ಗುಡಿಸಲು ಶುಭ್ರವಾಗಿತ್ತು-ಗುಡಿಸಿದ್ದ ಅಂಗಳ. ಚಿಟ್ಟೆ. ಹುಲ್ಲಿನ ಮಾಡು, ಅಂಗಳದ ಸುತ್ತ ಬಿದಿರಿನ ಬೇಲಿ. ಚಿಟ್ಟೆಯ ಮೇಲೊಬ್ಬ ಮುದುಕಿ ಮಲಗಿದ್ದಳು. ಗುಡುಸಿಲಿನ ತೆರೆದ ಬಾಗಿಲಿಂದ ಒಂದು ಕೊಡೆ. ಮೊಳೆಗೆ ನೇತು ಹಾಕಿದ ಅಂಗಿ. ಪ್ಯಾಂಟು. ಗೋಡೆಯ ಮೇಲೆ ಹಸ್ತದ ಮುದ್ರಿಕೆಗಳು ಕಂಡವು. ಜೀಪಿನಿಂದ ಇಳಿದು ಇದನ್ನೆಲ್ಲ ಗಮನಿಸಿದ ಸತೀಶ;
“ಅಜ್ಜಿ. ಕುಡಿಯಲು ನೀರು ಕೊಡ್ತೀರಾ?” ಎಂದ.
ಅವನ ಪಿ.ಎ. ನರಹರಿ, ಜೊತೆಯಲ್ಲಿ ಬಂದ ದಫೇದಾರ ಗುಡಿಸಿಲಿನ ಎದುರಿದ್ದ ಬಯಲಿನಲ್ಲಿ ಬಿಸಿಲಿಗೆ ಹೊಳೆಯುತ್ತಿದ್ದ ಎಲುಬುಗೂಡನ್ನು ಪರೀಕ್ಷಿಸಿ ನೋಟ್ ಮಾಡಿಕೊಳ್ಳಲು ಹೋಗಿದ್ದರು: ಕ್ಷಾಮದಿಂದ ಸತ್ತದ್ದೋ? ಬಿಸಾಕಿದ ದನದ ಹೆಣವೋ? ದಾರಿಯಲ್ಲಿ ಬರುವಾಗ ಇಂಥದ್ದೇ ಹತ್ತು ಎಲುಬುಗೂಡುಗಳನ್ನು ಸತೀಶ ಎಣಿಸಿದ್ದ.
ಇನ್ನೆರಡು ಸಾರಿ ಕರೆದ ಮೇಲೆ ಅಜ್ಜಿ ಮೆಲ್ಲಗೆ ಕಣ್ಣು ತೆರೆದಳು. ಮಲಗಿದ್ದಲ್ಲೇ ಅವನನ್ನು ಅಸ್ಪಷ್ಟವಾಗಿ ನೋಡುತ್ತ.
“ನೀರು ಕೊಡಲ್ಲ” ಎಂದಳು.
ಸತೀಶನಿಗೆ ತಕ್ಷಣ ಏನು ಮಾಡಬೇಕು ತಿಳಿಯಲಿಲ್ಲ.
“ಒಂದೇ ಗುಟುಕು ಸಾಕು ಅಜ್ಜಿ.”
ಅವಳು ನೀರನ್ನು ನಿರಾಕರಿಸಿದ್ದು ತನ್ನಂತೆ ಅವಳನ್ನೂ ಕುಗ್ಗಿಸಿರಬಹುದು. ಈಗ ತಾನು ಸುಮ್ಮನೆ ಹೋಗಿಬಿಟ್ಟರೆ ಮುದುಕಿ ಆಮೇಲೆ ಪಶ್ಚಾತ್ತಾಪದಿಂದ ಕೊರಗಿಯಾಳು. ಯಾರ ಮೇಲೆ ಏನು ಸಿಟ್ಟೋ? ಅವಳಿಗೆ ಸಮಾಧಾನವಾಗಲಿ ಎಂದು ಒಲಿಸುವ ಧ್ವನಿಯಲ್ಲಿ ಕೇಳಿದ.
“ಬಾಯಿ ಒದ್ದೆಯಾದರೂ ಸಾಕಜ್ಜಿ. ಹಾಳು ಬಿಸಿಲು.”
ಮುದುಕಿ ಎದ್ದು ಕೂತಳು. ತೆವಳುತ್ತ ಒಳಗೆ ಹೋದಳು. ನೀರಿಡುವ ಮಡಕೆಯನ್ನು ಎತ್ತಿಕೊಂಡು ತೆವಳುತ್ತಲೇ ಬಂದಳು. ಸತೀಶ ಕೈ ಬೊಗಸೆ ಮಾಡಿದ. ಮುದುಕಿ ಮಡಕೆಯನ್ನು ಬೋರಲಾಗಿ ಮಗುಚಿದಳು. ಮಡಕೆಯಲ್ಲಿ ಒಂದೇ ಒಂದು ತೊಟ್ಟು ನೀರು ಇರಲಿಲ್ಲ.
ಆಮೇಲಿಂದ ಹಳ್ಳಿಯವರನ್ನು ಕೇಳಿದಾಗ ಸತೀಶನಿಗೆ ತಿಳಿಯಿತು. ಮೂರು ದಿನಗಳಿಂದ ಮುದುಕಿ ಅನ್ನ ನೀರು ನಿರಾಕರಿಸಿದ್ದಳು. ಅವಳ ಒಬ್ಬನೇ ಮೊಮ್ಮಗನನ್ನು ದಸ್ತಗಿರಿ ಮಾಡಲಾಗಿತ್ತು. ಈ ಮೊಮ್ಮಗ ಆಂಧ್ರದಿಂದ ಪುಟ್ಟ ಚೀಲಗಳಲ್ಲಿ ಅಕ್ಕಿ ತಂದು ನೆರೆಯ ಜಿಲ್ಲೆಗೆ ಸಾಗಿಸುವ ಕಳ್ಳ ವ್ಯಾಪಾರಿಯಾಗಿದ್ದ. ಮುದುಕಿ ಮಡಕೆಯನ್ನು ಮಗುಚಿದವಳೇ ಇನ್ನೊಂದು ಮಾತಾಡದೆ ಕಣ್ಣು ಮುಚ್ಚಿ ಮಲಗಿದಳು. ತನ್ನನ್ನು ಚರ್ಚಿಸುತ್ತ ನಿಂತವರ ಪರಿವೆಯಿಲ್ಲದೆ.
ಪಿ.ಎ. ದಾರಿಯಲ್ಲಿ ಹೇಳಿದ:
“ಗಂಗಾಧರಸ್ವಾಮಿ ತುಂಬಾ ಅಕ್ಕಿ ದಾಸ್ತಾನು ಮಾಡಿದಾನೆ ಸಾರ್.”
ಸತೀಶ ಜಿಲ್ಲಾಧಿಕಾರಿಯಾಗಿ ತಾನೇ ಅನುಸರಿಸುತ್ತಿದ್ದ ಶಾಸನ: ಆಂಧ್ರದಿಂದ ಜಿಲ್ಲೆಯೊಳಗೆ ಅಕ್ಕಿ ತರೋದು ತಪ್ಪಲ್ಲ. ಅದು ಆಂಧ್ರದಲ್ಲಿ ತಪ್ಪು. ಆದರೆ ಈ ಜಿಲ್ಲೇಂದ ಇನ್ನೊಂದು ಜಿಲ್ಲೆಗೆ ಅಕ್ಕಿ ಸಾಗಿಸೋದು ಅಪರಾಧ.
ನೀರಿಲ್ಲದಿದ್ದರೂ ನೀರು ಕೊಡಲ್ಲ ಎನ್ನುವಷ್ಟು ಸಾಯುವ ಮುದುಕಿಯೊಬ್ಬಳು ಕಠಿಣವಾಗಬೇಕಾಯ್ತು ಎಂದು ಸತೀಶನಿಗೆ ದುಃಖವಾಗಿತ್ತು. ಆದರೆ ಈ ದುಃಖ ಕೂಡ ಸತೀಶನನ್ನು ತೀವ್ರವಾಗಿ ಬಾಧಿಸಲಿಲ್ಲ. ಬಿಸಿಲಿನ ಬೇಗೆ ಅಸಹನೀಯವಾಗಿತ್ತು: ಮೈಯ ಪಸೆಯನ್ನೆಲ್ಲ ಹೀರುತ್ತ ನೆಲವನ್ನು ಪುಡಿ ಪುಡಿ ಮಾಡುತ್ತಿತ್ತು. ದಾರಿಯಲ್ಲಿ ಒಂದೇ ಒಂದು ಕಾಗೆ ಸಹ ಕಾಣಲಿಲ್ಲ. ಬೆಂಕಿ ತಾಗಿಸಿದರೆ ಸಾಕು. ಧಗ ಧಗ ಉರಿಯುವಷ್ಟು ಒಣಗಿ ನಿಂತ ಮರಗಳು. ದಾರಿಯಲ್ಲಿ ಅಲ್ಲೊಂದು ಇಲ್ಲೊಂದು ಅಂಗಡಿ. ಅಂಗಡಿಯೆಂದರೆ ಒಂದು ಮರದ ಪೆಟ್ಟಿಗೆ. ಅದರಲ್ಲಿ ನೀಟಾಗಿ ಜೋಡಿಸಿಟ್ಟ ನಾಲ್ಕೈದು ಕಟ್ಟು ಬೀಡಿ. ಒಂದು ಪುಟ್ಟ ಡಬ್ಬಿಯಲ್ಲಿ ಸೇಂಗ- ಇಷ್ಟು ಬಂಡವಾಳವನ್ನು ಬೆನ್ನ ಹಿಂದಿಟ್ಟುಕೊಂಡು ಕಾಯುತ್ತ ಕೂತ ಮಾಲೀಕ. ಚರಂಡಿಯ ಮೇಲೆ ತಲೆಯಿಟ್ಟು ಹಣೆಯ ಮೇಲೆ ಮಾತ್ರ ಒಂದಿಷ್ಟು ಚರ್ಮ ಮೆತ್ತಿಕೊಂಡು ಉಳಿದದ್ದೆಲ್ಲ ಎಲುಬು ಗೂಡಾದ ಯಾರದೋ ದನ- ಇನ್ನೊಂದು ಸತ್ತ ದನ. ನೋಟ್ ಮಾಡಿಕೊಂಡ.
*
*
*
ಜಿಲ್ಲೆಯನ್ನು ಕ್ಷಾಮ ಪ್ರದೇಶವೆಂದು ಸಾರುವಂತೆ ಸರ್ಕಾರವನ್ನು ಒತ್ತಾಯಪಡಿಸಬೇಕು. ನೀಲಿ ಉಣ್ಣೆಯ ಬಟ್ಟೆ ಹಾಸಿ ಅದರ ಮೇಲೆ ಗಾಜಿಟ್ಟ ವಿಶಾಲವಾದ ಮೇಜಿನ ಎದುರು ಸತೀಶ ಕೂತ. ಪರಿಚಿತವಾದ ಕಛೇರಿಯಲ್ಲಿ ಫ್ಯಾನ್ ಕೆಳಗೆ ಕೂತಿದ್ದರೆ ಊರಲ್ಲಿ ಬರಗಾಲವಿದೆಯೆಂಬುದು ಬರಿ ಒಂದು ಸುದ್ದಿ. ಪುಸ್ತಕವೊಂದನ್ನು ಎತ್ತಿಕೊಂಡು ರಿಪೋರ್ಟ್‌ನಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತ ಅಮೇರಿಕಾದ ಪ್ರೊಫೆಸರ್ ಒಬ್ಬ ಬಂಗಾಳ ಕ್ಷಾಮದ ಬಗ್ಗೆ ಬರೆದ ಲೇಖನದಿಂದ ಕೆಲವು ಭಾಗಗಳನ್ನು ಗುರುತು ಮಾಡುತ್ತ ಹೋದ.
“ಬಂಗಾಳದ ಕ್ಷಾಮದಲ್ಲಿ ಕ್ಷಾಮವನ್ನು ದೇವರ `ಗುಪ್ತ ಮಸಲ’ ಎಂದೂ ಕ್ಷಾಮಪೀಡಿತರನ್ನು `ಬಲಿ’ ಎಂದೂ ಕೆಲವು ಸಮಕಾಲೀನರು ಕರೆದದ್ದು ಗಮನಾರ್ಹ. ಇಂಗ್ಲೀಷ್ ಭಾಷೆಯಲ್ಲಿ `ವಿಕ್ಟಿಮ್’ ಪದಕ್ಕೆ ಸ್ಪಷ್ಟವಾದ ಅರ್ಥವಿಲ್ಲ. ಪ್ರವಾಹದಲ್ಲಿ ದೋಣಿ ಹತ್ತಿ ಪಾರಾದವರೂ `ವಿಕ್ಟಿಮ್’: ಹಾಗೆಯೇ ಮರ ಹತ್ತಿ ಪಾರಾಗಲು ಪ್ರಯತ್ನಿಸಿ ನೀರಲ್ಲಿ ಮುಳುಗಿ ಸತ್ತವರೂ `ವಿಕ್ಟಿಮ್’ ಆಗುತ್ತಾರೆ. ಅದೇ ಫ್ರೆಂಚ್ ಭಾಷೆಯಲ್ಲಿ `ಸಿನಿತ್ರೆ’ ಮತ್ತು `ವಿಕ್ಟಿಮ್’ ಎಂದು ಎರಡು ಪದಗಳಿವೆಯಾದ್ದರಿಂದ…”
ಜಿಲ್ಲೆಯಲ್ಲಿ ಮಳೆಯಾಗದೆ ಮೂರು ತಿಂಗಳುಗಳಾಗಿದ್ದವು. ಈಗ ಸಾಯುತ್ತಿರುವವರು ಹೇಗೂ ಸಾಯುತ್ತಿದ್ದವರೇ? ಅಥವಾ ಸಾಯಬಹುದಾದ ದಿನಕ್ಕಿಂತಲೂ ಮುಂಚೆ ಹಸಿವಿನಿಂದಾಗಿ ಸಾಯುತ್ತಿರುವವರೇ?
ಅಮೆರಿಕನ್ ಪ್ರೊಫೆಸರ್ ಬರೆದಿದ್ದ:
“ಪಾಶ್ಚಾತ್ಯ ದೇಶಗಳಲ್ಲಾದರೂ ಯಾವುದನ್ನು ನಿರ್ಧರಿಸಿರುವುದಕ್ಕೂ `ಪರೀಕ್ಷೆ’ಗಳಿವೆ. ಇವನು ಬಡವನೊ, ಬುದ್ಧಿ ವಿಕಲನೊ, ದುರ್ಬಲನೊ, ರೋಗಿಯೋ, ಉಳ್ಳವನೊ, ಇರದವನೊ. ಪುಷ್ಟಿಕರವಾದ ಆಹಾರ ತಿನ್ನುತಾನೊ, ಇಲ್ಲವೊ-ಎಲ್ಲವನ್ನೂ ಸ್ಪಷ್ಟವಾಗಿ ಅಳೆಯಬಲ್ಲ ವೈಜ್ಞಾನಿಕ ವಿಧಾನಗಳಿವೆ… ಹಲ್ಲುಗಳನ್ನು ನಾವು ಶುಭ್ರವಾಗಿ ಉಜ್ಜುತ್ತೇವೊ ಇಲ್ಲವೊ ಎಂಬುದನ್ನು ನಮಗೇ ಪತ್ತೆಮಾಡಿ ಕೊಡುವ ಮಾತ್ರೆಗಳಿವೆ.”
ಸದ್ದಾಯಿತು. ಪುಸ್ತಕ ಮುಚ್ಚಿದ. ಅವನು ಜಿಲ್ಲಾಧಿಕಾರಿಯಾಗಿ ಬಂದಾಗ ಕಛೇರಿಯ ಮೂಲಕವಲ್ಲದೆ ನೇರವಾಗಿ ಜನ ತನ್ನನ್ನು ಬಂದು ನೋಡುವುದು ಸಾಧ್ಯವಾಗಲೆಂದು ಅವನು ತೆರೆಸಿದ್ದ ಬಾಗಿಲನ್ನು ಯಾರೋ ಬಡಿಯುತ್ತಿದ್ದರು. “ಬನ್ನಿ” ಎಂದ.
“ಹೇಳಿ ಸಾಹೇಬರೇ, ನಿಮ್ಮ ಪ್ಯೂನ್‌ಗೆ ಹೇಳಿ: ಎಲ್ಲರಿಗೇಂತ ನೀವು ತೆರೆಸಿದ ಈ ಬಾಗಿಲು ಭೀಮೋಜಿಗೂ ತೆರೆದದ್ದು ಎಂತ.”
ಭೀಮೋಜಿಯ ಮಾತಿನ ಗತ್ತಿನ ಹಿಂದೆ ಸಾಹೇಬರ ಆಪ್ತ ತಾನು ಎಂಬುದನ್ನು ಪ್ಯೂನ್‌ಗೆ ಮನದಟ್ಟು ಮಾಡುವ ಸಂಚಿತ್ತು. ಇದನ್ನು ಗಮನಿಸಿದ ಸತೀಶ ಸ್ನೇಹದ ಜೊತೆ ಸಾಕಷ್ಟು ಗಾಂಭೀರ್ಯ ಬೆರೆಸಿ:
“ಕೂರಿ ಮಿಸ್ಟರ್ ಭೀಮೋಜಿ” ಎಂದ.
ದಪ್ಪ ಗಾಜಿನ ಕನ್ನಡಕವನ್ನು ಮೂಗಿನ ಮೇಲಕ್ಕೆ ತಳ್ಳುತ್ತ. ದಪ್ಪವಾದ ಹುಬ್ಬುಗಳ ಕೆಳಗೆ ನಗುತ್ತ ಭೀಮೋಜಿ:
“ನಮ್ಮ ಎಸ್.ಪಿ. ಸಾಹೇಬರು ಇನ್ನೂ ತಮ್ಮನ್ನು ನೋಡಲು ಬರಲಿಲ್ಲವೋ?” ಎಂದು ವ್ಯಂಗ್ಯವಾಗಿ ಕೇಳಿದ.
ಎಷ್ಟು ಬೇಗ ಭೀಮೋಜಿಯ ಕಿವಿಗೆ ತಾನು ಗಂಗಾಧರಸ್ವಾಮಿಯ ಗುಡಾಣವನ್ನು ಸರ್ಚ್ ಮಾಡುವಂತೆ ಆರ್ಡರ್ ಮಾಡಿದ್ದು ಬಿದ್ದಿದೆಯೆಂದು ಸತೀಶನಿಗೆ ಆಶ್ಚರ್ಯವಾಯಿತು. ಭೀಮೋಜಿ ಪ್ರಶ್ನೆ ಕೇಳಿದ ರೀತಿಗೆ ತಾನು ಉತ್ತರಿಸಬಾರದೆಂದು ಸತೀಶ.
“ನಾನು ಅವರನ್ನೇನೂ ಎಕ್ಸ್‌ಪೆಕ್ಟ್ ಮಾಡ್ತಿಲ್ಲವಲ್ಲ” ಎಂದ.
“ನನ್ನ ಉದ್ದಟತನಾನ್ನ ಕ್ಷಮಿಸಿ. ನಮ್ಮ ಜಿಲ್ಲೇ ಮಂತ್ರಿ ರುದ್ರಪ್ಪನವರಿಗೂ, ಅವರ ಶಿಷ್ಯ ನಮ್ಮ ಎಸ್.ಪಿ. ಸಾಹೇಬ್ರಿಗೂ ಗಂಗಾಧರಸ್ವಾಮಿಗಳು ಮೋಸ್ಟ್ ಇನ್ನೊಸೆಂಟ್ ಅಂಡ್ ಇನ್‌ಕರಪ್ಟಿಬಲ್ ಲೀಡರ್ ಆಫ್ ದಿಸ್ ಡಿಸ್ಟ್ರಿಕ್ಟ್.”
“ಸ್ವಲ್ಪ ಲಂಚ್ ಶೇರ್ ಮಾಡ್ತೀರಾ ಮಿಸ್ಟರ್ ಭೀಮೋಜಿ?”
“ಥ್ಯಾಂಕ್ಸ್. ನಮ್ಮ ಕಾಳಮ್ಮನ ಬೀದೀ ಮಕ್ಕಳಿಗೆ ಇವತ್ತು ಗಂಗಾಧರಸ್ವಾಮಿ ಹುಳಿಯನ್ನ, ಅಕ್ಕಿ, ಕಡಲೇಬೇಳೆ ಪಾಯಸ ಹಂಚಿದಾನೆ. ಅದು ನನ್ನ ವಿರುದ್ಧ ನಿಮ್ಮ ಸರ್ಕಾರದ ಬೆಂಬಲಿಗರ ಪಾಲಿಟಿಕ್ಸ್.”
ಸತೀಶ ಮೇಜಿನ ಡ್ರಾನಿಂದ ಲಂಚ್ ಬಾಕ್ಸ್ ತೆಗೆದ. ಎರಡು ಚಪಾತಿ, ಆಮ್ಲೆಟ್, ಕತ್ತರಿಸಿದ ಹಸಿ ಟೊಮೆಟೊ ಇದ್ದವು. ಟೊಮೆಟೊ ಮತ್ತು ಮೊಟ್ಟೆಗಳು ಏರ್‌ಫೊರ್ಸ್ ಗೆಳೆಯರು ಬೆಂಗಳೂರಿಂದಲೋ, ಹೈದರಾಬಾದಿನಿಂದಲೋ ತಂದವು. ಸತೀಶ ಮುಜುಗರ ಪಡುತ್ತ ಒಂದು ಚಪಾತಿ. ಅರ್ಧ ಆಮ್ಲೆಟ್. ಟೊಮೆಟೊ ಚೂರುಗಳನ್ನು ಭೀಮೋಜಿಗೆ ಕೊಟ್ಟ.
“ಈ ಟೊಮೆಟೊ. ಮೊಟ್ಟೆ ಬೆಂಗಳೂರಿನವು” ಭೀಮೋಜಿ ತಿನ್ನುತ್ತಕಣ್ಣು ಮಿಟುಕಿಸಿ ಹೇಳಿದ. ರೈತ ಸಂಘದ ಅಧ್ಯಕ್ಷ. ಮುನಿಸಿಪಲ್ ಕೆಲಸಗಾರರ ಕಾರ್ಯದರ್ಶಿ. ಹೋದ ಸಾರಿ ಚುನಾವಣಿಯಲ್ಲಿ ಎಲ್ಲರೂ ಮಾತಾಡಿಕೊಳ್ಳುವಂತೆ ಚೀಫ್ ಮಿನಿಸ್ಟರಿಂದ ಹಣ ಪಡೆದು ರುದ್ರಪ್ಪನನ್ನು ಸೋಲಿಸಲೆಂದು ಚುನಾವಣೆಗೆ ನಿಂತ ಅಭ್ಯರ್ಥಿ-ಈ ಭೀಮೋಜಿ ಈ ಜಿಲ್ಲೆಯ ವಾಸ್ತವ ತಿಳಿಯಬೇಕೆಂದಿದ್ದ ಸತೀಶನಿಗೆ ಆಕರ್ಷಕ ವ್ಯಕ್ತಿಯಾಗಿದ್ದ.
“ಮಿಸ್ಟರ್ ಭೀಮೋಜಿ-ಇದನ್ನು ಕ್ಷಾಮದ ಜಿಲ್ಲೇಂತ ಡಿಕ್ಲೇರ್ ಮಾಡಿಸಲು ನಾನೇನು ಮಾಡಬಹುದು ಹೇಳಿ.”
ಭೀಮೋಜಿ ತನ್ನ ದಪ್ಪ ಮೀಸೆಗಳನ್ನು ಶರ್ಟಿನ ತೋಳಿನಿಂದ ಒರೆಸಿಕೊಳ್ಳುತ್ತ ವ್ಯಂಗ್ಯವಾಗಿ ನಕ್ಕ. ಪುಸಲಾಯಿಸುವ ಧ್ವನಿಯಲ್ಲಿ ಹೇಳಿದ:
“ಸಾರ್ ನಿಮ್ಮ ಬಯೋಡಾಟ ಪತ್ತೆ ಮಾಡಿದೀನಿ. ನನ್ನ ಅಜ್ಜ ನಿಮ್ಮೂರಲ್ಲಿ ದರ್ಜಿಗಳಾಗಿದ್ದರು. ನಿಮ್ಮ ಹೆಂಡತಿ ಅಣ್ಣಾನೇ ನಮ್ಮ ದೇಶದ ಫೇಮಸ್ ಲೆಫ್ಟಿಸ್ಟ್ ಥಿಯರಿಟಿಶಿಯನ್ ಜಯನ್ ಅಂತೆ. ಅವರ ಮಚ್ ಡಿಸ್ಕಸ್ಡ್ ಆರ್ಟಿಕಲ್ಲನ್ನ ಓದಿದೀನಿ. ಈಗಿರೋದು ಪ್ರೊಗ್ರೆಸಿವ್ ಬೂರ್ಜ್ವಾ ಸರ್ಕಾರ. ಇದು ಫ್ಯೂಡಲಿಸಮ್ಮನ್ನ ನಮ್ಮ ದೇಶದಲ್ಲಿ ನಾಶ ಮಾಡಬೇಕಾಗುತ್ತೆ- ತನ್ನ ಹಿತದೃಷ್ಟಿಯಿಂದಲೇ. ಆದ್ದರಿಂದ ಲೆಫ್ಟಿಸ್ಟರೆಲ್ಲ ಈ ಸರ್ಕಾರದ ಜೊತೆ ಸಹಕರಿಸಬೇಕು. ಇದೇ ಅವರ ಥೀಸಿಸ್ ಅಲ್ಲವ? ಜಯನ್ ನಿಮ್ಮ ಭಾವ ಅನ್ನೋದು ಗೊತ್ತಾದ ಮೇಲೆ ಅರ್ಥವಾಯ್ತು: ನೀವು ಯಾಕೆ ಆಡ್ಮಿನಿಸ್ಟ್ರೇಟಿವ್ ಸರ್ವಿಸ್ ಸೇರಿದಿರಿ ಅಂತ. ಈ ಭೀಮೋಜಿನ್ನ ಫ್ರಾಗ್ ಇನ್ ದಿ ವೆಲ್ ಅಂತ ತಿಳಕೋಬೇಡಿ……”
ಮೇಲಿನ ಗುಂಡಿಯನ್ನು ಕೆಳಗಿನ ಕಾಜಕ್ಕೆ ಹಾಕಿ. ಇಸ್ತಿಯಿಲ್ಲದ ದೊಗಳೆ ಅಂಗಿ ತೊಟ್ಟು ರಾತ್ರೆ ಹಗಲು ಎನ್ನದೆ ರಾಜಕೀಯದಲ್ಲೆ ಕಾಲ ಕಳೆಯುವ ಈ ಭೀಮೋಜಿ ತನ್ನನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿಲ್ಲೆಂದು ಸತೀಶನಿಗೆ ಸಿಟ್ಟು ಬಂತು. ಆದರೆ ತೋರಿಸಿಕೊಳ್ಳದೆ ಹೇಳಿದೆ:
“ನನ್ನ ಪ್ರಶ್ನೆಗೆ ನೀವು ಉತ್ತರಾನ್ನೆ ಕೊಡಲಿಲ್ಲ. ಜನರ ಜೊತೆ ಕೆಲಸ ಮಾಡೋ ನಿಮ್ಮ ಸಹಕಾರ ನನಗೆ ಬೇಕು.”
