ಕಾಣೆಯಾದವರು

ಯೋಚಿಸಿ ಬಗೆಹರಿಯದೆ ಲತಾ ಎದ್ದು ಹೋಗಿ ಬಾಗಿಲು ತೆರೆದು ಆಕಾಶ ನೋಡುತ್ತ ನಿಂತು ಮತ್ತೆ ಬಾಗಿಲು ಹಾಕಿ ಬಂದು ಕುಳಿತಳು. ಮೈಮೇಲೆ ಪೇಪರು ಇಟ್ಟುಕೊಂಡು ಓದಲು ಹವಣಿಸಿ ಆಗದೆ ತೆಗೆದಿಟ್ಟು ಹಿಂದೆ ಒರಗಿದಳು. ಸೋಫಾದ ಮೇಲೆಯೇ ಮೊಣಕಾಲು ಮಡಚಿ ಕುಳಿತು ತಲೆ ಆನಿಸಿ ಕಣ್ಣಿಗೆ ಕೈಯೊತ್ತಿಕೊಂಡು ಕತ್ತಲು ಮಾಡಿಕೊಂಡಳು. ಯೋಚನೆ ಇನ್ನಷ್ಟು ಗಾಢವಾಯಿತು ಹೊರತು ಏನು ಮಾಡುವುದೆಂದೇ ಹೊಳೆಯಲಿಲ್ಲ. ಕುಸುಮಾ ವಿಚಾರ ಹೀಗಾಗುವುದೆಂದು ತಾನು ಎಣಿಸಿಯೇ ಇರಲಿಲ್ಲ.
ಪುನಃ ಗಂಡ ಮನೆಯಿಂದ ಹೊರಟು ಹೋಗಿದ್ದಾನೆ. ಇಷ್ಟು ದೀರ್ಘ ಕಾಲ ಎಂದೂ ಹೋಗಿರಲಿಲ್ಲ ಎಂದು ಬಿಕ್ಕಿದ್ದಳು ಕುಸುಮಾ.
“ಕುಸುಮಾ….”
“ಈ ಸಲ ಇವರು ಇಲ್ಲದಿರುವುದು ಅಷ್ಟೇ ಅಲ್ಲ….”
“ಮತ್ತೆ?”
ಹೆದರಿದ ದನಿಯಲ್ಲಿ ತಡವರಿಸುತ್ತ ನುಡಿದಳು ಕುಸುಮಾ “ಅಷ್ಟೇ ಅಲ್ಲ…. ಇವರ ಖಾಸಾ ಸಂಬಂಧಿಯಂತೆ. ಒಬ್ಬ ಬಂದಿದ್ದಾನೆ. ಸಂಬಂಧಿಕ ಅಲ್ಲ ಅನ್ನುವ ಹಾಗಿಲ್ಲ….” ಏನು ಮಾಡುವುದು ಅಂತ ತಿಳಿಯುತ್ತಿಲ್ಲ. ಹೊರಟು ಹೋಗು ಎನ್ನಲು ತನ್ನಿಂದ ಸಾಧ್ಯವಿಲ್ಲ. ಊರಲೆಲ್ಲ ನಡೆಯುವ ಸಂಗತಿ ಕೇಳಿದರೂ ಸಾಕು, ಭಯ ಕವುಚಿಕೊಳ್ಳುತ್ತದೆ. ಅಂಥಲ್ಲಿ ಇವ ಒಬ್ಬ ಎಲ್ಲಿಂದ ತಯಾರಾದ ಹೇಳು. ಅದು ಹೇಗೆ ಅಷ್ಟು ಧೈರ್ಯವಾಗಿ ಮನೆಯೊಳಗೆ ಬಂದು ಪ್ರತಿಷ್ಠಾಪನೆ ಆದ! ಇಷ್ಟಕ್ಕೂ ಗಂಡನಿಲ್ಲದ ವೇಳೆ” ಅಂತೆಲ್ಲ ಬಿಕ್ಕಿದಳು.
“ಆತ ಇಲ್ಲದ್ದು ಅವನಿಗೆ ಹೇಗೆ ತಿಳಿಯಿತು?”
“ಹೇಗೋ? -ಯಾರು ಬಲ್ಲ?….ನನಗಂತೂ ಅವನನ್ನು ನೋಡಿದ್ದೇ ನೆನಪಿಲ್ಲಪ್ಪ. ಅಡಿಗೆ ವೆಂಕಮ್ಮ ಇರುವ ಹೊತ್ತಿಗೆ ಸರಿ ಹೋಯಿತು.”
