ಪ್ರತಿದಿನದ ಸೂರ್ಯೋದಯದ ಬಿಳಿರಂಗು, ರುದ್ರಿಯ ಮನಸ್ಸಿನಲ್ಲಿ ನಿರೀಕ್ಷೆಯ ರಂಗವಲ್ಲಿ ಮೂಡಿಸುತ್ತದೆ. ಇನ್ನೇನು ಇಹದ ಎಲ್ಲ ವ್ಯಾಪರವೂ ಮುಗಿದೇ ಹೋಯಿತೇನೋ ಎಂಬಂತೆ ರಾತ್ರಿಯ ಸಮಯದಲ್ಲಿ ತಣ್ಣಗಿದ್ದ ಆ ದೇಹದ ಸಮಸ್ತ ಅಂಗಾಂಗಗಳೂ ಬಿಸಿಯಾಗುತ್ತವೆ. ಯಾರದ್ದಾದರೊಬ್ಬರ ನೆರವಿನಲ್ಲಿ ಆಶ್ರಮದ ಹೊರಜಗುಲಿಯ ಮೇಲೆ ಬಂದು ಕುಳಿತು ಬಿಟ್ಟರೆ ಒಳಹೋಗುವವರೆಗೆ ಕಣ್ಣೆಲ್ಲ ದಾರಿಯ ಮೇಲೇ. ಆ ದೂರದಿಂದ ಬರುವ ಆಕಾರ ಹತ್ತಿರ ಸರಿದು ಬರುವಾಗ, ರೆಪ್ಪೆಯಡಿಯ ಕಿರುಗಣ್ಣಿನಿಂದ ಅದನ್ನೇ ನೋಡತ್ತಾಳೆ. ಮಮತೆಯ ಪೊರೆ ಆವರಿಸಿದ ಮನದ ಪದರದ ಮೂಲಕ ನೋಡುವ ಅವಳ ಕಣ್ಣಿಗೆ “ಅದೋ ಅಲ್ಲಿ ಬರುತ್ತಿರುವವನು ತನ್ನ ಸಿವೇಸನಲ್ಲವೇ?ಎನಿಸುತ್ತದೆ. “ಹುಂ ನನಗೆ ಗೊತ್ತು. ಅಮ್ಮನಿಂದ ದೂರವಾಗಿ ಅವನು ಜಾಸ್ತಿ ದಿನ ಇರಲ್ಲಾಂತ” ಎಂದು ಅಂದುಕೊಳ್ಳುತ್ತಾಳೆ ಅವಳು. ಆದರೆ ಆ ಆಕಾರ ಇವಳತ್ತ ತಿರುಗಿಯೂ ನೋಡದೆ ಮುಂದೆ ಸರಿದಾಗ, ಅದರ ಹಿಂದಿನ ಆಕಾರದ ಮೇಲೆ ಕಣ್ಣಿಡುತ್ತ, “ಓ ಇವನು ಸಿವೇಸನಿರಬೇಕು, ಆ ಅವನು ಆಗ ಹೋದವನಲ್ಲ ಎಂಬ ಆಸೆಯ ಭಾವನೆಯನ್ನು ಎತ್ತಿ ಆ ಇನ್ನೊಂದು ಮನುಷ್ಯನ ಮೇಲೆ ಹಾಕಿ ಗುರುತಿಸುವ ಕೆಲಸದಲ್ಲಿ ತಲ್ಲೀನವಾಗುತ್ತದೆ. ಬಿಸಿಲು ಏರುತ್ತ ಹೋದಂತೆ, ಬಳಲಿದ ಕಣ್ಣುಗಳು, ಬಾಡುವ ದೇಹ, ವಿಶ್ರಾಂತಿ ಪಡೆದರೂ, ಕಿವಿ ಮಾತ್ರ ಜಾಗೃತವಾಗಿದ್ದು, ಫೋನಿನ ಕರೆಗೆ, ಅಂಚೆಯವನ ಕೂಗಿಗೆ, ಪಾರ್ಸೆಲ್ ಬಿದ್ದ ಶಬ್ದಕ್ಕೆ, ಇನ್ನಷ್ಟು ಚುರುಕಾಗಿ, “ಇದು ಸಿವೇಸನದೇ ಫೋನಿರಬೇಕು, ಅಂಚೆಯವ ಎಸೆದದ್ದು ನನಗೆ ಬಂದ ಪತ್ರವೇ ಇರಬೇಕು, ಇದು ನನಗೆ ಕಳಿಸಿದ ಪಾರ್ಸೆಲ್ ಆಗಿರಬಹುದು, ಅಗೋಚರವಾದುದೇನೋ ನಡೆದು ಹೋಗುತ್ತದೆ, ತನ್ನ ಮತ್ತು ಸಿವೇಸನನ್ನು ಹತ್ತಿರ ತಂದು ಬಿಡುತ್ತದೆ ಎಂಬ ಭ್ರಮೆಯಲ್ಲಿ ಉಸಿರು ಹಿಡಿದು, ಕಾಯುತ್ತಿದ್ದಾಳೆ ರುದ್ರಿ. ಆದರೆ ಈ ವರೆಗೆ ಏನೆಂದರೆ ಏನೂ ನಡೆದಿಲ್ಲ. ಮಗನೇ ಯಾಕೆ, ಅವಳ ಪರಿಚಯದ ಒಂದು ಆಕೃತಿಯೂ ಅವಳ ಕಣ್ಣಿಗೆ ಬಿದ್ದಿಲ್ಲ.
ಬೆಳಗಿನ ಬಿಸಿ ಕ್ರಮೇಣ ಸಂಜೆಗೆ ಆರಿ ರಾತ್ರಿ ಹಾಸಿಗೆಯ ಮೇಲೆ ಬೀಳುವ ಹೊತ್ತಿಗೆ ಹಿಮದಷ್ಟು ತಣ್ಣಗಾಗುವ ರಾತ್ರಿಯಂತೆಯೇ ಅವಳ ಆಸೆ, ನಿರೀಕ್ಷೆಗಳೂ ತಣ್ಣಗಾಗುತ್ತವೆ. ಏನೂ ಕೆಲಸ ಮಾಡದಿದ್ದರೂ ಕಾಯುವಿಕೆಯಲ್ಲೇ ದಣಿದ ರುದ್ರಿಯ ದೇಹ ಉಸಿರಿಲ್ಲದಂತೆ ಮಲಗಿ ಬಿಡುತ್ತದೆ. ಬೆಳಗಿನಿಂದ ಮಣ ಮಣ ಮಂತ್ರ ಉಸುರುವ ಅಜ್ಜಿ, ಊಟ-ತಿಂಡಿ ಹಂಚುವ ಹುಡುಗಿ, ಪ್ರಾರ್ಥನೆಗೆ ಕರೆಯುವ ಮೇಲ್ವಿಚಾರಕ, ಅಲ್ಲಿಂದಿಲ್ಲಿಗೆ ಬಿರುಸಿನಿಂದ ಓಡಾಡುವ ಸಹಾಯಕರು, ಕೆಲಸಗಾರರು, ಒಟ್ಟು ಇಡೀ ಆಶ್ರಮವೇ ದಿನದ ಸಂತೆ ಮುಗಿಸಿ ಮಾತು ಕಳೆದುಕೊಂಡು ಸ್ಥಬ್ದಗೊಳ್ಳುತ್ತದೆ. ಆಗ ಮೆಲ್ಲಗೆ ಎಚ್ಚರಗೊಂಡು, ಒಳಗೊಳಗೇ ಒಂದರ ನಂತರ ಒಂದರಂತೆ, ಮಿಸುಕಾಡುವುದು ರುದ್ರಿಯ ನೆನಪುಗಳು ಮಾತ್ರ. ಹೀಗೇ ತನ್ನನ್ನು ತಾನು ಏಕಾಂತಕ್ಕೆ ಕಟ್ಟಿ ಹಾಕಿಕೊಂಡು, ತನ್ನೊಳಗಿನ ನೆನಪುಗಳನ್ನೆಬ್ಬಿಸಿ ಅವುಗಳೊಂದಿಗೆ ಮಾತಾಡುತ್ತ, ಸಿವೇಸನ ಒಂದು ಭೇಟಿ, ಒಂದು ಕರೆ, ಒಂದು ಧ್ವನಿಗಾಗಿ ಕಾಯುತ್ತಾ, ತೆವಳಿ ಬರುವ ಹಗಲು ರಾತ್ರಿಗಳಿಗೆ ವಿದಾಯ ಹೇಳುತ್ತಾ, ತನ್ನ ಬದುಕಿಗೇ ವಿದಾಯ ಹೇಳಲು ಮನಸ್ಸನ್ನು ತಯಾರುಗೊಳಿಸಿಕೊಳ್ಳುತ್ತಿದ್ದಾಳೆ ಅವಳು.
*
*
*
ಬಾಳ ಕನಸಿನ ಹೊಳೆಯ ಆಳ ಅಳೆಯುವ ಮೊದಲೇ ರುದ್ರಿಯ ಗಂಡ ನಿಜವಾದ ಹೊಳೆಯ ಸುಳಿವಿಗೆ ಸಿಕ್ಕಿ ಮುಳುಗಿಹೋಗಿದ್ದ. ಬಡತನ ಬಗಲಲ್ಲಿ ಉಳಿದಿತ್ತು. ಆದರೆ ಮನದಲ್ಲಿ ಛಲವಿತ್ತು. “ಓದುಸ್‌ಬೇಕು. ಯಾರಿ೦ದಾನು ಕಸೀಕಾಗ್ದ ಇದ್ಯೆ ಆಸ್ತೀನ ಅವುನ್ ತಲಿನಾಗೆ ಕಟ್‌ಕೊಡ್ಬೇಕು, ಎಂಬುದು ಅವಳ ಹಗಲಿರುಳ ಮಂತ್ರವಾಗಿ, ಮಗನ ಘನತೆಯನ್ನು ಹಾಡುವ ಘಳಿಗೆಗಳ ಕನಸು ಕಾಣುತ್ತ, ಗಂಡನೊಂದಿಗೆ ಮಾಡುತ್ತಿದ್ದ ದಿನಗೂಲಿಯನ್ನೇ ಮುಂದುವರಿಸಿದ್ದಳು ಅವಳು. ಹೊಟ್ಟೆ ಬಟ್ಟೆ ಕಟ್ಟಿ ಸಾಗಿಸಿದ ಆ ದಿನಗಳು ಅವಳ ಪಾಲಿಗೆ ಒಂದು ಸಾಹಸ ಯಾತ್ರೆಯೇ. ಯಾವ ಕಷ್ಟ ಕೋಟಲೆಗೂ ಎದೆ ಅದುರಿಸದೆ, ತನ್ನ ಶ್ರಮದ ಗಂಟಿನೊಳಗಿನ ಇಷ್ಟಿಷ್ಟೇ ಚಿಲ್ಲರೆಗಳನ್ನು, ಬಂಗಾರದ ಬಿಸ್ಕೀಟುಗಳೆಂಬಂತೆ, ಎಣಿಸಿ ಎಣಿಸಿ ಮಗನ ಪ್ರತಿವರ್ಷದ ಪರೀಕ್ಷೆಗಳಿಗೆ ಕಟ್ಟಿದಳು. ಆ ಹಳ್ಳಿಯಲ್ಲಿ ಹೈಸ್ಕೂಲ್ ಇಲ್ಲದ್ದರಿಂದ ರಾಮನಗರದ ಅಣ್ಣನ ಮನೆಯಲ್ಲಿ ಅವನನ್ನು ಬಿಟ್ಟು ಅವನಾಗಿ ನಿಲ್ಲಿಸುವವರೆಗೆ ಓದಿಸಿದಳು. ಪಿ.ಯುಸಿ.ಯಲ್ಲಿ ಫೇಲಾಗಿ, ಓದು ಬಿಟ್ಟು ಬಂದ ಸಿವೇಸ, ಕೆಲತಿಂಗಳಕಾಲ ಹಳ್ಳಿಯಲ್ಲಿ ಉಳಿದಾಗಲೇ ಅವನ ಮತ್ತು ಚೆನ್ನಿಯ ಪ್ರೀತಿ-ಪ್ರೇಮಗಳ ವ್ಯಾಪಾರ ಗಟ್ಟಿಯಾದದ್ದು. ಸಂಗತಿ ದಟ್ಟವಾದದ್ದು.
ಅವರಿಬ್ಬರ ಅಂತರಂಗದೊಳಗೆ ಪ್ರೀತಿಯ ತಾಪ ಕಾಡತೊಡಗಿದೆ ಎಂಬ ಅನುಮಾನ ಬಂದಾಗಿನಿಂದ, ರುದ್ರಿ ಮಗನಿಗೂ, ಆ ಚನ್ನಮ್ಮನಿಗೂ ತಿಳಿ ಹೇಳುತ್ತಲೇ ಬಂದಿದ್ದಳು. “ಬ್ಯಾಡ ಕಣ್ಲಾ ಸಿವೂ. ನೀವಿಬ್ರೂವ ಒಬ್ರಿಗೊಬ್ರು ಇಷ್ಟೊಂದ್ ಅಚ್ಕಾಬ್ಯಾಡ್ದು. ನಂ ಜಾತೀನೇ ಬ್ಯಾರೆ. ಅವರ ಜಾತೀನೇ ಬ್ಯಾರೆ. ಅವ್ರು ಮನುಸ್ಸತ್ವದಾಗೆ ಕಡಿ. ನಾವು ಜಾತಿನಾಗೆ ಕಡಿ. ಚನ್ನಿಯ ಅಪ್ಪಂಗೆ ಬಳ್ಗ ದೊಡ್ದು. ನಿಮ್ಮಿಬ್ರ ಇಸ್ಯ ಗೊತ್ತಾದೇಟಿಗೆ ಉಲಿ ಅಂಗ್ ಮ್ಯಾಲೆ ಬಿದ್ದು ಚಮ್‌ಡಾ ಅರಿಯಾಕೂ ಏಸೋವಲ್ಲ ಅವು. ನಮ್‌ಗಿಂತ ಅನುಕೂಲನೂ ಐತಿ. ಈ ನಿಂ ಸಂಬಂದ ಒಳ್ಳೇ ಕೊನಿ ಕಾಣದು ಅನುಮಾನ್ನೇಯ. ಇಲ್ಲಿಗೇ ನಿಲ್ಸಿಬುಡಿ” ಎಂದು. ಆದರೆ ತಮ್ಮ ಸುತ್ತ ಪ್ರೀತಿಯ ಕಲ್ಲಿನಲ್ಲಿ ಪ್ರೇಮದ ಗಟ್ಟಿ ಗೋಡೆ ಕಟ್ಟಿಕೊಂಡ ಸಿವೇಸ ಮತ್ತು ಚೆನ್ನಿಗೆ, ಅದರಿಂದ ಹೊರ ನಿಂತು ಹೇಳಿದ ಇವಳ ಮಾತುಗಳು ಕೇಳಲೇ ಇಲ್ಲ. ಮೊದಲು ಕಣ್ಣುಗಳ ಮೂಲಕ ವಿನಿಮಯಗೊಂಡ ಅವರಿಬ್ಬರ ಪ್ರೀತಿ, ಆ ನಂತರ ಭಯದಲ್ಲಿ, ಕಳ್ಳತನದಲ್ಲಿ, ಅರೆ ಧೈರ್ಯದಲ್ಲಿ, ಅವರಿವರ ತೋಟದೊಳಗೆ, ಊರಂಚಿನ ಕಾಡಿನೊಳಗೆ, ಕೆರೆಯ ಏರಿಯ ಮೇಲೆ ನಿಜರೂಪದಲ್ಲಿ ಭೇಟಿ ಕೊಡತೊಡಗಿತು. ಈ ಭೇಟಿಗಳಿಂದ ಬಲಗೊಳ್ಳತೊಡಗಿದ ಅವರ ಪ್ರೇಮದ ಕಥೆ, ಇಡೀ ಹಳ್ಳಿಯ ಅರಿವಿಗೇ ಬಂದಿದ್ದೇ ಆಗ.