“ಈ ಬಯೋಡಾಟಾದ ಉದ್ದೇಶಾನೇ ಅದು. ಸಮಾಜವಾದೀ ಬ್ಯೂರೋಕ್ರಾಟ್ ಆಗಲು ಬೇಕಾದ ಎಲ್ಲ ಗುಣಗಳೂ ನಿಮ್ಮಲ್ಲಿದೆ. ಆದರೆ ಈ ಸನ್ನಿವೇಶ ಮಾತ್ರ ಪ್ರಿಮೆಚೂರ್.”
ಭೀಮೋಜಿ ನಗುತ್ತ ಎದ್ದು ನಿಂತ. ಸತೀಶನ ಸಂಬಳವನ್ನು ಸಂಪಾದಿಸುವ ಮೇಜಿನ ಮೇಲಿದ್ದ ಫೈಲ್‌ಗಳನ್ನು ಕಣ್ಣಿನಲ್ಲಿ ಎಣಿಸಿದ.
“ನಿಮಗೆ ಮಿನಿಸ್ಟರ್ ರುದ್ರಪ್ಪನವರಿಂದಲೂ ಇವತ್ತು ರಾತ್ರೆ ಫೋನ್ ಬರತ್ತೆ ಸಾರ್-ನೋಡಿ ಬೆಕಾದರೆ. ಈ ರಾಜಕೀಯ ಹಾಳಾಗಲಿ. ನನ್ನ ಅಜ್ಜ ಟೈಲರ್. ನಿಮ್ಮ ಅಜ್ಜ ಪುರೋಹಿತರು. ಅಂಗಿ ಕೂಡ ಹಾಕದವರು. ಅವರಿಗೆ ನಮ್ಮಜ್ಜ ಒಂದು ಗುಂಡಿ ಕೂಡ ಹೊಲಿದು ಕೊಟ್ಟಿದ್ದಿಲ್ಲ. ಆದ್ರೂ ಅವರೆಂದರೆ ಬಹಳ ಗೌರವ. ನಮ್ಮ ಅಪ್ಪ ಊರಲ್ಲೆಲ್ಲ ಸರ್ಜ್ ಸೂಟ್ ಹೊಲಿಯೋದರಲ್ಲಿ ತುಂಬ ಫೇಮಸ್. ನರಸಿಂಗರಾವ್ ಅಂತ ಹೆಸರು. ನಿಮ್ಮ ತಂದೆ ಇಂಗ್ಲೆಂಡಿಗೆ ಹೋಗುವಾಗ ಅವರ ಮೊದಲನೆ ಸರ್ಜ್ ಸೂಟ್ ಹೊಲೆದದ್ದು ನಮ್ಮಪ್ಪ. ನಿಮ್ಮಪ್ಪ ಆಮೇಲೆ ಬೇರೆ ಜಾತೀಲಿ ಮದುವೆ ಆದರು. ಊರಿಗೆ ಮತ್ತೆ ಬರಲೇ ಇಲ್ಲ. ಆದರೆ ಐದಾರು ವರ್ಷಗಳ ಕೆಳಗೆ ಊರಿನ ಸುಬ್ರಹ್ಮಣ್ಯ ದೇವಸ್ಥಾನಾನ್ನ ಸುಮಾರು ಹತ್ತು ಸಾವಿರ ಖರ್ಚು ಮಾಡಿಸಿ ಕಟ್ಟಿಸಿದ್ರಂತೆ. ನನ್ನ ಬಳಗ ಯಾರೂ ಈಗ ಊರಲ್ಲಿಲ್ಲ…. ನೀವೆಂದರೆ ನನಗೆ ಗೌರವ. ಅದಕ್ಕೇ ಹೇಳೋಣಾಂತ ಬಂದೆ: ನನ್ನ ಅರೆಸ್ಟ್ ಮಾಡಬೇಕಾಗಿ ಬಂದಾಗ ನಿಸ್ಸಂಕೋಚವಾಗಿ ಮಾಡಿ.”
ಭೀಮೋಜಿ ವ್ಯಂಗ್ಯವಾಗಿ ಮಾತಾಡುವಾಗ ಪುಸಲಾಯಿಸುವ ಕಣ್ಣಿನಿಂದ ನೋಡುತ್ತಿದ್ದ: ಆದರೆ ವ್ಯಂಗ್ಯವಾಗಿ ನೋಡುವಾಗ ಪುಸಲಾಯಿಸಿ ಮಾತಾಡುತ್ತಿದ್ದ. ಈ ಮೇಜಿನ ಎದುರು ನಿಂತು. ಒಬ್ಬ ತನ್ನ ಅಧಿಕಾರವನ್ನು ತಮಾಷೆ ಮಾಡುತ್ತಿರುವುದು ನೋಡಿ ಸತೀಶನಿಗೆ ಕಸಿವಿಸಿಯಾಯಿತು. ಇದನ್ನು ಗಮನಿಸಿದ ಭೀಮೋಜಿ ಮೆಲುದನಿಯಲ್ಲಿ ಹೇಳಿದ:
“ಸರ್ಕಾರದಷ್ಟೇ ನೀವು ಕೆಟ್ಟೋರಾಗಿದ್ರೆ ಜನ ದಂಗೆ ಏಳ್ತಿದ್ದರು. ಆಗ ಜಿಲ್ಲೇಗೆ ಒಳ್ಳೇದಾಗ್ತಿತ್ತು.”
ಭೀಮೋಜಿ ಪ್ರಾಮಾಣಿಕವಾಗಿ ಮಾತನಾಡಿದನೆಂದು ಸತೀಶ ಉತ್ತೀಜಿತನಾದ:
“ಈ ದೇಶದ ಲೆಫ್ಟಿಸ್ಟರೆಲ್ಲ ನಿಮ್ಮ ಹಾಗೇನೇ- ಒಂದೋ ಎಕ್ಸಾಜರೇಟ್ ಮಾಡ್ತಾರೆ ಅಥವಾ ಜನರನ್ನ ಮ್ಯನಿಪಲೇಟ್ ಮಾಡೋ ಮುಖಾಂತರ ಕ್ರಾಂತಿ ಮಾಡಬಹುದೂಂತ ತಿಳೀತಾರೆ. ಈಗ ನಮ್ಮ ಜಿಲ್ಲೆ ಇರೊ ಪರಿಸ್ಥಿತೀಲಿ ಇನ್ನಷ್ಟು ಗಂಜಿ ಕೇಂದ್ರಗಳನ್ನು ತೆರೀಬೇಕು. ಜಿಲ್ಲೇಲಿ ಕ್ಷಾಮವಿದೇಂತ ಸರ್ಕಾರ ಡಿಕ್ಲೇರ್ ಮಾಡೋ ಹಾಗೆ ಒತ್ತಾಯ ತರಬೇಕು…..
“ಅದಕ್ಕಾಗಿ ಮಿನಿಸ್ಟರ್ ರುದ್ರಪ್ಪ ರಾಜೀನಾಮೆ ಕೊಡೋ ಹಾಗೆ ರಾಜಕೀಯ ಪರಿಸ್ಥಿತೀಲಿ ಬಿಕ್ಕಟ್ಟು ತಲೆದೋರಬೇಕು….”
“ಇಲ್ಲ ಮಿಸ್ಟರ್ ಭೀಮೋಜಿ. ನೀವು ಸಿನಿಕ್ ಹಾಗೆ ವಾದಿಸ್ತಿದೀರಿ. ಕಾಮಗಾರಿ ಪ್ರಾರಂಭಿಸಬೇಕು. ರೈತರು ತಮ್ಮ ಎತ್ತು ನೇಗಿಲು ಮಾರ್ತಿದಾರೆ. ಅವರಿಗೆ ಉದ್ಯೋಗ ಕಲ್ಪಿಸಬೇಕು….”
“ಎಲ್ಲಾನೂ ಮಾಡ್ಬೇಕೂಂತಿದಾರೆ ಸಿ.ಎಂ…. ಆದರೆ ರೈವಲ್ಲಿನ ಕೈಯನ್ನ ಬಲಪಡಿಸೋಕೆ ಅವರು ತಯಾರಿಲ್ಲ…..”
ಕನ್ನಡಕ ತೆಗೆದು ಗಾಜನ್ನು ಒರೆಸುತ್ತ ಭೀಮೋಜಿ ಸತೀಶನನ್ನು ಸ್ಪಷ್ಟವಾದ ಕಣ್ಣುಗಳಿಂದ ನೋಡಿದ. ಆಮೇಲೆ ಹೋಗಲು ಅವಸರದಲ್ಲಿದ್ದವನಂತೆ ಬಾಗಿಲನ್ನು ನೋಡಿದ. ಸತೀಶನಿಗೆ ಅವಮಾನದಂತಾಯಿತು. ಅವನು ಕೇಳಲಿ. ಬಿಡಲಿ ಹೇಳುವುದು ತನ್ನ ಕರ್ತವ್ಯವೆನ್ನುವಂತೆ ಮಾತು ಮುಂದುವರಿಸಿದ:
“ಆಕಾಶ ನೋಡುತ್ತ ಹತಾಶರಾದ ಈ ಜಿಲ್ಲೇ ಜನ ನೆಲದ ಒಳಗಿರಬಹುದಾದ ಸಮೃದ್ಧ ಜಲಾನ್ನ ಬಯಸುವಂತೆ ಮಾಡಬೇಕು. ಉಳ್ಳೂರು ಗೊತ್ತಲ್ಲ-ಅಲ್ಲಿಗೆ ಒಂದು ಜೀಪ್ ಕೂಡ ಹೋಗೋದು ಕಷ್ಟ. ಅಲ್ಲಿಗೆ ನೀರನ್ನ ಎಲ್ಲಿಂದ ಸಪ್ಲೈ ಮಾಡೋದು? ಅಲ್ಲೊಬ್ಬ ಹಣ್ಣು ಹಣ್ಣು ಮುದುಕ ಬಾವಿಕಟ್ಟೇ ಮೇಲೆ ಕೂತಿದ್ದ. ನನ್ನನ್ನು ಕಂಡು ಬಂದ. ಕಣ್ಣು ಕೂಡ ಅವನಿಗೆ ಸರಿಯಾಗಿ ಕಾಣಿಸ್ತ ಇರಲಿಲ್ಲ. ಒಂದು ಜಾಗ ತೋರಿಸಿದ. ಇಲ್ಲಿ ಅಗೆಸಿ ಎಂದ. ಅಲ್ಲೊಂದು ಬೋರ್ವೆಲ್ ಅಗೆಸೋ ವ್ಯವಸ್ಥೆ ಮಾಡಿದೆ. ನನಗೇ ನಂಬಲಿಕ್ಕೆ ಆಗಲಿಲ್ಲ- ಅಂಥಾ ಒಂದು ಪವಾಡ ನಡೀತು ನೋಡಿ – ಒಂದು ಹತ್ತಿಪ್ಪತ್ತು ಅಡಿ ಅಗೆಯೋದರ ಒಳಗೇನೆ ನೀರು ಅಲ್ಲಿಂದ ಹೇಗೆ ಚಿಮ್ಮಿತು. ಅಂದರೆ ಅದರ ಸುಖಾನ್ನ ಆ ಜನರ ಒಣಗಿದ ಕಣ್ಣುಗಳಲ್ಲಿ ಕಂಡವರಿಗೇ ಗೊತ್ತು. ನೆಲದಿಂದ ಸುಮಾರು ಮುವ್ವತ್ತು ಅಡಿ ಮೇಲಕ್ಕೆ ಈಗಲೂ ಅಲ್ಲಿ ಇಪ್ಪತ್ತನಾಲ್ಕು ಗಂಟೇನೂ ನೀರು ಚಿಮ್ತಾ ಇರತ್ತೆ. ಈ ಸುಡೋ ಬರಗಾಲದಲ್ಲೂ ಸುತ್ತಮುತ್ತಲಿನ ೩೦, ೪೦ ಗ್ರಾಮಗಳ ಜನರಿಗೆ ಅಲ್ಲಿಂದ ನೀರು ಸರಬರಾಜಾಗ್ತಿದೆ. ಆ ಜಾಗ ಈಗ ಹಳ್ಳಿಯವರಿಗೆ ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ.”
ತನ್ನ ಮಾತಿನಲ್ಲಿ ಕೃತಕವಾದ ಆಸಕ್ತಿ ತೋರಿಸುತ್ತ ನಿಂತಿದ್ದ ಭೀಮೋಜಿ ಕೈ ನೀಡಿ ಕುಲುಕುತ್ತ ಹೇಳಿದ:
“ಚೀಫ್‌ಗೂ. ರುದ್ರಪ್ಪಗೂ ಇರೋ ವಿರಸ ಇನ್ನಷ್ಟು ಬಿರುಸಾಗಬೇಕು ಸಾರ್. ಆಗ ನೀವು ಈ ಜಿಲ್ಲೇಲಿ ಇನ್ನಷ್ಟು ಚಿಲುಮೆಗಳನ್ನು ಉಕ್ಕಿಸುವಂತೆ ಮಾಡಬಹುದು. ಅದರ ಮುಂಚಿನ ಕೆಲಸ ನನ್ನಂಥ ಪುಢಾರಿಗಳಿಗೆ ಬಿಟ್ಟದ್ದು.”
ಭೀಮೋಜಿ ಗೌರವದಿಂದ ಬಾಗಿ ನಮಸ್ಕರಿಸಿ ಹೋದ.
*
*
*
ಸಂಜೆ ಮನೆಗೆಂದು ಹೊರಟಾಗ ಸತೀಶನ ಸ್ವಂತ ಕಾರಿನ ಪೆಟ್ರೋಲ್ ಕ್ಯಾಪ್ ಇರಲಿಲ್ಲ. ಹಿಂದಿನ ಸಾರಿ ಹೀಗಾದಾಗ ಅವನ ಪಿ.ಎ. ಗುಜರಿಯಲ್ಲಿ ರಸ್ತೆಯ ಮೇಲೆ ಹಾಕಿಸಿಕೊಂಡಿದ್ದ ಅಂಗಡಿಯೊಂದರಲ್ಲಿ ಗುಮಾನಿಯಿಂದ ಪರೀಕ್ಷಿಸಿದಾಗ, ಗುಂಡುಸೂಜಿ. ಬೆಲ್ಟು. ನ್ಯಾಫ್ತಲೀನ್ ಗುಳಿಗೆ ಇತ್ಯಾದಿ ಸರಕುಗಳ ನಡುವೆ ಕಳವಾದ ಸಾಹೇಬರ ಕಾರಿನ ಕ್ಯಾಪನ್ನು ಪತ್ತೆ ಮಾಡಿದ್ದ. ಆ ಅಂಗಡಿ ಮಾಲೀಕನ ಉದ್ಯೋಗವೇ ಅದಾಗಿತ್ತು. ಹುಡುಗರನ್ನು ಕಳಿಸಿ ಸೈಕಲ್ ಡೈನಮೊ. ಪೆಟ್ರೋಲ್ ಟ್ಯಾಂಕಿನ ಕ್ಯಾಪು. ಮೋಟರ್ ಸೈಕಲ್ ಕೀ ಇತ್ಯಾದಿಗಳನ್ನು ಕಳವು ಮಾಡಿಸುವುದು. ಅಂಗಡಿಯವನನ್ನ ಸತೀಶ ಜೈಲಿಗೆ ಕಳಿಸಬಹುದಿತ್ತು. ಆದರೆ ಇನ್ನೊಬ್ಬ ನಿರುದ್ಯೋಗಿಯಾಗುತ್ತಾನೆ. ಅವನ ಮನೆ ಮಂದಿ ಬಿಕ್ಷುಕರಾಗುತ್ತಾರೆ. ಆದ್ದರಿಂದ ಹತ್ತು ರೂಪಾಯನ್ನು ಪಿ.ಎ. ಹತ್ತಿರ ಕಳಿಸಿ ತನ್ನ ಕೀಗೊಂಚಲನ್ನು ತಾನೇ ಕೊಂಡಿದ್ದ. ಈ ಸಾರಿ ಮತ್ತೆ ಪಿ.ಎ. ಅನ್ನ ಕಳಿಸೋದೋ ಪೋಲೀಸನನ್ನ ಕಳಿಸೋದೋ? ಪೋಲೀಸನನ್ನೇ ಕಳಿಸಿದ.
ಪೋಲೀಸ್ ಅಂಗಡಿ ಮಾಲೀಕನನ್ನು ದಸ್ತಗಿರಿ ಮಾಡಿ ಪೆಟ್ರೋಲ್ ಕ್ಯಾಪನ್ನು ತಂದು ಕೊಟ್ಟ. ಪೋಲೀಸ್ ಎಳೆದು ತಂದ ಅಂಗಡಿ ಮಾಲೀಕ ಕಾಲಿಗೆ ಬಿದ್ದು ಅತ್ತ: ಮನೆಯಲ್ಲಿ ಖಾಯಿಲೆಯಾದ ತಾಯಿ ಇದೆ. ಬಾಣಂತಿ ಹೆಂಡತಿ ಇದೆ. ನಾಲ್ಕು ಮಕ್ಕಳು ಇವೆ…ಇತ್ಯಾದಿ.
ಸತೀಶ ಮನಸ್ಸು ಕಲ್ಲು ಮಾಡಿ ಕಾರು ಹತ್ತಿ ಹೊರಟ.
*
*
*
ಬೀದಿಯಲ್ಲಿ ಗಂಜಿ ಕೇಂದ್ರದ ಎದುರು ಸಾಯಂಕಾಲದ ಆಹಾರಕ್ಕೆಂದು ಸಾಲು ಸಾಲು ಜನರು. ಸತೀಶ ಕಾರನ್ನು ದೂರದಲ್ಲೇ ನಿಲ್ಲಿಸಿ ನಡೆದು ಹೋದ. ತಾನು ಇವರಂತೆ ಹಸಿದವನಾಗಿದ್ದರೆ ಈ ಸಾಲುಗಳ ಮಧ್ಯೆ ತನ್ನ ಗಂಜಿಯ ಸರದಿ ಯೋಚಿಸುತ್ತ ನಿರ್ವಿಣ್ಣನಾಗಿ ಕೈಯಲ್ಲಿ ಅಲ್ಯುಮಿನಿಯಂ ತಟ್ಟೆ ಹಿಡಿದು ಕೂತಿರುತ್ತಿದ್ದೆ.ಸಾಲಿನ ಹೊರಗೆ ನಿಂತಿದ್ದರಿಂದಲೇ ಇಡೀ ಸಾಲುಗಳನ್ನು ನೋಡುವುದು ಸಾಧ್ಯವಾದ್ದು. ಇಡೀ ಸಾಲುಗಳನ್ನು ನೋಡಬಹುದಾದ್ದರಿಂದಲೇ ತನಗೆ ಹಸಿವು.ಕ್ಷಾಮ, ಜನರ ಮಾನವೀಯತೆ ಹೇಗೆ ಕ್ಷಯಿಸುತ್ತೆ. ಇದನ್ನು ನಿವಾರಿಸಲು ಏನು ಉಪಾಯ ಇತ್ಯಾದಿ ವಿಚಾರಗಳು ಹೊಳೆಯಲು ಸಾಧ್ಯವಾದ್ದು. ಸಾಲಿನಲ್ಲಿ ಬಾತ ಕಣ್ಣುಗಳನ್ನು ಬರಿದೇ ಮುಚ್ಚಿ ತೆರೆಯುತ್ತ ಕ್ಯೂ ಕೂತ ಯಾರೂ ಈ ಎಲ್ಲಾ ಒಣಗಿದ ಕಾಲುಗಳನ್ನೂ, ಒಣಗಿದ ತುಟಿಗಳನ್ನು ಒದ್ದೆ ಮಾಡಲೆಂದು ಚಾಚುವ ಒಣಗಿದ ನಾಲಗೆಗಳನ್ನೂ ನೋಡುವುದಿಲ್ಲ. ಆದರೆ ತನಗೆ ಕೂಡ ನೋಡಿದ್ದನ್ನೆಲ್ಲ ಗ್ರಹಿಸಿಕೊಳ್ಳುವಷ್ಟು ಒಳಗಿನ ಧಾರಣ ಶಕ್ತಿ ಹಿಗ್ಗುತ್ತದೆ ಎಂಬುದು ಕೂಡ ನಿಜವಲ್ಲ. ಒಳಗೇ ಇರಲಿ. ಹೊರಗೇ ಇರಲಿ-ಒರಟಾಗದೆ ಮಾರ್ಗವಿಲ್ಲ.
ಕೇಂದ್ರದ ವ್ಯವಸ್ಥೆ ಪರೀಕ್ಷಿಸುವಾಗ. ಮಲ್ಟಿಪರ್ಪಸ್ ಫುಡ್‌ನ ಪ್ಯಾಕೆಟ್ಟುಗಳು ಹಾಗೇ ಇರುವುದು ಕಂಡು ರೇಗಿದ- ಗಂಜಿ ಕೇಂದ್ರದ ಅಧಿಕಾರಿ ಅವುಗಳನ್ನು ಮಾರಿಕೊಳ್ಳುತ್ತಿರಬಹುದು ಎಂದು. ಆದರೆ ಆತ ಹೇಳಿದ: “ಈ ಪುಡಿ ಹಾಕಿದರೆ ಗಂಜಿ ರುಚಿಯಾಗಲ್ಲ ಅಂತ ಗಲಾಟೆ ಮಾಡ್ತಾರೆ ಸಾರ್.”
“ಇಲ್ಲ ಹಾಕಲೇ ಬೇಕು. ಇದರಲ್ಲಿ ಪ್ರೋಟೀನ್ ಇದೆ.” ತನ್ನೆದುರಿಗೆ ಎಂ.ಪಿ.ಎಫ್. ಹಾಕಿಸಿ ಬೆಂದ ಗಂಜಿಯನ್ನು ಇನ್ನಷ್ಟು ಬೇಯಿಸುವಂತೆ ಹೇಳಿದ. ಇನ್ನಷ್ಟು ಗಂಜಿ ಕೇಂದ್ರಗಳನ್ನು ತೆರೆಸಬೇಕೆಂದು ನಿಶ್ಚಯಿಸಿ ಕಾರು ಹತ್ತಿದ.
*
*
*
ದಾರಿಯಲ್ಲಿ ನೆನಪಾಗಿ ಸುಲೇಮಾನ್ ಅಂಗಡಿ ಎದುರು ಸತೀಶ ಕಾರು ನಿಲ್ಲಿಸಿದ. ಅಸ್ತವ್ಯಸ್ತವಾಗಿದ್ದ ಅಂಗಡಿಯಲ್ಲಿ ಕೆಲಸ ಮಾಡುತ್ತ ಕೂತ ಅಚ್ಚಗಪ್ಪು ಬಣ್ಣದ ಬೋಳಿಸಿದ ತಲೆಯ ಹುಡುಗರು ಎದ್ದುನಿಂತರು. ಒಬ್ಬ ಹುಡುಗ ಮಾಲೀಕನನ್ನು ಕರೆದು ತರಲು ಓಡಿದ. ಸತೀಶ ಕುತೂಹಲದಿಂದ ಅವರು ಮಾಡುವ ಕೆಲಸ ನೋಡುತ್ತ ಸ್ಟೂಲೊಂದರ ಮೇಲೆ ಕೂತ. ದೇಶದಲ್ಲೆಲ್ಲ ಪ್ರಸಿದ್ಧವಾದ ಜಿಲ್ಲೆಯ ಈ ಕಲೆಗಾರಿಕೆಯನ್ನು ಬಹಳ ದಿನಗಳಿಂದ ಸತೀಶ ನೋಡಬೇಕೆಂದಿದ್ದ. ಒಂದು ಬೋಗಣಿಯಲ್ಲಿ, ಕಪ್ಪು ಮಣ್ಣು ಕದರಿದ ನೀರು. ಈ ಸಾಂಕ್ರಾಮಿಕ ಬರಗಾಲದ ಜಿಲ್ಲೆಯಲ್ಲಿ ಮಾತ್ರ ಸಿಗುವ ಕಪ್ಪು ಮಣ್ಣು ಅದು. ಹುಡುಗನೊಬ್ಬ ಮೂಲೆಯಲ್ಲಿ ಕೂತು ಬೋಳಾದ ಲೋಹದ ತುಂಡಿನ ಮೇಲೆ ಬೆಳ್ಳಿಯ ರೇಖೆಗಳನ್ನು ಕೊರೆದುಕೊಡುತ್ತಿದ್ದ. ಕಾಯಿಸಿದ ಈ ಸಾಮಾನ್ಯ ಲೋಹವನ್ನು ಕಪ್ಪು ನೀರಿಗದ್ದಿದೊಡನೆಯೇ ಕ್ಷಣದಲ್ಲಿ ಇಡೀ ಲೋಹ ಮಿರುಗುವ ಕಪ್ಪಾಗುತ್ತದೆ. ಅದರ ಕಪ್ಪಾದ ಮೈಮೇಲೆ ಬೆಳ್ಳಿರೇಖೆಗಳ ಚಿತ್ರಗಳು ಸ್ಪುಟವಾಗಿ ಪ್ರತ್ಯಕ್ಷವಾಗುತ್ತವೆ: ನಾಚುವ ನವಾಬರ ಹುಡುಗಿ, ಕೊಳಲೂದುವ ಕೃಷ್ಣ, ಅರಬ್ಬರ ಒಂಟೆ, ಆಫ್ರಿಕಾದ ಕನ್ನಿಕೆ-ಹೀಗೆ ಚಿತ್ರಗಳು ಮಾಂತ್ರಿಕ ಶಕ್ತಿಯಿಂದಲೋ ಎಂಬಂತೆ ಕಪ್ಪಾದ ಲೋಹದಲ್ಲಿ ಮೂಡುವುದನ್ನು ಸತೀಶ ಕುತೂಹಲದಿಂದ ನೋಡುತ್ತ ಕೂತ. ಇವುಗಳಲ್ಲಿ ಕೆಲವನ್ನು ಕೊಂಡು ಲಂಡನ್ನಿಗೆ ಹೋಗಲಿದ್ದ ಅವನ ಭಾವ ಜಯನ್‌ಗೆ ಕಳಿಸಬೇಕೆಂದು ಸತೀಶ ಅಂಗಡಿಗೆ ಬಂದಿದ್ದ. ಹುಡುಗರು ಅಂಗಡಿಯಲ್ಲಿ ತಯಾರಾಗಿದ್ದ ಕೆಲಸವನ್ನೆಲ್ಲ ತೋರಿಸಿದರು: ಅದೇ ಚಿತ್ರಗಳು-ನಾಚುವ ನವಾಬರ ಹುಡುಗಿ ಇತ್ಯಾದಿ. ನೂರಾರು ವರ್ಷಗಳಿಂದ ಮಾಡಿದ್ದನ್ನೆ ಮಾಡುತ್ತ ಬಂದದ್ದು. ವಿನಾಯತಿ ಎಂದರೆ ಆಫ್ರಿಕಾದ ಕನ್ನಿಕೆ ಮತ್ತು ನೆಹರು. ಆ ಊದಿದ ಮುಖ ಯಾವ ನಾಯಕನದ್ದಾದರೂ ಆಗಿದ್ದೀತು. ಟೋಪಿಯಿಂದಾಗಿ ನೆಹರೂ ಎನ್ನಬೇಕು. ಈ ನೆಲದ ಮಾಂತ್ರಿಕ ಕಪ್ಪು ಮಣ್ಣು ಮೂಡಿಸುತ್ತ ಬಂದದ್ದು ಅದೇ ನಾಚಿಕೆಯ ರೇಖೆಯನ್ನು. ಒಂಟೆಯ ಅದೇ ಉಬ್ಬನ್ನು. ಯಾರೂ ಕಣ್ಣಾರೆ ನೋಡದ ಅದೇ ಖರ್ಜೂರದ ಮರವನ್ನು. ಅದೇ ಕೃಷ್ಣನ ಅದೇ ಎತ್ತಿದ ಹುಬ್ಬನ್ನು. ಯಾವನೋ ಕ್ರೂರ ನವಾಬನ ಕಾಲದಲ್ಲಿ ಶುರುವಾದ ಕಲೆ.
