-೧-
ಎಲ್ಲರೂ ಸೂರ್ಯನಿಗಾಗಿ ಕಾಯುತ್ತಿದ್ದರು-ಕನ್ಯಾಕುಮಾರಿಯ ದಂಡೆಯ ಮೇಲೆ. ದೇಸಾಯರು, ಅವರ ಹೆಂಡತಿ, ಮಗ-ಸೊಸೆ, ಅವರ ಪುಟ್ಟ ಮಗ ನೆರೆದವರ ನಡುವೆ ನೆಟ್ಟ ಕಣ್ಣಿಟ್ಟು ಕಣ್ಣು ಹಾಯುವ ತನಕ ತುಂಬಿದ ನೀರ ಹಾಯಿಯ ತುದಿಗೆ ಮೊಗ್ಗು ಮೊಳೆಯುವುದನ್ನೇ ಕಾಯುತ್ತ ನಿಂತಿದ್ದರು. ಅವರೆಲ್ಲರ ಹಿಂದೆ ಅವರ ಜೊತೆ ಕಾರು ತಗೊಂಡು ಬಂದ ರಮಣ. ಆಕಾಶ ಕೆಂಪೇರಿ, ನೀರು ಮಿನುಗಿ, ಬೆಳ್ಳಿ ರೇಕಾಗಿ, ಕಾದ ಕಾಂಚಾಣ ತಟ್ಟೆಯಾಗಿ, ಜನರ ಗುಜುಗುಜು ನಿಂತ ಮೌನದಲ್ಲಿ ಉದ್ಗಾರವಾಗಿ ಸೂರ್ಯಾಮ ಹುಟ್ಟಿಬಂದ. ಬೆಳಕಿನ ಮೊದಲ ರೇಖೆಗೆ ಕಾದವರು ಬೆಳಕೇ ಬೆಳಕಾಗುತ್ತಲೇ ಚದುರಿದರು. ಬೆಳಗಿನ ಬಿಸಿಲಿಗೆ ಮರಳ ದಂಡೆಯ ಗುಂಟ ನಡೆಯುವಾ ಅಂತ ಹೇಳಿದ ಮಗ ಸೊಸೆಯ ಮಾತು ತೆಗೆದು ಹಾಕಲಾಗದೇ ದೇಸಾಯರೂ ಹೆಂಡತಿಯ ಜೊತೆ ಅಡ್ಡಾಡಿ ಬರಲು ಹೊರಟರು. ಅಲ್ಲೇ ನೀರಿಗಿಳಿಯುವುದಕ್ಕೆ ಕಟ್ಟಿದ ಮೆಟ್ಟಿಲ ತುದಿಯಲ್ಲಿದ್ದ ಕಟ್ಟೆಯ ಮೇಲೆ ಕೂತು ರಮಣ ಸಿಗರೇಟು ಹಚ್ಚಿದ. ಯಾಕೋ ಈವತ್ತು ಬೆಳಿಗ್ಗೆ ಎದ್ದಾಗಿನಿಂದ ಮನಸ್ಸು ಅವ್ಯಕ್ತ ಕಳವಳದಲ್ಲಿ ಕುಂದಿತ್ತು. ಹಿಂದಿನ ರಾತ್ರಿಯೂ ಸರಿಯಾಗಿ ನಿದ್ದೆ ಬಂದಿರಲಿಲ್ಲ. ಐದಾರು ಬಾರಿ ಎಚ್ಚರಾಗಿತ್ತು. ಕತ್ತಲಲ್ಲಿ ಎದ್ದು ಕೂತು ಮತ್ತೆ ಮಲಗಿದ್ದ. ಇವರ ಜೊತೆ ಕಾರು ತಗೊಂಡು ಬರಬಾರದಿತ್ತು ಅನಿಸಿತು. ಡ್ರೈವರ್ ರಮೇಶನನ್ನು ಕಳಿಸಬೇಕಿತ್ತು. ಊರಲ್ಲಿ ಒಂದು ಟ್ಯಾಕ್ಸಿ ಎರಡು ಟೆಂಪೋ ಇಟ್ಟು ನಡೆಸುತ್ತಿದ್ದ ರಮಣ, ದೇಸಾಯರು ತುಂಬ ಒತ್ತಾಯ ಮಾಡಿದ್ದರಿಂದ ಡ್ರೈವರ್ ಕಳಿಸದೇ ಸ್ವತಃ ಬಂದಿದ್ದ. ರಮಣನೂ ಕನ್ಯಾಕುಮಾರಿ ಕಂಡಿರಲಿಲ್ಲ. ಒಂದು ವಾರದಲ್ಲಿ ವಾಪಸು ಬರುವುದೆಂದು ಹೊರಟಿದ್ದು.
ರಮಣ ಸಿಗರೇಟು ಸೇದುತ್ತ ಕೂತ ಕಟ್ಟೆಯ ಹತ್ತಿರ ಬಂದು ದೇಸಾಯರ ಮೊಮ್ಮಗ “ನೀವೂ ನಮ್ಮ ಜೊತೆ ಬರ್ಬೇಕಂತೆ” ಎಂದು ಕರೆದ. ಹೋಗುವ ಉತ್ಸಾಹವಿರಲಿಲ್ಲ. “ನಾನಿಲ್ಲೇ ಇರ್ತೇನೆ ನೀನು ಹೋಗಿ ಬಾ” ಅಂದ. ಕಡಲೇನೂ ಹೊಸದಲ್ಲ ಅವನಿಗೆ. ಕಡಲಲ್ಲಿ ಸೂರ್ಯ ಮುಳುಗುವುದನ್ನು ಮಾತ್ರ ಕಂಡಿದ್ದ-ಹುಟ್ಟುವುದನ್ನು ನೋಡಿರಲಿಲ್ಲ. ರಮಣನ ಒಳ ಆಳಗಳಲ್ಲಿ ತುಂಬಿತ್ತು ಕಡಲು. ಬೇಲೇಕೇರಿಯ ಮನೆಯಲ್ಲಿ ಹೊತ್ತು ಹೊತ್ತಿಗೆ ಹೊಸ ರಾಗ ಧಾಟಿಗಳಲ್ಲಿ ಮೀಟುತ್ತ ನಿತ್ಯದ ನಾದವಾದ ಕಡಲು. ಮನೆಯ ಎದುರಿಗೇ ಕಡಲು. ನೀರು ನುಂಗಿಸಿ ಈಜು ಕಲಿಸಿದ ಸಖನಾಗಿ, ಅವನ ಹರೆಯದಂತೆ ಉಕ್ಕಿ, ದಂಡೆಗೆ ನೀರು ಸುಳಿದು ನೆನೆದ ಮರಗಳಲ್ಲಿ ಬರೆದ ಮನೋರಮೆಯ ಹೆಸರು ಮತ್ತೆ ಅಲೆ ಕಳಿಸಿ ಆಳಿಸಿದ ಕಡಲು ; ಮದುವೆಯ ಮೊದಲ ರಾತ್ರಿ ಸಡಗರದ ಘೋಷವಾದ ಕಡಲು ; ನುರಿವ ಸ್ನಾಯುಗಳ ಜಟ್ಟಿ ತಮ್ಮನನ್ನು ತನ್ನೊಳಗೆ ಎಳಕೊಂಡು,ಕಾದು ಕೂತ ಅಮ್ಮನ ಕಣ್ಣಿಗೆ ಕಿಸಿರಾದ ಕಡಲು. ದೇಸಾಯರ ಕುಟುಂಬ ಬೆಳಗಿನ ಓಡಾಟದಲ್ಲಿ ದಣಿದು ಮರಳಿತು. ರಮಣ ಕೂಡ ಅವರ ಜೊತೆ ಉಳಕೊಂಡಿದ್ದ ಹೋಟೆಲಿಗೆ ಹೊರಟ.