ನಾಲ್ಕೇ ಮನೆಯ ಆಚೆ ಸ್ವಲ್ಪ ದೊಡ್ಡದಾಗಿ ಇದ್ದುದು ಚೆನ್ನಿಯ ಮನೆ. ಅವಳ ಹೆತ್ತವರು, ಜಾತಿಯ ಸೆರಗು ಸುತ್ತಿಕೊಂಡು, ಬದುಕಿನ ಸೀರೆ ಉಡುವುದರಲ್ಲಿ ಮರ್ಯಾದೆಯ ಪಟ್ಟ ಸಿಗುತ್ತದೆ ಎಂದು ನಂಬಿದವರು, ಅನಿಷ್ಟದವನಾದರೂ ಜಾತಿಯ ಹುಡುಗನನ್ನು ಕಟ್ಟಿಕೊಳ್ಳುವುದರಲ್ಲೇ ಸ್ವರ್ಗಸುಖವಿದೆಯೆಂದು ಭ್ರಮಿಸಿದವರು. ಸುದ್ದಿ ತಿಳಿದಿದ್ದೇ ಗಾಬರಿಗೊಂಡರು. ಆರನೇ ತರಗತಿ ಮುಗಿಸಿ ಮನೆಗೆಲಸಕ್ಕಿಳಿದ ಚೆನ್ನಿಗೆ ಧಿಡೀರನೆ ಬೇರೊಂದು ಸ್ವಜಾತಿ ಅಂಗವಿಕಲ-ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿ, ಐದು ಕಿಲೊಮೀಟರ್ ದೂರದ ಅವಳ ಅಜ್ಜಿಯ ಮನೆಗೆ ಅವಳನ್ನು ಸಾಗ ಹಾಕಿ, ಪ್ರೇಮಿಗಳಿಬ್ಬರೂ ಕಂಗಾಲಾದುದನ್ನು, ಮತ್ತು ಮತ್ತೆಂದೂ ಭೇಟಿಯಾಗದಿದುದನ್ನು ಕಂಡು ಸಮಾಧಾನದ ನಿಟ್ಟುಸಿರಿಟ್ಟರು. ಇನ್ನು ಜಾತಿ-ಮರ್ಯಾದೆಗೆ ಕುಂದಿಲ್ಲವೆಂದು ನಿರಾಳರಾದರು.
ನಿರಾಶರಾದ ಚೆನ್ನಿ ಮತ್ತು ಸಿವೇಸ, ಮದುವೆಯ ಹಿಂದಿನ ವಾರದವರೆಗೆ ಮತ್ತೆ ಭೇಟಿಯಾಗಲಿಲ್ಲ. ಯಾರ ಮೇಲೂ ತಿರುಗಿ ಬೀಳಲಿಲ್ಲ. ನಿಜವೆಂದರೆ ಅವರಿಬ್ಬರ ನಡುವಿನ ಪ್ರೇಮ ಮಾತ್ರ ಮರೆಯಾಗಲೇ ಇಲ್ಲ. ಅಂತರಂಗದೊಳಗಿನ ಪಿಸುಮಾತು ಮತ್ತು ಭೇಟಿಗಳನ್ನು ನಿಲ್ಲಿಸಲೇ ಇಲ್ಲ. ಅವು ತಾವಿಬ್ಬರೂ ಸದಾಕಾಲ ಒಂದಾಗಿ ಬಿಡಲು, ತಮ್ಮತಮ್ಮಲ್ಲೇ ಉಪಾಯಗಳನ್ನು ಹುಡುಕಿಟ್ಟಿದ್ದವು. ತಮ್ಮ ಓಟಕ್ಕೆ ತಂತ್ರಗಳನ್ನು ರಚಿಸತೊಡಗಿದ್ದವು. ಅವರಿಬ್ಬರ ಈ ಒಂದಾಗುವ ಉಪಾಯಕ್ಕೆ, ಓಡಿ ಹೋಗುವ ತಂತ್ರಕ್ಕೆ ಮಾಧ್ಯಮವಾದವಳೇ ರುದ್ರಿ.
ರುದ್ರಿ ಪ್ರತಿ ಸ೦ಜೆ, ಊರಂಚಿನ ಕೆರೆಯ ಬಳಿ ಇದ್ದ ಸಣ್ಣ ಮಾರಿ ಗುಡಿಗೆ ದೀಪ ಹಚ್ಚಿ ಬರಲು ಹೋಗುತ್ತಿದ್ದಳು. “ಇರಾ ಒಬ್ಬ ಮಗ೦ಗೆ ಒಳ್ಳೇದ್ ಮಾಡ್ ತಾಯೀ, ಅವ್‌ನು ಅಂದ್ಕಂಡಿದ್ದೆಲ್ಲಾನೂ ನಡೀಲಿ. ಅವನುನ್ನ ಸುಕಾಗಿಡು”, ಎಂಬ ಬೇಡಿಕೆಯ ದೀಪದಲ್ಲಿ, ಮಾರಿಯ ಮುಖವನ್ನು ಬೆಳಗಿಸಿ ಬರುತ್ತಿದ್ದಳು. ಅಂದೂ ಹಾಗೆ ದೀಪ ಹಚ್ಚಿ ಮಾರಿಯ ಕಾಲಿಗೆ ತನ್ನ ತಲೆ ತಾಕಿಸಿದಾಗ, ನಸುಗತ್ತಲಿನಲ್ಲಿ ಮಾರಿಯ ವಿಗ್ರಹದ ಹಿಂದಿನಿಂದ ಯಾವುದೋ ಮೆತ್ತನೆಯ ಕೈಯ್ಯೊಂದು ಕೈ ಬೆರಳಿಗೆ ತಗಲಿತ್ತು. ಸಣ್ಣಗೆ ಕಿರುಚಿದವಳು, ಆ ಭಯದಿಂದ ಹೊರಬರುವುದರೊಳಗೆ, ಅರಳಿದ ಕಣ್ಣೊಳಗೆ ಎದುರಿದ್ದವಳ ಪ್ರತಿಬಿಂಬ ಪೂರ್ತಿ ಬೀಳುವುದರೊಳಗೆ, ಒಂದು ಪುಟ್ಟ ಡಬ್ಬಿ ಅವಳ ಅಂಗೈಲಿತ್ತು. ಸರಸರನೆ ಓಡಿ ಗಿಡಗಳ ಸಂದಿಯಲ್ಲಿ ಮರೆಯಾದವಳನ್ನೇ ಗಾಬರಿಯಲ್ಲಿ ನೋಡುತ್ತ ಪ್ರಶ್ನೆಯ ಉಸಿರು ಹಾಕಿದ್ದಳು ಅವಳು, “ ಐ ಚೆನ್ನಿನಾ”?
ರುದ್ರಿಯ ಭಯ ಇಮ್ಮಡಿಸಿತ್ತು. ಸುತ್ತ ಯಾರೂ ಗಮನಿಸುವವರಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡರೂ, ಆ ಡಬ್ಬಿಯನ್ನು ಅಲ್ಲಿ ತೆರೆದು ನೋಡುವ ಧೈರ್ಯವಾಗದೆ, ಸೆರಗಲ್ಲಿ ಮುಚ್ಚಿ ಮಗನ ಮುಂದೆ ತಂದು ಬಿಚ್ಚಿದಳು. ಒಂದಕ್ಷರವೂ ಬರೆಯದ ಬಿಳಿ ಹಾಳೆಯ ಮೇಲೆ ಬರೀ ಗೆರೆಗಳು. ಊರಿನ ಬೆಟ್ಟದ ಒಂದು ರೇಖಾ ಗೋಪುರ. ಅದರ ಕೆಳಗೊಂದು ವೃತ್ತ. ಆಕಾಶದಲ್ಲಿ ಅರ್ಧ ಚಂದ್ರ. ಮೂರು ದಿನಗಳ ನಂತರ ಸಿವೇಸನಿಗೆ, ಆ ಗೆರೆ, ಚಂದ್ರ ಮತ್ತು ವೃತ್ತಗಳ ಅರ್ಥ ಹೊಳೆದಿತ್ತು. ಆ ‘ಗೆರೆಗಳು” ದಿನಗಳ ಲೆಕ್ಕವಾಗಿದ್ದವು. ‘ಬೆಟ್ಟ” ಭೇಟಿಗೆ ನಿಗದಿ ಪಡಿಸಿದ ಸ್ಥಳ, ಮತ್ತು ‘ವೃತ್ತ” ಅವರಿಬ್ಬರೂ ಭೇಟಿಯಾಗಬೇಕಾದ ಕೇಂದ್ರ ಬಿಂದು. “ಉಂ ಅಂಗಾದ್ರೆ ಅವಳೂ ತನ್ನುನ್ನ ಮರ್ತಿಲ್ಲ” ಸಿವೇಸ ಖುಶಿಯಲ್ಲಿ ಕುದುರೆಯಂತೆ ಕೆನೆದ. ಅವಳು ಸಿಕ್ಕೇಬಿಟ್ಟಂತೆ ನೆಗೆದ. ಭಯದಲ್ಲಿ ಮುಳುಗಿದ್ದ ಅಮ್ಮನಿಗೆ ಹಲವು ರೀತಿಯಲ್ಲಿ ಧೈರ್ಯ ತುಂಬಿ ಒಪ್ಪಿಸಿದ. ಸಂತಸದ ಅಲೆಗಳನ್ನು ನಗುವಿನಲ್ಲಿ ತೇಲಿಸಿ, ಮನೆ ತುಂಬ ಹೊಯ್ದಾಡಿದ. ಮರುದಿನ ಅದೇ ಚೀಟಿಗೆ ಎರಡು ದೊಡ್ಡ ರೈಟ್ ಮಾರ್ಕ್ ಹಾಕಿ, ತಾನೂ ಅಮ್ಮನ ಜೊತೆಗೆ ಮಾರಿಗುಡಿಗೆ ಹೋಗಿ ದೀಪ ಹಚ್ಚಿ, ವಿಗ್ರಹದ ಪಕ್ಕ ಅದೇ ಡಬ್ಬಿಯನ್ನು ಇಟ್ಟು ಬಂದ. ರುದ್ರಿ ಮಗ-ಸೊಸೆಯ ಜಾಣತನಕ್ಕೆ ಮನದಲ್ಲೇ ಮೆಚ್ಚಿದಳು., ಚೆನ್ನಿಯಷ್ಟೂ ಅವಳು ಓದಿಲ್ಲದಿದ್ದರೂ ಒಂದಿಷ್ಟು ವಿವೇಕವಿತ್ತು. ಪ್ರೀತಿಸಿದ ಮಕ್ಕಳು ಸುಖವಾಗಿರಬೇಕೆಂಬ ಅಪೇಕ್ಷೆ ಇತ್ತು. ತಮ್ಮದೇ ಜಾತಿಯ ಒಂದಿಷ್ಟು ಮೇಲ್ಪ೦ಗಡದ ಹುಡುಗಿ ತಮ್ಮ ಮನೆಗೆ ಬಂದರೆ, ಅಡಿಗೆ, ಊಟ, ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲವೆಂಬ ನಿಶ್ಚಿಂತೆಯಿತ್ತು. ಗಟ್ಟಿ ‘ಗಂಡಾ”ದ ಸಿವೇಸನೇ ಒಪ್ಪಿ, ತಾನು “ಗಂಡಿನ ತಾಯಿ”ಯಾದವಳೂ ಒಪ್ಪಿದ ಮೇಲೆ, ಈ ಮದುವೆಯನ್ನು ವಿರೋಧಿಸುವುದಕ್ಕೆ, ಅವುಗಳ ದಿಮಾಕು ಬಿಟ್ಟರೆ ಬೇರೇನೂ ಕಾರಣವೇ ಇಲ್ಲ ಎಂಬುದು ಅವಳ ಅನಿಸಿಕೆಯಾಗಿತ್ತು. ವಿರೋಧಿಸುವವರ ವಿರುಧ್ದ ಸಂಚು ಹೂಡಿ, ಹೇಗಾದರೂ ಈ ನಂಟಸ್ತನ ಗಟ್ಟಿಗೊಳಿಸಿ, ಗೆಲ್ಲುವ ಹಟವೂ ಇತ್ತು.