ಮುದುಕನಾಗಿದ್ದ ಸುಲೇಮಾನ್ ಜಿಲ್ಲಾಧಿಕಾರಿಯನ್ನು ಸ್ಟೂಲಿನ ಮೇಲೆ ಕಂಡೊಡನೆಯೇ ಭಯಭೀತನಾಗಿ ಬಾಗಿದ. ಖಾವಂದರನ್ನು ಕೂರಿಸಿಕೊಂಡ ಸ್ಟೂಲಿನ ಧೂಳು ಒರೆಸಲಿಲ್ಲೆಂದು ಹುಡುಗನೊಬ್ಬನ್ನನ್ನು ಹೊಡೆದ. ತನ್ನನ್ನು ಮನೆಗೆ ಕರೆಸಿಕೊಂಡ ರೋಗವನ್ನು ಶಪಿಸಿದ. ಸತೀಶ ಮುಂಗಡವಾಗಿ ಕೊಡಲು ಹೋದ ನೂರು ರೂಪಾಯಿ ನೋಟನ್ನು ಆಸೆಗಣ್ಣಿಂದ ನೋಡಿದರೂ ಮುಟ್ಟದೆ ಹಿಂದುಗಡೆಯಿಂದ ಕೊಟ್ಟರಾಯಿತೆಂದು. ಅವರು ತನ್ನ ಅಂಗಡಿಗೆ ಬಂದದ್ದೇ ಭಾಗ್ಯವೆಂದು ಹಿಗ್ಗಿದ. ದುಡ್ಡು ಬೇಡ. ಸರ್ಟಿಫಿಕೆಟ್ ಕೊಡಿರೆಂದು ತಾನು ಕಟ್ಟು ಹಾಕಿಸಿಟ್ಟ ಹಿಂದಿನ ಜಿಲ್ಲಾಧಿಕಾರಿಗಳು ದಯಪಾಲಿಸಿದ ಸರ್ಟಿಫಿಕೇಟ್‌ಗಳನ್ನೆಲ್ಲ ತೋರಿಸಿದ. ನೆಹರೂ, ಭಾರತಮಾತೆಗಳನ್ನು ಲೋಹದಲ್ಲಿ ಮಂಡಿಸಿದ ಸುಲೇಮನ್ನಿನ ರಾಷ್ಟ್ರೀಯತೆಯನ್ನು ಒಬ್ಬ ಡಿ.ಸಿ. ಹೊಗಳಿದ್ದ….ಆ ತನ್ನ ಚಿತ್ರಗಳನ್ನು ಎಲ್ಲ ಸ್ಕೂಲುಗಳಲ್ಲೂ, ಆಫೀಸುಗಳಲ್ಲೂ ಕೊಂಡುಕೊಳ್ಳುವಂತೆ ಶಿಫಾರಸ್ಸು ಮಾಡಲು ಸತೀಶನನ್ನು ಸುಲೇಮಾನ್ ಬೇಡಿದ.
*
*
*
ಅದೊಂದು ಕ್ಷುದ್ರವಾದ ಊರು. ಆದರೆ ಪ್ರಸಿದ್ಧವಾದ ಊರು. ಚರಂಡಿಗಳಿಲ್ಲದ ಇಕ್ಕಟ್ಟಿನ ಬೀದಿಗಳು. ರೂಪವಿಲ್ಲದ ಒಂದಕ್ಕೊಂದು ಹತ್ತಿಕೊಂಡ ಮನೆಗಳು, ಬೀದಿಗಳು ತಿರುಗುವಲ್ಲೆಲ್ಲ ಒಂದೊಂದು ಸ್ಮಾರಕ. ಸಂಜೆ ತಂಪಾಗಿದ್ದರೂ ಹಗಲೆಲ್ಲ ಸೆಖೆ, ಧೂಳು. ಊರಿನ ಹೆಂಗಸರ ಮುಖ ಬೀದಿಯಲ್ಲಿ ಕಾಣುವುದಿಲ್ಲ. ಆ ಊರಿಗೆ ಏರ್‌ಫೋರ್ಸ್ ಟ್ರೈನಿಂಗ್ ಸೆಂಟರ್ ಬಂದ ಮೇಲೆ ಅಷ್ಟಿಷ್ಟು ಅಧುನಿಕತೆ ಕಾಣಿಸಿಕೊಂಡದ್ದು. ಟ್ರೈನಿಂಗ್ ಸೆಂಟರಿನ ಆಫೀಸರುಗಳು ತಮ್ಮ ಹೆಂಡಂದಿರ ಜೊತೆ ಊರಲ್ಲಿ ಕಾಣಿಸಿಕೊಂಡರೆ ಹೊಟ್ಟೆ ಕಾಣಿಸುವಂತೆ ಸೀರೆಯುಟ್ಟು. ತುಟಿ ಕೆಂಪು ಬಳಿದ ಹೆಂಗಸರನ್ನು ನೋಡಲು ಮನೆಯಿಂದ ಹೊರಗೆ ಬರದ ಊರಿನ ಹೆಂಗಸರು ಕಿಟಿಕಿಯಿಂದ ಹಣಕುತ್ತಾರೆ.
ಅದು ಚರಿತ್ರೆಯಲ್ಲಿ ಪ್ರಸಿದ್ಧವಾದ ಊರು ಕೂಡ. ದಕ್ಷಿಣದಲ್ಲಿ ದಂಡೆತ್ತಿ ಬಂದ ಮುಸ್ಲಿಮರು ಬೇರೂರಿದ್ದು ಈ ಊರಲ್ಲೆ. ಒಗೆಯದ ಬಟ್ಟೆಯುಟ್ಟು ಮುಂಡಾಸು ತೊಟ್ಟು ಈಗಿನವರು ಓಡಾಡುವ ಬೀದಿಗಳ ಪ್ರತಿ ತಿರುವಿನಲ್ಲೂ ಆರ್ಕಿಯಾಲಜಿ ಇಲಾಖೆಗೆ ಸೇರಿದ ಮಸೀದಿಗಳಿವೆ. ಅಥವಾ ಹಿಂದೆ ಆಳಿದವರ ಅಂತಸ್ತಿಗೆ ತಕ್ಕಂತೆ ಕಟ್ಟಿದ ಗೋರಿಗಳಿವೆ. ಪಿಸುಗುಟ್ಟಿದ ಮಾತನ್ನು ನೂರು ಪ್ರತಿಧ್ವನಿಗಳಾಗಿ ಕಿವಿಗೆ ಮುಟ್ಟಿಸುತ್ತ ಆಡಿದ ಕ್ಷಣವನ್ನು ನಿರಂತರಗೊಳಿಸುವ ಯಾವ ಉಪಯೋಗಕ್ಕೂ ಬಾರದ ಪ್ರಸಿದ್ಧ ಗುಂಬಸ್ ಇದೆ.
ಇಷ್ಟೊಂದು ಕಿಕ್ಕಿರಿದ ಸಣ್ಣ ವಿಸ್ತೀರ್ಣದಲ್ಲಿ ಇಷ್ಟೊಂದು ಕಲ್ಲಿನ ರಾಶಿಯನ್ನು ಸತೀಶ ಇನ್ನೆಲ್ಲೂ ಕಂಡದ್ದಿಲ್ಲ, ಊರಿನ ಜನರು ಎಂದೂ ಭಾಗಿಗಳಾಗದ ಚರಿತ್ರೆ ಇಲ್ಲಿ ಕುರೂಪದ ಗೋರಿಗಳಾಗಿ, ಹೊರಗಿನಿಂದ ದಂಡೆತ್ತಿ ಬಂದ ಇನ್ನು ಯಾರೋ ಒಡೆದ ಕೋಟೆಯಾಗಿ ಮಾತ್ರ ದಾಖಲಾಗಿದೆ. ಊರಿನ ಸುತ್ತ ಇದ್ದ ಈ ಕೋಟೆಯನ್ನು ಮೊಗಲರು, ಮರಾಠರು, ಕಲ್ಲುಸಾಗಿಸುವ ಕಳ್ಳರು, ವಿಜಯನಗರದ ಅರಸರು, ಎಲ್ಲವನ್ನೂ ಕ್ರಮೇಣ ಪುಡಿ ಪುಡಿ ಮಾಡುವ ಬಿಸಿಲು ಮತ್ತು ಕಾಲ ನಿರಂತರವಾಗಿ ಕುಗ್ಗಿಸುತ್ತ ಕೊರೆಯುತ್ತ ಇದ್ದರೂ ಇನ್ನೂ ಹುಳ ಹುಪ್ಪಟೆ ಹಾವುಗಳಿಗೆ ಆಶ್ರಯ ಕೊಡುವ ಅವಶೇಷಗಳಾಗಿ ಊರನ್ನು ಸುತ್ತುವರಿದು ನಿಂತಿದೆ. ಅಂತಃಪುರದ ರಾಣಿಯರು ರಾಜನ ಜೊತೆ ಮೀಯುತ್ತಿದ್ದ ಬತ್ತಿದ ಕೊಳವಿದೆ.
ಜಿಲ್ಲಾಧಿಕಾರಿಯಾಗಿ ಸತೀಶ ವಾಸಿಸುತ್ತಿದ್ದ ಬಂಗಲೆ ಹಿಂದೆ ಈ ಊರನ್ನು ಆಳಿದ ನವಾಬನ ಅರಮನೆ, ಅದರ ಅಮೃತಶಿಲೆಯ ಕಮಾನುಗಳ ಅವಶೇಷಗಳನ್ನು ಸಿಮೆಂಟ್ ಕಾಂಕ್ರೀಟಿನ ಆಧುನಿಕ ಬಂಗಲೆ ಎಲ್ಲೆಲ್ಲೂ ಚೂರುಪಾರು ಉಳಿಸಿಕೊಂಡು ಎತ್ತರವಾದ ಪ್ರದೇಶದ ಮೇಲೆ ನಿಂತಿದೆ. ಬಂಗಲೆಯ ಪಶ್ಚಿಮಕ್ಕೆ ಕೋಟೆಯಾಚೆ ದೊಡ್ಡ ಕಂದಕ. ಕಂದಕದಾಚೆ ಕಣ್ಣು ಹಾಯಿಸುವಷ್ಟು ದೂರವೂ ಹಸಿರಿಲ್ಲದ ಬಯಲು. ಹಳ್ಳಿಗರ ಗುಡಿಸಲುಗಳು. ಚಂದ್ರನಿರುವ ರಾತ್ರೆ. ಸೂರ್ಯ ಮುಳುಗುವ ಹೊತ್ತು ಬಂಗಲೆಯನ್ನು ಸುತ್ತುವರಿದ ಕೋಟೆ ಗೋಡೆಯ ಕಿಂಡಿಗಳಿಂದ ನೋಡಲು ಚೆನ್ನಾಗಿರುತ್ತದೆ. ಬಂಗಲೆಯ ಸುತ್ತ ಈಗಲೂ ತುಕ್ಕು ಹಿಡಿಯದೆ ಫಳಫಳ ಹೊಳೆಯುವ ತುಫಾಕಿಗಳಿವೆ. ಸತೀಶನ ಹೆಂಡತಿ ರೇಖಾ ಬಂಗಲೆಯ ಸನ್ನಿವೇಶ ಕಂಡು ಸಂತೋಷಪಟ್ಟಿದ್ದಳು. ಇತಿಹಾಸದ ವಿದ್ಯಾರ್ಥಿನಿಯಾದ ಆಕೆಗೆ ಅವಶೇಷಗಳೆಂದರೆ ಇಷ್ಟ.
ಸತೀಶ ಈ ಊರಿಗೆ ಜಿಲ್ಲಾಧಿಕಾರಿಯಾಗಿ ಬೇಕೆಂದೇ ವರ್ಗ ಮಾಡಿಸಿಕೊಂಡಿದ್ದ. ಬಾರಿ ಜ್ವರದಂತೆ ಎರಡು ಮೂರು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಬರಗಾಲದ ಈ ಊರು ಸತೀಶನ ಸಾಹಸ ಪ್ರವೃತ್ತಿಯನ್ನು ಕೆಣಕಿತ್ತು. ಮನುಷ್ಯನ ಮಿತಿ ಮತ್ತು ಸ್ವಾತಂತ್ರ್ಯಗಳನ್ನು ಅತ್ಯಂತ ಇಕ್ಕಟ್ಟಿನ ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳಲು ಈ ಊರು ಅವನಿಗೆ ಸವಲಾಗಿ ಕಂಡಿತ್ತು.
ದೆಹಲಿಯ ಬೆಡಗಿನ ಜೀವನದಿಂದ ಬೇಸತ್ತ ರೇಖಾಳಿಗೂ ಸತೀಶ ಬರಗಾಲದ ಜಿಲ್ಲೆಯಲ್ಲಿ ಹೆಣಗುವುದು ಆಕರ್ಷಕವೆನ್ನಿಸಿತ್ತು. ಅವಳ ತಂದೆ ಲಕ್ನೋ ವಿಶ್ವವಿದ್ಯಾಲಯದ ಉಪಕುಲಪತಿಗಳು. ಅವಳನ್ನು ಸತೀಶ ಪ್ರೀತಿಸಿದಾಗ ಅವನ ದೆಹಲಿ ಬಳಗ ಅವನನ್ನು ಅಭಿನಂದಿಸಿತು. ಅವಳ ತಂದೆ ಮುಸ್ಲಿಂ, ತಾಯಿ ಹಿಂದೂ, ಅಣ್ಣ ಪ್ರಸಿದ್ಧ ಲೆಫ್ಟಿಸ್ಟ್ ಥಿಯರಿಟಿಶಿಯನ್-ವಿದ್ಯಾಮಂತ್ರಿಗಳಿಗೆ ಪ್ರಿಯರಾದ ಕುಟುಂಬ- ಒಟ್ಟಿನಲ್ಲಿ ಐಹಿಕಕ್ಕೂ ಆದರ್ಶಕ್ಕೂ ಜೊತೆಯಾಗಿ ಸಲ್ಲುವ ಮದುವೆ. ಸ್ವತಃ ಎಂದೂ ಬಡತನ ಅನುಭವಿಸದಿದ್ದರೂ ದೇಶದ ಬಡತನದ ಬಗ್ಗೆ ತೀವ್ರ ಕಾಳಜಿಯಿದ್ದ ಕುಟುಂಬದ ಸಂಬಂಧ ಬೆಳೆಸಿದ ಮೇಲೆ ಸತೀಶ ಐ.ಎ.ಎಸ್. ಪಾಸ್ ಮಾಡಿದ. ತಾನು ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್ ಆಗುವಷ್ಟು ಧೀಮಂತನಲ್ಲವೆಂದು ಅವನು ವಾದಿಸಿದರೂ ಅವನ ನಿಸ್ವಾರ್ಥ ಆದರ್ಶವನ್ನು ದೆಹಲಿಯ ಅವನ ಬಳಗ ಕೊಂಡಾಡಿತು. ರೇಖಾ ಸತೀಶನನ್ನು ಪ್ರೀತಿಸಿದ್ದಳು- ಅವನ ಗುಣ, ಅವನ ವಿನಯ, ತನ್ನ ಮಿತಿಗಳನ್ನು ಅವನು ಒಪ್ಪಿಕೊಳ್ಳುವ ಪ್ರಾಮಾಣಿಕತೆ, ಮೇಲಾಗಿ ಅವನ ಸೆನ್ಸಿಟಿವಿಟಿ- ಎಲ್ಲವೂ ಕಲೆಯಲ್ಲಿ ಅಭಿರುಚಿಯಿದ್ದ ರೇಖಾಗೆ ಅಚ್ಚುಮೆಚ್ಚಾಗಿದ್ದವು.
ಈ ಜಿಲ್ಲೆಗೆ ತಾನು ವರ್ಗವಾಗಿ ಬಂದ ದಿನ ತನ್ನ ಬಂಗಲೆಯನು ನೋಡಿ ಸತೀಶನಿಗೆ ಸಂತೋಷವೂ ಆಗಿತ್ತು. ಭಯವೂ ಆಗಿತ್ತು. ವಿಧಾನಸೌಧದಲ್ಲಿ ಹಲವಾರು ಆಫೀಸರುಗಳ ನಡುವೆ ಒಬ್ಬ ಆಫೀಸರನಾಗಿ ತನ್ನ ಕರ್ತವ್ಯ ನಿರ್ವಹಣೆ ಮಾಡುವುದೇ ಬೇರೆ: ಇಂಥ ಕ್ಷುದ್ರ ಜಿಲ್ಲೆಯಲ್ಲಿ ಹತಾಶರಾದ ಜನರ ಮಧ್ಯೆ ಒಬ್ಬ ದೊಡ್ಡ ಆಫೀಸರನಾಗಿ ಅಸಾಧಾರಣ ಅಧಿಕಾರ ಪಡೆದು ಇರುವುದೇ ಬೇರೆ. ಸತೀಶನಿಗೆ ಇಂಥ ಬಂಗಲೆಯಲ್ಲಿ ವಾಸವಾಗಿದ್ದೂ ಜನಾನುರಾಗಿಯಾಗಿರುವುದು. ಇಷ್ಟು ಅಧಿಕಾರವಿದ್ದೂ ಅದನ್ನು ಹತೋಟಿಯಿಂದ ಚಲಾಯಿಸುವುದು ಆಕರ್ಷಕವಾಗಿ ಕಂಡವು ಆದರೆ ವಿಧಾನಸೌಧದಲ್ಲಿದ್ದಾಗ ಸರ್ಕಾರವನ್ನು ಸಾಕ್ಷಿಯಾಗಿ ನೋಡುವುದು ಟೀಕಿಸುವುದು ಸಾಧ್ಯವಿತ್ತು: ಆದರೆ ಇಲ್ಲಿ ಅವನೇ ಸರ್ಕಾರವಾಗಿದ್ದ.
ಜಿಲ್ಲೆಯ ಜನರಿಗಂತೂ ಇವತ್ತಿಗೂ ಜಿಲ್ಲಾಧಿಕಾರಿ ಹಿಂದಿನ ಕಾಲದ ನವಾಬನೆ. ಎತ್ತರದ ದಿನ್ನೆಯಲ್ಲಿದ್ದ ಬಂಗಲೆಯನ್ನು ಅವನ ಕಾರು ತಲ್ಪಿದಾಗ ಊರಿನ ಪ್ರಮುಖರೆಲ್ಲ ಬಂಗಲೆಯ ಎದುರು ಚಪ್ಪರದಲ್ಲಿ ಅವನನ್ನು ಸ್ವಾಗತಿಸಲು ಕಾದಿದ್ದರು. ವ್ಯಂಗ್ಯವಾಗಿ ಎಲ್ಲವನ್ನೂ ನೋಡುತ್ತ ಭೀಮೋಜಿ ನಿಂತಿದ್ದ. ಬಿಳಿಯ ಟೋಪಿ ತೊಟ್ಟು, ಸೆಖೆಯಲ್ಲೂ ಉಲ್ಲನ್ ಕೋಟು ಧರಿಸಿದ ಗಂಗಾಧರ ಸ್ವಾಮಿ ಮೊದಲನೆಯ ಹಾರವನ್ನು ಹಾಕಿದ.
ಬಂಗಲೆಯ ಹಜಾರದಲ್ಲಿ ಕೆತ್ತಿದ ಕಮಾನುಗಳ ಮುಂದೆ ಸತೀಶ ನಿಂತ. ತನ್ನನ್ನು ಸ್ವಾಗತಿಸಲು ಬಂದ ಜನ ನಿಂತ ರೀತಿ, ಬಾಗಿದ ರೀತಿ, ಅವರ ಕಣ್ಣಲ್ಲಿನ ದೈನ್ಯ, ತನ್ನ ಬೆನ್ನ ಹಿಂದೆ ಇದ್ದ ಮೊಗಲ್ ಅನುಕರಣೆಯ ಅಮೃತಶಿಲೆಯ ಕೆತ್ತನೆಯ ಗೋಡೆ, ಕಮಾನುಗಳು-ಎಲ್ಲವು ಒಂದು ಕ್ಷಣದಲ್ಲೆ ಅವನ ವಾಸ್ತವವನ್ನು ಬದಲಾಯಿಸಿದ್ದವು. ಕೈಮಗ್ಗದ ಒರಟಾದ ಬಟ್ಟೆಯ ಬುಷ್ ಕೋಟು ತೊಟ್ಟ ತನ್ನ ಸಾಚಾ ಸರಳತೆಯ ಪ್ರಯತ್ನ ಕೂಡ ಜನರ ಕಣ್ಣಲ್ಲಿ ತನ್ನನ್ನು ಹಿಗ್ಗಿಸಿತ್ತು. ಇದರಿಂದ ಸತೀಶನಿಗೆ ಭಯವೂ ಆಗಿತ್ತು. ಕುಷಿಯೂ ಆಗಿತ್ತು. ಇದನ್ನು ಆಮೇಲೆ ಹಾಸ್ಯ ಮಾಡಿದ ರೇಖಾ ಕೂಡ ತನ್ನ ಗಂಡನ ಅಧಿಕಾರಕ್ಕೆ ಸಿಕ್ಕಿದ ಆವರಣದಿಂದ ಹಿಗ್ಗಿದಳು.
ಆತ್ಮ ವಿಮರ್ಶೆಯ ಎಚ್ಚರದಲ್ಲಿ ಬೆಳೆದಿದ್ದ ಸತೀಶನಲ್ಲಿ ಕ್ರಮೇಣ ಸೂಕ್ಷ್ಮ ಬದಲಾವಣೆಗಳಾದವು. ಈಗ ಎಲ್ಲ ಸುಲಭವಾಗುತ್ತ ಹೋಯಿತು. ಅಲ್ಪಸ್ವಲ್ಪ ಕರುಣೆಗೂ ಅತ್ಯಂತ ಕೃತಜ್ಞರಾಗುತ್ತಿದ್ದ ಜಿಲ್ಲೆಯ ಬಡಜನರ ದೈನ್ಯದಲ್ಲಿ ದಂಪತಿಗಳು ನಂಬಿದ್ದ ಹ್ಯೂಮನಿಸಮ್ ಪೋಷಣೆ ಪಡೆದು ನಿರ್ವಿಘ್ನವಾಗಿ ಬಲಿಯುತ್ತ ಹೋಯಿತು. ಎಲ್ಲರೂ ತಮ್ಮನ್ನು ಹೊಗಳುವಾಗ ಸಮಾಜವಾದದ ಪರವಾಗಿ ಇನ್ನಷ್ಟು ಉಗ್ರವಾಗಿ ಏರ್‌ಫೋರ್ಸ್ ಆಫೀಸರ ಜೊತೆ ವಾದಿಸುವುದು ರೇಖಾಳ ಪ್ರಿಯವಾದ ಹಾಬಿಯಾಯಿತು. ದಂಪತಿಗಳ ಒಳ್ಳೆತನ ಜಿಲ್ಲೆಯ ಬಡಜನರ ರಾಹುಗನ್ನಡಿಯಲ್ಲಿ ಇರುವುದಕ್ಕಿಂತಲೂ ದೊಡ್ಡದಾಗಿ ಕಾಣುತ್ತಿರಬಹುದೆಂಬ ಪ್ರಜ್ಞೆ ಸತೀಶನಿಗೆ ಇರಲಿಲ್ಲವೆಂದಲ್ಲ. ಆದರೆ ಬೀಗಿದ ಮುಷ್ಟಿಯಂತಿರುತ್ತಿದ್ದ ಅವನ ನೈತಿಕ ಪ್ರಜ್ಞೆ ಅವನಿಗೆ ಗೊತ್ತಾಗದಂತೆ ಸಡಿಲವಾಗಿತ್ತು. ಹೀಗಿರುವಾಗ ಬರಗಾಲ ಬಂತು.
ದಂಪತಿಗಳು ನಂಬಿದಂತೆ ಬದುಕುವವರು ಕೂಡ. ಎಲ್ಲರ ಮಕ್ಕಳೂ ಹೋಗುವ ಶಾಲೆಗೆ ಸತೀಶ ತನ್ನ ಮಗ ರಾಹುಲನನ್ನೂ ಕಳಿಸಿದ. ಸೈನಿಕ್ ಸ್ಕೂಲಿಗೆ ಕಳಿಸಿರೆಂದು ಏರ್‌ಫೋರ್ಸ್ ಗೆಳೆಯರು ಮಾಡಿದ ಒತ್ತಾಯವನ್ನು ದಂಪತಿಗಳು ಕಿವಿ ಮೇಲೆ ಸಹ ಹಾಕಿಕೊಳ್ಳಲಿಲ್ಲ. ತಲೆಯಲ್ಲಿ ಹೇನು ತುಂಬಿಸಿಕೊಂಡು, ಒರಟಾದ ಮಾತು ಕಲಿತು ಮನೆಗೆ ಬರುತ್ತಿದ್ದ ರಾಹುಲನನ್ನು ಪ್ರತಿ ಕಾಗದದಲ್ಲೂ ದೆಹಲಿ ಗೆಳೆಯರಿಗೆ ವರ್ಣಿಸಿ ರೇಖಾ ಬರೆದಳು. ಇದರಿಂದ ಸತೀಶ ರೇಖಾರ ಇಮೇಜು ದೆಹಲಿಯ ಪ್ರಭಾವಶಾಲೀ ವರ್ತುಳಗಳಲ್ಲಿ ಬೆಳೆಯುತ್ತಾ ಹೊಯಿತು.