ಅಲ್ಲಿ ಆತ ಕಾಯುತ್ತಿದ್ದ-ಪ್ರಕಾಶ. ಅವನು ರಮಣನ ದೂರದ ಸಂಬಂಧಿ. ಅವನ ಅಮ್ಮನ ತಂಗಿಯ ಅಳಿಯನ ತಮ್ಮ. ಯಾವುದೋ ಬಟ್ಟೆಯ ಕಾರ್ಖಾನೆಯಲ್ಲಿ ಕೆಲಸವಂತೆ. ರಮಣನಿಗೆ ಅವನ ಗುರುತೇ ಹತ್ತಲಿಲ್ಲ. ಯಾವಾಗಲೋ ಯಾರದೋ ಮದುವೆಯಲ್ಲಿ ಕಂಡದ್ದು ಬಿಟ್ಟರೆ ಮತ್ತೆ ನೋಡಿರಲಿಲ್ಲ. ಆತ ಕನ್ಯಾಕುಮಾರಿಯಲ್ಲಿದ್ದಾನೆಂದು ಬರುವ ಮುಂಚೆ ಅಮ್ಮ ಹೇಳಿದ್ದರು. ಅವನೋ ರಮಣನನ್ನು ನೋಡಿದ್ದೇ ಗುರುತು ಹಿಡಿದು ತಾನು ಯಾರೆಂದು ಹೇಳಿಕೊಂಡ. “ಹುಡುಕಿ ಹುಡುಕಿ ಸಾಕಾಯಿತು…ನಿನ್ನೆ ಬೆಳಗಿನಿಂದ ಒಂದೂ ಲಾಜ್ ಬಿಡದೇ ಹುಡುಕುತ್ತಿದ್ದೇನೆ…ಪುಣ್ಯಕ್ಕೆ ಸಿಕ್ಕಿದೆ ನೀನು…ನಿನ್ನ ಅಮ್ಮನಿಗೆ ಹುಷಾರಿಲ್ಲವಂತೆ…ಸೀರಿಯಸ್ಸಂತೆ…ನಿನ್ನೆ ಕಾರಿನ ನಂಬರು ಕಳಿಸಿ ಶಾಂತಾರಾಮ ಕೊಟ್ಟ ತಾರು ಮೊನ್ನೆ ರಾತ್ರಿ ಸಿಕ್ಕಿತು ನನಗೆ…” ರಮಣನಿಗೆ ತಿಳಿದು ಹೋಯಿತು ಅಮ್ಮ ಬದುಕಿ ಉಳಿದಿಲ್ಲ ಅಂತ. ಕ್ಷಣ ಮಾತ್ರ ಏನೂ ತೋಚಲಿಲ್ಲ. “ಏನಂತ ಹೇಳಿಬಿಡು ಸುಮ್ಮನೇ ಮುಚ್ಚಿಡಬೇಡ”ಎಲ್ಲವೂ ಮುಗಿದು ಹೋಗಲಿ ಎಲ್ಲ ಆಘಾತವೂ ಒಟ್ಟಿಗೆ ಬರಲಿ ಎಂದನ್ನಿಸಿ ಹೇಳಿದ. ಧೈರ್ಯಗೆಡಬೇಡ ಆದದ್ದಾಯಿತು ಅಂತೆಲ್ಲ ಹೇಳಿ ಕೊನೆಗೆ ಪ್ರಕಾಶ ಸಾವಿನ ಸುದ್ದಿಯನ್ನು ಖಚಿತಗೊಳಿಸಿದ. ದೇಸಾಯರು ಬಂದರು. ಒಳಗೆ ಕರೆದು ಕುಳ್ಳಿರಿಸಿದರು. ದುಗುಡ ತುಂಬಿ ಕೂತವನು ಸ್ವಲ್ಪ ಹೊತ್ತಿನ ಬಳಿಕ ಅತ್ತ. ಯಾರೂ ಮಾತಾಡಲಿಲ್ಲ. ದೇಸಾಯರು “ಮುಂದಿನದನ್ನು ಯೋಚಿಸು, ಈಗ ಸೋತು ಕೂರುವುದಲ್ಲ. ಮುಂಚೆ ಊರಿಗೆ ಹೊರಡು…ನಾವು ಒಬ್ಬ ಡ್ರೈವರ್‌ನನ್ನು ಕರೆದುಕೊಂಡು ಬರುತ್ತೇವೆ…ನೀನು ಕಾರಿನ ಕಾಳಜಿ ಬಿಟ್ಟು ಸಿಕ್ಕ ಮೊದಲ ಮೋಟರ್ ಹಿಡಿದು ಹೋಗು…ಮುಖ ಸಿಕ್ಕರೂ ಸಿಗಬಹುದು…” ಎಂದು ಕಿಸೆಯಲ್ಲಿ ಒಂದಿಷ್ಟು ದುಡ್ಡು ಹಾಕಿದರು. ರಮಣ ಮುಂದಿನ ಯೋಚನೆ ಮಾಡಹತ್ತಿದ. ಎಷ್ಟು ಬೇಡವೆಂದರೂ ಅವರೆಲ್ಲ ಸೇರಿ ಇಡ್ಲಿ ತಿನ್ನಿಸಿದರು. ಪ್ರಕಾಶ ರಮಣನ ಜೊತೆ ಬಂದು ಎರ್ನಾಕುಲಂ ಬಸ್ಸು ಹತ್ತಿಸಿ, ಅಲ್ಲಿಂದ ಮಂಗಳೂರಿಗೆ ಬೇಕಾದಷ್ಟು ಬಸ್ಸುಗಳುಂಟು, ಮಂಗಳೂರಿನಿಂದ ಊರಿಗಂತೂ ಏನಿಲ್ಲಾಂದರೂ ಟ್ರಕ್ಕುಗಳು ಸಿಗುತ್ತವೆ ಎಂದು ಬೀಳ್ಕೊಟ್ಟ.
ಎರ್ನಾಕುಲಂ ಬಸ್ ಸ್ಟ್ಯಾಂಡಿಗೆ ತಲುಪುತ್ತಲೇ ಮಂಗಳೂರಿಗೆ ಹೋಗುವ ಬಸ್ಸು ಸಿಕ್ಕಿತು. ಜನ ತುಂಬಿದ್ದರೂ ಹತ್ತಿಕೊಂಡ. ಅರ್ಧ ಹಾದಿ ನಿಂತೇ ಪ್ರಯಾಣಿಸಿ ಮದ್ಯಾಹ್ನದೂಟವಿಲ್ಲದೇ ಕಾದ ಹೊಟ್ಟೆಯಲ್ಲಿ ಮಂಗಳೂರು ತಲುಪಿದಾಗ ರಾತ್ರಿಯಾಗಿ ಹೋಗಿತ್ತು. ಬಸ್ಸು ಹಿಡಿಯುವ ರಗಳೆಗೆ, ಮೈಗೆ ಹತ್ತಿದ ದಣಿವಿಗೆ ಅಮ್ಮನ ಸಾವಿನ ಸುದ್ದಿ ತಂದ ತಲ್ಲಣದ ಹೊರೆಯನ್ನು ವರ್ಗಾಯಿಸಿದ್ದ. ಆ ರಾತ್ರಿಯ ಹೊತ್ತಲ್ಲಿ ತೆರೆದಿದ್ದ ಒಂದೇ ಹೋಟೆಲಿಗೆ ಹೋದರೆ ಅಲ್ಲಿ ಬರೀ ಮೀನು ಊಟ. ಅಮ್ಮನ ಸಾವಿನ ಸೂತಕವಿರುವಾಗ ಮೀನು ತಿನ್ನಲು ಮನಸ್ಸಾಗದೇ ಮಜ್ಜಿಗೆ ಅನ್ನ ಉಂಡ. ಹೈವೇದ ಮೇಲೆ ಹೋಗಿ ನಿಂತರೆ ಟ್ರಕ್ಕು ಸಿಗುತ್ತದೆಂದು ಹೋಟೆಲಿನವ ಹೇಳಿದ. ಅಲ್ಲಿ ಬಂಗಡೆ ಹೇರಿಕೊಂಡು ಹೊರಟ ಟ್ರಕ್ಕು ಸಿಕ್ಕಿತು. ಆದರೆ ವಾಸನೆ ಹೊಡೆಯುವ ಕ್ಯಾಬಿನ್ನಿನಲ್ಲಿ ಕಾಲು ಮುದುರಿಸಿ ಕೂತು ನಿದ್ದೆಗಣ್ಣಲಿ ಊರು ಬರುವುದನ್ನೇ ಕಾದ.