ಆದರೆ ನಾಲ್ಕು ದಿನಗಳವರೆಗೆ ಅಲ್ಲಿಟ್ಟ ಡಬ್ಬಿಯನ್ನು ಯಾರೂ ಮುಟ್ಟಿರಲಿಲ್ಲ. ಮುಟ್ಟಿದ್ದರೂ ತೆಗೆದು ನೋಡಿದ್ದರೂ, ಏನೂ ಅರ್ಥವಾಗದಂತಹ ಗುಟ್ಟಿನ ಸಂದೇಶವದು. ಸಿವೇಸನಿಗೆ, ರುದ್ರಿಗೆ ಆ ಬಗ್ಗೆ ಭಯವಿರಲಿಲ್ಲ. ಆದರೆ ಚೆನ್ನಿಗೆ ತಮ್ಮ ಉತ್ತರವೇ ಮುಟ್ಟದಿದ್ದರೆ? ಅವಳಿಗೆ ಆ ಇನ್ನೊಬ್ಬನ ಜೊತೆ ಮದುವೆಯೇ ಆಗಿ ಬಿಟ್ಟರೆ? ಎನ್ನುವುದು ಅವರಿಬ್ಬರ ಭಯವಾಗಿತ್ತು. ಈ ಭಯ ಮತ್ತು ಅನುಮಾನಗಳಲ್ಲಿ, ಬೇರೆ ಉಪಾಯಗಳನ್ನು ಹುಡುಕುವುದರಲ್ಲಿ ಮತ್ತೆ ಎರಡು ದಿನ ಕಳೆದುವು. ಅವಳ ಮದುವೆಗೆ ಇನ್ನು ಕೆಲವೇ ದಿನ ಉಳಿದಿದ್ದವು. “ಓಕ್ಕಳ್ಲಿ. ಅವ್ಳೇ ಬಿಟ್ರೆ ಬ್ಯಾಡೇ ಬ್ಯಾಡ ಬಿಡು. ಅದಾಗ್ದಿದ್ರೆ ಬ್ಯಾರೆ ಉಡ್ಗೀನೇ ಆಗ್ಲಿ”, ಎಂದು ಯೋಚಿಸುತ್ತ ದೀಪ ಹಚ್ಚಲು ಬಂದ ರುದ್ರಿ, ಮಾರಿಯ ಬಲಗಾಲಿನ ಬಳಿ ಸಿವೇಸನಿಟ್ಟ ಡಬ್ಬಿಯ ಮೇಲೆ ಕರಿಮಣಿಯ ಕುಚ್ಚೊಂದನ್ನು ಕಂಡಳು. ಅದನ್ನು ಮಗನಿಗೆ ಮುಟ್ಟಿಸಿದಳು.
ಚೆನ್ನಿ ಹೇಳಿದ್ದೇನೊ. ತಾವು ಅರ್ಥ ಮಾಡಿಕೊಂಡಿದ್ದೇನೊ, ತಪ್ಪೋ ಸರಿಯೋ ಎಂಬ ಅನುಮಾನ ಮತ್ತು ಆತಂಕಗಳನ್ನು ಇಟ್ಟುಕೊಂಡೇ ಅಗತ್ಯಕ್ಕೆ ಬೇಕಾದಷ್ಟೇ ವಸ್ತುಗಳನ್ನು ಕೈಯ್ಯಲ್ಲೂ, ದುಗುಡ-ದ್ವ೦ದ್ವಗಳನ್ನು ಮನದಲ್ಲೂ ಇಟ್ಟುಕೊಂಡು, ಸಿವೇಸ ಆ ಬೆಟ್ಟದ ಬುಡದ ಸಣ್ಣ ಕಲ್ಲುಚಪ್ಪರದಡಿ ಸಿಗುವ, ಆಜೀವ ಪರ್ಯಂತದ ಸಮಾಧಾನವನ್ನು ಪಡೆಯಲು, ಪಡೆದು ಹಾರಿಸಿಕೊಂಡು ಹೋಗಲು ತಯಾರುಗೊಂಡು, ಚಂದ್ರೋದಯದ ವೇಳೆಗೆ ಮನೆ ಬಿಟ್ಟು ಹೊರಟಿದ್ದ. ಎದೆತುಂಬಿದ ಅಳುವನ್ನು ಹತ್ತಿಕ್ಕಿ, ತನ್ನ ಮುಂದಿನ ಜೀವನಾಧಾರದ ಜೀವವನ್ನು ಮನದುಂಬಿ ಹರಸಿ, ಮನೆಯಲ್ಲೇ ಮಗನ ತಲೆಯ ಮೇಲೆ ಅಕ್ಕಿಕಾಳು ಹಾಕಿ ಬೀಳ್ಕೊಟ್ಟಿದ್ದಳು ರುದ್ರಿ .
ಆ ನಂತರ, ಸಿವೇಸ ರಾತ್ರಿಯೇ ಏನು ಮತ್ತೆ ಮೂರು ದಿನಗಳಾದರೂ ಮನೆಗೆ ಹಿಂತಿರುಗಲಿಲ್ಲ. ಅಂದರೆ ಸಿವೇಸ ಅರ್ಥ ಮಾಡಿಕೊಂಡಿದ್ದು ಸರಿಯೇ ಇತ್ತು. ಊರಿನ ಚಟುವಟಿಕೆಗಳೆಲ್ಲ ಕತ್ತಲಸೆರೆಯಲ್ಲಿ ಮಲಗಿದ್ದಾಗ, ಆ ಚೆನ್ನಿ ಜಾಗೃತ ಹೆಜ್ಜೆಗಳನ್ನು ಓಡಿಸಿ ಬೆಟ್ಟದ ಅಡಿಗೆ ಬಂದಿರಲೇಬಹುದು. ಎಲ್ಲ ಜನರೂ ನಿದ್ದೆಯ ಮೈಯೊಳಗಿದ್ದಾಗ ಸಿವೇಸನನ್ನು ಭೇಟಿಯಾಗಿ, ಓಡಿರಲೂಬಹುದು. ಅವರಿಬ್ಬರೂ ಸೇರಿ ಯಾವುದೋ ಒಂದು ಊರು ಹೊಕ್ಕು, ಸಂಸಾರವನ್ನೂ, ಸಂಸಾರ ನಡೆಸಲು ಒಂದು ಉದ್ಯೋಗವನ್ನೂ, ಮಾಡುತ್ತಿರಬಹುದು, ಎ೦ಬಂತಹ ಆಲೋಚನೆಗಳೊಂದಿಗೆ, ಮಗನ ಸುಖದಲ್ಲಿ, ತನ್ನ ಅ೦ತರಂಗದ ಅಗಲಿಕೆಯ ನೋವನ್ನು ಮರೆತು ಕೆಲಸಕ್ಕೆ ತೊಡಗಿಸಿಕೊಂಡಳು ರುದ್ರಿ.
ತನ್ನ ಓಟಕ್ಕೆ ತಂತ್ರಗಳನ್ನು ಹುಡುಕುತ್ತಲೇ ಇದ್ದಳು ಚೆನ್ನಿ. ಅಮ್ಮನ ಮನೆಯ ಆಳಾಗಿದ್ದ ಗಂಗಿ, ಆ ದಿನ, ಹೇಳಿ ಕಳುಹಿಸಿದ೦ತೆ, ಅಲ್ಲಿಗೆ ಬಂದಾಗ, ಅವಳ ಜೊತೆಗೆ ಅಮ್ಮನ ಮನೆಗೆ ಹೋಗಿ ಬರುವುದಾಗಿ ಹೇಳಿ ಹಟ ಮಾಡಿ ಹೊರಟಿದ್ದಳು. ಗಂಗಿಯ ಭದ್ರ ಕಾವಲಿನಲ್ಲಿ ಯಾವ ಅಪಾಯವನ್ನೂ ಊಹಿಸದ ಅಜ್ಜಿ, ಹಿರಿಯರ ಕಟ್ಟಪ್ಪಣೆಗೆ ಮತ್ತು ಕಾವಲಿಗೆ ಹೆದರಿ ಪರಸ್ಪರರನ್ನು ಕಟ್ಟಿಕೊಳ್ಳುವ ಆಸೆ ಬಿಟ್ಟಿದ್ದಾರೆಂದು ನಂಬಿದ ಅಜ್ಜಿ, ಸಲೀಸಾಗಿ ಅನುಮತಿಸಿದ್ದಳು. ತಮ್ಮ ದೊಡ್ಡಮನೆಯಲ್ಲಿ ಅವಿಭಕ್ತ ಕುಟುಂಬದಲ್ಲಿ ಮದುವೆಗೆ ಜಮಾಯಿಸತೊಡಗಿದ ಜನರ ಊಟೋಪಚಾರದ ಉತ್ಸಾಹದಲ್ಲಿ ತೊಡಗಿಕೊಂಡಿದ್ದ, ದುಂಡ್ಯಾನ ಮನೆಯವರು, ಚೆನ್ನಿ ಅಜ್ಜಿಯ ಮನೆಯಲ್ಲೆ ಇದ್ದಾಳೆ, ಮದುವೆಯ ಹಿಂದಿನ ದಿನ ಅಜ್ಜಿಯ ಜೊತೆಗೆ ಬರುತ್ತಾಳೆ, ಎಂಬ ಅನಿಸಿಕೆಗಳೊಂದಿಗೆ ತಂತಮ್ಮ ಕೆಲಸಗಳಲ್ಲಿ ಮುಳುಗಿದ್ದರು. ಅವಳಿಗಾಗಿ ನಿಜವಾದ ಹುಡುಕಾಟ ಆರ೦ಭಿಸಿದ್ದು, ಅವಳು ಮನೆ ಬಿಟ್ಟೇ ಹೋಗಿದ್ದಾಳೆ ಎಂಬ ಸತ್ಯ ಮನದಟ್ಟಾಗಿದ್ದು, ಗಾಬರಿ, ಸಿಟ್ಟು, ಅವಮಾನ ಇತ್ಯಾದಿ ಭಾವಾವೇಶಗಳು ಧುತ್ತನೆ ಚೆನ್ನಿಯ ಹೆತ್ತವರನ್ನು ಆಕ್ರಮಿಸಿದ್ದು ಮದುವೆಯ ಹಿಂದಿನ ಮಧ್ಯಾಹ್ನ ಸಾಂತಜ್ಜಿ ಬಂದು ಕೇಳಿದಾಗಲೇ. ಅವಳು, “ಚೆನ್ನಿ ಎಲ್ಲೈತೆ, ಆಕಿದು ಮಕಾನೇ ಕಾಣಿಸ್ತಿಲ್ಲಲ”, ಎಂದು ಹೇಳಿದಾಗ, ಚೆನ್ನಿಗಾಗಿ ಹುಡುಕಾಟ ಆರಂಭಗೊಂಡಿತು. ಅವಳು ಎಷ್ಟು ಹೊತ್ತಿನಲ್ಲಿ ಗಂಗಿಯ ಜೊತೆ ಇಲ್ಲಿಗೆ ಹೊರಟಿದ್ದಳು, ಎಲ್ಲಿ ತಪ್ಪಿಸಿಕೊಂಡಳು, ಅವಳನ್ನು ಕಡೆಯ ಕ್ಷಣ ಯಾರು ಎಲ್ಲಿ ಕಂಡರು, ಇತ್ಯಾದಿಗಳೆಲ್ಲದರ ಬಗ್ಗೆ ಚರ್ಚೆ, ಮಾತುಕತೆ, ತನಿಖೆ, ಇತ್ಯಾದಿ ಆದಾಗ, ಅಜ್ಜಿಯ ಮನೆಯಿಂದ ಗಂಗಿಯ ಜೊತೆಗೆ ಹೊರಗೆ ಮಾತ್ರವಷ್ಟೆ ಬಂದ ಚೆನ್ನಿ, ನಿಜವಾಗಲೂ ಗಂಗಿಯ ಜೊತೆಗೆ ಬ೦ದಿರಲೇ ಇಲ್ಲ, ಮತ್ತು ಆ ಗಂಗಿಗೆ, ಅಜ್ಜಿ ಹಾಗೂ ಮೊಮ್ಮಗಳ ಮಾತು-ಒಪ್ಪಂದಗಳ ಬಗ್ಗೆ ಏನೇನೂ ಗೊತ್ತಿರಲೇ ಇಲ್ಲ, ಎಂಬೆಲ್ಲ ಸಂಗತಿಗಳು ಬಯಲಾದವು. ಹೆತ್ತವರ ಎಲ್ಲ ಕಟ್ಟು-ಕಾಯಿದೆಗಳನ್ನೂ ಮೌನವಾಗಿ ಒಪ್ಪಿದವಳಂತಿದ್ದ ಚೆನ್ನಿ, ಸೂಕ್ತ ಸಮಯದಲ್ಲಿ ಸದ್ದಿಲ್ಲದೆ ಹಾರಿ ಹೋಗಿದ್ದಳು. ಮದುಮಗಳೇ ಇಲ್ಲದೆ ಮದುವೆ ನಿಂತು ಹೋಯಿತು.