ಸತೀಶನ ತಂದೆಗೂ ಈ ಎಲ್ಲದರಿಂದ ಖುಷಿಯಾಗಿತ್ತು. ಅವರು ಬದುಕಿದ ರೀತಿಯಲ್ಲಿ ಅವರ ಬೇರುಗಳೆಲ್ಲೋ ಆಗಿ, ಆಧುನಿಕತೆ ಬಂದಳಿಕೆಯಂತೆ ಮಾತ್ರ ಅವರಿಗೆ ಅಂಟಿಕೊಂಡಿತ್ತು. ಆದರೆ ಮಗ ಸಾಂಪ್ರದಾಯಿಕ ಸಮಾಜ ಆಧುನಿಕವಾಗುವ ಬದಲಾವಣೆಯ ಪ್ರಕ್ರಿಯೆಯಲ್ಲಿ ಪಾಲುದಾರನಾಗಿದ್ದನೆಂದು ಅವರಿಗೆ ನೆಮ್ಮದಿ.
ಜಿಲ್ಲೆಯಲ್ಲಿ ಬರಗಾಲ ತೀವ್ರವಾಗುತ್ತ ಹೋದಂತೆ ಸತೀಶನನ್ನು ಹೊಗಳುತ್ತಿದ್ದ ಜನ ಅನುಮಾನಿಸತೊಡಗಿದರು. ಸಾಚಾ ಮನುಷ್ಯ. ಆದರೆ ಎಫಿಶಿಯೆಂಟ್ ಅಲ್ಲ-ಎಂಬ ದೂರು ಅವನ ಮೇಲೆ ಬರತೊಡಗಿತು. ರಾಜ ಕಾರಣ ಮಾಡದೆ, ಅಂದರೆ ಕರಪ್ಟ್ ಆಗದೆ ಈ ಕಾಲದಲ್ಲಿ ಎಫಿಶಿಯೆಂಟ್ ಆಗುವಂತಿಲ್ಲವೆನ್ನುವುದನ್ನು ಮನಗಂಡಿದ್ದ ಸತೀಶ ಈ ಟೀಕೆಯನ್ನು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಆದ್ದರಿಂದಲೇ ಅವನು ಭೀಮೋಜಿಯ ಮಾತಿನಿಂದ ಅಷ್ಟು ವ್ಯಗ್ರನಾಗಿರಲಿಲ್ಲ. ಪೋಲೀಸ್ ಎಸ್.ಪಿ. ಯಾಗಿದ್ದ ನಾಗರಾಜನನ್ನು ಜಿಲ್ಲೆಯಿಂದ ವರ್ಗ ಮಾಡಬೇಕೆಂದು ಆಫೀಸಿಂದ ಹೊರಡುವ ಮುಂಚೆ ಸತೀಶ ಮಂತ್ರಿಗಳಿಗೆ ತುರ್ತು ಪತ್ರ ಬರೆದಿದ್ದ- ಅವನಿಗೆ ಏನೇನು ನಡೆಯುತ್ತಿದೆ ಗೊತ್ತಿರಲಿಲ್ಲವೆಂದಲ್ಲ. ಪೋಲೀಸ್ ಖಾತೆ ಇದ್ದದ್ದು ರುದ್ರಪ್ಪನ ಕೈಯಲ್ಲಿ. ಆದ್ದರಿಂದ ತನ್ನ ಶಿಫಾರಸ್ಸು ಕಸದ ಬುಟ್ಟಿ ಸೇರುತ್ತದೆಂಬ ಅನುಮಾನವೂ ಇತ್ತು- ಬರೆಯುವಾಗಲೇ. ಏನೇ ಆಗಲಿ ತಾನು ಮಾಡುವ ಕೆಲಸವನ್ನು ನಿಸ್ಪೃಹನಾಗಿ ಮಾಡಬೇಕು- ಇಸ್ಟರ ಬಗ್ಗೆ ಅವನಿಗೆ ಸಂದೇಹವಿರಲಿಲ್ಲ.
ಮದ್ಯಾಹ್ನ ಆಫೀಸಿನಲ್ಲಿ ತನ್ನನ್ನು ಭೇಟಿ ಮಾಡಲು ಬಂದ ರೈತ ಸಂಘದ ಅಧ್ಯಕ್ಷ ಭೀಮೋಜಿ ಸಲಿಗೆಯಿಂದ ಮಾತಾಡಿದಾಗ ತಾನು ಅವನ ಜೊತೆ ಸ್ನೇಹದಿಂದ ಮಾತಾಡಲಿಲ್ಲವೆಂದು ಸತೀಶನಿಗೆ ಮನೆಗೆ ಹೋಗುತ್ತಿದ್ದಾಗ ಅನ್ನಿಸಿತು. ಯಾವಾಗಲೂ ಆಫೀಸರನಂತೆಯೇ ವರ್ತಿಸುತ್ತಿರುವುದರಿಂದ ಅವನಿಗೆ ಸುಸ್ತಾಗುತ್ತಿತ್ತು. ಆದರೆ ಮನೆಯಲ್ಲಿರುವುದೂ ಕಡಿಮೆಯಾಗಿಬಿಟ್ಟದ್ದರಿಂದ ಅವನಿಗೆ ತನ್ನ ಆಫೀಸರ್ ಗತ್ತು. ಈ ಗತ್ತನ್ನು ಮುಚ್ಚಿಡುವ ಸೌಜನ್ಯ. ಸಲೀಸಾದ ಶೈಲಿಯಾಗಿಬಿಟ್ಟಿತ್ತು. ನೈಜತೆ ಕಳೆದುಹೋಗಿ ಮಾಡಿದ್ದೆಲ್ಲವೂ ಸೂಕ್ಷ್ಮ ರಾಜಕಾರಣವಾಗಿಬಿಡುವ ಅಪಾಯ ಈಚೆಗೆ ಸತೀಶನನ್ನು ಬಾಧಿಸುತ್ತದೆ. ಆಫೀಸು ಮುಗಿಸಿ ಮನೆಗೆ ಬಂದಾಗ ಜೇಮ್ಸ್ ಬಾಂಡ್ ಕಾದಂಬರಿಗಳನ್ನು ಓದುವುದಷ್ಟೆ ಅವನಿಗೆ ಸಾಧ್ಯವಾಗುತ್ತಿದ್ದುದು.
ಇನ್ನೂ ಕತ್ತಲಾಗದ್ದರಿಂದ ಕಾಳಮ್ಮನ ಬೀದಿ ಹುಡುಕುತ್ತ ಕಾರು ನಡೆಸಿದ. ತುಂಬ ಮುಸ್ಲಿಮರಿದ್ದ ಈ ಊರಲ್ಲಿ `ಕಾಳಮ್ಮನ ಬೀದಿ’ ವಿಶಿಷ್ಟವಾದ ಹೆಸರು. ಕಾಳಮ್ಮನ ಒಕ್ಕಲಿಗೂ, ಮುಸ್ಲಿಮರಿಗೂ ಈ ಊರಲ್ಲಿ ನಡೆದಿದ್ದ ಗಲಭೆ ಬಗ್ಗೆ ಅವನು ಕೇಳಿದ್ದ. ಸುಮಾರು ಐದು ವರ್ಷಗಳ ಕೆಳಗೆ ಇನ್ನೊಂದು ಪ್ರಕರಣ ಹೆಚ್ಚು ಸುದ್ದಿಯಾಗದೆ ಮರೆಯಾಗಿತ್ತು. ಆರ್ಕಿಯಾಲಜಿ ಇಲಾಖೆಯವರು ಐತಿಹಾಸಿಕವೆಂದು ಕಾದಿಟ್ಟ ಕೆಲವು ಮಸೀದಿಗಳನ್ನು ಇವು ತಮ್ಮ ಪ್ರಾರ್ಥನಾ ಸ್ಥಳವೆಂದು ಊರಿನ ಮುಸ್ಲಿಮರು ವಶಪಡಿಸಿಕೊಂಡಿದ್ದರು. ಲಾರಿಯಲ್ಲಿ ಬಿಗಿದು ಅವರನ್ನು ಅಲ್ಲಿಂದ ಎಬ್ಬಿಸಿದ್ದು ಪಾಕಿಸ್ತಾನದಲ್ಲಿ ಸುದ್ದಿಯಾಗಿದ್ದರಿಂದ ಈ ಊರಲ್ಲೂ ಪಾಕಿಸ್ತಾನಿ ಗೂಢಚಾರರು ಇದ್ದಾರೆಂಬ ಅನುಮಾನ ಸರ್ಕಾರಕ್ಕಿತ್ತು. ಹೀಗೆ ಸ್ಥಳ ಸೆನ್ಸಿಟಿವ್ ಎಂದೇ ಸರ್ಕಾರ ಅಲ್ಲಿ ಏರ್‌ಫೊರ್ಸ್ ಟ್ರೈನಿಂಗ್ ಸೆಂಟರನ್ನು ಪ್ರಾರಂಭಿಸಿತು ಎಂಬ ನಂಬಿಕೆಯೂ ಜನರಲ್ಲಿದೆ. ನಿಜವೊ, ಸುಳ್ಳೊ ಯಾರಿಗೂ ತಿಳಿಯದು.
ಆದರೆ ಮಾತ್ರ ಊರಲ್ಲಿ ಇವತ್ತಿಗೂ ಕನ್ನಡ ಮಾತಾಡೋದು ಅಂತಸ್ತಿಗೆ ಕಮ್ಮಿ. ಬರೇ ಹಳ್ಳಿಯವರು ಅಥವಾ ಅತ್ಯಂತ ಕನಿಷ್ಠವಾದ ಕೆಲಸ ಮಾಡುವ ಕೂಲಿಗಳು ಮಾತ್ರ ಕನ್ನಡ ಮಾತಾಡೋದು- ಅದೂ ಒರಟಾದ ಕನ್ನಡ. ಉಳಿದವರೆಲ್ಲ ಮಾತಾಡೋದು ಉರ್ದು. ಯಾರನ್ನಾದರೂ ಕನ್ನಡದಲ್ಲಿ ಮಾತಾಡಿಸಿದರೆ ಅದು ತಮ್ಮನ್ನು ಕೀಳಾಗಿ ಭಾವಿಸಿದಂತೆ ಎಂದು ಅಲ್ಲಿಯ ಜನ ತಿಳಿಯುತ್ತಾರೆಂದು ಮೊದಮೊದಲು ಸತೀಶನಿಗೆ ಹೊಳೆದಿರಲಿಲ್ಲ. ಈ ಜಿಲ್ಲೆಯನ್ನು ಆಳಿದ ನವಾಬರ ನೆನಪನ್ನು ಹೀಗೆ ಭಾಷೆಯಲ್ಲೂ ಉಳಿಸಿಕೊಂಡ ಈ ಜಿಲ್ಲೆಯ ಬಡಜನರನ್ನು ಸಂಘಟಿಸಲೆಂದೇ ತಾನು ಕನ್ನಡ ಸಂಘ ಸ್ಥಾಪಿಸಿ ಕನ್ನಡ ಚಳುವಳಿ ಪ್ರಾರಂಭಿಸಿದ್ದೆಂದು ಭೀಮೋಜಿ ಹೇಳಿದ್ದ. ಉರ್ದು ಮಾತಾಡೋದು ಹಿರಿಮೆಯ ಚಿನ್ಹೆ ಎಂದು ಭಾವಿಸಿದ್ದ ಆ ಊರಲ್ಲಿ ಮಾತ್ರ ಬಹುತೇಕ ಮುಸ್ಲಿಮರು ಕಡುಬಡವರಾಗಿದ್ದರು.
ಸಾಲಾಗಿ ಒಂದಕ್ಕೊಂದು ಅಂಟಿದ್ದ ಮಣ್ಣಿನ ಗೋಡೆಯ ಮನೆಯ ಸಾಲಿನಲ್ಲಿ ಭೀಮೋಜಿಯದೂ ಒಂದುಮನೆ. “ಬೀಮೋಜಿ ಬಿ.ಎ.. ಎಲ್.ಎಲ್.ಬಿ.. ಅಡ್ವೋಕೇಟ್” ಎಂದು ಬೋರ್ಡಿತ್ತು.ಮನೆಯ ಎದುರು ಕಾರು ನಿಲ್ಲಿಸಿ. ಬಾಗಿಲು ತಟ್ಟಿದ. ಒಳಗಿನಿಂದ ಹೊಲಿಗೆಯ ಮೆಶಿನ್ನಿನ ಸದ್ದಾಯಿತು. ಕಾರು ನಿಂತದ್ದು ನೋಡಿ ಬೀದಿಯ ಮಕ್ಕಳೆಲ್ಲ ಓಡಿ ಬಂದು ಕಾರನ್ನು ಸುತ್ತುಗಟ್ಟಿದರು. ಅವರನ್ನು ಗದರಿಸಲೆಂದು ಹೊರಗೆ ಬಂದ ಹಿರಿಯರು ಕಾರನ್ನೂ, ಸತೀಶನನ್ನೂ ಕುತೂಹಲದಿಂದ ನೋಡುತ್ತ ನಿಂತರು. ಹೆಚ್ಚು ಧೈರ್ಯವಂತರಾದ ಮಕ್ಕಳು ಸತೀಶನ ಬುಷ್‌ಶರ್ಟನ್ನು ಎಳೆಯುತ್ತ “ಯಾರು ಬೇಕು?” ಎಂದವು. “ಭೀಮಣ್ಣಾ. ಭೀಮಣ್ಣಾ” ಎಂದು ಕೂಗುತ್ತ ಮನೆ ಎದುರಿಗಿದ್ದ ಒಂದೇ ಕಿಟಿಕಿಯಲ್ಲಿ ಕಿಕ್ಕಿರಿದವು.
ಸತೀಶನನ್ನು ನೋಡಿ ಆದ ಆಶ್ಚರ್ಯ ಸಂತೋಷಗಳನ್ನು ಭೀಮೋಜಿ ತೋರಿಸಿಕೊಳ್ಳಲಿಲ್ಲ. ಮಕ್ಕಳನ್ನು ಗದರಿಸಿ ಹೊರಗಟ್ಟಿದ. ಕುತೂಹಲದಿಂದ ಸುತ್ತುಗಟ್ಟಿದ ಹಿರಿಯರಿಗೆ ಬಂದವರು ಜಿಲ್ಲಾಧಿಕಾರಿಗಳೆಂದು ಹೇಳಿದ. ಬಾಗಿಲು ಹಾಕಲು ಪ್ರಯತ್ನಿಸಿ ವಿಫಲನಾದ. ಭೀಮೋಜಿ ಹೆಂಡತಿ ಹೊಲಿಯುವುದನ್ನು ನಿಲ್ಲಿಸಿ ಒಳಗೆ ಹೋದಳು. ಕಾಜ ಹಾಕುತ್ತ ಕೂತ ಹುಡುಗನೊಬ್ಬ ಸತೀಶನನ್ನೆ ದಿಟ್ಟಿಸುತ್ತ ತನ್ನ ಕೆಲಸ ಮುಂದುವರಿಸಿದ.
ಅಂತೂ ಕೊನೆಗೆ ಭೀಮೋಜಿ ಬಾಗಿಲು ಭದ್ರ ಮಾಡಿ ಸತೀಶನಿಗೆ ಮನೆಯಲ್ಲಿದ್ದ ಒಂದು ಕುರ್ಚಿ ಕೊಟ್ಟು ತಾನು ಸ್ಟೂಲಿನ ಮೇಲೆ ಕೂತ.
“ನಮ್ಮ ಮನೆಗೆ ಕಾರು ಬಂದರೆ ಅದರ ಅರ್ಥ ಈ ಬೀದೀಲಿ ನನ್ನನ್ನು ಅರೆಸ್ಟ್ ಮಾಡೋಕೆ ಪೋಲೀಸರು ಬಂದಿದಾರೇಂತ. ಆದರೆ ಈಗ ಒಳ್ಳೇ ಬಟ್ಟೆ ಹಾಕ್ದೋರು ಬಂದರೆ ಮಕ್ಕಳಿಗೆ ಏನಾದರೂ ತಿಂಡಿ ಪಂಡಿ ಹಂಚತಾರೇಂತ.”
“ಮದ್ಯಾಹ್ನ ನಿಮ್ಮ ಹತ್ತಿರ ಸರಿಯಾಗಿ ಮಾತಾಡ್ಲಿಕ್ಕೆ ಆಗ್ಲಿಲ್ಲ. ಸುಮ್ಮನೇ ನಿಮ್ಮನ್ನು ನೋಡಿ ಹೋಗೋಣಾಂತ ಬಂದೆ. ತೊಂದರೆ ಆಗ್ಲಿಲ್ಲ ತಾನೆ?”
“ಎಸ್.ಪಿ.ಯನ್ನ ವರ್ಗ ಮಾಡಿಸೋದು ನಿಮ್ಮಿಂದ ಆಗದ ಕೆಲಸ ಸಾರ್.”
ಭೀಮೋಜಿಯ ಅಧಿಕ ಪ್ರಸಂಗದಿಂದ ಸತೀಶನಿಗೆ ಸಿಟ್ಟು ಬಂತು:
“ಏನು ನನ್ನ ಆಫೀಸಿನ ತುಂಬ ನಿಮ್ಮ ಸ್ಪೈಗಳು ಇರೋ ಹಾಗಿದೆ.”
ಬೀಮೋಜಿ ವಿಚಲಿತನಾಗದೆ ದೊಡ್ಡದಾಗಿ ನಕ್ಕ:
“ಇಲ್ಲ ಸಾರ್. ನಿಮ್ಮ ಸ್ವಭಾವ ಅಷ್ಟಿಷ್ಟು ನನಗೆ ಗೊತ್ತಲ್ಲ-ಊಹಿಸಿದೆ.”
“ನೀವು ನನ್ನ ಜೊತೆ ಸಹಕರಿಸ್ತ ಇಲ್ಲ. ಜಿಲ್ಲೆಗಾಗಿ ಮಾಸ್ ಜೊತೆ ಸಂಬಂಧ ಇಟ್ಟುಕೊಂಡಿರೋ ನಿಮ್ಮಂಥವರು ಮಾಡಬಹುದಾದ್ದು ಬಹಳ ಇದೆ.”
“ಇದೆ-ಆದರೆ ನಿಮ್ಮ ಮಾರ್ಗದಲ್ಲಿ ಅಲ್ಲ ಸಾರ್. ಬೇಜಾರು ಮಾಡಬೇಡಿ. ನನ್ನ ಮನಸ್ಸಿನಲ್ಲಿರೋದನ್ನ ಹೇಳ್ತೀನಿ. ನೀವು ಬ್ಯೂರೋಕ್ರೇಟೋ? ಕ್ರಾಂತಿಕಾರರೋ? ಎರಡನ್ನೂ ಸೇರಿಸಕ್ಕೆ ಆಗತ್ತೆ ಅಂತ ನಿಮ್ಮ ಭ್ರಮೆ. ನಿಮ್ಮ ಭಾವ ಜಯನ್ ಅವರ ಭ್ರಮೆ ಕೂಡ. ನನ್ನಂಥ ಪುಢಾರಿಗೆ ಅರ್ಥವಾಗೋದು ನಿಮಗೆ ಯಾಕೆ ಆಗಲ್ಲ? ತಗೊಳ್ಳೋ ಸಂಬಳಾನ್ನ ಜಸ್ಟಿಫೈ ಮಾಡಿಕೊಳ್ಳೋಕೆ ನೀವು ಸುಮ್ಮನೇ ಹಾರಾಡಿದ ಹಾಗೆ ಆಗತ್ತೆ. ನೀವು ಯಾಕೆ ಅಡ್ಮಿನಿಸ್ಟ್ರೇಟಿವ್ ಸರ್ವಿಸ್‌ಗೆ ಸೇರಿದಿರಿ ಹೇಳಿ?”
“ಬರಿ ನಿಮ್ಮ ತರದ ರಾಜಕೀಯ ಮಾಡೋದ್ರಿಂದಲೂ ಸಮಸ್ಯೆ ಬಗೆಹರಿಯಲ್ಲ.”
“ಆದರೆ ನಾನು ಸ್ವಚ್ಛವಾದ ನಡತೆ. ಕೈತುಂಬ ಸಂಬಳ. ಕ್ರಾಂತಿಕಾರಕ ವಿಚಾರ ಎಲ್ಲಾನೂ ಒಟ್ಟಿಗೆ ಚೌ ಚೌ ಮಾಡಲ್ಲ. ನನ್ನಂಥವರಿಂದ ನಿಂತದ್ದು ಚಲಿಸುತ್ತೆ. ನನಗೂ ಒಂದು ವಿಶನ್ ಇರಬಹುದೂಂತ ನಿಮಗೆ ಯಾಕೆ ಅನ್ನಿಸಲ್ಲ?”
“ಮನೆಗೆ ಬೆಂಕಿ ಹಚ್ಚಿ ಮೈಕಾಯಿಸಿಕೊಳ್ಳೊ ವಿಚಾರ ನಿಮ್ಮದು.”
“ನಾನಿರುವಂಥ ಮನೆಗಳಿಗೆ ಬೆಂಕಿ ಹಚ್ಚಿದರೇ ಒಳ್ಳೇದು.”
ಸತೀಶ ಮಾತು ತಿರುಗಿಸಲು ನೋಡಿದ.
“ನಮ್ಮ ಹಳ್ಳಿಗೆ ನೀವು ಹತ್ತಿರದವರು ಅಂಥ ನನಗೆ ಗೊತ್ತೇ ಇರಲಿಲ್ಲ ಮಿಸ್ಟರ್ ಭೀಮೋಜಿ. ಅಲ್ಲಿಂದ ನೀವು ಇಲ್ಲಿಗೆ ಬಂದದ್ದು ಹೇಗೆ?”
“ಕದ್ದು. ಬೊಂಬಾಯಿಗೆ ಮೊದಲು ಓಡಿಹೋದೆ. ಅಲ್ಲಿ ಏನೇನೋ ಕೆಲಸ ಮಾಡಿದೆ. ಪಿಂಪ್. ಹೋಟೆಲ್ ಮಾಣಿ, ಟ್ಯಾಕ್ಸಿ ಡ್ರೈವರ್. ಕೊನೆಗೆ ಹೋಟೆಲ್ ಕ್ಯಾಶಿಯರ್. ಸಾಹುಕಾರ ನನ್ನನ್ನ ನಂಬುವಂತೆ ಮಾಡಿದೆ. ಅವನಿಗೆ ಹೆಣ್ಣಿನ ಹುಚ್ಚು. ನನಗೆ ಪಿಂಪ್ ಆಗಿದ್ದ ಅನುಭವವಿತ್ತಲ್ಲ. ಕ್ಯಾಶ್ ಬಾಕ್ಸಿಂದ ನಿತ್ಯ ಒಂದಿಷ್ಟು ಹಣ ನನ್ನ ಜೇಬು ಸೇರ್ತಾ ಹೋಯ್ತು. ಸಾಯಂಕಾಲ ಸ್ಕೂಲಿಗೆ ಹೋಗಿ ಓದಿದೆ. ಕಾಲೇಜೂ ಓದಿ ಮುಗಿಸಿದೆ. ಆ ಹೊತ್ತಿಗಾಗ್ಲೆ ನಿಮ್ಮ ಅಪ್ಪನಿಗೆ ಸರ್ಜ್ ಸೂಟು ಹೊಲಿದುಕೊಟ್ಟ ನನ್ನ ಅಪ್ಪ ನರಸಿಂಗರಾವ್ ಕುಡಿದೂ ಕುಡಿದೂ ಪಾಪರ್ ಚೀಟಿ ತಗೊಂಡಿದ್ದರು. ಕೈಯಲ್ಲಷ್ಟು ಕಾಸು ಮಾಡಿಕೊಂಡ ನಾನು ಊರಿಗೆ ಹೋದೆ . ಸೋದರ ಮಾವನ ಮಗಳನ್ನೆ ಮದುವೆಯಾದೆ. ಲಾ ಪಾಸ್ ಮಾಡಿ ಕೂಲಿಗಾರರ ಸಂಘಗಳಲ್ಲಿ ಕೆಲಸ ಮಾಡುತ್ತ ಹೀಗೇ ಈ ಊರು ಸೇರಿದೆ. ನನ್ನ ಹೆಂಡತಿ ಹೊಲಿಗೆ ಮಾಡ್ತಾಳೆ. ಅಂತೂ ಜೀವನ ನಡೆಯುತ್ತೆ.”
ಹೊರಗೆ ಗಲಾಟೆ ಶುರುವಾಯಿತು. ಮಕ್ಕಳು ಬಾಗಿಲನ್ನು ತಳ್ಳತೊಡಗಿದವು. “ಭೀಮಣ್ಣಾ, ಭೀಮಣ್ಣಾ ಬಾಗಿಲು ತೆಗೀರಿ…”ಬೀಮೋಜಿಗೆ ರೇಗಿತು. “ಥತ್ ಸೂಳೇ ಮಕ್ಕಳು ಗಂಗಾಧರಸ್ವಾಮಿ ಪಾಯಸ ಹೊಟ್ಟೆಗೆ ಬಿದ್ದು ಕೊಬ್ಬಿದಾವೆ” ಎಂದು ಬಾಗಿಲು ತೆಗೆದ. ಇಡೀ ಬೀದಿ ಜನವೆಲ್ಲ ಅಲ್ಲಿ ನೆರೆದಂತಿತ್ತು. ಬೀಮೋಜಿ ಮುಖೇನ ಅರ್ಜಿ ಸಲ್ಲಿಸಲು ಸೇರಿದ್ದ ಅವರು ಪರಸ್ಪರ ತಳ್ಳುತ್ತ ಸತೀಶನ ಗಮನ ಸೆಳೆಯಲು ನೋಡಿದರು. `ನನ್ನ ಮಗನಿಗೊಂದು ಪ್ಯೂನ್ ಕೆಲಸ’. `ಈ ಬೀದಿಗೆ ಸರಿಯಾಗಿ ನೀರು ಸರಬರಾಜಿಲ್ಲ’. `ಕಾಳಮ್ಮನ ತೇರಿಗೆ ಹೊಸ ಚಕ್ರಗಳನ್ನು ಮುಜರಾಯಿ ಇಲಾಖೇಂದ ಮಂಜೂರು ಮಾಡಿಸಬೇಕು.’ ಗಿಜಿಗಿಜಿ ಸದ್ದು ಹೆಚ್ಚಾಗುತ್ತ ಹೋಯಿತು. ಭೀಮೋಜಿ ಜನರನ್ನು ತಳ್ಳಿದ; “ನನ್ನ ಹತ್ರ ಅರ್ಜಿ ಬರಕೊಡಿ, ಸಾಹೇಬ್ರ ಹತ್ರ ಆಮೇಲೆ ನಾನು ಮಾತಾಡ್ತೀನಿ” ಎಂದು ಮೆಟ್ಟಿಲಿನಿಂದ ಬಲಾತ್ಕಾರವಾಗಿ ಜನರನ್ನು ನೂಕಲು ಶುರುಮಾಡಿದ. ಅವನ ಚಾಚಿದ ಎರಡು ಕೈಗಳ ಅಳತೆಗೂ ಮೀರಿ ಜನಸಂದಣಿ ಇದ್ದುದರಿಂದ ಅಕ್ಕಪಕ್ಕಗಳಿಂದ ನುಸುಳಿ ಜನ ಮನೆಯೊಳಗೆ ನಿಂತಿದ್ದ ಸತೀಶನನ್ನೇ ಸುತ್ತುಗಟ್ಟಿದರು. ಹೀಗೆ ಮುತ್ತಿದ ಯುವಕರ ಗುಂಪು-ಅವರೇ ಮೆಜಾರಿಟಿಯಲ್ಲಿದ್ದವರು-ಕಾಳಮ್ಮನ ತೇರಿನ ಚಕ್ರಗಳ ಬಗ್ಗೆ ಸತೀಶನನ್ನು ಹಣ ಮಂಜೂರು ಮಾಡಿಸುವಂತೆ ಒತ್ತಾಯಪೂರ್ವಕವಾಗಿ ಕೈಗಳನ್ನು ಮುಗಿದು ಕೇಳಿಕೊಳ್ಳತೊಡಗಿದರು.
