ಯೆ ಮ್ಯೂಚಿಯಲ್ ಅಂಡರ್‌ಸ್ಟ್ಯಾಂಡಿಂಗ್ಸ್ ಇರಬೇಕು”.
ತಮ್ಮಗಳ ಹೃದಯನಿವೇದನೆಯನ್ನೇ ದುರ್ಗಸಿಂಹ ಆಡಿದನೆಂದು ಸರ್ವರೂ ಭಾವಿಸಿದರು.
“ನನ್ನ ನಿಮ್ಮ ಹುಡುಗಿ ಅಂತ ತಿಳ್ಕೊಳ್ಳಿ” ಸೂಚ್ಯವಾಗಿ ನುಡಿದಳು(ನು) ಭಾಗೀರಥಿ.
ದುರ್ಗಸಿಂಹ ಆಕೆಯ ಕೈಗೆ ಅಪಾಯಿಂಟ್‌ಮೆಂಟ್ ಆರ್ಡರ್ ಇತ್ತು ಕೈಕುಲುಕಿ ರೋಮಾಂಚನಗೊಮಡ.
ತಾವೇನು ಕಡಿಮೆ ಅಂತ ಅಲ್ಲಿದ್ದ ಎಲ್ಲರೂ ಸುಕೋಮಲೆಯ ಕೈಕುಲುಕಿ ಸಂತೋಷಿಸಿದರು.
****
ಕೊಡ್ಲಿಗಿ ತಾಲೂಕಿನ ಬಿಟ್ಟುಬಂದ ಹಳ್ಳಿಗೆ ಮೂರು ಹೆಸರುಗಳುಂಟು. ಬಿಬಿಹಳ್ಳಿ; ಬಿಟ್ಟಹಳ್ಳಿ; ಬಂದಹಳ್ಳಿ ಹೀಗೆ…. ಸರಕಾರಿ ಕಡತದಲ್ಲಿ ದಾಖಲಾಗಿರುವುದು ಬಿಬಿಹಳ್ಳಿ ಅಂತ. ಬಿಬಿಹಳ್ಳಿ ಸಾಸಲವಾಡದಿಮದ ಮೂರು ಮೈಲಿ ದೂರದಲ್ಲಿದೆ. ಸರಕಾರಿ ಬಣ್ಣದ ಬಸ್ಸು ದಿನಕ್ಕೊಮ್ಮೆ ಬಂದು ಹೋಗ್ತವೆ.
ಆವತ್ತು ಬಿಬಿಹಳ್ಳೀಲಿ ಜನ ಒಂಟಿಗಾಲಿಲೆ ನಿಮತು ಎದುರು ನೋಡುತ್ತಿರುವರು.
‘ಹೊಸ ಗ್ರಾಮಸೇವಿಕಾ’ ಬರ್‍ತಾಳೆ ಎಂದು ಅವರೆಲ್ಲ ಅಂದುಕೊಳ್ಳುತ್ತಿರುವರು. ಊರ ಗೌಡ ಒಂಟೆಮಲ್ಲನಗೌಡ ಅಪರಿಚಿತಳಾದ ಗ್ರಾಮಸೇವಿಕೆಯನ್ನು ಎದುರ್‍ಗೊಂಡು ಆಕೆಗೆ ನಿವಾಸ ಕಲ್ಪಿಸಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರೆ ಅವನ ಏಕಮಾತ್ರ ಪುತ್ರನಾದ ವಾತಾಪಿ ಗಣೇಶ ಕರೆಗಲ್ಲಿನಾಚೆ ಬಸ್ಸು ತರುಬಲು ಕಾಯುತ್ತಿರುವನು.
ಅವತ್ತು ಬಸ್ಸು ಅರ್ಧಗಂಟೆ ಮೊದಲೇ ಬಂದಿತು. ಗಣೇಸ ಬಸ್ಸು ತರುಬಿ ಹೊಸ ಗ್ರಾಮ ಸೇವಿಕಾ ಯಾರಿರಬಹುದು ಅಂತ ಹುಡುಕಾಡಿದ. ಅವನು ‘ಅವು ಸಾಮಾನ್ಯವಾಗಿ ಸೆಕೆಂಡ್ ಹ್ಯಾಂಡಿರ್‍ತವೆ’ ಎಂದು ತಿಳಿದಿದ್ದ. ನವಿಲು ಬಣ್ಣದ ರೇಶಿಮೆಸೀರೆ ಉಟ್ಟಿದ್ದ; ಬಲೆಯೊಳಗೆ ತುರುಬು ಬಿಗಿದು ನಾಗರ ಇಟ್ಟಿದ್ದ; ದುಂಡುಮುಖದ ತೊಂಡೆ ಹಣ್ಣಿನಂಥ ತುಟಿಗಳ; ಬೊಗಸೆಗಂಗಳ; ಸೇಬುಹಣ್ಣಿನಂಥ ಗಲ್ಲಗಳ ಭಾಗೀರಥಿ ಅವನತ್ತ ತನ್ನ ದಾಳಿಂಬರದ ಹಲ್ಲುಗಳನ್ನು ಮಿನಿಗಿಸಿದಳೂ.
ಪ್ರಯಾಣಿಕರೆಲ್ಲ ಆಕೆ ಗ್ರಾಮಸೇವಿಕಾ ಅಂತ ಕೂಗಿ ಪ್ರಚುರಪಡಿಸಿದರು.
ಗಣೇಶ ಆಕೆಯ ಬಳಿಗೆ ಹೋಗಿ ಹಲ್ಲು ಗಿಂಜಿದ. ಬಸ್ಸು ಊರೊಳಗೆ ಹೋಗುವಾಗ ತನ್ನ ಪ್ರವರ ಹೇಳಿಕೊಂಡ. “ನಾನು ನಮ್ಮಪ್ಪಗೆ ಒಬ್ನೇ ಸನ್, ಇಡೀ ವಿಲೇಜ್ನಲ್ಲಿ ನಾವೊಂದೇ ರಿಚ್, ನನ್ದು ಎಸ್ಸೆಲ್ಸಿ ಕಂಪ್ಲೀಟಾಗಿದೆ. ಫಸ್ಟ್ ಊರ್‍ಗೆ ಯಾಗುದೇ ಆಫೀಸರ್ ಬರ್‍ಲಿ; ಸೀದಾ…. ನಮ್ಮನೇಲೆ ರೆಸ್ಟ್ತಗೊಳ್ಳೋದು….” ಇತ್ಯಾದಿ ಇತ್ಯಾದಿ.
ತನ್ನ ಸ್ವಸ್ಥಾನ ಸೇರಿದ ಬಸ್ಸನ್ನು ಮುತ್ತಲು ಗೌಡ ತಳವಾರರಿಗೆ ಆಜ್ಞಾಪಿಸಿದ. ಅವರೆಲ್ಲ ಯೋಚಿಸಿದ್ದಂತೆ ಸಿನಿಮಾನಟಿಯಂಥ ಚಿಗರೆಗಂಗಳ ಚೆಲುವೆಯೊಮದಿಗೆ ಸಣ್ಣಗೌಡ ಇಳಿದನು. ದೊಡ್ಡಗೌಡಗೆ ಸಿಟ್ಟು ಬಂತು. ದುರುಗುಟ್ಟಿ ಮಗನನ್ನು ಸಾಗು ಹಾಕಿ ತನ್ನನ್ನು ಭಾಗೀರಥಿಗೆ ಪರಿಚಯಿಸಿಕೊಂಡನು; ‘ಹೀಗ್ಹೀಗೆ’ ಅಂತ.
ತನ್ನ ಕಡೆಗೇ ನೋಡುತ್ತಿದ್ದ ಬಿಬಿಹಳ್ಳಿಯ ಜನರ ಕಡೆಗೆ ಬಣ್ಣದ ಚಾಳೇಸೊಳಗಿಂದ ನೋಡುತ್ತ ಇಪ್ಪತ್ತಂಕಣದ ಗೌಡನ ಮನೆಯನ್ನು ತಲುಪಿದಳು ಭಾಗೀರಥಿ. ಅವತ್ತಿನ ಆಕೆಯ ಎರಡು ಭೋಜನಕ್ಕೆ ತಂತಮ್ಮ ಹೆಂಡರನ್ನು ಬಿಡದೆ ತಂದೆ ಮಗ ಇಬ್ಬರೇ ಅಣಿಮಾಡಿದರು.
ಆಕೆಯ ವಾಸಕ್ಕೆಂದು ತಮ್ಮ ಮನೆಯ ಪಕ್ಕದಲ್ಲಿ ಮನೆಯನ್ನು ಬಿಟ್ಟುಕೊಟ್ಟ ಒಂಟಿಮಲ್ಲನಗೌಡ. ಯೋಗಾನುಯೋಗವೆಂದರೆ ಅದು ಹೊಚ್ಚ ಹೊಸಮನೆ, ಅದಕ್ಕೆ ಕಿಟಕಿಗಳಿರಲಿಲ್ಲ. ಮಾಡಿಗೆ ಕೇವಲ ಎರಡು ಗವಾಕ್ಷಿಗಳಿದ್ದವು.
ಅವು ಯಾವುವೂ ಇರದಿರುವುದೇ ಚಲೋ ಎಂದು ಒಂದು ಅರ್ಥದಲ್ಲಿ ಭಾಗೀರಥಿ ಅಲಿಯಾಸ್ ಪರಮೇಶಿ ಭಾವಿಸಿದರೆ…. ಒಂಟಿಮಲ್ಲನಗೌಡ ಬೇರೊಂದು ಅರ್ಥದಲ್ಲಿ ಪರಿಭಾವಿಸಿದನು.
ಅಲ್ಲಿ ಆಕೆಗೆ ಯಾವ ಕೊರತೆಯೂ ಇರಲಿಲ್ಲ. ಪರಸ್ಥಳ ಪ್ರಾಣಸಂಕಟ ಅಂತ ಅರ್ಥಮಾಡಿಕೊಂಡಿಎದ್ದ ಗೌಡ ಆಕೆ ಅಡಿಗೆಮಾಡಿಕೊಳ್ಳುವ ಗೋಜಿಗೆ ಹೋಗಲೇಬಾರದೆಂದು ಕಟ್ಟಾಜ್ಞೆ ವಿಧಿಸಿದ್ದನು. ಬೆಳಿಗ್ಗೆ ಒಂದೊಂದು ನಮೂನೆ ತಿಂಡಿ; ಗಂಜಿಯಂತಹ ಕಾಫಿ ಮಧ್ಯಾಹ್ನ ಮತ್ತು ರಾತ್ರಿ ರುಚಿಕರ ಊಟ; ಸಾಯಂಕಾಲ ಕುರುಕು ತಿಂಡಿ. ಆಕೆ ಮಲಗುವಾಗ ಬೆಳ್ಳಿ ಬಟ್ಟಲಲ್ಲಿ ಕೇಸರಿ ಕಲೆಸಿದ ಹಾಲನ್ನು ಖುದ್ದು ಹಾಜರಿದ್ದು ಕುಡಿಸಿ ಏಳಲಾರದ ಕಾಲುಗಳೊಂದಿಗೆ ಮರಳುತ್ತಿದ್ದ ಗೌಡ.
ತನ್ನ ಹಡೆದಪ್ಪ ಮರೆಯಾಗುತ್ತಿದ್ದಂತೆಯೇ ಆಜುಬಾಜಿನಲ್ಲಿ ಅವಿತುಕೊಂಡಿರುತ್ತಿದ್ದ ಗಣೇಶ ಪುದುಕ್ಕನೇ ಹೊರಬಂದು ‘ಏನ್ರೀ ಮೀಲ್ಸಾಯ್ತೇನ್ರಿ?’ ಎಂದು ಹಲ್ಲು ಪ್ರದರ್‍ಶಿಸುವನು.
ಪರಮೇಶಿ ಉರುಫ್ ಭಾಗೀರಥಿಗೆ ಇಂಥವರನ್ನು ಆಟ ಆಡಿಸುವುದೆಂದರೆ ಎಲ್ಲಿಲ್ಲದ ಸಂತೋಷ. ಅಲ್ಲದೆ ಆಕೆಯ ಕುಡಿನೋಟ ಕೂಡ ಅಷ್ಟೇ ಪವರಫುಲ್ಲಾಗಿರುವುದು!
ತಂದೆಯ ಗೈರುಹಾಜರಿಯಲ್ಲಿ ಮಗನನ್ನು ತನ್ನ ಕಣ್ಣು ಕುಣಿಕೆಯಲ್ಲಿಟ್ಟು ಬೀಸುವಳು ಕನಸುಲೋಕದ ಕಡೆಗೆ.
ಮಗನ ಗೈರು ಹಾಜರಿಯಲ್ಲಿ ತಂದೆಯನ್ನು ಕೊಂಕು ನೋಟದ ತುದಿಗೆ ಸಿಕ್ಕಿಸಿ ಮೆಡಿಟೇರಿಯನ್ ಸಮುದ್ರಕ್ಕೆ ಅದ್ದಿ ಬಿಡುವಳು.
ಹೀಗೆ ಮಾಡಿದಾಗ ಅವರಿಗೆ ಹೇಗಾಗದಿರದು!
ಅವರಿಬ್ಬರ ಹೃದಯವೆಂಬ ಕ್ರೌಂಚ ಮನ್ಮಥನ ಬಾಣಕ್ಕೆ ಸಿಕ್ಕಿ ಪದೆಪದೆ ಘಾಸಿಗೊಳ್ಳತೊಡಗಿತು. ಅವರಿಗೆ ಮೃಷ್ಟಾನ್ನ ಕೂಡ ರುಚಿಸದಾಯಿತು. ಹೊಳೆನೀರು ಕಹಿ ಎನಿಸಿತು. ಬೆಳದಿಂಗಳು ಬಿರುಬಿಸಿಲೆನಿಸಿತು. ಅವರಿಗೆ ಅವರವರ ಹೆಂಡಂದಿರು ರುಚಿಸಲಿಲ್ಲ. ಅವರ ಸ್ಪರ್ಶವಾಯಿತಂದರೆ ಬೆಚ್ಚುವರು; ಬೆದರುವರು.
ಮಾನವ ಪ್ರಯತ್ನಕ್ಕೆ ಪೂರಕವಾಗಿ ದೈವ ಸಹಾಯ ಕೂಡ ಬೇಕು ತಾನೆ; ಗೌಡ ದೇವರಗುಡ್ಡದ ಮಲ್ಲಯ್ಯನ ಫೋಟೋಕ್ಕೆ ಎರಡು ಅಗರ್‌ಬತ್ತಿ ಸಿಕ್ಕಿಸಿ “ದೇವ್ರೆ ಗ್ರಾಮಸೇವಕಮ್ಮಳನ್ನು ತನ್ನ ವಶಳಾಗಿ ಮಾಡಿದಿರಯಾದರೆ ನಿನ್ಗೆ ದಿಂಡುರುಳಿಕೆ ಸೇವೆ ಸಲ್ಲಿಸ್ತೀನಿ” ಎಂದು ಬೇಡಿಕೊಮಡ.
ಆತನ ಮಗ ಕೂಡ ಮಹಾದೈವಭಕ್ತ. ಆತನ ಇಷ್ಟ ದೇವರೆಂದರೆ ನೇಮಕಲ್ಲು ನೆಟ್ಟ ಕಂಡಿಸ್ವಾಮಿ. “ಭಾಗೀರಥಿ ಜೊತೆ ಒಂದು ಛಾನ್ಸ್ ಕೊಡಿಸಿದಿರಾದರೆ ನಿಮ್ಮ ಸನ್ನಿಧೀಲಿ ಮಂಡೆ ಬೋಳಿಸ್ಕೊಂಡು ಕುಂಕುಂಮಾರ್ಚನೆ ಮಾಡಿಸ್ತೀನಿ” ಹೀಗೆಮೂದ ಬೇಡಿಕೊಂಡ.
ಒಬ್ಬರ ವಾಸನೆ ಇನ್ನೊಬ್ಬರಿಗೆ ಹತ್ತದಿರಲು ಹೇಗೆ ಸಾಧ್ಯ?
ತಂದೆಗೆ ಮಗನ ಮೇಲೆ ಅನುಮಾನ ಬಂತು.
ಮಗ ತಂದೆಯ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ‘ಎಲಾ ಮುದಿಯಾ’ ಎಂದು ಹಲ್ಲು ಕಡಿದ. ಮಗ ಅಂದುಕೊಂಡಂತೆ ಒಂಟೆಮಲ್ಲನಗೌಡ ಎಲ್ಲಾ ವಿಷಯಗಳಲ್ಲಿ ಮುದಿಯ ಆಗಿರಲಿಲ್ಲ. ದೇಹಕ್ಕೆ ಮುಪ್ಪು ಧಾವಿಸಿತ್ತೇ ಹೊರತು ಆತನ ಮನಸ್ಸಿಗಲ್ಲ. ಆತನ ಮನಸ್ಸೆಂಬುದು ಹಳೆಯ ಹುಣಸೆಮರದಂತೆ ಹುಳಿತುಂಬಿಕೊಂಡು ಚೇತೋಹಾರಿಯಾಗಿತ್ತು. ಭಾಗೀರಥಿ ಕೇವಲ ತನ್ನ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಆಕೆ ವಾಸಿಸುತ್ತಿರುವುದು ತನ್ನ ಹೃದಯಲದಲ್‌ಇ. ಹಾಗೂ ಹೀಗೂ ಅಹರ್ನಿಶಿ ಶ್ರಮಿಸಿ ಪರಸ್ಪರ ಏಕ ವಚನದಲ್ಲಿ ಸಂಬೋಧಿಸುವಷ್ಟರಮಟ್ಟಿಗೆ ಸಲಿಗೆ ಸಾಧಿಸಿದ್ದನಾತ. ಏಕಾಂತ ಕಾದಿದ್ದು “ಬಾಗೂ” ಅನ್ತಿದ್ದ… ಆಕೆಯಾದರೋ ತೀರಾ ಹತ್ತಿರ ಸುಳಿದು “ಮಲ್ಲೂ” ಅನ್ತಿದ್ದಳು. ಆಕೆ ಮುಖಕ್ಕೆ ಹಚ್ಚಿಕೊಂಡಿರುತ್ತಿದ್ದ ಸುಗಂಧ ದ್ರವ್ಯಗಳು ಘಮ್ಮಂತ ಮೂಗಿಗೆ ತಕುತ್ತಲೆ ಇಡೀ ದೇಹವೆಂಬೋ ದೇಹದ ತುಂಬಿ ಬಿಸಿನೀರಿನ ನದಿ ಭೋರ್ಗರೆದು ಬಿಡುವುದು.
“ಬಾಗೂ” ಗೌಡ ತನ್ನ ಮುದ್ದಾದ ಬಾಯಿ ತೆರೆದೇಬಿಟ್ಟ.
“ಮಲ್ಲೂ” ಆಕೆಯ ಉಸಿರು ಅವನಿಗೆ ಸೋಂಕಿತು.
“ನಾನು ನನ್ನ ಹೃದಯದಲ್ಲಿಟ್ಟು ನಿನ್ನ ಪೂಜೆ ಮಾಡ್ತೀನಿ”
“ಮಾಡು ಬೇಡೆಂದವರಾರು?”
“ಮಲಗೋಬದಂತೆ ಘಮಾಡಿಸುತ್ತಿರು ಈ ನಿನ್ನ ಕೋಮಲ ದೇಹವನ್ನು ಒಮ್ಮೆ ಸವಿಯುವ ಅವಕಾಶ ಕೊಡು”, ದೀನನಾಗಿ ಮಂಡೆಗಾಲೂರಿ ಪ್ರಾರ್ಥಿಸಿದ ಗೌಡ.
ಆಕೆ ಅದಕ್ಕೆ ಮುಗುಳ್ನಕ್ಕಳು. “ಈ ನಶ್ವರವಾದ ದೇಹದ ಮೇಲೆ ಅದೇನು ಮೋಜು ಮಲ್ಲೂ”.
ಆತ ಉಗುಳು ನುಂಗಿದ, ಆತನ ಗಂಟಲು ಕ್ರಿಯಾ ಶೂನ್ಯವಾಯಿತು.
ಆತನ ಕಂಕಟ ನೋಡಲಾರದೆ ಭಾಗೀರಥಿ ತನ್ನ ದೇಹದಲ್ಲಿ ಎರಡು ಕೈಗಳಿಗೆ ಮಾತ್ರ ರಿಯಾಯಿತಿ ಕೊಟ್ಟಳು. ಅದೇ ‘ಲಕ್ಕೂ’ ಅಂತ ಗೌಡ ಆಕೆಯ ಎರಡು ಕೈಗಳನ್ನು ಸ್ಪರ್ಶಿಸುತ್ತಲೆ ರೋಮಾಂಚನಗೊಮಡ. ಆಕೆಯ ಎಡ ಅಂಗೈಯನ್ನು ಚುಂಬಿಸಿದ. ಬಂಗಾರ ಬಣ್ಣದ ಆ ಹಸ್ತ ಸಜೀವದಿಂದ ಕಂಡಿಸಿದಂತಾಯಿತು. ಮಣಿಕಟ್ಟಿಗೆ ತುಸು ಮೇಲಿದ್ದ ರೇಖೆ ಬಗ್ಗೆ ಕೇಳಿದ.
ಆಕೆ ಹೇಳಿದಳು “ಅದು ಅಮೃತರೇಖೆ” ಅಂತ. ಅಂಥ ರೇಖೆ ಈ ದೇಶದಲ್ಲಿ ತನಗೆ ಮಾತ್ರ ಇರುವುದಾಗಿ ಹೇಳಿದಳು.
ಅಂಥ ಸುಂದರಿ ಹೇಳಿದ ಮೇಲೆ ನಂಬದೆ ಇರಲು ಸಾಧ್ಯವೇ? ನಂಬಿದ. ಆತ ಎಲ್ಲಿಗೇ ಹೋಗಿರಲಿ; ಏನೇ ಮಾಡುತ್ತಿರಲಿ…. ಗ್ರಾಮಸೇವಿಕೆ ಭಾಗೀರಥಿಯ ಹಸ್ತದಲ್ಲಿ ಅಮೃತರೇಖೆಯ ಸಂಗತಿಯನ್ನು ಬಿತ್ತುವನು.