“ಅಯ್ಯ, ಅವರ ಸಹಾಯ ತಕೋ. ಅವನನ್ನು ಹೊರಗೆ ಕಳಿಸು.”
“ಅದಾ! ಅದೊಂದು ತಲೆಕೆಟ್ಟದ್ದು. ಅಡಿಗೆಗೊಂದು ಆದೀತು. ಮತ್ತೆ ನಯಾಪೈಸೆ ಪ್ರಯೋಜನವಿಲ್ಲ.” ಎಂದು ಎಡೆಯಲ್ಲೊಂದು ನಗೆಯಾಡಿದಳು.
“ಅಲ್ಲ, ನೀನು ಪೋಲೀಸರಿಗೆ ಯಾಕೆ ತಿಳಿಸಿಲ್ಲ? ಆ ಕಣ್ಣು ಕಾಣದ ಊರಲ್ಲಿ ಯಾರಿದ್ದಾರೆ ನಿನಗೆ?”
“ಏನು ಅನ್ನಬೇಕು ನಿನಗೀಗ? ಅದೆಲ್ಲ ಅಷ್ಟು ಸುಲಭವಾ? ಪೋಲೀಸರಿಗೆ ಕೊಟ್ಟರೆ ಅವೇನು ಸುಮ್ಮನೆ ಬಿಡುತ್ತವಾ?….ಕಡೆಗೆ ಈ ಆಸಾಮಿ ನಿಜಕ್ಕೂ ಇವರ ಖಾಸಾ ಸಂಬಂಧಿಯೇ ಹೌದಾಗಿದ್ದರೆ?”
“ನನ್ನ ಮಾತು ಕೇಳು. ಈ ಸಲವಾದರೂ…”
“ಮನೆಗೆ ಮಾತ್ರ ತಿಳಿಸುವುದಿಲ್ಲ. ನೀನು ಏನೇ ಹೇಳಿದರೂ. ನೀನೆಲಾದರೂ ತಿಳಿಸಿದರೆ ಜಾಗ್ರತೆ. ಕಾಲ ಬಂದಾಗ ನಾನೇ ಹೇಳುತ್ತೇನೆ. ನೀನು ಬಾ. ಬರುತ್ತೀಯಾ? ನೀನು ಬಂದರೆ ಸ್ವಲ್ಪ ಧೈರ್ಯವಾಗುತ್ತದೆ ನೋಡು….ಬರಲು ಸಾಧ್ಯವಾ ಅಷ್ಟು ಹೇಳು.”
“ಆಗಲಿ ಬರುತ್ತೇನೆ.”
-ಲತಾ ಯೋಚಿಸುತ್ತಲೇ ಕುಳಿತಳು. ಏನು ಮಾಡುವುದೆಂದೇ ಹೊಳೆಯಲಿಲ್ಲ.
ಕುಸುಮಾ ಗಂಡ ಕಾಣೆಯಾಗುವುದು ಇದೇನು ಹೊಸತಲ್ಲ. ಮದುವೆಯಾಗಿ ಇಂದು ನಾಲ್ಕು ವರ್ಷ ಸರಿಯಿದ್ದರೋ ಏನೋ. ಆಮೇಲಿಂದ ಹೀಗೇ. ಎಲ್ಲಿಗೆ ಅಂತ ತಿಳಿಸದೆ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಿದ್ದ. ಮತ್ತೆಂದೋ ಒಂದು ದಿನ ಪ್ರತ್ಯಕ್ಷನಾಗುತ್ತಿದ್ದ….ಅಂತೆಲ್ಲ ಕುಸುಮಾ ಹೇಳುವ ಹೊತ್ತಿಗೆ ಅದೆಲ್ಲ ಸುರುವಾಗಿ ಕೆಲ ಸಮಯವೇ ಆಗಿತ್ತು. “ಸುಮ್ಮನೆ ಯಾಕೆ ಅಂತ ತಿಳಿಸಲಿಲ್ಲ. ಒಬ್ಬಳೇ ನುಂಗಿ ನುಂಗಿ ಸಾಕಾಗಿ ಹೇಳುತ್ತಿದ್ದೇನೆ. ಅಪ್ಪ ಅಮ್ಮನ ಬಳಿ ಚಕಾರ ಬೇಡ ತಿಳಿಯಿತಾ? ಪಾಪ ಅವರು ನನ್ನ ಬಗ್ಗೆ ನಿಶ್ಚಿಂತೆಯಿಂದ ಇದ್ದಾರೆ… ನೀನೂ ತಲೆ ಬಿಸಿ ಮಾಡಿಕೊಳ್ಳಬೇಡವೇ. ಎಲ್ಲ ಸರಿಹೋಗುತ್ತದೆ. ನೋಡುವ….” ಪ್ರತೀಸಲ ಅಂತ ಹೊರಟು ಹೋದಾಗಲೂ ಇದೇ ರೀತಿಯಲ್ಲಿ ಆಕೆ ಫೋನ್ ಮಾಡುವುದು, ತನಗೆ ತಾನೇ ಸಮಾಧಾನ ಮಾಡಿಕೊಳ್ಳುವುದು; ಅವಳು ಹೇಳುವುದನ್ನೆಲ್ಲ ಕೇಳುವುದಷ್ಟನ್ನೇ ತಾನು ಮಾಡುತ್ತಿದ್ದುದು.
