ಕೋಟಿತೀರ್‍ಥ

ದಿಕ್ಕು ದಿಕ್ಕು ಹಾರುವ
ಪಿಂಡದನ್ನ ತಿಂದು ಕೊಬ್ಬಿದ ಕಾಗೆಗಳ
ಸರೀ ನೆರಳಡಿಗೆ

ಮಡಿಸೀರೆ ಕೌಪೀನ ಒದ್ದೆ ಬೆನ್ನು ಬಿಳಿ ರುದ್ರಾಕ್ಷೆ ಚರ್‍ಮ ಹರಗುತ್ತ
ಹರಿದಾಗೆಲ್ಲ ಜನಿವಾರ ನಿರ್‍ಲಿಪ್ತ
ಬದಲಾಯಿಸುತ್ತ ಬಿಸಿಲು ಕಾಯಿಸುತ್ತ
ಕೂತ
ದಪ್ಪ ಸಾಗವಾನಿ ಬೀಗಿದ ಬಾಗಿಲುಗಳ
ಸೋಲುವ ಸಾಲುಮನೆಗಳ

ನಟ್ಟ
ನಡುವೆ
ಅಕ್ಷದಲ್ಲಿ
ಅಲೆ ಅಲೆ ಪಾಪ ಬಿಚ್ಚುವ: ಕೋಟಿತೀರ್‍ಥ

ಶ್ರಾದ್ಧಕ್ಕೆಂದು ಬಂದ ಪಂಕ್ತಿಗಳು ಅಲ್ಲಲ್ಲಿ
ಧರ್‍ಮಬಿಕ್ಕುತ್ತ ನಿಂತಾಗ
ಇಲ್ಲೇ ನೀರ್‍ಕುಡಿದು ಗಳಗಳ
ಉಸಿರು ಸಿಕ್ಕದೆ ಸತ್ತವನ
ಮೇಲೆಳೆದು ಹಾಕಿದ ಹೆಣ
ದ ಸುತ್ತ ನೊಣ
ದಂತೆ ಜನ
ಫೂಟುಗಳಂತರಕ್ಕೇ ವಿರೋಧಾಭಾಸ

ದೂರ ದೇವರ ಢಣ್
ಗಂಟೆ ಕಂಪನಗಳು ಇಲ್ಲಿಯ ತನಕ ಬಂದು
ಎಬ್ಬಿಸುವ ಜಲತರಂಗಗಳ ಗುಂಟ
ತೇಲುತ್ತವೆ ದರ್‍ಭೆ ಬಿಲ್ಪತ್ರೆ ಬಾಳೆಲೆ
ದೂರ್‍ವೆ ದಾಸಾಳ
ಸುತ್ತ ದಂಡೆಗುಂಟದ ಮನೆ ಹಿತ್ತಿಲುಗಳಲ್ಲಿ
ಹುತ್ತ-ನುಗ್ಗೆಗಿಡ-ವಸ್ತ್ರ ಒಗೆದೊಗೆದು ನುಣುಪಾದ
ಶಿಲೆಗಲ್ಲು ಮತ್ತೆ ಸಮೃದ್ಧಿ
ಸುರಿಯುವ ಹಸಿ ಕೊಟ್ಟಿಗೆ
ದಂಡೆಗುಂಟ ಗೀರಿಕೊಂಡ ಬೀದಿಯಲ್ಲಿ ವಲಯ
ನಿರ್‍ಮಿಸಿ ಸುತ್ತುವ ದೇಹಗಳಿಗೆ
ಇವುಗಳ ಪರಿಚಯವೇ ಇಲ್ಲ
ಅವರವರ ಮೂಗಿಗೇ ಅವರರವರ ಹಾದಿ
ತಪ್ಪಿ ಮೂಗೂ ಹೊರಳುವದಿಲ್ಲ

