ಓಟ

ಆ ವಿಸ್ತರಣೆ ಬಹಳ ಸುಸಂಸ್ಕೃತ ವಿಸ್ತರಣೆ ಎಂದು ಹೆಸರಾದದ್ದು. ಇಲ್ಲಿ ಮನೆ ಸಿಗುವುದೆಂದರೆ ಪುಣ್ಯ ಎನ್ನುತ್ತಾರೆ. ಅಚ್ಚುಕಟ್ಟಾದ ಸಂಸಾರಗಳು. ಹೆಚ್ಚಿನ ಮನೆಗಳಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಸೈಕಲಿನಿಂದ ಹಿಡಿದು ಕಾರಿನವರೆಗೂ ವಾಹನಗಳಿವೆ. ಯಾರೊಬ್ಬರ ತಂಟೆಗೆ ಹೋಗದೆ ಅವರಾಯಿತು ಅವರ ಬದುಕಾಯಿತು ಎಂಬಂತೆ ಇರುವವರು. ಕೆಲಸಕ್ಕೆ ಹೋಗುವವರೇ ಜಾಸ್ತಿ ಇರುವುದರಿಂದ ಬೆಳಗಾಗುವುದೂ ಬೇಗ. ಬೆಳಗಾಗಲು ಸೂರ್ಯ ಮೂಡಬೇಕೆಂತಲೂ ಇಲ್ಲ. ಬೆಳಗಿನಜಾಮ ನಾಲ್ಕರಿಂದ ಒಂದೊಂದೇ ಕಣ್ಣು ತೆರೆಯುತ್ತದೆ. ಅವಸರದ ತಿಂಡಿ ಅಡುಗೆ, ಹೊರಡುವ ಗಡಿಬಿಡಿ. ಮಕ್ಕಳನ್ನು ರೆಡಿ ಮಾಡಿ ಕಳಿಸುವುದೇ ಎಲ್ಲಕ್ಕಿಂತ ದೊಡ್ಡದು. ಮಕ್ಕಳೆಲ್ಲ ಚೀಲ ಸಿಕ್ಕಿಸಿಕೊಂಡು ಬೆನ್ನು ಮುಡುಗಿಸಿಕೊಂಡು ದಢದಢನೆ ತಮಗಾಗಿ ಬಂದ ಬಸ್ಸು, ಆಟೋ ಈಗೀಗ ಟ್ಯಾಕ್ಸಿಗಳಲ್ಲಿಯೂ, ಓಡಿ ಕುಳಿತು ಹೊರಟುಹೋಗುವಾಗ ಏನೋ ಈ ದೇಶಕ್ಕೆ ಮುಂದೆ ಎಂತಹ ಸುಂದರ ದಿನಗಳು ಬರಲಿವೆಯಪ್ಪಾ ಯಾರೂ ಕನಸು ಕಾಣಬೇಕು. ಮಕ್ಕಳು ಹೋದ ಸ್ವಲ್ಪ ಹೊತ್ತಿಗೇ ಅಂತೂ ಕೆಲಸ ಹೇಗೂ ಮುಗಿದ ದಣಿವು ದುಗುಡದ ಮುಖದಲ್ಲಿ ಜೋಡಿಜೋಡಿಗಳು ಮನೆಗೆ ಬೀಗ ಹಾಕಿ ತಂತಮ್ಮ ವಾಹನಗಳಲ್ಲಿ ಹೊರಡುತ್ತಾರೆ. ಒಂಭತ್ತರಿಂದ ಹತ್ತರವರೆಗೆ ಒಂದೊಂದೇ ಮನೆ ಬಾಗಿಲುಗಳು ತೆರೆದ ಕಣ್ಣುಗಳು ಮುಚ್ಚಿಕೊಳ್ಳುವಂತೆ ಮುಚ್ಚಿಕೊಳ್ಳುತ್ತವೆ. ಇನ್ನು ಐದು, ಆರು ಗಂಟೆ ಸಂಜೆಯವರೆಗೂ ಹಾಗೆಯೇ. ಸಂಜೆಯ ನಂತರ ಒಂದೆರೆಡು ಗಳಿಗೆ ಮಾತುಕತೆ, ಮತ್ತೆ ಬಾಗಿಲು.

ಎಲ್ಲ ಮನೆಗಳೂ ಹೀಗೆಯೇನಲ್ಲ. ಗಂಡಸರು ಮಾತ್ರ ಹೊರಗೆ ದುಡಿಯಲು ಹೋಗುವ ಮನೆಗಳೂ ಇವೆ. ಇಬ್ಬರೂ ಕೆಲಸಕ್ಕೆ ಹೋದರೂ ಮನೆಯಲ್ಲಿ ತಾಯಿ ತಂದೆಯೋ ಅತ್ತೆಮಾವಂದಿರೋ ಇರುವ ಮನೆಗಳೂ. ಏನಿದ್ದರೂ ಎಲ್ಲ ಬಾಗಿಲು ಹಾಕಿಕೊಂಡು ಒಳಗೆ ಇರುವವರೇ. ಈಗಂತೂ ದಿನಕ್ಕೊಂದು ಬಗೆಯ ಕಳ್ಳತನದ ಕಥ ಪೇಪರುಗಳಲ್ಲಿ ಬರುವಾಗ ಅನಾವಶ್ಯಕ ಹೊರಗಿರುವುದು, ಬಾಗಿಲು ತೆಗೆದಿಟ್ಟು ಎಲ್ಲೋ ಒಂದು ಕಡೆ ಏನಾದರೂ ಮಾಡುತ್ತ ಇರುವುದು ಎಲ್ಲ ಕೂಡದು. ಹಾಗಾಗಿ ಹತ್ತು ಗಂಟೆಯ ಗೌಜುಗಲಾಟೆ ಮುಗಿಯಿತಂದರೆ ವಿಸ್ತರಣೆ ಎಂಬುದು ‘ಲಂಡನ್’ ಆಗುತ್ತದೆ ಎನ್ನುತ್ತಾರೆ. ಲಂಡನ್ ಎಂದರೆ ಹೋಗಿ ತಿಳಿಯದಿದ್ದರೂ ಕೇಳಿ ತಿಳಿದಿರುವ ಪ್ರಕಾರ ಹೀಗೆಯೇ ಇರಬಹುದು ಎಂಬ ಒಂದು ಅಂದಾಜಿನಲ್ಲಿ. ಹತ್ತು ಗಂಟೆಯ ನಂತರ ಮೌನ ಹೊದೆದು ಧ್ಯಾನಸ್ಥವಾಗಿರುವಂತೆ ಕಾಣುವ ಹಗಲಿನಡಿಯ ಈ ವಿಸ್ತರಣೆಯಲ್ಲಿ ಮತ್ತೆ ಕೇಳಿ ಬರುವ ಶಬ್ದಗಳೆಂದರೆ ಕ್ಯಾರಿಯರ್ ಕೊಂಡೊಯ್ಯುವವನ ಸೈಕಲ್ ಬೆಲ್ಲು. ಚಾಣ ಚಾಣಾ ಎಂದು ಕೂಗುವ ಚೇಣದವ, ಚಪ್ಪಲಿ ರಿಪೇರಿ, ಪೇಪರ್ ಹಳೆ ಪೇಪರ್, ಪ್ಲಾಸ್ಟಿಕ್ ಲಕೋಟೆಯವ, ಗುಜರಿಯವ, ತರಕಾರಿ ಗಾಡಿ.