“ಬರಬೇಕಾ ನಾನು?” ಎಂದರೆ
“ಬೇಡ. ಬಂದಾದರೂ ಏನು ಮಾಡುತ್ತೀ. ಅದೂ ಇಷ್ಟು ದೂರ, ಎಲ್ಲಾ ಕೆಲಸ ಬಿಟ್ಟು, ಬರಬೇಕಾದರೆ ನಾನೇ ಹೇಳುತ್ತೇನೆ. ಆಗ ಬಾ” ಎಂದವಳು ಈಗ ಬಾ ಎನ್ನುತ್ತಿದ್ದಾಳೆ.
ಆಕೆಯನ್ನು ನೋಡದೆಯೇ ಎಷ್ಟು ದಿನವಾಯಿತೋ! ಹಾಗೇ ತಾನೇ? ಅವರವರ ಬದುಕು ಎತ್ತೆತ್ತಲೋ ಎಳೆಯುತ್ತಿರುತ್ತದೆ-ಗೊತ್ತುಗುರಿಯುಲ್ಲದೆ. ಪ್ರಯಾಣ ಸಾಗಿ ಒಂದು ಗೊತ್ತು ಸಿಕ್ಕಿ ಬೆನ್ನಿಗೆ ಕೈಕೊಟ್ಟು ನಿಂತು ನೋಡುವ ಹೊತ್ತಿಗೆ ಪ್ರಿಯರು ಬೇಕಾದವರು ಎಲ್ಲ ಎಲ್ಲೆಲ್ಲಿಯೋ ಚದುರಿ ಹೋಗಿರುತ್ತಾರೆ. ಆದರೆ ಈ ಕುಸುಮಾ ಕಾಗದವನ್ನಾದರೂ ಬರೆಯುತ್ತಿದ್ದಳು. ತನ್ನದು ಸುಖೀ ಸಂಸಾರ, ಇಬ್ಬರು ಮಕ್ಕಳು, ಇಲ್ಲಿ ಶಾಲೆ ಸರಿಯಿಲ್ಲ ಅಂತ ತಾಯಿ ಮನೆಯಲ್ಲಿ ಬಿಟ್ಟಿದ್ದೇನೆ-ಮುಂತಾಗಿ ಬರೆಯುತ್ತಿದ್ದವಳ ಪತ್ರ ನಿಧಾನವಾಗಿ ಕಡಿಮೆಯಾಯಿತು. ಸುದ್ದಿ ಇಲ್ಲವಾಯಿತು….ಜೀವನದ ಒಳಗೆ ಒಳಗೆ ಹೋಗುತ್ತಿದ್ದಾಳೆ ಹಾಗಾದರೆ ಅಂದುಕೊಂಡರೆ ಒಂದು ಮದ್ಯಾಹ್ನ ಹನ್ನೆರಡುವರೆಗೆ ಫೋನು ಬಂತು. “ನಾನು ಕುಸುಮಾ” ಎಂದಳು. “ಏನು, ರಾಹುಕಾಲದಲ್ಲಿ ಫೋನು ಮಾಡಿದ್ದೀಯಲ್ಲ” ಎಂದು ನಕ್ಕರೆ ಬಹಳ ಸೀರಿಯಸ್ಸಾಗಿ “ತಮಾಷೆ ಬೇಡ. ಇಲ್ಲಿ ಕೇಳು. ಇವರು ಇಲ್ಲ. ಮೂರು ದಿನವಾಯಿತು. ಆಪೀಸಿಗೆಂದು ಹೋದವರು ಮನೆಗೆ ಬಂದಿಲ್ಲ.”