ಅದನ್ನು ಕೇಳಿದ ಜನರು “ಆಹ್ಹಾ! ಹೌದಾ ಅಂಥ ಮಹಿಮಳು ಇರುವು ನಮ್ಮೂರು ನಿಜಕ್ಕೂ ಪುಣ್ಯ ಮಾಡಿದೆ” ಎಂದು ಮಾತಾಡಿಕೊಳ್ಳುವರು. ಗ್ರಾಮಸೇವಿಕೆ ಎಂದರೆ ದೇವರ ಕೋಣೆಯಲ್ಲಿ ಅಡಗಿ ಕೂಡ್ರುವುದಲ್ಲ. ಆಕೆ ಸರಕಾರಿ ಸೇವೆಗೆಂದು ಊರೊಳಗೆ ಬಂದಾಗ ಕೆಲವರು ಆಕೆಯ ಹಸ್ತದ ಅಮೃತರೇಖೆಯ ದರ್ಶನವನ್ನು ಪಡೆದುಕೊಳ್ಳುವರು.
ಕೋಮಟಿಗರ ತಿಮ್ಮಯ್ಯ ಶೆಟ್ಟಿಯಂತೂ ಆಕೆಯ ಹಸ್ತಕ್ಕೆ ಬಲವಂತ ಪೂಜೆ ಸಲ್ಲಿಸಿ ತಮ್ಮ ಮನೆಯ ಪ್ರತಿಯೊಂದು ವಸ್ತುವನ್ನು ಸ್ಪರ್ಶಿಸಿ ಹರಸುವಂತೆ ಬೇಡಿಕೊಂಡ. ಸರಿ, ಆಕೆ ಮುಗುಳ್ನಕ್ಕು ಆತ ತೋರಿಸಿದ ಪ್ರತಿಯೊಂದು ವಸ್ತುವನ್ನು ಸ್ಪರ್ಶಿಸಿ ವೃದ್ಧಿಯಾಗಲೆಂದು ಹರಸಿದಳು. ಶೆಟ್ಟಿಯ ಹೆಂಡತಿ ಖಿನ್ನಳಾಗಿ ಭಾಗೀರಥಿ ಎದುರು ನಿಂತುಕೊಂಡಳು. ಮದುವೆಯಾಗಿ ಹತ್ತು ಹರ್ಷವಾದರೂ ತಮಗೆ ಮಕ್ಕಳಾಗಿಲ್ಲವೆಂದು ವಿವರಿಸಿ ಹೇಳಿದಳು. ಅದೇನಾದರೂ ಮಿಸ್ಟೀಕು ಇದ್ದರೆ ಅದು ತಮ್ಮ ಯಜಮಾನರಲ್ಲಿ, ಅದರೆಇಂದ ಅವರ ಆ ಒಂದು ವಸ್ತುವನ್ನು ಸ್ಪರ್ಶಿಸಿ ಸಂತಾನವನ್ನು ದಯಪಾಲಿಸಬೇಕೆಂದು ಕೋರಿದಳು ಸತೀಮಣಿ.
ಅದನ್ನು ಕೇಳಿಸಿಕೊಂಡ ತಿಮ್ಮಯ್ಯಶೆಟ್ಟಿ ಆನಂದದಿಂದ ಉಬ್ಬಿಹೋದ. ಇದಕ್ಕಿಂತ ಅದೃಷ್ಟ ಬೇರೆ ಏನಿದೆ? ಭಾಗೀರಥಿ ಓರೆಗಣ್ಣಿನಿಂದ ಶೆಟ್ಟಿಯ ಕಡೆ ನೋಡಿದಳು. ಆತ ಬೆವೆಯತೊಡಗಿದ. ಅವನ ಕಣ್ಣುಗಳು “ಕಮಾನ್ ಕಮಾನ್” ಎನ್ನುತ್ತಿದ್ದವು. ಒಮ್ಮೆ ಆಕೆ ಹುಬ್ಬು ಹಾರಿಸುತ್ತಲೆ ಅವನ ತಳ ಠಿಸ್ ಅಂತ ಸದ್ದು ಮಾಡಿತು. ಆಶೀರ್ವಾದ ಮಡಿದಂತೆಯೇ ಲೆಕ್ಕ ಎಂದು ಸಕಲ ಗೌರವದೊಡನೆ ವಾಪಸಾದಳು. ವಾಪಸಾದ ಭಾಗೀರಥಿಯೊಳಗಿವ ಪರಮೇಶಿ ಸಮಾಜದ ಬಗ್ಗೆ ಯೋಚಿಸಿ ನಗುವನು.
ಒಂಟಿ ಮಲ್ಲನಗೌಡ ಸ್ಪಲ್ಪ ಏಜ್ಡ್ ಎಂದಿಟ್ಟುಕೊಂಡರೆ ಆತನ ಮಗ ಯಂಗ್ ಅಂದ್ರೆ ಹೇಗಿರಬೇಟ. ಆತ ಸದಾ ಛಾರ್ಜ್ ಆಡ ತನ್ನ ಬ್ಯಾಟರಿಯೊಂದಿಗೆ ಭಾಗೀರಥಿಯ ಆಜುಬಾಜು ಸುತ್ತುವನು. “ಒಂದೇ ಒಂದು ಛಾನ್ಸು ಕೊಡು” ಎಂದು ಪರಿಪರಿಯಾಗಿ ಬೇಡಿಕೊಳ್ಳುವನು. ಅದಕ್ಕೆ ಆಕೆ(ತ)ಯ ಹೃದಯ ಕರಗಿತು. ತನ್ನ ಕಾಲುಗಳನ್ನು ಮೊಣಕಾಲುಚಿಪ್ಪಿನವರೆಗೆ ಎಂಜಾಯ್ ಮಾಡಲು ಅವಕಾಶ ದಯಪಾಲಿಸಿದಳು. ಈ ಇಷ್ಟು ಸೇವೆ ಸಲ್ಲಿಸುತ್ತಿದ್ದರೆ ಮುಂದೊಂದು ದಿನ ಪ್ರಮೋಷನ್ ಸಿಕ್ಕೀತೆಂದು ಭಾವಿಸಿ ಕ್ರಿಯಾಶೀಲನಾದನು. ಒಂದು ದಿನ ಗಜ್ಜೆ ಕಾಲ್‌ಚೈನು ತಂದು ಹಾಕಿದನು. ಮರುದಿನ ಅವನು ತಂದದ್ದು ಹರಳಿನ ಬೆಂಡೋಲೆಗಳು.
“ಓಹೋ. ಮಗನು ತನ್ನ ಮನದನ್ನೆಗೆ ಮನಸೋತಿರುವುನು”. ಗೌಡ ಗ್ರಾಮ ಸೇವಿಕೆಯ ಹೃದಯಕ್ಕೇ ನೇರವಾಗಿ ಧಾಳಿ ನಡೆಸಲು ಯೋಚಿಸಿದನಾದರೂ ದೈರ್ಯಸಾಲಲಿಲ್ಲ. ತನ್ನ ಹೆಂಡತಿ ಬಚ್ಚಲಿಗಿಳಿದಿದ್ದಾಗ ಬಿಚ್ಚಿ ಗೂಡಿನಲ್ಲಿರಿಸಿದ್ದ ಮಾವಿನಕಾಯಿ ಸರವನ್ನು ಚಾಣಾಕ್ಷತನದಿಂದ ಲಪಟಾಯಿಸಿ ಮುಗಿಲ ಮಲ್ಲಿಗೆಯ ಕೊರಳೇರಿಸಿದನು. ಅವತ್ತು ಮುಟ್ಟಿನ ನೆಪವೊಡ್ಡಿ ಕ್ಲೈಮಾಕ್ಸ್ ತಪ್ಪಿಸಿಕೊಂಡ ಭಾಗೀರಥಿ ಸುಮ್ಮನೆ ಕೂಡ್ರಲಿಲ್ಲ.
ಅವರವರ ಧರ್ಮ ಪತ್ನಿಯರನನ್‌ಉ ಅವರ ತವರಿಗೋಡಿಸಿ ಸುಂದೋಪಸುಂದರನ್ನು ಕೈಗೊಂಬಗೆಗಳಾಗಿ ಮಾಡಿ ಕುಣಿಸಬೇಕೆಂದು ಪಿಲಾನು ಹಾಕಿದಳು. ತಂದೆ ಮಗ ಕಳವುಮಾಡಿ ತಂದಿತ್ತ ಆಭರಣ ವಸ್ತ್ರಾದಿಗಳನ್ನು ಮೈತುಂಬ ಅಲಂಕರಿಸಿ ಧರ್ಮಪತ್ನಿಯರೆದುರಿಗೆ ಸುಳಿದಾಡಿ ಅವರೆದೆಗೆ ಕಿಚ್ಚಿಟ್ಟಳು. ಅವರು ಎಲಾ ಚಿನಾಲಿ ಅಂತ ಹಲ್ಲು ಕಡಿದರು. ಗೌಡ್ತಿಗೆ ಕಾಣಿಸುವಂತೆ ಮಲ್ಲನಗೌಡನ ಗಬರುಮೀಸೆಯಲ್ಲಿ ತನ್ನ ಬೆರಳಿನಿಮದ ತುಂಟಾಟ ನೆಡಸಿದಳು. ಹೆಂಡತಿ ಕುಸುಮಾಳೆದುರಿಗೆ ಗಣೇಶನ ದೇಹವನ್ನು ತನ್ನ ಬಾಹುಗಳಿಂದ ಬಂಧಿಸಿ ಕ್ರಾಂತಿ ಮಾಡಿದಳು. ಅಂದಿನವರೆಗೆ ಕೇವಲ ಗೃಹಕಲಹವಾಗಿದ್ದುದು ಈಗ ಗೃಹಯುದ್ಧವಾಗಿ ಮಾರ್ಪಾಡಾಯಿತು.
ಅವತ್ತು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿತುಕೊಂಡ ಅತ್ತೆ ಸೊಸೆಯರಿಬ್ಬರೂ ಮನೆಯಲ್ಲಿ ಒಂಟಿ ಸಿಃಇಣಿಯಂತಿದ್ದ ಭಾಗೀರಥಿ ಮೇಲೆ “ಬಾರಲೇ… ತುರುಬು ಕಿತ್ತು ಕೈಗೆ ಕೊಡ್ತೀವಿ” ಹರಿಹಾಯ್ದರು.
ಆಕೆ ಮುಗುಳ್ನಕ್ಕಳು. ಓ…ನನ್ನ ಅಕ್ಕಂದಿರಾ ಇದೇ ಪ್ರಶ್ನೆಯನ್ನು ನಿಮ್ಮ ನಿಮ್ಮ ಗಂಡಂದಿರಿಗೆ ಕೇಳಿದರೆ ಎಂದು ಒಂದೇ ಒಂದು ವಾಕ್ಯ ನುಡಿದು ತನ್ನ ವಿಶ್ರಾಂತಿ ಕೋಣೆ ಪ್ರವೇಶಿಸಿ ಭಾಗೀರಥಿ ಉಡುಪು ಬಿಚ್ಚಿಟ್ಟು ಪರಮೇಶಿಯಾಗಿ ನಿದ್ದೆ ಹೋದನು. ಆದರೆ ಅವನ ಆರನೆಯ ಇಂದ್ರಿಯ ಮಾತ್ರ ಎಚ್ಚರವಾಗಿತ್ತು.
ಆಗಾಗಲೇ ಸಮಪಾಲು ಸಮಬಾಳು ಅಂತ ಒಳಗೊಳಗೇ ರಾಜಿಯಾಗಿದ್ದ ತಂದೆ ಮಗ ಮನೆ ಪ್ರವೇಶಿಸುತ್ತಲೆ ತಮ್ಮ ಧರ್ಮಪತ್ನಿಯರಿಂದ ಧಾಳಿಗೀಡಾದರು ಈ ಮನೇಲಿ “ಆ ಕತ್ತೆ ಸೂಳೆ ಇರಬೇಕೊಂದು…. ಇಲ್ಲಾ ನಾವಿರಬೇಕೊಂದು” ಅಂತ, ಇದಕ್ಕೆ ಅವರು ಎದೆಗುಂದಲಿಲ್ಲ.
ತಂದೆಯ ಪರವಾಗಿ ಮಗನೇ ಹೇಳಿದ…. “ಅಮೃತರೇಖೆಯನ್ನು ಹಸ್ತದಲ್ಲಿಟ್ಟುಕೊಂಡಿರುವ ಆ ತಿಲೋತ್ತಮೆ ಬಗ್ಗೆ ತುಟಿ ಬೆರಡು ಮಾಡಿದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ. ನೋಡಿಯೂ ನೋಡದವರಂತೆ; ಕೇಳಿಯೂ ಕೇಳದವರಂತೆ; ಮಾತಾಡಲಿಕ್ಕೆ ಅರಿಯದವರಂತೆ… ಇನ್ನೂ ಮೂರು ಹೊತ್ತು ಚುತ್ತಿ ಊಟ ಮಾಡಿಕೊಂಡು ತೆಪ್ಪಗೆ ಇರುವುದಾದರೆ ಇರ್‍ರಿ… ಇಲ್ಲಾಂದ್ರೆ ಕೂಡಲೆ ನಿಮ್ಮ ನಿಮ್ಮ ತವರು ಮನೆಗಳಿಗೆ ತಿರುಗಿ”.
ಆದರೆ ಅವರು ಹೇಗೆ ಇದ್ದಾರು! ಅವತ್ತೆ ಗಂಟು ಮೂಟೆ ಕಟ್ಟಿಕೊಂಡು ತಂತಮ್ಮ ತವರೂರುಗಳಿಗೆ ಟಿಕೀಟು ತೆಗೆಸಿಕೊಂಡರು.
ಓಹ್ ಇನ್ನು ತಮ್ಮ ಮೆನ ತಣ್ಣಗಾಯಿತು! ಗ್ರಾಮಸೇವಿಕೆ ಭಾಗೀರಥಿಯೆ ಇನ್ನು ಮುಂದೆ ತಮ್ಮಿಬ್ಬರ ಮೆನಗಳಿಗೆ ಹಾಗೂ ಹೃದಯಗಳಿಗೆ ಅಧಿಕೃತ ವಾರಸುದಾರಳೆಂದು ಘೋಷಿಸಿಬಿಟ್ಟರು.
****
ಭಾಗೀರಥಿ ಕೂಡ್ಲಿಗಿ ಫಿರ್ಕಾದ ಜನರಿಗೆ ಹೇಗೆ ಪರಿಚಯವಾದಳೆಂದರೆ….
ಆಕೆಯ ಕೈಯಲ್ಲಿದ್ದ(?) ಅಮೃತರೇಖೆ ದೊಡ್ಡ ಪವಾಡವನ್ನೇ ಮಾಡಿತು. ಮಗುವಿಗೆ ಹಾಲು ಸಾಲದೆಂದು ಬಾಣಂತಿಯರ ಮೊಲೆಗಳನ್ನು ಮುಟ್ಟಿದಳು. ಅಲ್ಲೆಲ್ಲ ಹಾಲು ಉಕ್ಕಿ ಉಕ್ಕಿ ಬಂತು. ಗೊಡ್ಡು ಬಿದ್ದು ಖ್ಯಾತನಾಗಿದ್ದ ಕೋಮಟಿಗರ ತಿಮ್ಮಯ್ಯ ಶಟ್ಟಿಯ ಮರ್ಮಾಂಗವನ್ನು ಕೇವಲ ಕಣ್ಣಿಂದಲೇ ಸ್ಪರ್ಶಿಸಿದ್ದಳಲ್ಲ…..? ಈ ಪರಿಣಾಮವಾಗಿ ಆತನ ಹೆಂಡತಿ ರಿಂದಮ್ಮ ಆರು ತಿಂಗಳ ಗರ್ಭಿಣಿ. ಇದು ಸುತ್ತಾ ನಾಲ್ಕಡೆ ಪ್ರಸಿದ್ಧಿಗೊಂಡು ಹತ್ತಾರು ಬರಡುಗಳು “ಸ್ಪರ್ಶದ ಆಶೀರ್ವಾದಕ್ಕಾಗಿ ನಂದು ಸ್ಪರ್ಶಿಸಿ…. ನನ್ನದು ಸ್ಪರ್ಶಿಸಿ” ಅಂತ ಸಾಲು ಗಟ್ಟಿ ನಿಂತರು. ಅವರದನ್ನೆಲ್ಲ ಕಣ್ಣಿಂದ ಸ್ಪರ್ಶಿಸಿ ಕಳಿಸಿದಳು ಕರುಣಾಮಯ ಭಾಗೀರಥಿ. ಅವರ ಹೆಂಡಂದಿರ ಮುಟಟು ನಿಂತಿದೆ ಎಂದು ಸುದ್ದಿ ಹರಡಿದೆ.
ಅನೇಕ ಕಾರಣಗಳಿಗಾಗಿ ಭಾಗೀರಥಿಯನ್ನು ತಂತಂಮ ಮೆನಗೆ ಕರೆದೊಯ್ದವರ ಪೈಕಿ ಖ್ಯಾತರೆಂದರೆ ಬಿಡಿಓ ಬಡೇಸಾಬು; ತಾಶೀಲ್ದಾರು ಜಯಣ್ಣ; ಏಇ ರಾಜಶೇಖರಪ್ಪ ಮುಂತಾದವರು. ಇವರೆಲ್ಲ ಏಸಿ, ಡಿಸಿಗಳ ಕಿವಿ ಚುಚ್ಚಿರುವರು. ಅವರೆಲ್ಲ ಬಿಬಿಹಳ್ಳಿಗೆ ಭೆಟ್ಟಿ ಕೊಡಬೇಕೆಂದು ಡೈರಿಯಲ್ಲಿ ಬರೆದುಕೊಂಡಿರುವರು.
ಪವಾಡಪುರುಷಿ ಎಂದಷ್ಟೇ ಅಲ್ಲ, ಭಾಗೀರಥಿ ತಾನೊಬ್ಬ ಉತ್ತಮ ಹಾಡುಗಾರ್ತಿ ಎಂದು ಅನೇಕ ಸಭೆ-ಸಮಾರಂಭಗಳಲ್ಲಿ ತನ್ನ ಸುಮಧುರ ಕಂಠ ಪ್ರದಶಿðಸಿ ಸಾವಿರಾರು ಕಿವಿಗಳಿಗೆ ಷರಬತ್ತು ಕುಡಿಸಿದಳು.
ತಾನು ಕೇವಲ ಒಳ್ಳೆ ಗಾರಯಕಿಯಷ್ಟೇ ಅಲ್ಲ…. ತಾನೊಬ್ಬ ಉತ್ತಮ ನೃತ್ಯಗಾರ್ತಿ ಎಂದು ಅನೇಕ ಸಭೆ ಸಮಾರಂಭಗಳಲ್ಲಿ ತನ್ನ ಸುಮಧುರ ಕಂಠದ ಜೊತೆಗೆ ಭರತನಾಟ್ಯ ಮಾಡಿ ಸಾವಿರಾರು ಕಣ್ಣುಗಳಿಗೆ ವ್ಹಿಸ್ಕಿ ಎರೆದಳು.
ಹೀಗಾಗಿ ಭಾಗೀರಥಿ ಏನು ತಾನೆ ಅಲ್ಲ…. ಎಲ್ಲ ಹೌದು! ತಾನು ಅರವತ್ನಾಲ್ಕು ಕಲೆಗಳಲ್ಲಿ ಪಾರಂಗತಳೆಂದು ಸಾಬೀತುಪಡಿಸಲು ಅನೇಕ ಮುಖ್ಯ ಸಭೆ ಸಮಾರಂಭಗಳನ್ನು ಸದುಪಯೋಗಪಡಿಸಿಕೊಂಡಳು. ಇಂಥವಳು ತಮ್ಮ ಹೃದಯಗಳಲ್ಲಿ ಇಟ್ಟಿರುವ ಹೆಜ್ಜೆಗಳು ಎಷ್ಟು ರೋಮಾಂಚಕಾರಿ… ಎಷ್ಟು ಹಿತಕರ…. ಒಂಟಿಮಲ್ಲನಗೌಡನ ಮತ್ತವನ ಮಗ ಗಣೇಶ ಆಕೆಯ ಸೇವೆಯನ್ನು ಶ್ರದ್ಧಾಪೂವಕ ಮಾಡುವರು. ಆಕೆಗೆ ಕಿಂಚಿತ್ತು ಕೊರತೆಯಾಗದಂತೆ ನೊಡಿಕೊಳ್ಳುವರು.
ತಮಗೆ ಇವತ್ತು ಪ್ರಮೋಷನ್ ಸಿಕ್ಕೀತು; ನಾಳೆ ಸಿಕ್ಕೀತು ಎಂದು ಅವರು ಕನಸು ಕಾಣುತ್ತಿರುವರು. ಆಕೆಯನ್ನು ತಮ್ಮ ಮೆನಗೆ ಕರೆದೊಯ್ದು ಆತಿಥ್ಯ ಕೊಟ್ಟಂಥ ಸರಕಾರಿ ಹಿರಿಯ ಅಧಿಕಾರಿ ಅದೆಲ್ಲಿ ರಿಬ್ಬನ್ ಕಟ್ ಮಾಡಿರುವರೋ ಅಂತ ಅವರಿಬ್ಬರು ಕೆಲವೊಮ್ಮೆ ಆತಂಕ ಪಟ್ಟಿದದುಂಟು. ಆದರೆ ಅದು ಎಷ್ಟು ಕಾಲ?
ದಿನಗಳುರುಳಿದವು.
ಗಿಂಗಳುರುಳಿದವು.
ವರ್ಷವೂ ಉರುಳದವು ಒಂದೆರಡು.
