ಹುಲಿಯ ಹೆಂಗರುಳು

….But most for those
whom accident made great
As a radiant chance encounter
of cloud and sunlight grows
Immortal on the heart:
whose gift was the sudden bounty
of a passing moment, enriches
The fulfilled eye for ever.
Their spirits float serence
above times roughest reaches,
But their seed is in us and over
our lives they are ever green”
-C. Day Lewis

“ಏನು ಮಳೆ ಅಂತೀಯ? ಹೋದ ತಿಂಗಳು ಉಸಿರು ಕಟ್ಟಿ ಮೂರು ದಿನ ಸುರೀತು. ನೆನೆದರೇ ಮೈ ಜುಮ್ಮನ್ನತ್ತೆ.”
“ಎಂಜಲೆಲೆ ಹೆಕ್ಕಕ್ಕೂ ಒಲ್ಲದೆ ಬೀದಿ ನಾಯಿ ಬಿದ್ಕೊಂಡಿರೋವು- ಚಾವಡೀಲೆ- ಒಂದು ಥರಾ ಗೋಗರೀತ”.
“ನಮ್ಮನೇಲಂತೂ ಕಣ್ಣೀ ಬಿಚ್ಚಿ ಎಮ್ಮೆಗಳನ್ನೂ ಹೊರ್ಗೆ ಹೊಡೀಲಿಲ್ಲ.”
“ಮೈ ಕೈ ಎಲ್ಲಾ ಒಂದು ಥರಾ ಜಡವಾಗಿ ಬಿಟ್ಟಿರೋದು ಕಣೋ. ಮನೆ, ನೆಲ, ಗೋಡೆ ಎಲ್ಲಾ ಥಂಡಿ ಹತ್ತಿ ಜಿನುಗ್ತಿರೋವು. ಹೊರ್ಗೆ ಹೋಗೋದಿರ್ಲಿ, ಒಳಗೆ ಕೂತಿರೋದೂ ಅಸಾಧ್ಯ ಆಗಿತ್ತು!”
“ಮೈಸೂರ್ಕಡೆ ಹೀಗೆ ಮಲೆನಾಡಿನ ಮಳೆ ಬಿದ್ದಿದ್ದು ಎಂದಾದ್ರೂ ಉಂಟೇನಯ್ಯ?”
“ಸುಮ್ನೆ ತಲೆಗೊಂದು ಮಾತಾಡ್ತಾ ಹೊತ್ತು ಕಳೀಬೇಡ್ರೋ- ಮೈಸೂರಿಂದ ಇಲ್ಲೀವರ್ಗೆ ಬಂದಿದಾನೆ ಪಾಪ. ಅವತ್ತು ನಡ್ದ ಆ ಕಥೆ ಹೇಳಿ ಅವನಿಗೆ-”
“ನಂಗೆ ತುಂಬ ವಿಚಿತ್ರ ಅನಿಸಿದ್ದು ಅಂದ್ರೆ ಆ ಶೆಣೈ ಕಣಯ್ಯ- `ದೇವ್ರ ತಲೆಗೆ ಹೂ ತಪ್ಪಿದ್ರೂ…’ ಏನೋ ಗಾದೆ ಹೇಳ್ತಾರಲ್ಲ ಹಾಗೆ ಅಂಗ್ಡೀ ಬಾಗ್ಲು ಅರ್ಧ ತೆಕ್ಕೊಂಡು ಆಕಳಿಸ್ತ ಮೈ ಮುರೀತ ಕೂತ್ಕೊಂಡಿರೋನು! ಅಂಥ ಮಳೇಲೂ”
“ಅದಿರ್ಲಯ್ಯ ಅವತ್ತೇನೋ ಹೊಳೆ ಹತ್ರ ನಡೀತಂತಲ್ಲ. ಅದನ್ನ ಹೇಳು ಮಾರಾಯ…”

*
*
*

“ನನಗೀಗ ವರ್ಷ ತೊಂಬತ್ತು… ಈ ಮುದಿಕೊರಡು ಜೀವದಲ್ಲೇ ಕಾಣಲಿಲ್ಲ ಅಂಥ ಮಳೇನ!… ನಾನು ಹುಟ್ಟೋಕೆ ಹತ್ತು ವರ್ಷ ಮುಂಚೆ ಅಕ್ಷಯ ಸಂವತ್ಸರದಲ್ಲಿ ಜಡಿದ ಮಳೆ ಹೀಗೆ ಸುರಿದಿತ್ತೋ ಇಲ್ಲವೋ ದೇವರೇ ಬಲ್ಲ… ಹೀಗೇನೇ ಈ ಚಾವಡೀ ಮೇಲೆ ಕೂತು ಅಪ್ಪಯ್ಯ ಅದನ್ನ ನೆನಸ್ತಿದ್ರು… ಬಹಳಾ ಕಾಲ ಆಗಿ ಹೋಯ್ತು… ಏನೇನು ವಿಚಿತ್ರವಿದೆಯೋ ಈ ಪ್ರಪಂಚದಲ್ಲಿ!…”
“ಅಲ್ಲಾಂದ್ರೆ… ನಮ್ಮ ಅಜ್ಜಯ್ಯ ಇದೇ ಥರ ಗೊಣಗ್ತಾ ಕೂತಿರೋರು… ಮನೇಲಿರೋ ಮಕ್ಕಳೆಲ್ಲ ಹೆದರಿ ಅಜ್ಜಯ್ಯನ ಮುದೀ ತೊಡೆಗೆ ಅಂಟಿಕೊಂಡಿರೋವು…”
“ನಮ್ಮನೇಲೂ ಅಷ್ಟೆ- ನೀವೂ ಆ ಮಳೇಲಿ ಹೊಳೇದಂಡೆಗೆ ಬಂದಿದ್ರಿ ಅಲ್ವೇನಮ್ಮ! ಅಳಿಯ ಬಂದಿದ್ದಾರೆ- ಅವರಿಗೆ ಅವತ್ತು ನಡೆದಿದ್ದು ಹೇಳ್ದೆ! ಏನಂದ್ರು ಗೊತ್ತೆ?…”

*
*
*

ಮಲೆ ಚೆಲುವಿನ ಕುಡುಮಲ್ಲಿಗೆ ಪೇಟೆಗೆ ಪೇಟೆಯೇ ಸುರಿವ ಮಳೆಯಲ್ಲಿ ವೈರಿ ಮುತ್ತಿದ ನಗರದಂತೆ ದಿಕ್ಕು ದಿಕ್ಕಿಗೆ ಜನ ಶೂನ್ಯ ರಸ್ತೆ ಚಾಚಿ, ಮಂಕು ಕವಿದ ಮನೆ ಮನೆಗಳ ಮಬ್ಬು ಮುಖಗಳೆತ್ತಿ ಮಿಸುಕಾಡದೆ ಕುಗುರುತ್ತಿತ್ತು… ಅತ್ತ ಪೇಟೆಯ ಮಗ್ಗುಲಿಗೆ ಹರಿಯುವ ತುಂಗೆಯ `ಉಧೋ’ ಎನ್ನುವ ಪ್ರವಾಹ ಕರೆ- ಇತ್ತ ಒಂದೇ ಸಮನೆ `ಜರ-ಜರೋ’… `ಜರ- ಜರೋ’ ಹುಯ್ಯುವ ಮಳೆ- ಸುತ್ತ ಮುತ್ತ ಮಬ್ಬು ಕತ್ತಲೆಯಲ್ಲಿ ಕನಸಿನ ಭಯದ ನೆನಕೆಯಷ್ಟೆ ಅಸ್ಪಷ್ಟ ರೂಪ ಹೊತ್ತು, ಕಿವಿ ಕರಗುವ ಬೊಂಬಡವನ್ನು ಪ್ರತಿ ಪ್ರತಿಧ್ವನಿಸಿ ನುಗ್ಗು ನುಗ್ಗಲಾದ ಮಲೆನಾಡಿನ ಬೆಟ್ಟಗಳು.