ರುದ್ರಿ ತನಗೂ ಏನೂ ತಿಳಿಯದವಳಂತೆ, ಸುದ್ದಿಯನ್ನು ಹೊಸ ಅಚ್ಚರಿಯಲ್ಲಿ ಕೇಳಿದಳು. “ಉಡ್ಗೀನೆ ನಾಪತ್ತೆ ಅಂತಾ? ಎಲ್ಲಿಗೋಗಿದ್ದೀತು ಅಂತೀನಿ”? ಎಂದು ಪ್ರಶ್ನೆ ಹಾಕಿದಳು. ಒಳಗೊಳಗೇ ನಕ್ಕಳು. ಆದರೂ ದುಂಡ್ಯಾನ ಕಡೆಯ ಜನ, ಚೆನ್ನಿಯ ಇಷ್ಟ-ಇರುವಿಕೆಯ ಜಾಗಗಳಲೆಲ್ಲ ಹುಡುಕಾಡಿ ನಿರಾಶರಾಗುತ್ತ ಹೋದಂತೆಲ್ಲ, ಸಿವೇಸನ ಮೇಲೆ ಅನುಮಾನ ಏಳತೊಡಗಿತು. ಸಿವೇಸ ಊರಿಗೆ ಬಂದ ದಿನ, ಹೊರಟ ಘಳಿಗೆ, ಹೋದ ವಿಧಾನ ಇತ್ಯಾದಿ ತನಿಖೆಗಳು ಹೆಚ್ಚಾದವು. ಬಂಡೆಯ ಮನಸ್ಸಿನ ದುಂಡ್ಯಾನ ಗುಂಪಿನ ಮುಂದೆ, ರುದ್ರಿ ಏನೇ ಉತ್ತರ ಕೊಟ್ಟರೂ ಸಿವೇಸ ಮಾತ್ರನಲ್ಲದೆ ರುದ್ರಿಯ ಮೇಲೂ ಅವರ ಅನುಮಾನ, ಆಕ್ರೋಶ ಹೆಚ್ಚುತ್ತ ಹೆಚ್ಚುತ್ತ ಅವಳನ್ನು ಕೊಚ್ಚಿಬಿಡಬೇಕೆಂಬ ಮಟ್ಟಕ್ಕೆ ಹೋಯಿತು. ಚೆನ್ನಿ ಸಿವೇಸನೊಂದಿಗೆ ಹಾರಿಬಿಟ್ಟಿದ್ದಾಳೆ ಎಂಬುದು ಮನಸ್ಸಿಗೆ ಖಾತರಿಯಾದಂತೆಲ್ಲ ಸ್ನೇಹ, ಪರಿಚಯ-ಸಂಬಂಧಗಳ ಮುಂದೆ ಅವರಿಗೆ ಆಗಲಿರುವ ಅವಮಾನ, ಅಸಹಾಕತೆಗಳೆಲ್ಲ, ಸಿಟ್ಟಿನ ದ್ರವವಾಗಿ, ನರನರಗಳಲ್ಲೆಲ್ಲ ಭರ್ರನೆ ಹರಿದಿತ್ತು. ಮೂಳೆಗಳು ಥರಥರ ನಡುಗಿದ್ದವು. ಕುಗ್ರಾಮದ ಆ ದುಡ್ಡಿನ ವ್ಯಕ್ತಿಗೆ ಅಶಿಕ್ಷಿತ ಜನಗಳ ಬಲವೂ ಸಿಕ್ಕಿತ್ತು. ಧಿ೦ ಧಿಂ ಎನ್ನುವ ಶಬ್ದದೊಂದಿಗೆ ಭೂಮಿ ನಡುಗಿಸುತ್ತ ಹತ್ತಿರ ಹತ್ತಿರ ಬರತೊಡಗಿದ ಅವರ ಆ ಹೆಜ್ಜೆಗಳೇ, ರುದ್ರಿಯನ್ನು ಭಯದ ತಿರುಗಣಿಯಲ್ಲಿ ಹಾಕಿ ತಿರುಗಿಸಿತ್ತು. ಕೈಗೆ ಸಿಕ್ಕ ರುದ್ರಿಯ ಮೇಲೆ, ಹಿಂದೆ ಮುಂದೆ ಯೋಚಿಸದೆ, ಅವರ ಕೊತಕೊತನೆ ಕುದಿವ ಸಿಟ್ಟಿನ ಆರ್ಭಟ ಆರಂಭಗೊಂಡಿತು. ‘ಅಲ್ಕಾ ರಂಡೆ, ನಿನ್ ಮಗನ್ನ ಒಸಿ ಅದ್‌ಬಸ್ತಿನಲ್ಲಿಡಕ್ಕಾಗ್ಲಿಲ್ಲ ನಿಂಗೆ? ಎಸ್ಟು ದಿನ್‌ದಿ೦ದ ಇಂಗೆ ಅವ್ರಿಬ್ರುನ್ನೂ ಇಲ್ಲಿಂದ ಓಡಿಸ್ಬೇಕಂತ ಪಿಲಾನ್ ಮಾಡಿದ್ದಿ? ಎಲ್ಲಿದ್ದಾರಿಗ್ಯೋಳು? ಯೋಳ್ದಿದ್ರೆ ಚರುಮ ಸುಲೀತೀವಿ, ಕುತ್ಗೆ ತರ್ದು ಆಕ್ತೀವಿ”, ಇತ್ಯಾದಿ ಬೈಗುಳಗಳಿಂದ ಆರಂಭಗೊಂಡು, ಕೋಲಿನಿ೦ದ ಹೊಡೆಯುವುದರಲ್ಲಿ ಮುಂದುವರಿಯಿತು. ಅವಳು ಎದುರಿಗಿದ್ದವರ ಎದೆ ಕರಗುವಂತೆ ಅಂಗಲಾಚಿದ್ದಳು, “ಇದ್ರಾಗೆ ನಂದೇನೂ ತೆಪ್ಪಿಲ್ರೋ ಯಪ್ಪ, ತಿಂದ ಉಲೀನ ಬಿಟ್ಟು ಎಲ್ಲೋ ಬಿಲದಾಗಿರೋ ಇಲೀಗ್ ಯಾಕೆ ಒದೀತೀರಿ”?ಎಂದು. ಅದರಿಂದ ಅವರ ಸಿಟ್ಟು ಇನ್ನಷ್ಟು ಏರಿ, ಕಾಡುಮೃಗದಂತಾಗಿದ್ದರು. “ನ೦ ಉಡುಗೀನ ನಿನ್ ಸೊಸಿ ಮಾಡ್ಕಂಡೇಟಿಗೆ ನೀನು ನಂ ಜಾತಿ ಆಗ್ಬಿಡಲ್ಲ. ಆ ಆಸಿ ಇದ್ರೆ ಬುಟ್ಬುಡು. ಬಗ್ಳು ಎಲ್ಲಿಗೆ ಓಡ್ಸಿದಿ ಅವ್ರನ್ನ””? ಎಂದು ಮಾತು ಮಾತಿಗೂ ಒಂದೊಂದರಂತೆ ಹೊಡೆತ ಹಾಕಿದರು. ಅವಳು ಮತ್ತೂ “ಗೊತ್ತಿಲ್ಲ”” ಎಂದೇ ಹೇಳಿದಾಗ, ಅವಳಿಂದ ಬಾಯಿ ಬಿಡಿಸಲೇಬೇಕೆಂಬ ಹಟ, ಓಡಿಹೋದ ಮಗಳನ್ನು ಎಳೆದುತಂದು ಮದುವೆ ಮಾಡಲೇಬೇಕೆಂಬ ಹಟದಿಂದ ಕೈಗೆ ಸಿಕ್ಕಿದ ಆ ಒಬ್ಬಂಟಿ ಹೆಂಗಸಿನ ಬಟ್ಟೆಗಳನ್ನು ಒಂದೊಂದಾಗಿ ಎಳೆದು ತೆಗೆದರು. “ಎಲ್ಲದಾರೆ”? ಎಂದು ಕೇಳಿದ್ದನ್ನೇ ಮತ್ತೆ ಮತ್ತೆ ಕೇಳಿದರು. ವಿವೇಕವಿಲ್ಲದ ಜಾತ್ಯಾಂಧರು, ತಮ್ಮ ರಾಕ್ಷಸ ರೋಷದ ಈ ದುರ್ವರ್ತನೆಯನ್ನೇ ಪೌರುಷವೆಂದು ಭಾವಿಸಿದರು. ರುದ್ರಿಗೆ ಖಚಿತವಿಲ್ಲದಿದ್ದರೂ, ಮಕ್ಕಳು ಇರಬಹುದಾದ ಜಾಗದ ಬಗ್ಗೆ ಊಹೆ ಇತ್ತು. ಅಷ್ಟನ್ನೇ ಅವಳು ಹೇಳಬಹುದಿತ್ತು. ಆದರೆ, ಅವರಿಬ್ಬರೂ ಅಲ್ಲಿ ನಿಜವಾಗಿ ಸಿಕ್ಕಿಬಿಟ್ಟು, ಈ ಚಂಡಾಲರು ಆ ಎಳೆಯ ಪ್ರೇಮಿಗಳ ರಕ್ತ ಹೊರಗೆಳೆದರೆ, ಎಂಬ ಅಗಾಧ ಭಯವೂ ಎಲ್ಲಕ್ಕಿಂತ ಹೆಚ್ಚಿಗೆ ಇತ್ತು. “ಇವ್ರ ಜಾತಿ ನಾಸ್ನಾಗಲಿ, ಮೆಚ್ಕಂಡವೆಲ್ಡೂ ಮಕ್ಳು ಎಲ್ಲಾದ್ರೂ ಸುಕಾಗಿರಲಿ”, ಎಂಬ ಒಳ ಆಸೆಯೂ ಇತ್ತು. ಅದರಿಂದಲೇ ಅವಳು ಬಾಯಿ ಬಿಡಲಿಲ್ಲ. ಬಿಟ್ಟಾಗಲೆಲ್ಲ ಹೇಳಿದ್ದು ಒಂದೇ ಮಾತು, “ನ೦ಗೊತ್ತಿಲ್ಲ. ದಿಟಾಗ್ಲೂ ಏನ೦ದ್ರೆ ಏನೂ ಗೊತ್ತಿಲ್ಲ. ನನ್ ಬಿಟ್ ಬಿಡ್ರೊ ಯಪ್ಪಾ”, ಎಂದು ಮತ್ತೆ ಮತ್ತೆ ಅಂಗಲಾಚಿದ್ದಳು. ಆದರೆ ಎದುರಿದ್ದವರ ಧಮನಿಗಳಲ್ಲಿ ರಕ್ತಕ್ಕೆ ಬದಲು, ಸಿಟ್ಟಿನ ರಸ ಹರಿಯುತ್ತಿದ್ದುದರಿಂದ ಅವರಿಗೆ ಅವಳ ಆ ಅಳು ಕಾಣಿಸಲೇ ಇಲ್ಲ. ಅಂಗಲಾಚುವಿಕೆ ಕಿವಿಗೆ ಕೇಳಿಸಲೇ ಇಲ್ಲ. ಇನ್ನು ಹೃದಯ ಅಥವಾ ಮನಸ್ಸು? ಅದು ಅವರಿಗೆ ಆಗ ಇರಲೇ ಇಲ್ಲ. ಅವರೆಲ್ಲ ಸೇರಿ ದರದರನೆ ಅವಳನ್ನು ಬೀದಿಗೆಳೆದರು, ಅವಳ ಮೇಲೆ ಉಳಿದೆರಡು ಬಟ್ಟೆಗಳನ್ನೂ ಸೆಳೆದು ನೆಲಕ್ಕೆ ಹಾಕಿದರು. ತನ್ನೆರಡು ಅಂಗೈಗಳಿಂದ ಐದುಮೂರರ ದೇಹವನ್ನು ಮರೆಮಾಡುವ ಪ್ರಯತ್ನದಲ್ಲಿ ಮುದುರಿಕೊಳ್ಳುತ್ತಿದ್ದವಳನ್ನು ಒ೦ದೆಡೆ ಕುಳಿತು ಕೊಳ್ಳುವುದಿರಲಿ, ನಿಲ್ಲಲೂಗೊಡದೆ, ಬೆನ್ನು, ಭುಜ, ಕೈಯ್ಯಿ, ಕಾಲುಗಳ ಮೇಲೆ ಬಾರಿಸಿ ಬಾರಿಸಿ, ಮುನ್ನಡೆಯಲು ಒತ್ತಾಯಿಸಿದರು. ನೋವಿನಿಂದ ಕಿರುಚಿ, ಕಿರುಚಿ, ಅವಮಾನದ ಆಗಸವೇ ಹರಿದು ಮೇಲೆ ಬಿದ್ದಂತೆ ನೆಲಕ್ಕಂಟಿಕೊಳ್ಳುತಿದ್ದ ಕಾಲುಗಳನ್ನು, ಕೀಳಲಾರದೆ ಕಿತ್ತು ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆದಿದ್ದಳು ರುದ್ರಿ.
ಊರ ಹೊರಗಿನ ತೋಟದವರೆಗೆ ಹಾಗೆ ಬೆತ್ತಲೆ ನಡೆದವಳ ಸುತ್ತ ಊರಿಗೇ ಊರೇ ಸೇರಿ ನೋಡಿತ್ತು. ಯಾರಿಗೂ ಹೇಳದೆ, ಯಾವ ವ್ಯವಸ್ಥೆಯೂ ಮಾಡದೇ ಅದೊಂದು ದೊಡ್ಡ ಮೆರವಣಿಗೆಯಾಗಿ ತಾನಾಗಿ ಪರಿಣಮಿಸಿತ್ತು. ಮೆರವಣಿಗೆಗೆ ಅಡ್ಡ ಬಂದ ಒಂದಿಬ್ಬರು ಹಿರಿಯರಿಗೂ, ರುದ್ರಿಯ ಇದ್ದೊಬ್ಬ ಭಾವನಿಗೂ ಕೆಲವು ಏಟುಗಳು ಬಿದ್ದವಷ್ಟೆ. ಆದರೆ ಮೆರವಣಿಗೆ ನಿಲ್ಲಲಿಲ್ಲ. ಹೊಡೆತ ತಪ್ಪಲಿಲ್ಲ. ಅಷ್ಟು ಮಾಡಿದರೂ ಅವಳಿಂದ ಮಾತ್ರ, ಚೆನ್ನಿಯ ಬಗ್ಗೆ ಒಂದೇ ಒಂದು ಸುಳಿವಿನ ಸೂಚನೆಯೂ ಸಿಗಲಿಲ್ಲ. ಸುಸ್ತಾದ ಸಿಟ್ಟಿನ ಜನ, ಅವಳನ್ನು ಅಲ್ಲೇ ಬಿಟ್ಟುಹೋದರು. ಬೀದಿಯಲ್ಲಿ ಎಸೆದಂತೆ, ಅರೆ ಎಚ್ಚರದಲ್ಲಿ ಬಿದ್ಡಿದ್ದವಳನ್ನು, ಅವಳ ಓರಗಿತ್ತಿ ತನ್ನ ಮನೆಗೆ ಕರೆದೊಯ್ದು, ಅವಳ ಮೈಯ ಎಲ್ಲ ಗಾಯಗಳಿಗೆ, ಎಣ್ಣೆ ಹಚ್ಚಿ ಆರೈಕೆ ಮಾಡಿದ್ದರೂ, ಇಡೀ ಶರೀರದ ಚರ್ಮ ಸುಲಿದು ಭಗಭಗನೆ ಉರಿಯುತ್ತಿತ್ತು. ಅದರೊಂದಿಗೆ ಅವಳೊಳಗಿನ ಮನಸ್ಸೂ ಕೂಡ. ಹಗಲಿನಲ್ಲಿ ಅವಳ ಮೇಲೆ ಅವರು ಎಳೆದು ಹಾಕಿದ್ದ ಅವಮಾನದ ಆಕಾಶ, ಕತ್ತಲಾಗುವ ಹೊತ್ತಿಗೆ ಅವಳ ಸುತ್ತ ಅಕ್ರೋಶದ ನಿಗಿನಿಗಿ ಕೆಂಡಗಳನ್ನು ಹೊತ್ತಿಸಿದ್ದುವು. ಕಣ್ಣಲ್ಲಿನ ದ್ವೇಷ ಬೆಂಕಿಯ ದೊಂದಿಯಾಗಿತ್ತು.