ಹೆಡ್‌ಲೈಟಿನ ಬೆಳಕಲ್ಲಿ ರಾತ್ರಿಯ ಕತ್ತಲನ್ನು ಬಾಚುತ್ತ ಸಾಗಿದ ಟ್ರಕ್ಕಿನ ಹಾದಿ ನುಗಿಯದೋ ಅನಿಸತೊಡಗಿತು. ಮಧ್ಯೆ ಜೊಂಪು ಹತ್ತಿ ಥಟ್ಟನೆ ಎಚ್ಚರವಾದಾಗ ಸಾಲುಸಾಲು ನಿಂತಿದ್ದ ಟ್ರಕ್ಕುಗಳ ನಡುವೆ ನಿಲ್ಲಿಸಿ ಡ್ರೈವರ್ ಚಹಾ ಕುಡಿಯಲು ಹೋಗಿದ್ದ. ರಮಣನೂ ಇಳಿದು ಚಾ ಕುಡಿದು ಬಂದವನು ತಾನು ಹತ್ತಿ ಬಂದ ಟ್ರಕ್ಕು ಯಾವುದೋ ತಿಳಿಯದೇ ನಿಂತ ಗಾಡಿಗಳನ್ನೆಲ್ಲ ಎಡತಾಕುತ್ತ ತನ್ನ ಚೀಲ ಹುಡುಕಲು ತೊಡಗಿದ. ಕೊನೆಗೆ ಡ್ರೈವರನೇ ಗುರುತು ಹಿಡಿದು ಕರೆದಾಗ ಜೀವಕ್ಕೆ ರೋಸಿಹೋಗಿತ್ತು. ಶರಾವತಿ ಬ್ರಿಜ್ಜಿನ ಮೇಲೆ ತಣ್ಣನೆಯ ಗಾಳಿ ಬೀಸುತ್ತ ಟ್ರಕ್ಕು ಮುನ್ನುಗ್ಗುತ್ತಿದ್ದಾಗ ಇನ್ನೇನು ಊರು ಬಹಳ ದೂರ ಇಲ್ಲ ಅನ್ನಿಸಿ ಹಾಗೇ ಮತ್ತೆ ಅಮ್ಮ ಮನಸ್ಸು ಹಿಡಿದುಕೊಂಡಳು. ದಣಿವಾಗಿತ್ತು. ನಿದ್ದೆ ಮಾಡಬೇಕೆನಿಸಿತ್ತು. ಕಣ್ಣು ಹತ್ತುತ್ತಿರಲಿಲ್ಲ. ಅಮ್ಮ ಹೋಗಿ ಏನಿಲ್ಲೆಂದರೂ ಎರಡು ದಿನವಾದರೂ ಆಗಿರಬೇಕು. ಕೊನೆಯಬಾರಿ ರಮಣ ಅವಳನ್ನು ನೋಡಿದ್ದು ಆತ ಕನ್ಯಾಕುಮಾರಿಗೆಂದು ಹೊರಟ ದಿನ ಮುಂಜಾನೆ. ಆ ದಿವಸ ಇನ್ನೂ ಬೆಳಕು ಹರಿಯುವ ಮೊದಲೇ ಎದ್ದು ಹೊರಟಾಗ ಹೆಂಡತಿ ಲಕ್ಷ್ಮಿಯ ಜೊತೆ ಅವಳೂ ಮುಂಬಾಗಿಲವರೆಗೆ ಬೀಳ್ಕೊಡಲು ಬಂದಿದ್ದಳು. ಇಬ್ಬರೂ ಅಣ್ಣಂದಿರು ಮನೆಗೆ ಬಂದಿರಬಹುದೀಗ. ಎಲ್ಲ ಒಟ್ಟಿಗೇ ಇರಬೇಕೆಂದು ಅಮ್ಮ ಎಷ್ಟೊಂದು ಬಯಸಿದ್ದಳು. ಮನೆ ಪಾಲಾಗಕೂಡದು. ಇದರ ಮೇಲೆ ಕಣ್ಣಿಟ್ಟು ಕೂತ ದಾಯಾದಿಗಳಿಗೆ ಈ ಮನೆ ಒಡೆವ ತನಕ ಸಮಾಧಾನವಿಲ್ಲ. ನೀವು ಅಣ್ನ ತಮ್ಮಂದಿರು ಯಾರ ಮಾತೋ ಕೇಳಿಕೊಂಡು ಪಾಲಿಗೆ ದುಡುಕಬೇಡಿ ಎಂದು ಎಷ್ಟೊಂದು ಹೇಳಿದ್ದಳು. ಯಾರ ಮಾತೂ ಕೇಳಬೇಕಾಗಿರಲಿಲ್ಲ ದೊಡ್ಡಣ್ಣನಂತೂ ಮದುವೆಯಾದ ಆರು ತಿಂಗಳಿಗೇ ಬೇರೆ ಮನೆ ಮಾಡಿದ. ಮತ್ತೆ ಬರುವುದಿಲ್ಲವೆಂದು ಶಪಥ ಮಾಡಿ ಹೋದಳು ಅತ್ತಿಗೆ. ಅಮ್ಮ ಮೌನವಾಗಿ ಅತ್ತದ್ದೆಷ್ಟು, ಸತ್ತ ಎರಡನೇ ಮಗನನ್ನು ನೆನೆಸಿಕೊಂಡದ್ದೆಷ್ಟು. ಅವನೊಬ್ಬನಿದ್ದ ಜಟ್ಟಿ. ಮೋಹನ. ಬೆಳಿಗ್ಗೆ ಸಂಜೆ ವ್ಯಾಯಾಮ ಮಾಡಿ ಮೈ ಪಳಗಿಸಿಕೊಂಡವನು. ಕುಸ್ತಿಗಳಲ್ಲೆಲ್ಲಾ ಭಾಗವಹಿಸಲು ಧಾರವಾಡದವರೆಗೂ ಹೋಗಿಬರುವನು. ಭರತಿಯ ಹೊತ್ತಿಗೆ ಸಮುದ್ರಕ್ಕೆ ಈಜಲು ಹೋದವನು ಮರಳಿ ಬಾರದೇ ಉಳಿದ. ಎಲ್ಲೋ ಹತ್ತಿದ ಹೆಣ ಸಿಕ್ಕಿತು. ಅವನ ಸಮಕ್ಕೆ ಈಜುವವರು ಆಸುಪಾಸಿನಲ್ಲೆಲ್ಲೂ ಇರಲಿಲ್ಲ. ಏನಾಯಿತು ಅವನಿಗೆ? ನೂರು ಕತೆಗಳು ಹುಟ್ಟಿಕೊಂಡವು. ಆಗದವರು ಯಾರೋ ನೀರಲ್ಲಿ ಕಾಲಿಗೆ ಕಲ್ಲು ಕಟ್ಟಿದರಂತೆ…ಯಾರೋ ಮಾಟ ಮಾಡಿದರಂತೆ…ಬೇಕಂತಲೇ ಜೀವ ಕಳಕೊಂಡನಂತೆ…ಆದದ್ದು ಏನು ಅನ್ನುವುದು ಯಾರಿಗೂ ತಿಳಿಯಲಿಲ್ಲ. ಈಸಲು ಚಾಚಿದ ಕೈಯ ಬೀಸಿನಲ್ಲೆ ಆಯಸ್ಸು ಮುಗಿದಿತ್ತೇ? ಇನ್ನು ಮುಳುಗುತ್ತೇನೆ ಎಂದು ತಿಳಿದ, ಉಸಿರು ಹೂತ ಗಳಿಗೆಯಲ್ಲಿ ಯಾರು ಯಾರನ್ನು ನೆನೆಸಿಕೊಂಡ? ಅವನ ಎದೆ ಕೊನೆಯ ಬಾರಿಗೆ ಬಡಿದು ನಿಂತಾಗಿನ ಕ್ಷಣದಲ್ಲಿ ಉಳಿದ ಮೂವರು