ತಂದಡ ಒಂಟೆ ಮಲ್ಲನಗೌಡಗೆ ಕೈಗಳಿಂದ ಆಚೆಗೆ ಪ್ರಮೋಷನ್ ಸಿಕ್ಕಿರಲಿಲ್ಲ, ಮಗ ಗಣೇಶ ಮೊಣಕಾಲಿನಿಂದಾಚೆ ದಾಟಿರಲಿಲ್ಲ. ಆದರೂ ಅವರಿಬ್ಬರೂ ಆಕೆ(ತ)ಯ ವ್ಯಕ್ತಿತ್ವ ಅಲ್ಲಾಡಿ ಹೋಗಿದ್ದರು. ಭಾಗೀರಥಿಯ ಸೇವೆಯೇ ಭಗವಂತನ ಸೇವೆ ಎಂದು ದೀಕ್ಷೆ ಪಡೆದಿದ್ದರು. ಅವರವರ ಹೆಂಡಂದಿರು ಮತ್ತೆ ತಾವು ಗಂಡನ ಮನೆ ಸೇರಲಿಲ್ಲವಲ್ಲೆಂದು ಚಿಂತಿಸುವ ಬದಲು ರೋಸಿ ಕೋರ್ಟಿಗೆ ಹೋಗಿದ್ದರು. ತಮ್ಮ ರಸಿಕತನದ ನಡುವೆಯೂ ತಂದೆ ಮಗ ಕೋರ್ಟಿಗೆ ಅಡ್ಡಾಡುತ್ತಿದ್ದರು.
****
ರಾಜ್ಯದಲ್ಲಿ ಈ ಸಾರಿಯೂ ಭಯಂಕರ ಬರಗಾಲ ತಲೆದೋರಿತ್ತು. ಅನೇಕ ಕಡೆ ಕುಡಿಯುವುದಕ್ಕೆ ಸೆರೆ ನೀರೂ ಸಿಕ್ಕದ ಪರಿಣಾಮವಾಗಿ ಪ್ರಜೆಗಳ ಬಾಯೊಣಗಿದವು. ದನಗಳು ಮೇವಿಗಾಗಿ ನೆಲ ಮೂಸುತ್ತ ನಡೆದು ಮಣ್ಣು ತಿನ್ನುವುದನ್ನು ಕಲಿತವು.
ಏಕೋ ರಾಮಗೊಟದ ಕೇಂದ್ರ ಸ್ಥಳವಾದ ಉಜ್ಜಿನಿಯಲ್ಲಿ ಜಗದ್ಗುರುಗಳ ಆಕಳು ನಿಗಿನಿಗಿ ಉರಿಯುವ ಕೆಂಡಗಳನ್ನು ತನ್ನುತ್ತದೆ ಂಬ ಸುದ್ದಿಯನ್ನು ಪತ್ರಿಕೆಗಳು ವರದಿ ಮಾಡಿದವು. ಹುಲಿಗೆಮ್ಮನ ದೇವಸ್ಥಾನದ ಎಮ್ಮೆಯ ಯೋನಿಯಿಂದ ರೇಣುಕಾ ಎಲ್ಲಮ್ಮ ಜನಿಸಿರುವಳು ಎಂಬುದು ಮತ್ತೊಂದು ಸುದ್ದಿ. ಗುರು ಭಂಬೋಂಸ್ವಾಮಿಗಳು ಮತ್ತೊಮ್ಮೆ ಜನಿಸಲು ಗರ್ಭದ ಹುಡುಕಾಟ ನಡೆಸಿದ್ದಾರೆಂದೂ ಖಾ-ಮತ್ ಹೋಟ್ಳ ಮಾಲಿಕರ ಸೊಸೆ ಕೂಚಿಪುಡಿ ಪ್ರವೀಣೆ ರಮಾಮಣಿಯ ಗರ್ಭವನ್ನು ತಮ್ಮ ವ್ಯವಹಾರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆಂಬ ಪವಿತ್ರ ಸುದ್ದಿಯನ್ನು ತೆಗ್ಗಿನ ಮಠದ ಸಾಪ್ತಾಹಿಕ ‘ಶ್ರೀವಾಣಿ’ ವರದಿ ಮಾಡಿತ್ತು.
ಇಂಥ ಎಷ್ಟೋ ಸುದ್ದಿಗಳಿಂದಾಗಿ ಬರಗಾಲಿದಿಂದ ಬೇಸತ್ತ ಜನ ತುಸು ಲವಲವಿಕಯಿಂದ ಸ್ಪಂದಿಸುತ್ತಿದ್ದರು. ಆದರೂ ಅವರು ಅನ್ನ ನೀರು ಎಂಬ ನಿನಾದವನ್ನು ಮಾತ್ರ ಬಿಟ್ಟಿರಲಿಲ್ಲ.
ನಾಡ ಜನತೆಯ ಸಂಕಟ ಪರಿಹರಣಕ್ಕಾಗಿ ಜನಪ್ರಿಯ ಸರಕಾರ ವಿವಿಧ ಕಾರ್ಯಕ್ರಮಗಳನ್ನು ಬರ ನಿರ್ಮೂಲನೆಗಾಗಿ ಹಮ್ಮಿಕೊಂಡಿತು. ಜಾಸ್ತಿ ಬರಪೀಡಿತಗೊಂಡ ಕಡೆ ಕೂಡಲೆ ಕಾಮಗಾರಿ ಕೆಲಸಗಳನ್ನು ಪ್ರಾರಂಭಿಸಿದ ಸರಕಾರ “ಬರ! ಎಲ್ಲಿ! ಎಷ್ಟೆಷ್ಟು?” ಎಂಬುದರ ಬಗ್ಗೆ ವಿವರ ಕಳಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳಿಸಿತು.
ಕುಂತಳ ಜಿಲ್ಲಾಧಿಕಾರಿಗಳ ಹೊರತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮೇವಿಲ್ಲದೆ ದನಗಳು ಸಾಯುತ್ತಿರುವುದು; ಕೂಳಿಲ್ಲದೆ ಜನಗಳ ಹೊಟ್ಟೆ ಅವರವರ ಬೆನ್ನಿಗಂಟಿರುವುದನ್ನು ದಾರುಣವಾಗಿ ವರದಿ ಮಾಡಿದರು. ಕೂಡಲೆ ನೆರವು ಪ್ರಾರಂಭಿಸದಿದ್ದಲ್ಲಿ ಹೊಟ್ಟೆಗಳು ಬೆನ್ನುಗಳಿಂದ ಬೇರ್ಪಡುವುದು ಎಂದೆಂದಿಗೂ ಸಾಧ್ಯವಿಲ್ಲೆಂದು ಕಡ್ಡಿ ಮುರಿದಂತೆ ವಿಧಾನಸೌಧಕ್ಕೆ ಸುದ್ದಿ ಮುಟ್ಟಿಸಿದರು.
ಕುಂತಳ ಜಿಲ್ಲಾಧಿಕಾರಿಗಳಾದರೋ ಬೇರೆ ಥರ;
ಕುಂತಳ ಜಿಲ್ಲೆಯ ಕೂಡ್ಲಿಗಿ; ಕಮಂಗಿ ತಾಲ್ಲೂಕುಗಳಲ್ಲಿ ಐವತ್ತೆರಡು ಸೆಂಟಿಮೀಟರ್ ಮಳೆ ಕೇವಲ ಮುಂಗಾರವಧಿಯಲ್ಲಿ ಸುರಿದ ಪರಿಣಾಮವಾಗಿ ಕೆರೆ-ಕುಂಟೆ, ಹೊಳೆ-ಹಳ್ಳ, ಕೊಳ್ಳಗಳು ತುಂಬಿ ತುಳುಕುತ್ತಿರುವವೆಂದೂ; ಈ ಭಾಗದ ಪ್ರಜೆಗಳು ತಮ್ಮ ಮಾಮೂಲು ಆಹಾರದಲ್ಲಿ ಹೇರಳವಾಗಿ ಜೀವಸತ್ವಗಳನ್ನೂ; ಸಸಾರಜನಕವನ್ನೂ ಸೇವಿಸುತ್ತಿರುವರಲ್ಲದೆ ಪ್ರತಿ ನಿಮಿಷಗಳನ್ನು ರಸಮಯವಾಗಿ ಕಳೆಯಲು ಮಾದಕ ಪದಾರ್ಥಗಳ ಸೇವನೆ ಮಾಡುತ್ತಿರುವುರೆಂದೂ ಜಿಲ್ಲಾಧಿಕಾರಿ ಶಂಷೇರ್‌ಸಿಂಗ್ ವರದಿ ಮಾಡಿದರು. ಉಳಿದ ತಾಲ್ಲೂಕುಗಳಲ್ಲಿ ಬರ ಕಡಿಮೆ ಪ್ರಮಾಣದಲ್ಲಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿದ್ದರು.
ಅವತ್ತು ಸಭೆ ಸೇರಿದ್ದ ರಾಜ್ಯ ಬರ ಪರಿಹಾರ ಸಮಿತಿ ಜಿಲ್ಲಾಧಿಕಾರಿಗಳಿಂದ ಬಂದಿದ್ದ ವರದಿಗಳನ್ನು ಪರಿಶೀಲಿಸಿತು. ಪ್ರತಿಯೊಂದು ವರದಿಯೂ ದಾರುಣ ಸತ್ಯದಿಂದ ಕೂಡಿದ್ದು ಸಮಿತಿ ಸದಸ್ಯರ ಎದೆ ನಡುಗಿಸಿತು. ಆದರೆ ಕುಂತಳ ಜಿಲ್ಲೆಯ ವರದಿ ಮಾತ್ರ ಸಖೇದಾಶ್ಚರ್ಯವನ್ನುಂಟುಮಾಡಿತು. ಸಿಮಿತಿ ಅಧ್ಯಕ್ಷರೂ ಆಗಿದ್ದ ಕೃಷಿ ಸಚಿವ ಮಿ.ಏಕಾದಶಿಯವರಿಗೆ ವರದಿಯನ್ನು ನಂಬಲಾಗಲಿಲ್ಲ.
ಏಕಾದಶಿಯವರು ತಮ್ಮ ಮುಖ್ಯಮಂತ್ರಿ ಶ್ರೀಮಾನ್ ಅ.ದಕ್ಷಬ್ರಹ್ಮರ ಬಳಿ ಸಮಾಲೋಚಿಸಿ ಕುಂತಳ ಜಿಲ್ಲಯೆ ಆ ಎರಡು ತಾಲ್ಲೂಕುಗಳಲ್ಲಿ ಮಾತ್ರ ಯಾಕೆ ಸುಭಿಕ್ಷೆ ತಾಂಡವಾಡುತ್ತಿದೆ; ಅದಕ್ಕಿರುವ ಕಾರಣಗಳೇನು? ಎಂಬುದೆಲ್ಲವನ್ನು ಸಾರಾಸಗಟ ಪರಿಶೀಲಿಸಿ ವಾರದೊಳಗೆ ವರದಿ ಸಲ್ಲಿಸಲು ಒಂದು ಸಮಿತಿಯನ್ನು ಮಧ್ಯರಾತ್ರಿ ನೇಮಿಸಿದರು.
ಆಡಳಿತ ಪಕ್ಷದ ಭಿನ್ನಮತೀಯ ಶಾಸಕ ಸುಗ್ರೀವ ಆ ವಿಚಾರಣಾ ಸಮಿತಿಯ ಅಧ್ಯಕ್ಷರಾಗಿದ್ದರೆ; ಕೂಡ್ಲಿಗಿ; ಕಮಂಗಿ ಕ್ಷೇತ್ರಗಳ ಶಾಸಕರು ಮತ್ತು ಜಿಲ್ಲಾಧಿಕಾರಿ ಶಂಷೇರ್‌ಸಿಂಗ್‌ರವರು ಸದಸ್ಯರು.
ಸಮಿತಿ ಆ ಎರಡು ತಾಲ್ಲೂಕುಗಳನ್ನು ಪ್ರವೇಶಿಸುತ್ತಲೆ ಆಹ್ಲಾದಕರ ವಾತಾವರಣಕ್ಕೆ ಮನಸೋತರು. ಅವರೊಂದಿಗಿದ್ದ ಬಿರ್ಡಿ; ಬಡೇಸಾಬು; ತಾಶೀಲ್ದಾರು ಜಯಣ್ಣ ಹೆಜ್ಜೆ ಹೆಜ್ಜೆಗೆ ಸಮಿತಿಯ ಕಿವಿ ಚುಚ್ಚುತ್ತ ಸಾಗಿದ್ದರು.
“ಆಯಮ್ಮನ ಕಾಲ್ಗುಣದಿಂದಾಗಿ ಇದೆಲ್ಲ” ಎಂದು ಕೃತಾರ್ಥಗೊಂಡವರಂತೆ ಜನ ನುಡಿದರು.
ಆಯಮ್ಮ ಎಂದರೆ ಯಾರು! ಎಂದು ಸಮಿತಿಯವರು ಕೇಳಿದ್ದೇ ಕೇಳಿದ್ದು. “ಅದೇ ಗ್ರಾಮಸೇವಿಕಾ. ಬಿಬಿಹಳ್ಳೀಲಿ ಕೆಲಸ ಮಾಡ್ತಿಲ್ವಾ ಸಾರ್, ಆಕೆ” ಎಂದ ಜಯಣ್ಣ. “ಸಹಕಾರಿ ಸಪ್ತಾಹದ ಮುಕ್ತಾಯ ಸಮಾರಂಭದಲ್ಲಿ ಭರತ ನಾಟ್ಯ ಮಾಡಿದ್ಲಲ್ಲಾ ಆಕೆ ಏನು?” ಎಂದು ಎಮ್ಮೆಲ್ಲೆ ಕೊರಡುಕುಮಾರ್ ಅಚ್ಚರಿಯಿಂದೆ ಕೇಳುವರು. ಆಕೆ ಬಗ್ಗೆ ಆತ ವಿವರಿಸುವನು. ಆಕೆ ರೂಪದ ಬಗ್ಗೆ ಅವರೆಲ್ಲ ಊಹಿಸುವರು. ಕಣ್ಣುಗಳಲ್ಲಿ ಸಾಕಾರಗೊಂಡ ರೂಪ ಹೃದಯಕ್ಕಿಳಿಯುವಷ್ಟರಲ್ಲಿ ಅವರೆಲ್ಲ ಬಿಬಿಹಳ್ಳಿ ತಲುಪಿದ್ದರು.
ಬಿಬಿಹಳ್ಳಿ ಸುಖ ಸಮೃದ್ಧಿಯಿಮದ ತುಳುಕಾಡುತ್ತಿರುವುದನ್ನು ಮೊದಲಿಗೇ ಗ್ರಹಿಸಿದರು. ಅಕ್ಕಿ, ಜೋಳ, ರಾಗಿ ಮುಂತಾದ ದವಸ ಧಾನ್ಯವನ್ನು ಹಾದಿ ಪಕ್ಕ ರಾಶಿ ರಾಶಿಯಾಗಿ ಹಾಕಿಕೊಂಡು ಮಾರುತ್ತಿರುವುದನ್ನು ನೋಡಿದ ಶಂಷೇರ್‌ಸಿಂಗ್‌ಗೆ ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯ ನೆನಪಾಯಿತು. ಆಗ ಮುತ್ತು ರತ್ನಗಳನ್ನು ಬಳ್ಳದಿಂದ ಅಳೆಯುತ್ತಿದ್ದಂತೆ ಈಗ ಈ ಹಳ್ಳೀಲಿ ಧಾನ್ಯವನ್ನು ಬಳ್ಳದಿಂದ ಅಳೆಯುತ್ತಿರುವರು. ಸಿಂಗ್ ರೈಸ್‌ನ ರೇಟ್ ವಿಚಾರಿಸಿದ. ಒಂದು ಸೇರಿಗೆ ಕೇವಲ ಐದು ರೂಪಾಯಿಗಳು ಎಂಬ ಉತ್ತರ “ವೆರ್‍ರಿ ವೆರ್‍ರಿ ಛೀಪ್…. ಚೀಪ್…” ಜಿಲ್ಲಾಧಿಕಾರಯಿಂದ ಉದ್ಗಾರ.
ಬಿಬಿಹಳ್ಳಿ ಇಪ್ಪತ್ತನೆ ಶತಮಾನದ ವಿಜಯನಗರ ಸಾಮ್ರಾಜ್ಯ! ನೋಟ್ ಮಾಡಿಕೊಂಡರು.
ಹಾಳೂರಿಗೆ ಹನುಮಪ್ಪ ಚಂದ ಎಂಬಂತೆ ಊರು ಮಾಡುವ ಗೌಡ ಒಂಟೆ ಮಲ್ಲನಗೌಡ ಮತ್ತವನ ಮಗ ಗಣೇಶ ಅವರನ್ನೆಲ್ಲ ಗೌರವದಿಂದ ಮನೆಗೆ ಕರೆದೊಯ್ದರು. ತನ್ನೂರಿಗೆ ಒಳಿತನ್ನು ಬಯಸಲು ಧ್ಯಾನಮಗ್ನಳಾಗಿರುವ ಭಾಗೀರಥಿ ಆ ಕ್ಷಣ ಅವರಾನ್ನೂ ಕಾಣಲು ಇಚ್ಫಿಸಲಿಲ್ಲ.
ಪರಮೇಶಿ ತನ್ನ ಬಟಕ್ಸ್ ಮತ್ತು ಚೆಸ್ಟ್‌ಗಳನ್ನು ವಿಶೇಷವಾಗಿ ತೋರಿಸಲು ಪ್ಯಾಡ್ಸ್‌ಗಳ ತಯಾರಿಯನ್ನು ಧ್ಯಾನದ ಕೋಣೆಯಲ್ಲಿ ನಡೆಸಿದ್ದ.
ಸುಗ್ರೀವ ತನ್ನ ಸಂಗಡಿಗರೊಂದಿಗೆ ಜನತೆಯ ವಿಚಾರಣೆಗೆ ತೊಡಗಿದ್ದ. ಪ್ರಿತಯೊಬ್ಬರು ಹೇಳುತ್ತಿದ್ದುದು ಒಂದೇ ಮಾತು; “ಭಾಗೀರಥಿಯು ಸಾಕ್ಷಾತ್ ಭಾಗೀರಥಿಯೇ ಸರಿ. ಆಕೆ ಕಾಲಿಟ್ಳೂ ಇಟ್ಳೂ ನಾವ್ ಉದ್ಧಾರಾಗಿಬಿಟ್ವಿ”.
ಆಕೆ ಬರಡು ಹೊಲದಲ್ಲಿ ಕಾಲಿಟ್ಟಳು…. ಆ ಹೊಲ ಫಲವತ್ತಾಗಿ ಹುಲುಸಾಗಿ ಬೆಳೆಯಿತು.
ಆಕೆ ದೃಷ್ಟಿಯಿಂದ ಸ್ಪರ್ಶಿಸಿದ ಗೊಡ್ಡುಗಳೆಲ್ಲ ಹಯನಾಗಿವೆ. ಬೀಜದ ಹೋರಿಗಳಾಗಿವೆ.
ಆಕೆ ಖಾಲಿ ಆಗಸದ ಕಡೆ ನೋಡಿದರೆ ಸಾಕು, ಕಾರ್ಮುಗಿಲು ಹರಿದಾಡುವುವು.
ಒಂದೇ ಎರಡೇ ಬಿಬಿಹಳ್ಳಿಗರು ಆಕೆ ಕುರಿತಂತೆ ನೂರಾರು ಸಂಗತಿಗಳನ್ನು ಹೇಳಿ ಸಿಮಿತಿಗೆ ಕುತೂಹಲ ಕೆರಳಿಸಿದರು. ಅವರೆಲ್ಲ ತುದಿಗಾಲಿನಿಂದ ಕಾಯುತ್ತ ಸ್ಪಲ್ಪ ಹೊತ್ತು ಕಳೆದ ನಂತರ ಧ್ಯಾನದ ಕೋಣೆ ಹೊರಗೆ ಠ್ರಿಣ್ ಅಂತ ಗಂಟೆ ಸದ್ದಾಯಿತು. ಕೆಂಪು ದೀಪ ಹೊತ್ತಿತು. ಗೌಡ ಎಲ್ಲರೂ ಎದ್ದು ನಿಮತು ಗೌರವ ತೋರಿಸಲು ವಿನಂತಿಸಿದ…. ಸರಿ ಎಲ್ಲರೂ ಎದ್ದು ನಿಂತರು. ಬಾಗಿಲು ತೆರೆಯಿತು. ಘಮಘಮ ಧೂಪದ ನಡುವೆ ಬೆಳದಿಂಗಳಂತೆ ಭಾಗೀರಥಿ ಕಾಣಿಸಿಕೊಂಡಳು. ಕೆಲವರು ಭಯಭಕ್ತಿಯಿಂದ ನಮಸ್ಕರಿಸಿದರು. ಆಶೀರ್ವಾದದ ರೀತಿಯಲ್ಲಿ ಮುಗುಳ್ನಗುತ್ತ ಆಕೆ ಹಂಸದಂತೆ ಹೆಜ್ಜೆ ಇಡುತ್ತ ಬಂದು ತನಗಾಗಿ ಕಾದಿರಿಸಿದ್ದ ಆಸನದಲ್ಲಿ ವಿರಾಜಮಾನಳಾದಳು.
ಆಕೆಯ ಅಗಣಿತ ಸೌಂದರ್ಯ; ಶ್ರೀಮದ್ಗಾಂಭೀರ್ಯ ಕಂಡು ಖ್ಯಾತರೆಲ್ಲ ಮಂತ್ರ ಮುಗ್ಧರಾದರು. ಭಾಗೀರಥಿ ಅವರೆಲ್ಲರ ಕ್ಷೇಮಲಾಭ ವಿಚಾರಿಸಿದಳು.