ಪ್ರಕೃತಿಯ ಈ ಭೈರವ ಕುಣಿತಕ್ಕೆ ಜನದ ಭಯದ ಎದೆ ಮಣಿಯಿತು.
ಬಾಹ್ಯ ಶೂನ್ಯವಾಯಿತು.
ಕೊನೆಗೆ ಮಂಪರು ಬಡಿದು ಪಿಸುಗುಟ್ಟದೆ ಮುದುರಿ ಮಿಸುಕಾಡಿತು.
ನರಳಿನರಳಿ ಸುರಿಯುತ್ತಿದ್ದ ಮಳೆ ಗಾಳಿಯೊಡನೆ ಇರಸಲಾಡಿ, ಏರಿ ತಗ್ಗಿ, ತಗ್ಗಿ ಏರಿ, ತೇಂಕಿ ತೇಂಕಿ ಜಡಿಯಿತು- (`ಮಾರೀ ಗುಡಿ ಹತ್ರ ಹೊಲೇರ ಪಾಳ್ಯ ಮುರ್ಕೊಂಡು ಬಿತ್ತಂತೆ. ಸದ್ಯ ಪುಣ್ಯಕ್ಕೆ ಯಾರೂ ಸಾಯ್ಲಿಲ್ಲ’!) ಮಬ್ಬು ಕತ್ತಲು ಬಳೆದ ಭೀಕರ ಶೂನ್ಯದ ಗಗನ ಭೂಮಿ ಅಂತರದ ಬೋಗುಣಿಯನ್ನು ಏಕನಾದದಲ್ಲಿ ನರಳಿ ಮಳೆ `ಜರ ಜರೋ-ಜರಜರೋ’ ತುಂಬಿತು…
ಈ ಅವಾಂತರ ನೋಡಲಾರದ ಸೂರ್ಯ (`ಮುಖ ಹೇಡಿ ಕಣಯ್ಯ!’) ಮೂರು ದಿನವೂ ತಲೆ ಮರೆಸಿ ತಿರುಗಿದ… ಆದರೆ ಗೋಗರೆವ ಮಳೆಯ ಅಟ್ಟಹಾಸ ಮಾತ್ರ ಬೂದು ಕತ್ತಲೆಯನ್ನು ಮಿಂಚಿ, ಪರಚಿ, ಗುಡುಗಿ, ಸಿಡುಕಿ, ಸಿಡಿಲೆರಗಿ ಕುಣಿದು ಬೆಳೆಯಿತು…
(“ಇಂಥಾ ತರಾ ಅಂತ ಹೇಳೋಕಾಗಲ್ಲಮ್ಮ!”) ಮೇಲಿನಿಂದ ಹೆಮ್ಮೋಡಗಳ ಮಳೆ ಕಾರುವ ಅಭ್ಯಂಗ- ಕೆಳಗೆ ಮೊಣಕಾಲು ಮೀರಿ ಹರಿಯುವ ಕೆನ್ನೀರು- ಈ ನೀರಿನ ಲೋಕದಲ್ಲಿ ಮೀನಿನಂತೆ ಒಂದು ಜೀವ ಹೊಲಸು ಮಬ್ಬು ಬೆಳಕು ಈಜುತ್ತ (“ಕರೀಕಂಬ್ಳಿ ಕೊಪ್ಪೆ ಹಾಕ್ಕೊಂಡು… ರಾವು ಬಡ್ವಂನಂಗೆ ಒಂದು ಥರಾ ಕೂಗ್ತ…”) ಮನೆಮನೆಯ ಎದುರಿಗೂ ನಿಂತು, ಏನೋ ಮೊರೆದು ಕಿರುಚಿ, ಭಯ ವಿಹ್ವಲವಾಗಿ ಸಂಚರಿಸಿತು…
ಒಮ್ಮಿಂದೊಮ್ಮೆಗೆ ಕರಿಯ ಕಂಬಳಿ ಹೊದೆದ ಅನೇಕ ಅಸ್ಪಷ್ಟ ರೂಪಗಳು ಗುಂಪು ಗುಂಪಾಗಿ ಓಡಾಡತೊಡಗಿದವು…
ಮಳೆ ಕತ್ತಲು ಕಾರಿತು. ಕತ್ತಲು ಮಳೆ ಕಾರಿತು. ಮಬ್ಬು ಉಸಿರು ಕಟ್ಟಿ ಜಗ್ಗಿತು. ಆದರೂ ಜಡತೆಯ ಹೆಪ್ಪೊಡೆದು, ಎದೆ ಬೀಗಿ, ಮನೆ ತೊರೆಯಿತು ಜನ.
“ಅಳ್ತಾ ಇರೋ ಮಗೂನ್ನೂ ಕೂಡಿಹಾಕಿ ಹೋದ್ನಮ್ಮ ನಾನು!”
“ನಮ್ಮಜ್ಜಿ ಏನಾದ್ರೂ ಆಗ್ಲೀಂತ ಕೋಲೂರ್ಕೊಂಡು ಹೊರ್ಟೇಬಿಟ್ರು!”
“ಏನಾದರೂ ಹೇಳ್ದ್ರ್ ಕೇಳವ್ನೆ ಅವ್ನು? ನಮ್ಮ ದೊಡ್ಡಮಗ- ಎದೆ ಸೆಟೆದುಕೊಂಡು ಓಡ್ಯೇ ಬಿಟ್ಟ- ಅವತ್ತು ನಡ್ದ ವಿಷ್ಯಾನೇ ಹಂಗಿತ್ತು ಅನ್ನಿ!”
ಕಿವಿ ಕಿವಿಯ ತುಂಬಿದ ಮಳೆಯ ರವದಲ್ಲಿ, ಗೋಳಿನ ಸುದ್ದಿಯ ಬಿಸಿ ಎಳೆಯೊಂದು ಮಿಂಚಾಡಿ, ಲಕ್ಷ ಕಣ್ಣು ಅರಳಿತು; ತುಟಿ ಅದುರಿತು. ಜೀವ ಶೂನ್ಯ ಬೇಸರದ ಕುಡುಮಲ್ಲಿಗೆಗೆ ಒಮ್ಮಿಂದೊಮ್ಮೆಗೆ ಹುಮ್ಮಸ್ಸು ಕೆರಳಿತು. ಬೀದಿ ಬೀದಿಗಳಲ್ಲಿ ಗಿಜಿಬಿಜಿಗುಟ್ಟಿ ಜೀವನಾಡಿ ಮಿಡಿಯಿತು…
ಆದರೂ ಧಾರೆ ಧಾರೆ ಓತಪ್ರೋತವಾಗಿ ಸುರಿದು ಹಿಗ್ಗಿ, ಓಣಿ ಓಣಿ ನುಗ್ಗಿ `ಧಿಮಿ ಧಿಮಿ, ನೊರೆಗೆದರಿ ಕುಣಿಯಿತು ಮಳೆ…

*
*
*

ಕೊಡೆ ತಡೆಯದ ಮಳೆಯಲ್ಲಿ ಕಂಬಳಿಯ ಕೊಪ್ಪೆಗಳ ಅಸ್ಪಷ್ಟ ಕಪ್ಪು ರೂಪರಾಶಿ; ಎದಿರು ಮಬ್ಬು ಕತ್ತಲೆಯಲ್ಲಿ ಕೆನ್ನೀರಿನ ಪ್ರವಾಹ ರುದ್ರೆ ತುಂಗೆ…
ಸಾವಿರ ಕಣ್ಣರಳಿ, ಮಬ್ಬು ಕತ್ತಲೆ ಮುಕ್ಕಳಿಸಿ, ಪ್ರವಾಹ ಕೆದರಿ ಈಜಿದವು…
ಕೋಟಿ ವ್ಯಾಘ್ರದಬ್ಬರದ ತುಂಗೆಯ ಕುದಿಯುವ ಕೆಂಪು ನೀರು; ಅದರ ನಡುವೆ ತಲೆ ಮಾತ್ರ ಮಿಕ್ಕ “ಸಿಡಿಲು ಬಂಡೆಯ” ಅಸ್ಪಷ್ಟ ಕಪ್ಪು ಹೊಳಪು. ಅದರ ಮೇಲೊಂದು ಅಲುಗಾಡುವ ಮಿಸುಕಾಡುವ ವಸ್ತು…
ಬಿದ್ದ ಮರಗಳನ್ನೇರಿ, ಮನೆಗಳ ಸೂರು ಹತ್ತಿ, ಹಸಿ ಕತ್ತಲನ್ನು ಪರಚಿ ಒದ್ದಾಡಿ ನೋಡಿತು ಜನ ಸಾಗರದ ದೃಷ್ಟಿ-
ಬಂಡೆಯ ನೆತ್ತಿಯಮೇಲೆ ಮಿಸುಕಾಡುವ ಆ ಪ್ರಾಣಿ… (“ಅಲ್ಲ- ಅಲ್ಲ- ಅದು ಕೈಗಳು ಕಣೋ…”) ಕುದಿಯುವ ಎಣ್ಣೆಗೆ ಬಿದ್ದ ಹಾವಿನಂತೆ ಚಡಪಡಿಸುವ… (ಆ… ಅಯ್ಯೋ!) ಆ…
*
*
*
….ಆ… ಬದುಕು ಮುಳುಗಲಿನ್ನು ಮೊಳಕಾಲು ನೀರು ಸಾಕು.
ತುಂಗೆಯ ರುದ್ರ ಪ್ರವಾಹ ನಿಧ ನಿ…ಧಾ…ನ ಏರುತ್ತಲೇ ಇದೆ.
“ಅಯ್ಯೋ! ಅಯ್ಯೋ! ಅಯ್ಯೋ!” (“ಎಂಥವ್ರಿಗಾದ್ರೂ ಕರುಳು ಕರಗಲ್ವೇನಯ್ಯ?)- ಜನಜನದ ಎದೆಯಿಂದ ಮೊರೆತವೆದ್ದಿತು…
ನೋಡು ನೋಡುತ್ತಿದ್ದಂತೆಯೇ ದಂಡೆಯನ್ನು ತೆವಳಿ ತೆವಳಿ ಹತ್ತುತ್ತ ನೀರು ನಿಧ ನಿ…ಧಾ…ನ… ಏರುತ್ತಲೇ ಇತ್ತು…
ದಂಡೆಯ ಮೇಲೆ ಕೂಡಿದ ಜನ- (“ಅಂಥಾ ಸಮಯ ಸುಮ್ನೆ ನಿಂತಿರಕ್ಕೆ ಯಾರಿಗಾದ್ರೂ ನಾಚಿಕೆಯಾಗಲ್ವೇನಯ್ಯ?”)- ಒಬ್ಬರಿಗೊಬ್ಬರು ಮುಖ ತೋರಿಸಲಾಗದೆ ಜೋಲು ಮೋರೆ ಹಾಕಿದರು.
ಬಂಡೆಯ ಮೇಲೆ ನಿಂತ ನೆರಳಿನಂತಿದ್ದ ಜೀವ ಬಳುಕಿ, ಬಾಗಿ, ಎದುರಿನ ಅವನತ ಮುಖಿ ಜೀವರಾಶಿಗೆ ಸನ್ನೆ ಮಾಡಿ ಬೇಡುತ್ತಿತ್ತು. ಇಲ್ಲಿ ಜನ ಜನದ ಎದೆಯೂ ತಳಮಳಗುಟ್ಟಿ ಕುದಿಯಿತು… ಆದರೆ ಎರಡರ ನಡುವೆ ಪ್ರಳಯ ಅಟ್ಟಹಾಸ `ಹೋ’ ಎಂದು ಉಕ್ಕಿ ಕುದಿಯಿತು…
ಅಸ್ಪಷ್ಟ ಕೈಗಳ ವಿಚಿತ್ರ ಮಸುಕು ಮಸುಕು ಸಂಕೇತ ಯಮಭೀಕರ ಶಬ್ದ ಮೀರಿ ಕರುಣೆ ಮೊರೆದು ಜೀವ ಭಿಕ್ಷೆಯಾಚಿಸಿತು. ಮಳೆಯ ಭೀಮಸ್ವರ ಉಸಿರು ಕಟ್ಟಿ ಕಿವಿಕಿವಿಯನ್ನೂ ಕಿರುಚಿ ತುಂಬಿತು. ಮನುಷ್ಯ ಗಂಟಲಿನ ನಿರುಪಯೋಗಿ ಅಭಯಧ್ವನಿ ನಾಚಿ ಪ್ರವಾಹದ ಮೊರೆತದ ಮಡುವಿಗೆ ಧುಮುಕಿ ಪ್ರಾಣ ನೀಗಿತು.
ಭಯ, ಕರುಣೆ, ಪ್ರೇಮ, ಮನಸ್ಸಿನ ನೂರಾರು ಮಿಡುಕಾಟ, ಮೂಕಭೀತ ಎದೆ ಎದೆಯ ಕದ ತಟ್ಟಿ ಗೋಳಿಟ್ಟು ಕಾಡಿತು…
ಆದರೆ ಪ್ರಕೃತಿಯ ಕ್ರೂರ ಅಲಕ್ಷ್ಯ, ಅಟ್ಟಹಾಸ, ಮಳೆಗರೆದು ಸುರಿಯುತ್ತಲೇ ಇತ್ತು…
*
*
*
“ಅಂತೂ ಕೊನೇಗೆ ಆ ಮಾರಾಯ್ರು- ಮುನಸಿಪಲ್ ಅಧ್ಯಕ್ಷರು ಕಣೋ- ದೇವ್ರು ಬಂದ್ಹಂಗೆ ಬಂದ್ರು ಕಾರಿನಲ್ಲಿ”
“ನಾವೆಲ್ಲ ಅವ್ರ ಸುತ್ತ ಹೆಂಗೆ ಮುತ್ಹಾಕ್ಕೊಂಡ್ವು ಗೊತ್ತ?- ಎಲ್ಲವ್ರಿದ್ದು ತಲೇಗೊಂದೊಂದು ಮಾತು!”
“ಯಾರಿಗೂ ಹೊಳೀದಿದ್ದದ್ದು ಅವ್ರಿಗೆ ಅದ್ಹೆಂಗೆ ಹೊಳ್ದಿತ್ತೋ! ತಮ್ಮ ಜೊತೇಲೆ ಒಂದು ಮೈಕು ಬ್ಯಾಟ್ರಿನೂ ತಂದಿದ್ರು!”
“ಮುಂಚೇನೇ ಜಾಗ್ರತೆ ಬಂದಿದ್ದು ಆಶ್ಚರ್ಯ!- ಅಲ್ಲಾನೋ?”
“ಛೆ! ಹಂಗಂದ್ರೇನಯ್ಯ!- ಮೈಕು ಕಟ್ಟಿತೋ ಇಲ್ವೊ ನಮ್ಮ ಎದೇಗೆ ಬಾಯಿ ಬಂದಷ್ಟು ಸಂತೋಷ ಆಯಿತು, ಆ ಮೇಲೆ…”
*
*
*
ಎತ್ತರದ ರೆಂಬೆ ಕೆದರಿದ ಮರಗಳಿಗೆ ಕಟ್ಟಿದ ಟಿನ್ನಿನ ಬಾಯಿಗಳು ಬಂಡೆಯ ಮೇಲಿನ ಜೀವಕ್ಕೆ “ಅಭಯ” ಕೂಗಿದವು- ಪ್ರವಾಹದ ಮೊರೆತಕ್ಕಿದಿರಾಗಿ ಉದ್ವೇಗದಿಂದ ಕಿರಕಿರನೆ ಗೊರಗುಟ್ಟಿದುವು:
“ಹೆದರಬೇಡ ಯಾರನ್ನಾದರೂ ದೋಣಿಯಲ್ಲಿ ಕಳುಹಿಸುತ್ತೇವೆ- (“ಆದ್ರೆ ಹೋಗೋಕ್ಕೆ ಯಾರು ಸಿದ್ಧರಿದ್ದರು??”) ನೀರಿಗೆ ಹಾರಬೇಡ- ಜೋಕೇಂದ ಬಂಡೆ ಮೇಲೆ ಇನ್ನೂ ಸ್ವಲ್ಪ ಹೊತ್ತು ನಿಂತಿರು- ಹೆದರಬೇಡ”
ಮಳೆಯ ಪಂಜರಕ್ಕೆ ಸಿಲುಕಿ ಮಿಲುಕಾಡುವ ಜೀವಕ್ಕೆ ಕೇಳಿತೋ ಇಲ್ಲವೋ! ಕೈಸನ್ನೆ, ಬಾಯಿ ಸನ್ನೆ, ಮೈಯ ಹಿಸುಕಾಟ, ಮಿಸುಕಾಟ ಎಲ್ಲವೂ ಮಬ್ಬು ಕತ್ತಲೆಯಲ್ಲಿ ವೇದನೆಯ ಧ್ವನಿ ವರ್ಧಿಸಲೆತ್ನಿಸುತ್ತಿತ್ತು. ಬಾಣಲೆಯಲ್ಲಿ ಹಾಕಿ ಹುರಿದಂತೆ ಬಂಡೆಯ ಮೇಲೆ ಒದ್ದಾಡುತ್ತಿತ್ತು.
ಆದರೆ ಜನ ಒಬ್ಬರ ಮುಖವನ್ನೊಬ್ಬರು ನೋಡಿದರು (ಕೇಸರಿಯ ಕೆಣಕಿ ನೀ ಸೆಣಸ ಬಲ್ಯಾ?) ಕುದಿಯುವ ನೀರು ಕಡಲನ್ನು ಜೀವದಾಸೆ ತೊರೆದು ಹಾಯುವವರು ಯಾರು?- ಯಾರಿಗೆ? ಯಾರಿಗೆ ಇದೆ ಎದೆಗಾರಿಕೆ? ?
ಚಿಪ್ಪು ಹೊಕ್ಕು ಕೂತಿತು ಆಮೆ.
(“ಅಯ್ಯೋ ನನಪ್ಪ ಮುದುಕ- ಅವನನ್ನು ತೊರೆದು ಹೇಗೆ?- ನನ್ನ ಜೀವವೊಂದು ಹೆಚ್ಚೂಂತಲ್ಲ- ಆದರೂ..”
“ಕೈ ಹಿಡಿದ ಹೆಂಡತಿ ಗತಿ ಏನಪ್ಪ ಆಮೇಲೆ?- ನಾನೇನೋ ದುಡುಕಿ ಬಿಡಬಹುದು…”
“ಪಾಪ- ಬಡಪಾಯಿಯಯ್ಯ! ಆದ್ರೇನು ಮಾಡೋಕೆ ಆಗುತ್ತೊ?”
“ಯಾರ ಜವಾಬ್ದಾರಿ ಯಾರು ಹೊರಲು ಸಾಧ್ಯವಪ್ಪ?”
“ಯಾರ್ಯಾರ ಹಣೇಲಿ ಏನೇನು ಬರೆದಿದೆಯೋ- ತಪ್ಪಿಸಲು ಸಾಧ್ಯವೆ?”)
`They also serve who only stand and wait” `
*
*
*
ನಿಧ ನಿ… ಧಾ… ನ ತುಂಗೆಯ ನೀರೇರುತ್ತಿತ್ತು….
ಟಿನ್ನಿನ ಟೊಳ್ಳು ಬಾಯಿಗಳು ಅಭಯವೀಯುತ್ತಿದ್ದವು….
ಬಂಡೆಯ ಮೇಲಿನ ಜೀವ ಕೊಚ ಕೊಚ ಕುದಿಯುತ್ತಿತ್ತು….
ಗೋಳು ಮಳೆಯಲ್ಲಿ ನರಹುಳುಗಳು ಗಿಜಿ ಗಿಜಿಗುಟ್ಟಿದುವು-
(“ಮಳೆ ಹೆಚ್ಚಾಗ್ತ ಬಂತು ಹೋಗೋಣ್ವೇನಯ್ಯ?”; “ಏನಾಗ್ತದೆ ನೋಡೋಣ ಇರೋ!”; “ನೀವಿಬ್ರೂ ಇಲ್ಲೇ ಇರಿ- ನಂಗದನ್ನ ನೋಡೋಕೆ ಸಾಧ್ಯ ಇಲ್ಲಪ್ಪ”; “ಅಯ್ಯೋ ಹುಚ್ಚೆ! ಗಂಡೆದೆ ಬೇಕಯ್ಯ!”)
ಪ್ರಜ್ವಲಿಸುವ ಕಣ್ಣು- ಕರಿಯ ಕಂಬಳಿ ಒಳಗೊಂದು ಕಂಪಿಸುವ ದೇಹ- ನೀರನ್ನು ಚಿಮ್ಮಿ ಓಡುವ ಕಾಲಿನ ಆ ಆತುರ…
(“ಯಾರಯ್ಯ ಇವನು- ಏನು ಆತುರವಯ್ಯ ಇವ್ನಿಗೆ?”
“ಸ್ವಲ್ಪ ಸುಮ್ನಿರೋ- ಅಧ್ಯಕ್ಷರಿಗೆ ಅದೇನೋ ಹೇಳ್ತಿದಾನೆ ಕೇಳೋ!”)
ಮುನಿಸಿಪಲ್ ಅಧ್ಯಕ್ಷರು ಕತ್ತು ಹೊರಹಾಕಿ ಚಕಿತರಾದರು-
“ಏನಯ್ಯ ನಿನ್ನ ಸ್ವಂತ ಜವಾಬ್ದಾರಿ ಮೇಲೇ ಹೋಗ್ತೀಯ? ನಿನ್ನ ಹೆಸರು?”
“ಸಿದ್ದ”_ (ಅವ್ವನಿಟ್ಟ ಹೆಸರಿಗೆ ಎಂಥ ಬೆಲೆ ಈಗ)
ಚಿಪ್ಪಿನಿಂದ ಹೊರಗೆ ಹೊರಟಿತು ಆಮೆ.
(“ಮಹಾನುಭಾವ ಕಣಯ್ಯ ಆ ಸಿದ್ದ”; “ಯಾವ ಊರವ್ನು ಮಾರಾಯ ಅವ್ನು?”; “ಒಬ್ನೆ ಅದ್ಹೆಂಗೆ ದೋಣಿ ನಡೆಸ್ತಾನಂತೋ?”; “ಆ ಬದುಕನ್ನ ಉಳ್ಸಿದ್ರೆ ಬಾರೀ ಪುಣ್ಯವಯ್ಯ ಅವನಿಗೆ”; “ನೋಡಿ ಹೋಗೋಣ ನಿಲ್ಲೋ!”)
*
*
*
“ಅವ್ನಿಗೆ ಜೀವದ ಮೇಲೆ ಬೇಜಾರು ಬಂದಿರಬೇಕು ಕಣಯ್ಯ!”
“ಈ ಮಳೇಲಿ ಹಾವುಗಳು ಹುತ್ತದಿಂದ ಎದ್ದು ಬರ್ತಾವಯ್ಯ, ಕಾಲ್ಹತ್ರ ಜೋಕೆ! ಈ ಕಡೆ ಬಾ. ಅವ್ನ ಕಥೆ ಹೇಳ್ತೀನಿ. ನಂಗೆ ಅವನ ವಿಷ್ಯ ಗೊತ್ತು!”
“ಏನು? ದೋಣಿ ಇನ್ನೂ ಹೊರ್ಟಿಲ್ಲ- ಬೇಗ ಹೇಳ್ಬಿಡು!”
“ಜೀವದ ಮೇಲೆ ಬೇಸರ ಬರ್ದಿದ್ರೆ ಈ ಜಡೀ ಮಳೇಲಿ ಹೊರಡ್ತಿದ್ನೇನೋ? ಅವ್ನ ಹೆಂಡ್ತಿ ಬಲು ಬಜಾರಿ ಕಣಯ್ಯ. ಸೇರೇಗಾರ ಸೀನಸೆಟ್ಟೀನ ಇಟ್ಕೊಂಡೀದಾಳೆ!”
“ಯಾರು? ಯಾವ ಸೀನಸೆಟ್ಟಿ?”
ಅವ್ನೊಬ್ಬ ಇದಾನೊ! ಶುದ್ದ ಹಲ್ಕ- ಹೆಂಡ ಕುಡುಕ!- ಕೋರೆ ಮೀಸೆ, ಕೆಂಪು ಮುಂಡಾಸು, ಕಾಲ್ಕಡಕ. ನೋಡಿಲ್ವೇನೋ? ಹೂ ಅವ್ನೆ! ಇತ್ತೀಚೆಗೆ ಸಿದ್ದ ಹುಚ್ಚನಂಗೆ ತಿರುಗ್ತಿದ್ದ. ಕಲ್ಲೊಡ್ಯೋ ಕೆಲ್ಸಕ್ಕೂ ಹೋಗ್ತಿರ್ಲಿಲ್ಲ- ಮನೇ ಕಡೇನೂ ಹೋಗ್ತಿರ್ಲಿಲ್ಲ!”
“ಎಷ್ಟು ಗಟ್ಟಿಮುಟ್ಟಾಗಿದ್ದಾನೆ ಈ ಸಿದ್ದ. ಆ ಸಣಕಲ ಸೀನ ಸೆಟ್ಟೀನ ಇವ ಕೊಲ್ದೆ ಉಳ್ಸಿದ್ರೆ ಆಶ್ಚರ್ಯ! ಅಲ್ಲವೇನೋ?”
“ಪಾಪ! ಏನ್ಮಾಡೋಕಾಗತ್ತೆ ಹೇಳು ಒಬ್ಬೊಬ್ರ ಗ್ರಹಚಾರಾನೇ ಹಾಗೆ- ಲೋ ದೋಣಿ ಹತ್ತಿದ ಕಣೋ! ನೋಡೋಣ ಬಾರೋ!”
“ಈ ಕೆಲಸ ಮಾಡಿ ಮುಗಿಸಿದ್ರೆ ಪಾಪ- ಅವ್ನಿಗೆ ಏನಾದರೂ ಇನಾಮು ಕೊಡಬೇಕು. ಆದ್ರೆ ಮುನಿಸಿಪಲ್ ಪ್ರೆಸಿಡೆಂಟ್ರು ಕೈ ಬಿಚ್ತಾರೇನಯ್ಯಾ? ನಮಗೇ ವಕ್ಕರಿಸ್ತಾರೆ…”
ಜನರ ಮಾತು ಒಮ್ಮೆಗೇ ಗಕ್ಕನೇ ನಿಂತಿತು. ಮಳೆ ಹುಯ್ಯುತ್ತಲೇ ಇತ್ತು. ಸಿದ್ದ ದೋಣಿ ಹತ್ತಿ ಹುಟ್ಟು ಹಿಡಿದು ಸೆಟೆದು ನಿಂತ- ಪ್ರವಾಹಕ್ಕೊಮ್ಮೆ ವಿನೀತನಾಗಿ ಕೈ ಮುಗಿದ. ದಂಡೆಯ ಮೇಲೆ ಕೂಡಿದ ಜನರ ಕಡೆಗೊಮ್ಮೆ ನೋಡಿದ…. `ಮಳೆಯ ಪಂಜರದೊಳಗಿನ ಕೆರಳಿದ ಸಿಂಹ’ ಮುಗಿಲೆಡೆಗೆ ಕಣ್ಣು ಹಾಯಸಿ ದಂಡೆಯ ಮೇಲೆ ಒಂಟಿ ಕಾಲಿಟ್ಟು ಮೀಟಿದ. `ಗೋಳು ಮಳೆ ಕತ್ತಲ ಬಂಜೆ ದಂಡೆ ಹಡೆದ ಬೆಳಕ ಪಿಂಡ’- ಸಿದ್ದ- ಹುಟ್ಟಿನಿಂದ ನೀರನ್ನು ಸೀಳಿದ….
ಒಂದು ಸುತ್ತು ತಿರುಗಿ ದೋಣಿ ಹೊರಟಿತು!…
*
*
*
ಮಬ್ಬು ಕತ್ತಲಿನ ಮಳೆಯೇ ತಲೆಗೆದರಿನಿಂತಂತೆ ಕರಿ ಮುಗಿಲು ಕೆರಳಿ ಹರಡಿತ್ತು. ಮೂರು ಜನದ `ಹುಟ್ಟಿಗೂ’ ದಕ್ಕದ ಬಿರುಸಿನಿಂದ ನೀರು ಧುಮು ಧುಮುಕಿ ಆವೇಶದಿಂದ ಹರಿಯುತ್ತಿತ್ತು.
ನಿಧ ನಿಧಾನ ನೀರೇರುತ್ತಿತ್ತು.
ಜನ ತುಟಿ ಕಚ್ಚಿ ಜೀವವನ್ನೇ ಕಣ್ಣಿಗೆ ತಂದು ನೋಡುತ್ತಿದ್ದರು.
ಟಿನ್ನಿನ ಬಾಯಿಗಳು ಹುರಿದುಂಬಿಸುವ ಮಾತನ್ನರಚುತ್ತಿದ್ದವು.
ದೋಣಿಯನ್ನು ಪ್ರವಾಹ ಮೇಲೇರಲು ಬಿಡದೆ ಕೆಳಮುಖನಾಗಿ ಸೆಳೆಯುತ್ತಿತ್ತು. ಅಪ್ಪಿ ತಪ್ಪಿ ಒಂದು ಸೆಳುವಿಗೆ ಸಿಲುಕಿದರೂ ಸರಿಯೆ, ಯಾವುದಾದರೂ ಜಲ ಸಮಾಧಿಯಲ್ಲಿ ಕುಳಿತ ಬಂಡೆಗೆ ಜಪ್ಪಿ ದೋಣಿ ಪುಡಿಪುಡಿಯಾಗುವ ಸಂಭವ. ಮಾರಿಗೊಂದು ಸಾವಿನ ಮಡು ಆಕಳಿಸುತ್ತಿತ್ತು; ಸೆಳವು ಸುಳಿಗಳು ಗಿರ್ರ ತಿರುಗಿಸಿ ದೋಣಿಯನ್ನು ಜಗ್ಗುತ್ತಿದ್ದವು.
ಕಬ್ಬಿಣದ ಕೊರಡು ಕೈ ಒಮ್ಮೆ ಎಡ- ಒಮ್ಮೆ ಬಲ ಹುಟ್ಟೆಳೆಯುತ್ತಿತ್ತು. ದೋಣಿ ಹಾಯಿಸುವುದರಲ್ಲಿ ಆ ಪ್ರಾಂತ್ಯದಲ್ಲೇ ಅವನ ಸಾಟಿ ಮತ್ತೊಬ್ಬನಿರಲಿಲ್ಲ. (ಆದರೆ ಬಾಳದೋಣಿ?) ಪ್ರವಾಹದಿದಿರು ಯಾರಿಗಿಲ್ಲದ ಎದೆಗಾರಿಕೆ ಹುಮ್ಮಸ್ಸು ಉಕ್ಕುತ್ತಿತ್ತು! (ಬದುಕಿ ಯಾವ ಪ್ರಯೋಜನ?)
ಸಿದ್ದ ದೈತ್ಯ ಶಕ್ತಿಯಿಂದ ದೋಣಿ ಹಾಯಿಸುತ್ತಿದ್ದ (“ಸಿದ್ದಾ ಒಂದು ಬಡ ಜೀವಿ ಉಳಿಸಿದರೆ ಎಂತಹ ಪುಣ್ಯ ನೋಡು!”- ಪುಣ್ಯ ಹೋಗಲಿ ಮಾಡಿದ ಪಾಪ ತೀರೀತೆ?) ಹೊರಗೆ ಹೊಳೆಯ ಮಳೆಯ ಮೊರೆತ (ಮೀರಿದ ಮೊರೆತ ಒಳಗೆ!) ದೋಣಿಯನ್ನು ಸ್ವಲ್ಪ ಮೇಲಕ್ಕೆಳೆಯಲು ಉಸಿರು ಕಟ್ಟಿ ಹುಟ್ಟನ್ನೆಳೆದ. ಆದರೆ ದೋಣಿಗಿಂತ ಬೇಗ ಹೃದಯದ ಪ್ರವಾಹದಲ್ಲಿ ಯೋಚನೆ ಹಾಯುವುದು. (ಹುಟ್ಟೆಳೆದನೇ ಅಲ್ಲಿ?)
ಕೂಗಿ ಕೂಗಿ ಪ್ರವಾಹದೊಡನೆ ಕಾದತೊಡಗಿತ.
(ಅಂತರಾಳಕ್ಕಿಳಿದು ಕೆದರುವ ಪ್ರಜ್ಞೆ – ಹೆದರಿ ಹಿಂದೆ ಹಿಂದೆ ನೋಡುತ್ತ ಕತ್ತಲಿನಲ್ಲಿ ಏಣಿ ಇಳಿಯುವ ಕಳ್ಳ – ಹಿಡಿ! ಹಿಡಿ! !)
ಹಿಡಿದು ಹುಟ್ಟನ್ನು ಬಲವಾಗಿ ಮೀಟಿದ. ದೋಣಿ ಇನ್ನೂ ಸ್ವಲ್ಪ ಮೇಲೇರಿತು. ತುಂಗೆ ಹೆಮ್ಮಾರಿ ಅಲೆ ಅಲೆಯಾಗಿ ಬಡಿಯುತ್ತಿದ್ದಳು. ಕೈ ಹಿಡಿದ ಹುಟ್ಟು ಗುಡಗುಟ್ಟಿತು. (ಕೈ ಹಿಡಿದ ಕತ್ತಿ ಜಳಪಿಸ್ತಿತ್ತು! ಅಲೆ ಅಲೆಯಾಗಿ ಬಡಿಯಿತು – ಹೆಂಡತಿಯ – ಆಹ್! ಹೆಂಡತಿಯೆ? – `ಥೂ ಸೀನಸೆಟ್ಟಿಯ ಸೂಳೆ!’ – ಹೆಮ್ಮಾರಿಯ ಮಾತು – “ನಿಂದೇನು – ನನ್ನ ಇಷ್ಟ – ನೀನೇ ಮನೇ ಬಿಟ್ಟು ಹೋಗು, ಹೂ ನಡಿ.” `ಅಬ್ಬಾ!’)
ರೋಷದಿಂದ ಮೈಮರೆತು ಹುಟ್ಟೆಳೆದ (ಹೆಣ್ಣಿನ ಮೃದು ಮೈ ಹರಿತವಾದ ಕತ್ತಿಯ ಒಂದೇ ಹೊಡೆತಕ್ಕೆ ಕಚಕ್! `ಅಯ್ಯೋ ಕಣ್ಣಿನಲ್ಲಿ ರಕ್ತವಿಲ್ಲೇನಯ್ಯ ನಿನಗೆ?’) ಅಯ್ಯಯ್ಯೋ! ಏನು ಯಮಭೀಕರ ಹೊಳೆಯಿದು? (ಅಯ್ಯೋ! ಮನೆತುಂಬ ರಕ್ತ! `ಸುಮ್ಮನೆ ಕೂತಿರಲು ಷಂಡನೆ?’ – ಸೊಂಟ ಸೇರಿತ್ತು ರಕ್ತ ಬಳೆದ ಕತ್ತಿ.)
ಕೈ ಹುಟ್ಟು ಬಿಟ್ಟುವುದರಲ್ಲಿತ್ತು. ಪಕ್ಕನೆ ಚೇತರಿಸಿಕೊಂಡು ಜಾರುವ ಹಿಡಿಯನ್ನು ಬಲವಾಗಿ ಅಮುಕಿ ಎಳೆದ….
ಇಂಚು ಇಂಚು ನಿಧ ನಿ…. ಧಾ…. ನ ಪ್ರವಾಹವೇರುತ್ತಿತ್ತು.
ಏರುವ ನೀರನ್ನು ನೋಡಿ ಬಂಡೆ ಮೇಲಿನ ಜೀವಿ ಚಡಪಡಿಸುತ್ತಿತ್ತು.
(ಅಯ್ಯೋ! ಪಾಪ!) ಸಿದ್ದ ಪ್ರವಾಹವನ್ನು ಕಣ್ಣು ಗಂಟಿಕ್ಕಿ ನೋಡಿ ಹಲ್ಲು ಕಡಿದು ಹುಟ್ಟನ್ನು ಇನ್ನಷ್ಟು ಬಲವಾಗಿ ಎಳೆದ. (ಒಂದು ಜೀವಿಯನ್ನು ಕೊಂದಿದ್ದಕ್ಕೆ ಇನ್ನೊಂದನ್ನು ಉಳಿಸಿದಂತಾಯಿತಲ್ಲವೆ? ಆದರೆ ಸೀನಸೆಟ್ಟಿ? – ಹಾಳಾಗಲಿ – ಅವನ ಪಾಪಕ್ಕೆ ತಕ್ಕ ಶಿಕ್ಷೆ ದೇವರು ಮಾಡಲಿ)
ಯಾಂತ್ರಿಕವಾಗಿ ಕೈ ಹುಟ್ಟೆಳೆಯತೊಡಗಿತು. ಮರೆವಿನಲ್ಲೊಮ್ಮೆ ಬೋರ್ಗರೆತದ ಪ್ರವಾಹದಲ್ಲಿ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ದೋಣಿ ಗಡ ಗಡ ನಡುಗಿತು. ತಲೆ ಸುತ್ತಿ ಕಣ್ಣು ಕತ್ತಲೆ ನುಂಗುತ್ತಿರುವಂತೆನಿಸಿತು.
(“ಅಯ್ಯೋ! ಕುರೀನ ನನ್ನೆದ್ರು ಕಡೀಬೇಡಮ್ಮ. ತಲೇ ಸುತ್ತುತ್ತೆ!”