ಅಣ್ಣತಮ್ಮಂದಿರು ಜಗತ್ತಿನ ಯಾವ ವ್ಯಾಪಾರದಲ್ಲಿ ತೊಡಗಿದ್ದರು? ಆ ದಿವಸ ಅಮ್ಮನಲ್ಲೆದ್ದ ಅವ್ಯಕ್ತ ತಲ್ಲಣ ಅವನು ಒಬ್ಬಂಟಿಯಾಗಿ ಧಡಪಡಿಸಿದ ಗಳಿಗೆಯಲ್ಲಿ ಹುಟ್ಟಿದುದೇ? ಮನೆಯ ಹಿತ್ತಿಲ ಕೋಣೆಯಲ್ಲಿದ್ದ ಅವನ ಗರಡಿಯ ಸಾಮಾಗ್ರಿಗಳು, ಆಳೆತ್ತರದ ಕನ್ನಡಿ ಅವನಿಲ್ಲದೆ ಧೂಳು ಕೂತು ಮಾಸಿದವು. ಅವನು ಹೋದಾಗಿನಿಂದ ಅಮ್ಮ ಬೇರೆಯೇ ಆಗಿಬಿಟ್ಟಳು. ಉಳಿದ ಮೂವರು ಮಕ್ಕಳು ಯಾವಾಗಲೂ ಕಣ್ಣೆದುರೇ ಇರಬೇಕು. ಯಾವುದಕ್ಕೂ ಇಲ್ಲ ಅನ್ನುತ್ತಿರಲಿಲ್ಲ.ಆದರೆ ದೊಡ್ಡ ಮಗ ರಾಮನಾಥ ಮನೆ ಬಿಡುವಾಗ ಪಾಲಿನ ಮಾತೆತ್ತಿದ್ದಕ್ಕೆ ಚಂಡಿಯಾದಳು. ಮನೆ ಬಂಗಾರ ಜಮೀನು ಯಾವುದನ್ನೂ ಪಾಲು ಮಾಡಲು ಬಿಡಲಿಲ್ಲ. ಅವನು ಸತಾಯಿಸತೊಡಗಿದ. “ಬೇಕಾದರೆ ಕೋರ್ಟಿಗೆ ಹೋಗಿ ಪಾಲು ತಗೋ…ಮತ್ತು ಅದರ ನಂತರ ಅನ್ನ ನೀರು ತಕ್ಕೊಳ್ಳದೇ ನಿಮ್ಮ ಕಣ್ಣೆದುರೇ ಸಾಯುತ್ತೇನೆ… ನನ್ನ ಸಾವಿನ ನಿರ್ಣಯ ತಗೊಂಡು ಕೋರ್ಟಿಗೆ ಹೋಗು” ಎಂದೆಲ್ಲ ಅಮ್ಮ ಹೆದರಿಸಿದ್ದಕ್ಕೆ ಆತ ಸುಮ್ಮನಾಗಬೇಕಾಯಿತು. ಆ ದಿವಸಗಳಲ್ಲೆಲ್ಲಾ ದೊಡ್ಡಣ್ಣನದೇ ತಪ್ಪೆಂದು ಹೇಳುತ್ತಿದ್ದ ಮಂಜುನಾಥನೂ ಮದುವೆಯಾದ ಸ್ವಲ್ಪ ಕಾಲಕ್ಕೆ ಅದೇ ಹಾದಿ ಹಿಡಿದ. ಹೀಗೆ ಅಣ್ಣಂದಿರಿಬ್ಬರೂ ಮದುವೆಯಾಗಿ ಬೇರೆಯಾದ ಮೇಲೆ ಕೊನೆಯವನಾದ ರಮಣನೊಬ್ಬನೇ ಅಮ್ಮನ ಜೊತೆ ಉಳಿದವನು.
ರಮಣ ಲಕ್ಷ್ಮಿಯನ್ನು ಮದುವೆಯಾಗಿ ತಂದಾಗಿನಿಂದ ಅತ್ತೆ-ಸೊಸೆ ನಡುವಿನ ಸಹಜ ರಸಕಸಿ ಇದ್ದರೂ ಹೇಗೋ ಸುಧಾರಿಸಿಕೊಂಡಿದ್ದರು. ಅಪ್ಪ ಎಲ್ಲ ಸ್ವಯಾರ್ಜಿತ ಆಸ್ತಿಯನ್ನು ಅಮ್ಮನ ಹೆಸರಿಗೆ ಬಿಟ್ಟು ಹೋಗಿದ್ದೇ ಅವಳ ದೊಡ್ಡ ಬಲವಾಗಿತ್ತು. ಆಸ್ತಿ ಒಳಹಾಕಿಕೊಳ್ಳುವುದಕ್ಕೆ ಅಮ್ಮನ ಸೆರಗಿಗೆ ಅಂಟಿಕೊಂಡಿದ್ದಾನೆಂದು ಅಣ್ಣಂದಿರು ಆಡಿದ ಮಾತು ರಮಣನ ಕಿವಿ ಸೇರಿತ್ತು. ಪಾಲಿನ ವಿಷಯ ಬಂದದ್ದೇ ದೊಡ್ಡ ಮಕ್ಕಳಿಬ್ಬರೂ ಒಂದಾಗಿಬಿಟ್ಟರು. ಈ ಮನೆಯ ಮೇಲೆ ಆಗಿನಿಂದಲೇ ಕಣ್ಣಿಟ್ಟಿರುವ ದಾಯಾದಿಗಳು ಮಾಡಿದ ಹುನ್ನಾರು, ಎಲ್ಲ ಬಂಗಾರ ಪಾತ್ರೆ ಹೊಲ ಮಾರಿಯೂ ಈ ಮನೆ ಉಳಿಸಿಕೊಂಡು ಬಂದದ್ದು, ಈ ಮನೆಯ ಬೆಲೆಗಾಗಿ ಅಲ್ಲ ಅವರೆಲ್ಲ ಹಿಂದೆ ಬಿದ್ದದ್ದು-ಬರೀ ಜಿದ್ದಿಗಾಗಿ ಎಂಬ ಅಮ್ಮನ ನಂಬಿಕೆ,ನಿಮ್ಮ ಕೈಗೆ ಗೆರಟೆ ಕೊಟ್ಟು ರಸ್ತೆಗೆ ಇಳಿಸುತ್ತೇನೆ ಎಂದು ಶಪಥ ಮಾಡಿ ಬೆನ್ನುಬಿದ್ದ ದಾಯಾದಿ ಬಾಳನ ಕಾಟಗಳು…ಅಮ್ಮ ಹೇಳಿದ ಈ ಯಾವುದೂ ಮಕ್ಕಳ ಮನಸ್ಸನ್ನು ತಟ್ಟಲಿಲ್ಲ. “ಈ ಮನೆ ಒಡೆಯಬೇಡಿ…ನಾನಿರುವುದರಿಂದ ಅಲ್ಲವೇ ಸೊಸೆಯರು ಇಲ್ಲಿ ಸರಿಯಾಗಿ ಸಂಸಾರ ಮಾಡಲಿಲ್ಲ…ನನ್ನ ನಂತರವಾದರೂ ಒಟ್ಟಾಗಿ ಇರಿ….” ಎಂದು ಹೇಳುತ್ತಲೇ ಉಳಿದಳು. ಕೆಲವೊಮ್ಮೆ ಜೀವಕ್ಕೆ ಕರಕರೆಯಾದಾಗ, ಪಾಲು ಆದರೆ ಆಗಿಬಿಡಲಿ ಅಂತ ರಮಣನಿಗೂ ಅನಿಸುತ್ತಿತ್ತು. ಲಕ್ಷ್ಮಿ ಗಂಡನಿಗೆ ಸಿಟ್ಟು ಬಂದೀತೆಂದು ಸುಮ್ಮನಿದ್ದಳೇ ಹೊರತು ಒಳಗೊಳಗೇ ಅವಳಿಗೂ ಬೇರೆಯಾಗಿ ಸ್ವತಂತ್ರವಾಗಿ ಇರುವುದು ತನ್ನ ನಶೀಬದಲ್ಲಿಲ್ಲವೆಂಬ ಕೊರಗಿತ್ತು.