ತನ್ನ ದುಂಡು ಮುಖದಲ್ಲಿನ ತೊಂಡೆ ತುಟಿಗಳ ಕಡೆಗೊಬ್ಬ; ಬೊಗಸೆ ಕಣ್ಣುಗಳ ಕಡೆಗೊಬ್ಬ; ಸೇಬು ಗಲ್ಲಗಳ ಕಡೆಗೊಬ್ಬ; ಸಂಪಿಗೆ ಹೂವಿನಂಥ ಮೂಗಿನ ಕಡೆಗೊಬ್ಬರಂತೆ ಸಮಿತಿಯ ಸರ್ವರು ದೃಷ್ಟಿ ನೆಟ್ಟಿರುವುದು ಕಂಡು ಆಕೆ ತನ್ನ ಗ್ಲೋಬಿನೆದೆಯನ್ನು ಕಣ್ಣು ಕುಕ್ಕುವಂತೆ ಏರಿಳಿಸಿದಳು.
ಮಳೆ ಸುರಿದ ಕಾರಣ ಕೇಳಿದ ಸುಗ್ರೀವಗೆ ಭಾಗೀರಥಿ ಹೇಳಿದಳು…. “ಮಳೆಗೆ ಅಧಿದೇವತೆಯಾದ ವರುಣ ನನಗೆ ಕ್ಲೋಸ್ ರಿಲೇಟಿವ್”.
ಅಮೃತ ರೇಖೆಯನ್ನು ನೋಡಲು ಅವರೆಲ್ಲ ಬಯಸಿದರು. ಆದರೆ ಭಾಗೀರಥಿ ತನ್ನ ಹಸ್ತದಲ್ಲಿರುವುದನ್ನು ತೋರಿಸಲು ಇಷ್ಟಪಡಲಿಲ್ಲ. ಅವರ ಒತ್ತಾಯಕ್ಕೆ ಮಣಿದು ತನ್ನ ಎಡ ಅಂಗಾಲಲ್ಲಿರುವ ಅಮೃತರೇಖೆಯನ್ನು ತೋರಿಸಲು ಒಪ್ಪಿಗೆ ನೀಡಿದಳೂ.
ಗಣೇಶ ಸ್ಟೂಲನ್ನು ಇರಿಸಿ ಅದರ ಮೇಲೆ ಜಿಂಕೆಯ ಚರ್ಮ ಹಾಸಿದ. ಗೌಡನ ಸಹಾಯದಿಂದ ತನ್ನ ಎಡಗಾಲನ್ನು ಅದರ ಮೇಲಿಸಿರಿದಳು. ಸಮಿತಿಯ ಪ್ರತಿಯೊಬ್ಬರು ನಾಮುಂದು ತಾಮುಂದು ಅಂತ ನೋಡಲು ಮುಗಿಬಿದ್ದರು. ಅದು ಬಂಗಾರದ್ದೋ ಅಂತ ಹಲುಬಿದರು.
ತಂದೆ ಮಗ ಇಬ್ಬರು ಅಂಗಲ ಮೇಲ್ಭಾಗದಲ್ಲಿ ಜೋಡಿಯಾಗಿ ಸಾಗಿದ್ದ ಎರಡು ರೇಖೆಗಳೇ ಅದೆಂದು ಪರಿಚಯಿಸಿದರು. ಅದನ್ನು ಮುಟ್ಟಬಹುದೇ ಅಂತ ಸುಗ್ರೀವ ಸಮಿತಿ ಪರವಾಗಿ ಕೇಳಿದ. ‘ಓಕೆ’ ಅಂದಳು ಆಕೆ. ಸರಿ…. ಅವರೆಲ್ಲ ಮುಟಟಿ ತಮ್ಮ ಭಾಗ್ಯಕ್ಕೆ ಎಣೆಯೇ ಇಲ್ಲೆಂದರು…. ಅವರೊಂದಿಗೆ ಬಂದಿದ್ದ ಫೋಟೋಗ್ರಾಫರ್‌ಗಳಿಬ್ಬರು ಚಕಚಕ ಅಂತ ಫೋಟೋ ತೆಗೆಯುತ್ತಿದ್ದರು.
ಸಮಿತಿ ಅವತ್ತೇ ತಂಗಳೂರು ತಲುಪಿ ಸರಕಾಕ್ಕೆ ತನ್ನ ವರದಿ ತಲುಪಿಸಿತು…..
ಅದನ್ನು ಕೇಳಿ ರೋಮಾಂಚಿತರಾದ ಮಂತ್ರಿಗಳು ವರದಿಯನ್ನು ಶಾಸನ ಸಭೆಯಲ್ಲಿ ಮಂಡಿಸುವ ಮೊದಲೇ ಪತ್ರಿಕೆಗಳಿಗೆ ಬಿಡುಗಡೆ ಮಾಡಿದರು.
ಮರುದಿನ ವೃತ್ತ ಪತ್ರಿಕೆಗಳು ವರದಿಯನ್ನು ಭಾಗೀರಥಿಯ ಫೋಟೋ ಸಹಿತ ಮುಖಪುಟದಲ್ಲಿ ಪ್ರಕಟಿಸಿದವು. ಸರಕಾರ ಶಾಸನಸಭೆಗೇ ದ್ರೋಹ ಬಗೆದಿದೆ ಎಂಉದ ವಿರೋಧ ಪಕ್ಷದ ಮುಖಂಡ ವೈಕುಂಠಪತಿ ನಿಧಾನ ಸಭೆಯಲ್ಲಿ ಅಬ್ಬರದ ಗಲಾಟೆ ನಡೆಇಸದ್ದರೆ ಮಹಾಜನತೆ ’ಸಿಕ್ಕವರಿಗೆ ಸಿವ್ಲಿಂಗ’ ಅಂತ ಪತ್ರಿಕೆಗಳನ್ನು ಕೊಮಡು ಓದಿ ಓದಿ ಆನಂದಿಸಿದರು. ಕೆಲವು ಪತ್ರಕರ್ತರು ಬಿಬಿಹಳ್ಳಿಗೆ ಧಾವಿಸಿದರು. ಕಾಡಿ ಬೇಡಿ ಭಾಗೀರಥಿಯ ಸಂದರ್ಶನ ಪಡೆದರು. ಅವರೆಲ್ಲರ ಕ್ಯಾಮೆರಾಗಳಿಗೆ ಆಕೆ ವಿವಿಧ ಭಂಗಿಗಳಲ್‌ಇ ಪೋಜು ಕೊಟ್ಟಳು…. ಕೆಲವೇ ದಿನಗಳಲ್ಲಿ ಭಾಗೀರಥಿ ನಾಡು ಜನತೆಯ ನಾಲಗೆ ಮೇಲೆ ನಲಿದಾಡಿದಳು.
ಕೃಷಿ ಸಚಿವ ಮಿ.ಏಕಾದಶಿಯವರು ಪ್ರತ್ಯೇಕವಾಗಿ ಬಿಬಿಹಳ್ಳಿಗೆ ಹೋಗಿ ಭಾಗೀರಥಿಯನ್ನು ಖುದ್ದು ಕಂಡು ಬಮದರು. ಏಕಾದಶಿಯವರು ಮತ್ತು ಅ.ದಕ್ಷಬ್ರಹ್ಮರೂ ಸೇರಿ ತಮ್ಮ ಸರಕಾರಕ್ಕೆ ಜ್ಯೋತಿಷ್ಯ ಮತ್ತು ಧಾರ್ಮಿಕ ಸಲಹೆ ನೀಡಲು ನಿಯಮಿಸಲ್ಪಟ್ಟಿರುವ ವೇ.ಪಂ. ವಕ್ರತುಂಡರನ್ನು ಅಮೃತರೇಖೆ ಉಳ್ಳವರು ಅಡ್ಡಾಡಿದ ಕಡೆ ಎಲ್ಲ ಮಳೆ ಬೆಳೆ ಸಕ್ರಮವಾಗಿ ನಡೆಯುತ್ತವೆ ಎಂದು ಹೇಳಿದ್ದಲ್ಲದೆ ಅಂಥವರು ಇರುವುದು ನಾಡಿನ ಬಹುಕಾಲದ ಪುಣ್ಯಫಲವೆಂದು ಅಭಿಪ್ರಾಯ ವ್ಯಕ್ತಪಡಿಸಿದನು.
ಸಂಜೆಯೇ ಸೇರಿದ ಸಂಪುಟದ ಸಭೆ, ವಕ್ರತುಂಡರು ಅಮೃತರೇಖೆ ಭಾಗೀರಥಿಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಸಿತು. ಬರ ಪರಿಹಾರಾರ್ಥವಾಗಿ ಭಾಗೀರಥಿಯನ್ನು ರಾಜ್ಯಾದ್ಯಂತ ಮೆರೆಸುವುದೆಂದು ಮಿ.ಏಕಾದಶಿ ಮಂಡಿಸಿದ ಅಭಿಪ್ರಾಯವನ್ನು ಸಚಿವ ಸಂಪುಟ ಒಕ್ಕೊರಲಿನಿಂದ ಬೆಂಬಲಿಸಿದುತ. ಕೂಡ್ಲಿಗಿ, ಕಮಂಗಿ ಕ್ಷೇತ್ರಗಳ ಶಾಸಕರು ಮುಖ್ಯಮಂತ್ರಿಗಳ ಪ್ರತಿನಿಧಿಗಳಾಗಿ ಬಿಬಿಹಳ್ಳಿ ತಲುಪಿದರು.
ಕೀರ್ತಿಶನಿ ಒಲ್ಲೆ ಎಂದು ಒಂದೇ ಸಮನೆ ಹಠ ಹಿಡಿದ ಭಾಗೀರಥಿಯನ್ನು ರಾಜ್ಯದ ಉದ್ಧಾರಕ್ಕಾಗಿ ಬರ ನಿವಾರಣೆಗಾಗಿ ಒಪ್ಪಿಸುವಲ್ಲಿ ಅವರಿಗೆ ಸಾಕು ಸಾಕಾಗಿ ಹೋಯಿತು. ಕೊನೆಗೂ ಮಹಿಮಾನ್ವಿತೆ ಒಪ್ಪಿದಳಲ್ಲ. ಅದೇ ಸಂತೋಷ! ವರುಣನ ಮಾನಸ ಪುತ್ರಿ ಭಾಗೀರಥಿಯನ್ನು ನಾಡಿನಾದ್ಯಂತ ಮೆರೆಸಲು ಸರಕಾರ ಕೈಕೊಂಡ ಐತಿಹಾಸಿಕ ನಿರ್ಣಯವನ್ನು ನಾಡಿನಾದ್ಯಂತ ಟಿವಿಗಳು, ರೇಡಿಯೋಗಳು, ವೃತ್ತ ಪತ್ರಿಕೆಗಳು ಮಾರ್ದನಿಸಿದವು. ಇದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ನಿಧಾನಸೌಧದಿಂದ ವಾಕೌಟ್ ಮಾಡಿದವು.
ಕಲ್ಲುಬಂಡೆಯಂಥ ಸರಕಾರದ ಅಚಲ ನಿರ್ಧಾರ! ಕಾರ್ತೀಕ ಶುದ್ಧ ತ್ರಯೋದಶಿಯಂದ ಬಿಬಿಹಳ್ಳಿಯಿಂದ ಪ್ರಾರಂಭವಾಗುವ ಭಾಗೀರಥಿಯ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಉದ ಆಡಳಿತ ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಅ.ದಕ್ಷಬ್ರಹ್ಮರು ತಂಗಳೂರಿನ ಬುಲ್ಡೋಜರ್ ಮೈದಾನದಲ್ಲಿ ಭಾರಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದರು.
ಸರಕಾರದ ಈ ನಿರ್ಧಾರ ಅತ್ಯಂತ ಮೂರ್ಖತನದಿಂದ ಕೂಡಿದೆ ಎಂದು ಆರತೀಯ ಕಮ್ಯೂನಿಷ್ಟ್ ಪಕ್ಷದ ರಾಜ್ಯ ಘಟಕ ಟೀಕಿಸಿದರೆ; ಖಡ್ಗದಿಂದ ಕಾವ್ಯ ಬರೆಯುವ ಕ್ರಾಂತಿಕಾರಿ ಬರಹಗಾರರ ಸಂಘಟನೆಯ ಅನೇಕರು ಪತ್ರಿಕೆಗಳ್ಲಿ ಹರಿತವಾದ ಮಾತುಗಳಿಂದ ಖಂಡಿಸಿದರು. ಎಡಪಂಕ್ತಿಯ ಲೇಖಕರು ರಾಜ್ಯದಾದ್ಯಂತ ಸರಕಾರದ ಮೂಢನಂಬಿಕೆ ವಿರುದ್ಧ; ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವುದರ ವಿರುದ್ಧ ಹೋರಾಡಲು ಸಿದ್ಧತೆ ನಡೆಸಿದರು. ಯಾವ ಬೆದರಿಕೆಗೂ ಬಗ್ಗದಂಥ ಬಂಡೆಗಲ್ಲಿನಂಥ ಸರಕಾರ ಕಾರ್ತೀಕ ಶುದ್ಧ ತ್ರಯೋದಶಿಯ ವೇಳೆಗೆ ಮೆರವಣಿಗೆಯ ಪೂರ್ವಸಿದ್ಧತೆಯನ್ನು ಪೂರ್ಣಗೊಳಿಸಿದುತ.
ಕಾರ್ತೀಕ ಶುದ್ಧ ತ್ರಯೋದಶಿ! ಆಡಳಿತ ಪಕ್ಷದ ಕಾರ್ಯತತ್ಪರತೆಯಿಂದಾಗಿ ನಾಡಿನಾದ್ಯಂತ ಹಬ್ಬದ ವಾತಾವರಣ ನಿರ್ಮಾಣಗೊಂಡಿತು. ಭಾಗೀರಥಿಯ ಚೈತ್ರ ಯಾತ್ರೆಯ ಪ್ರಾರಂಭ!
ಬಿಬಿಹಳ್ಳಿಗೆ ಬದಲು ಕೂಡ್ಲಿಗಿಯ ಕೊಡ್ಲೆಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಭವ್ಯವಾದ ವೇದಿಕೆ ಮೇಲೆ ಅನೇಕ ರಾಜಕೀಯ ಮುಖಂಡರು, ನಡುವೆ ವಿರಾಜಮಾನಳಾಗಿದ್ದ ಭಾಗೀರಥಿ ನೋಡಿದವರಿಗೆ ಝಾನ್ಸಿರಾಣಿಯಂತೆ ಗೋಚರಿಸಿದಳು. ಚೈತ್ರಯಾತ್ರೆ ಉದ್ಘಾಟಿಸುತ್ತಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೋಗಾನಂದ ಸ್ವಾಮಿಗಳು “ಭಾಗೀರಥಿ ಸಾಕ್ಷಾತ್ ಆದಿಶಕ್ತಿ ಸ್ವರೂಪಿಣಿ ಎಂದು ನಮ್ಮ ಅಂತರಾತ್ಮ ಹೇಳುತ್ತಿದೆ” ಎಂದು ಬಾರಿ ಕರತಾಡನದ ನಡುವೆ ಹೇಳಿದರು.
ಅವರ ಪಕ್ಕದಲ್ಲಿ ಕುಂತಿದ್ದ ಭಾಗೀರಥಿ ಸೆರಗಿನ ಮರೆಯಲ್ಲಿ ಸ್ವಾಮಿಗಳ ಒಳತೊಡೆಯನನ್‌ಉ ಮೀಟಿದಳು. ಮತ್ತೆ ರೋಮಾಂಚಿತರಾದ ಸ್ವಾಮಿಗಳು “ಈ ಶರಣೆ ಈ ನಾಡಿನುದ್ಧಾರಕ್ಕಾಗಿ ಅವತರಿಸಿದ್ದಾಳೆ” ಂದಿತ್ಯಾದಿಯಾಗಿ ಮುಕ್ಕಾಳು ತಾಸು ಆಶೀರ್ವಚನ ನೀಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃಷಿ ಸಚಿವರಾದ ಏಕಾದಶಿಯವರು ನಾಡಿನಾದ್ಯಂತ ತಾಂಡವವಾಡುತ್ತಿರುವ ದಾರಿದ್ರಯವನ್ನು ಹೊಡೆದೋಡಿಸಲು ನಮ್ಮ ಸರ್ಕಾರ ಏನು ಮಾಡುವುದಕ್ಕೂ ಹೇಸುವುದಿಲ್ಲೆಂದೂ, ಇದಕ್ಕಾಗಿ ಎಲ್ಲರೂ ತನುಮನ ಧನವನ್ನು ಅರ್ಪಿಸಬೇಕೆಂದೂ ಕರೆ ನೀಡಿದರು.
ನೂರೊಂದು ಮುತ್ತೈದೆಯರು ಆರತಿ ಬೆಳಗಿದರು ಭಾಗೀರಥಿಗೆ….
ಆಕೆಯ ಮೇಲೆ ಮುಖ್ಯಮಂತ್ರಿಗಳ ಹೆಲಿಕ್ಯಾಪ್ಟರ್ ಪುಷ್ಪವೃಷ್ಟಿಗರೆಯಿತು.
ಚೈತ್ರಯಾತ್ರೆ ಪ್ರಾರಂಭವಾಯಿತು. ಬುಲ್ಲೆಟ್ ಪ್ರೂಫ್ ಗ್ಲಾಸುಗಳಿದ್ದ ವಿಶಾಲವಾದ ವ್ಯನಿನೊಳಗೆ ಭಾಗೀರಥಿಗೆ ಎಲ್ಲ ಅನುಕೂಲಗಳಿದ್ದವು. ನಾಲ್ಕು ಹಿರಿಯ ಪೋಲೀಸ್ ಅಧಿಕಾರಿಗಳು ತಂತಮ್ಮ ವಾಹನಗಳಲ್ಲಿ ತಮ್ಮ ತಮ್ಮ ಸಶಸ್ತ್ರ ಸಿಬ್ಬಂದಿಯೊಂದಿಗೆ.
ಚೈತನ್ಯ ಯಾತ್ರೆ ಪ್ರವೇಶಿಸುವ ಊರುಗಳಲ್ಲಿ ಬೀದಿಗಳಿಗೆ ಸೆಗಣಿ ಸಾರಿಸಿ ರಂಗವಲ್ಲಿ ಹಾಕಿ ತಳಿರು ತೋರಣಕಟ್ಟಿ; ಪಟಾಕಿ ಢಮ ಢಮ ಎಗರಿಸಿ ಭಾಗೀರಥಿಯನ್ನು ಸ್ವಾಗತಿಸುತ್ತಿದ್ದರು.
ಪೌರ ಸನ್ಮಾನಕ್ಕೆ ಉತ್ತರವಾಗಿ ಭಾಗೀರಥಿ “ಇದೋ ನಾನು ನಿಮ್ಮ ಉದ್ಧಾರಕ್ಕಾಗಿ ಜನ್ಮವೆತ್ತಿ ಬಂದಿರುವೆನು. ನಾನು ಉದ್ಧಾರ ಮಾಡುವವರೆಗೆ ಯಾರೂ ನಿಮ್ಮ ಪ್ರಾಣ ಬಿಡಬೇಡಿರಿ” ಎಂದು ಆಶೀರ್ವಾದ ಮಾಡುವಳು.
“ಸರಕಾರಕ್ಕೆ ಜಯವಾಗಲಿ; ಭಾಗೀರಥಿಗೆ ಜಯವಾಗಲಿ” ಎಂಬ ಜನರ ಜಯಘೋಷ ಮುಗಿಲಿಗೆ ಮುಟ್ಟುವುದು.
ಹಲವಾರು ಊರುಗಳಲ್ಲಿ ಅಂತೂ ವಿರೋಧ ಪಕ್ಷಗಳ ಕಾರ್ಯಕರ್ತರು ಕ್ರಂತಿಕಾರಿ ಲೇಖಕರ ಹೆಗಲಿಗೆ ಹೆಗಲುಕೊಟ್ಟು ಚೈತನ್ಯ ಯಾತ್ರಯ ವಿರುದ್ಧ ದನಿ ಎತ್ತುವರು….. ಆಡಳಿತ ಪಕ್ಷ ಡೌನ್ ಡೌನ್…. ಭಾಗೀರಥಿ ಡೌನ್ ಡೌನ್…. ನೂರಾರು ಜನ ಕೈಯಲ್ಲಿ ಕಪ್ಪು ಬಾವುಟ ಹಿಡಿದು ಮುಗಿಲಿಗೆ ದನಿ ಎತ್ತುವರು, ಕೂಡಲೆ ಮೀಸಲು ಪಡೆಯ ಪೋಲೀಸರು ಲಾಠಿಯಿಂದ ಥಳಿಸುವರು…. ಕೆಲವು ಕಡೆ ಅಶ್ರುವಾಯು ಪ್ರಯೋಗಿಸುವರು. ಪೆನ್ನುಗಳನ್ನೇ ಖಡ್ಗಗಳೆಂದು ಭ್ರಮಿಸಿದ ಲೇಖಕರ ಕಡೆ ಗುಂಡುಹಾರಿಸುವರು…. “ವರುಣ ದೇವನ ಮಾನಸಪುತ್ತಿಗೇ ಜಯವಾಗಲೀ….” ಭಾಗೀರಥಿ ಅರ್ಥಗರ್ಭಿತವಾಗಿ ನಗುವಳು….
ಹೀಗೆ ಚೈತ್ರಯಾತ್ರೆ ಅನೇ ಕ ಗೊಂದಲಗಳ ನಡುವೆಯೂ ಯಶಸ್ವಿಯಾಗಿ ತಂಗಳೂರು ತಲುಪಿತು. ಐತಿಹಾಸಿಕ ಬುಲ್ಡೋಜರ್ ಮೈದಾನದಲ್ಲಿ ಮಂಗಳ ಸಮಾರಂಭ ಅಲೌಕಿಕಾನಂದ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಇಂಥ ಕಲ್ಯಾಣ ಕಾರ್ಯಗಳಿಗೆ ಬಸ್ಸುಗಳು ತಡೆಯೊಡ್ಡುವುದು ಸಹಜ “….ಲೋಕ ಕಲ್ಯಾಣಾರ್ಥವಾಗಿ ಭಾಗೀರಥಿಯಂಥ ಶರಣೆಯರು ಮತ್ತೆ ಉದಯಿಸಲು ಎಂಟು ಶತಮಾನಗಳೇ ಬೇಕಾದವು. ಇಂಥ ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ನೂರಾರು ಸಾವಿರಾರು ಸನಾತನಿಗಳ ಹೃದಯ ತಣಿಸಿದ್ದಾರೆ…. ಇದೊಂದೆ ಅಲ್ಲ, ಪುತ್ತಕಾಮೇಷ್ಟಿಯಾಗ, ಅಶ್ವಮೇದಯಾಗ, ರಾಜಸೂಯ ಯಾಗ ಮುಂತಾದ ನೂರಾರು ಯಜ್ಞಯಾಗಗಳನ್ನು ಮಾಡಲಿ; ಇದಕ್ಕೆ ನಾವು ಪಂಚಗೂಟಾದೀಶ್ವರರು ಬೆಂಬಲ ಆಶೀರ್ವಾದ ನೀಡೇ ನೀಡ್ತೇವೆ….” ಕರತಾಡನದೊಂದಿಗೆ ತಮ್ಮ ಆರ್ಶೀವಚನ ಮುಗಿಸಿದರು.