“ಇಲ್ಲ ಆ ಭಾಡ್ಯಾಗಳನ್ನು ಸುಂಕೆ ಬಿಡಂಗಿಲ್ಲ ನಾನು. ನನ್ನ ಮಾನಾ ಸುಟ್ಟೋರ್ದು, ಮನೀಮಟ ಸುಡ್ತೀನಿ. ಅವ್ರ ಜಾತಿ ನೆಗ್ದುಬಿದ್ದೋಗ್ಲಿ. ಅವ್ರ ವಂಸ ಎಕ್ಕುಟ್ಟೋಗ್ಲಿ”, ಎಂದು ಒ೦ದೇ ಸಮನೆ ಶಪಿಸುತ್ತಿದ್ದ ಅವಳ ಒಳಮನಸ್ಸು, ದುಂಡ್ಯಾನ ವ೦ಶವನ್ನೇ ನಿರ್ನಾಮ ಮಾಡುವ ಮಾರ್ಗಗಳನ್ನು ಹುಡುಕತ್ತಲಿತ್ತು. ಹೊಡೆತಗಳಿಂದ ಜಜ್ಜಿದ ಅವಳ ದೇಹ, ಮರುದಿನ ಕಳೆದು, ಸರಹೊತ್ತಾಗುವವರೆಗೂ ಸತ್ತಂತೆಯೇ ಬಿದ್ದಿತ್ತು.
ಅವಮಾನದ ನೆಲದಿಂದ ಹುಟ್ಟುವ ಛಲಕ್ಕಿಂತ ದೊಡ್ಡ ಶಕ್ತಿ ಬೇರೆ ಯಾವುದಿರಲು ಸಾಧ್ಯ? ಆ ಶಕ್ತಿಯೇ ಅವಳಿಗೆ ಆ ಹಳ್ಳಿ ಬಿಟ್ಟು ಓಡುವ ಚೈತನ್ಯವನ್ನೂ, ದುಂಡ್ಯಾನ ಕೊಟ್ಟಿಗೆಗೆ ಬೆಂಕಿ ಇಡುವ ಧೈರ್ಯವನ್ನೂ ಒದಗಿಸಿಕೊಟ್ಟಿತ್ತು. ದುಂಡ್ಯಾನ ಮನೆಗೆ ಅಂಟಿಕೊಂಡಂತೆಯೇ ಇದ್ದ ದನದ ಕೊಟ್ಟಿಗೆ ತೆಂಗಿನ ಮಡಿಲುಗಳಿಂದ ಮಾಡಿದ್ದು. ಹಾಗೂ ಅವನ ಮನೆ, ಬಿದಿರು ಮತ್ತು ಮರದ ತೊಲೆಗಳಿಂದ ಕಟ್ಟಿದ್ದು. ಬಿಸಿ ತಗುಲಿದರೆ ಬೆಂಕಿಯಾಗಿ ಬಿಡುವ ವಸ್ತುಗಳು. ಅವಳ ಯೋಚನೆ ಇದನ್ನೆಲ್ಲ ನೆನೆಸಿ ನಕ್ಕಿತು. ರಾತ್ರಿ ಎರಡು ಘಂಟೆ ಇರಬೇಕು. ರುದ್ರಿ ಮೆಲ್ಲಗೆ ಮೇಲೆದ್ದಳು. ಅವಳೆದೆಯ ಡವಡವ ಬಿಟ್ಟರೆ, ಇಡೀ ಹಳ್ಳಿಯ ಎದೆಬಡಿತವೇ ನಿಂತು ಹೋದಂತಹ ನಿಶಬ್ದ. ತಾನು ಇಡುವ ಬೆಂಕಿ, ಒಂದು ಫರ್ಲಾಂಗ್ ದೂರವಾದರೂ ತಾನು ಓಡುವ ಹೊತ್ತಿಗೆ, ಕೊಟ್ಟಿಗೆಗೆ ತಾಕುವ೦ತೆ ಉಪಾಯ ಮಾಡಿದ್ದಳು ಅವಳು. ತನ್ನೊಂದಿಗೆ ತಂದಿದ್ದ, ಸೀಮೆಎಣ್ಣೆಯಲ್ಲಿ ಅದ್ದಿದ ಉದ್ದನೆಯ ಹಗ್ಗವನ್ನು, ದುಂಡ್ಯಾನ ದನದ ಕೊಟ್ಟಿಗೆಗೆ ಕೆಲವಾರು ಮಾರುಗಳ ದೂರದಲ್ಲಿ ಒಂದರ ನಂತರ ಒಂದರಂತೆ ಒಂದಕ್ಕೊಂದು ತಗಲಿಸಿ ಇಟ್ಟಳು. ಮೊದಲನೆಯದಕ್ಕೆ ಕಡ್ಡಿ ಗೀರಿದ್ದೇ, ಸದ್ದಡಗಿಸಿ ಓಡತೊಡಗಿದಳು. ಕುದುರೆ ವೇಗದಲ್ಲಿ, ಕಡು ಕತ್ತಲ ಆ ರಾತ್ರಿಯಲ್ಲಿ, ತನ್ನ ಕಣ್ಣ ಬೆಂಕಿಯ ಬೆಳಕಿನಲ್ಲಿ, ಪುಟ್ಟ ಗಂಟು ಹೊತ್ತು ಓಡು ನಡಿಗೆಯಲ್ಲಿ, ಬೆಟ್ಟದ ಬುಡದ ರೆಸ್ತೆಯಲ್ಲದ ರಸ್ತೆಗೆ ಬ೦ದಳು.
ಶತಶತಮಾನಗಳ ಸುಖವನ್ನು ಸುರಿದರೂ, ಸಾವಿರಾರು ಸೀರೆಗಳನ್ನು ಸುತ್ತಿಕೊಟ್ಟರೂ, ಸ್ವರ್ಗದ ತಂಪನ್ನೆಲ್ಲ ಧಾರೆ ಎರೆದರೂ ಅಳಿಸಲಾಗದ ಆ ಅವಮಾನದೊಂದಿಗೆ, ಅದೇ ಹಳ್ಳಿಯಲ್ಲಿ ಜೀವಿಸುವುದು ಹೇಗೆ? ಎಲ್ಲಿ ನಿಂತರೂ, ಅಡಿಯಿಂದ ಮುಡಿಯವರೆಗೆ ತಾಡಪಾಲಿನಲ್ಲಿ ಸುತ್ತಿ ಮುಚ್ಚಿದರೂ ಬಟಾ ಬಯಲಿನಲ್ಲಿ ವಿವಸ್ತಳಾಗಿಯೇ ಉಳಿದು ಬಿಟ್ಟಂತಹ ಅಸಹನೀಯ ಅವಮಾನದ ಅನುಭವ. ಅದನ್ನು ಮರೆಯಲು ಆ ಹಳ್ಳಿಯನ್ನೇ ಬಿಟ್ಟು ಮಗನನ್ನು ಹುಡುಕಿಕೊಂಡು ಹೊರಟಿದ್ದಳು ಅವಳು.
ಎಷ್ಟು ಮೈಲು ನಡೆದಿದ್ದಳೋ, ಇನ್ನು ತಾನು ಯಾರ ಕೈಗೂ ಸಿಗದಷ್ಟು ದೂರ ಬಂದಿದ್ದೇನೆಂಬ ಸಮಾಧಾನದ ನಿಟ್ಟುಸಿರು ಹೊರಬಿದ್ದಾಗ ಒಮ್ಮೆ ತಿರುಗಿ ನೋಡಿದಳು ರುದ್ರಿ. ಆಕಾಶಕ್ಕೆ ದೂರು ಹೇಳುವಂತೆ ಹಲವಾರು ನಾಲಿಗೆಗಳನ್ನು ಮೇಲೆ ಚಾಚಿ, ಕುಣಿಯತೊಡಗಿತ್ತು ಬೆಂಕಿ. ಯಾರದೋ ಕೂಗು, ಗಲಾಟೆಗಳು, ತೀರ ಕ್ಷೀಣವಾಗಿ ಕೇಳಿಸುತ್ತಿದ್ದವು. “ಅಂಬಾ,.. ಮೆ” ಎಂದು ಕೂಗುತ್ತಿದ್ದ ದನ, ಕುರಿಗಳ ಆರ್ತನಾದ, ಅವಳ ಅಂತರಂಗದ ಗಾಯಗಳಿಗೆ ಸುಖದ ಮುಲಾಮು ಹಚ್ಚಿತು. ಒಳಗೆ ಸುತ್ತುತ್ತಿದ್ದ ದ್ವೇಷದ ಹೊಗೆಗೆ, ಸಮಾಧಾನದ ನೀರು ಸಿಂಪಡಿಸಿದಂತೆ ಸ್ವಲ್ಪ ಮಟ್ಟಿಗೆ ಉಪಶಮನಗೊಳ್ಳತೊಡಗಿತು. “ದುಂಡ್ಯಾ.. ನೀನು ಸಾಯಲ್ಲ ಅಂತ ನ೦ಗೊತ್ತು. ಬ್ಯಾಡ. ನಿನ್ನ ಕಣಜ, ಪೊಗದಸ್ತಾದ ಜಾನ್‌ವಾರ್‌ಗಳು, ಸುಟ್ಟು ನಿನ್ನ ಒಟ್ಟೆಗೆ ಬೆಂಕಿ ಬಿದ್ದಂಗಾಗತೈತಲ್ಲ. ಅಸ್ಟು ಸಾಕ್ಲಾ ನಂಗೆ”, ಎಂದು ಮನದಲ್ಲೇ ಅಟ್ಟಹಾಸದ ಗುಟುರು ಹಾಕಿದ್ದಳು. ಏನೂ ಮಾಡದ ಆ ಮುಗ್ಧ ಜಾನುವಾರುಗಳಿಗೂ ಜೀವವಿದೆ, ಅವಕ್ಕೂ ನೋವು, ತಾಪಗಳಿರುತ್ತವೆ, ಎಂಬುದು ರುದ್ರಿಯ ಮನಸ್ಸಿನಲ್ಲಿ ಆಗ ಬರಲೇ ಇಲ್ಲ. ನೆನೆಸಿಕೊಂಡು ಈಗ ಪಶ್ಚಾತ್ತಾಪ ಪಡುತ್ತಾಳೆ ರುದ್ರಿ. ಆ ರಾತ್ರಿ, ಬೆಂಕಿಯನ್ನು ನೋಡುತ್ತಿದ್ದ ಅವಳ ಕಣ್ಣು, ಒಳಗಿನ ದ್ವೇಷ ಕುಗ್ಗಿಸಿ, ನೆಮ್ಮದಿಯ ನಗು ನಕ್ಕಿತ್ತು. ಹೆಚ್ಚು ಹೊತ್ತು ಈ ಸುಖವನ್ನು ಅನುಭವಿಸುವಂತಿರಲಿಲ್ಲ ಅವಳು. ಬೆನ್ನಟ್ಟಿ ಬರಬಹುದಾದ ದುಂಡ್ಯಾನ ಜನರ ಕೈಗೆ ಮತ್ತೆ ಸಿಕ್ಕಿಕೊಳ್ಳದಂತೆ ತಪ್ಪಿಸಿಕೊಳ್ಳಬೇಕಿತ್ತು. ಬದುಕಿನ ಈ ಘಟ್ಟವನ್ನು ಮರೆತು ಹೊಸ ಬದುಕಿಗೆ ದಾರಿ ಮಾಡಿಕೊಳ್ಳಬೇಕಿತ್ತು. ಮುಂದಿನದು ನೆನಪಾದದ್ದೇ, ತನ್ನ ಹಳ್ಳಿಗೆ ಬೆನ್ನು ತಿರುಗಿಸಿ, ದಡದಡನೆ ನಡೆದಳು ಅವಳು.
ಬೆಳಕಿನ ಕಿರಣಗಳು ಹಗಲಾಗಲೆಂದು ಕಣ್ಣುಜ್ಜಿಕೊಳ್ಳುತ್ತ ಮೇಲೇಳುವ ಹೊತ್ತಿಗೆ, ರುದ್ರಿ ತನ್ನ ಹಳ್ಳಿಯಿಂದ ಬಹಳ ದೂರ ಬಂದಿದ್ದಳು. ಸಂತೂರುದೊಡ್ಡಿಯ ಕಡೆಗೊಮ್ಮೆ, ದಸವರದ ಕಡೆಗೆ ಇನ್ನೊಮ್ಮೆ, ಮತ್ತೆ ಯಾವಾಗಲೋ ಚಕ್ಕನದೊಡ್ಡಿ, ಅಬ್ಬೂರುದೊಡ್ಡಿ, ತಿಟ್ಟಮಾರನಹಳ್ಳಿ, ಚನ್ನಪಟ್ಟಣ, ಹೀಗೇ ಎಲ್ಲಿ ಕಾಲು ಬಿದ್ದರಲ್ಲಿ ನಡಿಗೆ. ನಡೆದ ನೆಲವೇ ಹಾದಿ. ಉಳಿದದ್ದೇ ಜೀವನ ಎಂಬಂತೆ, ಒಂದು ಮಾರ್ಗ, ಒಂದು ವಾಹನ, ಒಂದು ಊರು, ಒಂದು ಜನಕ್ಕೆ ಅಂಟಿಕೊಳ್ಳದೆ ಒಂದೇ ಸಮನೆ, ನಡೆದೇ ನಡೆದಳು. ಮುಂದೆ ಮುಂದೆ ಹೋದಳು. ಎದುರಿಗಿದ್ದವರು ದುಂಡ್ಯಾನಿಗೆ ಯಾವ ಬಂಧುವಾಗಿರುತ್ತಾರೋ, ಯಾವ ದೇಹದೊಳಗೆ ದುಂಡ್ಯಾನ ಸ್ನೇಹವಿರುತ್ತದೋ, ಎಂಬ ಭಯದಲ್ಲಿ, ತಲೆ ಎತ್ತಿ, ಎಲ್ಲೂ ಯಾರನ್ನೂ, “ಇದು ಯಾವ ಊರು?”, ಎಂದು ಕೇಳಲಿಲ್ಲ. ತನ್ನದು ಯಾವ ಹಳ್ಳಿ ಎಂದೂ ಹೇಳಲಿಲ್ಲ. ಯಾರಿಗೂ ಸರಿಯಾಗಿ ಮುಖ ತೋರಿಸಲಿಲ್ಲ. ಓರಗಿತ್ತಿ, ಪಕ್ಷಕ್ಕಾಗುವಷ್ಟು ಕಟ್ಟಿಕೊಟ್ಟ ರೊಟ್ಟಿ, ಚಟ್ನಿಪುಡಿಯ ಗಟ್ಟಿ ಆಹಾರದಿಂದಾಗಿ, ತನ್ನ ಕೆಲ ದಿನಗಳ ಪ್ರಯಾಣವನ್ನು ಯಾರ ಹ೦ಗಿಗೂ ಬೀಳದೇ ಮುಗಿಸಿದ್ದಳು ರುದ್ರಿ.