-೨-
ರಮಣ ಮನೆ ಮುಟ್ಟಿದ್ದು ಮರುದಿವಸ ಬೆಳಿಗ್ಗೆ. ಅವನು ಬಂದೊಡನೆ ನಿಧಾನಕ್ಕೆ ತನ್ನ ದೈನಿಕದತ್ತ ಹೊರಳಿಕೊಳ್ಳುತ್ತಿದ್ದ ಮನೆಯಲ್ಲಿ ಸಾವಿನ ಮೌನ ಮತ್ತೆ ಹೊಕ್ಕಿತು. ಅಣ್ಣಂದಿರ ಮಕ್ಕಳು ತಮ್ಮ ಪಾಡಿಗೆ ಅಂಗಳದಲ್ಲಿ ಆಡಿಕೊಳ್ಳುತ್ತಿದ್ದರು. ಇಬ್ಬರೂ ಅಣ್ಣಂದಿರು ಮನೆಗೆ ಬಂದಿದ್ದರು. ದೊಡ್ಡಣ್ಣನಿಗೆ ಏನು ಹೇಳಬೇಕಂತ ತಿಳಿಯದೇ “ತಾರು ಯಾವಾಗ ಸಿಕ್ಕಿತು…” ಅಂದ. ಮಂಜಣ್ಣ “ಹೋಗಿ ಈವತ್ತಿಗೆ ನಾಲ್ಕನೇ ದಿವಸ….ನಿನಗಾಗಿ ಒಂದು ದಿನ ಕಾದೆವು…” ಅಂದ . ರಮಣ ಮಾತಾಡಲಿಲ್ಲ. ನಡುಮನೆಯ ಮೂಲೆಯಲ್ಲಿ ಉರಿಸಿಟ್ಟ ದೀಪದ ಅರೆಬೆಳಕಲ್ಲಿ ಜಂತಿಯಿಂದ ತೂಗುಬಿದ್ದ ನೂಲು. ಅದರ ತುದಿ ನೆನೆಬಿಟ್ಟ ಹಾಲ ಬಟ್ಟಲು, ಧಾವಿಸಿ ಬಂದು ಬಾಗಿಲಲ್ಲಿ ನಿಂತ ಲಕ್ಷ್ಮಿಯ ತುಂಬಿಬಂದ ಕಣ್ಣುಗಳು ಅಮ್ಮನ ಸಾವನ್ನು ಎದೆಗೆ ಒಡ್ಡಿದವು. ಮೌನವನ್ನೊಡೆದು ಬಂದ ಲಕ್ಷ್ಮಿಯ ಬಿಕ್ಕು ನಾಂದಿಯಾಗಿ ಅಲ್ಲೇ ಗೋಡೆಗೊರಗಿ ಕೂತು ರಮಣ ಅತ್ತುಬಿಟ್ಟ. ಸಮಾಧಾನಪಡಿಸಬಂದ ಅಣ್ಣಂದಿರ ಕಣ್ಣಲ್ಲೂ ನೀರು ತುಳುಕಿತು. ಲಕ್ಷ್ಮಿ “ಆ ಹೊತ್ತಿಗೇ ನೀವಿರಲಿಲ್ಲವಲ್ಲ…” ಎಂದು ಬಿಕ್ಕಿದಳು. ಮುಂದೆ ಸ್ವಲ್ಪ ಹೊತ್ತಿನಲ್ಲೇ ಮನೆಯಲ್ಲಿ ನೆರೆದ ಜನರಿಂದ ಕಾರಣಗಳು ಸಮಾಧಾನಗಳು ಧೈರ್ಯದ ಮಾತುಗಳು ನಶೀಬದಲ್ಲಿ ಬರೆದದ್ದು ಇತ್ಯಾದಿಗಳು ಧಾರಾಳ ಬಂದವು-ರಾತ್ರಿ ಊಟ ಮುಗಿಸಿದ ನಂತರ ಎಲ್ಲರದೂ ಆಯಿತೇ ಎಂದು ಎರಡೆರಡು ಬಾರಿ ಕೇಳಿದಳಂತೆ…ನೀರು ಕೊಡು ಎದೆ ನೋಯುತ್ತದೆ ಎಂದಳಂತೆ…ಲಕ್ಷ್ಮಿ ನೀರು ತಂದರೆ ಅಲ್ಲೇನಿದೆ….? ಪುಣ್ಯ ಮಾಡಿದ್ದಳೋ ಅವಳು…ಇಂಥ ಸಾವು ಕೇಳಿಕೊಂಡು ಬಂದಿರಬೇಕು….ಒಂದು ನೋವಿಲ್ಲ ನರಳಾಟವಿಲ್ಲ…ಆ ಅವರ್ಸೆಯ ಪ್ರಿಯಾಗಿ ನೋಡು….ನರಳಿ ನರಳಿ ಇವಳನ್ನು ಯಾವಾಗ ಕರಕೊಳ್ಳುತ್ತೀಯಪ್ಪ ದೇವರೇ ಅಂತ ಅನ್ನಿಸುವ ಹಾಗೆ ಮಾಡಿ ಸತ್ತಳು…ಒಂದೇ ಅಂದರೆ ಎಲ್ಲ ಮಗಂದಿರಿಗೆ ಮುಖ ಸಿಗಲಿಲ್ಲ ಅನ್ನುವುದು….ಅದೆಲ್ಲ ಋಣಾನುಬಂಧ…ಇಲ್ಲವಾದರೆ ಅದೇ ಹೊತ್ತಿಗೆ ಪತ್ತೆಹತ್ತದ ಊರಿಗೆ ಹೋಗಬೇಕೇ?….
