ಹೀಗೇ ಒಮ್ಮೆ ತಿರುಗಾಡುತ್ತಾ ಇದ್ದಾಗ ತಂಗಿಗೆ ಸಿಕ್ಕಿದ ಮರಿ ಅದು. ಇದು ಯಾವ ಮರಿ? ತಂಗಿ ಎಲ್ಲರೊಡನೆಯೂ ಕೇಳಿದಳು. ಯಾರೂ ಹೇಳಲಿಲ್ಲ. ಕಾರಣ ಯಾರಿಗೂ ಅದು ಯಾವ ಮರಿ ಎಂದು ತಿಳಿಯಲಿಲ್ಲ. ತಂಗಿ ಅದನ್ನು ತಂದು ಸಾಕತೊಡಗಿದಳು. ದಿನಾ ಕಾಳು ಕಡಿ ಹಾಲು ಮತ್ತು ಪ್ರೀತಿ.
ಒಂದು ದಿನ ನೋಡುತ್ತಾಳೇ, ಮರಿಯ ಮೈ ತುಂಬ ಪಟ್ಟೆಗಳು! ಓಹೋ, ಹಾಕಾದರೆ ಇದು ಪಟ್ಟೆಹುಲಿಯ ಮರಿ – ಎಂದರು ನೋಡಿದವರು. ತಂಗಿಯ ಸಂತೋಷಕ್ಕೆ ಪಾರವುಂಟೆ? ಕಾಡಿನಲ್ಲಲ್ಲ, ಪರ್ವತದಲ್ಲಲ್ಲ, ತನ್ನ ಮನೆಯಲ್ಲೇ ಬಳಿಯಲ್ಲೇ ಪಟ್ಟೆಹುಲಿಯ ಮರಿ! “ಆದರೆ ಮುದ್ದು ತಂಗಿ, ಅದನ್ನು ಬಿಟ್ಟು ಬಿಡು. ಒಂದು ದಿನ ನಿನ್ನನ್ನೇ ಅದು ತಿಂದುಬಿಟ್ಟೀತು.”–
ತಂಗಿ ಕೇಳುವವಳೆ? “ನೀನು ಪಟ್ಟೆಹುಲಿಯ ಮರಿಯಾದರೆ ನಾನು ನಿನ್ನ ಗೆಳತಿ” – ಎಂದು ಮರಿಯ ಪಟ್ಟೆ ನೀವಿ ಅಕ್ಕರೆ ಲೇಪಿಸಿದಳು. ದಿನ ಹೋಗುತ್ತ ಇತ್ತು. ದಿನಗಳಿಗೆ ನಿಲ್ಲಲು ಬಾರದು. ಅವುಗಳ ಕಾಲಿಗೆ ಚಕ್ರ ಕಟ್ಟಿರುತ್ತದಲ್ಲ, ಹಾಗಾಗಿ ಹೋಗುತ್ತ ಇರುವುದೇ ಹಣೆಬರಹ. ಹೀಗೆ ಹೋಗುತ್ತ ಇದ್ದಂತೆ ಒಂದು ದಿನ ನೋಡಿದರೆ ಪಟ್ಟೆಮರಿಯ ತಲೆಯ ಮೇಲೊಂದು ಜುಟ್ಟು! ಅರೆ! ಇದೆಲ್ಲಿಯೂ ಇಲ್ಲ! ಹುಲಿಮರಿಯ ತಲೆಗೆ ಜುಟ್ಟು. ಇದು ಹುಲಿಮರಿಯಲ್ಲ. ಹಾಗಾದರೆ ಯಾವುದು?
ತಂಗಿ ಎಲ್ಲ ದೊಡ್ಡವರನ್ನೂ ಕರೆದು ಕರೆದು ತೋರಿಸಿದಳು.
“ಓ! ಹೌದಲ್ಲ, ಜುಟ್ಟು! ಯಾವ ಪ್ರಾಣಿ ಇದು?”
“ದಿನಕ್ಕೆಷ್ಟು ಸಲ ಹಿಕ್ಕೆ ಹಾಕುತ್ತದೆ?”