“……….”
“ಎಲ್ಲ ಕಡೆ, ಆಫಿಸಿನಲ್ಲಿಯೂ ವಿಚಾರಿಸಿದೆ. ಯಾರಿಗೂ ಗೊತ್ತಿಲ್ಲ….ಪೀಲೀಸ್ ಕಂಪ್ಲೆಂಟ್ ಕೊಡುವ ಅಂದರೆ….ಇನ್ನೂ ಒಂದು ದಿನ ಬಿಟ್ಟು ನೋಡುವ ಅಂತ….”
“ಮೂರು ದಿನ ಆಯ್ತು ಅಂತೀ.”
“ಹೆದರಬೇಡ. ಬರುತ್ತಾರೆ. ಎಲ್ಲೆಗೆ ಹೋಗುತ್ತಾರೆ? ಅಡಿಗೆಯವರಿದ್ದಾರೆ. ಪರವಾಗಿಲ್ಲ” ಎಂದು ಇದೇನು ಹೊಸದಲ್ಲ ಎಂಬಂತೆ ತಾನೇ ಸಮಾಧಾನ ನುಡಿದಳು ಕುಸುಮಾ. ಮರುದಿನ ಸಂಜೆ ಹೊತ್ತಿಗೆ ಮತ್ತೆ ಮಾತಾಡಿದಳು ಆಹ್ಲಾದದಿಂದ-“ಬಂದರು ಮಾರಾಯ್ತಿ ಇವತ್ತು. ಮಧ್ಯಾಹ್ನ ಊಟದ ಹೊತ್ತಿಗೆ ಅಬ್ಬ!”
“ಎಲ್ಲಿಗೆ ಹೋಗಿದ್ದರಂತೆ?”
“ನಾನು ಕೇಳಲೇ ಇಲ್ಲ. ಮತ್ತೆ ಅಷ್ಟಕ್ಕೇ ಸಿಟ್ಟು ಬಂದು ಎದ್ದು ಹೊರಟರೂ ಹೊರಟರೇ.”
“ಸಧ್ಯ ಬಂದರಲ್ಲ ಬಿಡು.”
ಆತನನ್ನು ನೆನೆಸಿದಾಗಲೆಲ್ಲ ಅವರ ಮದುವೆ ಮಂಟಪದ ನೆನಪು. ಅಂದು ಕುಸುಮಾ ಅಂದರೇನು, ಅವಳ ಪತಿಯೆಂದರೇನು! ಮಂಟಪದಲ್ಲಿಯೇ ಸುರುವಾದ ನಗೆ. ಕ್ಷಣ ಮಾಸದ ನಗೆ. ಎಂದೂ ನಂದದು ಎಂಬಂತಹ ನಗೆ. ಯಾರು ಬಂದರೂ ಪರಿಚಯ ಮಾಡುತ್ತ ಮಾಡುತ್ತ ತಮ್ಮನ್ನೇ ಪರಿಚಯ ಮಾಡಿಕೊಳ್ಳುವ ಆರಂಭದ ಕ್ಷಣ. ಪರಿಚಯವಾಗುತ್ತ ಆಗುತ್ತ ಅಪರಿಚಿತತೆಯ ಕಡೆಗೆ ಪಯಣಿಸುತ್ತೇವೆಯೇ? ಹಾಗಾದರೆ ಹೀಗೆಲ್ಲ ಯಾಕೆ ಆಗಬೇಕು? ಅಂದಹಾಗೆ-“ನೋಡು ಕುಸುಮಾ, ಇದನ್ನೆಲ್ಲ ಬಚ್ಚಿಡುವುದು ಸರಿಯಲ್ಲ. ಮನೆಗೆ ತಿಳಿಸು. ನೀನೇ ನಿಭಾಯಿಸುತ್ತೀಯಾ? ಸರಿ, ಮೊದಲು ಯಾರಾದರೂ ಸೈಕಿಯಾಟ್ರಿಸ್ಟ್ ಹತ್ತಿರ ಕರೆದುಕೊಂಡು ಹೋಗು. ಬರೀ ಮಾತಿನಲ್ಲಿ ಕಳೆಯಬೇಡ….”