ಮುಖ್ಯಮಂತ್ರಿ ಅ.ದಕ್ಷಬ್ರಹ್ಮರು ಮಾತಾಡಿ ತಮ್ಮ ಸರಕಾರ ಹಮ್ಮಿಕೊಂಡಿರುವ ಯಜ್ಞಯಾಗಗಳ ಸಂಕ್ಷಿಪ್ತ ರೂಪರೇಶೆಗಳನ್ನು ವಿವರಿಸಿದರು. ಸಭೆಯಲ್ಲಿ ಗುಟ್ಟಾಗಿ ಕೂತಿದ್ದ ಕೆಲವಿಚಾರವಾದಿಗಳು ಕೂಡಲೆ ಎದ್ದು ಧಿಕ್ಕಾರ ಕೂಗಿದರು. ಅವರನ್ನು ಪೋಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡೊಯ್ದು ವಿಚಾರಿಸಿಕೊಂಡರು. ಅತ್ತಿನ ಸಭೆಯಲ್ಲಿ ವರುಣದೇವನ ಮಾನಸ ಪುತ್ತಿರಯ ಕೋಮಲ ಕೊರಳನ್ನು ಭಾರಿ ಗಾತ್ರದ ಹೂಮಾಲೆಯಿಂದ ಅಲಂಕರಿಸಲಾಯಿತು. ಅಲ್ಲದೆ ಆಕೆ ನಾಡಿನ ಆಸ್ತಿ ಎಂದು ಘೋಷಿಸಲಾಯಿತು.
ನಾಡಿನ ಆಸ್ತಿಯಾದ ಆಕೆಯನ್ನು ಸಾರ್ವಜನಿಕರಿಂದ ಹಾನಿಗೊಳಗಾಗಬಹುದೆಂದೂಹಿಸಿದ ಜಾಣ ಸರಕಾರ ರಾಜಧಾನಿ ತಂಗಳೂರಿನಲ್ಲಿ ಉಳಿಸಿಕೊಳ್ಳುವುದೆಂದು ನಿರ್ಧರಿಸಿತು. ಮೃಗಾಲಯದ ರಸ್ತೆಯ ಸಂಕಟಹರಣನ ಗುಡಿಯ ಬಾಜು ಇದ್ದ ಕಲಾಕುಂಜ ನಿವಾಸದಲ್ಲಿ ಭಾಗೀರಥಿಯನ್ನು ಸಕಲ ಗೌರವದೊಂದಿಗೆ ಇರಿಸಲಾಯಿತು. ಆಕೆ ತನ್ನ ಅಭಿರುಚಿಗೆ ತಕ್ಕಂತೆ ನಿವಾಸವನ್ನು ಬದಲಾಯಿಸಿಕೊಂಡಳು. ವಿಶ್ವಕರ್ಮನಿಂದಲೇ ನಿರ್ಮಿಸಲ್ಪಟ್ಟಂತಿರುವ ಆ ನಿವಾಸದಲ್ಲಿ ಕಡಿಮೆ ಇದ್ದುದಾದರೂ ಏನು?…. ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವಳು ಆಕೆ…. ಸರಕಾರ ಎಷ್ಟೇ ಪ್ರಯತ್ನಿಸಿದರೂ ಆಕೆಯನ್ನು ಜನರ ಹೃದಯದಿಂದ ದೂರ ಇಡಲು ಸಾಧ್ಯವಾಗಲಿಲ್ಲ. “ನಮ್ಮಮ್ಮ ನಮ್ತಾಯಿ! ಜಗನ್ಮಾತೆ ಹೀಗೆ ಸಂಬೋಧಿಸುತ್ತಿದ್ದವರು ತುಸು ವಯಸ್ಸದವರು”. ತಬೂ, ಶಿಲ್ಪಾ ಶೆಟ್ಟಿ, ಕರಿಷ್ಮಾ ಕಪೂರ ಹೀಗೆ ಕಣ್ಸನ್ನೆ ಬಾಯ್ಸನ್ನೆ ಮಾಡುತ್ತಿದ್ದವರು ಹೈಕಳು!….
****
ಚೈತನ್ಯ ಯಾತ್ರೆಯ ನಂತರದ ಸರಕಾರದ ತಳಕ್ಕೆ ಮುಳ್ಳಿನ ಹಾಸಿಗೆ ಹಾಸಿದಾತನೆಂದರೆ ವಿರೋಧಿ ಪಕ್ಷದ ಮುಖಂಡ ವೈಕುಂಠಪತಿ!
ಚಳಿಗಾಲದ ಅಧಿವೇಶನದಲ್ಲಿ ಒಬ್ಬ ಯಃಕಶ್ಚಿತ್ ಸುಂದರ ಹೆಣ್ಣನ್ನು ದೇವತೆಯನ್ನಾಗಿ ಮಾಡಿ ಮೆರೆಸಿ ಕೋಟ್ಯಾಂತರ ರೂಪಾಯಿ ಹಣನ್ನು ಪೋಲುಮಾಡಿದ ಬಗ್ಗೆ ನ್ಯಾಯಾಂಗ ವಿಚಾರನೆಯಾಗಬೇಕೆಂದು ಪಟ್ಟು ಹಿಡಿದನು. ಮೆರವಣಿಗೆಯ ಸಂದರ್ಭದಲ್ಲಿ ವಿರೋಧಿ ಪಕ್ಷದ ಕಾರ್‍ಯಕರ್ತರನ್ನು ಅಮಾನುಷವಾಗಿ ಥಳಿಸಿದ್ದರ ಬಗ್ಗೆ; ಗೋಲಿಬಾರ ನಡೆಸಿ ಶ್ರೀಸಾಮಾನ್ಯರ ಸಾವಿಗೆ ಕಾರಣರಾದ ಪೋಲೀಸರ ಅಮಾನುಷ ವರ್ತನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು; ಈ ಬಗ್ಗೆ ಚರ್ಚೆಗೆ ಅವಕಾಶ ಕೊಲೇಬೇಕೆಂದು ಸಭಾಪತಿ ಎದುರು ವೈ.ಪತಿ ಧರಣಿ ಕೂತರು.
ಎಲ್ಲಾ ವಿರೋಧ ಪಕ್ಷಗಳು ಆತನಿಗೆ ನೈತಿಕವಾಗಿ, ದೈಹಿಕವಾಗಿ ಬೆಂಬಲ ವ್ಯಕ್ತಪಡಿಸಿದರು. ಸರಕಾರ ವಜಾ ಮಾಡಬೇಕೆಂದು ರಾಜ್ಯಪಾಲರಿಗೂ ಮನವಿ ಮಾಡಿದರು. ಆದರೆ ಸರಕಾರ ಅವರ ಮನವಿಯನ್ನು ಪುರಸ್ಕರಿಸಲಿಲ್ಲ.
ದಿನಗಳೆದಂತೆ ವೈ.ಪತಿಯ ಕಾಟ ಜಾಸ್ತಿಯಾಗಯಿತು. ವಿಧಾನಸೌಧದೆದುರು ಸಭೆ ಭಾಷಣಗಳು ನಡೆದವು. ಸರದಿ ಉಪವಾಸ ಸತ್ಯಾಗ್ರಹ ಕೂಡುವುದಕ್ಕೆ ಶುರುವಾದವು. ಸರಕಾರ ವಜಾ ಆಗುವಂತೆ ಹೋರಾಟ ಮಾಡಬೇಕೆಂದು ಅಮರಣಾಂತ ಉಪವಾಸ ಸತ್ಯಾಗ್ರಹ ಕೂಡುವುದಕ್ಕೆ ಮೊದಲು ಭರ್ಜರಿ ಬಹಿರಂಗ ಸಭೆಯಲ್ಲಿ ಇಡೀ ರಾಜ್ಯದ ಯುವ ಜನತೆಗೆ ಕರೆ ನೀಡಿದನು.
ನಂತರ ವೈ. ಪತಿ ಸೌಧದೆದುರು ಪದ್ಮಾಸನ ಹಾಕಿದನು. ಒಂದು ದಿನದಲ್ಲಿ ಆತನ ದೇಹ ತೂಕದಲ್ಲಿ ಅರ್ಧ ಕೇಜಿ ವಜಾ ಆಯ್ತು. ನಾಲ್ಕು ದಿನದಲಲ್‌ಇ ಐದು ಕೇಜಿ ವಜಾ ಆಯ್ತು…. ಆನೆಯಂಥ ಮನುಷ್ಯ ಆಡಿನಂತಾದ…. ಓಹ್ ವೈ.ಪತಿ ಇನ್ನೇನು ತಮ್ಮನ್ನು ಕೈಬಿಡಬಹುದೆಂದೂಹಿಸಿದ ವಿರೋಧಿ ಪಕ್ಷಗಳ ಒಂದು ನಿಯೋಗ ಪ್ರಧಾನಿಯನ್ನು ಕಾಣಲು ಇಂದ್ರಪ್ರಸ್ಥಕ್ಕೆ ತೆರಳಿತು.
ಹೇಗೋ ಕೇಂದ್ರದಲ್ಲಿ ಅಧಿಕಾರದಲ್ಲಿರೋದು ತಮ್ಮ ಪಕ್ಷದ ಸರಕಾರವೆ! ಪಕ್ಷದ ಅಧ್ಯಕ್ಷರನ್ನೂ; ಪ್ರಧಾನಮಂತ್ರಿಗಳನ್ನೂ; ಇತರೇ ವರಿಷ್ಠರನ್ನೂ ಕಂಡು ತಮ್ಮ ರಾಜ್ಯದ ಸರಕಾರವನ್ನು ವಜಾಮಾಡಿ ತಮ್ಮ ಪಕ್ಷದ ಬೆನ್ನೆಲುಬಾದ ವೈಕುಂಠಪತಿಯನ್ನು ಉಳಿಸಬೇಕೆಂದು ಸಕಾರಣಸಹಿತ ವಿವರಿಸಿದರು. ಕೇಂದ್ರಸರಕಾರ ಕೇಂದ್ರಸಚಿವ ಟಾಟಾ ಸಿಂಗರನ್ನು ರಾಜ್ಯದ ಪರಿಸ್ಥಿತಿಯ ಪರಿವೀಕ್ಷಣೆಯಗೆಂದು ರಾಜ್ಯಕ್ಕೆ ಕಳಿಸಿತು. ಟಾಟಾಸಿಂಗ್ ಎರಡು ದಿನ ರಾಜ್ಯದ ವಿವಿಧ ಮುಖಂಡರ ಜೊತೆ ಸಮಾಲೋಚಿಸಿ ವೈ.ಪತಿಗೆ ಅರ್ಧ ಕಪ್ ಲಿಂಬು ಪಾನಕ ಕುಡಿಸಿ ಇಂದ್ರಪ್ರಸ್ಥಕ್ಕೆ ವಾಪಸಾಗಿ ರಾಷ್ಟ್ರಪತಿ ಆಡಲಿತಕ್ಕೆ ಶಿಫಾರಸ್ ಮಾಡಿದರು.
ಮರುದಿನವೇ ಹದಿನಾಲ್ಕು ತಿಂಗಳ ವಯಸ್ಸಿನ ರಾಜ್ಯ ಸರಕಾರ ವಜಾ ಆಯಿತು. ವಜಾಗೊಂಡ ಆಡಳತ ಪಕ್ಷದವರೂ ಮೀಸೆ ಮೇಲೆ ಕೈ ಹಾಕಿದರು. ವಿರೋಧಿ ಪಕ್ಷದ ವೈಕುಂಠಪತಿ ಮುಖ್ಯಮಂತ್ರಿ ಕುರ್ಚಿಯ ಕನಸು ಕಂಡನು.
ಎರಡೂ ಪಕ್ಷದವರು ಜನರ ವಿಶ್ವಾಸ ಗಳಿಸಲು ಪ್ರತಿಯೊಂದು ಗ್ರಾಮದಲ್ಲೂ ವಿವಿಧ ಸರ್‍ಕಸ್ ನಡೆಸಿದರು. ಕೇಂದ್ರ ಸರ್ಕಾರ ರಾಜ್ಯದಲ್ಲಿ ಚುನಾವಣೆ ನಡೆಸುವಂತೆ ಚುನಾವಣೆ ಮಂಡಳಿಗೆ ಕೇಳಿಕೊಂಡಿತು. ಮಂಡಲಿಯೂ ಇಷ್ಟನೇ ತಾರೀಕು ಚುನಾವಣೇ ಅಂತ ಘೋಷಿಸಿಬಿಟ್ಟಿತು.
ರಾಜ್ಯದಲ್ಲಿ ಎರಡೂ ಪಕ್ಷದವರು ಹುರ್ರೆಂದರು. ಮಾಜಿಗಳು ತಂತಮ್ಮ ಕ್ಷೇತ್ರಗಳಿಂದಲೇ ಸ್ಪರ್‍ಧಿಸಿದರು. ಮುಖ್ಯಮಂತ್ರಿ ಅ.ದಕ್ಷಬ್ರಹ್ಮ ತಂಗಳೂರು ಉತ್ತರ ಕ್ಷೇತ್ರದಿಂದಲೂ ಕೂಡ್ಲಿಗಿ ಕ್ಷೇತ್ರದಿಂದಲೂ ಸ್ಪರ್‍ಧಿಸಿದರು.
ತಂಗಳೂರಿನ ದನದ ಪೇಟೆ ಕ್ಷೇತ್ರಕ್ಕೆ ನಟ ಚಕ್ರವರ್ತಿ ವೀರಬಲ್ಲಾಳ ಮುನ್ನೂರು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಾಯಕನಟ, ಆಡಳಿತ ಪಕ್ಷಕ್ಕೆ ಎದೆ ದಸಕ್ಕೆಂತು. ಮೊದಲೇ ದನದಪೇಟೆ ಪ್ರತಿಷ್ಠಿತ ಕ್ಷೇತ್ರ ಬೇರೆ. ವೀರಬಲ್ಲಾಳನೆದುರು ಅ.ದಕ್ಷಬ್ರಹ್ಮ ಸ್ಪರ್‍ಧಿಸಿದರೂ ಠೇವಣಿ ಉಳಿಯೊಲ್ಲ. ಏನು ಮಾಡುವುದೆಂದು ಆಡಳಿತ ಪಕ್ಷದ ಹಿರಿಯರು ಇಡೀ ರಾತ್ರಿ ಚರ್‍ಚಿಸಿ ಬೆಳಗಾಮುಂಜಾನೆ ಒಂದು ನಿರ್‍ಧಾರಕ್ಕೆ ಬಂದರು. ವೀರಬಲ್ಲಾಳನೆದುರು ಸ್ಪರ್ಧಿಸುವ ಅರ್ಹತೆ ಇರುವುದು ಭಾಗೀರಥಿಗೆ ಮಾತ್ರ!
ಅವತ್ತೇ ಹಿರಿಯರು ಕಲಾಕುಂಜಕ್ಕೆ ಹೋಗಿ ಆಕೆಗೆ ತಮ್ಮ ಇಚ್ಛೆ ವ್ಯಕ್ತಪಡಿಸಿದರು. “ಅಯ್ಯೋ… ಇದೆಲ್ಲ ನನ್ಗೆ ಬೇಡ ಕಣ್ರೀ” ಎಂದು ಆಕೆ ಎಷ್ಟೇ ನಯವಾಗಿ ನಿರಾಕರಿಸಿದರೂ ಅವರು ಬಿಡಲಿಲ್ಲ. ನೂರಕ್ಕೆ ನೂರರಷ್ಟು ವಿದ್ಯಾವಂತರೇ ತುಂಬಿರುವ ದನದಪೇಟೆಗೆ ಸಂಬಂಧಿಸಿದ ತಾಶೀಲ್ದಾರು ಕಛೇರಿಗೆ ಭಾಗೀರಥಿಯನ್ನು ಬ್ಯಾಂಡುಭಝಂತ್ರಿಯೊಂದಿಗೆ ಕರೆದೊಯ್ದು ನಾಮಪತ್ರ ಸಲ್ಲಿಸಲಾಯಿತು.
ದಿನಗಳದಂತೆ ಚುನಾವಣೆ ಕಾವೇರಿತು. ಆಡಳಿತ ಪಕ್ಷದವರು ತಮ್ಮ ಮತದಾರರಿಗೆ ವಿವಿಧ ಕಾಣಿಕೆಗಳನ್ನು ಪ್ರಕಟಿಸಿದರು.
ಅವರೆಂದರೆ ಗಂಡಸರಿಗೆ ಚಿಕ್ಕ ಬಟ್ಟಲು, ಬ್ರಷ್ ಹಾಗೂ ರೆಜರ್, ಹೆಂಗಸರಿಗೆ ಆತ್ಮರಕ್ಷಣೆಗೊಂದು ಚೌಟು ಹಾಗೂ ಒಂದು ಜೊತೆ ಹೈ ಹೀಲ್ಡು ಚಪ್ಪಲ್. ವಿರೋಧಿ ಪಕ್ಷದವರೂ ಅಷ್ಟೇ! ಗಂಡಸರಿಗೆ ಬನಿಯನ್, ಚಡ್ಡಿ ಹೆಂಗಸರಿಗೆ ನೀಳ ಚವರಿ, ತಾಳಿ ಪೋಣಿಸಿಕೊಳ್ಳಲು ಗಟ್ಟಿದಾರ…
ಒಂದೊಂದು ಪಕ್ಷದ್ದೂ ಒಂದೊಂದು ಆಕರ್‍ಷಣೆ.
ಅದಕ್ಷಬ್ರಹ್ಮ ಪ್ರಚಾರಕ್ಕೆಂದು ಹೋದಲ್ಲೆಲ್ಲ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಲಿಲ್ಲ.
ತಂಗಳೂರಿನ ಉತ್ತರವೇ ಆತಗೆ ಪ್ರತಿಕೂಲವಾಗಿತ್ತು. ಪಕ್ಷದ ಹಿರಿಯರ ಒತ್ತಾಯಕ್ಕೆ ಮಣಿದು ಭಾಗೀರಥಿ ಮತ್ತೊಮ್ಮೆ ತನ್ನ ಚೈತ್ರ ರಥವನ್ನೇರಿದಳು. ಆಯಾ ಕ್ಷೇತ್ರಗಳ ಮತದಾರರ ಅಭಿರುಚಿಗೆ ತಕ್ಕಂತೆ ಉಡುಪು ಧರಿಸುವಳು. ಅವರ ಅಭಿರುಚಿಗೆ ತಕ್ಕಂತೆ ಹಾಡುವಳು. ಅವರ ಅಭಿರುಚಿಗೆ ತಕ್ಕಂತೆ ನೃತ್ಯ ಮಾಡುವಳು. ಕೇವಲ ಒಂದು ವಾರದಲ್ಲಿ ಇಡೀ ರಾಜ್ಯದಲ್ಲೆಲ್ಲ ಭಾಗೀರಥಿಯ ಗಾಳಿ ಬೀಸಿತು. ಅಭ್ಯರ್ಥಿಗಳು ಆಕೆಗೆ ಕೃತಜ್ಞತೆ ಸಲ್ಲಿಸಿದರು. ತಂಗಳೂರಿನ ಉತ್ತರ ಕ್ಷೇತ್ರವೂ ಭಾಗೀರಥಿಯ ಮೋಹಕ ಚೆಲುವಿಗೆ ಮಣಿಯಿತು.
ಕ್ಲೈಮಾಕ್ಸ್ ಹಂತದಲ್ಲಿ ತನ್ನ ದನದಪೇಟೆ ಕ್ಷೇತ್ರದ ಕಡೆ ಗಮನ ಹರಿಸಿದಳು. ಎಲ್ಲಿ ನೋಡಿದರೂ ನಟ ಭಯಂಕರ ವೀರಬಲ್ಲಾಳನ ವಿವಿಧ ಭಂಗಿಯ ಫೋಟೋಗಳು. ದನದಪೇಟೆಯ ಐದು ಚಿತ್ರಮಂದಿರಗಳಲ್ಲಿ ಆತನ ಸಿನಿಮಾಗಳನ್ನು ಮತದಾರರು ಪುಕ್ಕಟೆಯಾಗಿ ನೋಡಬಹುದಿತ್ತು. ಅಲ್ಲದೆ ನೋಡುವವರಿಗೆ ಪುಕ್ಕಟೆಯಾಗಿ ಮಾತ್ರೆಗಳನ್ನು ವಿತರಿಸುತ್ತಿದ್ದುದು ಇನ್ನೊಂದು ಆಕರ್ಷಣೆ.