ಮನೆಯಲ್ಲಿ ತುಂಬಿದ ಜನರಿಂದ ರಮಣನಿಗೆ ಕಿರಿಕಿರಿಯಾಯಿತು. ಎದ್ದು ತನ್ನ ಕೋಣೆಗೆ ಹೋದ. ಅಲ್ಲಿ ಅಣ್ಣನ ಮಕ್ಕಳ ಆಟಿಗೆಯೆಲ್ಲ ಹರಡಿತ್ತು. ಆಯಾಸದಿಂದ ನಿತ್ರಾಣನಾಗಿದ್ದ. ಅಣ್ಣನ ಮಕ್ಕಳು ಚಿಕ್ಕಪ್ಪ ಅನ್ನುತ್ತ ಅವರ ನಡುವಿನ ಜಗಳದ ತೀರ್ಪಿಗೆ ಬಂದವರು ಚಿಕ್ಕಪ್ಪನ ಮೋರೆ ನೋಡಿ ದಿಗಿಲಿನಲ್ಲಿ ನಿಂತರು. ಸ್ನಾನ ಮಾಡಿದ ಮೇಲೆ ರಮಣನಿಗೆ ಸ್ವಲ್ಪ ನಿರಾಳವಾಯಿತು. ಲಕ್ಷ್ಮಿ ಒತ್ತಾಯಿಸಿ ತಿಂಡಿ ಕೊಟ್ಟಳು. ದಣಿದು ಹೋದವಳಂತೆ ಕಂಡಳು. ಅಣ್ಣಂದಿರು ರಮಣನ ಜೊತೆ ಕೂತು ಮಾಡಿದ್ದನ್ನು ಮಾಡಬೇಕಾದ್ದನ್ನು ಹೇಳಿದರು. ಅಸ್ತಿ ತಂದದ್ದಾಗಿದೆ. ಇನ್ನು ಉಳಿದ ಕ್ರಿಯಾ ಕರ್ಮ ಇಲ್ಲಿಯೇ ಮಾಡುವುದೋ ಗೋಕರ್ಣಕ್ಕೆ ಹೋಗುವುದೋ? ಅಲ್ಲಿ ಹೋಗಿ ಮಾಡುವುದೇ ಒಳ್ಳೆಯದು. ಅವರಿಗೆ ಇಷ್ಟು ಅಂತ ಕೊಟ್ಟುಬಿಟ್ಟರೆ ಆಯಿತು. ಊರಿನಲ್ಲಿ ಅದೆಲ್ಲ ಮಾಡುವುದು ಕೈಲಾಗುವಂಥದ್ದಲ್ಲ. ಐನೂರು ಜನಕ್ಕಾದರೂ ಊಟ ಆಗಬೇಕಾಗುತ್ತದೆ….ರಮಣ ಎಲ್ಲದಕ್ಕೂ ಆಯಿತು ಆಯಿತು ಅಂದ.
ಆಮೇಲೆ ಮಂಜಣ್ಣ ಹೇಳಿದ ಸುದ್ದಿ ಮಾತ್ರ ರಮಣನನ್ನು ಬಹಳ ಕಲಕಿತು : “ಗೋಪಾಲಮಾಮ ಬಂದಿದ್ದ. ಅಮ್ಮ ಸತ್ತ ದಿವಸ ಬೆಳಿಗ್ಗೆ…ಋಣಾನುಬಂಧ ನೋಡು…ಮೂರು ವರ್ಷದ ನಂತರ ಬಂದವನು ಅದೇ ದಿವಸ ಬೆಳಿಗ್ಗೆ ಬಂದು ತಲುಪಬೇಕೇ…? ಅವನ ಹತ್ತಿರ ವಿಡಿಯೋ ಕ್ಯಾಮರಾ ಇತ್ತು. ಅದರಿಂದ ಅಮ್ಮ ಹೋದ ದಿವಸದ್ದು ಸ್ವಲ್ಪ ಫೋಟೋ ತೆಗೆದಿದ್ದಾನೆ….ನಿನಗೆ ಮುಖ ಸಿಗಲಾರದು ಅಂತಾದ್ದರಿಂದ ಹಾಗೇ ಮಾಡುವ ಎಂದು ಅವನೇ ಮುಂದೆ ಬಂದು ಮಾಡಿದ್ದು…” ರಮಣನಿಗೆ ಆಶ್ಚರ್ಯವಾಯಿತು. ಅಸಹ್ಯವಾಯಿತು. ಗೋಪಾಲಮಾಮ ಅಂದರೆ ಅವನ ಅಮ್ಮನ ತಮ್ಮ. ದುಬೈನಲ್ಲಿದ್ದವನು. ಅವನನ್ನು ಕಂಡರೆ ಅಮ್ಮನಿಗೂ ಅಷ್ಟಕ್ಕಷ್ಟೇ. ದುಡ್ಡಿಗಾಗಿ ಏನೂ ಮಾಡುತ್ತಾನೆ ಅಂತ ಹೇಳುತ್ತಿದ್ದಳು. ಅಪ್ಪ ಇದ್ದಾಗ ಅಪ್ಪನಿಗೂ ನಾಮ ಹಚ್ಚಲು ನೋಡಿದ್ದನಂತೆ. ಅವನನ್ನು ಹತ್ತಿರ ಮಾಡಿಕೊಳ್ಳಬೇಡಿ ಎಂದು ಅಮ್ಮ ಯಾವಾಗಲೂ ಹೇಳುತ್ತಿದ್ದರು. ರಮಣನಿಗೆ ಅವನ ನೆನಪು ಕಹಿಯಾಯಿತು. ಅವನು ಯಾಕೆ ಬಂದ? ಮದುವೆಗಳಲ್ಲಿ ವಿಡಿಯೋ ತೆಗೆಯುವುದನ್ನು ಕಂಡಿದ್ದನೇ ಹೊರತು ಸತ್ತಾಗಲಲ್ಲ. ಭಯವಾಯಿತು-ಮತ್ತೆ ಅಮ್ಮನನ್ನು ಹಾಗೆಲ್ಲ ನೋಡಬೇಕೆಂದು. ಯಾವ ಚಪ್ಪಡಿ ಎದೆಗೆ ಹೇರಿ ಗೋಪಾಲಮಾಮ ಅಕ್ಕನ ಹೆಣಕ್ಕೆ ಕ್ಯಾಮರಾ ಒಡ್ಡಿದ?
ಮದ್ಯಾಹ್ನ ಊಟವದ ನಂತರ ಗಾಢ ನಿದ್ರೆ ಬಂತು. ಎಚ್ಚರದಾಗ ಸಂಜೆಯಾಗಿತ್ತು. ರಮಣ ಎದ್ದದೇ ಲಕ್ಷ್ಮಿ ಚಹಾ ಮಾಡಿ ತಂದಳು. ಆಗ ಸಿಕ್ಕಿದ ಒಂದು ಕ್ಷಣದ ಏಕಾಂತವನ್ನು ವ್ಯರ್ಥಗೊಳಿಸಬಾರದೆಂಬಂತೆ ಅವಳು, ದೊಡ್ಡಣ್ಣ ಅಮ್ಮನ ಕೈ ಬಳೆ, ಕೊರಳ ಸರ ಬಿಚ್ಚಿ ತನ್ನ ಹೆಂಡತಿಯ ಬಳಿ ಕೊಟ್ಟನೆಂದು ಹೇಳಿದಳು. ರಮಣನಿಗೆ ಸಿಟ್ಟು ಬಂತು. ತಗೊಳ್ಳಲಿ ಬಿಡು ಅಂದ ರೇಗಿದ ದನಿಯಲ್ಲಿ. ಎಷ್ಟು ಬೇಗ ಈ ಸಾವನ್ನು ಹಿಂದೆ ಬಿಟ್ಟು ಎಂದಿನ ನಾಗಾಲೋಟಕ್ಕೆ ತೊಡಗಿಬಿಟ್ಟವರ ಬಗ್ಗೆ ಅಸಹ್ಯವಾಯಿತು. ಅಮ್ಮನ ಹೆಣ ಅಲ್ಲಿರುವಾಗ ಅದು ಹೇಗೆ ಇಂಥ ಸಣ್ಣತನ ಸಾಧ್ಯ ಅನಿಸಿತು. ಆದರೂ ಯಾರಾದರೊಬ್ಬರು ತೆಗೆಯಲೇ ಬೇಕಿತ್ತಲ್ಲ ಅದನ್ನು. ಲಕ್ಷ್ಮಿ ಸಾವಿನ ದಿವಸದ ಸಂಗತಿಗಳನ್ನೆಲ್ಲ ಮತ್ತೆ ಹೇಳಲು ಸುರುಮಾಡಿದ್ದಳು. ರಮಣ “ಈಗ ಅದೆಲ್ಲ ಬೇಡ…” ಎಂದು ನಿಲ್ಲಿಸಿಬಿಟ್ಟ.