ಇನ್ನು ದುಂಡ್ಯಾನ ಜನ ಹಿಂಬಾಲಿಸುವುದಿಲ್ಲ, ತಾನಿನ್ನು ಅವರ ಕೈಗೆ ಸಿಕ್ಕುವುದಿಲ್ಲ, ಎಂಬ ಅನಿಸಿಕೆ ಧೃಡವಾದ ಸಮಯಕ್ಕೆ ಅವಳು ತನ್ನ ಹಿರಿಯ ಅಣ್ಣನ ಮನೆಯ ಹೊಸ್ತಿಲ ಒಳಹೊಕ್ಕಿದ್ದಳು. ಬಳಲಿ ಬಾಡಿಹೋದ ತಂಗಿಯ ತಲೆಯ ಮೇಲೆ ಅವಳಣ್ಣ ಅಕ್ಕರೆಯಿಂದ ಕೈ ನೇವರಿಸಿದ್ದಷ್ಟೆ ಗೊತ್ತು ಅವಳಿಗೆ. ಆ ಸ್ಪರ್ಷದೊಳಗಿದ್ದ ಪ್ರೀತಿಯ ತಂಪು, ಎದೆಯ ಮೂಲಕ ಕರುಳವರೆಗೆ ಇಳಿದು, ಆ ವರೆಗಿನ ಎಲ್ಲ ಭಯ, ಆಯಾಸಗಳನ್ನೂ ಅಳಿಸಿ ನಿಶ್ಚಿಂತೆಯ ಹಾಸಿಗೆಯಲ್ಲಿ ಮಲಗಿಸಿತ್ತು. ತಾನೀಗ ಕ್ಷೇಮವಾದ ಮತ್ತು ಭದ್ರವಾಗಿ ಕಾಪಾಡುವ ಅಣ್ಣನ ಕೋಟೆಯೊಳಗೆ ಸೇರಿದ್ದೇನೆ ಎಂಬ ಭರವಸೆಯ ಭಾವನೆಯೇ, ಅವಳು ಈ ವರೆಗೆ ಕಟ್ಟಿಕೊಂಡಿದ್ದ ಅಸಹನೆ, ಆಯಾಸ, ಅಳು, ಎಲ್ಲವನೂ ಹೊರಹಾಕಿತ್ತು. ವಿವಸ್ತಳನ್ನಾಗಿಸಿ ಮೆರವಣಿಗೆ ಮಾಡಿದ್ದನ್ನು ಬಿಟ್ಟು ಉಳಿದೆಲ್ಲವನ್ನೂ ಅಣ್ಣನ ಮುಂದೆ ಹೇಳಿಕೊಂಡು ಹಗುರಾದವಳು, ಹೊಟ್ಟೆ ತುಂಬ ತಿಂದು ಒಂದು ವಾರದ ನಿದ್ದೆ ಮುಗಿಸಿ, ಅಣ್ಣನ ಕೈ ಹಿಡಿದು ಮೇಲೆದ್ದಾಗ, ಬೆಂಗಳೂರಿನ ಸಿವೇಸನ ಮನೆಯಲ್ಲಿದ್ದಳು.
*
*
*
ಮಗ-ಸೊಸೆ, ರುದ್ರಿಯನ್ನು ಕಂಡದ್ದೇ ಸಂತೋಷಗೊಂಡರು. ರುದ್ರಿಯ ಕಣ್ಣಲ್ಲೂ ಸಂತೋಷದ ಸೂರ್ಯಕಾಂತಿ ಅರಳಿತ್ತು. ಅಣ್ಣನ ಮುಂದೆ ಹೇಳಿಕೊಂಡ ಎಲ್ಲ ಸಂಗತಿಗಳು, ಮಗಸೊಸೆಯರ ಮುಂದೆಯೂ ಅಣ್ಣನ ದನಿಯೊಂದಿಗೆ ಬಿತ್ತರಗೊಂಡವು. ಸಿವೇಸ ಕಛೇರಿಯೊಂದರಲ್ಲಿ ಗುಮಾಸ್ತನಾಗಿದ್ದ. ಚೆನ್ನಿ ಹೂವು ಕಟ್ಟುವ ಕೆಲಸ ಮಾಡತೊಡ್ಗಿದ್ದಳು. ತನ್ನ ಮಗನ ಜೀವನದ ಗಾಡಿಗೆ ಮೂರನೇ ಗಾಲಿಯಾಗಿ ಅಂದು ಸೇರಿಕೊಂಡ ರುದ್ರಿ, ಮತ್ತೆ ಹತ್ತಾರು ವರ್ಷಗಳ ಕಾಲ, ಎಲ್ಲೂ ಆ ಗಾಡಿ ದಡಗುಟ್ಟದಂತೆ ನೋಡಿಕೊಂಡಳು. ವಯಸ್ಸಿನ ಕಾಲುಗಳು ಹತ್ತರ ಮೆಟ್ಟಿಲು ಹತ್ತಿದಾಗಲಿಂದ ಹಳ್ಳಿಯಲ್ಲಿ ಒಂದೇ ಸಮನೆ ದುಡಿದ ದೇಹಕ್ಕೆ, ಸುಮ್ಮನೆ ಕೂತಿರಲು ಸಾಧ್ಯವಾಗಿರಲಿಲ್ಲ. ಮನೆಯಿಂದ ನಾಲ್ಕಾರು ಕಿಲೋಮೀಟರ್ ದೂರದಲ್ಲಿದ್ದ ಹರಿದಾಸರೊಬ್ಬರ ಆಶ್ರಮಕ್ಕೆ ಕೆಲಸ ಮಾಡಲು ಸೇರಿಕೊಂಡಳು. ಆ ಆಶ್ರಮ ಕೇವಲ ಕೆಲಸದ ತಾಣ ಮಾತ್ರವಾಗದೆ, ಅವಳ ವ್ಯಕ್ತಿತ್ವನ್ನೇ ಪರಿವರ್ತಿಸುವ ಆಧ್ಯಾತ್ಮಿಕ ತಾಣವೂ ಆಯಿತು. “ದೇವರು ತನ್ನ ಭಕ್ತರಲ್ಲಿ, ಸ್ತೀ ಪುರುಷ, ಜಾತಿ ವರ್ಗ, ಪಂಡಿತ-ಪಾಮರರೆಂಬ ಭೇದ ಎಣಿಸುವುದಿಲ್ಲ. ಸಿಟ್ಟು, ಕಾಮ, ಮೋಹ, ಲೋಭ, ಮದ, ಮತ್ಸರ, ಮುಂತಾದ ಅರಿಷಡ್ವರ್ಗಗಳನ್ನು ಬಿಡಬೇಕು. ಮನಸ್ಸಿನಲ್ಲೇ ಮೋಕ್ಷವಿದೆ. ಇನ್ನೊಬ್ಬರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಇತ್ಯಾದಿ ಮಾತುಗಳು, ಆಗಾಗ ಕಿವಿಗೆ ಬೀಳುತ್ತಿದ್ದ ಪ್ರವಚನಗಳು, ದಾಸರ ಹಾಡುಗಳು, ಬೇರೆಯವರೊಂದಿಗಿನ ಸೌಜನ್ಯದ ಮಾತುಗಳು ಮತ್ತು ಉಪದೇಶಗಳ ಜೊತೆಗೆ, ಮನೆಯಲ್ಲಿ, ಮೊಮ್ಮಕ್ಕಳು ಕಲಿಯುತ್ತಿದ್ಡ ಪಾಠಗಳು, ಕ್ರಮೇಣ ಅವಳ ಮನಸ್ಸನ್ನು ಬದಲಾಯಿಸತೊಡಗಿತ್ತು. ಮಗ ಸಿವೇಸ, ಪ್ರತಿದಿನ ತನ್ನ ಮಕ್ಕಳನ್ನು ಮುಂದೆ ಕೂಡಿಸಿಕೊಂಡು ಹೇಳಿಕೊಡುತ್ತಿದ್ದ ಪಾಠದಲ್ಲಿ, ಅವನು ರಾಮನಗರದಲ್ಲಿ ಕಲಿತ ಕೆಲವು ಪದಗಳಲ್ಲಿ, “ಮಾತೃದೇವೋಭವ, ಪಿತೃದೇವೋಭವ,” ಎಂಬ ಪಾಠವೊಂದು ಅವಳಿಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಹಾಗೆಂದರೆ ಏನರ್ಥ ಎಂಬ ಪ್ರಶ್ನೆಗೆ, “ಅಂಗಂದ್ರೆ ತಾಯಿಯೇ ದ್ಯಾವ್ರು, ತಂದೆಯೇ ದ್ಯಾವ್ರು ಅಂತ ಗೊತ್ತಾತಾ ಅಜ್ಜೀ?”, ಎಂದು ಮೊಮ್ಮಕ್ಕಳೇ ಉತ್ತರ ಕೊಡುವಷ್ಟು ಬುದ್ಧಿವಂತರಿದ್ದರು. ರುದ್ರಿ ಮೊಮ್ಮಕ್ಕಳ ಇಂಥ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡ ದಿನ, ಅವಳು ಆಶ್ರಮದ ಕೆಲಸ ಮುಗಿಸಿ ಹಿಂತಿರುಗುವಾಗ ಮೊಮ್ಮಕ್ಕಳಿಗೆ ಸಿಹಿ ತಿನಿಸು ಸಿಕ್ಕುತ್ತಿತ್ತು. ಬಡವರ್ಗದ ಜನರ ಪ್ರದೇಶದಲ್ಲಿ ಸಣ್ಣ ಸಣ್ಣ ಮನೆಗಳನ್ನು ಕಟ್ಟಿಕೊಂಡು, ಬಿಡುವಿನ ವೇಳೆಯಲ್ಲಿ ಅವರಿವರ ಬಗ್ಗೆ ಆಡಿಕೊಳ್ಳುತ್ತಿದ್ದ ಜನರ ನಡುವೆ, ಅವರಂತೆಯೇ ಆಗಿಹೋದ ಮಗ-ಸೊಸೆಯರಿಗಿಂತ ರುದ್ರಿ ಬೇರೆಯಾಗಿ ಇನ್ನೊಬ್ಬರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ವಿವೇಕವನ್ನು ಕ್ರಮೇಣ ಅಲ್ಪಸ್ವಲ್ಪವಾಗಿ ಹೊಂದತೊಡಗಿದ್ದಳು. ಆದರೂ ಶತಮಾನಗಳಿಂದ ಆಳದಲ್ಲಿ ಬೇರು ಬಿಟ್ಟಿದ್ದ, ಗಂಡೆಂದರೆ ಘನವೆಂಬ ಭಾವನೆ ಮಾತ್ರ, ಸಂಪೂರ್ಣ ಅಳಿಯದ ಕಾರಣ, ಬಿದ್ದ ಕಡ್ಡಿಯನ್ನೂ ಎತ್ತಿಡಗೊಡದಂತೆ ಅವಳು ಮಗನನ್ನು ಬೆಳೆಸಿದ್ದಳು. ಅಂತೆಯೇ ನೋಡಿಕೊಳ್ಳುತ್ತಿದ್ದಳು. ಅವನಂತೆಯೇ ದುಡಿಯುವ ಸೊಸೆಯ ಪರಿಶ್ರಮವೂ ದುಡಿತವೇ ಎಂಬುದನ್ನು ಅವಳು ಹೆಚ್ಚು ಗಮನಿಸಲೇ ಇಲ್ಲ.