ಅಷ್ಟು ಮಕ್ಕಳನ್ನು ತಾನು ಒಟ್ಟಾಗಿ ನೋಡಿರಲಿಲ್ಲ-ಅಷ್ಟಿದ್ದವು ಈ ಮನೆಯ ಒಳಗೆ, ಹೊರಗೆ, ಬೀದಿ ಮೇಲೆ, ಕಾರಿನ ಸುತ್ತ, ಕಾಳಮ್ಮನ ರಥ ಜಖಂ ಆಗಿ ಹೋದ ವರ್ಷ ರಥ ಎಳೆಯದೆ ಈ ವರ್ಷ ಮಳೆಯಾಗಲಿಲ್ಲೆಂದು ಯುವಕರು ಮಾಡುತ್ತಿದ್ದ ವಾದವನ್ನು ಆದಷ್ಟು ಸಮಾಧಾನದಿಂದ ಕೇಳಿಸಿಕೊಳ್ಳಲು ಸತೀಶ ಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅವನ ಕಾರಿನ ಹಾರನ್ ಸದ್ದು ಮಾಡತೊಡಗಿತು. ಜೊತೆಗೇ ಮಗುವೊಂದು ಕಿಟಾರನೆ ಕಿರುಚಿಕೊಂಡಿತು. ಭಿಮೋಜಿ ಓಡಿದ. ಜೊತೆಗೆ ಜನರೂ ಓಡಿದರು. ಕಾರಿನ ಪಕ್ಕದಲ್ಲಿ ನಿಂತು “ಇಳಿರೋ, ಇಳಿರೋ, ನಿಮಗೆ ಹೊಟ್ಟೇಗೆ ಬಿದ್ದದ್ದು ಹೆಚ್ಚಾಯ್ತು” ಎಂದು ಒದರತೊಡಗಿದ.
ಕಾರಿನ ಬಾಗಿಲು ತೆರೆದು ಈ ಮಕ್ಕಳು ಒಳಗೆ ಹೋಗಿರಲಾರವು; ಗಾಜು ಏರಿಸಲು ಮರೆತದ್ದರಿಂದ ಕಿಂಡಿಯ ಮುಖಾಂತರ ಅವು ಕಾರನ್ನು ಹೊಕ್ಕಿರಬೇಕೆಂದು ಊಹಿಸಿದ. ಹಾರನ್ ಕಿರುಚುತ್ತಲೇ ಇತ್ತಾದ್ದರಿಂದ ಇನ್ನಷ್ಟು ಜನ ಬೇರೆ ಬೇರೆ ಬೀದಿಗಳಿಂದ ಧಾವಿಸಿ ಬಂದರು. ಅಗ್ನಿಶಾಮಕ ದಳದ ಅಲಾರಾಮಿನಂತೆ ಕಿರಿಚಿಕೊಳ್ಳುತ್ತಿದ್ದ ಹಾರನ್ನನ್ನು ನಿಲ್ಲಿಸಲು ಮಕ್ಕಳನ್ನು ಕಾರಿಂದ ಹೊರಗೆಳೆದು ಹಾಕುವುದೊಂದೇ ಉಪಾಯವಾಗಿತ್ತು. ಕಾತರರಾದ ತಮ್ಮ ತಾಯಂದಿರನ್ನು ಕಂಡಕೂಡಲೇ ಮಕ್ಕಳು ಇನ್ನಷ್ಟು ಜೋರಾಗಿ ಅಳುತ್ತ ತಮ್ಮೆಲ್ಲ ತಲೆಗಳನ್ನೂ ಕಂಡಿಯಿಂದ ತೂರಿ ಹಿಂದಕ್ಕೆಳೆದುಕೊಳ್ಳಲಾರದೆ ಇನ್ನಷ್ಟು ರಂಪ ಮಾಡಿದವು. ತಾಯಂದಿರನ್ನು ದೂರ ಅಟ್ಟಿ ಭೀಮೋಜಿ ಯಾವುದೋ ಎರಡು ಪುಟ್ಟ ಕಾಲುಗಳನ್ನು ಹೊರಗೆಳೆಯತೊಡಗಿದ. ಆ ಕಾಲುಗಳ ಮೇಲೆ ಹೊರಗೆ ಬರಲು ಪ್ರಯತ್ನಿಸುತ್ತಿದ್ದ ಎರಡು ತಲೆಗಳೂ ಇದ್ದವಾದ್ದರಿಂದ ಭೀಮೋಜಿ ವಿಫಲನಾದುದಷ್ಟೇ ಅಲ್ಲದೆ ಇನ್ನಷ್ಟು ಕಾರೊಳಗಿನ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದ. ಕಾರಿನ ಎದುರು ಜಮಾಯಿಸಿದ್ದ ತಾಯಂದಿರನ್ನು ತಳ್ಳಿ ವಿಂಡ್ ಶೀಲ್ಡ್ ಮುಖಾಂತರ ನೋಡಿದಾಗ ಸತೀಶ ಕಂಡದ್ದು: ಕಾರಿನ ಒಳಗೆ ಕಿಕ್ಕಿರಿದ, ಒಂದರ ಮೇಲೊಂದು ಹತ್ತಿ ಪರದಾಡುತ್ತಿದ್ದ ಮಕ್ಕಳು. ಸ್ಟೀರಿಂಗ್ ವೀಲ್‌ನ ಮೇಲೆ ಹಾರನನ್ನು ಒತ್ತಿಕೊಂಡು ಅಪ್ಪಚ್ಚಿಯಾಗಿದ್ದ ಮಗುವಿನ ಅಂಡುಗಳನ್ನು ಭದ್ರವಾಗಿ ಹಿಡಿದಿದ್ದ ಮಗುವಿನ ಕಾಲುಗಳನ್ನೆ ಭೀಮೋಜಿ ಎಳೆಯುತ್ತಿದ್ದುದು. ಒಂದನ್ನೊಂದು ತಳ್ಳುತ್ತ, ಏರುತ್ತ, ಅಳುತ್ತ, ಪರಚುತ್ತ ಕೂದಲನ್ನು ಜಗ್ಗುತ್ತ ಹಿಂದಿನ ಸೀಟು, ಮುಂದಿನ ಸೀಟು, ಕೆಳಗೆ, ವಿಂಡ್ ಶೀಲ್ಡ್ ಮೇಲೆ ಮಕ್ಕಳು ಜಮಾಯಿಸಿದ್ದವು. ಇದ್ದಕ್ಕಿದ್ದಂತೆ ಮತ್ತೆ ಕಾರಿನ ಸುತ್ತ ಮುತ್ತಿಕೊಂಡ ಹೆಂಗಸರು “ಬರ್ರೋ, ಹೊರಗೆ ಬರ್ರೋ” ಎಂದು ಕಿರುಚುತ್ತ ಇನ್ನಷ್ಟು ಗೊಂದಲಕ್ಕೆ ಕಾರಣರಾದರು. ಆಗ ತಾನೇ ಓಡಿಬಂದ ಇನ್ನೊಬ್ಬ ತಾಯಿ ಹಾರನ್ನಾಗುತ್ತಿರುವುದರಿಂದ ಕಾರು ಓಡಲು ಪ್ರಾರಂಭಿಸಿಬಿಡುತ್ತದೆಂದು ಹೆದರಿ “ಕಾರನ್ನು ಹಿಡಕೊಳ್ಳರೋ” ಎಂದು ಕಿರುಚಿದಳು. ಹೆಂಗಸರೆಲ್ಲ ಕಾರಿನ ಹಿಂದೆ ಮುಂದೆ ನಿಂತು ಚಲಿಸದಂತೆ ಕಾರನ್ನು ಗಟ್ಟಿಯಾಗಿ ಹಿಡಕೊಂಡರು. ಇದರಿಂದ ಮಕ್ಕಳು ಇನ್ನಷ್ಟು ಗಾಬರಿಯಾದವು. ಪ್ರಾಯಶಃ ಸಾಹಸಿಗಳಾದ್ದರಿಂದ ಕಾರನ್ನು ಹತ್ತಿ ಕೂತ ಎರಡು ಮಕ್ಕಳು ಈ ನಡುವೆ ಮೆಲ್ಲಗೆ ಇಳಿದು ಓಡಿದವು.
ಸತೀಶ ಮುಂದಿನ ಬಾಗಿಲಿನ ಬೀಗ ತೆಗೆದು, ಕೈತೂರಿ ಹಿಂದಿನ ಬಾಗಿಲಿನ ಲಾಕನ್ನು ಬಿಚ್ಚಿ ಎರಡು ಬಾಗಿಲುಗಳನ್ನೂ ತೂರಿದ್ದ ತಲೆಗಳಿಗೆ ಜಖಂ ಆಗದಂತೆ ಮೆಲ್ಲಗೆ ಸ್ವಲ್ಪ ತೆರೆದನು. ಮಕ್ಕಳಿಗೆ ನಿಶ್ಚಲರಾಗುವಂತೆ ಗದರಿಸಿ ಒಂದೊಂದೇ ತಲೆಗಳನ್ನು ಹಿಂದೆ ತಳ್ಳಿ ಅಂತೂ ಬಾಗಿಲುಗಳನ್ನು ಪೂರ್ಣ ತೆರೆದನು. ಕಿಕ್ಕಿರಿದಿದ್ದ ಮಕ್ಕಳು ಉದುರಿದವು. ಮುಂದಿನ ಇನ್ನೊಂದು ಬಾಗಿಲನ್ನು ತೆರೆದು ಸ್ಟೀರಿಂಗ್ ವೀಲಿನ ಮೇಲೆ ಬೋರಲಾಗಿ ಕಂಗಾಲಾಗಿದ್ದ ಮಗುವನ್ನು ಎತ್ತಿದ. ಕಾರಿನಿಂದ ಎಲ್ಲ ಮಕ್ಕಳನ್ನೂ ಹೊರಗೆ ತೆಗೆದಮೇಲೆ ಕಾರಿನಲ್ಲಿ ಅಸಹನೀಯವಾದ ನಾತ ಪತ್ತೆಯಾಯಿತು. ಮಕ್ಕಳನ್ನು ಎತ್ತುವಾಗ ಒದ್ದೆಯಾದ ಕೈಯನ್ನು ದೀಪದಲ್ಲಿ ನೋಡಿದಾಗ ಕಾರೊಳಗೆ ಹೆದರಿಕೊಂಡು ಮಕ್ಕಳು ಉಚ್ಚೆ, ಪಾಯಖಾನೆ ಮಾಡಿಕೊಂಡಿವೆ ಎಂಬುದು ಗೊತ್ತಾಯಿತು. ಭೀಮೋಜಿಯ ಹೆಂಡತಿ ಮನೆಯಲ್ಲಿದ್ದ ಒಂದೇ ಒಂದು ಚೊಂಬು ನೀರನ್ನು ತಂದಳು. ಸತೀಶ ಕೈತೊಳೆದುಕೊಂಡ. ಆದರೆ ಕಾರಿನ ಸೀಟಿನ ಮೇಲಿದ್ದ ಪಾಯಖಾನೆಯನ್ನು ತೊಳೆಯಲು ಎಲ್ಲಿಂದ ನೀರು ತರುವುದು? ಜನ ತಮ್ಮ ಮಕ್ಕಳನ್ನು ಶಪಿಸುತ್ತ ಜಪ್ಪುತ್ತ ಮನೆಯಲ್ಲಿ ಕುಡಿಯಲೆಂದು ಕಾದಿಟ್ಟ ನೀರನ್ನು ಲೋಟಗಳಲ್ಲಿ, ಚಂಬುಗಳಲ್ಲಿ ತಂದು ಕಾರನ್ನು ಸುತ್ತುಗಟ್ಟಿ ನಿಂತರು. ಸತೀಶ ನೀರು ಬೇಡವೆಂದ. ಭೀಮೋಜಿಯಿಂದ ನ್ಯೂಸ್ ಪೇಪೆರ್‌ಗಳನ್ನು ತರಿಸಿಕೊಂಡು ಕಾರಿನ ಸೀಟನ್ನು ಒರೆಸುತ್ತಿದ್ದಾಗ ಜನರೆಲ್ಲ ಆ ಕೆಲಸ ಮಾಡಲು ಮುಂದಾಗಿ ಮತ್ತೊಮ್ಮೆ ಹಾರನ್ನನ್ನು ಒತ್ತಿ ಗದ್ದಲ ಪ್ರಾರಂಭಿಸಿದರು. ಭೀಮೋಜಿ ಜನರನ್ನು ಗದರಿಸಿ ತಳ್ಳಿದ. ಸತೀಶನಿಗೆ ಸಹಾಯ ಮಾಡುತ್ತ; “ನೋಡಿ ಸಾರ್ ಒಂದು ತಮಾಷೆ. ಒಂದೇ ಒಂದು ಪೇಪೆರಲ್ಲೂ ಜಿಲ್ಲೆ ಪರಿಸ್ಥಿತಿ ಎಷ್ಟು ಉಗ್ರವಾಗಿದೆ ಅನ್ನೋ ರಿಪೋರ್ಟ್ ಬಂದಿಲ್ಲ. ಆದರೆ ಗಂಗಾಧರಸ್ವಾಮಿ ತನ್ನದಷ್ಟು ಬರುಡು ಭೂಮೀನ್ನ ಭೂದಾನ ಮಾಡ್ತೀನಿ ಅಂತ ಇವತ್ತು ಸ್ಟೇಟ್‌ಮೆಂಟ್ ಕೊಟ್ಟಿದ್ದಾನೆ. ನಾಳೆ ಅದು ಪೇಪರಲ್ಲಿ ಬರುತ್ತೊ ಇಲ್ಲವೊ ನೋಡಿ” ಎಂದ. ಸತೀಶನಿಗೆ ಮಾತು ಬೇಡಿತ್ತು. ತಮ್ಮ ಅಹವಾಲುಗಳನ್ನು ಇನ್ನಾದರೂ ಹೇಳಿಕೊಳ್ಳಬಹುದೆಂಬ ಆಸೆಯಿಂದ ಬೀದಿಯ ಹಿರಿಯರೆಲ್ಲ ರಸ್ತೆಯ ಎರಡು ಮಗ್ಗುಲುಗಳಲ್ಲೂ ಶಿಸ್ತಾಗಿ ಕೈಮುಗಿದು ನಿಂತದ್ದು ನೋಡಿ ಅವನಿಗೆ ಗಾಬರಿಯಾಯಿತು. ಹೆಂಗಸರು ಮನೆಯೊಳಗೆ ಮಕ್ಕಳನ್ನು ಅಟ್ಟಿಕೊಂಡು ಹೋಗಿ ಹೊಡೆಯುತ್ತಿದ್ದರು.
ನಿಂತಿದ್ದ ಜನರನ್ನೂ, ಅಳುವ ಮಕ್ಕಳನ್ನೂ ನಿರ್ಲಕ್ಷಿಸಿ ಸತೀಶ ಕಾರನ್ನು ಜೋರಾಗಿ ಬಿಟ್ಟ. ಕಾರಿನಲ್ಲೂ ವಾಸನೆ ತುಂಬಿದ್ದರಿಂದ ಅವನಿಗೆ ಗಾಳಿ ಬೇಕಿತ್ತು.
ಡ್ರಾಯಿಂಗ್ ರೂಮಿನಲ್ಲಿ ನಿಂತ ಸತೀಶನಿಗೆ ಇದ್ದಕ್ಕಿದ್ದಂತೆ ಇಬ್ಬರ ನಗು ಕೇಳಿಸಿತು. ರೇಖಾ ಮತ್ತು ಫ್ಲೈಟ್ ಲೆಫ್ಟಿನೆಂಟ್ ದಾಸ್‌ರದು. ಸತೀಶ ಬಂಗಲೆಯ ಪಶ್ಚಿಮಕ್ಕಿದ್ದ ಕೋಟೆಯಿಂದ ಸುತ್ತುವರಿದ ಬಾಲ್ಕನಿಗೆ ಹೋದ. ಮೈಗಂಟಿ ಕೊರೆದಿದ್ದ ವಾಸನೆಯಿಂದ ಅಸಹ್ಯವಾಗಿತ್ತು. ಆದರೂ ದಾಸ್‌ಗೆ ಹಲೋ ಎಂದು ಸ್ನಾನಕ್ಕೆ ಹೋಗುವುದೆಂದುಕೊಂಡ.
ಬಾಲ್ಕನಿಯನ್ನು ಸುತ್ತುವರೆದದ್ದು ಕೆಂಪಾದ ಬೆಣಚು ಕಲ್ಲಿನ ಕೋಟೆ. ಕೋಟೆಯ ಕಂಡಿಯಲ್ಲಿ ಈಗಲೂ ಕಪ್ಪಾಗಿ ಹೊಳೆಯುವ ತುಫಾಕಿಗಳು. ಆ ತುಫಾಕಿಗಳ ಬಾಯಿಗೆ ದೊಡ್ಡ ಕಂದಕ. ಕಂದಕದಾಚೆ ಬಟ್ಟಬಯಲು. ದೂರದಲ್ಲಿ ಅಲ್ಲೊಂದು ಇಲ್ಲೊಂದು ಹಳ್ಳಿ.
ಕೋಟೆ ಸುತ್ತ ರೇಖಾ ತರಹೇವಾರಿ ಕ್ಯಾಕ್ಟಸ್‌ಗಳನ್ನು ಬೆಳೆಸಿದ್ದಳು. ನಾಜೂಕಾದ ಮಾತಿನ ಸೂಕ್ಷ್ಮ ಮನಸ್ಸಿನ ರೇಖಾ ಇಷ್ಟಪಡುವುದು ವಿಲಕ್ಷಣ ವಕ್ರಾಕಾರಗಳಲ್ಲಿ ಮಾಟವಾದ ಹೂಗಳನ್ನು. ಎಂದಿಗೋ ಒಮ್ಮೆ ಪಡೆಯುವ ಕ್ಯಾಕ್ಟಸ್‌ಗಳನ್ನು. ಇದರ ಸ್ವರೂಪಕ್ಕೆ. `ಎಷ್ಟು ಆಡಂಬರದ ಹೂವು- ಈ ಆಡಂಬರವೂ ಎಷ್ಟು ಕ್ಷಣಿಕ’ ಎಂದಿದ್ದ ಸತೀಶ್. “ನೋಡು ಈ ಕ್ಯಾಕ್ಟಸ್‌ಗಳು ಎಂಥ ಮಿತವ್ಯಯಿಗಳು! ಟೊಂಗೆಯಿಲ್ಲ. ತೊಟ್ಟಿಲ್ಲ. ಎಲೆಯಿಲ್ಲ. ಒಣಗುವುದಿಲ್ಲ. ಅರಳುವುದಿಲ್ಲ- ಪ್ರಾಯಶಃ ಈ ಊರಿನಂತೆಯೇ. ಆದರೆ ಹಠದಿಂದ ಉಳಿದೇ ಬಿಡುತ್ತವೆ. ಎಂದೋ ಒಮ್ಮೆ ಯಾರೂ ಊಹಿಸಲಾರದ ಹೂಗಳನ್ನು ಪಡೆಯುತ್ತವೆ” ಎಂದು ರೇಖಾ ಚೇಷ್ಟೆ ಮಾಡಿದ್ದಳು.
ಬಾಲ್ಕನಿಗೆ ಸತೀಶ ಬಂದದ್ದನ್ನು ಇಬ್ಬರೂ ಗಮನಿಸಲಿಲ್ಲ- ಅಷ್ಟೊಂದು ತನ್ಮಯರಾಗಿದ್ದರು. ರೇಖಾನ ಕಣ್ಣುಗಳು ಬಯಲಿನ ಕಡೆ ತಿರುಗಿದ್ದವು. ಮಡಿಸಿದ ಕೈಗಳನ್ನು ತೊಡೆಯ ಮೇಲಿಟ್ಟು ನಿಶ್ಚಲಳಾಗಿ ಕೂತಿದ್ದಳು. ಸ್ವಲ್ಪ ಹಿಂದೆ ಅವಳಲ್ಲೆದ್ದ ನಗುವಿನ ಅಲೆಗಳು ಈಗ ಸೂಕ್ಷ್ಮ ಕಂಪನಗಳ ಸುಖವನ್ನು ಅವಳಿಗೆ ಕೊಡುತ್ತಿರಬಹುದು. ಸದಾ ಎಚ್ಚರದ ಭಂಗಿಗಳಲ್ಲಿ ಕೂರುವ. ಚಲಿಸುವ. ಸಣ್ಣದಾಗಿ ಕತ್ತರಿಸಿದ ಕೂದಲು ವಾರೆ ಮಾಡಿದ ಅವಳ ಕೆನ್ನೆಯ ಮೇಲೆ ಬಿದ್ದು ದೆಹಲಿಯ ಚಳಿಗಾಲದ ಬಿಸಿಲಿನಲ್ಲಿ ಹತ್ತು ವರ್ಷದ ಹಿಂದೆ ಮನೆಯೆದುರು ತೋಟದಲ್ಲಿ ತನಗಾಗಿ ಅವಳು ಆಸೆಯಿಂದ ಕಾದಿರುತ್ತಿದ್ದ ಚಿತ್ರವನ್ನು ನೆನಪು ಮಾಡಿಕೊಟ್ಟಿತು. ನಾಚಿಕೆಯಿಂದ ಗುಳಿಬೀಳುವ ದಾಸ್‌ನ ಮುಖದಲ್ಲಿ ಬಾಲಿಶವೆನ್ನಿಸುತ್ತಿದ್ದ ತುಟಿ ಗಲ್ಲಗಳು ಇನ್ನಷ್ಟು ಹುಡುಗು ಹುಡುಗಾಗಿ ಕಂಡವು. ಕುಡಿಯುತ್ತಿದ್ದ ವ್ಹಿಸ್ಕಿಯಿಂದಾಗಿ ಅವನ ಕೆನ್ನೆಗಳು ಕೆಂಪಾಗಿದ್ದವು.
ನಡುವೆ ಟೇಬಲಿನ ಮೇಲೆ ಘಮಘಮಿಸುವ ದೊಡ್ಡ ಕೇಕ್ ಇತ್ತು. ಅದರ ಮೇಲೆ ಇನ್ನೂ ಹಚ್ಚದ ಮುಂಬತ್ತಿಗಳಿದ್ದವು.
ಇವತ್ತು ರೇಖಾಳ ಹುಟ್ಟಿದ ದಿನವೆಂದು ಥಟ್ಟನೆ ಸತೀಶನಿಗೆ ಹೊಳೆಯಿತು. ನೆನಪು ಮಾಡಿ ದಾಸ್ ಬೆಂಗಳೂರಿನಿಂದ ಕೇಕ್ ತಂದಿದ್ದಾನೆ. ಅದನ್ನು ಕತ್ತರಿಸಲು ಇಬ್ಬರೂ ತನಗಾಗಿ ಕಾದಿದ್ದಾರೆ. ರೂಮಿನಲ್ಲಿ ರಾಹುಲ ಹೋಂವರ್ಕ್ ಮಾಡುತ್ತಲೋ ಆಡುತ್ತಲೋ ಕೇಕ್ ಕತ್ತರಿಸುವ ಸಮಯಕ್ಕಾಗಿ ನಿದ್ದೆ ಮಾಡದೆ ಕಾದಿದ್ದಾನೆ.
ಮೊದಲು ತನ್ನನ್ನು ಗಮನಿಸಿದ ದಾಸ್ ಎದ್ದು ನಿಂತು ಕೈನೀಡಿದ. ರೇಖಾ ಎದ್ದು ತಾನು ನಿಂತಲ್ಲಿಗೆ ಓಡಿಬಂದಳು. ತನ್ನ ಹೆಗಲ ಮೇಲೆ ಎರಡು ಕೈಗಳನ್ನು ಇಟ್ಟಳು. ತೊಳೆದು ಶುಭ್ರವಾಗಿದ್ದ ಅವಳ ಮೈ ಕೂದಲುಗಳು ತನ್ನನ್ನು ಮುಟ್ಟಿರುವುದರಿಂದ ಸತೀಶನಿಗೆ ಮುಜುಗರವಾಯಿತು.
“ನನಗೂ ಇವತ್ತು ನನ್ನ ಹುಟ್ಟಿದ ದಿನವೆಂಬುದು ಮರೆತೇ ಹೋಗಿತ್ತು. ಕೆಟ್ಟ ಹುಡುಗ ನೀನೂ ಮರೆತುಬಿಟ್ಟಿ”-ರೇಖಾ ನಗುತ್ತ ಹೇಳಿದಳು. ಬರಗಾಲದಲ್ಲೂ ಬೆಂಗಳೂರಿನಿಂದ ಕೇಕ್ ತರುವ ದಾಸ್‌ನ ಮೂರ್ಖತನದ ಬಗ್ಗೆ ಹಾಸ್ಯ ಮಾಡಿದಳು. ತನ್ನ ಬಾಸ್‌ನ ಶೂರ್ಪನಖಿ ಹೆಂಡತಿಗೂ ಇದಕ್ಕೂ ಅಗಲವಾದ ಕೇಕ್ ತಂದುಕೊಟ್ಟೆ ಎಂದು ದಾಸ್ ಜೋರಾಗಿ ನಕ್ಕ. ಅವನ ಆರೋಗ್ಯಕರವಾದ ಮುಖದಲ್ಲಿ ಅಂದವಾದ ಹಲ್ಲುಗಳು ಮಿನುಗಿದವು.
“ಕಾದಿರಿ. ನಾನು ಬೇಗ ಮೈ ತೊಳೆದು ಬರುತ್ತೇನೆ” ಎಂದು ಸತೀಶ ಬಚ್ಚಲಿಗೆ ಹೋದ. ಇಡೀ ಕಾಳಮ್ಮನ ಬೀದಿಯಲ್ಲಿದ್ದುದಕ್ಕಿಂತ ನಾಲ್ಕರಷ್ಟು ನೀರು-ಒಂದು ದೊಡ್ಡ ಬೋಗುಣಿ ನೀರು-ಬಚ್ಚಲಲ್ಲಿ ಇತ್ತು. ತಣ್ಣನೆಯ ನೀರನ್ನು ಹಾಳಾಗದಂತೆ ಹೊರಗೆ ಹರಿಸಿ ರೇಖಾ ಈ ಬೆಂಗಾಡಲ್ಲೂ ಒಂದು ಪುಟ್ಟ ಹಸಿರಾದ ಲಾನ್ ಪೋಷಿಸಿದ್ದಳು.