ದನದಪೇಟೆ ಮತದಾರರನ್ನು ತನ್ನ ಕಡೆ ಸೆಳೆಯಲು ಭಾಗೀರಥಿ ಆ ಕ್ಷೇತ್ರದ ಹಲವು ಕಡೆ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ನೀಡಿದಳು… ವರುಣನ ಮಾನಸಪುತ್ರಿ ಭಾಗೀರಥಿಯವರಿಂದ ಡಿಸ್ಕೋ ಡಾನ್ಸ್ ಶ್ರೀ ಸಚ್ಚಿದಾನಂದ ಕಲ್ಯಾಣ ಮಂಟಪದಲ್ಲಿ… ಬಿಸಿರಕ್ತದ ಯುವಕರ ಸಾವಿರಾರು ಹೃದಯಗಳನ್ನು ಕಣ್ಣು ಮೀಟಿ ಸ್ಫೋಟಿಸಿದಳು. ಮತ್ತೊಂದು ಕಡೆ ಬ್ರೇಕ್ ಡಾನ್ಸ್. ಮಗದೊಂದು ಕಡೆ ಸೆಮಿಕ್ಯಾಬರೆ. ಕ್ಷೇತ್ರದ ಮಡಿವಂತ ಗೃಹಿಣಿಯರಿಗಾಗಿ ರಾಧಾ ಮಾಧವ ವಿನೋದಹಾಸ. ಕೊನೆದಿನ ತನ್ನ ಕ್ಷೇತ್ರದ ಮತದಾರರಿಗೆ ಆಕೆ ವಿತರಿಸಿದ್ದು ಎರಡು ವಸ್ತುಗಳನ್ನು ಹೆಂಗಸರಿಗೆ ಕುಂಕುಮ, ಗಂಡಸರಿಗೆ…
ಅಂದು ಮತದಾನದಲ್ಲಿ ಸಾವಿರಾರು ಯುವಕರು ತಮ್ಮೆದೆಯ ಮೇಲೆ ಭಾಗೀರಥಿಯ ಭಾವಚಿತ್ರ ಅಂಟಿಸಿಕೊಂಡು ಮತ ಚಲಾಯಿಸಿದರು. ಎಲ್ಲ ಕಡೆಗೂ ಹೀಗೆಯೇ.
ರಾಜ್ಯದಾದ್ಯಂತ ಭಾಗೀರಥಿ ಕ್ರೇಜ್. ಮತಗಳ ಎಣಿಕೆ ಪ್ರಾರಂಭವಾಗುತ್ತಲೆ ಆಡಳಿತ ಪಕ್ಷದ ಅಭ್ಯರ್‍ಥಿಗಳು ಮುಂಚೂಣಿಯಲ್ಲಿ ನಡೆದರು. ದನದಪೇಟೆಯ ಫಲಿತಾಂಶ ಭಾಗೀರಥಿ ಕಡೆಗಿತ್ತು. ಠೇವಣಿ ಕಳೆದುಕೊಂಡ ವೀರಬಲ್ಲಾಳ ವಿಶೇಷ ಪ್ರಾಯಶ್ಚಿತ್ತ ಮಾಡಿಕೊಳ್ಳಲು ತಿರುಪತಿಗೆ ಹೋದನು. ಭಾಗೀರಥಿಯ ಚೈತ್ರರಥ ಹರಿದ ಕ್ಷೇತ್ರಗಳಲ್ಲೆಲ್ಲ ಆಡಳಿತ ಪಕ್ಷದ ಅಭ್ಯರ್ಥಿಗಳ ಕೊರಳಿಗೆ ಜಯಮಾಲೆ ಬಿದ್ದಿತು. ನಾಡಿನ ಇಪ್ಪತ್ತೊಂದು ಕ್ಷೇತ್ರಗಳು ವಿರೋಧ ಪಕ್ಷಗಳ ಪಾಲಾಗಿದ್ದವು. ಪ್ರಮುಖ ವಿರೋಧಪಕ್ಷ ವೈಕುಂಠಪತಿ ಕೇವಲ ಐವತ್ತೇಳು ಮತಗಳ ಅಂತರದಲ್ಲಿ ವಿಜಯಶಾಲಿಯಾಗಿದ್ದ.
ಜಯಭೇರಿ ಹೊಡೆದಿದ್ದ ಆಡಳಿತ ಪಕ್ಷದ ಶಾಸಕರು ಗಾದ್‌ಲಾಗ್‌ನ ಮಸಾಜ್ ಮನೆಯಲ್ಲಿ ತಮ್ಮ ಮುಖಂಡನನ್ನು ಆಯ್ಕೆ ಮಾಡಲು ಸಂಜೆ ಸಭೆ ಸೇರಿದರು. ತುಸು ತಡವಾಗಿ ವಿಶೇಷ ಬಂದೋಬಸ್ತಿನಲ್ಲಿ ಸಭೆಗೆ ಬಂದ ಭಾಗೀರಥಿಯನ್ನು ಎಲ್ಲರೂ ಎದ್ದು ನಿಂತು ಜಯಘೋಷ ಕೂಗಿ ಸ್ವಾಗತಿಸಿದರು.
ಎನಗಿಂತ ಕಿರಿಯರಿಲ್ಲ ನಿಮ್ಮಂಥ ಶಿವಶರಣೆಯರಿಗಿಂತ ಹಿರಿಯರಿಲ್ಲ ಎಂದು ಮೂಲೆಯಲ್ಲಿ ಕೂಡ್ರಲು ಹೋದ ಆಕೆಯನ್ನು ಒತ್ತಾಯ ಪೂರ್ವಕವಾಗಿ ಕರೆದೊಯ್ದು ವೇದಿಕೆ ಮೇಲೆ ಅ.ದಕ್ಷಬ್ರಹ್ಮ ಪಕ್ಕ ಕುಳ್ಳಿರಿಸಿದರು.
ಆಯ್ಕೆ ವಿಷಯದಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಗೆದ್ದಿದ್ದ ಇನ್ನೂರಾ ಹನ್ನೆರಡು ಶಾಸಕರ ಪೈಕಿ ನೂರಾತೊಂಬತ್ತೊಂದು ಮಂದಿ ಭಾಗೀರಥಿಯೇ ತಮ್ಮ ನೆಚ್ಚಿನ ನಾಯಕಿ ಎಂದು ಒಕ್ಕೂರಿಲಿನಿಂದ ಘೋಷಿಸಿದರು. ಖ್ಯಾತ ಮಾಜಿ ಅ.ದಕ್ಷಬ್ರಹ್ಮರ ಚಾಕ್‌ಲೇಟ್ ಮುಖದಲ್ಲಿ ಹರಳೆಣ್ಣೆ ಕಾಣಿಸಿಕೊಂಡಿತು. ಕೊನೆಗೆ ಭಾಗೀರಥಿಯೇ ಎದ್ದು ನಿಂತು ಸಭೆಗೆ ಕೈಮುಗಿದು ಕೇಳಿಕೊಂಡಳು. “ರಾಜಕೀಯ ದಲ್ಲಿ ಶಿಶು ನಾನು, ಆದ್ದರಿಂದ ನನ್ನ ಮಾಮನ ಸಮಾನರದಾ ಶ್ರೀ. ಅ.ದಕ್ಷಬ್ರಹ್ಮರೇ ಮುಖ್ಯಮಂತ್ರಿಗಳಾಗಿ ಮುಂದುವರಿದರೆ ನಾಡಿನ ಕಲ್ಯಾಣವಾಗುವುದೆಂದು ಭಾವಿಸುತ್ತೇನೆ”.
ಆಕೆಯ ಒತ್ತಾಯಕ್ಕೆ ಸಭೆ ಮಣಿಯಿತು. ಅ.ದಕ್ಷಬ್ರಹ್ಮರೂ ಎದ್ದು ನಿಂತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಭಾಗೀರಥಿಯನ್ನು ಸಭೆ ಉಪಮುಖ್ಯಮಂತ್ರಿಣಿ ಎಂದು ಆಯ್ಕೆ ಮಾಡಿತಲ್ಲದೆ ಗೃಹಖಾತೆ ಮತ್ತು ಹಣಕಾಸು ಖಾತೆಗಳನ್ನು ಆಕೆಗೇ ಒಪ್ಪಿಸಿತು.
ಮರುದಿನ ಬೆಳಿಗ್ಗೆ ಚುಮುಚುಮು ನಸುಕಿನಲ್ಲಿ ಶ್ರೀಯುತ ಅ.ದಕ್ಷಬ್ರಹ್ಮ ಕುಮಾರಿ ಭಾಗೀರಥಿ ಮತ್ತವರ ಹದ್ನೇಳು ಮಂದಿ ಸಹದ್ಯೋಗಿಗಳಿಗೆ ರಾಜ್ಯಪಾಲರು ಪ್ರಮಾಣ ವಚನ ಭೋದಿಸಿದರು.
* * *
ಹೊಸ ಸರಕಾರ ಹೊಸ ಹುರುಪಿನಿಂದ ಕೆಲಸ ಪ್ರಾರಂಭಿಸಿತು. ಎಲ್ಲ ಶಾಸಕರಿಗೆ ಭಾಗೀರಥಿಯೇ ಸ್ಫೂರ್ತಿಸೆಲೆ. ತಮ್ಮ ಸರಕಾರ ಮತ್ತಷ್ಟು ಜನಪ್ರಿಯ ಗೊಳ್ಳಲು ಮುಖ್ಯಮಂತ್ರಿ ಕೆಲವು ಕಾರ್ಯಕ್ರಮ ರೂಪಿಸಿದರು. ದೋತರ ಇಲ್ಲದವರಿಗೆ ದೋತರ, ಸೀರೆ ಇಲ್ಲದವರಿಗೆ ಸೀರೆ ಹೀಗೆ ಕೆಲವು ಶಾಂಪಲ್‌ಗಳು.
ಉಪಮುಖ್ಯಮಂತ್ರಿಣಿ ಜಾರಿಗೊಳಿಸಿದ ಕೆಲವು ಕಾರ್ಯಕ್ರಮಗಳು ಪ್ರಜೆಗಳಿಗೆ ತುಂಬ ಹಿಡಿಸಿದವು. ಗಂಡ ಇಲ್ಲದವರಿಗೆ ಗಂಡ, ಮಕ್ಕಳಿಲ್ಲದವರಿಗೆ ಮಕ್ಕಳು!… ತಲೆ, ಮುಖ, ನೆರೆತ ಕೂದಲು ಡೈ ಮಾಡಲು ರಿಯಾಯಿತಿ ದರದಲ್ಲಿ ಕಲರ್, ಹುಸಿನೆತ್ತಿಯವರಿಗೆ ವಿಗ್‌ಗಳು ಹೀಗೆ ಕೆಲವು.
ಅನತಿ ಕಾಲದಲ್ಲಿ ನಾಡಿನ ಮುಪ್ಪು ಮಾಯವಾಯಿತು.
ಎಲ್ಲಿ ನೋಡಿದರೂ ಯೌವನ! ಅರವತ್ತು ವರ್ಷದ ಮುದುಕರೂ ಮೂವತ್ತು ವರ್ಷದವರಂತೆ ಕಾಣತೊಡಗಿದರು… ಹೆಂಗಸರೂ ಅಷ್ಟೆ !
ಕು. ಭಾಗೀರಥಿ ಮತ್ತಷ್ಟು ಬೀಜಿಯಾದಳು. ಪಕ್ಷದ ಕಾರ್ಯಕರ್ತರು ಬಂದು ಪಕ್ಷದ ಸಂಘಟನೆ ಬಗ್ಗೆ ಸಲಹೆ ಪಡೆಯುವರು. ಸಾರ್ವಜನಿಕ ಸಂಪರ್ಕದ ಅವಧಿಯಲ್ಲಿ ಕೆಲವರು ಮುದುಕರು ಬಂದು ತಮಗಿನ್ನೂ ಯೌವ್ವನ ಸರಕಾರದಿಂದ ಒದಗಲಿಲ್ಲವೆಂದು ದೂರುವರು.
ಯುವಕರು ಬಂದು ನಾವೆಲ್ಲ ಬಾಲ್ಯದಿಂದ ಒಮ್ಮೆಗೆ ವೃದ್ಧಾಪ್ಯದ ಕಡೆ ಲಾಂಗ್ ಜಂಪ್ ಮಾಡಿಬಿಟ್ಟಿದೀವಿ… ಎಂದು ಗೊಣಗುವರು.
ಅವಕಾಶ ನೋಡಿಕೊಂಡು ಪ್ರೂವ್ ಮಾಡ್ಕೊಳ್ಳಿ ಎಂದು ಸಲಹೆ ನೀಡುವಳು ಭಾಗೀರಥಿ.
ಆಗ ಯುವಕರು ಪ್ರೂವ್ ಮಾಡ್ಕೊಳ್ಳೋಕೆ ಸರ್ಕಾರವೆ ಅಗ್ಗದ ದರದಲ್ಲಿ… ಎಂದು ಹೇಳಿಕೆ ಮುಂದಿಡುವರು. ಇದನ್ನು ಸರಕಾರ ಪರೀಶಿಲಿಸುವುದಾಗಿ ಮಂತ್ರಿಣಿ ಸಮಾಧಾನ ಹೇಳಿ ಕಳುಹಿಸುವಳು.
ತಮ್ಮ ಮದುವೆಯಾಗಿ ೫, ೧೦ ವರ್‍ಷಗಳಾಗಿದ್ದರೂ ಮಕ್ಕಳಾಗಿಲ್ಲೆಂದು ಬರುವ ಗೃಹಿಣಿಯರಿಗೆ ಮಂತ್ರಿಣಿ ಸಮಾಧಾನ ಹೇಳುವಳು. ಮಕ್ಕಳಿಲ್ಲದವರಿಗೆ ಮಕ್ಕಳು ಈ ಅಂಶ ಜಾರಿ ತರಲು ಸರಕಾರ ತಜ್ಞರ ಸಮಿತಿಯನ್ನು ನೇಮಿಸಲಿದೆ.
ಆಡಳಿತ ಪಕ್ಷದ ಬೆನ್ನೆಲುಬೇ ಭಾಗೀರಥಿಯಾದಳು. ಆಕೆ ಇಷ್ಟೊಂದು ಅಪಾರ ಜನಪ್ರಿಯತೆ ಪಡೆದದ್ದು ಕೇವಲ ಕಡಿಮೆ ಅವಧಿಯಲ್ಲಿಯೇ.
ವಿಧಾನಸೌಧದ ಶಾಸನ ಸಭೆಗಳಲ್ಲಿ, ಸಂಪುಟದ ಸಭೆಗಳಲ್ಲಿ ಆಕೆ ತನ್ನ ಜಾಣ್ತನದ ಮಾತುಗಳಿಂದ ಮಿಂಚಿದಳು. ಆಕೆ ಎಷ್ಟು ಮಿಂಚಿದಳೆಂದರೆ ವಿರೋಧ ಪಕ್ಷದ ಮುಖಂಡ ವೈಕುಂಠಪತೀಯೇ ಆಕೆಯ ಕಡೆ ಕಿರುನಗೆ ಬೀರಲಾರಂಭಿಸಿದನು. ಆಕೆಯ ಕೃಪೆಗೆ ಪಾತ್ರನಾಗಲು ಆತ ಸರಕಾರದ ಯಾವುದೇ ಹುಳುಕು ಟೇಬಲ್ ಗುದ್ದಿ ಅರ್‍ಭಟಿಸುವುದನ್ನು ಬಿಟ್ಟು ಕೊಟ್ಟನು.
ವಿರೋಧ ಪಕ್ಷದ ಮುಖಂಡ ವೈಕುಂಠಪತಿಗಳ ನಾಲಗೆ ಇತ್ತೀಚೆಗೆ ಕೋಮಲ ವಾಗಿದೆ. ಇದು ಶುಭ ಸೂಚನೆ ಒಮ್ಮೆ ಸಭಾಪತಿಗಳೇ ತಮಾಷೆ ಮಾಡಿದರು.
“ಸಚಿವೆ ಕುಮಾರಿ ಭಾಗೀರಥಿಯವರ ನೇತೃತ್ವದಲ್ಲಿ ಸರಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ವೈ.ಪತಿಯ ಹೇಳಿಕೆಯಿಂದಾಗಿ ವಿರೋಧ ಪಕ್ಷಿಗಳು ದಿಙ್ಮೂಢರಾದರು.
ನಂತರ ಅವರೆಲ್ಲ ಅಟ್ಯಾಕ್ ಮಾಡಿದಾಗ “ಛೇ… ಛೇ… ನಾನು ಹಾಗೆ ಹೇಳ್ಳೇ ಇಲ್ಲ. ಆಕೆ ನೇತೃತ್ವದಲ್ಲಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದ್ದೀನಿ… ಪತ್ರಿಕೆಗಳು ಆಳುವ ಪಕ್ಷದ ಚಮಚಾಗಳು…” ಎಂದು ಹೇಳಿಕೆ ನೀಡಿ ಬಚಾವಾದನು.
ಆದರೆ ಆತನ ಮನಸ್ಸು ಭಾಗೀರಥಿಗೆ ಫೇವರಂದ್ರೆ…ಫೇವರ್…!
ಭಾಗೀರಥಿಯನ್ನು ಯಃಕಶ್ಚಿತ್ ಒಬ್ಬ ಪೋಲಿಸ್ ಇನ್ಸ್‌ಪೆಕ್ಟರ್ ಕಾಣಲು ಬಂದ. ಆತನನ್ನು ನೋಡುತ್ತಲೇ ಭಾಗೀರಥಿಯ ಎದೆ ದಸಕ್ಕೆಂದಿತು. ಆದರೆ ತೋರಗೊಡಲಿಲ್ಲ.
ಇನ್ಸ್‌ಪೆಕ್ಟರ್ ಮಾರ್‍ತಾಂಡ ಪ್ಲೀಸ್ ಸಿಟ್‌ಡೌನ್!” ಆಕೆಯೊಳಗಿನ ಪರಮೇಶಿ ಮುಗುಳ್ನಕ್ಕನು.
ಮಾರ್ತಾಂಡ ಸಚಿವ ಸಂಪುಟದ ಪ್ರಮಾಣವಚನ ಸ್ವೀಕರಿಸಿದಂದಿನಿಂದ ಆಕೆಯನ್ನು ಫಾಲೋ ಮಾಡುತ್ತಿರುವನು. ಇದು ತನ್ನ ಹಳೆಯ ಗಿರಾಕಿ ಪರಮೇಶಿ ಎಂದು ಆತಗೆ ಅನುಮಾನ. ಕೆಲವು ತಿಂಗಳುಗಳಿಂದ ಫಾಲೋ ಮಾಡಿ ಖಚಿತಪಡಿಸಿ ಕೊಂಡಿದ್ದ. ಯಾರ ಬಳಿಯೂ ಬಾಯಿ ಬಿಟ್ಟಿರಲಿಲ್ಲ. ತಾನು ಅರೆಸ್ಟ್ ಮಾಡ ಬೇಕೆಂದಿರುವುದು ಗೃಹಸಚಿವೆಯನ್ನು!
ಅವನು ಏನೋ ಹೇಳಲೆಂದು ಬಾಯಿ ತೆರೆದ. ಅಷ್ಟರಲ್ಲಿ ಸಚಿವೆಯೇ ಹೇಳಿದಳು, “ಮಿಸ್ಟರ್ ಮಾರ್ತಾಂಡ… ನಿನ್ನ ಕಾರ್ಯದಕ್ಷತೆಗೆ ಮೆಚ್ಚಿರುವೆ. ಏನು ಬೇಕು, ಕೇಳು!”
ಗೃಹಸಚಿವೆಯೇ ತನ್ನನ್ನು ಈ ಪ್ರಶ್ನೆ ಕೇಳುತ್ತಿರುವುದು! ಒಂದು ಕ್ಷಣ ಏನೂ ತೋಚಲಿಲ್ಲ.
“ಮೇಡಂ ಪ್ರಮೋಷನ್”
ಎರಡನೇ ದಿನವೇ ಅವನು ಆಕಳಗುಡಿ ಏರಿಯಾದ ಡಿವೈಎಸ್ಪಿಯಾದನು.
ಅಲ್ಲಿಗೂ ಅವನಿಗೆ ತೃಪ್ತಿ ಇಲ್ಲ. ಸಚಿವೆಯ ಎದುರು ಆಗೊಮ್ಮೆ ಈಗೊಮ್ಮೆ ತಲೆ ಕೆರೆಯುತ್ತ ನಿಲ್ಲುವನು. ಆಕೆ ಆತಗೆ ಸರ್ತಿಗೊಮ್ಮೆ ಒಂದೊಂದು ಕವರ್ ಕೊಡುವಳು, ಗೃಹ ಖಾತೆಯ ಸಚಿವೆಯಿಂದಲೇ ಲಂಚ ಹೊಡೆಯುತ್ತಿರುವ ಅವನು ತನ್ನ ಬಗ್ಗೆ ತಾನೇ ಹೆಮ್ಮೆ ಪಟ್ಟುಕೊಳ್ಳುವನು.
ಭಾಗೀರಥಿ ವಿಚಲಿತಳಾಗಲಿಲ್ಲ. ಆಕೆಯ ದೃಷ್ಟಿಯಲ್ಲಿ ಮಾರ್ತಾಂಡ ಒಬ್ಬ ಬಚ್ಚಾ ಅಷ್ಟೇ.
ಈ ಮಧ್ಯೆ ವಿರೋಧ ಪಕ್ಷದ ನಾಯಕ ವೈಕುಂಠ ಪತಿ ಆಕೆಯ ಹಿಂದೆ ಸುತ್ತುತ್ತಿರುವನು. ಶಾಸಕಾಂಗ ಸಭೆ ನಡೆಯುತ್ತಿರುವಾಗ ವೈ.ಪತಿ ದಿಢೀರನೆ ಎದ್ದು ಹೋಗಿ ಸಚಿವೆ ಭಾಗೀರಥಿಯ ಪಕ್ಕ ಕೂತುಬಿಟ್ಟು ತನ್ನ ಸಹೋದ್ಯೋಗಿಗಳನ್ನು ಗಲಿಬಿಲಿಗೊಳಿಸಿ ಬಿಡುವನು. ಆಕೆ ಒಮ್ಮೊಮ್ಮೆ ಅವನ ಮುಂಗೈ ಹಿಚುಕುತ್ತಿದ್ದುದೂ ಉಂಟು. ಅವನು ರೋಮಾಂಚನಗೊಂಡು ಬ್ಬೆ ಬ್ಬೆಬ್ಬೆ ಅನ್ನುವುದುಂಟು.