“ಕಾಳು ಹೆಕ್ಕುತ್ತದೆಯೇ?”
ಏನದು ಬಾಯಿಯೋ ಕೊಕ್ಕೋ?”
“ಹೇಗಿದೆ ನೋಡು ಜುಟ್ಟು, ಕೋಳಿಯ ಜುಟ್ಟಂತೆ!”
“ಕೋಳಿಯ ಜುಟ್ಟಲ್ಲ. ಅದು ನವಿಲಿನ ಜುಟ್ಟು?”
ಅವರಿನ್ನೂ ಹೀಗೆ ಪ್ರಶ್ನೆಯೊಳಗೆ ಪ್ರಶ್ನೆ ನೆಟ್ಟು ಉತ್ತರ ಕಾಯುತ್ತಿದ್ದಾರಷ್ಟೇ, ಅದೋ ಕೋಡು! ಕೋಡು ಮೂಡುತ್ತಿದೆ!…. ನೋಡು ನೋಡುತ್ತ ಅವರು ದಂಗಾದರು. ಅವರು ಸೋತಂತೆ ತಂಗಿಯ ಸಂತೋಷವೆಂದರೆ! “ಮರಿಯೆ, ನೀನು ಯಾರಿಗೂ ತಿಳಿಯಲಿಲ್ಲ. ನೀನೊಂದು ಗುಟ್ಟಿನ ಮರಿ” — ಎಂದು ಅವುಚಿಕೊಂಡಳು.
ತಂಗಿಯ ಮನೆ ಸಣ್ಣಮರಿಯ ವಿಚಾರ ಊರೆಲ್ಲ ಹಬ್ಬಿತು. ಕರೆಯದೆಯೇ ಜನ ಬರತೊಡಗಿದರು. ಇಣುಕಿ ಇಣುಕಿ ಮರಿಯನ್ನು ನೋಡುವರು. ಕಣ್ಣಿನೊಳಗೆ ಇಳಿವ ಚಿತ್ರ ತಿಳಿಯದೆ ಕಂಗಾಲಾಗುವರು. “ಇದು ಯಾವ ಪ್ರಾಣಿಯಪ್ಪ!” – ಉದ್ಗರಿಸುವರು. ಅವರ ಉದ್ಗಾರ ಕೇಳೀ ಕೇಳೀ, ಬಹುಶಃ ಆ ಸಣ್ಣ ಮರಿ ನಕ್ಕುಬಿಟ್ಟಿತು! ಹ್ಙಾಂ! ನಗೆಯೆ! ಮರಿ ನಗುತ್ತಿದೆಯೆ! ಪಟ್ಟೆಮರಿ, ಜುಟ್ಟುಮರಿ, ಕೊಂಬುಮರಿ, ಕೊಂಗಾಟ ಮರಿ – ನಗುವುದೇ ನಗುವುದೇ! ಸುದ್ದಿ ಏದುಸಿರು ಬಿಡುತ್ತ ಓಡಿ ವಿಜ್ಙಾನಿಗಳಿಗೆ ಒಸಗೆ ಮುಟ್ಟಿಸಿತು. ಅವರೂ ದಿಗಿಲೋಡಿ ಬಂದು ಮರಿ ಪರೀಕ್ಷೆ ನಡೆಸಿದರು. ಪಟ್ಟೆ, ಕೊಂಬು, ಜುಟ್ಟು – ಮುಟ್ಟಿದರೂ ತಿಳಿಯದೆ ಕೊನೆಗೆ ಕಿವಿಗೆ ಕಡ್ಡಿ ಹಾಕಿದರು ಕಣ್ಣಿಗೆ ಕೈ ಹಾಕಿದರು ಕಣ್ಣಲ್ಲಿ ನೀರು ಉಕ್ಕುತಿದ್ದಂತೆ ಮರಿ ಇನ್ನೂ ಸಣ್ಣಗೆ ನಕ್ಕಿತು. ನಗೆ ನಾಟಿದಂತಾಗಿ ಅವರೆಲ್ಲ ತಾವೂ ನಗಬೇಕೋ ಅಳಬೇಕೋ ತಿಳಿಯದೆ, ಮರಳಿದರು.