ಹಾವಸೆ ಹಾಸಿದ ಮೆಟ್ಟಿಲಗುಂಟ ತುಂಟ
ಮಕ್ಕಳೇನು ಎಲ್ಲರೂ ಜಾರುವವರೇ….
ಜಾರಿದರೂ ನೇರವಾಗುವ ಅವಕಾಶ
ತಪ್ಪಿಸಿಕೊಳ್ಳುವವರೇ
ಬಿದ್ದವರು ಈಸಿದರೆ ಬದುಕಿಯಾರು
ಬದಲಿಗೆ ಹೇಸಿದರೆ ಸತ್ತು ಬಿಳುಚಿ
ಮೆಲ್ಲಗೆ ತೇಲಿ ಬಂದಾರು
ಕಮಲದ ಬಳ್ಳಿ ಹುಲ್ಲು ಪಾಚಿ ಸೊಂಪಾಗಿ
ಬೆಳೆದು ಬಿಟ್ಟಿವೆ ಇಲ್ಲಿ ಜತೆಗೆ ಪ್ರತಿ
ಬಿಂಬ ಕದಡುವ ತಳಕ್‌ ಪಳಕ್ ಮೀನುಗಳು
ಆಗಾಗ ಮುಗಿಲಿಗೇ ಚುಚ್ಚುವ
ಭರ್‍ಜರಿ ಜಾಗಂಟೆ ಭೊಂ ಭೊಂ ಶಂಖಗಳ
ವೇದ ಘೋಷಗಳ ಉನ್ಮತ್ತ ಗೌಜಿನಲ್ಲಿ
ಪಾಪ! ಕೇಳಿಸುವದೇ ಇಲ್ಲ-
ಎಳೆಯರ ಪಿಸಿ ಪಿಸಿ ಪ್ರಣಯ ಸವಿಮಾತು

ದೃಷ್ಟಿ ಮೈಥುನಕ್ಕಾಗಿ ಈಜುವ ಕಣ್ಣೋಟ
ಮೊದಲ ಮತ್ತು ಕಡೆಯ ಪುಟಗಳೇ ಇರದ
ಹಳೆ ಕಾದಂಬರಿಗಳಿಂದ ಹೊರಗಿಳಿದ ‘ಲವ್ವು’
ವೇದ ಶಾಲೆಯ ಸಾಲು ಬಾಯಿ
ಪಾಠದ ಶಬ್ದ ಶಬ್ದದ ನಡುಗಣ ಮೌನ ಕೇಳಿಸುವುದೇ ಇಲ್ಲ
ಆದರೂ ಮಕ್ಕಳಿಲ್ಲಿ ಸೈಕಲ್ ಕಲಿಯುತ್ತವೆ
ಒಳಪ್ಯಾಡ್ಲು ತುಳಿಯುತ್ತ ಸೀಟಿಗೇರುತ್ತವೆ
ಅಪ್ಪನ ಕಿವಿ ಪ್ರಸಾದ ಬಿದ್ದಲ್ಲೆ ಬ್ಯಾಲೆನ್ಸು ತಪ್ಪುತ್ತವೆ
ಪರಿಶುದ್ಧ ಹೃದಯದ ಪವಿತ್ರಪಾಪಗಳು
ಗರ್‍ಭಗುಡಿ ಸುತ್ತಣ ಅಂಧಕಾರದಲ್ಲಿ ಚಿಗಿತು
ಮರದ ಕೊಂಬೆ ಕಡಲು ಅಥವಾ ಬೆನಕನನ್ನು ಮುಳುಗಿಸಿದ
ಬಾವಿಯಲ್ಲಿ ಸುಖಾಂತಗೊಳ್ಳುತ್ತವೆ

ಬರಗಾಲ ಇಲ್ಲಿಲ್ಲ
ಪ್ರತಿವಾರ ಜನಿವಾರಗಳ ತುಂಬ
ರಾಶಿ ರಾಶಿ ಗಂಟುಗಳು
ಗಂಟೆಗೊಮ್ಮೆ ಗಂಟಿಗೊಂದು ಬ್ರಹ್ಮಾವತಾರ
ಹೋಮ ಹವನದ್ದೇ ಮೋಡ
ದೇಶಕ್ಕೆ ಬಾರದ ಉಪದೇಶಗಳದ್ದೇ ಮಳೆ
ಎಲ್ಲರೂ ತೊಳಕೊಂಡು ನೆಲದಲ್ಲಿಂಗಿದ
ಪಾಪದ್ದೇ ಬೆಳೆ