ರೇಖಾಳೇ ಸ್ವತಃ ಇಸ್ತಿ ಮಾಡಿಟ್ಟಿದ್ದ ಬಿಳಿ ಜುಬ್ಬ ಪೈಜಾಮ ಧರಿಸಿ ರಾಹುಲನ ಕೋಣೆಗೆ ಹೋದ. ಹೋಂವರ್ಕ್ ಮಾಡುತ್ತಿದ್ದ ಎಂಟು ವರ್ಷದ ರಾಹುಲ ತಂದೆಯನ್ನು ಕಂಡು ಗೆಲುವಾಗಿ ಓಡಿಬಂದ. ರಾಹುಲನಿಗೆ ತನ್ನ ಒರಟಾದ ಗುಂಗುರು ಕೂದಲು. ಆದರೆ ತಾಯಿಯ ಕಣ್ಣು. ಮೂಗು. ಮದುವೆಗೆ ಎರಡು ತಿಂಗಳು ಮುಂಚೆಯೇ ಪ್ರೇಮದ ಉತ್ಕಟತೆಯಲ್ಲಿ ಅಂಕುರಿಸಿದವ. ತಾನು ಗೆಲುವಾಗಿದ್ದೇನೆಂದು ರೇಖಾಗೆ ತೋರಿಸಲು ಅವನನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆನೆಯಂತೆ ನಟಿಸುತ್ತ ಸತೀಶ ಬಾಲ್ಕನಿಗೆ ಹೋದ.
“ನನ್ನ ಬರ್ತ್‌ಡೇ ಮರೆತದ್ದಕ್ಕೆ ಪ್ರಾಯಶ್ಚಿತ್ತವಾಗಿ ಇವತ್ತು ಕೇಕ್ ತಿನ್ನಬೇಕು.”ಎಂದಳು ರೇಖಾ.
“ಹಾಗೆಯೇ ಈ ವ್ಹಿಸ್ಕಿ ಕುಡಿಯಬೇಕು” ಎಂದು ಸ್ಕಾಚ್ ಬಾಟಲನ್ನು ದಾಸ್ ಕೊಟ್ಟ.
“ಬರಗಾಲ ಶುರುವಾದಾಗಿನಿಂದ ಸತೀಶ ಕುಡಿಯಲ್ಲ: ರಾತ್ರೆ ಊಟ ಮಾಡಲ್ಲ” ಎಂದು ತನ್ನ ಗಂಡನನ್ನು ಮೆಚ್ಚಿಗೆಯಿಂದ ರೇಖಾ ಹೊಗಳಿದಳು.
ಕೇಕನ್ನು ತಾನು ಕತ್ತರಿಸಬೇಕೆಂದು ರಾಹುಲ ಹಠ ಹಿಡಿದ. ಇಪ್ಪತ್ತಮೂರು ಪುಟಾಣಿ ಮುಂಬತ್ತಿಗಳನ್ನು ದಾಸ್ ಹಚ್ಚಿದ. ಇಪ್ಪತ್ತೇಳು ಇರಬೇಕಿತ್ತೆಂದು ರೇಖಾ ನಾಚುತ್ತಾ ಹೇಳಿದಳು. ಮೂರು ಬಾರಿ ಊದಿ ಅವನ್ನು ನಂದಿಸಿದಳು.
`ಟ್ರಂಕಾಲ್ ಬಂದಿದೆ. ಬೆಂಗಳೂರಿಂದ’ ಎಂದು ಪ್ಯೂನ್ ಹೇಳಿದ.
`ಎಕ್ಸ್‌ಕ್ಯೂಸ್‌ಮಿ’ ಎಂದು ಸತೀಶ ಎದ್ದು ಹೋದ. ಭೀಮೋಜಿ ಊಹಿಸಿದಂತೆ ಮಂತ್ರಿಗಳದೇ ಟ್ರಂಕಾಲ್ ಇರಬೇಕು. ತನ್ನನ್ನು ಜಿಲ್ಲಾಧಿಕಾರಿ ಮಾಡಿದ್ದ ತಾನು ಬೆಳೆದ ಆವರಣ, ವಿದ್ಯಾಭ್ಯಾಸ, ಆದರ್ಶಗಳು- ಇವುಗಳಲ್ಲೆ ಏನಾದರೂ ದೋಷವಿದ್ದಿರಬಹುದೆ ಎಂದು ಸತೀಶ ಈ ಹಿಂದೆ ತನ್ನನ್ನೇ ಪ್ರಶ್ನಿಸಿಕೊಂಡಿಲ್ಲವೆಂದಲ್ಲವೆಂದಲ್ಲ. ಆದರೆ ಅವನ ಭಾವ ಜಯನ್‌ನ ಥೀಸಿಸ್ ಪ್ರಕಾರ ಕಮಿಟೆಡ್ ಜನ ಎಲ್ಲ ರಂಗಗಳನ್ನೂ ಪ್ರವೇಶಿಸಿ ಮಾಡಬಹುದಾದ್ದು ಬಹಳವಿತ್ತು. ಬುದ್ಧಿಜೀವಿಗಳ ಸೆನ್ಸಿಟಿವಿಟಿ ಒಂದು ರೀತಿಯ ಮಡಿವಂತಿಕೆಯೆಂದೂ. ಕೈ ಕೊಳೆಯಾಗದಂತೆ ಬದುಕಬೇಕೆನ್ನುವುದು ಪುಕ್ಕಲುತನವೆಂದೂ ಆತ ಹಾಸ್ಯ ಮಾಡುತ್ತಿದ್ದ. `ಕ್ರಾಂತಿಯನ್ನು ಹೊತ್ತು ಹೆರುವವರು. ಈ ದೇಶದ ಸಾಮಾನ್ಯ ಜನ, ನಾನು ನೀನು ಸೂಲಗಿತ್ತಿಯರು-ಅಷ್ಟೆ’ ಎಂಬ ಜಯನ್‌ನ ವಾದ, ಸತೀಶನ ಜೀವನ ಕ್ರಮಕ್ಕೆ ಅವನ ಎಲ್ಲ ಅನುಮಾನಗಳನ್ನೂ ಮೀರಿದ `ಜಸ್ಟಿಫಿಕೇಶನ್ನ’ನ್ನು ಕೊಟ್ಟಿತ್ತು. ಆದರೆ ಇವತ್ತು ಯಾಕೆ ತನಗೆ ಹಠಾತ್ತನೆ ಬರಡಾದಂತೆ ಅನ್ನಿಸುತ್ತಿದೆ ಎಂಬುದು ತಿಳಿಯದೆ ಸತೀಶ ಫೋನ್ ಎತ್ತಿಕೊಂಡ.
“ಮಾನ್ಯ ಮಂತ್ರಿ ರುದ್ರಪ್ಪನವರು ಮಾತಾಡ್ತಾರೆ” ಎಂದು ಮಂತ್ರಿಯ ಪಿ.ಎ. ಹೇಳಿದ. ಸತೀಶ ಕಾದ.
“ಹಲೋ ಮಿಸ್ಟರ್ ಸತೀಶ್ ಹೇಗಿದ್ದೀರ? ನಿಮ್ಮ ರಿಪೋರ್ಟ್‌ಗಳೆಲ್ಲ ಬಂದಿವೆ.”
ಸತೀಶ ಮುಂದಿನದಕ್ಕೆ ಕಾದ. ಮಂತ್ರಿಗಳ ಮಾತಿನ ರೀತಿಯಲ್ಲಿ ಸ್ನೇಹವಿತ್ತು.
“ಏನಿಲ್ಲ-ಮುಂದಿನ ಸೋಮವಾರ ನೀವು ಸೂಚಿಸಿದ ಹಾಗೇ ಇನ್ನೆರಡು ಗಂಜಿ ಕೇಂದ್ರಗಳನ್ನು ಪ್ರಾರಂಭಿಸೋಣ…”
“ಅದೆಲ್ಲ ಸಾಲದು ಸಾರ್. ಈ ಜಿಲ್ಲೇನ ಕ್ಷಾಮ ಪ್ರದೇಶಾಂತ ಡಿಕ್ಲೇರ್ ಮಾಡಬೇಕು.” ಸತೀಶ ಒತ್ತಾಯದಿಂದ ಹೇಳಿದ.
“ಹೌದು ಮಾಡಬೇಕು. ಮಾಡತೀವಿ. ಈ ಗಂಜಿಕೇಂದ್ರಗಳನ್ನು ನಾನೇ ಇನಾಗುರೇಟ್ ಮಾಡ್ತೀನಿ. ನಿಮ್ಮ ಜೊತೆ ಖುದ್ದಾಗಿ ಜಿಲ್ಲೇನ ಟೂರ್ ಮಾಡೋಣಾಂತ ಇದೀನಿ. ಹಾಗೇನೆ ನನ್ನ ಸ್ನೇಹಿತರೊಬ್ಬರಿದ್ದಾರೆ ಅಲ್ಲಿ- ಗಂಗಾಧರಸ್ವಾಮಿ ಅಂತ…”
“ಅವರ ಗುಡಾಣಾನ್ನ ರೈಡ್ ಮಾಡಿಸಬೇಕಾಯ್ತು ಸಾರ್.”
“ಏನಾದರೂ ಪತ್ತೆಯಾಯ್ತೆ?”
“ನಾನೊಂದು ತಪ್ಪು ಮಾಡಿದೆ. ನಾನೇ ಖುದ್ದಾಗಿ ಹೋಗಿ ರೈಡ್ ಮಾಡಿಸಬೇಕಿತ್ತು.”
“ಮಾಡಿಸಬೇಕಿತ್ತು ಮತ್ತೆ? ಅದ್ಯಾಕೆ ಹಾಗೆ ಮಾಡಿದಿರಿ? ನಿಮ್ಮ ಅನುಮಾನಾನೂ ಪರಿಹಾರ ಆಗ್ತಿತ್ತು. ಗಂಗಾಧರಸ್ವಾಮಿ ತುಂಬಾ ಪ್ರಾಮಾಣಿಕರು. ಜಿಲ್ಲೇಗೆ ತುಂಬಾ ಒಳ್ಳೇದು ಮಾಡಿದಾರೆ. ಈಗ ಭೂದಾನ ಮಾಡೋಕೆ ಮುಂದಾಗಿದಾರೆ. ಅವರಿಗಾಗದ ರಾಜಕೀಯ ಜನ ಸುಮ್ಮನೇ ಅಪಪ್ರಚಾರ ಮಾಡ್ತಾರೆ. ರೈಡ್ ಮಾಡ್ಸಿದ್ದು ಒಳ್ಳೇದೇ ಆಯ್ತು ಅನ್ನಿ. ಅವರ ಕ್ಯಾರೆಕ್ಟರನ್ನ ಕ್ಲಿಯರ್ ಮಾಡಿದ ಹಾಗಾಯ್ತು.” ಗಿಣೀಗೆ ಹೇಳಿದಂತೆ ರಾಗವಾದ ಮಾತಿನಲ್ಲಿ ರುದ್ರಪ್ಪ ಮಾತಾಡಿದ.
“ನನಗಿನ್ನೂ ಅನುಮಾನ ಇದೆ ಸಾರ್. ಬರಗಾಲದಲ್ಲಿ ಜನ ಡಿಮಾರಲೈಸ್ ಆಗಬಹುದು. ತಮ್ಮ ಎಸ್.ಪಿ. ಇದ್ದಾರಲ್ಲ-ಲಮಿಸ್ಟರ್ ನಾಗರಾಜ್- ಅವರನ್ನ ಇಲ್ಲಿಂದ ವರ್ಗ ಮಾಡಬೇಕೂಂತ ನಾನು ಕಾನ್‌ಫಿಡೆನ್ಯಿಯಲ್ ಆಗಿ ನಿಮಗೆ ಬರೆದಿದೀನಿ…”
“ಬರೆದಿದೀರ? ಆಲ್ ರೈಟ್. ಆತನಿಗೂ ಪ್ರಮೋಶನ್ ಡ್ಯೂ. ಯಾಕೆ? ಆತ ಒಳ್ಳೇ ಮನುಷ್ಯನಲ್ಲ? ತುಂಬ ಎಫಿಶಿಯಂಟ್ ಫೆಲೋ. ಬೇಕಾದಷ್ಟು ಪೋಲೀಸ್ ಪದಕಗಳನ್ನ ತಗೊಂಡಿದಾನೆ. ಅಯ್ಯೋ ನಮ್ಮ ಜಿಲ್ಲೇ ಜನ ತುಂಬ ಚಾಡಿಕೋರರು. ನೀವಿನ್ನೂ ಚಿಕ್ಕವರು. ಕಿವಿಮೇಲೆ ಕಾಕ್ಕೋಬಾರದು…” ಮತ್ತದೇ ಸ್ನೇಹದ ರಾಗದಲ್ಲಿ ಹಿರಿಯನಂತೆ ರುದ್ರಪ್ಪ ಮಾತಾಡಿದ.
“ಜಿಲ್ಲೆ ಸುಚಿಯೇಶನ್ ತುಂಬ ಬಿಗಡಾಯಿಸಿದೆ ಸಾರ್. ನನ್ನ ಕೈಗಳನ್ನ ತಾವೀಗ ಗಟ್ಟಿ ಮಾಡಬೇಕು.”
“ಛೆ ಛೆ ಅಲ್ವೆ ಮತ್ತೆ? ನಮ್ಮ ಡಿ.ಸಿ. ಗಳು ಈ ಸರ್ಕಾರದ ಆಧಾರಸ್ತಂಭಗಳು. ನಾವೇನಿದ್ದರೂ ಪಾಲಿಸಿ ಮೇಕರ್ಸ್. ನೀವು ಎಕ್ಸಿಕ್ಯೂಟರ್ಸ್. ಅಂದ ಹಾಗೆ ಅವತ್ತು ಗಂಜಿಕೇಂದ್ರ ತೆರೆಯೋ ಫಂಕ್ಷನ್ನನ್ನ ನಾನು ಇನಾಗುರೇಟ್ ಮಾಡ್ತೀನಿ. ಗಂಗಾಧರಸ್ವಾಮಿ ಪ್ರಿಸೈಡ್ ಮಾಡ್ತಾರೆ. ಅವತ್ತೆ ಇನ್ನಷ್ಟು ಭೂದಾನಾನ್ನ ಅನೌನ್ಸ್ ಕೂಡ ಮಾಡಿಸಬಹುದು… ನಾನಿನ್ನು ಬರಲಾ ಮಿಸ್ಟರ್ ಸತೀಶ್?”
ಸತೀಶ ಫೋನನ್ನ ಕೆಳಗಿಟ್ಟು ಗಾಜು ಹಾಕಿದ ವಿಶಾಲವಾದ ಮೇಜಿನ ಮೇಲೆ ಕೈಯೂರಿ ನಿಂತ. ಮೇಜಿನ ಮೇಲೆ, ಕಪಾಟಿನಲ್ಲಿ ಫೈಲುಗಳು. ಬೆನ್ನಿನ ಹಿಂದೆ ಅಮೃತಶಿಲೆಯ ಕಮಾನಿನ ಅನುಕರಣ. ಈ ಆವರಣಕ್ಕೆ ಅಸಂಬದ್ಧವಾಗಿದ್ದರೂ ಸತೀಶನಿಗೆ ಪ್ರಿಯವೆಂದು ರೇಖಾ ತೂಗುಹಾಕಿದ್ದ ವ್ಯಾನ್‌ಗಾಕ್‌ನ ಉರಿಯುತ್ತಿರುವ ಮುಖ. ಸತೀಶನಿಗೆ ಅನ್ನಿಸಿತು: ಇಂಥ ಸೋಲನ್ನೆಲ್ಲ ಸೂಕ್ಷ್ಮವಾಗಿ ಅನುಭವಿಸೋದು. ಸೆನ್ಸಿಟಿವ್ ಆಗಿ ವಿಶ್ಲೇಷಿಸೋದು ಕೂಡ ಬೆಲೆಯುಳ್ಳ ಮೌಲ್ಯ ಅಂತ ಈವರೆಗೆ ತಿಳಿದದ್ದು ಆತ್ಮ ವಂಚನೆ.
ತಾನು ರಿಸೈನ್ ಮಾಡುವುದೇ ಸರಿ. ಆದರೆ ಈ ನಿಶ್ಚಯ ಕೂಡ ಗಟ್ಟಿಯಾಗಿ ಉಳಿಯಲಿಕ್ಕಿಲ್ಲವೆಂದು ಅಂಜುತ್ತ ಬಾಲ್ಕನಿಯಲ್ಲಿ ಬಂದು ನಿಂತ. ರೇಖಾಳ ಸಹಾನುಭೂತಿಯ ಪ್ರಶ್ನಾರ್ಥಕ ಮುಖ, ದಾಸ್‌ನ ಸ್ನೇಹಪರ ಕಾತರ ಸತೀಶನಿಗೆ ಮರುಭೂಮಿಗಳಂತೆ ಕಂಡವು. ಕಂದಕದಾಚೆ ಬಯಲಿನ ಮೇಲೆ ಚಂದ್ರನ ಬೆಳಕು ಬಿದ್ದಿತ್ತು. ಏನನ್ನು ರಕ್ಷಿಸಲೆಂದು ಈ ಕೋಟೆ ಕಟ್ಟಿದರೋ? ದುರ್ಬಲ ಕಾಲುಗಳಿಂದ ಈ ನೆಲವನ್ನು ತುಳಿಯುತ್ತ ಜನ ಇಲ್ಲಿ ಯಾಕೆ ಬದುಕುವರೋ? ಪ್ರೇಮಕ್ಕಾಗಿ ಹಂಬಲಿಸುವ ರೇಖಾಳ ಜೊತೆ ತಾನಿಲ್ಲಿ ಸಾಧಿಸಬೇಕೆಂದುಕೊಂಡಿದ್ದಾದರೂ ಏನನ್ನು?
*
*
*
ಆದರೆ ರೇಖಾಳ ಪ್ರಕಾರ ಸತೀಶನಿಗೆ ಅನೇಕ ಸಾಧ್ಯತೆಗಳಿವೆ: ಡ್ಯಾಡಿಗೆ ಹೇಳಿ ಪ್ರೊಫೆಸರ್ ಆಗಬಹುದು. ಪುಸ್ತಕಗಳನ್ನು ಬರೆಯಬಹುದು. ಜನರಿಗಾಗಿ ಫೈಟ್ ಮಾಡುವ ಜರ್ನಲ್ ಮಾಡಬಹುದು. ತಾನು ಬಟ್ಟೆಗಳನ್ನು ಡಿಸೈನ್ ಮಾಡಿ ಸಂಪಾದಿಸಬಹುದು. ಹೊಸ ರೀತಿಯ ಪೈಂಟರ್‌ಗಳನ್ನು ಎನ್‌ಕರೇಜ್ ಮಾಡುವ ಗ್ಯಾಲರಿ ತೆರೆಯಬಹುದು. ದೆಹಲಿಗೆ ಹೋಗಿ ಮುಂದಿನದನ್ನು ನಿರ್ಧರಿಸಬಹುದೆಂದು ಸತೀಶನ ಕೈಯಲ್ಲಿ ರಜದ ಅರ್ಜಿ ಬರೆಸಿದಳು. ನಿನ್ನಂಥ ಸೆನ್ಸಿಟಿವ್ ಮನುಷ್ಯನಿಗೆ ಈ ಕೆಲಸ ಸರಿಯಲ್ಲವೆಂದಳು. ತನ್ನ ಬಂಗಲೆಯಲ್ಲೆಲ್ಲ. ಪ್ರಿಯವಾಗಿದ್ದ ತನ್ನ ಖಾಸಗಿ ಕೋಣೆಯಲ್ಲಿ ಅನ್ಯಮನಸ್ಕನಾಗಿ ನಿಂತು ರೇಖಾ ಹೀಳಿದ್ದಕ್ಕೆಲ್ಲ ಸತೀಶ ಹೂಗುಟ್ಟಿದ. ವಿದ್ಯಾರ್ಥಿ ದೆಸೆಯಿಂದ ತನಗೆ ಪ್ರಿಯವಾಗಿದ್ದ ಪಿಕಾಸೋನ ಗೆರ್ನಿಕಾವನ್ನು ಆ ರೂಮಿನಲ್ಲಿ ಅವನು ತೂಗು ಹಾಕಿದ್ದ. ಮುಂದುವರಿಯದೇ ಮುಕ್ಕಾಗಿದ್ದ ಅವನ ಆಸಕ್ತಿಗಳಾದ ಸಾಹಿತ್ಯ, ಅಂಥ್ರೋಪಾಲಜಿ, ತತ್ವಶಾಸ್ತದ ಪುಸ್ತಕಗಳು ಕಿಟಕಿಗಳ ಮೇಲೆ. ಕಪಾಟುಗಳ ಮೇಲೆ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಐ.ಎ.ಎಸ್.ಪಾಸುಮಾಡುವ ಮುಂಚೆ ಅವನ ಪ್ರಿಯ ಹಾಬಿಯಾಗಿದ್ದ ಕ್ಯಾಮರಾ ಬೀರುವಿನಲ್ಲಿತ್ತು. ಹಳೆಯ ಜಾಸ್ ರಿಕಾರ್ಡುಗಳ ರಾಶಿ ಮೂಲೆಯಲ್ಲಿತ್ತು. ಕಲಿಯಲು ಪ್ರಾರಂಭಿಸಿ ಬಿಟ್ಟಿದ್ದ ಕೊಳಲು ಅವುಗಳ ಮೇಲಿತ್ತು. ಕಸಗುಡಿಸುವವಳನ್ನೂ ಈ ರೂಂಗೆ ಸತೀಶ ಬಿಡಲ್ಲ. ಬಿಡುವಾದಾಗ ಕ್ಲೀನ್ ಮಾಡುವುದೆಂದು ಎರಡು ತಿಂಗಳುಗಳೇ ಕಳೆದಿರಬೇಕು. ನೆಲದ ಮೇಲೆ ಹಾಸಿಗೆ ಹಾಸಿ ಸುಖವಾದ ಒರಗು ದಿಂಬುಗಳನ್ನಿಟ್ಟ ರೂಮಿನ ಅಸ್ತವ್ಯಸ್ತ ಸೊಗಸು ಸತೀಶನಿಗೆ ಹಲವು ಸಾಧ್ಯತೆಗಳ ಕನಸಿನಲ್ಲೆ ಸುಖ ಕಾಣುತ್ತಿದ್ದ ಅವನ ವಿದ್ಯಾರ್ಥಿದೆಸೆಯ ದಿನಗಳನ್ನು ನೆನೆಪು ಮಾಡಿಕೊಟ್ಟಿತು.
ಆ ದಿನಗಳಲ್ಲಿ ಅವನ ಇನ್ನೊಂದು ಹಾಬಿಯಾಗಿದ್ದ ಕಲ್ಲು ಜೋಡಣೆಯ ಕಲೆಯನ್ನು ಈ ಜಿಲ್ಲೆಗೆ ಬಂದ ಮೇಲೆ ಅವನಿಗೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆಗ ಅವನು ಆರಿಸಿ ತರುತ್ತಿದ್ದ ಕಲ್ಲುಗಳಲ್ಲಿ ಹಲವು ಅವನ ಕುತೂಹಲಕಾರಿ ಜೋಡಣೆಯ ಮೂಲಕ ವಿವಿಧ ಆಕಾರಗಳನ್ನು ತಾಳಿ ಕಿಟಕಿಗಳ ಮೇಲೆಲ್ಲ ಇವೆ. ಆಗ ಆರಿಸಿದ್ದ ಇನ್ನೂ ಕೆಲವು ಕಲ್ಲುಗಳು ಮುಖಕ್ಕಾಗಿಯೋ, ಕೊಕ್ಕಿಗಾಗಿಯೋ, ಕಿರೀಟಕ್ಕಾಗಿಯೋ ಅಥವಾ ಹಾಗೆಂದು ಊಹಿಸಿದ್ದನ್ನೆ ಬದಲು ಮಾಡಿ ಇನ್ನು ಯಾವುದೋ ಅನೂಹ್ಯ ರೂಪ ಹೊಂದಬಲ್ಲ ಸಾಧ್ಯತೆ ಮಾತ್ರಗಳಾಗಿವೆಯೋ ತಮ್ಮ ಸ್ವರೂಪ ತುಂಬಿಕೊಳ್ಳಲು ಬೇರೆ ಕಲ್ಲುಗಳಿಗಾಗಿ ಯಾಚಿಸುತ್ತ ಕಾದಿವೆ. ಈ ಕೆಲಸ ಕೊಟ್ಟಷ್ಟು ಸುಖವನ್ನು ಬೇರೆ ಯಾವುದೂ ಸತೀಶನಿಗೆ ಕೊಟ್ಟಿಲ್ಲ.
ತಮ್ಮ ಸಾಧ್ಯತೆಗಳನ್ನು ಫಲಿಸಿಕೊಳ್ಳಲು ಈಚೆಗೆ ಸತೀಶನನ್ನು ಈ ಕಲ್ಲುಗಳು ಕಾಡುವುದಿಲ್ಲ. ದಾರಿಯಲ್ಲಿ ಬಿದ್ದ ಕಲ್ಲುಗಳನ್ನು ಆರಾಮದ ಕುತೂಹಲದಲ್ಲಿ ಗಮನಿಸುತ್ತ ಹೋಗಲು ಈಗ ಸತೀಶನಿಗೆ ಬಿಡುವೇ ಇಲ್ಲ. ಹಾಗೆ ನೋಡಿದರೆ ತಾನು ಆಕ್ಸ್‌ಫರ್ಡ್,ಆಮ್ಸ್ಟರ್‌ಡಾಮ್. ಹಾಂಕಾಂಗ್, ಕೊಯೊಟೋ, ದೆಹಲಿ ಹೀಗೆ ಹಲವಾರು ಊರುಗಳಿಂದ ಆಯ್ದು ತಂದ ಕಲ್ಲುಗಳನ್ನು ಅತ್ಯಾಶ್ಚರ್ಯಕರವಾದ ರೂಪಗಳಾಗಿ ಬೆಳೆಸಬಲ್ಲ ಕಲ್ಲುಗಳು ಈ ಪುರಾತನ ಊರಲ್ಲಿ ಅವನ ಕಣ್ಣಿಗೆ ಬಿದ್ದಿವೆ. ಆದರೆ ಅವನ್ನು ಎತ್ತಿಕೊಳ್ಳುವುದಾದರೂ ಹೇಗೆ? ಜನಾಬರು ಕಲ್ಲು ಆಯುವುದು ಕಂಡರೆ ಊರಿನ ಗಣ್ಯರು ಚೀಲಗಟ್ಟಲೆ ಕಲ್ಲನ್ನು ನಿನ್ನೆದುರು ತಂದು ಸುರಿದಾರು ಎಂದು ರೇಖಾ ಹಾಸ್ಯ ಮಾಡುತ್ತಾಳೆ.
ರೇಖಾ ಬೆಕ್ಕಿನಂತೆ ತನ್ನ ಮೈಯನ್ನು ಸತೀಶನಿಗೆ ಉಜ್ಜುತ್ತ, ಅವನಿಗೆ ಬೆನ್ನು ಮಾಡಿ ನಿಂತಳು. ರವಕೆಯ ಹುಕ್ಕುಗಳನ್ನು ಯಾಂತ್ರಿಕವಾಗಿ ಬಿಚ್ಚುತ್ತ ಸತೀಶ ತನ್ನ ಸುಮಾರು ಇಪ್ಪತ್ತು ವರ್ಷಗಳ ಮೇಲಿನ ಧೂಳು ಹಿಡಿದ ಕಲೆಗಾರಿಕೆಯನ್ನು ನೋಡಿದ:
ಹಿಂದೆ ಸತೀಶನಿಗೆ ಮುಖರಗೊಂಡ ಅವ್ಯಕ್ತಗಳೆಂದು ಅನ್ನಿಸಿದ್ದೆಲ್ಲ ಈಗ ತೀರಾ ಮೀಡಿಯೋಕರ್ ಎನ್ನಿಸಿತು. ಇಲ್ಲ- ಯಾವ ಬಯಲಲ್ಲೂ ತನು ಎಂದೂ ನಿಯಮರಹಿತನಾಗಿ ಕಂಡದ್ದಕ್ಕೆಲ್ಲ ಎಚ್ಚರಾಗಿ ಓಡಾಡಿದ್ದೇ ಇಲ್ಲ. ಹೆಗಲ ಮೇಲಿದ್ದ ಸತೀಶನ ಕೈಗಳನ್ನು ಅಮುಕಿ ರೇಖಾ ತಿರುಗಿದಳು. ಕಣ್ಣುಗಳನ್ನು ಅರ್ಧ ಮುಚ್ಚಿ ಸಂತೈಸುವಂತೆ ಅವನ ಕೆನ್ನೆ ಸವರಿದಳು:
“ಸತೀ-ನಿನ್ನ ನಾನು ಪ್ರೀತಿಸುತ್ತೇನೆ.”
ಸುಸ್ತಾದ ಗಂಡನನ್ನು ಸಂತೈಸಲು ಇದು ಮಿರಾಂಡಾ ಹೌಸ್‌ನಲ್ಲಿ ಕಲಿತ ಕಲೆ ಇರಬಹುದು ಎಂದು ರೇಖಾಳ ನಾಟಕೀಯವಾಗಿ ಅರೆಮುಚ್ಚಿದ ಕಣ್ಣು ನೋಡಿದ. ಆದರೆ ಅವಳ ಕಣ್ಣುಗಳಲ್ಲಿ ನೀರು ತುಳುಕುತ್ತಿತ್ತು.
`ಬಂದೆ’ ಎಂದು ಸತೀಶ ಬಾಲ್ಕನಿಗೆ ಹೋಗಿ ನಿಂತ. ಬೆಳದಿಂಗಳಲ್ಲಿ ಬಿಕೋ ಎನ್ನುವ ಮೌನದ ಬಯಲು. ಒಣಗಿದ ನೆಲ. ಒಣಗಿದ ಮರಗಳು. ಧೂಳಾಗುತ್ತಿದ್ದ ಸಾರವಿಲ್ಲದ ಬೆಣಚುಕಲ್ಲಿನ ಭೂಮಿ. ಗುಡಿಸಿಲುಗಳಲ್ಲಿ ಹಸಿದ ಹೊಟ್ಟೆಯಲ್ಲಿ ಮಲಗಿದ ಮಕ್ಕಳು. ಹೆಂಗಸರು. ನೇಗಿಲುಗಳನ್ನು ಅಡವಿಡುತ್ತಿದ್ದ ಹತಾಶ ರೈತರು. ಈ ನಡುವೆ ಈ ತನ್ನ ಹತಾಶೆ ಎಷ್ಟು ಕ್ಷುಲ್ಲಕವೆಂದು ಸತೀಶನಿಗೆ ಹೇಸಿಗೆಯಾಯಿತು. ಅರ್ಜಿಯನ್ನು ಹರಿದು ಹಾಕಬೇಕು. ತನ್ನ ಮಿತಿಯಲ್ಲಿ ಎಲ್ಲರಂತೇ ತಾನೂ ತನ್ನ ಕರ್ತವ್ಯ ಮಾಡುತ್ತ ಹೋಗುವುದೇ ಡೀಸೆಂಟ್. ತನ್ನ ಸ್ವಾಭಿಮಾನಕ್ಕೆ ಅಹಂಕಾರಕ್ಕೆ ಪೆಟ್ಟು ಬಿದ್ದಿದ್ದರಿಂದ ಇಷ್ಟೆಲ್ಲ ಬಡಿವಾರ ಮಾಡುತ್ತಿದ್ದೇನೆ- ಅಷ್ಟೆ. ಈ ಬಯಲಿನಿಂದ ಏನೋ ಒಂದು ಎದ್ದು ಬಂದು ತನ್ನ ಕಪಾಳಕ್ಕೆ ಫಟೀರನೆ ಹೊಡೆದಿದ್ದರೆ ಎಂದು ಆಸೆಯಾಯಿತು.
*
*
*
ಬೆಳಗಿನ ಜಾವವೇ ಅವನು ಬಂದಿದ್ದ. ಆಫೀಸಿನೊಳಗೆ ಅಂಜುತ್ತಂಜುತ್ತ ಬಂದವನು ಕೂರಿ ಎಂದರೂ ಕೂರದೆ ನಿಂತ. ಏನು ಬಂದದ್ದು ಎಂದರೆ ತಡವರಿಸುತ್ತ ಮಾತು ಪ್ರಾರಂಭಿಸಿದ. ದೊಡ್ಡದಾದ ಮೀಸೆ ಬಿಟ್ಟಿದ್ದ. ಹಣೆಯ ಮೇಲೆ ಕುಂಕುಮವಿಟ್ಟಿದ್ದ.
“ನಾನಾ ಸಾರ್- ನಾನೂ ಗೋರಕ್ಷಕ ದಳದ ಕಾರ್ಯದರ್ಶಿ. ನಮ್ಮ ಗುರುಗಳು ಬರಗಾಲದಿಂದ ಗೋವುಗಳನ್ನು ರಕ್ಷಿಸೋ ವ್ಯವಸ್ಥೆ ಮಾಡಿದಾರೆ. ಈ ಊರಲ್ಲೊಂದು ಗೋಶಾಲೆ ತೆರೀತಿದೇವೆ ಸಾರ್. ಗುರುಗಳು ಶುಕ್ರವಾರ ಪುರ ಪ್ರವೇಶ ಮಾಡುತ್ತಾರೆ. ಅವರನ್ನು ಸ್ವಾಗತಿಸುವ ರಿಸೆಪ್ಯನ್ ಕಮಿಟಿಗೆ ತಾವು ಚೇರ್‌ಮನ್ ಆಗಬೇಕು.”
ಯಾರು ಈ ಗುರು ಎಂದು ಸತೀಶ ಕೇಳಲಿಲ್ಲ.
“ಕೂರಿ. ಯಾಕೆ ನಿಂತುಕೊಂಡಿದೀರಿ? ನಿಮ್ಮ ಹೆಸರೇನು ತಿಳಿಯಲಿಲ್ಲ.”
ಒತ್ತಾಯ ಮಾಡಿದಮೇಲೆ ಅವನು ಕುರ್ಚಿಯ ಅಂಚಿನ ಮೇಲೆ ಕೂತ. ಶುಭ್ರವಾದ ಕಾಲರಿಲ್ಲದ ಬಿಳಿಯ ಅಂಗಿ ಹಾಕಿ ಕಚ್ಚೆಪಂಚೆ ತೊಟ್ಟಿದ್ದ.
“ನಾನಾ ಸಾರ್? ನಾನೊಂದು ವಾಚಂಗಡಿ ಇಟ್ಕೊಂಡಿದೀನಿ-ಹೊಟ್ಟೆಪಾಡಿಗೆ. ನನ್ನ ಹೆಸರು ಗೋವಿಂದಪ್ಪ.”
“ಗೋವಿಂದಪ್ಪನವರೇ ಕ್ಷಮಿಸಬೇಕು. ನಾವು ಮೊದಲು ರಕ್ಷಿಸಬೇಕಾದ್ದು ಸಾಯ್ತಾ ಇರೋ ಮನುಷ್ಯರನ್ನ ಅಲ್ಲವ? ಇರೋ ಮೇವನ್ನೆಲ್ಲ ತಿನ್ನುತ್ತಾ ಇದ್ದ ಗೊಡ್ಡು ದನಗಳು ಬದುಕಿ ಏನು ಪ್ರಯೋಜನ ಹೇಳಿ? ಅವೆಲ್ಲ ಸತ್ತರೆ ಒಳ್ಳೆ ತಳಿ ಅಭಿವೃದ್ಧಿ ಮಾಡಬಹುದು. ಹೀಗೆ ಹೇಳಿದೇಂತ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ನನ್ನನ್ನ ಕ್ಷಮಿಸಿ.”
ಗೋವಿಂದಪ್ಪನ ಮುಖದಲ್ಲಿ ಬದಲಾವಣೆಗಳಾದವು. ಅಂಜುತ್ತ ಮಾತು ಪ್ರಾರಂಭಿಸಿದವನು ಆವೇಶಿತನಾದ. ಮಾತಾಡುತ್ತ ಎದ್ದುನಿಲ್ಲುತ್ತಿದ್ದ. ಕೂರುತ್ತಿದ್ದ-ಆವೇಶದ ಲಯ ಹಿಡಿದು.
“ಸಾರ್. ನಿಮ್ಮ ಬಗ್ಗೆ ಇಡೀ ಜಿಲ್ಲೆಗೆ ಗೌರವ ಇದೆ. ಉಳ್ಳೂರಲ್ಲಿ ನಿಮ್ಮ ಪುಣ್ಯದಿಂದ ಒಂದು ಯಾತ್ರಾಸ್ಥಳವೇ ನಿರ್ಮಾಣವಾಯ್ತು. ಅಂತರಗಂಗೆ ಅಲ್ಲಿ ಆಕಾಶಕ್ಕೆ ಈಗಲೂ ಧುಮುಕುತ್ತಿದ್ದಾಳೆ. ಈ ದೇಶದ ಪುಣ್ಯಾನೂ ಸಾರ್ ಹೀಗೇ ಭೂಗತವಾಗಿ ಹರೀತ ಇದೆ. ನಿಮ್ಮ ನಂಬಿಕೇನೂ ಸಾರ್ ಹೀಗೇ ಭೂಗತವಾಗಿದೆ. ಒಳಗೆ ನೀವೂ ನಂಬ್ತೀರಿ: ಗೋಮಾತೇನ್ನ ಖಂಡಿತಾ ನಂಬ್ತೀರಿ. ಈ ನಂಬಿಕೇನಿಂದ್ಲೇ ಸಾರ್ ಈ ದೇಶ ಐದಾರು ಸಾವಿರ ವರ್ಷಗಳಿಂದ ಬದುಕಿ ಬಂದಿದೆ. ಅದಕ್ಕೆ ನಮ್ಮ ಧರ್ಮಾನ್ನ ಸನಾತನ ಅನ್ನೋದು. ನಮ್ಮ ಸಮಾಜ. ನಮ್ಮ ಧರ್ಮ. ನಮ್ಮ ಆರ್ಥಿಕ ವ್ಯವಸ್ಥೆ ಎಲ್ಲದರ ಅಡಿಪಾಯ ಸಾರ್-ಈ ಗೋಮಾತೆ. ಅವಳು ಗೊಬ್ಬರ ಕೊಡ್ತಾಳೆ. ಅವಳು ಹಾಲು ಕೊಡ್ತಾಳೆ. ಅವಳ ಮಕ್ಕಳು ಬಂಡಿ ಎಳೀತಾವೆ. ನೆಲ ಉಳತಾವೆ. ಸತ್ತ ಮೇಲೆ ಅವಳು ನಮ್ಮ ಕಾಲಡಿ ಚಪ್ಪಲಿಯಾಗ್ತಾಳೆ. ಗೋವುಗಳನ್ನೆಲ್ಲ ಕೊಂದು ನೀವೇನು ಟ್ರಾಕ್ಟರ್ ತರಿಸ್ತೀರ ಸಾರ್? ಆ ಅರಬ್ಬರ ಪೆಟ್ರೋಲನ್ನ ಈ ಬಡ ದೇಶ ಕೊಂಡು ಪೂರೈಸೋದು ಉಂಟಾ ಸಾರ್? ಟ್ರಾಕ್ಟರ್ ಗೊಬ್ಬರ ಹಾಕಲ್ಲ. ಈಯಲ್ಲ. ಹಾಲು ಕರಿಯಲ್ಲ-ಅಲ್ಲವೇ ಸಾರ್? ಇವಳ ಒಂದೊಂದು ರೋಮದಲ್ಲೂ ದೇವತೆಗಳು ಮನೆ ಮಾಡಿದಾರೆ- ಹೌದು ಮಾಡಿದಾರೆ-ಆ ನಂಬಿಕೆ ನಮ್ಮನ್ನ ಆರು ಸಾವಿರ ವರ್ಷ ಕಾಪಾಡಿದೆ.”
“ನೀವು ಯಾಕೆ ನಿಮ್ಮ ಒಳಗಿರೋದನ್ನ ಮುಚ್ಚಿಡುತ್ತೀರಿ ಸಾರ್? ದನ ಸತ್ತರೆ ಸಾಯಲಿ ಅಂತ ಇವತ್ತು ಅನ್ನೋರು ನಾಳೆ ಜನ ಸತ್ತರೆ ಸಾಯಲಿ ಅಂತ ಅನ್ನಲ್ಲಾಂತ ಏನಾದರೂ ಗ್ಯಾರಂಟಿ ಇದೆಯಾ ಸಾರ್? ಈ ನಮ್ಮ ಬಡಜನರೂ ಗೊಡ್ಡಲ್ಲವಾ ಸಾರ್? ಅವರೇನು ವಿದ್ಯಾವಂತರೇ ಬಲಿಷ್ಠರೆ? ದಷ್ಟಪುಷ್ಟ ಮಕ್ಕಳನ್ನು ಹುಟ್ಟಿಸಬಲ್ಲವರೇ ಇರೋ ಧಾನ್ಯಾನೆಲ್ಲ ತಿನ್ನೋ ಅವರು. ಅವರನ್ನೇಕೆ ನೀವು ಸಾಯೋಕೆ ಬಿಡಲ್ಲ ಸಾರ್. ನಾವಾದರೂ ಸಾಯ್ತೀವಿ. ಆದರೆ ಗೋವುಗಳನ್ನು ಸಾಯೋಕೆ ಮಾತ್ರ ಬಿಡಲ್ಲ ಅನ್ನೋ ದಿವ್ಯಾನ್ನ ಈ ದೇಶ ಒಪ್ಪಿಕೊಳ್ಳತ್ತೆ ಸಾರ್-ಅದಕ್ಕೇ ಇದು ಪುಣ್ಯಭೂಮಿ.”
“ಸಾರ್ ನೀವು ಅಂಜುತ್ತೀರಿ-ಅಷ್ಟೆ. ನಿಮ್ಮಲ್ಲಿರೋ ದೇವಿ ಮೂಕವಾಗಿದಾಳೆ. ಈ ಊರಲ್ಲಿರೋ ಮುಸ್ಲಿಮರು ಏನಂದುಕೋತಾರೋ ಅಂತ ನಿಮಗೆ ಅಂಜಿಕೆ. ನಮ್ಮ ಧರ್ಮಾನ್ನ ನಾವು ಎತ್ತಿ ಹಿಡಿದರೆ ಅವರೂ ಬದಲಾಗ್ತಾರೆ ಸಾರ್. ಹೀಗೇ ಬದಲಾಗಲಿ ಅಂತಲೇನೇ ದೇವರು ಅವರಿಗೆ ಇಲ್ಲಿ ಜನ್ಮ ಕೊಟ್ಟಿದ್ದಾನೆ. ನಗಬೇಡಿ ಸಾರ್. ನಾನು ಹೇಳೋದು ನಿಜ.”
“ದೇವರು ಈ ಭೂಮೀನ್ನ ಸೃಷ್ಟಿಸಿದ್ದು ಮನುಷ್ಯರಿಗೆ ಮಾತ್ರ ಅಲ್ಲ. ಮೃಗ, ಪಕ್ಷಿ, ದನ, ಹುಳು, ಹುಪ್ಪಟೆ, ಹಾವು- ಈ ಎಲ್ಲದಕ್ಕೂ ಇಲ್ಲಿ ಬದುಕುವುದಕ್ಕೆ ನಮಗಿರುವಷ್ಟೇ ಅಧಿಕಾರ ಇದೆ.”
“ಸಾರ್, ಹೋಗ್ತೀನಿ ಸಾರ್. ಮಾತು ಹೆಚ್ಚು ಮಾಡ್ದೇಂತ ಕೋಪಿಸಿಕೋಬೇಡಿ.”
ಗೋವಿಂದಪ್ಪ ಎದ್ದು ನಿಂತ. ಆವೇಶದಲ್ಲಿ ದೊಡ್ಡದಾಗಿ ತೆರೆದುಕೊಂಡಿದ್ದ ಅವನ ಕಣ್ಣುಗಳು ತೇವವಾಗಿ ಮಿನುಗುತ್ತಿದ್ದವು. ಗೋಮಾಂಸ ತಿನ್ನುವ ನಮ್ಮವರೇ ಆದ ಅಂತ್ಯಜರು ಈ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಇದ್ದಾರಲ್ಲವೇ? ಎಂದು ಸತೀಶ ಕೇಳಬೇಕೆಂದುಕೊಂಡು ಸುಮ್ಮನಾದ. ಗೋವಿಂದಪ್ಪ ಕೃಷ್ಣನ ಚಿತ್ರ ಅಚ್ಚು ಮಾಡಿದ ಕೈಚೀಲದಿಂದ ಕಂದುಬಣ್ಣದ ಮಣ್ಣಿನುಂಡೆಯೊಂದನ್ನು ಮೇಜಿನ ಮೇಲಿಟ್ಟು ಕೈಮುಗಿದ:
“ಇದು ಸಾರ್ ಮೃತ್ತಿಕೆ. ನಮ್ಮ ಗುರುಗಳ ವೃಂದಾವನದ್ದು. ಈ ಬರಗಾಲದ ನೆಲದ ಮಣ್ಣು-ಆದರೆ ನೂರಾರು ವರ್ಷಗಳಿಂದ ನಂಬಿದ ಜನರನ್ನು ಕಾಪಾಡಿದೆ. ಸಾವಿರಾರು ವರ್ಷಗಳಿಂದ ಅನ್ನ ಕೊಟ್ಟ ಈ ನೆಲಾನ್ನ ನಮ್ಮ ಗುರುಗಳು ತುಳಿದು ಮೃತ್ತಿಕೆ ಮಾಡಿದಾರೆ ಸಾರ್.”
ಗೋವಿಂದಪ್ಪ ಗಂಭೀರವಾಗಿ ಕೈಮುಗಿದು ಹೋದ.
*
*
*
ಕೆಲವು ದಿನಗಳ ನಂತರ ನಡೆದ ಒಂದು ಘಟನೆಯಿಂದ ರುದ್ರಪ್ಪ ರಾಜಿನಾಮೆ ಕೊಡಬೇಕಾಯಿತು. ಜಿಲ್ಲೆಯನ್ನು ಅಭಾವ ಪರಿಸ್ಥಿತಿಯ ಪ್ರದೇಶವೆಂದು ಸರ್ಕಾರ ಘೋಷಿಸಬೇಕಾಯಿತು. ಸತೀಶ ಮತ್ತೆ ಅಧ್ಯಾಪಕ ಕೆಲಸ ಹಿಡಿಯಬೇಕಾಯಿತು.
ಎಲ್ಲ ಸಣ್ಣದಾಗಿ ಶುರುವಾಗಿ ಕೆಲವು ಘಂಟೆಗಳಲ್ಲೆ ಮುಗಿದು ಹೋಯಿತು. ಸೂಕ್ಷ್ಮಗಳನ್ನೆಲ್ಲ ಸುಟ್ಟುಬಿಡುವ ಸೂರ್ಯ ಮೇಲೆ ಉರಿಯುತ್ತಿದ್ದ. ಭೀಮೋಜಿಯಿಂದ ಪ್ರೇರಿತವಾದ ಗುಂಪೊಂದು ಪೇಟೆಯ ಅಂಗಡಿಯೊಂದರ ಎದುರು ನಿಂತು ಒಂದು ಕಿಲೋ ಅಕ್ಕಿ ಅಥವಾ ಎರಡು ಕಿಲೋ ಜೋಳ ಬೇಡಿದರು. ಅಂಗಡಿಯ ವರ್ತಕ ತನ್ನಲ್ಲಿ ಧಾನ್ಯವೇ ಇಲ್ಲ ಎಂದ. ಗುಂಪು ಸೇರಿದ್ದ ಜನ ಅಂಗಡಿ ನುಗ್ಗಿ ಒಳಗಿನಿಂದ ಅಕ್ಕಿಯ ಚೀಲಗಳನ್ನು ಹೊರಗೆ ತಂದರು. ನಂತರ ಸಾಲಾಗಿ ನಿಂತರು. ಗುಂಪಿನಿಂದ ಒಬ್ಬ ತಕ್ಕಡಿ ಹಿಡಿದು ಒಬ್ಬೊಬ್ಬನಿಗೆ ಒಂದೊಂದು ಕಿಲೋ ಅಕ್ಕಿ, ಅಳೆದುಕೊಟ್ಟ. ಒಟ್ಟಾದ ದುಡ್ಡನ್ನೆಲ್ಲಾ ಅಂಗಡಿಯವನಿಗೇ ಕೊಟ್ಟ. ಅಲ್ಲಿ ಅಕ್ಕಿ ಮುಗಿದ ಮೇಲೆ ಇನ್ನಷ್ಟು ಜನ ಇನ್ನೊಂದು ಅಂಗಡಿಗೆ ಧಾಳಿಯಿಟ್ಟರು. ಮಾಲೀಕ ಬಾಗಿಲು ಹಾಕಿದ. ಜನ ಕಲ್ಲೆಸೆದು ಗುಲ್ಲೆಬ್ಬಿಸಿದ ಮೇಲೆ ಬಾಗಿಲು ತೆಗೆದ. ಅಲ್ಲೂ ಜನ ತಾವೇ ನಿಗದಿ ಮಾಡಿದ ಬೆಲೆಗೆ ಧಾನ್ಯವನ್ನು ಅಳೆದುಕೊಂಡು ಒಟ್ಟಾದ ಹಣವನ್ನು ಅಂಗಡಿ ಮಾಲೀಕನಿಗೆ ಒಪ್ಪಸಿದರು.
ಇದನ್ನೆಲ್ಲ ಪೋಲೀಸರು ಸುಮ್ಮನೆ ನೋಡುತ್ತ ನಿಂತರು. ಕೆಲವು ಪೋಲೀಸರು ಸೈಕಲ್ ಮೇಲೆ ತಮ್ಮ ಮನೆಗಳಿಗೆ ಹೋಗಿ ತಮ್ಮ ಹೆಂಗಸರು ಮಕ್ಕಳನ್ನು ದುಡ್ಡು, ಚೀಲ ಕೊಟ್ಟು ಕಳಿಸಿದರು. ಪೇಟೆ ತುಂಬ ಜನ ಹೀಗೆ ಗುಂಪು ಗುಂಪಾಗಿ ಪ್ರತಿ ಅಂಗಡಿಯನ್ನೂ ನುಗ್ಗಿ ಮುಚ್ಚಿಟ್ಟಿದ್ದನ್ನು ಬಲಾತ್ಕಾರವಾಗಿ ಹೊರಗೆ ತರಿಸಿ ವ್ಯಾಪಾರ ಮಾಡತೊಡಗಿದರು. ಅಂಗಡಿಯವನು ಸಹಕರಿಸದಿದ್ದರೆ ಮಾತ್ರ ಚೀಲಗಳಲ್ಲಿ ತುಂಬಿ ತಂದ ಕಲ್ಲುಗಳನ್ನು ಎಸೆಯುತ್ತಿದ್ದರು. ನಂತರ ಶಿಸ್ತಿನಿಂದ ಸಾಲಾಗಿ ನಿಂತು ತಮ್ಮ ಸರದಿಗೆ ಕಾಯುತ್ತಿದ್ದರು. ಈ ಸಾಲುಗಳಲ್ಲಿ ನಿಂತವರ ನಡುವೆ ಕಂಕುಳುಗಳಲ್ಲಿ ಡೊಳ್ಳು ಹೊಟ್ಟೆ ಬಡಕಲು ಕಾಲುಗಳ ಮಕ್ಕಳನ್ನು ಎತ್ತಿಕೊಂಡ ಎಂದೂ ಹೊರಬರದ ತಾಯಂದಿರೂ, ಘೋಷ ಹಾಕಿದ ಮುಸ್ಲಿಂ ಹೆಂಗಸರೂ ಇದ್ದರು.
ಪೇಟೆಯಲ್ಲಿ ದವಸಧಾನ್ಯ ಸಿಗುತ್ತಿದೆ ಎನ್ನುವ ಸುದ್ದಿ ಊರಲೆಲ್ಲ ಒಂದರ್ದ ತಾಸಿನಲ್ಲೆ ಹಬ್ಬಿತು. ಪೇಟೆಯಲ್ಲಿ ಜನ ಜಮಾಯಿಸತೊಡಗಿದ್ದರು. ಎಷ್ಟು ಬೇಕೋ ಅಷ್ಟು ಮಾತ್ರ ಹಿಂಸೆ-ಜೊತೆಗೇ ಶಿಸ್ತು ಮತ್ತು ಸಂಯಮ-ಯಾವ ಪೂರ್ವ ತಯಾರಿಕೆಯೂ ಇಲ್ಲದೆ, ಹೇಳಿಕೊಳ್ಳುವಂಥ ಯಾವ ನಾಯಕನೂ ಇಲ್ಲದೆ ಗುಂಪು ಅದ್ಭುತವಾಗಿ ಗೆಲ್ಲುತ್ತ ಹೋಯಿತು. ಅಲ್ಲಲ್ಲೆ ನಾಯಕರು ಸೃಷ್ಟಿಯಾದರು: ಅವರು ಕಲ್ಲನ್ನು ತೂರಿಸಿದರು; ನ್ಯಾಯಬೆಲೆಗೆ ದವಸ ಧಾನ್ಯಗಳನ್ನು ತೂಗಿಕೊಟ್ಟು ಒಟ್ಟಾದ ಹಣವನ್ನು ವರ್ತಕನಿಗೇ ಒಪ್ಪಿಸಿ ಮುಂದೆ ಹೋದರು.
ಗಂಗಾಧರಸ್ವಾಮಿ ಅಂಗಡಿ ಎದುರು ಮಾತ್ರ ಸ್ವಲ್ಪ ಹೆಚ್ಚು ಗಲಾಟೆಯೇ ಆಯಿತು. ಯಾಕೆಂದರೆ ಅವನು ತನ್ನ ಹಟೋಟಿಯಲ್ಲಿದ್ದ ಫ್ಯಾಕ್ಟರಿಗಳು, ಹೋಟೆಲುಗಳು ಇತ್ಯಾದಿ ಕಡೆಗಳಿಂದ ತನ್ನ ಸೇವಕರನ್ನೇ ಕರೆಸಿ. ಅವರಿಂದ ಕಲ್ಲು ತೂರಿಸಿಕೊಂಡು ಜೋಳ, ರಾಗಿ, ಅಕ್ಕಿಗಳನ್ನು ಅಳೆಸಿಕೊಟ್ಟು ನಂತರ ಹಿಂಬಾಗಿಲಿನಿಂದ ಅವನ್ನು ಪುನಃ ನೆಲಮಾಳಿಗೆಗಳಲ್ಲಿ ದಾಸ್ತಾನು ಮಾಡಿದ. ತನ್ನಲ್ಲೇನೂ ಉಳಿದಿಲ್ಲವೆಂದು ಮತ್ತೆ ಸೇರಿದ ಗುಂಪಿಗೆ ಹೇಳಿದ.
ಸ್ವತಃ ಭೀಮೋಜಿಯ ನಾಯಕತ್ವದಲ್ಲಿ ಬಂದ ಗುಂಪು ಇದನ್ನು ನಂಬಲಿಲ್ಲ. ಕಲ್ಲುಗಳ ತೂರಾಟ ಪ್ರಾರಂಭವಾಯಿತು. ತನ್ನ ಸೇವಕರಿಂದ ಜನರನ್ನು ಹೊಡೆಸಲು ಗಂಗಾಧರ ಸ್ವಾಮಿ ಪ್ರಾರಂಭ ಮಾಡಿದ. ನೋಡಿದವರಿಗೆ ಇದು ಗುಂಪಿನ ಅಂತಃಕಲಹದಂತೆ ಕಾಣುವಂತಿತ್ತು. ಗಂಗಾಧರಸ್ವಾಮಿ ಎಸ್.ಪಿ.ಯನ್ನು ಫೋನ್ ಮಾಡಿ ಕರೆಸಿ ಬೀಮೋಜಿಯನ್ನು ದಸ್ತಗಿರಿ ಮಾಡಿಸಿದ. ಕೋಪಗೊಂಡ ಜನರನ್ನು ಲಾಠಿಗಳಿಂದ ಬಿಗಿಸಿ ಚದರಿಸಿದ.
ಈ ಮಧ್ಯೆ ಆಫಿಸಿನಲ್ಲಿದ್ದ ಸತೀಶನಿಗೆ ಊರಿನಲ್ಲಿ ನಡೆಯುತ್ತಿದ್ದುದು ತಿಳಿಯಿತು. `ಜನರು ಶಿಸ್ತಿನಿಂದ ವರ್ತಿಸುತ್ತಿರುವುದರಿಂದ ಸರ್ಕಾರ ಯಾವ ಉಗ್ರಕ್ರಮವನ್ನೂ ತೆಗೆದುಕೊಳ್ಳಕೂಡದು. ಶಾಂತಿಭಂಗವಾಗದಂತೆ ನೋಡಿಕೊಂಡರೆ ಸಾಕು’ ಎಂದು ಎಸ್.ಪಿ.ಗೆ ಫೋನ್ ಮಾಡಿದ. ಎಸ್.ಪಿ ಒಪ್ಪಲಿಲ್ಲ.
“ಸಾರ್, ಈ ಊರು ನನಗೆ ಗೊತ್ತು. ಇದು ಇಷ್ಟಕ್ಕೇ ನಿಲ್ಲಲ್ಲ. ಫೈರಿಂಗ್ ಆರ್ಡರ್ ತಾವು ಕೊಡಿಸಬೇಕು.”
“ನೋ ಮಿಸ್ಟರ್ ನಾಗರಾಜ್.” ಸತೀಶ್ ಜಬರದಸ್ತಿನಿಂದ ಹೇಳಿದ. ತನ್ನ ವರ್ತನೆಯನ್ನು ಮೇಲಿನವರು ಒಪ್ಪದಿದ್ದಲ್ಲಿ ಕೆಲಸಕ್ಕೆ ರಾಜಿನಾಮೆ ಕೊಡುವುದೆಂದು ಸತೀಶ ತೀರ್ಮಾನ ಮಾಡಿದ್ದ.
ಆದರೆ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಯಿತು. `ರುದ್ರಪ್ಪನಿಗೆ ಧಿಕ್ಕಾರ’, `ಲಂಚಕೋರ ಎಸ್.ಪಿ.ಗೆ. ಧಿಕ್ಕಾರ’, `ಕಾಳಸಂತೆಕೋರರನ್ನು ಜೈಲಿಗೆ ಹಾಕಿ’ ಇತ್ಯಾದಿ ಕೂಗುತ್ತ ಇಡೀ ನಗರದಲ್ಲಿ ಎಲ್ಲೆಲ್ಲೂ ಸಿಡಿದು ನಿಂತ ಜನಗಳ ನಡುವೆ ಎಲ್ಲಿಂದಲೋ ಒಂದು ಸುದ್ದಿ ಹುಟ್ಟಿ ಕೆಲವು ನಿಮಿಷಗಳಲ್ಲೆ ಹರಡಿಬಿಟ್ಟಿತು. ಯಾವನೋ ಮುಸ್ಲಿಂ ವರ್ತಕ ತನ್ನ ಅಂಗಡಿಗೆ ಜನ ನುಗ್ಗಿದಾಗ ಬಂದೂಕು ತಗೊಂಡು ಆರೇಳು ಜನರನ್ನು ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದಾನೆ ಅಂತ.
ಜನರ ಕೋಪ ಇದರಿಂದ ಮುಸ್ಲಿಮರ ಮೇಲೆ ತಿರುಗಿತು. ಮುಸ್ಲಿಮರ ಗುಡಿಸಲುಗಳಿಗೆ ಬೆಂಕಿ ಹಾಕಿದರು. ಉಳಿದವರ ಜೊತೆ ತಾವೂ ಕೂಡಿ ದಂಗೆಯೆದ್ದಿದ್ದ ಬಡ ಮುಸ್ಲಿಮರು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದರು. ಯಾವುದೋ ಮಸೀದಿಯಲ್ಲಿ ಸಿಡಿಮದ್ದನ್ನು ದಾಸ್ತಾನು ಮಾಡಲಾಗಿದೆ ಎಂದು ಕೇಳಿ ಜನರು ಆವೇಶದಿಂದ ಮಸೀದಿಗಳ ಮೇಲೆ ಧಾಳಿಯಿಟ್ಟರು. ಮುಸ್ಲಿಂ ಸ್ಮಾರಕಗಳನ್ನು ನಾಶಪಡಿಸಲು ಶುರುಮಾಡಿದರು.
ಎಸ್.ಪಿ. ಜೀಪಿನಲ್ಲಿ ಬಂದು ಇಳಿದ:
“ಸರ್, ಫೈರಿಂಗ್ ಆರ್ಡರ್ ಕೊಡಿ.”
ಸಿದ್ದಪಡಿಸಿ ತಂದ ಆರ್ಡರನ್ನು ಸತೀಶನ ಎದುರು ಹಿಡಿದ.
“ನೋ. ಟಿಯರ್ ಗ್ಯಾಸ್ ಸೆಲ್‌ಗಳನ್ನು ಉಪಯೋಗಿಸಿ, ಲಾಠಿ ಚಾರ್ಜ್ ಮಾಡಿ, ಆದರೆ ಕೊಲ್ಲೋದು ಬೇಡ.”
“ಇದು ಮಕ್ಕಳ ಆಟವಲ್ಲ ಸಾರ್, ಕಮ್ಯುನಲ್ ಡಿಸ್ಟರ್‌ಬೆನ್ಸ್, ಸ್ಮಾರಕಗಳನ್ನು ನಾಶಮಾಡ್ತಿದಾರೆ” ಎಸ್.ಪಿ. ಕಠಿಣವಾಗಿ ಹೇಳಿದ.
“ಸ್ಮಾರಕಗಳು ಹಾಳಾಗಲಿ.”
ಸತೀಶ ಹಲ್ಲು ಕಚ್ಚಿ ಹೇಳಿದ.
ಆಗ ಸಮಯ ಸುಮಾರು ನಾಲ್ಕೂವರೆಯಾಗಿತ್ತು. ಸತೀಶನಿಗೆ ರಾಹುಲ ಸ್ಕೂಲು ಬಿಟ್ಟಾಗಿದೆ ಎಂದು ಇಷ್ಟರವರೆಗೆ ನೆನಪೇ ಆಗಿರಲಿಲ್ಲ. ಸೈಕಲ್ ರಿಕ್ಷಾದಲ್ಲಿ ರಾಹುಲನನ್ನು ಅವನು ನಿತ್ಯಸ್ಕೂಲಿಗೆ ಕಳಿಸಿ ತರಿಸುತ್ತಿದ್ದುದು. ರಿಕ್ಷಾದ ಚಾಲಕ ಮುಸ್ಲಿಂ. ರಾಹುಲನಿಗೆ ಕಿವಿ ಚುಚ್ಚಿಸಿರಲಿಲ್ಲ. ಉದ್ರಿಕ್ತ ಜನ ಅವರನ್ನು ಕೊಂದಾರು. ಫೈರಿಂಗ್ ಆರ್ಡರ್ ಕೊಟ್ಟರೂ ಫೈರಿಂಗ್‌ಗೆ ಸಿಕ್ಕಿ ಅವರು ಸತ್ತಾರು. ರೇಖಾಗೆ ಫೋನ್ ಮಾಡಿದ. ರಾಹುಲ ಇನ್ನೂ ಬಂದಿಲ್ಲವೆಂದು ಅವಳು ಅವಸರವಾಗಿ ಉಸಿರಾಡುತ್ತ ಹೇಳಿದಳು. “ಚಿಂತಿಸಬೇಡ. ನಾನೇ ಹೋಗಿ ನೋಡ್ತೇನೆ. ನೀನು, ಹೇಗಿದೀಯ” ಎಂದ. ರೇಖಾ ಉತ್ತರಿಸಲಿಲ್ಲ.
“ನೀನು ಒಳಗೇ ಇರು ರೇಖ. ಬಂದುಬಿಟ್ಟೆ” ಎಂದು ಎಸ್.ಪಿ ಕಡೆಗೆ ತಿರುಗಿ.
“ಹೋಗೋಣ ಬನ್ನಿ” ಎಂದ.
“ಹೋಗೋದು ಅಪಾಯ.”
“ನನ್ನ ಮಗನ್ನ ಸ್ಕೂಲಿನಿಂದ ಕರಕೊಂಡು ಬರಬೇಕು.” ಸತೀಶ ಮೃದುವಾಗಿ ಕೇಳಿದ.ಎಸ್. ಪಿ. ಅವಡುಕಚ್ಚಿ ಹೂ ಎಂದು ಸತೀಶನ ಜೊತೆ ಹೀಪಿನಲ್ಲಿ ಕೂತು ಜನಸಂದಣಿ ಇಲ್ಲದ ದಾರಿಗಳಲ್ಲಿ ಜೀಪನ್ನು ನಡೆಸುವಂತೆ ಡ್ರೈವರ್‌ಗೆ ಹೇಳಿದ. ಸ್ಕೂಲ್ ಮುಚ್ಚಿಯಾಗಿತ್ತು.ರಾಹುಲ ಮನೆಗೆ ಬರುವ ಹಾದಿಯಲ್ಲಿ ಜೀಪು ಓಡಿತು. ಜನರು ಹುಚ್ಚೆದ್ದು ಓಡುತ್ತಿದ್ದರು. ಸಿಕ್ಕ ಕಡೆ ಕಲ್ಲು ತೂರುತ್ತಿದ್ದರು. ಬೆಂಕಿ ಹಚ್ಚುತ್ತಿದ್ದರು. ನವಾಬರ ಬೀದಿಯನ್ನು ಜೀಪ್ ಅಂತೂ ಇಂತೂ ತಲ್ಪಿದಾಗ ಮುಸ್ಲಿಮರ ಮನೆಗಳು ಬೆಂಕಿ ಹೊತ್ತಿ ಉರಿಯುತ್ತಿರುವುದು ಸತೀಶನಿಗೆ ಕಾಣಿಸಿತು. “ಸರ್, ಫೈರಿಂಗ್ ಆರ್ಡರ್ ಕೊಡಿ.”
ಎಸ್.ಪಿ. ಶಾಂತವಾಗಿ ಹೇಳಿದ. ಅವನು ಬುದ್ಧಿವಾದ ಹೇಳುವಂತೆ ಮಾತಾಡಿದ್ದ. ಸತೀಶನಿಗೆ ಈ ಕ್ಷಣದಲ್ಲಿ ತನ್ನ ಭಾವನೆ ಏನು ಎಂಬುದೇ ಗೊತ್ತಾಗಲಿಲ್ಲ. ಫೈರಿಂಗ್ ಮಾಡಿದರೆ ರಾಹುಲ ಸಾಯಬಹುದು. ಮಾಡದಿದ್ದರೂ ಸಾಯಬಹುದು. ಮಾಡಿದರೆ ತನ್ನ ಆರ್ಡರ್‌ನಿಂದಲೇ ಅವನನ್ನು ಕೊಂದಂತೆ. ಮಾಡದಿದ್ದರೂ ಸಾಯಲು ಬಿಟ್ಟಂತೆ. ಮಾಡಿದರೆ ತಪ್ಪಿತಸ್ಥರಲ್ಲದ ಯಾರು ಯಾರೋ ಗುಂಡಿಗೆ ಸಿಕ್ಕಿ ಸಾಯಬಹುದು.
ಜನರ ಕಣ್ಣುಗಳಲ್ಲಿ ಅರ್ಥಹೀನವಾದ, ಕ್ರೂರವಾದ, ಇದ್ದಕ್ಕಿದ್ದಂತೆ ಅವರನ್ನೆ ಕಂಗಾಲುಗೊಳಿಸುವಂತೆ ಸ್ಪೋಟವಾದ ಹಿಂಸೆ ಉರಿಯುತ್ತಿತ್ತು. ಕ್ಷುಲ್ಲಕವಾಗಿದ್ದ ಕಾಲವನ್ನು ಬದಲಾಯಿಸಬಲ್ಲ ಬೆಂಕಿ ಈ ಜನರಷ್ಟೆ ಆರ್ತರಾದವರ ಗುಡಿಸಲುಗಳನ್ನು ಸುಡುತ್ತಿದ್ದುದನ್ನು ಸತೀಶ ದಿಗ್ಬ್ರಾಂತನಾಗಿ ನೋಡಿದ.
ಎಸ್.ಪಿ. ಸತೀಶನನ್ನು ದುರುಗುಟ್ಟಿ ನೋಡತೊಡಗಿದ. ಅವನ ಬಲಗೈ ಬೆಲ್ಟಿನಲ್ಲಿ ಸಿಕ್ಕಿಸಿದ್ದ ರಿವಾಲ್ವರ್ ಮೇಲಿತ್ತು. ಸತೀಶ ಕಣ್ಣ್ಸುಗಳನ್ನು ಬೇರೆಲ್ಲೋ ತಿರುಗಿಸಿದ. ಲಾಠಿಗಳನ್ನು ಬೀಸುತ್ತ ಜನರನ್ನು ಅಟ್ಟುತ್ತಿದ್ದ ಪೋಲೀಸರ ಮೇಲೆ ಕಲ್ಲುಗಳು ಯಾವ ಯಾವುದೊ ದಿಕ್ಕಿನಿಂದ ತೂರಿಬೀಳುತ್ತಿದ್ದವು.
ಬಿಸಿಲಿನಿಂದ ಕಾದ ಆಕಾಶ. ಧೂಳೆದ್ದ ನೆಲಗಳ ನಡುವೆ ಈ ಮೂರ್ಖ ಚರಿತ್ರೆಯ ಅನಿವಾರ್ಯ ಮುಹೂರ್ತಕ್ಕಾಗಿ ತಾನು ಕಾದಿದ್ದೇನೆ ಎಂದಷ್ಟು ಮಾತ್ರ ಸತೀಶನಿಗೆ ಸ್ಪಷ್ಟವಾಯಿತು. ರಿವಾಲ್ವರ್ ಮೇಲೆ ಕೈಯಿಟ್ಟ ಎಸ್.ಪಿ. ತಾನು ಆಡಬಹುದಾಗಿದ್ದ ಒಂದೇ ಒಂದು ಶಬ್ದಕ್ಕಾಗಿ ತನ್ನ ಮುಖ ಹುಡುಕುತ್ತ ಕಾದಿದ್ದ.
ಫೈರಿಂಗ್ ಆರ್ಡರ್ ಕೊಟ್ಟರೂ ರಾಹುಲ ಸಾಯಬಹುದು. ಕೊಡದಿದ್ದರೂ ಸಾಯಬಹುದು. ಆದ್ದರಿಂದ ಮಗನ ಮೇಲೆನ ಪ್ರೇಮ ಕೂಡ ಅವನಿಗೆ ಸ್ಪಷ್ಟವಾದ ಮಾರ್ಗವನ್ನು ಸೂಚಿಸಬಲ್ಲದಾಗಿರಲಿಲ್ಲ. ಜನರ ಒಳಿತು? ಅವರು ಕೂಡ ಹೀಗೂ ಸಾಯುತ್ತಾರೆ; ಹಾಗೂ ಸಾಯುತ್ತಾರೆ. ಕ್ಷಾಮದಲ್ಲಿ ಚೂರು ಚೂರೇ ಸಾಯುತ್ತಾರೆ. ಹಲವು ಸಾಧ್ಯತೆಗಳ ಮನುಷ್ಯ ಎಂದು ರೇಖಾ ಆರಿಸಿಕೊಂಡ ತಾನು ಈ ಬರಗಾಲದ ಊರಲ್ಲಿ. ಈ ಕ್ಷಣ ಒಂದೇ ಒಂದು ಮಾತನ್ನಾಡಬಲ್ಲ ಸಾಧ್ಯತೆಯನ್ನು ಪಡೆದವನೆಂಬುದನ್ನು ಅವಳು ಊಹಿಸಿದ್ದಳೆ? ಎಸ್.ಪಿ. ರಿವಾಲ್ವರನ್ನು ಬಿಗಿಯಾಗಿ ಹಿಡಿದು ಪೋಲೀಸರನ್ನು ಧಿಕ್ಕರಿಸಿ ನುಗ್ಗಿಬರುತ್ತಿದ್ದ ಜನರನ್ನೂ. ತನ್ನನ್ನೂ ಕ್ರೂರವಾದ ಕಣ್ಣುಗಳಿಂದ ನೋಡತೊಡಗಿದ.
ಬೇಕಾಬಿಟ್ಟಿ ಕಲ್ಲೆಸೆಯುತ್ತ, ಓಡುತ್ತ. ನುಗ್ಗುತ್ತ. ಸಿಕ್ಕಿದ್ದನ್ನು ತುಳಿಯುತ್ತ ಹುಚ್ಚೆದ್ದ ಜನರು ಎಸ್.ಪಿ.ಯನ್ನು ಗುರ್ತಿಸಿರಬೆಕು. ರುದ್ರಪ್ಪ ಮುಸ್ಲಿಮರ ಓಟಿನಿಂದ ಗೆದ್ದ ಮಂತ್ರಿ. ಈ ಎಸ್.ಪಿ. ಅವನ ಬೆಂಬೆಲಿಗ. ಅವರ ಕೋಪವೆಲ್ಲ ಗರಿಗರಿ ಇಸ್ತಿ ಮಾಡಿದ ಯೂನೀಫಾರಂ ತೊಟ್ಟು, ಪೀಕ್ಯಾಪ್ ಧರಿಸಿ, ದೊಡ್ಡ ಮೀಸೆಯನ್ನು ಹುರಿಮಾಡಿ ಕೂತಿದ್ದ ಎಸ್.ಪಿ. ಕಡೆ ತಿರುಗಿತು. ಸತೀಶ ಕೈಮುಗಿದು ನಿಂತ. ಜನರ ಗುಳಿ ಬಿದ್ದ ಕಣ್ಣುಗಳಲ್ಲಿನ ಕ್ರೌರ್ಯ ಕಂಡು ಮಂಕಾಗಿ ಕೂತ ಎಸ್.ಪಿ.
“ಎಸ್ ಸಾರ್” ಎಂದು ಯಮನಂತೆ ಸತೀಶನ ಕಡೆ ತಿರುಗಿದ. ಕಲ್ಲೊಂದು ತೂರಿ ಎಸ್.ಪಿ.ಯ ಹಣೆಗೆ ತಾಕಿ ರಕ್ತ ಚಿಮ್ಮಿತು. ಸತೀಶ ಒಣಗಿದ ಗಂಟಲಿನಲ್ಲಿ.
“ಫೈರ್” ಎಂದ.
ಫೈರಿಂಗ್ ಪ್ರಾರಂಭವಾಯಿತು. ಈ ಘಳಿಗೆಗಾಗಿಯೇ ಕುಡಿದು, ಉಂಡು, ರೈಫಲ್ ಹಿಡಿದು ಸನ್ನದ್ದರಾಗಿದ್ದ ರಿಸರ್ವ್ ಪೋಲೀಸರು ವ್ಯಾನ್‌ಗಳಿಂದ ಧುಮುಕಿ ಫೈರ್ ಮಾಡುತ್ತ ಬೀದಿ ಬೀದಿ ಓಡುತ್ತ ಜನರನ್ನು ಅಟ್ಟಿದರು. ಓಡುವ ಜನರಲ್ಲಿ ಕೆಲವರು ಗುಂಡಿನೇಟಿಗೆ ಕುಸಿದು ಬೀಳುವುದನ್ನು ಸತೀಶ ನೋಡಿದ. ಅವನ ಮನಸ್ಸು ಯಾವ ಭಾವನೆಯಿಲ್ಲದೆ ಶೂನ್ಯವಾಗಿತ್ತು: ಫೈರಿಂಗ್ ಆರ್ಡರ್ ಕೊಟ್ಟಿದ್ದರಿಂದ ತನ್ನ ಮನಸ್ಸು ಹಗುರಾಗಿದೆ ಎಂದೂ ಅವನಿಗೆ ಅನ್ನಿಸಿತು. ರಕ್ತ ಸೋರುತ್ತಿದ್ದ ಹಣೆಯನ್ನು ಎಡಗೈಯಿಂದ ಒತ್ತಿಕೊಂಡು ರಿವಾಲ್ವರ್‌ನಿಂದ ಕಂಡ ಕಂಡ ಕಡೆ ಗುಂಡು ಹಾರಿಸುತ್ತ ಎಸ್.ಪಿ. ಜೀಪನ್ನು ಸತೀಶನ ಬಂಗಲೆ ದಿಕ್ಕಿನಲ್ಲಿ ಓಡಿಸಲು ಡ್ರೈವರ್‌ಗೆ ಆರ್ಡರ್ ಮಾಡಿದ. ಜೀಪ್ ಬಂಗಲೆಯೆದುರು ನಿಂತಿತು. ರಕ್ತ ಸೋರುತ್ತಿದ್ದ ಹಣೆಯನ್ನು ಕರ್ಚೀಪಿನಿಂದ ಬಿಗಿದು, ಸಿದ್ಧವಾಗಿದ್ದ ಫೈರಿಂಗ್ ಆರ್ಡರ್‌ಗೆ ಸತೀಶನ ಸಹಿಯನ್ನು ಎಸ್.ಪಿ. ಪಡೆದು ಹೋದ.
ಹತಾಶಳಾಗಿ ಕೂತಿದ್ದ ರೇಖಾ ಎದುರು ಸತೀಶ ನಿಂತ. ರೇಖಾಳ ಬೆಚ್ಚಿದ ಕಣ್ಣಲ್ಲಿ ನೀರು ಸಹ ಇರಲಿಲ್ಲ. ಹೊರಗೆ ದೀಪಾವಳಿಯ ಪಟಾಕಿಗಳಂತೆ ಗುಂಡಿನ ಶಬ್ದ ಮೊಳಗುತ್ತಿತ್ತು. ಸತೀಶನನ್ನು ಒಣಗಿದ ಕಣ್ಣುಗಳಿಂದ ರೇಖಾ ನೋಡಿದಳು. ಅವಳೂ ಮಾತಾಡಲಿಲ್ಲ. ಹೀಗೇ ಎಷ್ಟು ಹೊತ್ತು ಅವರು ಕಳೆದರೋ ಇಬ್ಬರಿಗೂ ಗೊತ್ತಾಗಲಿಲ್ಲ.
ಜೀಪ್ ಬಂದು ನಿಂತಿತು. ಎಸ್.ಪಿ.ಧ್ವನಿ ಕೇಳಿಸಿತು. ಸತೀಶ ಎದ್ದ. ರೇಖಾಳ ಮಗ್ಗುಲಲ್ಲಿ ಕೂತ. ಅವಳ ಕೈಗಳನ್ನು ಮೃದುವಾಗಿ ಹಿಡಿದ, ಕಾದ, ಎಸ್.ಪಿ. ರಾಹುಲನನ್ನು ಹೆಗಲ ಮೇಲೆ ಕೈಯಿಟ್ಟು ನಡೆಸಿಕೊಂಡು ಬಂದ. ಬ್ಯಾಂಡೇಜ್ ಕಟ್ಟಿದ ಹಣೆಯನ್ನು ಮೇಲೆತ್ತಿ ಗೌರವಪೂರ್ವಕವಾಗಿ ಸೆಟೆದು “ಹಲೋ” ಎಂದ.
ಸೈಕಲ್ ರಿಕ್ಷಾದ ಚಾಲಕ ರಾಹುಲನನ್ನು ಯಾವುದೋ ಗುಡಿಸಲಿನಲ್ಲಿ ಕಾದಿಟ್ಟುಕೊಂಡಿದ್ದನಂತೆ- ಫೈರಿಂಗ್ ಮುಗಿಯುವ ತನಕ. ನಂತರ ಪೋಲೀಸರಿಗೆ ತಂದು ಒಪ್ಪಿಸಿದನಂತೆ.
ರಾಹುಲನನ್ನು ಎತ್ತಿ ರೇಖಾಗೆ ಒಪ್ಪಿಸುತ್ತ ಎಸ್.ಪಿ.,
“ನಿಮ್ಮ ಮಗ ಬ್ರೇವ್ ಹುಡುಗ” ಎಂದ.
೧೪೪ನೇ ಸೆಕ್ಷನನ್ನು ಒಂದು ವಾರ ಜಾರಿ ಮಾಡುವ ಆರ್ಡರ್‌ಗೆ ಸತೀಶನ ಸಹಿ ಪಡೆದು ಎಸ್.ಪಿ. ಸಲ್ಯೂಟ್ ಮಾಡಿ ಹೋದ.
*****
೨೬ ಜೂನ್, ೧೯೭೬