ಲಾಂಗ್ ಬ್ಯಾಚುಲರ್‍ಸ್‌ಗೆ ಇದೆಲ್ಲ ಮಾಮೂಲು.
ಜಾಣ ಪತ್ರಕರ್ತರು ಇಂಥ ಸುದ್ದಿಗಳನ್ನು ಹೇಗೆ ಬಿಟ್ಟಾರು! ಅವರ ಫೋಟೋ ದೊಂದಿಗೆ ಗೂಸ ಪ್ರಕಟಿಸತೊಡಗಿದರು. ಅಂಥ ಸುದ್ದಿಗಳನ್ನು ನೋಡಿ ಸಚಿವೆ ನಗುವಳು. ವೈ. ಪತಿಯೂ ನಗುವನು! ಒಂದು ರೀತಿಯಲ್ಲಿ ಪತ್ರಿಕೆಗಳು ತಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತಿವೆ ಎಂದುಕೊಂಡರು.
ಭಾಗೀರಥಿ ತನ್ನ ರಾಜಕೀಯ ಪ್ರವಾಸದಲ್ಲಿ ವೈ. ಪತಿಯನ್ನು ತೊಡರಿ ಕೊಳ್ಳುವಳು. ರಾಜ್ಯದಾದ್ಯಂತ ಇರುವ ಪ್ರವಾಸಿ ಬಂಗಲೆಗಳಲ್ಲೆಲ್ಲ ಅವರಿಬ್ಬರೂ ರಾತ್ರಿ ಗಳನ್ನು ಕಳೆದರು. ತ್ರಿಸ್ಟಾರ್, ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಹಲವಾರು ಹಗಲು ಗಳನ್ನು ಕಳೆದರು.
ಭಾಗೀರಥಿಯನ್ನು ಪತ್ರಕರ್ತ ವೈ.ಪತಿಯೊಂದಿಗೆ ನಿಮ್ಮ ಸಂಬಂಧ ಎಂಥದು ಎಂದು ಕೇಳಿದಾಗ ಆಕೆ ಮುಗುಳ್ನಕ್ಕು “ನನ್ನ ಅವರ ಪ್ರೀತಿ ಲೈಲಾಮಜ್ನೂ ರೀತಿ ಎಂದು ಸೂಚ್ಯವಾಗಿ ಉತ್ತರಿಸುವಳು. ಅದು ಪ್ರಕಟವಾಗಿ ಬಿಡುವುದು. ಪತ್ರಕರ್ತರು ವೈಕುಂಠ ಪತಿಯನ್ನು ಕೇಳಿದಾಗ ಆತನೂ ಅಷ್ಟೇ ಮುಗುಳ್ನಗುವನು.
ಆಕೆಯೊಂದಿಗೆ ನನ್ನ ಸಂಬಂಧ ಆದರ್ಶ ದಂಪತಿಗಳ ಮಾದರಿಯದು”.
ಮೊದಮೊದಲು ವಾರ್ತೆಗಳನ್ನು ನಿರಾಕರಿಸುತ್ತಿದ್ದ ವೈ.ಪತಿ ಇತ್ತೀಚೆಗೆ ನಿರಾಕರಿಸುವುದಿಲ್ಲ. ವಿರೋಧ ಪಕ್ಷಿಗಳು ಸಾಧಾರ-ಸಬೂಬುಗಳೊಡನೆ ಇಂದ್ರ ಪ್ರಸ್ಥಕ್ಕೋಗಿ ಟಾಟಾಸಿಂಗ್‌ರವರನ್ನು ಕಂಡು ಕೂಡಲೆ ವೈ.ಪತಿಯನ್ನು ನಾಯಕ ಸ್ಥಾನದಿಂದ ಕಿತ್ತೊಗೆಯಬೇಕೆಂದು ಕೇಳಿಕೊಂಡರು. ಟಾಟಾಸಿಂಗ್ “ವೈಕುಂಠ ಪತಿಗಳೇ ನೀವು ಇತ್ತೀಚೆಗೆ ಪಕ್ಷ ವಿದ್ರೋಹ ಚಟುವಟಿಕೆಯಲ್ಲಿ ನಿರತರಾಗಿರುವಿರಿ. ನಿಮಗೆ ಲವ್ ಮಾಡಲು ಆಕೆಯೇ ಬೇಕಾಗಿತ್ತೆ… ನಮ್ಮ ಪಕ್ಷದಲ್ಲಿ ನಿಮಗೆ ಲವ್ ಮಾಡಲು ಯಾರು ಸಿಕ್ಕಲಿಲ್ವೇ ಹೀಗೆ ಮುಂದುವರಿಯದೆ ಕೂಡಲೆ ಸಚಿವೆಗೆ ಕೈಕೊಟ್ಟಿರಾದರೆ ನಮ್ಮ ಪಕ್ಷದಲ್ಲಿ…?
ವೈಕುಂಠಪತಿ ವಿರೋಧ ಪಕ್ಷಕ್ಕೆ ರಾಜೀನಾಮೆ… ಭಾಗೀರಥಿ ; ಅ.ದಕ್ಷಬ್ರಹ್ಮ: ಏಕಾದಶಿಯಂಥ ಗಣ್ಯರ ಸಮಕ್ಷಮ ವಿದ್ಯುಕ್ತವಾಗಿ ಆಡಳಿತ ಪಕ್ಷಕ್ಕೆ ಸೇರ್‍ಪಡೆ.
ಇದರಿಂದಾಗಿ ಭಾಗೀರಥಿಯ ಗ್ರೇಡು ಮತ್ತಷ್ಟು ಹೆಚ್ಚಿತು. ಕುಮಾರಿ ಭಾಗೀರಥಿ ಎಂದು ಸಭೆಯಲ್ಲಿ ಸಂಭೋದಿಸಿದ ಮುಖ್ಯಮಂತ್ರಿ ಅ. ದಕ್ಷ ಬ್ರಹ್ಮರನ್ನು ವೈ.ಪತಿ ತರಾಟೆಗೆ ತೆಗೆದುಕೊಂಡನು. ಶ್ರೀ ಕುಮಾರಿ ಅಂತ ಕರೀಬ್ಯಾಡ್ರಿ…ಶ್ರೀಮತಿ ಅಂತ ಕರೀರಿ. ಅದಕ್ಕೆ ಪ್ರತ್ಯಕ್ಷವಾಗಿ ನಾನೇ ಇಲ್ವಾ ಅಂತ…
ಒಮ್ಮೆ ಮಾಮಾ ಎಂದು ಭಾಗೀರಥಿಯಿಂದ ಕರೆಸಿಕೊಂಡಿದ್ದ ಮುಖ್ಯಮಂತ್ರಿ ಪ್ರಶ್ನಾರ್ಥಕವಾಗಿ ಆಕೆಯ ಕಡೆ ನೋಡಿದರು. ನವಿಲು ಬಣ್ಣದ ರೇಷ್ಮೆ ಸೀರೆ ಉಟ್ಟು ಕಂಗೊಳಿಸುತ್ತಿದ್ದ ಆಕೆ ನಸು ನಕ್ಕು ಶ್ರೀಮತಿ ಎಂದು ಕರೆದಲ್ಲಿ ತಮಗಾಗುವ ನಷ್ಟವೇನು”? ಎಂದು ಪಿಸುಗುಟ್ಟಿದಳು. ಮುಖ್ಯಮಂತ್ರಿಗಳು ಬಿಟ್ಟ ನಿಟ್ಟುಸಿರು ಹಾಲ್ ತುಂಬಿ ತುಳುಕಿತು. ಅವತ್ತಿನಿಂದ ವೈ.ಪತಿ ಭಾಗೀರಥಿಯ ಕಿವಿ ಕಚ್ಚತೊಡಗಿದನು. ಕ್ಯಾಬಿನೆಟ್‌ನಲ್ಲೂ ಈ ನಿನ್ನ ಗಂಡನಿಗೂ ಒಂದು ಸ್ಥಾನ ಕೊಡಿಸು ಅಂತ. ಅಷ್ಟೇ ಅಲ್ಲದೆ ಒಂದೆರಡು ತಿಂಗಳು ಹನಿಮೂನು ಅಂತ ಸಿಂಗಪೂರ್, ಟೋಕಿಯೋ, ಹಾಂಕಾಂಗ್, ಫ್ರಾನ್ಸ್, ಲಂಡನ್, ಅಮೇರಿಕಾ ಸುತ್ತಿಕೊಂಡು ಬರೋಣ ನಡೆ, ನನಗೆ ಬಹಳ ದಿನದಿಂದ ದಕ್ಷಿಣ ಅಮೇರಿಕಾದ ಅಮೇಜಾನ್ ನದಿಯಲ್ಲಿ ಸ್ನಾನ ಮಾಡ ಬೇಕೆಂಬ ಆಸೆ ಇದೆ…! ಎಂಬ ಮತ್ತೊಂದು ಆಸೆಯನ್ನು ತನ್ನ ಪ್ರಿಯತಮೆಯ ಮುಂದಿಟ್ಟನು. ಆತನ ಆಸೆಗೆ ಭಾಗೀರಥಿ ತಣ್ಣೀರೆರಚಿದಾಗ ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದರು. ಅವರು ಮಾಡಿದ ಎಲ್ಲ ಪರೀಕ್ಷೆಗಳಲ್ಲಿ ಭಾಗೀರಥಿ ಜಯಶಾಲಿ ಯಾದಳು. ಡಾ. ಸಂತಾನಂ ಕೈಗೆ ಹಾಕಿಕೊಂಡಿದ್ದ ಗ್ಲೋವ್ಸ್ ಕಿತ್ತುತ್ತ ಹೊರಗೆ ಬಂದು ಫೋರ್ಟಿಕೊದಲ್ಲಿ ಶತಪಥ ತಿರುಗುತ್ತಿದ್ದ ವೈ ಪತಿಯನ್ನು ಅಭಿನಂದಿಸಿ “ಇಷ್ಟರಲೇ ನೀವು ತಂದೆ ಆಗ್ತಿದೀರಿ” ಆತ ಹೇಳಿದರು.
ಆತ ಥ್ಯಾಂಕ್ಯೂ ಡಾಕ್ಟರ್ ಥ್ಯಾಂಕ್ಯೂ ಎಂದು ಹೇಳಿ ಒಳ ಓಡಿ ಪತ್ನಿ ಭಾಗೀರಥಿಯನ್ನು ಅಪ್ಪಿಕೊಂಡನು. ಇಗೆ ನೀವೆ ಹೇಳಿಬಿಡಿ ಡಾಕ್ಟರ್… ಇನ್ನು ಕೆಲವು ತಿಂಗಳು ಭಾಷಣ ಗೀಷಣ ಅಂತ ಆಯಾಸ ಮಾಡ್ಕೋಬಾರ್‍ದು ಅಂತ..
ದಿಲ್ ದಡಕನ್ ಆಸ್ಪತ್ರೆಯಲ್ಲಿದ್ದ ನೂರಾರು ಮಂದಿ ಡಾಕ್ಟರ್ ಎಲ್ಲರೂ ಉಪ ಮುಖ್ಯ ಮಂತ್ರಿಣಿ ಸುತ್ತ ಗುಂಪುಗೂಡಿ ಅಭಿನಂದಿಸಿ ಗರ್‍ಭಿಣಿ ಪಾಲಿಸಬೇಕಾದ ಆರೋಗ್ಯ ನಿಯಮಗಳ ಬಗ್ಗೆ ತಲಾ ಒಂದೊಂದು ಸಲಹೆ ಕೊಟ್ಟರು.
ಮರುದಿನ ನಾಡಿನ ಎಲ್ಲ ವೃತ್ತಪತ್ರಿಕೆಗಳಲ್ಲೂ “ಗೃಹಸಚಿವೆ ಭಾಗೀರಥಿ ಎರಡು ತಿಂಗಳು ಗರ್ಭಿಣಿ” ಎಂಬ ಸುದ್ದಿಯನ್ನು ಫೋಟೋ ಸಹಿತ ಪ್ರಕಟಿಸಿದವು. ನಾಡಿನ ಜನತೆಯಿಂದ ಅಭಿನಂದನೆಯ ಸುರಿಮಳೆ… ಆಡಳಿತ ಪಕ್ಷ ಕೂಡ ಗರ್ಭಿಣಿ ಭಾಗೀರಥಿ ಬಗ್ಗೆ ವಿಶೇಷ ಆಸೆ ಪ್ರಕಟಿಸಿತು. ಆಕೆಯ ಪವಿತ್ರ ಗರ್ಭದಲ್ಲಿ ಬೆಳೆಯುತ್ತಿರುವ ಶಿಶು ನಾಡಿನ ಆಸ್ತೀಯೇ ಸರಿ. ಮುಖ್ಯಮಂತ್ರಿ ಅದಕ್ಷ ಬ್ರಹ್ಮರು ನಾಡಿನ ಎಲ್ಲ ದೇನಸ್ಥಾನಗಳಲ್ಲಿ ಸಚಿವೆ ಭಾಗೀರಥಿ ಹೆಸರಿನಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸುವಂತೆ ಆಜ್ಞೆ ಹೊರಡಿಸಿದರಲ್ಲದೆ… ಪೂಜಾ ವೆಚ್ಚಕ್ಕೆ ಬೇಕಾದ ಹಣವನ್ನು ಬಿಡುಗಡೆ ಮಾಡಿದರು.
ನಾಡಿನ ಪ್ರಸಿದ್ಧ ಜೋತಿಷಿಗಳೂ ಗುಣಿಸಿ ಭಾಗಿಸಿ, ಗ್ರಹಗತಿ, ನಕ್ಷತ್ರ ತಿರುತಿರುವಿ ನೋಡಿ ಸಚಿವೆಯರ ಗರ್ಭದಲ್ಲಿ ಪ್ರತಿಭಾ ಸಂಪನ್ನ ಮಗು ಬೆಳೆಯುತ್ತಿರುವುದೆಂದೂ, ಅದು ಈ ನಾಡನ್ನು ಪಾಪಕೂಪದಿಂದ ಮೇಲೆತ್ತುವುದೆಂದೂ ಅಭಿಪ್ರಾಯಪಟ್ಟರು.
ವೈ. ಪತಿ ಕೂಡ ಭಾಗೀರಥಿಯನ್ನು ಸತತ ಹಿಂಬಾಲಿಸಿ ಆರೋಗ್ಯ ವಿಚಾರಿಸಿ ಕೊಳ್ಳುವುದು ಇದೆಲ್ಲ ಭಾಗೀರಥಿಗೆ ತುಂಬ ಕಿರಿಕಿರಿ ಎನ್ನಿಸಿತು. ತಾನು ಎಲ್ಲಿಗೂ ಸಲೀಸಾಗಿ ಹೋಗುವಂತಿಲ್ಲ, ಬರುವಂತಿಲ್ಲ. ಈ ಮೂರ್ಖರ ನಡುವೆ ಎಷ್ಟು ದಿನ ಅಂತ ಇರೋದು!
ಅವತ್ತು ಪ್ರಶಸ್ತಿಗಳನ್ನು ಯಾರು ಯಾರಿಗೆ ಕೊಡಬೇಕೆಂದು ನಿರ್ಧರಿಸಲು ಸರಕಾರದ ಗಣ್ಯರು ಸೇರಿದ್ದ ಸಭೆಯಲ್ಲೂ ಆಕೆ (ತ) ಅದೇ ಚಿಂತಿಸಿದ್ದು.
ಇಂಥ ಪ್ರಶಸ್ತಿಗಳನ್ನು ತನ್ನ ನೆಚ್ಚಿನ ಪತಿಗೂ ಹಾಗೂ ಆಕಳುಗುಡಿ ವಿಭಾಗದ ಡಿವೈ ಎಸ್ಪಿ ಮಾರ್ತಾಂಡಗೂ ಕೊಡಲೆಬೇಕೆಂದು ಆಕೆ ಪಟ್ಟು ಹಿಡಿದಳು. ಆಕೆಯ ಮಾತನ್ನು ಮೀರಲು ಯಾರಿಗೆ ತಾನೆ ಸಾಧ್ಯ ಒಪ್ಪಿಕೊಂಡರು. ಅವತ್ತಿನ ಪ್ರಶಸ್ತಿಗಳನ್ನು ವಿತರಿಸಲು ಆಕೆಯನ್ನೇ ಬೇಡಿಕೊಂಡರು, ಗರ್ಭಿಣಿಯಾದ ತನಗೆ ಯಾಕೆ ಇದೆಲ್ಲ ಎಂದು ಮೊದಲು ಗೊಣಗುಟ್ಟಿ ಕೊನೆಗೆ ಒಪ್ಪಿಕೊಂಡಳು.
ಮರುದಿನ ಪತ್ರಿಕೆಗಳ ಮುಖಪುಟಗಳಲ್ಲಿ ವೈಕುಂಠ ಪತಿ ಮತ್ತು ಮಾರ್ತಾಂಡರ ಭಾವಚಿತ್ರಗಳು ಹಾಗೂ ಅವರ ಬಗೆಗೆ ಲೇಖನಗಳು ಪ್ರಕಟ ಗೊಂಡವು. ವೈ. ಪತಿ ಆಕೆಯ ಚೆಂಗೆನ್ನೆಗೆ ಮುತ್ತು ಕೊಡುವುದರ ಮೂಲಕ ಕೃತಜ್ಞತೆ ಸೂಚಿಸಿದರೆ ಮಾರ್ತಾಂಡ “ಹುಟ್ಟು ಮಾರ್ಗದಲ್ಲಿ ಬಂದ ನಿಮ್ಮದು ಬೆಣ್ಣೆಯಂಥ ಹೃದಯವೆಂದೂ ಹೇಳಿಹೋದನು”.
ಮರುದಿನ ಸಂಜೆ ತಂಗಳೂರಿನ ಪತ್ರಕರ್ತರನ್ನು ತನ್ನ ಪರ್ಸನಲ್ ಛೇಂಬರಿಗೆ ಅಹ್ವಾನಿಸಿದಳು. ರಾಜಕೀಯ ವಿದ್ಯಮಾನಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಸ್ವಾತಂತ್ರ್ಯ ದಿನಾಚರಣೆಯೆಂದು ಪ್ರಜಾಪ್ರಭುತ್ವವನ್ನು ಅನಾವರಣಗೊಳಿಸುವುದಾಗಿ ಘೋಷಿಸಿ ದಳು. ಅದಕ್ಕೆ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾದಷ್ಟು ಒಳ್ಳೆಯದೆಂದು ಹೇಳಿಕೆ ಕೊಟ್ಟಳು.
ಮರುದಿನ ಪತ್ರಿಕೆಗಳಲ್ಲಿ ಅದೇ ಸುದ್ದಿ. ಈ ಬಗ್ಗೆ ಸರಕಾರದ ವರಿಷ್ಟರು ಆಕೆಯಿಂದ ವಿವರ ಪಡೆಯಲು ಪ್ರಯತ್ನಿಸಿ ವಿಫಲರಾದರು. ಆಕೆ ಅವರಿಗೆಲ್ಲ ಹೇಳಿದ್ದು ಒಂದೆ.
“ಅಂದೇ ನೋಡಿರಿ ಸ್ಟೇಡಿಯಂನಲ್ಲಿ ಸಂಭ್ರಮವೋ ಸಂಭ್ರಮ;
ವಿಶೇಷ ಬಂದೋಬಸ್ತಂದರೆ ಬಂದೋಬಸ್ತು !
ಸುಮಾರು ಅರವತ್ತು ಸಾವಿರ ಆಸನಗಳನ್ನು ನಾಡಿನ ಗಣ್ಯರಿಗೆ ಮೀಸಲಿರಿಸಲಾಗಿತ್ತು. ಸುಮಾರು ೩-೪ ಲಕ್ಷ ಜನರಿಗೆ ನಿಂತುಕೊಳ್ಳಲು ಜಾಗ ಕಲ್ಪಿಸಲಾಗಿತ್ತು.
ತಮ್ಮ ನೆಚ್ಚಿನ ನಾಯಕಿ ಭಾಗೀರಥಿ ಪ್ರಜಾಪ್ರಭುತ್ವವನ್ನು ಅನಾವರಣಗೊಳಿಸುವ ರೀತಿಯನ್ನು ನೋಡಲು ನಾಡಿನ ಮೂಲೆ ಮೂಲೆಯಿಂದ ಜನ ವಿಶೇಷ ಬಸ್ಸು, ರೈಲುಗಳಿಂದ ಇಳಿದು ತಣ್ಣಿರವ ಸ್ಟೇಡಿಯಂ ಕಡೆ ಧಾವಿಸಿದರು.