ಮಾತು ಪೂರ್ಣಗೊಳಿಸುವ ಮೊದಲೇ ಆಕೆ ಆಚೆಯಿಂದ ಕೂಗಿಕೊಂಡಿದ್ದಳು. “ಗೊತ್ತಿರುವುದನ್ನೇ ಯಾಕೆ ಹೇಳುತ್ತಿ?” ಡಾಕ್ಟರ ಹತ್ತಿರ ಯಾರನ್ನು ಕರೆದುಕೊಂಡು ಹೋಗುವುದು? ಅವರ ಬದಲು ನಾನು ಹೋದರಾದೀತು. ಅದೂ ಆಯಿತು ಅನ್ನು, ಹೋಗುವ ಬನ್ನಿ ಅಂದರೆ, ನಿನ್ನನ್ನೇ ಕರೆದುಕೊಂಡು ಹೋಗುತ್ತೇನೆ ಅಂತ ಒಂದು ಸಲ ಟ್ಯಾಕ್ಸಿಯಲ್ಲಿ ಅನಾಮತ್ತು ಎತ್ತಿ ಕೂಡಿಸಿ….ನಾನು ಹೆದರಿ ಕಂಗಾಲು! ಅದೆಲ್ಲ ನೀನು ಹೇಳಿದಷ್ಟು ಸುಲಭವಲ್ಲ. ಮತ್ತೆ ಇಂತಹದನ್ನೆಲ್ಲ ಎರಡೂ ಮನೆ ಕಡೆ ತಿಳಿಸದೆ ಇರುವುದೇ ಒಳ್ಳೆಯದು. ತಿಳಿಸಿದರೆ ಅವರ ನೆಮ್ಮದಿ ಹಾರಿಹೋಗುತ್ತದೆ. ಅಷ್ಟೇ ಅಲ್ಲ, ಎಲ್ಲ ಬಂದು ಒಟ್ಟಾರೆ ಗದ್ದಲ ಎಬ್ಬಿಸಿ ಈಗ ಇರುವ ನೆಮ್ಮದಿಯನ್ನೂ ಕೆಡಿಸಿ….” ಹೇಳುತ್ತ ಹೇಳುತ್ತ ನೆಮ್ಮದಿಯೆನ್ನುವ ವಸ್ತು ಜಗತ್ತಿನಲ್ಲಿದೆಯೇ, ಹೇಳು ಎಂದು ವೇದಾಂತ ಸುರುಮಾಡಿದ್ದಳು.
ಕುಸುಮಾ ಹೇಳುವುದನ್ನು ನಂಬಲಿಕ್ಕೇ ಆಗುತ್ತಿರಲಿಲ್ಲ. ಆವತ್ತಿನಿಂದ ಇದು ಎಷ್ಟನೆಯ ಬಾರಿಯೋ. ಇದೇನು ಆಗಿಬಿಟ್ಟಿತು ಅಂತ ಮೊದಮೊದಲು ಗರಬಡಿದಂತಾದರೂ ಅದದೇ ಮರುಕಳಿಸುತ್ತ ಬಂದಾಗ ಎಲ್ಲ ಎಂದಾದರೂ ಸರಿಯಾಗುತ್ತದೆ ಎಂಬೊಂದು ವಿಚಿತ್ರ ಉದಾಸೀನತೆಯಿಂದ ತಾನೂ ಸುಮ್ಮನಿದ್ದುಬಿಟ್ಟೆನಲ್ಲ!
ಆದರೆ ಹಿಂದೆಂದೂ ಈ ಸಲದಂತಲ್ಲ. ಆ ವ್ಯಕ್ತಿಯಾದರೂ ಯಾರಿರಬಹುದು? ಗಂಡ ಮನೆಯಲ್ಲಿ ಇಲ್ಲದಾಗ ಬಂದು ಸೇರಿಕೊಂಡವನು! ಏನು ಧೈರ್ಯ ಇರಬಹುದು! ಈ ಕುಸುಮಾಗೆ ಅವನನ್ನು ಓಡಿಸಲಿಕ್ಕೆ ಆಗುವುದಿಲ್ಲವೇ? ಆಕೆ ಅಂಥಾ ಅಮಾಯಕಲೇನೂ ಅಲ್ಲ. ಅವನನ್ನು ವಿಚಾರಿಸಿಕೊಳ್ಳಬಲ್ಲಂಥವಳೆ. ಏನೊ, ಅರ್ಥವಾಗುತ್ತಿಲ್ಲ. ಅವಳನ್ನು ಸುಮ್ಮನಿರಿಸಿದ್ದಾದರೂ ಯಾವುದಿರಬಹುದು?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