ಈ ಬಂಗಾರದ ವಿಷಯ ಎತ್ತಲೇಬಾರದು ಎಂದು ರಮಣ ನಿರ್ಧರಿಸಿದ. ಇದರ ಸುದ್ದಿ ತಗೆದರೆ ಮಾತಿಗೆ ಮಾತಾಗಿ ವಿಷಯ ಪಾಲಿನವರೆಗೂ ಬಂದುಬಿಡುತ್ತದೆ. ಎಲ್ಲರೂ ಒಟ್ಟಗಿ ಉಳಿಯಬೇಕೆಂಬುದೇ ಅವಲ ಅಸೆಯಾಗಿತ್ತು. ದೊಡ್ಡಣ್ಣನೊಬ್ಬನೇ ಅಮ್ಮನ ಮೈಮೇಲಿನ ಬಂಗಾರ ತಗೊಳ್ಳುತ್ತಾನೆ ಅಂದರೆ ಮಂಜಣ್ಣ ಸುಮ್ಮನಿರಲಾರ. ದೊಡ್ಡವನ ಮಗನಿಗೆ ಅಮ್ಮ ಕಿವಿಗೆ ಬಂಗಾರದ ಒಂಟಿ ಮಾಡಿಸಿ ಹಾಕಿಸಿದ್ದಕ್ಕೆ ಎಷ್ಟು ರಂಪ ಮಾಡಿದ್ದ. ಅಮ್ಮ ಹೋದಾಗಿನಿಂದ ಎಲ್ಲ ಖರ್ಚನ್ನೂ ಅವನೇ ನಿರ್ವಹಿಸುತ್ತಿದ್ದಾನಂತೆ. ತಾನು ಇಷ್ಟೊಂದು ಖರ್ಚು ಮಾಡಿದೆ ಎಂದು ಅವನು ಹೇಳದೇ ಇರಲಾರ. ಸಾವನ್ನು ಖರ್ಚಿನಲ್ಲಿ ಹಂಚಿಕೊಳ್ಳುವುದಕ್ಕೆ ಮೊದಲಾಗುತ್ತದೆ. ಎಷ್ಟೇ ಸಂಯಮದಿಂದ ಇದ್ದರೂ ಒಮ್ಮೊಮ್ಮೆ ಅಣ್ಣನ ಮಾತುಗಳಲ್ಲಿ ದುರಾಸೆಯ ವಾಸನೆ ಹತ್ತಿ ರಮಣನಿಗೆ ಸಿಟ್ಟೇರುತ್ತಿತ್ತು.
ಊರಿನಲ್ಲಂತೂ ಮನೆಯಲ್ಲಿ ಪಾಲಾಯಿತು ಎಂದೋ , ಅಣ್ಣತಮ್ಮಂದಿರು ಹೊಡೆದಾಡಿದರೆಂದೋ, ಅವರ ಹೆಂಡಂದಿರೇ ಮುಂದೆ ನಿಂತು ಪಾಲು ಮಾಡಿಕೊಂಡರಂತೆ ಎಂದೋ ಚಿತ್ರವಿಚಿತ್ರ ಅಸಂಬದ್ಧ ಸುದ್ದಿಗಳು ಹಬ್ಬಿದವು. ಕೆಲವರಂತೂ ಆ ಬೆಲೆಯ ಹತ್ತಿರದ ತೋಟ ದೊಡ್ಡ ಮಗನಿಗಂತೆ… ರಮಣನಿಗೆ ಮನೆಯಂತೆ…ಇತ್ಯಾದಿಯಾಗಿ ಮಾತಾಡತೊಡಗಿದ್ದರು. ಅಣ್ಣ ತಮ್ಮಂದಿರಿಗೆ ಊರಿನಲ್ಲಿಯ ಅವರವರ ಹಿತೈಷಿಗಳು ಯಾವ ತೋಟವನ್ನು ಕೇಳಬೇಕು, ಯಾವುದನ್ನೂ ಬಿಟ್ಟುಕೊಡಲಡ್ಡಿಯಿಲ್ಲ ಇತ್ಯಾದಿಗಳ ಬಗ್ಗೆ ಉಪದೇಶಕ್ಕೆ ತೊಡಗಲು ನೋಡುತ್ತಿದ್ದರು. ಈ ನಡುವೆ ಗೋಪಾಲಮಾಮ ಊರಿನಲ್ಲಿಯ ನಾಲ್ಕು ಜನರ ಹತ್ತಿರ ಮನೆಯ ಹಿಂದಿನ ಜಾಗ ನನಗೇ ಕೊಡುತ್ತೇನಂತ ಅಕ್ಕ ಹೇಳಿದ್ದಳು ಎಂದು ಪಿಸುಗುಟ್ಟಿ ಸುದ್ದಿ ಹಾಕಿದ. ಅಮ್ಮನ ಕ್ರಿಯೆಗಳೆಲ್ಲ ಮುಗಿಯುವವರೆಗೂ ಒಂದೇ ಮನೆಯಲ್ಲಿರುವುದೆಂದುಕೊಂಡು ಬಂದ ಅಣ್ಣ-ತಮ್ಮಂದಿರಿಗೆ ರಗಳೆಯಾಗತೊಡಗಿತು. ರಮಣನಿಗೆ ಎಲ್ಲಿಯೋ ಸರಿಯಿಲ್ಲ ಅನಿಸತೊಡಗಿತ್ತು. ಮೂವರೂ ಅವರವರ ವ್ಯಾಪಾರ ವ್ಯವಹಾರಗಳನ್ನು ಮನೆಯಿಂದಲೇ ಮುಂದುವರೆಸತೊಡಗಿದ್ದರೂ ಯಾವುದೋ ಮುಜುಗರ ಕಾಡುತ್ತಿತ್ತು. ಆಗಾಗ ಇಬ್ಬರೂ ಅಣ್ಣಂದಿರು ಯಾವುದೋ ವಿಷಯವನ್ನು ರಮಣನ ಎದುರು ಎತ್ತಲು ತವಕಗೊಂಡಿರುವಂತೆ ಕಂಡರೂ ರಮಣ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.
ಹತ್ತನೆಯ ದಿವಸದ ಶಾಸ್ತಗಳೆಲ್ಲ ಮುಗಿದವು. ಮಾರನೇ ದಿವಸ ಗೋಕರ್ಣಕ್ಕೆ ಎಲ್ಲರೂ ಹೋಗುವುದೆಂದಾಯಿತು. ಮಂಜಣ್ಣ “ಇವತ್ತು ಗೋಪಾಲಮಾಮ ಹೇಳಿ ಕಳಿಸಿದ್ದಾನೆ…ಸಂಜೆ ಬರುತ್ತಾನಂತೆ…..ಅವರ್ಸೆಗೆ ಹೋಗಿ ಮೋಹನ ಮಾಸ್ತರರ ಮನೆಯಿಂದ ವಿಡಿಯೋ ತರುತ್ತಾನಂತೆ…” ಎಂದು ಹೇಳಿದ. ರಮಣ ಮಾತಾಡಲಿಲ್ಲ. ಬೇಡ, ಅದನ್ನು ನೋಡುವುದಿಲ್ಲ ಅನ್ನಬೇಕೆನಿಸಿತ್ತು. ಹೇಳಲಾಗಲಿಲ್ಲ.