ನಗರದ ಸುಪ್ರಸಿದ್ದ ವೈದ್ಯರಾದ ಡಾ. ಸಂತಾನಂ, ಪರಾಜಯಗೊಂಡ ನಟ ಭಯಂಕರ ವೀರಬಲ್ಲಾಳರನ್ನೊಳಗೊಂಡಂತೆ ಸಾವಿರಾರು ಮಂದಿ ಮಹಿತೋ ಮಹಿಮರಿಗೆ ವಿಶೇಷ ಆಮಂತ್ರಣ ಇದೆ ಮತ್ತು ಅವರೆಲ್ಲ ಇಲ್ಲಿ ಬಣ್ಣ ಬಣ್ಣ ಕಾರು ಗಳಿಂದ ಬಂದು ಇಳಿಯುತ್ತಿದ್ದರು. ಅವರ ಎದೆ ಮೇಲೆ ಭಾಗೀರಥಿಯ ನಗು ಮುಖದ ಭಾವಚಿತ್ರದ ಬ್ಯಾಡ್ಜನ್ನು ಆಡಳಿತ ಪಕ್ಷದ ಕಾರ್ಯಕರ್ತರು ದಾವಂತರಿಂದ ಲಗತ್ತಿಸುತ್ತಿದ್ದರು. ಯಾರ ಎದೆ ಮೇಲೆ ನೋಡಿದರೂ ಭಾಗೀರಥಿ, ಯಾರ ಕೈಯಲ್ಲಿ ನೋಡಿದರೂ ಭಾಗೀರಥಿ;
ಮುಖ್ಯಮಂತ್ರಿ ಅ. ದಕ್ಷಬ್ರಹ್ಮ ತನ್ನ ಸಹೋದ್ಯೋಗಿಗಳೊಡನೆ ವೇದಿಕೆ ಮೇಲೆ ಬಂದಾಗ ಜನಸ್ತೋಮ ಗುಜುಗುಜು ಮಾಡಿತಷ್ಟೇ. ನಿಗದಿತ ವೇಳೆಗೆ ಎರಡು ಸೆಕೆಂಡು ಮೊದಲು ಭಾಗೀರಥಿ ತನ್ನ ಪತಿ ವೈಕುಂಠಪತಿಯೊಡನೆ ವೇದಿಕೆ ಪ್ರವೇಶಿಸುತ್ತಲೇ ಲಕ್ಷಾಂತರ ಜನಸ್ತೋಮ ಒಕ್ಕೊರಲಿನಿಂದ ಜಯಘೋಷ ಮಾಡಿತು. ಬಾಬ್ ಕಟ್ ಗುಂಗುರುಗೂದಲು ಆಕೆಯ ದುಂಡು ಮುಖಕ್ಕೆ ವಿಶೇಷ ಮೆರಗು ನೀಡಿದ್ದವು. ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿದ ಆಕೆ ಗುಲಾಬಿ ಬಣ್ಣದ ಜಾರ್ಜೆಟ್ಟನ್ನು ಸ್ವಲ್ಪ ಸೊಂಟದ ಕೆಳಗೆ ಉಟ್ಟಿದ್ದಳು. ಹೀಗೆ ನೋಡುವವರ ಕಣ್ಣಿಗೆ ಹಬ್ಬ ಮಾಡುವ ರೂಪರಾಶಿ.
ಜನಸ್ತೋಮದ ಕಡೆ ಕೈ ಎತ್ತಿ ಮುಗಿದಳು.
ಸಭೆಯ ಕಾರ್ಯಕ್ರಮ ಎಲ್ಲವ್ವ ಜೋಗತಿಯರ ಸಂಗಡಿಗರು ಹಾಡಿದ “ಎಲ್ಲಿ ಕಾಣೆಲ್ಲಿ ಕಾಣೆ” ಎಂಬ ದೇವಿಸ್ತುತಿಯಿಂದ ಪ್ರಾರಂಭವಾಯಿತು. (ಅದೂ ಜಾನಪದ ಗಾಯಕರಿಗೆ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಇದೆಲ್ಲ) ಭಾಗೀರಥಿ ಎಡಕ್ಕೆ ತುಸುವಾಲಿದಳೆಂದರೆ ನಟ ವೀರಬಲ್ಲಾಳ “ಹಾಲಿವುಡ್ ನಟಿಯಂತಿರುವ ನೀವು ಯಾಕೆ ಚಿತ್ರರಂಗ ಪ್ರವೇಶಿಸಿ ಬಾರದು” ಎಂದು ಮಾತಿಗೆ ಹಚ್ಚುವನು;
ಬಲಕ್ಕೆ ವಾಲಿದಳೆಂದರೆ ಡಾ. ಸಂತಾನಂ “ವಾಮಿಟ್ ಎಷ್ಟು ಸಾರಿ ಆಗ್ತದೇಮೇಡಂ…” ಹೀಗೆ ಮಾತಾಡುವನು.
ಪ್ರಶಸ್ತಿ ಪಡೆಯಲೆಂದು ವಿಶೇಷ ಉಡುಪಿನಲ್ಲಿ ಬಂದಿದ್ದ ವೈ.ಪತಿ ವೇದಿಕೆಯ ಒಂದು ಪಕ್ಕ ಕೂತಿದ್ದರೆ ಇನ್ನೊಂದು ಪಕ್ಕ ಮಾರ್ತಾಂಡ…
ಮುಖ್ಯಮಂತ್ರಿ ಅ.ದಕ್ಷಬ್ರಹ್ಮ ತಮ್ಮ ಸ್ವಾಗತಭಾಷಣವನ್ನು ಸಾಂಪ್ರದಾಯಿಕವಾಗಿ ಶುರು ಮಾಡಿ ಭಾಗೀರಥಿಯನ್ನು ವಿಶೇಷವಾಗಿ ಹೊಗಳಿದರು. ನಂತರ ಪ್ರಶಸ್ತಿ ವಿತರಿಸಲೆಂದು ಭಾಗೀರಥಿ ಎದ್ದು ನಿಂತಳು. ನಲ್ಲು ಮಾತಾಡಿ ಬೆಳ್ಳಿಯ ಚವುಡಿಕೆಗಳನ್ನು ಐದು ಸಹಸ್ರ ರೂಪಾಯಿಗಳನ್ನು ಪ್ರಶಸ್ತಿ ವಿಜೇತ ವೈ.ಪತಿಗೂ, ಮಾರ್ತಾಂಡಗೂ ಬಾರೀ ಕರತಾಡನದ ನಡುವೆ ವಿತರಿಸಿದಳು. ಹಾಗೆ ವೀರ ಬಲ್ಲಾಳಗೂ, ಡಾ. ಸಂತಾನಂಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸ್ವಲ್ಪ ಹೊತ್ತು ಮಾತು ಬಂದಾಯಿತು. ಲಕ್ಷಾಂತರ ಜನ ಭಾಗೀರಥಿ ಕಡೆ ಮಿಕಿ ಮಿಕಿ, ನೋಡ ತೊಡಗಿದರು. ಭಾಗೀರಥಿಯಾದರೋ ಅಷ್ಟೇ ! ಆಕೆಯ ಚಿರಮುಗುಳ್ನಗೆಯೊಂದಿಗೆ ತನ್ನ ಅಭಿಮಾನಿ ಮಹಾಸ್ತೋಮದ ಕಡೆ ನೋಡುತ್ತಿರುವಳು. ಅದಕ್ಕೆ ಮೂಕ ಸಾಕ್ಷಿಯಾಗಿ ಧ್ವಜ ಮುಗಿಲಲ್ಲಿ ಪಟಪಟ ಹಾರಾಡುತ್ತಿರುವುದು !
ಯಾಕೀ ಮೌನ ?
ಜನ ಚಿಂತಿಸಿದರು. “ಪ್ರಜಾಪ್ರಭುತ್ವವನ್ನು ಅನಾವರಣಗೊಳಿಸುವುದಾಗಿ ಹೇಳಿದ್ದಿರಲ್ಲ ಮೇಡಂ. ಅದನ್ನು ಬೇಗನೆ ಅನಾವರಣಗೊಳಿಸಿ ತೋರಿಸ್ರಲ್ಲ” ಸಭೆಯಿಂದ ಒಬ್ಬ ಎದ್ದು ನಿಂತು ಕೇಳಿಯೇಬಿಟ್ಟ.
“ಓಹೋ ಅದನ್ನು ಮಾಡಲೆಂದು ನಾನೀಗ ಯೋಚಿಸುತ್ತಿರುವುದು”! ಮುಗುಳ್ನಕ್ಕಳು ಗೃಹಸಚಿವೆ.
ಭಾಗೀರಥಿಯ ಕೋಮಲ ಧ್ವನಿ ಮೈಕಿನಲ್ಲಿ ಅಲೆ ಅಲೆಯಾಗಿ ಹೊರ ಹೊಮ್ಮಿತು “ಪ್ರಜಾಪ್ರಭುತ್ವದ ಆಧಾರ ಸ್ತಂಭಗಳೆಲ್ಲ ಇಲ್ಲಿ ಹಾಜರಿದ್ದಾರೆ. ಈಗ ಅವರೆಲ್ಲರ ಸಮಕ್ಷಮ ನಾನು ನಿಮಗೆ ಮಾತಿನ ಮೂಲಕ ವಿವರಿಸ ಬಯಸುವುದಿಲ್ಲ… ಪ್ರಜಾಪ್ರಭುತ್ವ ನಿಮ್ಮೆದುರಿಗೆ ಕೆಲವೇ ಕ್ಷಣಗಳಲ್ಲಿ ಅನಾವರಣಗೊಳ್ಳುವುದು, ನಿಮ್ಮ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವುದು”.
ಎಲ್ಲರೂ ಅಕ್ಕಪಕ್ಕದವರ ಮುಖ ನೋಡಿಕೊಂಡರು.
ಮೊದಲೆ ತನ್ನ ಪತ್ನಿ ಭಾಗೀರಥಿ ತುಂಬಿದ ಮನುಷ್ಯಳು;
ಆಕೆ ಮಾಡುತ್ತಿರುವುದಾದರೂ ಏನನ್ನು!
ಪ್ರಶಸ್ತಿ ವಿಜೇತ ವೈ.ಪತಿ ಕಳವಳಗೊಂಡನು.
ಗೃಹಮಂತ್ರಿಯಿಂದಲೇ ಲಂಚ ಮಾಮೂಲು ರುಷುವತ್ತು ವಸೂಲಿ ಮಾಡಿಯೂ ಪ್ರಶಸ್ತಿ ಪಡೆದ ಮಾರ್ತಾಂಡನೂ ಕಸಿವಿಸಿಗೊಂಡನು.
ಎಲ್ಲರ ಕಣ್ಣುಗಳು ತನ್ನ ಕಡೆ ನೆಟ್ಟಿರುವಾಗ ಕೋಮಲ ಧ್ವನಿ ಮತ್ತೊಮ್ಮೆ ಮಾರ್ದನಿಸಿತು. “ಯಾರಾದರೂ ಬಂದು ದಯವಿಟ್ಟು ನನ್ನ ಸೀರೆ ಸೆಳೆಯುವಿರಾ?”
ಜನ ಒಮ್ಮೆಗೇ ಕಕ್ಕಾವಿಕ್ಕಿಯಾದರು…
ಏನಿದು! ತಮ್ಮ ಕಿವಿಗಳನ್ನು ತಮಗೆ ನಂಬಲಾಗುತ್ತಿಲ್ಲ ಇಡೀ ಸಭೆ ಗೊಣಗಾಡಿತು. ತುಂಬಿದ ಸಭೆಯಲಿ ಸೀರೆ ಸೆಳೆಯಲಿಕ್ಕೆ ತಮ್ಮ ನೆಚ್ಚಿನ ನಾಯಕಿ ಏನು ದ್ರೌಪದಿಯೇ…?
ವೇದಿಕೆ ಮೇಲಿದ್ದ ಹಾಗೂ ಕೆಳಗಿದ್ದ ಗಣ್ಯರೆಲ್ಲ ಆಕೆಯನ್ನು ಆ ನಿರ್ಣಯ ಹಿಂತೆಗೆದುಕೊಳ್ಳಲು ಒತ್ತಾಯಿಸಿದರು.
ಮುಂದಿಟ್ಟ ಹೆಜ್ಜೆಯನ್ನು ಹಿಂತೆಗೆದುಕೊಳ್ಳಲು ಆಕೆ ಬಿಲ್ ಕುಲ್ ನಿರಾಕರಿಸಿದಳು. ಡಾ. ಸಂತಾನಂ “ನೋಡಿ ಮೇಡಂ… ಹೀಗೆಲ್ಲ ದಯವಿಟ್ಟು ಗ್ಲಾಮರ್ ಹಾಳುಮಾಡ್ಕೊಬೇಡಿ” ವೈ.ಪತಿ ಕೂಡ, ಆ ತಲೆಗೆ ಕೈಹೊತ್ತು “ಅಯ್ಯೋ ನನ್ನ ಪುರುಷಾರ್ಥವೇ” ಎಂದು ರೋದಿಸುತ್ತಿದ್ದನು.
ಆದರೆ ಭಾಗೀರಥಿಯ ನಿರ್ಧಾರ ಮಾತ್ರ ಮೇರು ಪರ್ವತದಷ್ಟು ಅಚಲ.
ಬಹಳಷ್ಟು ಜನರು ಇಂಥ ಅವಕಾಶ ಕಳೆದುಕೊಳ್ಳಬಾರದೆಂದು ಕಣ್ಣಿನ ಜೊತೆ ಬಾಯನ್ನೂ ತೆರೆದಿದ್ದರು. “ಅಯ್ಯೋ ನಮ್ಮ ನೆಚ್ಚಿನ ನಾಯಕಿಯ ನಗ್ನರೂಪ ನೋಡಲು ನಾವಿನ್ನೂ ದರಿದ್ರ ದೇಹ ಹೊತ್ತು ಬದುಕಿದ್ದೀವಲ್ಲ” ಎಂದು ಕೆಲವರು ಮುಖ ತಗ್ಗಿಸಿದರು.
“ಯಾರಾದ್ರೂ ಬಂದು ಸೀರೆ ಸೆಳೆಯುವಿರೋ ಅಥವಾ ಪೊಲೀಸರಿಗೆ ಆಜ್ಞಾಪಿಸಲೋ?” ಭಾಗೀರಥಿ ಗೃಹಸಚಿವೆ ಗತ್ತಿನಲಿ ಗುಡುಗಿದಳು.
ಮು. ಮುಂ. ಅ.ದಕ್ಷ ಬ್ರಹ್ಮ ಮತ್ತವರ ಸಚಿವ ಸಂಪುಟದವರು ಈಗ ಸೀರಿಯಸ್ಸಾಗಿ ಆಲೋಚನೆಗೆ ತೊಡಗಿದರು. ಆಕೆಯ ಸೀರೆಯನ್ನು ಸೆಳೆದು ಒಂದು ಹೆಣ್ಣಿನ ಇಚ್ಚೆಯನ್ನು ಪೂರೈಸಿದ ಕೀರ್ತಿಗೆ ಭಾಜಕರಾಗುವುದು ಶ್ರೇಯಸ್ಕರ ಎಂದು ಬಗೆದರು.
ಸೀರೆ ಸೆಳೆಯುವುದರಲ್ಲಿ ತಮ್ಮಲ್ಲಿ ಯಾರು ನಿಷ್ಣಾತರು?
ಪರಸ್ಪರ ಮುಖ ನೋಡಿಕೊಂಡರು… ಗೊಣಗಿಕೊಂಡರು. ಆದರೂ ಒಂದು ನಿರ್ಣಯಕ್ಕೆ ಬರಲಿಲ್ಲ. ಅಯ್ಯೋ… ಪಾಪ. ಗರ್ಭೀಣಿ ಹೆಂಗಸಿನ ಆಸೆ ಈಡೇರಿಸಿರಪ್ಪೋ ಎಂಬ ಕೂಗು ಸಭೆಯ ಮಧ್ಯದಿಂದ ಪದೇ ಪದೇ ಕೇಳಿ ಬಂದಿತು. ಸುತ್ತ ಮುತ್ತ ಪತ್ರಕರ್ತರು ತಂತಮ್ಮ ಕೆಮರಾಗಳಲ್ಲಿ ಕಣ್ಣಿಟ್ಟು ರೆಡಿಯಾಗಿ ನಿಂತಿದ್ದರು.
ಮು.ಮಂ. ಅ.ದಕ್ಷಬ್ರಹ್ಮ ತಾನೇ ಈ ಕೆಲಸಕ್ಕೆ ಸೂಕ್ತ ಎಂದು ನಿರ್ಧರಿಸಿ ಎದ್ದು ನಿಂತರು. ಸಭೆ ಕರಾತಾಡನ ಮಾಡಿತು. ಆದರೆ ಕೆಲವು ಹಿರಿಯರು ಒಪ್ಪಲಿಲ್ಲ.
ಆಕೆಯ ದೇಹದ ಮೇಲೆ ಹಕ್ಕಿರೊದು ಆಕೆಯ ಗಂಡ ವೈಕುಂಠಪತಿಗೆ, ಆಗಲೇ ಆತ ಆಕೆಯ ಗರ್ಭಕ್ಕೆ ಕಾರಣೀಭೂತನಾಗಿದ್ದನು. ಆತನೇ ಆಕೆಯ ಸೀರೆ ಕಳಚಲು ಅರ್ಹನು ಎಂದು ಒತ್ತಡ ಹೇರಿದರು.
ಮಿ. ಏಕಾದಶಿ “ಮೇಡಂ ನಿಮಗೆ ಅವರಿಬ್ಬರ ಪೈಕಿ ಯಾರಿಂದ ಸೀರೆ ಸೆಳೆದುಕೊಳ್ಳಲು ಇಷ್ಟ ಇದೆ” ಎಂದು ಕೇಳಿದ.
ಆಕೆ ಎಲ್ಲರಿಗೆ ಕೇಳಿಸುವಂತೆ ನಕ್ಕು ಹೇಳಿದಳು, “ಆಫ್ ಕೋರ್ಸ್… ಯಾರು ಈ ಕೆಲಸ ಮಾಡಿದ್ರೂ ನಂಗಿಷ್ಟಾನೇ!”
ಆಗ ಅ.ದಕ್ಷಬ್ರಹ್ಮ ಮತ್ತು ವೈ.ಪತಿಯವರ ನಡುವೆ ನಾನು ಸೆಳೀತೀನಿ, ನಾನು ಸೆಳೀತೀನಿ ಅಂತ ವಾಗ್‌ಯುದ್ಧ ನಡೆಯಿತು. ಕರುಣಾಳು ಭಾಗೀರಥಿ ಅವರಿಬ್ಬರಿಗೂ ಆ ಅವಕಾಶ ಕಲ್ಪಿಸಿಕೊಟ್ಟಳು.
ಒಬ್ಬರು ಸೀರೆ ಸೆಳೆಯಿರಿ. ಇನ್ನೊಬ್ಬರು ಬ್ಲೌಸ್ ಕತ್ತರಿಸಿ ತೆಗೆಯಿರಿ… ಆತ್ಮಾರ್ಪಣೇ ಮಾಡಿಕೊಳ್ಳಲು ಪ್ರಯತ್ನಿಸಿದ ಕೆಲವರನ್ನು ತಮ್ಮ ವಶಕ್ಕೆ ಪೋಲೀಸರು ತೆಗೆದುಕೊಳ್ಳುತ್ತಿರುವಾಗ ವೈಪತಿ ಸೀರೆಗೆ ಕೈ ಹಚ್ಚಿದ. ಮು.ಮಂ. ಅ.ದಕ್ಷಬ್ರಹ್ಮ ಕತ್ತರಿ ಹಿಡಿದುಕೊಂಡು ಆಕೆಯ ಬೆನ್ನ ಹಿಂದೆ ನಿಂತ. ಕಮಾನ್… ಕಮಾನ್ ಎಂದು ಕೆಲವು ಕಾಲೇಜು ಹೈಕಳುಗಳು ಕೂಗಿ ಅವರನ್ನು ಹುರಿದುಂಬಿಸಿದರು.
ಎಲ್ಲರೂ ವರುಣನ ಮಾನಸಪುತ್ರಿಯ ದೇಹ ಸೌಂದರ್ಯ ಸವಿಯಲು ತುದಿ ಗಾಲಲ್ಲಿ ನಿಂತಿರುವಾಗ ಅವರಿಬ್ಬರು ಯಶಸ್ವಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದರು. ಅನಾವರಣಗೊಂಡು ಕಿಲಕಿಲನೆ ನಗಾಡುತ್ತಿರುವ ಆಕೆಯನ್ನು ನೋಡುತ್ತಾರೆ!
ಅರೆ ಆಕೆಯಲ್ಲ, ಆಕೆ ಆತನಾಗಿದ್ದ. ಸ್ತ್ರೀವೇಷ ಕಳಚಿದ ಪುರುಷನ ಅರೆನಗ್ನ ದೇಹ ತಮ್ಮೆದುರಿಗಿರುವುದು. ಎಲ್ಲರೂ ಜಲಜಲ ಬೆವತರು.
ಭಾಗೀರಥಿ ವೇಷ ಕಳಚಿದ ಪರಮೇಶಿ ಹೇಳಿದ… “ನೋಡಿದ್ರಲ್ಲ… ಪ್ರಜಾಪ್ರಭುತ್ವ ಅನಾವರಣಗೊಂಡರೆ ಹೇಗಿರ್‍ತದೆ ಅಂತ… ನನ್ನಂಗಿರ್‍ತದೆ. ನೋಡಿ ಧಾರಾಳವಾಗಿ ನೋಡಿ…” ಎಂದು ಹೇಳಿದ. ವೇದಿಕೆ ಮೇಲಿದ್ದ ಹಾಗೂ ಕೆಳಗಿದ್ದ ಬಹಳಷ್ಟು ಮಂದಿ ಗಳಗಳ ಅತ್ತುಬಿಟ್ಟರು. ಅವರನ್ನೆಲ್ಲ ಸಮಾಧಾನಪಡಿಸಿದ ಪರಮೇಶಿ ತನ್ನ ಬಗ್ಗೆ ತಾನು ವಿವರಿಸಿ ಹೇಳಿದ. ನಾಯಕರ, ಜನ ಮುಖಂಡರ ಲಕ್ಷಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗಿರ್‍ತದೆ ಎಂದು ವಿವರಿಸಿದ. ಅಲ್ಲಿಯೆ ಮುಖ ತಗ್ಗಿಸಿ ನಿಂತಿದ್ದ ಮಾರ್ತಾಂಡನನ್ನು ಜನತೆಗೆ ತೋರಿಸಿ ಈತ ಗೃಹಸಚಿವರಿಂದಲೇ ಲಂಚ ಸ್ವೀಕರಿಸುತ್ತಿದ್ದ ಮಹಾನುಭಾವ ಎಂದು ಹೇಳಿ, ತನ್ನನ್ನು ಬಂಧಿಸಲು ಆತನನ್ನು ಪರಮೇಶಿ ಒತ್ತಾಯಿಸುತ್ತಿದ್ದಾಗ ಮುಖ್ಯಮಂತ್ರಿ ಅ.ದಕ್ಷ ಬ್ರಹ್ಮ, ವೈ.ಪತಿ, ಡಾ. ಸಂತಾನಂ, ವೀರಬಲ್ಲಾಳ ಮುಂತಾದ ಸಾವಿರಾರು ಮಂದಿ ಬೆವರೊರಿಸಿಕೊಳ್ಳುತ್ತಿದ್ದರು.
*****