ನಗರ ಜೀವನಕ್ಕೆ ಹೊಂದಿಕೊಂಡು ಗಂಡ, ಮಕ್ಕಳು, ತನ್ನ ಹೂ ಕಟ್ಟುವ ಕೆಲಸಗಳಲ್ಲೇ ಸ್ವರ್ಗಮೋಕ್ಷಗಳನ್ನು ಅನುಭವಿಸುತ್ತಿದ್ದ ಚೆನ್ನಿಯಾಗಲೀ, ಮಗನ ಮನೆ, ಕೆಲಸದ ಆಶ್ರಮಗಳನ್ನೇ ನೆಮ್ಮದಿಯ ತಾಣವೆಂದು ತಿಳಿದ ರುದ್ರಿಯಾಗಲೀ, ತಾವು ಬಿಟ್ಟು ಬಂದ ಹಳ್ಳಿಯ ಬಗ್ಗೆ, ಮೃಗೀಯಗುಣದ ದುಂಡ್ಯಾನ ಬಗ್ಗೆ ಎಷ್ಟೊ ವರ್ಷಗಳ ಕಾಲ ಯೋಚಿಸಲೇ ಇಲ್ಲ. ಎಲ್ಲವೂ ಸುಸೂತ್ರವಾಗಿತ್ತು. ಕುಟು೦ಬಕ್ಕೆ ಅನಿವಾರ್ಯವಾದ ಒಂದಿಷ್ಟು ಭಿನ್ನಾಭಿಪ್ರಾಯಗಳೊಂದಿಗೆ ನೆಮ್ಮದಿಯೂ ಇತ್ತು. ಮನೆಯ ಕೆಲಸದಲ್ಲಿ, ಮೊಮ್ಮಕ್ಕಳ ಸಾಂಗತ್ಯದಲ್ಲಿ ಸಮಾಧಾನವಿತ್ತು . ಈ ಸ್ಥಿತಿ ಬದಲಾದದ್ದು, ಮಗನ ಮನೆಯಲ್ಲಿದ್ದೂ, ಅವರ ಮನಸ್ಸುಗಳಿಂದ ರುದ್ರಿ ದೂರ ಸರಿಸಲ್ಪಟ್ಟಿದ್ದು, ಚೆನ್ನಿಯ ಅಣ್ಣ ಗೋರಪ್ಪ, ತನ್ನ ತಂಗಿಯ ಈ ಪತ್ತೆಯನ್ನು ಹುಡುಕಿ ತೆಗೆದ ಮೇಲೆ. ಇಲ್ಲಿ ಬಂದು ಕೆಲವು ದಿನಗಳು ಇದ್ದು ಹೋದಮೇಲೆ. ರುದ್ರಿ ಹಚ್ಚಿ ಬಂದ ಬೆಂಕಿಯಲ್ಲಿ ಸುಟ್ಟು ಹೋದ ಅವರ ಶ್ರೀಮಂತಿಕೆಯ ಪ್ರಮಾಣದ ಬಗ್ಗೆ, ಮಾತು ಮಾತಿನಲ್ಲೂ, ಈ ತಂಗಿಗೆ ಲೆಕ್ಕ ಕೊಡತೊಡಗಿದ ಮೇಲೆ. ಕಡಿದು ಹೋದ ತವರಿನ ಸಂಬಂಧಗಳು ಮತ್ತೆ ಕುದುರಿದವು. ಪ್ರೇಮವೊಂದನ್ನು ಬಿಟ್ಟು, ಇತರೆ ವಿಷಯಗಳಲ್ಲಿ, ಸ್ವಂತ ಆಲೋಚನೆ, ಸ್ವಂತ ನಿರ್ಧಾರಗಳಿಲ್ಲದ ಸೊಸೆ ದಿನೇ ದಿನೇ ಬದಲಾಗತೊಡಗಿದಳು. ಮರ್ಯಾದೆಯನ್ನೇ ಬಲಿತೆತ್ತು, ತನ್ನ ಕುಟುಂಬವನ್ನು ಕಟ್ಟಿದ ‘ತಾಯಿ‘ ಮರೆಯಾಗಿ, ತವರಿನ ಶ್ರೀಮಂತಿಕೆಯನ್ನು ಸುಟ್ಟ ಒಬ್ಬ ಅಪರಾಧಿಯನ್ನು ಮಾತ್ರ ಅವಳು ತನ್ನ ಅತ್ತೆಯಲ್ಲಿ ಕಾಣತೊಡಗಿದಳು. ಈ ವರೆವಿಗೂ ಯಾರ ಮುಂದೂ ಬಾಯಿ ಬಿಡದ ರುದ್ರಿಯ ಬೆತ್ತಲೆ ಮೆರವಣಿಗೆಯ ಸಂಗತಿಯಲ್ಲೂ, ತಂದೆಯದೇ ಗುಣವಿದ್ದ ಚೆನ್ನಿಗೆ, ಹೆಣ್ಣಾದ ರುದ್ರಿಯ ತಪ್ಪೇ ಕಾಣಿಸತೊಡಗಿತು. “ಅಲ್ಲ. ಬಟ್ಟೆ ಎಲ್ಲ ಕಳಚಿದ್ರೂ ಬಾಯಿ ಬುಢ್ದೆ ಮೆರವಣಿಗೆ ಮಾಡಿಸ್ಕಂತಂತೆ ಈ ಯಮ್ಮ. ಇನ್ನೆಂಥ ನಾಚಿಕಿಲ್ಲದ ಎಂಗಸಾಗಿರ್‌ಬೇಡ ಇದು? ಅವರ್ಮು೦ದೆ ಇದ್ದಿದ್ದಿದ್ದಂಗೆ ಯೋಳಿಬುಟ್ಟಿದ್ರೆ ಏನಾಗ್ತಿತ್ತು. ನಾವೇನು ಅವ್ರ ಕೈಗೆ ಸಿಗ್ತಿರಲಿಲ್ಲ”, ಎಂದು ಅವಳ ಹಳ್ಳಿಯ ಪುರುಷಪರ ಸಮಾಜದಂತೆಯೇ ಯೋಚಿಸಿ, ಇತರರ ಮುಂದೆ ಆ ಸುದ್ದಿ ಬಿತ್ತರಿಸಿದ್ದಳು. ಹಾಗೆ ಮಾಡಿದುದಕ್ಕೆ ಕಾರಣವಾಗಲೀ, ಆ ಅವಮಾನ ತನಗೇ ಆದಂತೆ ಎಂದಾಗಲೀ, ಇಡೀ ಹೆಣ್ಣು ಕುಲಕ್ಕೇ ಆದ ಅವಮಾನ ಎಂದಾಗಲೀ ಅವಳು ಯೋಚಿಸಲೇ ಇಲ್ಲ. “ನಮ್ಮಪ್ಪಂಗೆ ಬಲೆ ಕ್ವಾಪ. ಅಂಗ್ ಮಾಡಬಾರ್ದಿತ್ತು ಒಪ್ಕಳಣ. ಆದ್ರೆ ಬಟ್ಟೆ ಸೆಳಿಯೋ ಗಂಟ ಯಾಕ್ ಬುಡ್ಬೇಕಿತ್ತು ಈ ಯಮ್ಮ? ಅಸ್ಟೂ ಗ್ಯಾನ ಬ್ಯಾಡ್ವಾ? ನಮ್ಮಣ್ಣ ಬಂದ್ ಏಳೋಗಂಟ, ಈಟು ವರ್ಸ ನಮ್ಮನ್ಯಾಗೇ ಇದ್ರೂ, ಗುಟ್ಟಾಗಿ ಇಟ್ಟಿದ್ಲಲ್ಲ ಈ ಇಸ್ಯಾನ ಅಂತೀನಿ. ಈಗ್ ಕೇಳಿದ್ರೆ ನಿಮ್‌ಗೋಸ್ಕರ ಅಂಗ್ ಮಾಡ್ದೆ ಅಂತ ನಮ್ಮುನ್ನೇ ಕಾರ್ಣ ಮಾಡ್ತೌಳೆ. ಇದೆಂಗಿದ್ದೀತು ಅಂತೀನಿ” ಎಂದು ಚೆನ್ನಿ ಹೇಳುತ್ತಿದ್ದಳು.
“ಹಯ್ಯೊ ಮೂರ್ಕ ಎಣ್ಣೇ, ನೀನೂ ಒಂದು ಎಣ್ಣಾಗಿ, ನನ್ನ ಜಾಗದಾಗ್ ನಿಂತು ರುದಯದಿಂದ ಯೋಚ್ಣೆ ಮಾಡು. ನಿನ್ನಣ್ಣ, ಅಪ್ಪ, ಅಜ್ಜಗಳು ಯೋಳಿದ್ದನ್ನೇ ಸರಿ ಅಂತ ಯಾಕೆ ಅಂದ್ಕಳ್ತೀ”, ಎಂದು ರುದ್ರಿ ಅಂತರಂಗ ಬಹಿರಂಗದಿಂದ ವ್ಯಕ್ತಪಡಿಸಿದ್ದಳು ಸೊಸೆಗೆ. ಜೊತೆಗೆ ರುದ್ರಿ, ಮಗಸೊಸೆಯರ ಸ೦ಸಾರದ ಒಳಗೊಳಗೊಳಗೆ ಹೋಗಿ, ತಾನು ಆಶ್ರಮದಲ್ಲಿ ಕಂಡದ್ದನ್ನು, ಕಲಿತದ್ದನ್ನು, ಮನೆಮಂದಿಗೆಲ್ಲ ಕಲಿಯುವ ಒತ್ತಾಯ ಹೇರತೊಡಗಿದ್ದು; ಅದೇ ಸಮಯಕ್ಕೆ ಹರಿದಾಸರ ಆಶ್ರಮವೂ ಬೇರೆ ಊರಿಗೆ ವರ್ಗಾವಣೆಗೊಂಡು, ಅವಳು ಸಂಪೂರ್ಣ ಮಗನ ಅವಲಂಬಿಯಾಗಿ, ಮನೆಯಲ್ಲಿ ಉಳಿದದ್ದು; ಮನೆಗೆಲಸವೂ ಹೆಚ್ಚು ಮಾಡಲಾಗದೆ ದಿನೇದಿನೇ ದುರ್ಬಲಳಾಗತೊಡಗಿದ್ದು; ಇವೆಲ್ಲವೂ ಅವಳನ್ನು ಕ್ರಮೇಣ ಮನೆಯವರಿಂದ ದೂರಮಾಡತೊಡಗಿದ್ದವು. ಎಲ್ಲಕ್ಕಿಂತ ರುದ್ರಿಯ ದೇಹ ಮುದಿಯಾದರೂ, ಚೆನ್ನಿಯ ತವರಿನಿಂದ ಬಂದ ಹುರುಳಿಯ ಚೀಲದಿಂದ, ಎರಡು ಸೇರಿನಷ್ಟನ್ನು, ಸೊಸೆಗೆ ತಿಳಿಸದೆ, ತನ್ನ ಬಡಸ್ನೇಹಿತೆಯೊಬ್ಬಳಿಗೆ ಧಾರಾಳವಾಗಿ ದಾನ ಮಾಡುವ ಅಧಿಕಾರವನ್ನು ಅವಳು ಚಲಾಯಿಸಿದ್ದು, ಸೊಸೆಗೆ ಹೆಚ್ಚು ಸಿಟ್ಟು ತರಿಸಿತ್ತು.
ರುದ್ರಿಗೆ ಈ ನಡುವೆಯೇ ನಾಯಿ ಕೆಮ್ಮು ಕಾಡತೊಡಗಿದ ಮೇಲೆ ಚೆನ್ನಿಗೆ, ಅತ್ತೆಯ ಬಗ್ಗೆ ಬೇಸರ ಬರತೊಡಗಿತು. ಗಂಡನ ಆರಾಮ ಜೀವನ ಅವಳಿಗೂ ಬೇಕೆನಿಸುತ್ತಿತ್ತು. ಹಾಸಿಗೆಗೆ ಹೆಚ್ಚು ಅಂಟಿಕೊಳ್ಳತೊಡಗಿದ ಮುದುಕಿ, ಗಂಡನ ಸ್ವಂತ ತಾಯಿ. ಆದರೆ ಅವಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವನಿಗಿಲ್ಲ. ಮನೆಗಾಗಿ ಮಾಡುವ ದುಡಿಮೆಗೆ ಇಬ್ಬರದೂ ಹೆಗಲಿದೆ. ಆದರೆ ಮನೆ ನಿರ್ವಹಿಸುವ ಹೊಣೆಗಾರಿಕೆ ಅವನಿಗೆ ಕಡ್ಡಾಯವಲ್ಲ. ಒಬ್ಬ ಮಗನಿಗೆ ಪೋಲಿಯೊ ಬಂದು ಕಾಲು ಸೊಟ್ಟವಾಗಿದೆ. ಆದರೆ ಅದಕ್ಕೆ ಕಾರಣವೆನ್ನಲಾದ ನಿರ್ಲಕ್ಷತನದಲ್ಲಿ, ಈ ತಾಯಿಯ ಜೊತೆ ಅವನ ಹೆಸರಿಲ್ಲ, ಎಂಬೆಲ್ಲ ಅಂಶಗಳು ಕೆಂಡವಾಗಿ ಮನಸ್ಸಿನಲ್ಲೆ ಸುಡತೊಡಗಿದವು. ಮಕ್ಕಳೊಂದಿಗೆ ದಿನೇ ದಿನೇ ಬೆಳೆಯತೊಡಗಿದ ಸಂಸಾರದ ಭಾರದಿಂದ, ಬೇಸರವಾಗಿ, ಈ ಮುದಿ ಅತ್ತೆಯ ಕಿರಿಕಿರಿಯಿಂದ, ಬಿಡುಗಡೆಗೆ ತಹತಹಿಸತೊಡಗಿತು ಚೆನ್ನಿಯ ಮನಸ್ಸು. ಆ ಸಮಯದಲ್ಲೇ ಅವಳ ಕಿವಿಗೆ ಬಿದ್ದಿದ್ದು ಅಲಹಾಬಾದಿನ ಕುಂಬಮೇಳ, ಮತ್ತು ಅಲ್ಲಿ ಸಿಗುವ ಮೋಕ್ಷದ ದಾರಿಗಳು.
ಆ ದಿನ ಇದ್ದಕ್ಕಿದ್ದಂತೆ ಕೆಲಸದವರ ಮನೆಯಲ್ಲಿ ಸಾಲ ಈಸಿಕೊಂಡು ಬಂದ ಚೆನ್ನಿ, ಅಲಹಾಬಾದಿಗೆ ಹೊರಟು ಸಂಗಮದಲ್ಲಿ ಮುಳುಗಿ ಪಾವನರಾಗಿ ಬಂದು ಬಿಡುವ ಉತ್ಸಾಹ ತೋರಿದಳು. ಸಿವೇಸ ಅವಳ ಮಾತಿಗೆ ಹ್ಞೂಗುಟ್ಟಿ ಹೊರಡುವ ತನಕ ಅವಳ ಆ ಉತ್ಸಾಹ ಕುಂದಲಿಲ್ಲ. “ಪರಯಾಗದಾಗೆ ಅದೇ ಅಲಾಬಾದಿನಾಗೆ ನಡೀತ ಐತಲ್ಲ, ಕು೦ಬಮೇಳ ಅದಿಕ್ಕೋಗಣ ಅವ್ವ, ನೀನೂ ಬತ್ತಿಯ”? ಎಂಬ ಸಿವೇಸನ ಪ್ರಶ್ನೆ, ನಿಸ್ಸಾರದ ಹಾದಿಯಲ್ಲಿದ್ದ ರುದ್ರಿಯ ಬದುಕಿಗೆ ಸಡಗರದ ಸಿಂಚನ ಮಾಡಿತು. ಆಗೊಮ್ಮೆ, ಈಗೊಮ್ಮೆ, ಅಕ್ಕಪಕ್ಕದವರ ಟೀ.ವಿ.ಯಲ್ಲಿ ಬ೦ದಿದ್ದ ನೇರ ಪ್ರಸಾರಗಳನ್ನು, ಅವರಿವರಿಂದ ಕೇಳುತ್ತಿದ್ದ ಸುದ್ದಿಗಳನ್ನು ಕೇಳುತ್ತ, ನೋಡುತ್ತ ತೃಪ್ತಿ ಪಟ್ಟುಕೊಂಡಿದ್ದಳು ರುದ್ರಿ. “ಕು೦ಬಮೇಳಕ್ಕಾ? ನಾನಾ ಸಿವ? ನಾನಾ? ಎನ್ನುವುದರೊಂದಿಗೆ ಚಿಮ್ಮಿದ ಅವಳ ನಗುವಿನಲೆಗಳಲ್ಲಿ ಒಪ್ಪಿಗೆಯ ಉತ್ತರ ಸಿಕ್ಕಿಹೋಗಿತ್ತು.
