ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ
ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ
ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ.
ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ
ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?!
ಬಂದದ್ದು ಹಂಜಿಯ ಮಾಡಿ ರಾಟ ತಿರುಗಿಸಿದ.
ಗದ್ದುಗೆಯನೇರಿದರು ಕಾಣಿಸಿಕೊಳದ ಕಿರಿಯ
ಬಾಜಾ ಬಜಂತ್ರಿಯ ನಿಲಿಸಿ ಸಹಜ ತಂತಿಯ ಮಿಡಿದ
ಎಲ್ಲರಿಗು ಕಿವಿಗೊಟ್ಟು ತನ್ನ ಒಳದನಿ ಮರೆಯ.
ಮಹಾಪೂರವ ಧೀರ ತೆಪ್ಪದಲಿ ದಾಟಿಸಿದ;
ಮಾಯಿಸಿದ ಮೈಮೇಲೆ ಬಂದು ಬಿದ್ದವರ ಗಾಯ.
ಯಾರಿಗೂ ಸಿಗದ ಬಿಳಿ ಪಾರಿವಾಳವ ಹಿಡಿದ.
ಮಧ್ಯರಾತ್ರಿಯಲಿಂತು ಕೊರೆದು ಮಿಂಚಿನ ಗೆರೆಯ
ಮರೆಯಾದ: ದಡಕ್ಕೆ ಮುಟ್ಟಿಸಿದ ಹೊತ್ತ ಹೊರೆಯ.
*****
೧೯೬೯