ಆದರೂ ಇದೇ ಪ್ರಪಂಚವಲ್ಲ
ಇದೇ ಕೇಂದ್ರದ ಸುತ್ತ ವರ್‍ತಮಾನ ಸರಿಯುತ್ತ
ಅದರಾಚೆ ಬೆಳೆಯುತ್ತವೆ ಚಂದ ವಲಯಗಳು
ಹಲವು ಹಸಿರು ತೋಟ ಬರೀ
ಹರಿಜನ ವಾರ್‍ಡು ಪಂಚಾಯತ ಗರತಿಗೇರಿ
ಇತ್ಯಾದಿ ಅಲ್ಲೂ ಮಳೆ ಬಡಿಯುತ್ತದೆ
ಋತುಚಕ್ರ ತಿರುಗಿ ಹೂವುಗಳು ಅರಳುತ್ತವೆ
ಅಲ್ಲಿ ಬೀಸುವ ಗಾಳಿ ಇಲ್ಲಿಗೂ ಬೀಸುತ್ತದೆ

ದಿನ ನಿತ್ಯ ಸಂಯುಕ್ತ ಕರ್‍ನಾಟಕ ಎನ್
ನರಸಿಂಹಯ್ಯ ವಿವಿಧಭಾರತಿ ಫೋನು ತುಂಬ ಹಲೋಹಲ
ಕೊನೆಗೆ ಎಲ್ಲಕ್ಕೂ ಹೊರತಾದ
ಆ ಬಂಗಡೆ ಬಣ್ಣದ ಕಡಲೂ
ತೆಂಗಿನ ಫ್ಯಾನುಗಳಡಿಯಲ್ಲಿ ಬಿಸಿಲಿಗೆ ಬೆವರುತ್ತದೆ
ಈ ಕೋಟಿತೀರ್‍ಥದಲ್ಲಿ ಕೆಸರು ಹೀಗೆಯೇ ಬೆಳೆಯುತ್ತ
ಟ್ರಕ್ಕುಗಟ್ಟಲೆ ಧಾನ್ಯ ಯಜ್ಞಕ್ಕೆ ಸಲ್ಲುತ್ತ
ಶಿವರಾತ್ರೆ ಜಾತ್ರೆಯಲ್ಲಿ ನಿರೋಧ ಖರ್‍ಚಾಗುತ್ತ ಬೆವರು ಜಿನುಗುವ
ಹಾಸಿಗೆ ಪಿಂಡಿಗಳು ಕಮಟುಗೊಳ್ಳುತ್ತ ದೇವನಾಗರಿ ವೀರ
ಗಲ್ಲುಗಳು ಸವೆಯುತ್ತ ಹಿತ್ತಲ ಸೀಯಾಳಬೊಂಡ ಕಳುವಾಗುತ್ತ
ಆಕರ್‍ಷಣೆ ಇಂಗಿ ವಲಯಗಳು ಕೇಂದ್ರದಿಂದ ದೂರ ಸಿಡಿಯುತ್ತ…
ನನಗನಿಸುತ್ತದೆ ಕೊನೆಗೊಂದು ದಿನ ಇಲ್ಲಿ-
ಏನೂ ಉಳಿಯುವುದಿಲ್ಲ
ಚಂದ್ರನ ಗುಳಿಗಳಂತೆ ಇದೂ ಒಂದು ಗುಳಿಯಾಗಬಹುದು
ಮತ್ತು ಅಗೆದರೆ….
ನೀತಿ ಮಡಿ ಮೈಲಿಗೆಗಳದ್ದೇ ಕನಸು ಕಂಡ
ಬದ್ಧವಾಗುವ ಯಾವ ಪ್ರಾಯಶ್ಚಿತ್ತಕ್ಕೂ
ಸನ್ನದ್ಧವಾಗುವ
ಹಣೆಬರಹ ಹೊತ್ತ ಕೆಲ
ಅಸ್ಥಿಪಂಜರಗಳು ಸಿಕ್ಕಬಹುದು
*****