ಇವರಿಗೆಲ್ಲ ಯಾರು ಬಾಗಿಲು ತೆರೆಯುತ್ತಾರೆ ಸುಮ್ಮನೆ? ಸಾಧ್ಯವಾದಷ್ಟೂ ಎದುರಿನ ತಳಿಕಂಡಿಯಿಂದಲೇ ಮಾತು ಮುಗಿಸುತ್ತಾರೆ. ಅವಶ್ಯವಿದ್ದರೆ ಮಾತ್ರ, ಬೇಕಾಗಿರುವುದು ತಮ್ಮ ಮನೆಯ ಮುಂದೆ ಹಾದುಹೋಗುವಾಗ ಹೊರಬಂದು, ಆತ ಅವರನ್ನು ಕಂಡದ್ದೇ ನಿಂತು ಇತ್ತ ತಿರುಗಿದನೆಂದರೆ, ಕೆಲಸ ಹೇಳುವ ಶಿಸ್ತಿನವರು. ಒಟ್ಟಾರೆ ಪರಿಚಿತ ಮತ್ತು ಸಲೀಸು ಶಬ್ದಗಳಲ್ಲಿ ಹೇಳಬೇಕೆಂದರೆ ಭಾರೀ ಡೀಸೆಂಟ್ ವಿಸ್ತರಣೆ. ಅಲ್ಲಿ ಸ್ವಲ್ಪವಾದರೂ ಅತ್ತ ಇತ್ತ ಓಡಾಡಿಕೊಂಡಿರುವವರೆಂದರೆ ಮುದುಕಿ ಪಂಡಿತಮ್ಮ ಮಾತ್ರ.

ಪಂಡಿತಮ್ಮ ಸಂಬಾರಬಳ್ಳಿ ಸೊಪ್ಪು, ಮಜ್ಜಿಗೆ ಹುಲ್ಲು, ವಂದಲಗ ಇತ್ಯಾದಿ ನೆಪ ಮಾಡಿ ಎಲ್ಲರ ಮನೆ ಹತ್ತಿ ಇಳಿಯುತ್ತಾರೆ. ಹಾಗೆಂತ ಅವರೂ ಎರಡು ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಇದ್ದ ಎರಡು ನಿಮಿಷದಲ್ಲಿ ಒಂದು ಸೆಕೆಂಡೂ ಬಾಯಿ ಮುಚ್ಚದೆ ಅಲ್ಲಲ್ಲಿನ ವೃತ್ತಾಂತ ಬಿಚ್ಚುತ್ತಾರೆ. ಪಂಡಿತಮ್ಮನಂಥವರು ಇರಬೇಕು, ತೀರ ಬೇಸರವಾದಾಗ ಅವರಿವರ ಮನೆಯ ಚಿಕ್ಕ ಚಿಕ್ಕ ಚರಿತ್ರೆ ಯಾರಿಗೆ ಬೇಡ? ಯಾರು ಯಾರು ಪ್ರೀತಿ ಮಾಡಿದರು, ಪಿ.ಹೆಚ್.ಡಿ. ಮಾಡಿದರು, ಕಾಲೇಜಿಗೆ ಸೇರಿದರು, ಯಾರಿಗೆ ಭಡ್ತಿಯಾಯಿತು, ಯಾರು ಫೇಲು, ಪಾಸು, ವರ್ಗ, ಯಾರಿಗೆ ಹುಶಾರಿಲ್ಲ, ಏನಾಗಿದೆ, ಈ ನಾರು ಬೇರು ಯಾಕೆ, ಅದನ್ನು ತಯಾರಿಸುವುದು ಹೇಗೆ ಇತ್ಯಾದಿ ಹೇಳುತ್ತ ದಾಟಿಕೊಳ್ಳುತ್ತಾರೆ. ವ್ಯಾನೊಂದು ಫ್ರಿಜ್ಜನ್ನೋ ಮತ್ತೇನನ್ನೋ ಹೊತ್ತು ಬಂದಿತೆಂದರೆ ಅದು ಯಾರ ಮನೆಗೆ ಎಂದು ನಿಂತಲ್ಲೇ ತನ್ನೊಳಗೇ, ಪರರಿಗೂ ಕೇಳಿಸುವಂತೆ, ಹೇಳಿಕೊಳ್ಳುತ್ತ ಬೋನಸ್ ಸಿಕ್ಕಿರಬೇಕು ಮುಂತಾಗಿ ಕಾರಣಗಳನ್ನು ಹುಡುಕುವವರು. ಸುಖ ದುಃಖ ಸಂತೋಷ ಆರೋಗ್ಯ ಅನಾರೋಗ್ಯ ಎಲ್ಲವನ್ನೂ ನಾನಾ ವಿಧದ ಏರುಪೇರಿನ ದನಿಯಲ್ಲಿ ಹೇಳುತ್ತ ಹೇಳುತ್ತ ನಡೆದುಬಿಡುವಂಥವರು.

ಸರೋಜ ಗಂಡ ಹೆಂಡತಿ ವರ್ಗವಾಗಿ ಇಂಥಲ್ಲಿ ಮನೆ ಸಿಕ್ಕಿ ಒಂದು ರಾತ್ರಿ ಬಂದಿಳಿದರು. ಬೆಳಗೆದ್ದು ಕಿಟಕಿ ಬಾಗಿಲು ತೆರೆದರೆ ಉದ್ದಾನುದ್ದಕ್ಕೂ ಘಟ್ಟದ ಸಾಲು! ಸೂರ್ಯ ಮೂಡಿ ಬರುವ ಬಾಗಿಲು. ಮೂಡಲ ಮನೆಯಲ್ಲಿ ನಿತ್ಯವೂ ಎರಕ ಹೊಯ್ಯುವ ಮುತ್ತಿನ ನೀರು. ಚಿಕ್ಕಂದಿನಲ್ಲಿ ಸುಲಭವಾಗಿ ಸ್ಲೇಟಿನಲ್ಲಿ ಬರೆಯುವ ಗುಡ್ಡಗಳು, ನಡುವಿಂದ ಮೂಡಿ ಬರುವ ಸೂರ್ಯ, ಹೋಗಹೋಗುತ್ತ ಅಗಲವಾಗುವ ಅವನ ಉದ್ದುದ್ದ ಕಿರಣಗಳು ಎಲ್ಲ ಕೇವಲ ಚಿತ್ರವಲ್ಲ. ನಿಜವಾಗಿಯೂ ಸೂರ್ಯೋದಯವೆಂಬುದು ಹೀಗೆಯೇ ಇರುತ್ತದೆ ಎಂದು ತಿಳಿಯಬೇಕಾದರೆ ಇಲ್ಲಿಗೆ ಬರಬೇಕಾಯಿತು ಎನ್ನುತ್ತ ಸರೋಜ ಕಿಟಕಿ ಬಳಿಯಲ್ಲಿ ನಿಂತೇಬಿಟ್ಟಳು. ಆ ಇಡೀ ವಾತಾವರಣ ಭೂಲೋಕದ್ದಾಗಿ ಕಾಣದೆ ಮೇಲಿನ ಯಾವುದೋ ಒಂದು ಲೋಕದ ಚೂರನ್ನು ಅನಾಮತ್ತಾಗಿ ಎತ್ತಿ ಇಲ್ಲಿ ತಂದಿಟ್ಟಿದ್ದಾರೋ ಎಂಬಂತಿತ್ತು. ಈ ದೃಶ್ಯಕ್ಕಾಗಿಯೇ ಆದರೂ ಮನೆಗೆ ಕೊಡುವ ಬಾಡಿಗೆ ಏನೂ ಅಲ್ಲವೆನಿಸಿತು. ಇಂತಹದೆಲ್ಲ ಎಲ್ಲಿ ಸಿಗುತ್ತದೆ, ಎಷ್ಟೆಲ್ಲ ಊರು ತಿರುಗಿದೆವು! ಅಲ್ಲೆಲ್ಲ ಕಿಟಕಿಯ ಬಾಗಿಲು ತೆರೆದರೆ ಒಂದೋ ಪಕ್ಕದ ಮನೆಯ ಗೋಡೆ, ಇಲ್ಲ ಅಂಗಡಿ ಸಾಲು, ಮೋಟರು ಕಾರು. ಇಷ್ಟು ಪ್ರಶಾಂತ ವಿಸ್ತರಣೆ ಇದುವರೆಗಿನ ವರ್ಗದಲ್ಲಿ ಎಲ್ಲಿಯೂ ಸಿಕ್ಕಿಲ್ಲ. ಬೇಸರವಾಯಿತೇ ಮನೆಯೆದುರು ಕುರ್ಚಿ ಹಾಕಿಕೊಂಡು ಗುಡ್ಡಬೆಟ್ಟದ ಸಾಲು ನೋಡುತ್ತ ಕುಳಿತರೆ ಸಾರಿ. ಸಮಯ ಹೇಳಕೇಳದೆ ಪಶ್ಚಿಮಕ್ಕೆ ಜಾರುತ್ತದೆ. ಮೂರು ವರ್ಷವಾಗುತ್ತಲೂ ಇಲ್ಲಿಂದ ಮತ್ತೆ ಗುಳೇ ಹೋಗಬೇಕಲ್ಲ. ಹೀಗಿನ ಉದ್ಯೋಗವೇ ಬೇಡ…. “ಹೋಯ್, ಏಳಿ, ನೋಡಿ. ಎಲ್ಲಾದರೂ ಇಂತಹ ಜಾಗದಲ್ಲಿ ಮನೆ ಕಟ್ಟಿಕೊಂಡು ಸ್ವಸ್ಥ ಇದ್ದುಬಿಡೋಣ.” ಪತಿ ಮಲಗಿದಲ್ಲೇ ನಕ್ಕ. ಅವಸರ ಪಟ್ಟುಕೊಂಡು ತೀರ್ಮಾನಕ್ಕೆ ಬರಬಾರದು. ತಾಳಬೇಕು ಎಂದು ಹಿರಿಯರು ಹೇಳುತ್ತಾರೆಂಬುದನ್ನು ನೆನಪಿಸುವಂತೆ. ಹಾಗಾದರೆ ಇಲ್ಲಿ ಏನೋ ಒಂದು ಘಟನೆಯಾಗಿ ಭ್ರಮೆ ಕಳಚುತ್ತದೆ ಅಂತನಿಸಿದರೆ, ಹೌದು-ಅಲ್ಲ ಎರಡೂ.

ಪ್ರಸಂಗವೂಂದನ್ನು ಹೇಳಲು ಪ್ರಯತ್ನ ಮಾಡುತ್ತೇನೆ. ಹೇಗೆ ಹೇಳಲು ಹೋದರೂ ಕಡೆಗೂ ಅದು ಗಂಡುಹೆಣ್ಣು ಶೋಷಣೆ ದರ್ಪ ಇತ್ಯಾದಿಗಳ ಮಟ್ಟಿಗೇ ಬಂದು ಮುಟ್ಟಿಕೊಳ್ಳುತ್ತದೋ ಎಂಬ ಆತಂಕದೊಂದಿಗೇ.
*
*
*
ಮೇಲಿನ ವಿಸ್ತರಣೆಯ ಬಗ್ಗೆ ಏನೆಲ್ಲ ವರ್ಣನೆ ಮಾಡಿದೆನೊ ಅದೆಲ್ಲವನ್ನೂ ಅಲ್ಲಿನ ಒಂದು ಸಂಸಾರವನ್ನು ಬಿಟ್ಟು ಅಥವಾ ಒಂದು ಸಂಸಾರ ಇಲ್ಲದೇ ಇದ್ದರೆ ಎಂದು ಓದಿಕೊಳ್ಳಬೇಕು. ಆ ಇಡೀ ವಿಸ್ತರಣೆಗೆ ಅದೊಂದು ಕಪ್ಪು ಚುಕ್ಕಿ. ಉಳಿದ ಮನೆಯವರು ಯಾರೂ ಅತ್ತ ಕಣೆತ್ತಿಯೂ ಕಾಣರು. ಆದರೆ ಎಲ್ಲರಿಗಿಂತ ಮೊದಲು ಬಂದು ಸೇರಿಕೊಂಡ ಸಂಸಾರವದು. ಅಲ್ಲಾಡಿಸುವಂತೆಯೇ ಇಲ್ಲ. ಆ ಮನೆಯಲ್ಲಿರುವುದು ಅಜ್ಜ ಸತ್ತು, ಅಪ್ಪ ಸತ್ತು ಈಗ ಮಗ. ಮಗನ ಹೆಂಡತಿ. ಅದು ಆತ ಮದುವೆಯಾದ ಹೆಂಡತಿಯಲ್ಲ ಹಾರಿಸಿಕೊಂಡು ಬಂದದ್ದು ಅಂತೆಲ್ಲ ಹೇಳುತ್ತಾರೆ.

ಸರೋಜ ಬಂದು ಅಲ್ಲಿ ಸೇರುವಾಗ ಆ ಹೆಂಡತಿಯಲ್ಲದ ಹೆಂಡತಿ ಸಾಯುತ್ತಾ ಇದ್ದಾಳೆ ಎಂಬ ಸುದ್ದಿ ಇತ್ತು. ಅದಕ್ಕೆ ಸರಿಯಾಗಿ ದಿನನಿತ್ಯ ಮುಂಜಾವಿನ ಮೃದು ಬೆಳಗನ್ನೂ ಪರಚಿ ಛಿದ್ರಗೊಳಿಸುವ, ಮೈಮರೆತು ಮಲಗಿರುವ ರಾತ್ತಿಯ ಕೆನ್ನೆಗೆ ಫಟಾರನೆ ತಟ್ಟಿ ಎಬ್ಬಿಸುವ, ಆಚೀಚೆ ಮನೆಗಳಿವೆ, ಜನರಿದ್ದಾರೆ ಎಂಬ ಎಲ್ಲ ರಂದೂ ಮೀರಿ, ಕೂಗದಿದ್ದರೆ ಸತ್ತೇಬಿಡುತ್ತೇನೆಂಬ ತಾರಕಕ್ಕೇರುವ ಇಳಿಯುವ ಆರ್ತನಾದ. ತಾನು ಬಂದ ದಿನ ರಾತ್ರಿಯೂ ಯಾರೋ ಮರಣಾಂತಿಕವಾಗಿ ಕಿರುಚಿಕೊಂಡದ್ದು ಪ್ರಯಾಣದ ಆಯಾಸದಲ್ಲಿನ ನೀಳ ನಿದ್ದೆಯಲ್ಲಿ ಎಲ್ಲೋ ಆಳವನ್ನು ಕಲಕಿದಂತಾದ್ದು – ನೆನಪಿಸಿಕೊಳ್ಳುವಳು ಸರೋಜ. ಹೆಂಡತಿಗೆ ಏನು ಖಾಯಿಲೆಯೆಂದು ಗೊತ್ತಿಲ್ಲವಾದರೂ ಅದೊಂದು ಗುಣಕಾಣದ ಖಾಯಿಲೆ ಎಂದೂ ಸಾಯುವುದಿದ್ದರೂ ಬೇಗ ಸಾಯುವುದಿಲ್ಲವೆಂದೂ ಹೇಳುತ್ತಿದ್ದರು. ನಾಲ್ಕು ದಿನ ಸುಮ್ಮನೆ ಇದ್ದರೆ ಆರು ದಿನ ಚಿರ್ರ ಚೀರುವ ಇರುಳು, ಮುಂಜಾವುಗಳು. ಮುತ್ತಿನ ಎರಕ ಬಿರುಕು ಬಿದಲಾರಂಭಿಸಿತು.

ಮೊದಮೊದಲು ಸರೋಜ ತಲ್ಲಣಗೊಂಡು ಎದ್ದು ಬಾಗಿಲಿಗೆ ಓಡಿಬರುತ್ತಿದ್ದಳು. ತೆರೆದು ಏನಾಯಿತು ನೋಡುತ್ತಿದ್ದಳು. ಅಲ್ಲಿಯೋ ಬಾಗಿಲು ಹಾಕಿಕೊಂಡೇ ಇರುತ್ತಿತ್ತು. ಬಾಗಿಲು ತಟ್ಟಿ ಕೇಳುವ ಅಂದರೆ ಸಲಿಗೆ ಪರಿಚಯ ಎರಡೂ ಇಲ್ಲದ ಹೊಸ ದಿನಗಳು. ಉಳಿದ ಮನೆಗಳವರು ಮೆಲ್ಲ ತಮ್ಮ ಕಿಟಕಿ ತೆರೆದು ಹಣುಕುತ್ತ, ಕ್ಷಣ ಆಲೈಸಿ ಮತ್ತೆ ಮುಚ್ಚಿ ತಮ್ಮ ಪ್ರಪಂಚದಿಂದ ಆ ಮನೆಯನ್ನು ಕಡಿದುಕೊಳ್ಳುತ್ತಿದ್ದುದನ್ನು ಕಂಡು ಬೆಚ್ಚಿಬಿದ್ದಳು. ಒಂದೇ ಒಂದು ಮನೆ, ಆಧುನಿಕದ ಎಲ್ಲೋ ಕಣ್ಣುಕಾಣದ ದೂರತುದಿಗೆ ದೌಡಾಯಿಸಿ ತಲುಪಲು ಹೊರಟ ಧಾವಂತದಂತಿರುವ ಉಳಿದೆಲ್ಲ ಮನೆಗಳನ್ನು ಅಗೋಚರವಾಗಿ ಮರಗಟ್ಟಿಸಿದ್ದು ಕಂಡು ದಿಗಿಲುಗೊಂಡಳು. ಪಕ್ಕದ ಮನೆಯವಳೊಡನೆ ಕೇಳಿದರೆ “ಅದು ಬಿಡಿ, ಹೇಳಿ ಪ್ರಯೋಜನವಿಲ್ಲ” ಅಂತ ಕೈಕೊಡವಿದಳು ಹೊರತು ಮುಂದೆ ಒಂದು ಶಬ್ದ ಬೇಕೆಂದರೂ ಇಲ್ಲ. ಯಾರೊಬ್ಬರಲ್ಲೂ.

ಒಂದು ದಿನ ಮೇಲುಸಾಲಿನ ಮನೆಯ ಕಾವೇರಿಗೆ ರಾತ್ರಿಯಿಂದ ಜ್ವರ ಎನ್ನುತ್ತ ಕಷಾಯಕ್ಕೆ ಮಜ್ಜಿಗೆಹುಲ್ಲು ಬೇಕೆಂದು ಕೇಳಿಕೊಂಡು ಬಂದ ಪಂಡಿತಮ್ಮ ಹುಲ್ಲನ್ನು ಕತ್ತರಿಸಿ ಮಡಚಿ ಅದರ ಎಳೆಗಳಿಂದಲೇ ಬಿಗಿದು ಗಂಟು ಹಾಕುತ್ತ ಆ ಮನೆಯ ಕಡೆ ಹುಬ್ಬಿನಲ್ಲೇ ಸನ್ನೆ ತೋರಿಸಿ “ಹಾಸಿಗೆಗಂಟಿ ಹೋಗಿದ್ದಾಳೆ ಹುಡುಗಿ. ಇದ್ದ ತ್ರಾಣ ಎಲ್ಲ ಕೂಗಲಿಕ್ಕೇ ಆಯಿತಲ್ಲ. ಅದಕ್ಕೆ ಕಾಯಿಲೆ ಮತ್ತೇನಲ್ಲಪ್ಪ…. ಅಂವ ಶಬ್ದ ಮಾಡದೆ ಹೊಡೆಯುತ್ತಾನೆ. ಅವಳು ಪ್ರಪಂಚಕ್ಕೆಲ್ಲ ಕೇಳುವಂತೆ ಕೂಗುತ್ತಾಳೆ…. ಹಾಂ. ಪ್ರಪಂಚಕ್ಕೇನು ಕೇಳುವುದಿಲ್ಲ ಬಿಡು. ಕೇಳಿಯಾದರೂ ಏನು?”

“ಹೋಗಿ ಒಮ್ಮೆ ನೋಡಿಕೊಂಡು ಬರಬಹುದಿತ್ತು. ಹೋಗೋಣವೆ ಪಂಡಿತಮ್ಮ?”

“ಬೇಡ ಬೇಡ. ಅದೆಲ್ಲ ನಿನಗಿನ್ನೂ ಗೊತ್ತಿಲ್ಲ. ಸತ್ತುಕೊಳ್ಳಲಿ. ಒಟ್ಟಾರೆ ನಾವು ಗಂಡ ಹೆಂಡತಿ ಆಚೆಬದಿಯಿದ್ದು ಸೋತೆವು. ಇವರಿಗೆ ನಿದ್ದೆಯಾದರೂ ಬರುತ್ತದೆ. ನಂಗೆ ಅದೂ ಇಲ್ಲ. ಕೇಳಬೇಕಲ್ಲ ಎಲ್ಲ, ಕಾಣದಿದ್ದರೂ. ಈಗ ಹೋಗಿ ಕಷಾಯ ಮಾಡುತ್ತೇನೆ. ಊಟಕ್ಕೂ ಇದರದ್ದೇ ಸಾರು ಮಾಡಿಕೊಡುತ್ತೇನೆ.” ಎಂದರು ಮನೆಯಲ್ಲಿ ಗಂಡ ಹೆಂಡತಿ ಮಾತ್ರವೇ ಇರುವ ಪಂಡಿತಮ್ಮ. “ಗಂಡನಿಗೆ ಪೆನ್ಶನ್ ಬರುತ್ತದೆ. ಮಕ್ಕಳೂ ದುಡ್ಡು ಕಳಿಸುತ್ತಾರೆ. ಅಚ್ಚುಕಟ್ಟಾಗಿ ಯಾವ ತಾಪತ್ರಯವೂ ಇಲ್ಲದೆ ಇರುವ ಅಂದರೆ….” ಗೊಣಗುತ್ತ ಪಿಸುವಾಗಿ “ನೋಡಿದ್ದೀಯ ಅವನನ್ನ? ಈಶ್ವರನ ಗಣದಲ್ಲೊಂದು ತಪ್ಪಿಸಿಕೊಂಡು ಬಂದ ಹಾಗಿದೆ.” ಆಗದು ಅಂತ ಕಂಡರೆ ಇಷ್ಟೆ. ಮನುಷ್ಯ ಭೂತಪ್ರೇತವಾಗಿ ಕಾಣುವುದೇ – ಅಂತಂದುಕೊಂಡರೆ ಒಂದು ಬೆಳಿಗ್ಗೆ ಬಾಗಿಲು ಬೆಲ್ಲಾಯಿತು. ಸರೋಜ ಹೋಗಿ ಬಾಗಿಲು ತೆರೆದವಳು ಒಮ್ಮೆ ಹಿಮ್ಮೆಟ್ಟಿ ನಿಂತಳು. ಸುಳ್ಳಲ್ಲ, ಇದು ಸಾಕ್ಷಾತ್ ಗಣವೇ! ಗುರುತು ಹೇಳುವುದೇ ಬೇಡ. ಏನೋ ಸ್ಕೀಮಿಗೆ ದುಡ್ಡು ಕೇಳಲು ಬಂದದ್ದು ಎಂದ. ತಾವು ಅಂಥದಕ್ಕೆಲ್ಲ ದುಡ್ಡು ಕಟ್ಟುವುದಿಲ್ಲ, ಕ್ಷಮಿಸಿ ಎಂದು ಹೋಗಬಹುದೆಂಬಂತೆ ಬಾಗಿಲು ವಾರೆ ಮಾಡಿದಳು. ಕ್ಷಣ ನಿಂತು, ಬಂದ ದಿನದಿಂದ ಹಗಲು ರಾತ್ರಿ ಆ ನಮೂನೆಯ ಬೊಬ್ಬೆಯ ಹಿಂದಿರುವ ಮನುಷ್ಯನನ್ನು ತಬ್ಬಿಬ್ಬುಗೊಳಿಸುವ ಒಂದು ಮಾತನ್ನಾದರೂ, ಕಡೇಪಕ್ಷ ಆ ಹೆಂಗಸಿನ ಬಗ್ಗೆ ಕಾಳಜಿ ತೋರುವ ಮಾತನ್ನಾದರೂ ಆಡಬೇಕೆಂದಿದ್ದವಳು ಟಪಾರನೆ ಬಾಗಿಲು ಹಾಕಿಬಿಟ್ಟಳು. ಖಂಡಿತ ಆಕೆ, ಬಂದವರು ಇನ್ನೂ ಮೆಟ್ಟಿಲಲ್ಲಿ ನಿಂತಿರುವಾಲೇ ತಾನು ಹೇಗೆ ಬಾಗಿಲು ಹಾಕಬಲ್ಲೆನೆಂದು ಊಹಿಸಿಕೊಂಡಿರಲೇ ಇಲ್ಲ. ಒಮ್ಮೊಮ್ಮೆ ನಮ್ಮ ವರ್ತನೆ ನಾವೆಂದರೆ ಏನೆಂದು ನಾವೇ ತಿಳಕೊಂಡಿರುತ್ತೇವೋ ಅದರ ವ್ಯತಿರಿಕ್ತ ವ್ಯಕ್ತವಾಗುತ್ತ ಸೋಜಿಗವಾಗಿ ಬಿಡುತ್ತದೆಯಲ್ಲ – ಅಚ್ಚರಿಪಟ್ಟಳು.

“ಎಲ್ಲಿ ಹಡಬೆಟ್ಟಿ. ಬರ್‍ಕತ್ತು ಬರಲಿಕ್ಕಿಲ್ಲ.” – ಅಂತ ಆತ ಗಟ್ಟಿಯಾಗಿ ಹೇಳುತ್ತ ಹೋದದ್ದು ಕಿವಿಯ ಮೇಲೆ ಬೀಳುತ್ತಿದ್ದಂತೆ ಧುಮುಧಮು ಒಳಗೆಬಂದಳು. ಇದುವರೆಗೆ ಇಂತಹ ಬೈಗಳನ್ನೇ ಕೇಳದವಳು, ಅವಮಾನದಿಂದ ಕೆನ್ನೆಯೆಲ್ಲ ಬಿಸಿಯೇರಿ ಭಯದಿಂದಲೂ ಕಂಪಿಸುತ್ತಿದ್ದಳು.

“ಏನು ಏನು?” – ಎಂದ ಪತಿ.
“ಏನಿಲ್ಲ, ಅದೇ, …. ಆ ಜನ…. ನಾ ಯಾಕೆ ಹೆದರಿದೆ ಎಲ್ಲ ಬಿಟ್ಟು ಅವನಿಗೆ?…. ಒಂದಿನ ಅವನ ಹೆಂಡತಿಯನ್ನ ನೋಡಿಕೊಂಡೇ ಬರುತ್ತೇನೆ…. ಪಾಪ ಮಲಗಿದ್ದಲ್ಲೇ ಇದ್ದಾಳಂತೆ. ಬಾಯಿಗೆ ಬೇಕಾದ್ದು ಏನಾದರೂ ಮಾಡಿ ಕೊಟ್ಟು ಬರುತ್ತೇನೆ” – ಎಂದಳು ಆವೇಶ ಏರಿದಂತೆ.

“ಹೊಲಸಿಗೆ ಕಲ್ಲು ಹೊಡೆಯುತ್ತಾರಾ? ಅಂವ ಮರ್ಯಾದೆ ತೆಗೆದು ಮಾತಾಡುವವ. ಆ ಹೆದರಿಕೆಗೇ ಎಲ್ಲರೂ ಸುಮ್ಮನಿರುವುದು ಹೊರತು ಹೃದಯ ಇಲ್ಲದೆ ಏನಲ್ಲ. ಅವನ ಒಂದು ಕೆಟ್ಟ ಮಾತೇ ಜೀರ್ಣವಾಗಿಲ್ಲ ನಿನಗೆ, ಹೋಗುತ್ತಾಳಂತೆ! ಎಲ್ಲಿಯಾದರೂ ಬಾಯಿಗೆ ಬಂದ ಹಾಗೆ ಹೇಳಲಿ., ಎಂದ ಪತಿ. ಆಕೆ ಒಳಮುಖವಾಗಿ ಚಿಂತೆ ನಿಂತಳು.

ಹೇಗೆ ಹೊಲಸಿಗೆ ಕಲ್ಲು ಹೊಡೆಯಬಾರದೆಂದೇ ಕಲಿಯುತ್ತಾ ಬೆಳೆಯುತ್ತೇವೆ. ಹೊಲಸನ್ನು ತೊಳೆಯಲು ಹೊರಡುವ ಧೈರ್ಯ ಹೇಳಿಕೊಡದ ವಿದ್ಯೆ. ಎಂತಲೇ ಹೊಲಸು ತೊಳೆಯುವ ವರ್ಗ ಬೇರೆಯಾಯಿತು? ಅಂದ ಹಾಗೆ, ಗಾಂಧೀಜಿ ಹೊಲಸನ್ನೂ ತೊಳೆದರಂತೆ….

“ಈಗ ಈ ಬೀದಿಯಲ್ಲಿ ಗಾಂಧೀಜಿ ವಾಸವಾಗಿದ್ದಾರೆ ಎಂದುಕೊಳ್ಳೋಣ. ಏನು ಮಾಡುತ್ತಿದ್ದರು?”
“ಸಂಜೆ ನೋಡೋಣ…. ಈಗ ಪುರಸೊತ್ತಿಲ್ಲ.”

ಅವತ್ತು ಮಕ್ಕಳನ್ನು ಶಾಲೆಗೆ ಹೊರಡಿಸುವಾಗಲೂ ಶ್ರದ್ಧೆ ಸಾಲದಾಯಿತು. ಕೈ‌ಓಡಾಟ ನಿಧಾನವಾಯಿತು. “ತಲೆ ಎಲ್ಲೋ ಇದ್ದರೆ ಮತ್ತೇನಾಗುತ್ತದೆ?” ಪತಿಯ ಸಿಟ್ಟಿನ ಮಾತೂ ಕಿವಿಯ ಮೇಲೆ ಬೀಳದಾಯಿತು. ಮಕ್ಕಳು ಆಟೋ ಬಂತು ಆಟೋ ಬಂತು ಎಂದು ಹೊತ್ತಾಗಿದ್ದಕ್ಕೆ ಕೈಕಾಲು ಬಡಿದು ಅತ್ತುಕೊಂಡೇ ಶಾಲೆಗೆ ಹೋದವು.

“ಹೋಗಬೇಡ ಅಂದೆ ಅಲ್ಲಿಗೆ. ಇನ್ನು ನಾನು ಅತ್ತ ಆಫೀಸಿಗೆ ಹೋದ ಮೇಲೆ ಮೆಲ್ಲ ಮನಸ್ಸು ಮಾಡುವುದಲ್ಲ.” – ಎಂದು ಪತಿ ಆಫೀಸಿಗೆ ಹೊರಟುಹೋದ.

ಆತ ಹಾಗೆ ಹೇಳಿದರೇನಾಯಿತು? ಹೋಗಿ ಬಂದೇ ಬಿಡುವುದು ಎಂದುಕೊಂಡಳು. ಹೆಜ್ಜೆ ಮುಂದಿಡಲು ಧೈರ್ಯ ಸಾಕಾಗಲಿಲ್ಲ. ನೀತಿಪಾಠ ಹೇಳುವ ಮರಿಯಾಗೊರೆಟ್ಟಿ ಜಗತ್ತಿನಲ್ಲೆಲ್ಲ ಎಲ್ಲ ಮಕ್ಕಳಿಗೂ ಹಿರಿಯರು ಎದುರಿಡುವ ಒಂದು ಪುಟ್ಟ ಲೆಕ್ಕ ಹೇಳಿದ್ದರು. “ಒಂದು ಬುಟ್ಟಿಯಲ್ಲಿ ನೂರು ಮಾವಿನ ಹಣ್ಣುಗಳಿವೆ. ಅದರಲ್ಲಿ ಒಂದು ಕೊಳೆತಿತು. ಒಂದು ವಾರದ ಮೇಲೆ ಉಳಿಯುವುದೆಷ್ಟು?” ಉಳಿಯುವುದೆಷ್ಟು?

ಕೊಳೆಯುವುದು ಎಂದರೆ ಏನು ಮೇಡಂ? ಇದೇನಾ? ಧೈರ್ಯ ಕಳೆಯುವುದಾ? ಸಂಜೆ ಮಕ್ಕಳೊಡನೆ ಕೇಳಬೇಕು ನಿಮಗೂ ಈ ಲೆಕ್ಕ ಕೇಳಿದ್ದಾರಾ ಅಂತ. ಕೇಳಿದರೆ “ಯಾಕೆ ಮೇಡಂ, ಒಂದೇ ಕೊಳೆತ ಹಣ್ಣಿನೆದುರು ತೊಂಭತ್ತೊಂಬತ್ತೂ ಹೆದರಿ ಕೊಳೆಯಬೇಕು? ಅದರ ವಿರುದ್ಧ ಯಾಕಾಗಬಾರದು? – ಅಂತ ಕೇಳಿ” ಎಂದು ಹುರಿದುಂಬಿಸಿ ಪ್ರಶ್ನೆ ಎಬ್ಬಿಸಿಕೊಡಬೇಕು.
*
*
*
ಎಂದಿಗಿಂತಲೂ ಭಯಂಕರ ಬೊಬ್ಬೆಯ ರಾತ್ರಿಯಿಡೀ ಕಳೆದು ಚುಮುಚುಮು ಬೆಳಕಷ್ಟೇ. ಪಂಡಿತಮ್ಮ ಬಂದರು. ಏನು? ಅಂದರೆ “ನೀರೊಟ್ಟೆ ಬೇರಿದ್ದರೆ ಬೇಕಿತ್ತು. ರಾತ್ರಿಯಿಡೀ ಚಳ್ಳಾಂಪುಳ್ಳಿ. ಪಾಯಿಖಾನೆ-ಮನೆ ತಿರುಗಿದ್ದೇ ತಿರುಗಿದ್ದು. ಕಾಲು ಹೇಗೆ ನಡುಗುತ್ತಿದೆ ನೋಡು!” ಎನ್ನುತ್ತ ಉಸ್ಸೆಂದು ಹಿಂಬದಿ ಜಗಲಿಯಲ್ಲಿ ಕುಳಿತರು. ಬೇಧಿ ಎನ್ನಬಾರದೆ….ಸ್ಸಿ. ಎಂದುಕೊಳ್ಳುತ್ತ ಎಲ್ಲಿಟ್ಟಿದೆ ಎಂದೇ ಮರೆತ ಬೇರನ್ನು ಕರಡಿಗೆಯ ಬಾಯಿ ತೆರೆದು ತೆರೆದು ಅಂತೂ ಹುಡುಕಿಕೊಟ್ಟಳು ಸರೋಜ. “ಅಬ್ಬ. ಜೀವ ಬಂತು. ಹೊರಕಡೆಗೆ ಇದು ರಾಮಬಾಣವಲ್ಲವೆ!” ಎನ್ನುತ್ತ “ಆಯಿತಲ್ಲ ಕತೆ, ಇನ್ನು ಆ ಹೆಂಗಸಿನ ಚಟ್ಟ ಎತ್ತಿದರೆ ಸೈ.” ಎಂದರು ಪಂಡಿತಮ್ಮ.

“ಯಾಕೆ? ಅಂದ ಹಾಗೆ ನಿನ್ನೆ ರಾತ್ರಿ ಏನು ಬೊಬ್ಬೆಯದು ಎಂದೂ ಇಲ್ಲದಷ್ಟು! ನನಗೆ ನಿದ್ದೆಯೇ ಇಲ್ಲ.”

“ಹಾಗಾದರೆ ನನಗೆ? ಅಲ್ಲೇ ಆಚೆಗಿರುವ ನಾವು ಹೇಗಿರಬೇಕು? ಗಂಡಸರು ಬಿಡು ಹೇಗಿದ್ದರೂ ನಿದ್ದೆ ಮಾಡುತ್ತವೆ. ಕೆಟ್ಟ ಜಾತಿ…. ಅದರಲ್ಲೂ ನನಗೆ ರಾತ್ರಿಯಿಡೀ ಪಾಯಿಖಾನೆ – ಮನೆ ತಿರುಗಾಟ. ಸಾಕಾಗಿಹೋಯಿತಪ್ಪ.” ಎಂದು ಬಾಯಲ್ಲಿ ಉಸಿರು ತೆಗೆದುಕೊಂಡರು. “ಯಾರು ಹೆತ್ತ ಮಗುವೋ ಅದು ಪಾಪ. ಸುರುಟಿಯೇ ಹೋಯಿತು. ಇನ್ನಾದರೂ ಸತ್ತರೆ ಸಾಕಪ್ಪ.” – ರಾಗವೆಳೆಯುತ್ತ ನಿತ್ರಾಣದ ಕಾಲೆಳೆದುಕೊಂಡು ಹೊರಟುಹೋದರು.

ಅವತ್ತು ರಾತ್ರಿಯೇ ಹೆಂಡತಿ ತೀರಿಕೊಂಡಳು. ಗೊತ್ತಾಗಿದ್ದು ಆ ಮನೆಯ ಅಂಗಳದಲ್ಲಿ ಲೈಟು ಕಂಡಾಗಲೇ.

ಎಂದೂ ಅಂಗಳಕ್ಕೆ ಲೈಟು ಹಾಕದವನಿಗೆ ಇವತ್ತೇನು ದೀಪಾವಳಿ ಎಂದು ನೋಡಿದರೆ ಅಂಗಳದಲ್ಲಿ ಹೆಣ ಮಲಗಿತ್ತು. ಏನೊ ಮಣಮಣ ಮಂತ್ರ ಕೇಳುತ್ತಿತ್ತು. ಸುತ್ತ ಎಂಟು ಹತ್ತು ಮಂದಿ ಮೌನವಾಗಿ ನಿಂತಿದ್ದರು. “ಅಯ್ಯೊ. ಸತ್ತೇ ಹೋದಳೆ!” ಎಂದು ಕಂಠ ಒತ್ತಿಟ್ಟಂತೆ ಉದ್ಗರಿಸಿದಳು ಸರೋಜ. ಈಗಾದರೂ ಹೋಗಿ ನೋಡಿ ಬರೋಣ ಎಂದು ಹೆಜ್ಜೆ ಹೊರಗಿಟ್ಟ ಇಬ್ಬರೂ “ಬೇಡ ಇಲ್ಲೇ ಕಾಣುತ್ತದಲ್ಲ” ಅಂತ ನಿಂತರು. ಅಲ್ಲಿಯವರೆಗೆ ಹೋಗಿ ನೋಡುವುದು ಅತಿ ಕುತೂಹಲವಾದೀತು ಎಂದೋ, ಆತ ಯಾಕೆ ಬಂದಿರಿ ಎಂದು ಘರ್ಜನೆ ಹಾಕಿಯಾನು ಎಂದೋ ಹಿಂದೆಯೇ ಬಂದೇ ಬರುವ ತಮ್ಮ ಎಳೆಯ ಮಕ್ಕಳು ಹೆಣ ನೋಡಿ ಹೆದರಿಯಾವು ಎಂದೋ ವಿಸ್ತರಣೆಯ ಯಾರೊಬ್ಬರೂ ಅಲ್ಲಿ ಇಲ್ಲದಿರುವುದು ಗಮನಿಸಿಯೊ. ಕಾರಣವೆಂಬುದು ಯಾವತ್ತೂ ಒಂಟಿಯಾಗಿರುವುದು ಅಪರೂಪ. ಅದು ನೆಲೆಸುವುದೇ ಗುಂಪುಗುಂಪಲ್ಲಿ. ಎಲ್ಲರೂ ಇವರಂತೆಯೇ ಅವರವರ ಮನೆಯ ಮುಂದೆ ನೋಡುತ್ತ ನಿಂತಿದ್ದರು. ಗಂಡ ಪುರೋಹಿತ ಹೇಳಿದ ಹಾಗೆ ತಟಪಟ ಮಾಡುವುದು ಕಾಣಿಸುತ್ತಿತ್ತು. ‘ಮುತ್ತೈದೆತನದ ಭಾಗ್ಯ’, ಒಂದು ಹೂವಿನ ಹಾರವನ್ನು ನಿಂತಲ್ಲೇ ಹೆಣದ ಮೇಲೆ ಎಸೆದ; ಕುಂಕುಮ ಅರಸಿನ ಚೆಲ್ಲಿದ. ನಾರಾಯಣ ನಾರಾಯಣ ಎನ್ನುತ್ತ ಹೆಣ ಎತ್ತಿದರು. ಕ್ಷಣದಲ್ಲಿ ಎಲ್ಲ ಖಾಲಿಯಾಯಿತು.

“ದುಃಖವೇ ಬರುತ್ತದಲ್ಲವ?” ಎಂದಳು ಪಕ್ಕದ ಮನೆ ಹೆಂಗಸು. ಸ್ವಲ್ಪ ತಡೆದು “ಹೋಯ್, ಅಲ್ಲಿ, ಅಲ್ಲಿ ನೋಡಿ, ಪಂಡಿತಮ್ಮ ನೋಡಿ. ಪಾಯಿಖಾನೆ-ಮನೆ ತಿರುಗುತ್ತಿದೆ. ನೋಡಿ ನೋಡಿ.” – ಎಂದು ಕುಟುಕುಟು ನಕ್ಕಳು.
*
*
*
ಮರುದಿನ – ನೋಡಿಬಿಡಿಸಿದ ಚಿತ್ರದಂತೆ ಗುಡ್ಡದೆಡೆಯಿಂದ ಮೂಡುವ ಸೂರ್ಯ ಮೂಡಿದ. ಬೆಳಗಾಗುವುದು ಆಯಿತು. ಬಾಯಿಪಾಠದಂತೆ ವಿಸ್ತರಣೆಯ ಚಟುವಟಿಕೆ ಸುರುವಾಯಿತು. ನಿಲ್ಲಬಾರದೆಂಬ ಶಾಪ ಹೊತ್ತವರಂತೆ ಬಸ್ಸು ಆಟೋ ಸ್ಕೂಟರ್ ಟ್ಯಾಕ್ಸಿ ಕಾರುಗಳು ಓಡಲಾರಂಭಿಸಿದವು.

ಕಡಗೂ ಎಲ್ಲಿಗೆ? ಯಾತಕ್ಕೆ?

ಸರೋಜ ಕಿಟಕಿ ತೆರೆದು ಖಿನ್ನಳಾಗಿ ನಿಂತಿದ್ದಂತೆ ದೂರದಲ್ಲಿ ಪಂಡಿತಮ್ಮ ಬೆನ್ನ ಹಿಂದೆ ಕೈಕಟ್ಟಿಕೊಂಡು ನಿಧಾನ ಬರುವುದು ಕಾಣಿಸಿತು.
*****

ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.