ಇನ್ನು ಶಾಂತಾಟೀಚರ್ ಒಬ್ಬರು ಬಾಕಿಯಲ್ಲ, ಮರಿ ನೋಡಲು! ಅವರೋ ಶಾಲೆಯಾಯಿತು, ಮನೆಯಾಯಿತು. ಮರಿ ನೋಡಲು ಊರೆಲ್ಲಾ ಬಂದರೂ ಅವರಿಗೆ ಬಿಡುವಿಲ್ಲ. ಅವರೂ ನೋಡಲೆಂದು ತಂಗಿ ಮತ್ತು ಅವರ ಗೆಳೆಯ ಗೆಳತಿಯರು ಒಂದು ದಿನ ಅವರನ್ನು ಕರೆದುಕೊಂಡು ಬಂದು ಮರಿಯನ್ನು ತೋರಿಸಿದರು. ಅವರಾದರೂ ಖಂಡಿತ ಹೇಳಿಯಾರು ಅಂದುಕೊಂಡರೆ ಊಹ್ಙೂಂ. ಅವರು ನೋಡಿದವರೇ “ಇದು ಯಾವ ವಿಚಿತ್ರವಪ್ಪ. ಯಾವ ಪಾಠದಲ್ಲಿಯೂ ಇಲ್ಲದ್ದು! ಬಿಡಿ… ನನಗಂತೂ ತಿಳಿಯದು” – ಎಂದುಬಿಟ್ಟರು. ಟೀಚರರ ಮಾತು ಕೇಳಿ ಗೆದ್ದವರಂತೆ ಕೂಗಿದರು ತಂಗಿ ಮತ್ತು ಗೆಳೆಯ ಗೆಳತಿಯರು. ಅವರೆಲ್ಲ ಈಗ ಶಾಲೆ ಬಿಟ್ಟೊಡನೆ ಸಣ್ಣ ಮರಿಯ ಗೂಡಿನ ಬಳಿಯೇ ಇರುವರು. ಒಬ್ಬೊಬ್ಬರ ಮನೆಯಿಂದ ಒಂದೊಂದು ತಿನಿಸು. ಮರಿಯೋ, ತಿನ್ನುವುದು ಬಿಡುವುದು. ಒಲ್ಲೆನ್ನುವಂತೆ ತಲೆಯಾಡಿಸುವುದು. ಆಡುವುದು, ಓಡುವುದು! ಅದರ ಜತೆ ಅವರೆಲ್ಲರೂ, ಅವರ ಜತೆ ದಿನದಿನಗಳೂ.
ಹೀಗೆಯೇ ಆಡುತ್ತ ಓಡುತ್ತ ತಮಾಷೆಯಾಗಿ ಇದ್ದಂತೆ – ಅಗೊ ಅಗೋ, ಮರಿಯ ಅಕ್ಕಪಕ್ಕದಿಂದ ನಿಶ್ಶಬ್ದವಾಗಿ ಮಿರಮಿರ ರೆಕ್ಕೆಗಳು! ಕಣ್ಣೆದುರಿನಲ್ಲಿಯೇ ಮೂಡಿ ಅರಳಿದವು! ಅಲ್ಲಾಡಿದುವು. ಅರಳಿ ಅಲ್ಲಾಡಿ ತಂಗಿ ಮತ್ತು ಗೆಳೆಯ ಗೆಳತಿಯರಿಗೆ ಗಾಳಿ ಬೀಸಿ ಬಂದು ಎಲ್ಲರೂ ಹಾರಿ ಹಾರಿ ಕುಳಿತು ನಗುವೇ ನಗು!
ಮೈಯ ಮೇಲೆ ಪಟ್ಟೆ
ತಲೆಯ ಮೇಲೆ ಜುಟ್ಟು
ಜೊತೆಗೇ ಕೋಡು ನೋಡು ಮತ್ತೆ
ಮಿರಮಿರಮಿರ ರೆಕ್ಕೆ!
ಯಾರು ಇದು ಯಾವುದಿದು?
ಹೇಳಬಲ್ಲೆಯಾ, ಗುರುತು ಹಿಡಿಯ ಬಲ್ಲೆಯಾ?
ಅದರ ಸುತ್ತ ಚಪ್ಪಾಳೆ ತಟ್ಟುತ್ತಾ ಕುಣಿಯ ತೊಡಗಿದರು. ಕುಣಿಯುತ್ತ ಕುಣಿಯುತ್ತ ಕುಣಿತ ನಿಲ್ಲಿಸಿ ನೋಡುತ್ತಾರೆ – ಮರಿ ಕಾಣೆ! ಮರಿ ಎಲ್ಲಿ? ಕಾಣೆ! ಹಿಂದೆ ಮುಂದೆಲ್ಲ ಹುಡುಕಿದರು. ಮರಿ ಮರೀ, ಕೂಗಿದರು. ಕೂಗಿಗೆ ಊರ ಜನರೆಲ್ಲ ಬಂದರೂ ಮರಿ ಬರಲಿಲ್ಲ. ಹಾ ಮರಿಯೆ! ಕಳೆದು ಹೋಯಿತೆ, ಅಂತ ಜನರೆಲ್ಲ ಹುಡುಕತೊಡಗಿದರು. ಹೆಸರಿಲ್ಲದ ಮರಿಯನ್ನು ಕರೆಯುವುದೆಂತು? ಚಿಂತೆಯಲ್ಲಿಯೂ ಒಕ್ಕೊರಲಾದರು. ಮರೀ ಸಣ್ಣ ಮರೀ ಪಟ್ಟೆಮರೀ….
ಊಹ್ಙೂಂ, ಮರಿ ಬರಲಿಲ್ಲ. ಎಲ್ಲಿಯೂ ಕಾಣಲಿಲ್ಲ. ಹಾಗಾದರೆ ಎಲ್ಲಿ ಮಾಯವಾಯಿತು?
‘ಮಾಯ’ ಶಬ್ದವೇ ತಲೆಯೆತ್ತಿ ಮೇಲೆ ನೋಡುವಂತೆ ಸನ್ನೆ ಮಾಡುತ್ತದೆಯೇನು? ತಂಗಿ ಥಟ್ಟನೆ ತಲೆಯೆತ್ತಿದಳು.! ನೋಡಿದರೆ ಅಲ್ಲಿ, ಆಕಾಶದಲ್ಲಿ, ಹೌದಲ್ಲ ಅದೇ – ಪಟ್ಟೆಮರಿ! ರೆಕ್ಕೆಬಿಡಿಸಿ, ಜುಟ್ಟು ನಿಮಿರಿ, ಕೋಡು ಮೇಟಿ, ಕಾಲು ಚಾಚಿ ಸದ್ದಿಲ್ಲದೆ ಸಾಗುತ್ತಿದೆ! ದನಿಯ ದನಿ ಕೇಳುತಿದೆ.
ದೂರ ದೂರಕೆ ದೂರ ತೀರಕೆ | ದೂರ ತೀರಕೆ ಯಾವ ತೀರಕೆ?
ದೂರ ಈಸಿತು ಬಿಂದುವಾಯಿತು | ದಿವವ ತುಂಬಿದ ದಿವ್ಯವಾಯಿತು
ಅಲ್ಲಮಸುಳಿಸಿ ಇಲ್ಲಮಾಗಿಸಿ | ಖಾಲಿಯಾಯಿತು ಆಗಸ
ಪೂರ್ಣವಾಯಿತು ಆಗಸ
* * *
“ತಂಗೀ – ಅದು ಮನಸು.”
“ಮನಸೆಂದರೆ?”
“ತಂಗೀ – ಅದು ಕನಸು”
“ಕನಸೆಂದರೆ?”
“ತಂಗೀ – ಅದು ಕವಿತೆ”
“ಹಾಗೆಂದರೆ?”
….ಹಾಗೆಂದರೆ? ಹುಡುಕುತ್ತ ಹೊರಟಳು ತಂಗಿ.
….. ಇನ್ನೂ ಬಂದಿಲ್ಲ.
*****
