ಸಂಧ್ಯಾ ರಾಗ – ೭

ರಾಯರ ಘನತೆಗೂ, ಸಂಸಾರಕ್ಕೂ ತಕ್ಕ ಮನೆಯನ್ನೇ ಶಾಮಣ್ಣನವರು ಬಸವನಗುಡಿಯಲ್ಲಿ ಗೊತ್ತುಮಾಡಿದ್ದರು. ಡಾಂಬರು ಬಳಿದ ರಸ್ತೆ. ಅಕ್ಕಪಕ್ಕದಲ್ಲಿ ‘ಗುಳೋಪು’ ದೀಪಗಳು. ಅಲ್ಲಿ ವಾಸಿಸುತ್ತಿದ್ದವರು ದೊಡ್ಡ ಸಂಬಳದ ಸರ್ಕಾರಿ ಅಧಿಕಾರಿಗಳು ಮತ್ತು ಶ್ರೀಮಂತರು. ಲಾಬಾU ವನಕ್ಕೆ ಆ ರಸ್ತೆ ಸಮೀಪವಾಗಿದ್ದುದೂ ಒಂದು ವೆಶಿಷ್ಟ್ಯವಾಗಿತ್ತು.
ಮನೆಯೂ ಸಾಕಷ್ಟು ದೊಡ್ಡದಾಗಿಯೇ ಇತ್ತು. ಕೆಳಗಡೆ ತೊಟ್ಟಿ ನಾಲ್ಕೆದು ಕೋಣೆಗಳು, ಅಡಿಗೆಮನೆ, ಬಚ್ಚಲುಮನೆ ದೇವರ ಮನೆ ಅಲ್ಲದೆ ಮಹಡಿಯ ಮೇಲೆ ಒಂದು ತೊಟ್ಟಿಯೂ ಎರಡು ಕೋಣೆಗಳೂ ಇದ್ದವು.
ಮನೆಯನ್ನು ನೋಡಿದವನೇ ರಾಮು ಮಹಡಿಯ ಮೇಲಣ ಒಂದು ಕೋಣೆಯನ್ನು ಆಯ್ದುಕೊಂಡನು. ಲಕ್ಷ್ಮಣ ಕೆಳಗಿದ್ದ ಕೋಣೆಯಲ್ಲಿಯೇ ತೃಪ್ತಿಪಟ್ಟುಕೊಂಡನು. ಮನೆ ಕಾಂಪೌಂಡು ಸ್ವಲ್ಪ ವಿಶಾಲವಾಗಿಯೇ ಇತ್ತು ಮಾಲೀಕರು ಗಿಡ, ಹೂಗಳ ಪ್ರೇಮಿಗಳು. ಕಾಂಪೌಂಡಿನ ತುಂಬಾ ಹೂಗಿಡಗಳನ್ನೂ ಮಲ್ಲಿಗೆ ಜಾಜಿ ಬಳ್ಳಿಗಳನ್ನೂ ಹಬ್ಬಿಸಿದ್ದರು. ಬೆಳಗಾದರೆ ಬುಟ್ಟಿ ತುಂಬ ಬಗೆಬಗೆಯ ಹೂಗಳು ರಾಯರ ಪೂಜೆಗೆ ಅಣಿಯಾಗುತ್ತಿದ್ದವು. ತೋಟದ ಉಸ್ತುವಾರಿಯನ್ನು ರಾಯರು ಸ್ವಂತಕ್ಕೆ ಇಟ್ಟುಕೊಂಡರು. ತಾವೇ ಸ್ವಯಂ ಅಗೆದು, ಪಾತಿಮಾಡಿ, ನೀರೆರೆಯುತ್ತಿದ್ದರು. ತಂದೆಯೊಬ್ಬರೇ ಕೆಲಸ ಮಾಡುವುದನ್ನು ಕಂಡರೆ ಲಕ್ಷ್ಮಣನು ನೀರು ಸೇದಿ ಹುಯ್ಯುವುದಕ್ಕೆ ನಿಲ್ಲುತ್ತಿದ್ದನು. ಕೊನೆಗೆ ಶಾಮಣ್ಣನವರೂ ಬಿಡುವಾದಾಗಲೆಲ್ಲಾ ಗಿಡಗಳನ್ನು ತೊಳೆಯುವುದು, ದೀಪ ಹಿಡಿದು ಗುಲಾಬಿಗೆ ಅಂಟಿದ್ದ ಹುಳುಗಳನ್ನು ಆಯ್ದು ಬಿಸುಡುವುದು, ಹೊಸ ಹೊಸ ಹೂಗಳ ಬೀಜವನ್ನು ತಂದು ನೆಡುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಮೊದಮೊದಲು ತಂದೆಗೋಸುಗ ತೋಟದ ಕೆಲಸಕ್ಕೆ ನಿಂತ ಲಕ್ಷ್ಮಣನಿಗೆ ತೋಟದ ಸೇವೆಯು ಬಹು ಇಷ್ಟವಾಗುತ್ತ ಎಲ್ಲಾ ಕೆಲಸಗಳನ್ನೂ ನಿರ್ವಹಿಸಿಕೊಂಡು ಹೋಗುತ್ತಿದ್ದನು. ಹೊಸ ಹಳ್ಳಿಯ ಬನಸಿರಿ ತನ್ನ ಕೆದೋಟದಲ್ಲಿ ಬರದಿದ್ದರೂ ಅಲ್ಪ ಸ್ವಲ್ಪವಾದರೂ ಅದರ ನೆನಪನ್ನು ತರುತ್ತಿದ್ದ ತೋಟದಲ್ಲಿ ಲಕ್ಷ್ಮಣನು ತನ್ನ ಮನಸ್ಸನ್ನು ಮರೆಯುತ್ತಿದ್ದನು. ತಾನು ಹಾಕಿದ ಗಿಡ ಬೆಳೆದು ದೊಡ್ಡದಾಗಿ, ಮೊಗ್ಗೆ ಬಿಟ್ಟು ಹೂವಾಗಿ, ಅರಳಿ ಪರಿಮಳಿಸುವುದನ್ನು ನೋಡಿ ಲಕ್ಷ್ಮಣನ ಹೃದಯ ಹಿಗ್ಗಿನಿಂದ ಬಿರಿದು ಹೋಗುತ್ತಿತ್ತು. ಹೂಗಳ ಮೇಲೆ ಮೂಡುತ್ತಿದ್ದ ಬಗೆಬಗೆಯ ಬಣ್ಣಗಳು, ಬೀಸು ಗಾಳಿಗೆ ಅವು ಬಳುಕುತ್ತಿದ್ದ ಬಗೆ; ಪರಸ್ಪರ ಒಂದನ್ನೊಂದು ನೋಡುತ್ತಿದ್ದ- ಮಾತನಾಡುತ್ತಿದ್ದ- ಒಲವನ್ನು ಸೂಚಿಸುತ್ತಿದ್ದ ರೀತಿ ಲಕ್ಷ್ಮಣನ ಮನಸ್ಸಿನಲ್ಲಿ ಹಲವು ಭಾವಗಳನ್ನು ಉದ್ರೇಕಗೊಳಿಸುತ್ತಿದ್ದವು. ಗಿಡದಿಂದ ಯಾರಾದರೂ ಹೂವು ಕಿತ್ತರೆ ತನ್ನನ್ನು ಚಿವುಟಿದಷ್ಟು ನೋವಾಗುತ್ತಿದ್ದಿತು ಲಕ್ಷ್ಮಣನಿಗೆ. ಒಮ್ಮೆ ಶಾಂತಾ ಗುಲಾಬಿ ಹೂವನ್ನೆಲ್ಲಾ ಕಿತ್ತು ಉಡಿಯಲ್ಲಿ ತುಂಬಿಕೊಂಡು ತನ್ನ ಅಭಿರುಚಿಗೆ ಬಹುಮತಿಯನ್ನು ದೊರಕಿಸಲು ಅಣ್ಣನ ಬಳಿಗೆ ಬಂದು “ನೋಡಿದೆಯಾ ಲಚ್ಚಣ್ಣಾ” ಎಂದಳು. ಲಕ್ಷ್ಮಣನ ಕಣ್ಣುಗಳಿಂದ ಧಾರೆಧಾರೆಯಾಗಿ ನೀರು ಹರಿಯಿತು ಅಂದಿನಿಂದ ಅಣ್ಣನನ್ನು ಕೇಳದೆ ಒಂದು ಹೂವನ್ನೂ ಶಾಂತಾ ಮುಟ್ಟುತ್ತಿರಲಿಲ್ಲ. ರಾಮಚಂದ್ರ ಮನೆಗೆ ಬರುವ ರಭಸದಲ್ಲಿ ಎಷ್ಟೋ ಸಾರಿ ಕಾಂಪೌಂಡು ಬಾಗಿಲನ್ನು ಹಾಕುವುದನ್ನು ಮರೆಯುತ್ತಿದ್ದನು. ಲಕ್ಷ್ಮಣನ ತಿಂಗಳುಗಟ್ಟಲೆಯ ಪ್ರಯಾಸ ಒಂದೇ ಕ್ಷಣದಲ್ಲಿ ದನ ಮೇಕೆಗಳ ಬಾಯಿತುತ್ತಾಗಿಬಿಡುತ್ತಿತ್ತು.
“ಹೋಗುತ್ತಾ ಬರುತ್ತಾ ಬಾಗಿಲು ಹಾಕಿಕೊಂಡು ಹೋಗು ರಾಮು” ಎಂದು ಸೂಚಿಸಿದುದಕ್ಕೆ “ನಾನು ನಿನ್ನ ಆಳಲ್ಲ. ಬೇಕಿದ್ದರೆ ನೀನೆ ಹಾಕಿಕೋ” ಎಂದು ಅವನು ಉತ್ತರವಿತ್ತಿದ್ದನು. ಲಕ್ಷ್ಮಣನು ಸ್ವಲ್ಪವೂ ಬೇಸರವಿಲ್ಲದೆ ಬಾಗಿಲು ಕಾಯುವುದನ್ನು ಅಭ್ಯಾಸ ಮಾಡಿಕೊಂಡನು.

ರಾಮಚಂದ್ರ, ಶಾಂತಾ, ಗೋಪಾಲಿ ಇವರ ವಿಚಾರದಲ್ಲಿ ರಾಯರಿಗೆ ಆತಂಕವಿರಲಿಲ್ಲ. ಲಕ್ಷ್ಮಣನ ವಿಚಾರ ದಿನ ದಿನಕ್ಕೆ ಆತಂಕ ಹೆಚ್ಚುತ್ತ ಬಂತು. ಅವನು ಏತಕ್ಕೋ ಕೊರಗುತ್ತಿದ್ದಾನೆಂದು ರಾಯರಿಗೆ ಭಾಸವಾಯಿತು. ತಾನೇ ನೇರವಾಗಿ ಕೇಳುವುದಕ್ಕಿಂತ ಅವನ ತಾಯಿ ಕೇಳಿದರೆ ವಾಸಿಯೆಂದು ಮೀನಾಕ್ಷಮ್ಮನವರಿಂದ ಕೇಳಿಸಿದರು. ಶಾಲೆಗೆಹೋಗುವುದು ತನಗೆ ಇಷ್ಟವಿಲ್ಲವೆಂದೂ ಸಂಗೀತ ಕಲಿಯಲು ಆಸೆಯಿದೆಯೆಂದೂ ಲಕ್ಷ್ಮಣ ಸ್ಪಷ್ಟವಾಗಿ ಹೇಳಿಬಿಟ್ಟನು. ರಾಯರಿಗೆ ಆತಂಕ ಹೆಚ್ಚಾಯಿತು. “ನಮ್ಮ ವಂಶದಲ್ಲಿ ಯಾರೂ ಸಂಗೀತಗಾರರಾಗಲಿಲ್ಲವಲ್ಲ. ಇವನು ಹೀಗೆ ಬಯಸುತ್ತಾನೆ. ಏನು ಮಾಡುವುದು” ಎಂದು