ಬೆಂಗಳೂರಿನಿಂದ ಮದರಾಸಿಗೆ ಹೋಗಿ, ಮುಂದಿನ ರೈಲಿಗಾಗಿ ಮೂರು ಘ೦ಟೆಗಳ ಕಾಲ ತೂಕಡಿಸಿ, ಇನ್ನೊಂದು ರೈಲಿನಲ್ಲಿ ತೂರಿಕೊಂಡು ಹೊರಟಿದ್ದಳು ರುದ್ರಿ, ಮಗ ಸೊಸೊಸೆಯರೊಂದಿಗೆ. ಹಗಲು ರಾತ್ರಿ ತೊಗಿದ ರೈಲು, ಅಪರಿಚಿತ ಭಾಷೆ, ಕಾಣದ ಮುಖಗಳು, ಎರಡುಮೂರು ದಿನಗಳ ನಿದ್ದೆ, ಊಟ, ಮುಖಮಾರ್ಜನ, ಮಾತು, ಎಲ್ಲ ಕುಳಿತ ಬೋಗಿಯಲ್ಲೆ ಮುಗಿಸಿ, ಅಲಹಾಬಾದಿನ ನಿಲ್ದಾಣದಲ್ಲಿ ಅಟೋ ಹತ್ತಿ, ಸಂಗಮದ ನೆಲದಲ್ಲಿ ಕೆಳಗುರುಳಿಕೊಂಡಾಗ.. .. .. ಅಲ್ಲಿ ತೆರೆದು ಕೂತಿತ್ತು, ಇಡೀ ಬ್ರಹ್ಮಾಂಡದ ‘ಭಕ್ತರ ಜಗತ್ತು”. ದೈವ ಸಾನ್ನಿಧ್ಯಕ್ಕೆ, ಮೋಕ್ಷಕ್ಕೆ, ಶಾಶ್ವತ ಸಮಾಧಾನಕ್ಕೆ, ಮತ್ತು ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ ಸಿಗುವ ಅಪರೂಪದ ಪುಣ್ಯಕ್ಕಾಗಿ, ಎಡ ತಾಕುತ್ತಿದ್ದ ಪ್ರಚಂಡ ಭಕ್ತಜನಸಾಗರ. ಹರಿಯುವ ಜಲದ ನಡುವೆ ನುಗ್ಗುವ ಜನ ಪ್ರವಾಹ. ಆ ದೇವರು ಎಲ್ಲಿದ್ದಾನೋ, ಹೇಗಿದ್ದಾನೋ ಆದರೆ ಆ ದೇವರು ಎಂಬ ಹೆಸರಿನಲ್ಲಿ ಕೋಟಿಗಟ್ಟಲೆ ಜನರನ್ನು ಹೀಗೆ ಒಂದೆಡೆ ಕೂಡಿ ಹಾಕಿ, ನೀರಿಗೆ ಬೀಳಿಸಿ, ಮಣಮಣ ಮ೦ತ್ರಗಳನ್ನು ಹೇಳಿಸಿ ಹುಚ್ಚರನ್ನಾಗಿಸುವ ಆ ಅಧ್ಭುತ ಮಾಯಾ ಸಾಮರ್ಥ್ಯ ಯಾವುದಿರಬಹುದು? ರುದ್ರಿ ರೋಮಾ೦ಚಿತಳಾಗಿ ಎರಡೂ ಕೈಗಳನ್ನು ಮೇಲೆತ್ತಿ ಮುಗಿದಳು.
ಅಂದು ಮೌನಿ ಅಮಾವಾಸ್ಯೆ. ಗಂಗೆ, ಯಮುನೆ ಮತ್ತು ಸರಸ್ವತಿಯರ ಆ ಸಂಗಮದಲ್ಲಿ ಒಂದು ಮುಳುಗು ಹಾಕಿ, ಸೂರ್ಯ ದೇವತೆಗೆ ಅರ್ಘ್ಯ ಕೊಟ್ಟರೆ ಆತ್ಮದ ಪಾಪಗಳಿಗೆಲ್ಲ ಪರಿಹಾರವಂತೆ. ಆ ನಂಬಿಕೆಯಲ್ಲೇ ಸ್ನಾನ ಮಾಡಲು ಹೋದಾಗ, ಕರಿಕರಿಯ ಹುಳಗಳಂತೆ ಹರಿಯುವ೦ತ್ತಿದ್ದವು ಕೋಟಿ ಕೋಟಿ ಕಪ್ಪು ಮನುಷ್ಯ ತಲೆಗಳು. ಇಡೀ ಅಲಹಾಬಾದಿನ ಆ ಹುಯಿಲನ್ನು, ದೇವರ ಹೆಸರಿನ ವ್ಯಾಪಾರಗಳನ್ನು, ನೋಡುತ್ತ ನೋಡುತ್ತ ದಿಗ್ಬ್ರಾಂತಳಾಗಿದ್ದಳು ರುದ್ರಿ. ಎಲ್ಲೆಲ್ಲೂ ದೇವರ ಮಂತ್ರ, ಕಿವಿಗೆ ಬೀಳುತ್ತಿದ್ದ ದೇವರ ನಾಮ. ಕಣ್ಣು ಎಸೆದಲ್ಲೆಲ್ಲ ಜನ, ಕೈ ತಾಕಿದಲ್ಲೆಲ್ಲ, ತಿರುಗಿದಲ್ಲೆಲ್ಲ, ಎಡವಿದಲ್ಲೆಲ್ಲ, ಎಲ್ಲೆಲ್ಲೂ ಜನ ಜನ ಜನ. ಕಾವಿ ತೊಟ್ಟವರು, ಮಾರುದ್ದದ ಗಡ್ಡದವರು, ನಗ್ನರು, ಅರೆನಗ್ನರು, ದೇವರಿಗಾಗಿ ಜಪಿಸುವವರು, ತಪ್ಪಿಸಿಕೊ೦ಡವರಿಗಾಗಿ ತಪಿಸುವವರು. ಓಹ್! ರುದ್ರಿ ಮೈಮರೆತದ್ದೇ ಆಗ. ಕಣ್ಣು ಮುಚ್ಚಿ ಏಕಾಗ್ರ ಚಿತ್ತದಿಂದ, ತನ್ನೆಲ್ಲ ಭಕ್ತಿ-ಶ್ರದ್ಧೆಗಳನ್ನೂ ಒಟ್ಟುಗೂಡಿಸಿ ‘ಓ ದ್ಯಾವ್ರೇ ನಮ್ಮಪ್ಪ, ನಿ೦ಗೆ ಶರಣು ಬಂದಿವ್ನಿ ನನ್ನ ಕಾಪಾಡು ಸಿವಾ.”, ಎಂದು ಧ್ಯಾನಿಸಿ ತನ್ನನ್ನೆ ಸಮರ್ಪಿಸಿಕೊಂಡಿದ್ದಳು.
ಅವಳು ಕಣ್ಣು ಬಿಟ್ಟಾಗ, ಆ ದೇವರ ಕೃಪಾ ಕಟಾಕ್ಷವೊ, ಅವಳ ಮೈಮರೆವೋ, ಮೋಕ್ಷದ ದಾರಿಗೆ ಸಾಧನದ ಬಾಗಿಲೋ, ಅಂತೂ ಅವಳು ಒಬ್ಬಂಟಿಯಾಗಿಬಿಟ್ಟಿದ್ದಳು. ಮಗಸೊಸೆಯರಿಂದ ತಪ್ಪಿಸಿಕೊಂಡು ದಿಕ್ಕ್ಕೆಟ್ಟವಳಾಗಿದ್ದಳು. “ಚೆನ್ನೀ , ಸಿವೇಸಾ.. ಸಿವ.. ಸಿವಾ.. ಎಲ್ಲದೀರ .. ನಮ್ಮ ಸಿವೂನ ಕಂಡಿರ.. ಸಿವನ್ನ ಕಂಡಿರಾ”? ಎ೦ದು ಕೇಳುತ್ತ ನಿಂತಲ್ಲೇ ಹುಡುಕುವ ಹೆಜ್ಜೆಗಳನ್ನು ಸುತ್ತುಹರಿಸಿದ್ದಳು. ಇನ್ನು ಅವರು ಸಿಗುವಿದಿಲ್ಲವೆಂಬ ಭಯ, ಗಾಬರಿಗಳಲ್ಲಿ ದನಿ ಅಡಗಿ ಒಮ್ಮೆಲೆ ಎಚ್ಚರ ತಪ್ಪಿತ್ತು. ಮತ್ತೆ ಪ್ರಜ್ಞೆಗೆ ಮರಳಿ ಬಂದಾಗ, ಅವಳು ಕುಂಭನಗರದ ಬಹುಗುಣರ ಸ್ಮೃತಿ ಸಮಿತಿಯಲ್ಲಿದ್ದಳು. ಅಲ್ಲಿ ಅವಳಿಗೆ ಕಂಡಿದ್ದು ಇನ್ನೊಂದು ವಿಸ್ಮಯ ಲೋಕ. ಸುಮಾರು ಹತ್ತು ಸಾವಿರ ತಪ್ಪಿಸಿಕೊಂಡ ವೃದ್ಧೆಯರು ಅಲ್ಲಿದ್ದರು. ಅಲ್ಲಿದ್ದವರೆಲ್ಲ ಹೆಂಗಸರೇ ಆಗಿದ್ದುದಕ್ಕೆ ಮತ್ತೆ ಅವರ ಜ್ಞಾನದ ಕೊರತೆಯೇ ಕಾರಣವಿರಬೇಕೇನೋ. ಅವರಲ್ಲಿ ನಿಜವಾಗಲೂ ತಪ್ಪಿಸಿಕೊಂಡವರು ಮೂರು ಸಾವಿರ ಮುದುಕಿಯರು ಮಾತ್ರ.
ಸಮಿತಿಗೆ ಸೇರಿ ತಿಂಗಳಾದರೂ ರುದ್ರಿಯನ್ನು ಹುಡುಕಿಕೊಂಡು ಯಾರೂ ಬರಲಿಲ್ಲ. ತಿಂಗಳ ಹಿಂದಷ್ಟೇ ಬದಲಾದ, ಮಗನ ಮನೆಯ ವಿಳಾಸವೂ ಅವಳಿಗೆ ಗೊತ್ತಿರಲಿಲ್ಲ. ಮರುತಿಂಗಳು ಅವಳನ್ನು ಯಾವುದೋ ವೃದ್ಧಾಶ್ರಮಕ್ಕೆ ಕಳಿಸಲಾಯಿತು. ಅಂದಿನಿಂದ ಆಶ್ರಮದ ಮುಂದೆ ಓಡಾಡುವ ಎಲ್ಲ ಆಕೃತಿಗಳಲ್ಲೂ, ತನ್ನ ಸಿವನನ್ನು ಅರಸುವದೇ, ಅವನ ಹೆಸರನ್ನು ಜಪಿಸುವುದೇ ಅವಳ ದಿನನಿತ್ಯದ ಕರ್ಮ.
ಸಿವೇಸ ಕಳೆದ ತಾಯಿಯನ್ನು ಹುಡುಕಿಸಲು ಮನಸಾರೆ ಪ್ರಯತ್ನ ಪಟ್ಟ. ಆದರೆ ತಾಯಿ ಸಿಗಲಿಲ್ಲ. ಅವನೂ ತನ್ನ ಮಕ್ಕಳು, ಮನೆ ಮತ್ತು ತಾಯಿಯ ದೇಖ್‌ರೇಖಿಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟಿದ್ದರೆ, ಗಂಡಹೆಂಡತಿಯರಿಬ್ಬರಲ್ಲೂ ಸಮಾನ ಸ್ಥಾನ-ಹೊಣೆಗಾರಿಕೆಗಳಿದ್ದಿದ್ದರೆ, ಚೆನ್ನಿ, ತನ್ನ ಅತ್ತೆಯ ಈ ಕಳೆಯಲ್ಪಡುವ ಯೋಜನೆಯನ್ನೇ ಹಾಕುತ್ತಿರಲಿಲ್ಲವೇನೋ. ಹಾಕಿದ್ದರೂ ಸಫಲಳಾಗುತ್ತಿರಲಿಲ್ಲ. ಚೆನ್ನಿಯ ತಂತ್ರದ ಬಗ್ಗೆ ತಾಯಿ-ಮಗ, ಅಮಾಯಕರಾಗಿ ಪರಸ್ಪರ ಅಗಲಿ, ಹೀಗೆ ಕೊರಗಬೇಕಾದ ಸಂದರ್ಭವೂ ಬರುತ್ತಿರಲಿಲ್ಲ. ಬಂದಿದ್ದರೂ ತಾಯಿಯನ್ನು ಹುಡುಕಿಸುವಲ್ಲಿ ಸಿವೇಸ ವಿಫಲನಾಗುತ್ತಿರಲಿಲ್ಲ.
ರುದ್ರಿಯ ಹಿಡಿ ಹೃದಯ, ಮಗನಿಗಾಗಿ ಕಾಯುತ್ತಲೇ ಇತ್ತು. ಚಲಾವಣೆಯಲ್ಲಿದ್ದ ಆ ಜೀವ, ದೂರದ ಊರಿನಲ್ಲಿ ಸ೦ಬಂಧವನ್ನೂ, ದೇಹದ ಚೈತನ್ಯವನ್ನೂ ಕಳೆದುಕೊಂಡು ಮಣ್ಣ ಉಸುಬಿನಲ್ಲಿ ಹೂತು ಹೋಗುವವರೆಗೆ, ಜೀವ ಸೂತ್ರ ಕಡಿದು ಹೋಗುವವರೆಗೆ, ಎದೆಯ ಗೂಡಲ್ಲಿ ಮಾತ್ರ ಉಳಿದ, “ ಸಿವಾ.. .. ಸಿವ.. .. ಸಿವ” ಎಂಬ ಎರಡೇ ಎರಡು ಅಕ್ಷರಗಳು, ಆಶ್ರಮದಿಂದ ತನ್ನ ಬಿಡುಗಡೆಗಾಗಿ ಧೇನಿಸುತ್ತಲೇ ಇದ್ದವು. ಒಳಗೊಳಗೇ ಸಿವನ ಸಂಸಾರದಲ್ಲಿ ಸುತ್ತುತ್ತಲೇ ಇದ್ದವು.
*****
ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ-೨೦೦೨ ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ.