ಸಂಧ್ಯಾ ರಾಗ – ೨

ಎಂಟು ದಿವಸಕ್ಕೆ ರಾಯರು ತುಂಬ ಬಡವರು. ಊಟ ತಿಂಡಿಗಳಲ್ಲಿಯೂ ಅಭಿರುಚಿ ಕಡಿಮೆಯಾಯಿತು. ಮನಸ್ಸಿನಲ್ಲಿ ಏನೋ ಯೋಚನೆಯನ್ನಿಟ್ಟುಕೊಂಡು ಕೊರಗಲಾರಂಭಿಸಿದರು. ಪಡಸಾಲೆಯಲ್ಲಿ ಶತಪಥ ತಿರುಗುವರು. ನಿಂತಲ್ಲಿಯೇ ನಿಂತು ಯೋಚನೆಯಲ್ಲಿ ಮೆಮರೆಯುವರು. ಶಾಮಣ್ಣ ಇದನ್ನು ನೋಡುತ್ತಿದ್ದವರು ತಾವೇ ಮಾತು ತೆಗೆಯಲು ಹೆದರಿದರು. ರಾಯರದು ಮುಚ್ಚಿಡುವ ಸ್ವಭಾವವಲ್ಲ. ಅವರೇ ಹೇಳದೆ ಎಂಟು ದಿವಸದಿಂದ ಸುಮ್ಮನಿರುವಾಗ ತಾವು ಕೆದಕಿ ಕೇಳುವುದು ಅಧಿಕ ಪ್ರಸಂಗವಾದೀತೆಂದು ಭಯಪಟ್ಟರು. ಆದರೆ ರಾಯರ ಸ್ಥಿತಿ ಕರುಣಾಜನಕವಾಗಿತ್ತು. ಅವರ ಕಣ್ಣುಗಳಲ್ಲಿ ಹೊರಸೂಸುತ್ತಿದ್ದ ದುಃಖವು ಯಾರನ್ನಾದರೂ ಅನುಕಂಪ ತೋರುವಂತೆ ಮಾಡುತ್ತಿದ್ದಿತು. ಕೊನೆಗೆ ಶಾಮಣ್ಣನವರು ಧೆರ್ಯ ಮಾಡಿದರು. “ರಾಯರು ದುಃಖದ ಕಾರಣವನ್ನು ಹೇಳಿದರಂತೂ ಸರಿಯೇಹೋಯಿತು. ಹೇಳದೇ ನಾಲ್ಕು ಮಾತು ಬಯ್ದರೆ, ಆದದ್ದೇನು ನಿರ್ವಾಹವಿಲ್ಲದ ಅವಮಾನ” ಎಂದು ನಿಶ್ಚಯಿಸಿ ತಾವು ಪಡಸಾಲೆಗೆ ಬಂದು ನಿಂತರು. ಶಾಮಣ್ಣ ನಿಂತಿದ್ದುದನ್ನು ಎರಡು ಮೂರು ಸಲ ನೋಡಿಯೂ ರಾಯರು ಸುಮ್ಮನೇ ಇದ್ದರು. ಶಾಮಣ್ಣ ಆ ಸ್ಥಳ ಬಿಡುವ ಚಿನ್ಹೆ ಕಾಣಬರಲಿಲ್ಲ. ರಾಯರೇ ಮಾತು ತೆಗೆದರು. “ಏನು ಶಾಮಣ್ಣ, ಬಂದೆ, ಏನು ಸಮಾಚಾರ.” “ಅದನ್ನು ಕೇಳುವುದಕ್ಕೇ ಬಂದೆ. ಎಂಟು ದಿವಸದಿಂದ ನೋಡಿದೆ. ಇನ್ನು ತಡೆಯಲಿಲ್ಲ. ಏನು ಕೇಳೋಣಾಂತ ಬಂದೆ.” ರಾಯರು ನಿಟ್ಟುಸಿರ್ಗರೆದರು. “ಹೇಳಬಹುದಾದರೆ ಹೇಳಿದರೆ ಒಳ್ಳೆಯದು. ಮನಸ್ಸು ಹಗುರವಾಗಬಹುದು.” “ಏನು ಹಗುರವೋ – ಕೇಳು ಶಾಮೀ. ಮೀನಾ, ಅಮ್ಮನಿಗೆ ಒಂದು ಮಾತು ಹೇಳಿದಳು. ಅದನ್ನು ಅಮ್ಮ ನನ್ನ ಹತ್ತಿರ ಹೇಳಿದ್ದಾಳೆ. ನೀನು ಆಗಿದ್ದರೆ ಏನು ಮಾಡುತ್ತಿದ್ದೆ.” “ವಿಷಯ ಗೊತ್ತಾಗಲಿಲ್ಲ.” “ಮನೆ ವಿಷಯ. ತನಗೆ ಮಕ್ಕಳಾಗಲಿಲ್ಲಾಂತ ಮೀನಾ, ನನಗೆ ಬೇರೆ ಮದುವೆ ಮಾಡಿಸೀಂತ ಅಮ್ಮನಿಗೆ ಹೇಳಿದಳಂತೆ. ಏಲ್ಲಾದರೂ ಉಂಟೇನೋ ಶಾಮೀ.” “ನನಗೂ ಅಮ್ಮನವರು ಹೇಳಿದರು. ಸಮಯ ನೋಡಿ ಅರಿಕೆ ಮಾಡಿಕೊಳ್ಳೋಣಾಂತಿದ್ದೆ. ರಾಯರು ಏನು ಹೇಳೋಣವಾಗುತ್ತೆ.” “ಹೇಳೋದೇನು ಕಂಡ ಹಾಗೇ ಇದೆ. ಮೀನಾ ನನ್ನ ಮನೆ ಭಾಗ್ಯಲಕ್ಷ್ಮಿ. ಮಕ್ಕಳಿಲ್ಲದಿದ್ದರೂ ಚಿಂತೆಯಿಲ್ಲ. ಅವಳಿಗೊಬ್ಬಳು ಸವತೀನ ತರೋಕೆ ನನಗೆ ಇಷ್ಟವಿಲ್ಲ.” “ಅವರು ಸವತಿಯಂತಾ ಭಾವಿಸಿದರಲ್ಲವೇ ಕಷ್ಟ. ತಂಗಿ ಎಂದು ಭಾವಿಸುತ್ತಾರಂತೆ. ಆ ವಿಚಾರದಲ್ಲಿ ನೀವು ಯೋಚನೆ ಇಟ್ಟುಕೊಳ್ಳಬಾರದು ಎಂದು ಹೇಳಿದರು.” “ಅವಳು ಭಾವಿಸಬಹುದು. ಮೀನಾನ ದೊಡ್ಡ ಗುಣ ನಾನು ಕಾಣೆನೇ. ಆದರೆ ಬರೋ ಹೆಣ್ಣು ಕಾಣಬೇಕಲ್ಲಪ್ಪಾ. ಅದೂ ಅಲ್ಲದೆ ನನಗೆ ಈ ವಯಸ್ಸಿನಲ್ಲಿ ಮದುವೆ ಅಂದರೇನೋ ಶಾಮೀ, ಶುದ್ಧ ನಾಚಿಕೆಗೇಡು.” “ತಮಗೇನು ಅಂತಹ ವಯಸ್ಸಾಗಿಲ್ಲ ಸ್ವಾಮೀ, ದೇವರು ಇದ್ದ ಹಾಗೆ ಇದ್ದೀರಿ. ಅಮ್ಮನವರು, ತಮ್ಮ ಕಡೇನೆ ಒಂದು ಹೆಣ್ಣಿದೆಯಂತೆ. ಅದನ್ನೇ ತರುತ್ತಾರಂತೆ. ಆಗ ನಿಮ್ಮ ಅನುಮಾನವೂ ದೂರವಾದ ಹಾಗೆ ಆಗುತ್ತಲ್ಲಾ.” “ಶಾಮೀ, ಚರ್ಚೇಲಿ ಒಪ್ಪಿಸೋ ವಿಚಾರ ಅಲ್ಲಪ್ಪ ಇದು. ಮೀನಾ ನನಗೆ ಬರೀ ಹೆಂಡತಿಯಲ್ಲ. ನನ್ನ ಬಾಳಿನಲ್ಲಿ ಅವಳ ಸ್ಥಾನವೇ ಬೇರೆ. ಅದನ್ನು ಹೇಗೆ ಅಲುಗಾಡಿಸಲಿ ಹೇಳು. ಮೀನಾ ಬರುವುದಕ್ಕೆ ಮುಂಚೆ ನಾನೊಂದು ಪಶು. ಅಪ್ಪ ರಟ್ಟೆ ಮುರಿದು ಸಂಪಾದಿಸಿ ಹಾಕಿದ್ದರು. ಅದನ್ನು ತಿಂದುಕೊಂಡು ತೊಂಡುಗೂಳಿ ಬೆಳೆದಹಾಗೆ ಬೆಳೆದಿದ್ದೆ. ಅವಳು ನನ್ನ ಒಬ್ಬ ಮನುಷ್ಯನನ್ನಾಗಿ ಮಾಡಿದಳು. ನನ್ನ ನಾನೇ ಗೌರವಿಸುವ ಹಾಗೆ ಮಾಡಿದಳು. ನಾನು ಇಹದಲ್ಲಿಯಾಗಲೀ ಪರದಲ್ಲಿಯಾಗಲೀ ಕತ್ತೆತ್ತಿ ತಿರುಗುವಂತೆ ಮಾಡಿದರು. ಈಗ ಅವಳ ಜೀವನ ಒಡೆಯಲೇ. ಅವಳು ಯಾವುದನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಅಂದು ಕೊಂಡಿದ್ದಾಳೋ ಅಂತಹ ನನ್ನ ಪ್ರೇಮ ಹರಿದು ಹಂಚಿಹೋಗುವಂತೆ ಮಾಡಲೇ?” “ಅವರೇ ಒಪ್ಪಿ ಸೂಚಿಸ್ತಿದ್ದಾರಲ್ಲಾ!” “ಅದು ಅವಳ ದೊಡ್ಡತನ. ಅವಳು ಯಾವಾಗಲೂ ಹಾಗೇ ಶಾಮೀ. ಎಲ್ಲಾರ ಹಿತ, ಸುಖಕ್ಕೆ ದಾರಿ ಮಾಡಿ ತಾನು ಹಿಂದುಹಿಂದಕ್ಕೆ ಸರಿಯುತ್ತಾಳೆ.” “ಯೋಚನೇ ಮಾಡೀ ಸ್ವಾಮಿ. ತಾವು ಒಪ್ಪಿದ ಹೊರತೂ ಅಮ್ಮನವರು ಕಣ್ಣುತುಂಬ ನಿದ್ದೆ ಮಾಡೋ ಹಾಗೆ ಕಾಣೆ.” ಎಂದು ಹೇಳಿ ಮಾತು ಮುಗಿಸಿದರು. ರಾಯರು ಮತ್ತೆ ಶತಪಥ ತಿರುಗಲಾರಂಭಿಸಿದರು. ತಾಯಿ ಬಂದು ಮಾತನಾಡಿಸಿದಾಗಲೇ ಎಚ್ಚರ. ತಾಯಿಗೂ ಮಗನಿಗೂ ಸಾಕಷ್ಟು ವಾದವಾಯಿತು. “ನನ್ನ ಮೊಮ್ಮಗನ್ನ ನಾನು ಕಣ್ತುಂಬ ನೋಡಬೇಡವೇನೋ ಮಗೂ” ಎಂದರು ಗೌರತ್ತೆ. “ಹೌದಮ್ಮ. ಆದರೆ…….” “ಆದರೆ ಪಾದರೆ ಬಿಟ್ಟುಬಿಡಪ್ಪ. ಅವಳೂ ಒಪ್ಪಿದ್ದಾಳೆ. ಎಂದಿದ್ದರೂ ಅವಳೇ ಯಜಮಾನತಿ. ಅಕ್ಕತಂಗೀರು ಅವರು ಅನ್ಯೋನ್ಯವಾಗಿದ್ದರೆ ನಿನಗೇನು ಯೋಚನೆ, ನಮ್ಮ ಮೀನಾನ ನಾನು ಬಲ್ಲೆ. ಯಾರು ಬಂದರೂ ಅವಳನ್ನು ಪೂಜಿಸಿಯೆ ಹೋಗುತ್ತಾರೆ – ನಿನಗೇನು ಭಯ. ಇದೊಂದು ನಡೆಸಿಕೊಡಪ್ಪಾ. ಸೀನಣ್ಣಾ, ಎಲ್ಲಾರಿಗೂ ತೃಪ್ತಿ, ಎಲ್ಲರಿಗೂ ಸಮಾಧಾನವಾಗುತ್ತೆ” ಎಂದು ದೆನ್ಯದಿಂದ ಬೇಡಿದರು. ರಾಯರ ಜೀವ ತಲ್ಲಣಿಸಿಹೋಯಿತು. ತಾಯಿಯ ಮಾತು ಕೇಳಿ ಕರ್ಣ ದುರ್ಯೋಧನನನ್ನು ಬಲಿಗೊಟ್ಟಂತೆ ತಾವು ಮೀನಾಕ್ಷಿಯನ್ನು ಬಲಿಗೊಡುತ್ತಿದ್ದೇವೆಂದು ಭಾವಿಸಿದರು. ಕಣ್ಣುಗಳಲ್ಲಿ ಫಳಫಳನೆ ಹನಿಗಳುದುರಿದವು. “ಇದೊಂದು ಮರೆತುಬಿಡಮ್ಮ. ಬೇಕಾದ ಹುಡುಗನ್ನ ದತ್ತು ತೆಗೆದುಕೊಳ್ಳೋಣ.” “ಎಲ್ಲಾದರೂ ಉಂಟೆನೋ ಮಗೂ. ಯಾರದೋ ಮಗು ತಂದು ಸಾಕಿದರೆ ನಮ್ಮದಾಗುತ್ತ್ಯೇ. ಇದಕ್ಕೇ ಒಪ್ಪಿಬಿಡಪ್ಪಾ. ನಾನೂ ಮುದುಕಿ, ಸಾಯೋ ಕಡೆಗಾಲದಲ್ಲಿ ನನ್ನ ಮಗ ನನ್ನ ಮಾತು ಮೀರಿದ ಎನ್ನೋ ದುಃಖ ಕೊಡಬೇಡ.” ತಾಯಿಯ ಮಾತುಗಳು ಈಟಿಯಂತೆ ಇರಿಯಲಾರಂಭಿಸಿದವು. ರಾಯರು ಚಿಂತಿಸಿ ಚಿಂತಿಸಿ ಸಾಕಾಗಿ ’ನಿನ್ನ ಇಷ್ಟಾಮ್ಮ. ಬೇಕಾದ್ದು ಮಾಡಿಬಿಡು’ ಎಂದರು. ಗೌರತ್ತೆ ಮಗನನ್ನು ಬಾಯಿತುಂಬ ಹರಸಿ ಗೆಲುವಿನ ನಗೆಯಿಂದ ಮೀನಮ್ಮನ ಬಳಿಗೆ ತೆರಳಿದರು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