ಯೋಚಿಸಲಾರಂಭಿಸಿದರು. ಬಗೆ ಹರಿಯಲಿಲ್ಲ. ಶಾಮಣ್ಣನವರಲ್ಲಿ ಈ ಪ್ರಸ್ತಾಪವನ್ನೆತ್ತಿದರು. “ನೀನು ಏನು ಹೇಳುತ್ತೀಯೋ ಶಾಮೀ?” “ಲಕ್ಷ್ಮಣ ಬುದ್ಧಿವಂತ. ಆದರೆ ಓದೋದಿಕ್ಕೆ ಇಷ್ಟವಿಲ್ಲಾ ಅನ್ನುತ್ತಾನೆ. ನಾವು ಬಲವಂತ ಮಾಡಿ ಸ್ಕೂಲಿಗೆ ಕಳುಹಿಸಿದರೆ ನಮಗೋಸ್ಕರ ಹೋಗಿಬರುತ್ತಾನಲ್ಲದೆ ಅವನಿಗೆ ಪಾಠವೇನು ಬರುವ ಹಾಗಿಲ್ಲ.” “ಹೌದು. ಈ ಹುಚ್ಚು ಅವನಿಗೆ ಹೇಗೆ ಹಿಡಿಯಿತೋ ತಿಳೀಲಿಲ್ಲ. ಆ ಮುಳುಬಾಗಿಲು ಚೆನ್ನಪ್ಪಂದೂಂತ ಕಾಣತ್ತೆ ಈ ಕೆಲಸ. ನಮ್ಮ ಮನೇಲಿ ಯಾರೂ ತಾಳ ತಂಬೂರಿ ಹಿಡೀಲಿಲ್ಲಪ್ಪಾ. ಇವನು ದಾಸಯ್ಯನಾಗಬೇಕೂಂದರೆ ಯಾರು ಏನು ಮಾಡುವುದಕಾಗುತ್ತೆ. ಅವನ ಪೂರ್ವಾರ್ಜಿತ. ನೀನು ಒಂದು ಮಾತು ಹೇಳಿ ನೋಡು.” “ನನಗೂ ಅವನಿಗೂ ದಿನಾ ಇದೇ ಚರ್ಚೆ. ಅವನೇನೂ ಅಳ್ಳಾಡುವ ಹಾಗಿಲ್ಲ. ತಾನು ಹೊಟ್ಟೆತುಂಬಿಸಿಕೊಳ್ಳೋದಿಕ್ಕೆ ಸಂಗೀತ ಕಲಿಯಲ್ಲಾ ಎಂದು ಹೇಳಿಬಿಟ್ಟ. ಅವನ ಪ್ರವೃತ್ತಿ ಹೇಗಿದೆಯೋ ಹಾಗೆ ಮಾಡೋದು ಒಳ್ಳೆಯದು. ದಣಿಚಿತ್ತ.” ರಾಯರು ನಿರ್ವಾಹವಿಲ್ಲದೆ ಒಪ್ಪಿದರು. ಅವರಿಗೆ ಸ್ವಲ್ಪವೂ ಇಷ್ಟವಿಲ್ಲ. ಮಾರನೆಯ ದಿವಸದಿಂದ ಮಗನನ್ನು ಸಂಗೀತ ವಿದ್ವಾ ಅನಂತಾಚಾರ್ಯರ ’ಕರ್ನಾಟಕ ಗಾಯನಶಾಲೆ’ಗೆ ಕಳುಹಿಸಲಾರಂಭಿಸಿದರು. ಅನಂತಾಚಾರ್ಯರು ಸಂಗೀತ ವಿದ್ವತ್ತಿಗೆ ಪ್ರಸಿದ್ಧವಾದ ಮನೆತನಕ್ಕೆ ಸೇರಿದವರು. ಅವರ ತಂದೆ ವೆಂಕಟೇಶಾಚಾರ್ಯರು ಪ್ರಸಿದ್ಧ ದಕ್ಷಿಣಾದಿ ವಿದ್ವಾಂಸರಾದ ಪೂಚಿ ಶ್ರೀನಿವಾಸಯ್ಯಂಗಾರ್ಯರ ಸಹಪಾಠಿಗಳು. ಅನಂತಾಚಾರ್ಯರು ಕಛೇರಿ ಮಾಡಲು ದೇಹಬಾಧೆಯಿಂದ ಹೋಗುತ್ತಿರಲಿಲ್ಲ. ಅವರ ಶಾರೀರ ಬಾಯಿಹಾಡುಗಾರಿಕೆ ಅಷ್ಟು ಹಿತವೂ ಆಗಿರಲಿಲ್ಲ. ಆದರೆ ಶಾಸ್ತ ವಿಚಾರಗಳಲ್ಲಿಯೂ ಶಿಷ್ಯರಿಗೆ ಅಧ್ಯಯನ ಮಾಡಿಸುವುದರಲ್ಲಿಯೂ ಅವರ ಕೆ ಮೇಲುಗೆಯಾಗಿತ್ತು ಅವರಲ್ಲಿ ವರ್ಷ ಎರಡು ವರ್ಷ ಕಲಿತವರೆಷ್ಟೋ ಮಂದಿ ಪ್ರಸಿದ್ಧ ಗಾಯಕರಾಗಿ ಗ್ರಾಮಫೋನುಗಳಲ್ಲಿ ಮೆರೆದಿದ್ದರು. ಆಚಾರ್ಯರೂ ಶಿಷ್ಯನನ್ನು ಪರೀಕ್ಷಿಸಿದರು. ಅವನ ಶಾರೀರದಲ್ಲಿದ್ದ ಅಪಾರವಾದ ನಾದಸಂಪತ್ತು ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು. “ನೀನು ಎಷ್ಟು ವರ್ಷ ಕಲೀತಿ ಮಗೂ” ಎಂದು ಕೇಳಿದರು. “ನೀವು ಕೃಪೆಯಿಟ್ಟು ಹೇಳಿಕೊಟ್ಟಷ್ಟು ದಿವಸ ಗುರುಗಳೇ. ಚೆನ್ನಾಗಿ ಕಲಿಯಬೇಕೆಂದು ಆಸೆಯಿದೆ. ನಿಮ್ಮ ಆಶೀರ್ವಾದ ದೊರೆಯಬೇಕು.” “ನೀನು ಹಾಡಿದ ಖರಹರಪ್ರಿಯದ ಸಂಚಾರ ಎಲ್ಲಿಂದ ಕಲಿತೆ?” ಲಕ್ಷ್ಮಣ ಮುಳುಬಾಗಿಲು ಚೆನ್ನಪ್ಪನ ವೃತ್ತಾಂತವನ್ನು ಅರುಹಿದನು. ಆಚಾರ್ಯರು ಚೆನ್ನಪ್ಪನ ಹೆಸರು ಕೇಳುತ್ತಲೂ ಭಕ್ತಿಯಿಂದ ಕಣ್ಣುಮುಚ್ಚಿ ನಮಸ್ಕರಿಸಿದರು. “ಅವರು ಯಾರು ಗುರುಗಳೇ ಚೆನ್ನಪ್ಪನವರು?” “ಅಯ್ಯೋ. ಅವರ ವಿಷಯ ಏನು ಕೇಳುತ್ತೀಯಪ್ಪಾ. ಅವರೊಬ್ಬ ಅವತಾರ ಪುರುಷರು. ಸಾಕ್ಷಾv ನಾರದಮುನಿಯ ಅವತಾರ. ಸಂಗೀತವನ್ನೇ ಒಂದು ಯೋಗವನ್ನಾಗಿ ಅಭ್ಯಾಸಿಸಿದ್ದಾರೆ. ಯಾರಲ್ಲಿ ಕಲಿತಿರಿ ಎಂದರೆ ಹೇಳಲ್ಲ. “ಗರತಿ ಯಾವಾಗಲೂ ತನ್ನ ಗಂಡನ ಹೆಸರು ಹೇಳಲ್ಲ” ಎಂದು ನಕ್ಕುಬಿಡುತ್ತಾರೆ. ದೊಡ್ಡ ಸಮುದ್ರ ಇದ್ದಹಾಗಿದ್ದಾರೆ, ಚೆನ್ನಾಗಿ ಯಾರು ಹಾಡಲಿ, ಯಾರು ಚೆನ್ನಾಗಿ ವಾದ್ಯ ನುಡಿಸಲಿ ಹೇಗೋ ಅಲ್ಲಿ ಬಂದಿರುತ್ತಾರೆ. ಲಹರಿ ತಿರುಗಿದರೆ ಹಾಡುತ್ತಾರೆ. ಆಗ ಕೇಳಬೇಕು – ನೀನೇ ಕೇಳಿದ್ದೀಯಲ್ಲಾ, ಮಹಾನುಭಾವ ನಿಂತ ಕಡೆ ನಿಲ್ಲುವುದಿಲ್ಲ ಒಂದು ಕಛೇರಿಯೆ, ಪಾಠವೇ, ಆ ಪ್ರಮೇಯಗಳನ್ನೇ ಇಟ್ಟುಕೊಂಡಿಲ್ಲ ಹಕ್ಕಿಯಂತಹ ಸ್ವಭಾವ. ನನ್ನ ಗುರುಗಳು ಪೂಚಿ ಶ್ರೀನಿವಾಸ ಅಯ್ಯಂಗಾರ್ಯರು ಒಂದು ಸಲ ಚೆನ್ನಪ್ಪನವರ ಹಾಡುಗಾರಿಕೆ ಕೇಳಿ “ವಿದ್ಯೆಯೆಂದರೆ ನಿಮ್ಮದು ವಿದ್ಯೆ. ನಮ್ಮದೆಲ್ಲಾ ಏನೂ ಒಣ ಆಡಂಬರ” ಎಂದು ಹೇಳಿದ್ದರು. ನಿನಗೆ ಅವರದೇ ಅನುಗ್ರಹವಾಗಿದೆ ಮಗೂ. ಅವರೇ ನಿನ್ನ ಗುರುಗಳು. ನಾನು ನೆಪಮಾತ್ರಕ್ಕೆ ನಿನ್ನ ಗುರುವಾಗುತ್ತೇನೆ ಅಷ್ಟೇ. ನಿನ್ನಂತಹ ಹುಟ್ಟು ಗಾಯಕನಿಗೆ ಹೇಳಿಕೊಡುವುದೇ ನನಗೊಂದು ಹೆಮ್ಮೆ.” “ತಾವು ಇಂತಹ ದೊಡ್ಡ ಮಾತು ಆಡಬಾರದು. ಗುರುಗಳೇ.” “ದೊಡ್ಡ ಮಾತಲ್ಲ ಲಕ್ಷ್ಮಣಾ. ನಾನು ಹೇಳಿದ್ದು ಉತ್ಪ್ರೇಕ್ಷೆ ಅಲ್ಲ. ನಿನ್ನಲ್ಲಿ ಕಲೆಯ ಭಂಡಾರವೇ ಇದೆ. ನಾನು ಅದಕ್ಕೆ ಒಂದು ಕ್ರಮ ತೋರಿಸಿ ಶಾಸ್ತದ ಪರಿಚಯ ಮಾಡಿಕೊಡಬೇಕಾಗಿದೆ ಅಷ್ಟೇ. ಕಲಿಯುವವರೆಲ್ಲರಿಗೂ ಶಾಸ್ತ ಬರತ್ತೆ. ಅದು ಬುದ್ಧಿಗೋಚರ. ಆದರೆ ಕಲೆ ಬರುವುದಿಲ್ಲ. ಅದು ಚಿತ್ತವೇದ್ಯ.” “ತಮ್ಮ ಮಾತಿಗೆ ಪ್ರತಿಹೇಳುವ ಶಕ್ತಿ ನನಗಿಲ್ಲ. ಹಾಗೆಯೇ ಆಗಲಿ” ಎಂದು ಲಕ್ಷ್ಮಣ ಗುರುವಿನ ಮಾತನ್ನೊಪ್ಪಿದನು.
*****
ಮುಂದುವರೆಯುವುದು