ದಣಪೆಯ ಹತ್ತಿರ ಇರುವಾಗಲೇ ಕೇಳಿಸಿದ ಗೋಪಾಲಮಾಮನ ದನಿ ಅವನಲ್ಲಿ ಯಾವ ಬದಲಾವಣೆಯೂ ಆಗಿರಲಿಕ್ಕಿಲ್ಲವೆಂದೆನಿಸುವಂತೆ ಮಾಡಿತು. ಬಂದವನೇ ರಮಣನ ಹತ್ತಿರ ಮಾತಾಡಿದ. ಚಹಾ ಕುಡಿದು ವೀಡಿಯೋ ಸುರುಮಾಡಿದ. ಯಾರಯಾರದೋ ನಿಶ್ಚಿತಾರ್ಥದ, ಊಟದ ಚಿತ್ರಗಳು ಬರತೊಡಗಿದವು. ಮುಂದೆ ಇನ್ನೂ ಮುಂದೆ ಎಂದು ಗೋಪಾಲಮಾಮ ಅದನ್ನು ಗರಗರ ಮುಂದೆ ಓಡಿಸಿದ. ಮನೆಯಲ್ಲಿ ಮಕ್ಕಳಾದಿ ಎಲ್ಲ ನೆರೆದು ಗುಜುಗುಜು ಸುರುವಾಗಿ ಅದೇನೋ ಸಡಗರದ ಹಾಗಾಯಿತು. ಅಮ್ಮನನ್ನು ಕಂಡದ್ದೇ ರಮಣನಿಗೆ ಎದೆ ತುಂಬಿ ಬಂತು. ಅವಳನ್ನು ಅಲ್ಲಿ ಹೊರಕೋಣೆಯ ಮಧ್ಯೆ ಮಲಗಿಸಿದ್ದರು. ಎಲ್ಲವೂ ಸಾವಕಾಶ ತನ್ನೆದುರೇ ಜರುಗುತ್ತಿರುವಂತೆ ತೋರಿತು. ಹಲವರು ಕದ್ದು ಕ್ಯಾಮರಾ ನೋಡುತ್ತಿದ್ದರು. ಕೂದಲು ಸರಿಪಡಿಸಿಕೊಳ್ಳುತ್ತಿದ್ದರು. ಅಳುವಿನ ಧುಸುಮುಸು ಬಿಕ್ಕುಗಳ ನಡುವೆಯೂ ದೊಡ್ಡಣ್ಣ ಅದೋ ಹೆಂಡತಿಯತ್ತ ನೋಡಿ, ಬಗ್ಗಿ ಅಮ್ಮನ ಬಳೆ ತೆಗೆಯುತ್ತಿದ್ದ. ಎದುರಿನ ತೆರೆಯೊಳಗಡೆ ತಾನೂ ಒಬ್ಬನಿದ್ದಂತೆ ಭಾಸವಾಯಿತು. ಅಣ್ಣ ಬಳೆ ತೆಗೆದ. ರಮಣ ಮುನ್ನುಗ್ಗಿದ. ಆತ ಬಳೆ ತೆಗೆದು ಹೆಂಡತಿಯ ಕೈಗೆ ಕೊಟ್ಟ. ರಮಣ ಮುಂದೆ ಬರುವುದಕ್ಕೂ ಮಂಜಣ್ಣನೂ ಮುಂದೆ ಅಡಿಯಿಡುವುದಕ್ಕೂ ಸರಿಹೋಯಿತು. ರಮಣ ಕುತ್ತಿಗೆಯಲ್ಲಿದ್ದ ಸರ ತೆಗೆದು ಲಕ್ಷ್ಮಿಯ ಕೈಗೆ ಕೊಡಲು ಅವಳನ್ನು ಹುಡುಕಿದ. ಮಂಜಣ್ಣನ ದುರುಗುಟ್ಟುವ ಕಣ್ಣುಗಳು ಬಂಗಾರವನ್ನು ದೃಷ್ಟಿಯಲ್ಲೇ ಅಳೆದವು. ಮತ್ತೇನೂ ಉಳಿದಿರಲಿಲ್ಲ. ಮಂಜಣ್ಣ ಹತ್ತಿರ ಬಂದು ಎಲ್ಲ ದೊಡ್ಡಣ್ಣನ ಹತ್ತಿರವೇ ಇಟ್ಟಿರು. ಆಮೇಲೆ ಅದರ ವ್ಯವಸ್ಥೆ ಮಾಡುವಾ ಎಂದ. ಈಗ ಆ ವಿಷಯ ಬೇಡ ಎಂದು ರಮಣ ಸರವನ್ನು ಲಕ್ಷ್ಮಿಯ ಕೈಗೇ ಕೊಟ್ಟ….
ರಮಣನಿಗೆ ಎದುರಿನ ತೆರೆಯ ಚಿತ್ರಗಳು ಮಂಜಾಗುತ್ತಾ ಹೋದಂತೆನಿಸಿತು. ಸುಸ್ತಾದಂತಾಯಿತು. ಅಮ್ಮನ ಸಾವಿನ ದಿವಸ ತಾನು ಇಲ್ಲಿದ್ದಿದ್ದರೆ ಅದನ್ನು ಗ್ರಹಿಸುವ ಬಗೆಯೇ ಬೇರೆಯಾಗಿರುತ್ತಿತ್ತು ಅನಿಸಿತು. ಕನ್ಯಾಕುಮಾರಿಯಲ್ಲಿ ನಿದ್ರೆ ಬಾರದ ರಾತ್ರಿ ಒಳಗೆ ತುಂಬಿದ ಕಳವಳವಾಗಿ, ತಿರುವಾಂಕೂರಿನಿಂದ ಬಂದ ಬಸ್ಸಿನ ಶಬ್ದವಾಗಿ, ಟ್ರಕ್ಕಿನ ಕ್ಯಾಬಿನ್ನಿನಲ್ಲಿ ಮೂಗನ್ನು ಅಡರಿದ ಮೀನಿನ ವಾಸನೆಯಾಗಿ, ಕಡಿದಾದ ತಿರುವಿನಲ್ಲಿ ತಪ್ಪಿದ ಜೋಲಿಯಾಗಿ, ನಿದ್ದೆಗೆಟ್ಟ ಕಣ್ಣತುದಿಗೆ ಭಾರವಾಗಿ ನಿಂತ ನಿದ್ರೆಯಾಗಿ, ಒಳಮನೆಯಲ್ಲಿ ಹೊತ್ತಿಸಿಟ್ಟ ದೀಪದ ಅರೆಬೆಳಕಲ್ಲಿ ತೂಗುಬಿದ್ದ ನೂಲಾಗಿ ಘನತೆಯಲ್ಲಿ ಉಳಿಯಬಹುದಿತ್ತು ಅಮ್ಮನ ಸಾವು. ಈಗ ಹೀಗೆ ಪರದೆಯ ಮೇಲೆ ಚಿತ್ರಗಳಾಗಿ ಮೂಡಿಸಿ ತನ್ನನ್ನು ಅದರ ವಿವರಗಳ ಭಾಗವನ್ನಾಗಿ ಮಾಡಿದ ಈ ಶಕುನಿಮಾವ ಯಾವುದಕ್ಕೆ ನುಗ್ಗಿಸುತ್ತಿದ್ದಾನೆ? ಒಡಹುಟ್ಟಿದವಳ ಸಾವಿನ ವಿವರಗಳನ್ನು ಮಸೂರದ ಮೂಲಕ ನೋಡುವಾಗ ಏನೂ ಅನ್ನಿಸಲಿಲ್ಲವೇ?
“ಸಾಕು ಮತ್ತೆ ಬೇಡ” ಎಂದು ರಮಣ ವೀಡಿಯೋ ನಿಲ್ಲಿಸಲು ಹೇಳಿ ಹೊರಗೆ ಬಂದ. ಅಣ್ಣಂದಿರು ಹಿಂದೆಯೇ ಬಂದರು. “ಆಚೆ ಕಡೆ ಹೋಗುವಾ ಮಾತಾಡುವುದುಂಟು” ಅಂದ. ಅವನು ಆಡಬಹುದಾದ ಮಾತುಗಳಿಗೆಲ್ಲ ತರ್ಕವಿತರ್ಕ ಹೂಡಿಕೊಂಡಿದ್ದ ಉಳಿದಿಬ್ಬರೂ ಅದನ್ನು ಒಳಗೊಳಗೇ ಮರುಕಳಿಸಿಕೊಳ್ಳುತ್ತ ಸನ್ನದ್ಧರಾದರು.
*****
ಜೂನ್ ೧೯೯೦