“ಅಯ್ಯೋ ನನ್ನ ಮಗನೆ! ಶಕ್ತಿಯಲ್ಲಿ ಹುಲಿ! ಆದ್ರೆ ಕುರೀನೂ ಕಡೀಲಾರ್ದ ಕರುಣಿ – ನಮ್ಮ ಸಿದ್ದಂದು ಶುದ್ಧ ಹೆಂಗರುಳು ಅಕ್ಕಯ್ಯ”)
ತನ್ನ ಶಕ್ತಿಯನ್ನೂ ಮೀರಿ ದೋಣಿ ಸುಳಿಗೆ ಸಿಕ್ಕು ಸುತ್ತುತ್ತಿರುವುದನ್ನು ನೋದಿ ಸಿದ್ದ (`ಜಟ್ಟಿ ಹಾಗೆ ನಿಲ್ಲದಿದ್ದರೆ ಮಾರಿಯನ್ನು ಕೊಲ್ಲಲು ಕೈ ಬರುತ್ತಿತ್ತೇನಮ್ಮ’) ಉಸಿರು ಕಟ್ಟಿ ಹುಟ್ಟನ್ನು ದೋಣಿಯ ಮೂಗಿನಡಿ ಹಾಕಿ ಎಳೆದ. ದೋಣಿ ಮೇಲೇರಿತು.
(`ಸಿದ್ದ ಶಕ್ತಿಯಲ್ಲಿ ಹುಲಿ’) ದಂಡೆಯ ಮೇಲಿನ ಜನ ಅಚ್ಚರಿಯಿಂದ `ಹೋ’ ಎಂದರು. ಬಂಡೆಯ ಮೇಲಿನ ಜೀವ ಸೆಟೆದು ನಿಂತು ನೋಡಿತು. ಸಿದ್ದ ಒಮ್ಮೆ ಅತ್ತ ಇತ್ತ ಎರಡೂ ಕಡೆ ನೋಡಿದ. ಹೊಸ ಧೃತಿ ಬಂದು ಶಕ್ತಿ ನೂರ್ಮಡಿಸಿದ ಅನುಭವವಾಯಿತು. (`ಹುಲಿಯ ಹೆಂಗರುಳು!’) ಒಮ್ಮೆ ನಿಟ್ಟುಸಿರೆಳೆದ, (ಸೀನಸೆಟ್ಟಿ? ಅವನ ಪಾಪಕ್ಕೆ ತಕ್ಕ ಶಿಕ್ಷೆ ದೇವರು ಮಾಡಲಿ!) ತನ್ನ ಶಕ್ತಿಯ ಅಲ್ಪತೆ ಮರೆತು ಹುಟ್ಟನ್ನು ಮತ್ತೊಮ್ಮೆ ದೋಣಿಯ ಮೂಗಿನಡಿಹಾಕಿ ಉಸಿರು ಕಟ್ಟಿ ಎಳೆದ –
ದೋಣಿ ಮೇಲೇರಿತು!….
*
*
*
ಮಳೆಯ ಹೊಡೆತದ ಭರ ಏಕೋ ಒಮ್ಮಿಂದೊಮ್ಮೆಗೇ ಏರಿತು.
ನಡುನೀರಿನಲ್ಲಿ ಮಳೆಯ ಪಂಜರದಲ್ಲಿ, ಸಿಕ್ಕ ದೋಣಿ ಜನದ ಕಣ್ಣಿಗೆ ಕರಗಿ ಅಸ್ಪಷ್ಟವಾಗತೊಡಗಿತು…
ದಂಡೆಯ ಮೇಲೆ ನಿಂತವರೆಲ್ಲ ಉದ್ವಿಗ್ನರಾಗಿ ತಾವೇ ದೋಣಿ ನಡೆಸುತ್ತಿರುವ ಭಾವನೆಯಲ್ಲಿ ಆವೇಶ ಹೊಂದಿ ಬರಿ ಕೈಗಳನ್ನು ಅತ್ತಿಂದಿತ್ತ ಆಡಿಸುತ್ತಿದ್ದರು. ಎಲ್ಲ ಕಣ್ಣುಗಳೂ ದೋಣಿಯ ಕ್ಷಣಕ್ಷಣದ ಚಲನದಲ್ಲಿ ಕುತೂಹಲದ ಆತುರದಿಂದ ಕುದಿಯತೊಡಗಿದವು.
(“ಹೋಗೋದೇ ಇಷ್ಟು ಕಷ್ಟವಾದ ಮೇಲೆ ಇನ್ನು ತಿರುಗಿ ಬರೋದು ಹೆಂಗಯ್ಯ?”
“ಕೆಟ್ಟ ಯೋಚನೆ ಮಾಡಬೇಡ ಮಾರಾಯ. ನಿನ್ನ ನಾಲಿಗೇಲಿ ಕರೀ ಮಚ್ಚೆ ಇದ್ದೀತು”
“ಅಲ್ಲಾ ಈ ಹುಯ್ಯೋ ಮಳೇಲಿ ದೋಣಿ ತುಂಬ ನೀರು ತುಂಬಿದ್ರೆ ಹೆಂಗೇಂತ ಯೋಚಿಸ್ದೆ ಅಷ್ಟೆ!”
“ಇಲ್ಲಿರೋ ಪಾಯಿಂಟಷ್ಟೆ ನೋಡು, ಸಿಡಿಲು ಬಂಡೆಗೆ ಸೆಳೂನಲ್ಲಿ ನೆಟ್ಟಗೆ ದೋಣಿ ನೆಡ್ಸೋಕೆ ಆಗಲ್ಲ, ಸಿದ್ದ ಏನಾದ್ರೂ ಸ್ವಲ್ಪ ಮೇಲೆ ಹೋಗಿ ವಾರೆ ತಿರುಗಿಸಿಕೊಂಡು ದೋಣಿ ನಡಸ್ದ-ಆಗ ಬಚಾವಾಗ್ತಾರೆ ಇಬ್ರೂನು!”
“ಅಯ್ಯಯ್ಯೋ! ನೋಡು- ಒಂದು ಮಾರು ಮೇಲೆ ಹೋದರೆ ಎರಡು ಮಾರು ಕೆಳಗೆ ಬರ್ತಿದೆ. ಅರೆರೆ! ಆ ಸುಳೀಲಿ…ಅಲ್ಲೊಂದು ಬಂಡೆ ಇದೆ ಅಲ್ವೇನಯ್ಯ?”
“ಇನ್ನೇನು? ಕಾಲುಗಂಟು ನೀರು ಮೇಲೇರಿದ್ರೆ ಸಾಕು. ಆ ಜೀವ ತೇಲಿ ಹೋಗ್ತದೆ ಇಷ್ಟು ಮಾಡಿದ್ದೂ ವ್ಯರ್ಥ! ಪಾಪ!”)
*
*
*
ಹುಟ್ಟು ಹಾಕುತ್ತಿದ್ದ ಸಿದ್ದ ಕ್ಷಣಕಾಲ ಸಿಡಿಲು ಬಂಡೆಯ ಕಡೆ ನೋಡಿದ. (ಸೀನಸೆಟ್ಟಿಗೆ ತಕ್ಕ ಶಿಕ್ಷೆ ದೇವರು ಮಾಡಲಿ!) ಎಡಗಡೆ ತಿರುಗಿದರೆ ಜನ ಸಾಗರ- ಸುತ್ತಮುತ್ತಲೂ ಕೆನ್ನೀರಿನ ಪ್ರವಾಹ (“ಅಯ್ಯೋ! ಕಣ್ಣೀನಲ್ಲಿ ರಕ್ತವಿಲ್ಲೇನಯ್ಯ ನಿನಗೆ?”) ದೋಣಿಯಲ್ಲಿ ನೀರು ತುಂಬುತ್ತಿರುವುದು ನೋಡಿ ಗಾಬರಿಯಾಯಿತು. (ಸತ್ತರೆ ಏನು ಹೋದಂಗೆ? ಯಾಕೆ ಬದುಕಬೇಕಿನ್ನು?..ಆದರೆ ಕೊಂದ ಪಾಪಕ್ಕೆ ಬಡ ಜೀವಿಯನ್ನು ಉಳಿಸಿ…)
“ಓಹೋ-ಹೋ ಓಹ್;ಓಹ್-ಹೋ-ಓಹ್”
ಕೂಗಿ ಕೂಗಿ ಹುಟ್ಟು ಹಾಕಿದ.
ದೋಣಿ ನಿಧ ನಿಧಾನ ಮೇಲೇರತೊಡಗಿತು. (ದೇವರ ದಯೆ!)
ಸಿದ್ದನಿಗೆ ಕೈಯ ಶಕ್ತಿಯೆಲ್ಲವೂ ಹಿಂಡಿ ಹೋಗುತ್ತಿರುವ ಅನುಭವವಾಯಿತು. ಒಂದು ಕ್ಷಣ ಸುಧಾರಿಸಿಕೊಳ್ಳಲೆಂದು ಹುಟ್ಟನ್ನು ಮೇಲಕ್ಕೆತ್ತಿ`ಉಸ್’ ಎಂದು ನೀಳವಾಗಿ ನಿಟ್ಟುಸಿರೆಳೆದು ಮತ್ತೊಮ್ಮೆ ದಂಡೆಯ ಕಡೆ ನೋಡಿದ.
ಎಲ್ಲರೂ ಅವನ ಹಿಂದುಗಡೆ ಕೈಮಾಡಿ ಏನೋ ಅಸ್ಪಷ್ಟವಾಗಿ ಕೂಗತೊಡಗಿದರು. ಟಿನ್ ಬಾಯಿಗಳೂ ಏನೋ ಗೊರ ಗೊರಾ ಕಿರುಚಿದವು. `ಧೊ ದೋ’ ಜಡಿಯುವ ಮಳೆಯಲ್ಲಿ ಕಿವಿ ಡಬ್ಬು ಹಾಕಿ ಏನೂ ಕೇಳಿಸದು.
ಜನರು ಕೈಸನ್ನೆ ಮಾಡಿದ ಕಡೆ ಸಿದ್ದ ಮೆಲ್ಲಗೆ ತಿರುಗಿ ನೋಡಿದ. ಎದೆ ಜಗ್ಗೆಂದಿತು. ಕ್ಷಣದಲ್ಲೆ ಇಷ್ಟು ಹೊತ್ತಿನ ಯತ್ನವೆಲ್ಲ ನೀರುಪಾಲಾಗುವುದರಲ್ಲಿತ್ತು.
ದೋಣಿಗೆ ಬಲು ಹತ್ತಿರದಲ್ಲೆ ತೇಲಿ ಬರುತ್ತಿರುವ ಭೀಮಕಾಯದ ಒಂದು ಮರ!- ಸರಕ್ಕನೆ ಶಕ್ತಿ ಮೀರಿ ಹುಟ್ಟೆಳೆದು ದೋಣಿಯನ್ನು ಒಂದು ಪಕ್ಕಕ್ಕೆ ಸರಿಸಿಕೊಂಡ ದೋಣಿ ಪಕ್ಕಕ್ಕೆ ಸರಿದಿದ್ದೇ ತಡ- ಪ್ರವಾಹವೇರಿ ಬಂದ ಮರ ದೋಣಿಯ ಮೂಗಿಗೆ ತಾಕಿತು. ಆದರೆ ತಾಕಿದ ರಭಸಕ್ಕೆ ದೋಣಿ ಅಷ್ಟು ದೂರ ಓರೆಯಾಗಿ ಸಿಡಿಲು ಬಂಡೆಯ ಕಡೆಗೇ ತೇಲಿ ಹೋಯಿತು…
ಬರುಬರುತ್ತ ಬಂಡೆಯು ನೀರಿನಲ್ಲಿ ಮುಚ್ಚತೊಡಗಿತು. ಬಂಡೆಯ ಮೇಲಿನ ಜೀವಿಯ ಮಿಲುಕಾಟ ಮಿತಿಮೀರಿತು. (ಛೆ! ಪಾಪದ ಜಂತು!)
“ಓಹ್ ಹೋ ಓಹ್; ಓಹ್ ಹೋ ಓಹ್”
ಸಿದ್ದ ಸರಾ-ಸರಾ-ಸರಾ ಹುಟ್ಟೆಳೆದ.
ದೋಣಿ ಸಿಡಿಲು ಬಂಡೆಯ ಹತ್ತಿರಕ್ಕೆ ಬಂದು ಜಗ್ಗನೆ ಕಲ್ಲಿಗೆ ತಾಕಿ ನಿಂತಿತು.
ಟಿನ್ ಬಾಯಿಗಳು ಅರಚಿಕೊಂಡವು!
“ಇದು ಒಂದು ಮಹಾ ಪುಣ್ಯದ ಕೆಲಸ. ಮಾನವ ಜೀವಿಯನ್ನುಳಿಸಿದ ಮಹೋನ್ನತ ಕಾರ್ಯ”
ಜನ `ಹೋ’ ಎಂದು ತಾವೇ ಗೆದ್ದವರಂತೆ ದಂಡೆಯ ಮೇಲೆ ಮಳೆಯಲ್ಲಿ ಕುಣಿದರು.
ಸಿದ್ದ ಹುಟ್ಟನ್ನು ದೋಣಿಯೊಳಗಿಟ್ಟು ಕತ್ತೆತ್ತಿದ.
ಪ್ರವಾಹ ರೋಷ ಮೀರಿದ ರೋಷ ಎದೆಯಲ್ಲಿ ಉಕ್ಕಿತು. (`ದೇವರೇ ಶಿಕ್ಷೆ ಕೊಟ್ಟರೂ ಉಳಿಸಲು!-ತಾನು!), ತುಟಿ ಅದುರಿತು. ಹೆಂಡತಿಯನ್ನು ಕಡಿದು ಬಂದು ಹುಟ್ಟು ಹಿಡಿದಿದ್ದ ಕೈ ಸೊಂಟದೊರೆಯಿಂದ ರಕ್ತಮಯ ಕತ್ತಿಯೆಳೆಯಿತು. (ಹೆಂಡತಿಯನ್ನು ಯಾರಿಗಾಗಿ ಕೊಂದು? ಈಗ…ಯಾರಿಗಾಗಿ… ಈ ಪ್ರವಾಹ!)
ತೇಂಕಿ ತೇಂಕಿ ಸಿದ್ದ ಒದರಿದ.
“ಆಹ್! ಸೀ…ನ ಸೆಟ್ಟೀ!”
ಬಂಡೆಯ ಮೇಲಿನ ಜೀವ-ಜಂತು… (ಇಶ್ಯಿ! ಬದುಕೆ!!) ಕುರಿಯಂತೆ- (ಥೂ ಮಿಲುಕಾಡಿತು- (ಅಮ್ಮಾ! ನೋಡಲಾರೆನಮ್ಮಾ!!’)
“ಆ…ಆ…ಬೆಬೆಬೇ!!…(ಬ್ಯಾ-ಬ್ಯಾ)…”
ಬಡ ಜೀವಿಯ ಅಂಗ ಅಂಗವೂ ಪ್ರಾಣಭಿಕ್ಷೆ ಯಾಚಿಸಿತು.
(“ಅಯ್ಯೋ!ಅಮ್ಮಾ!! ಅಮ್ಮಾ!…ಕುರಿ ಕಡಿಯಬೇ”…“ಬ್ಯಾ…ಬ್ಯಾ…”ಅಯ್ಯೋ!”)
ಕ್ಷಣದಲ್ಲೆ ಸಿದ್ದನಿಗೆ ಕಣ್ಣು ಕತ್ತಲೆ ಕಟ್ಟಿದೊಪ್ಪನೆ ಕುಳಿತು ಬಿಟ್ಟ.
ಹೆಂಡತಿಯ ಜೀವ ಆಹುತಿ ತೆಗೆದುಕೊಂಡ ಕೈಯಲ್ಲಿದ್ದ ಕತ್ತಿ ಸಡಲಿ (“ನಮ್ಮ ಸಿದ್ದಂದು ಹೆಂಗರುಳು ಅಕ್ಕಯ್ಯ!”) ಮಬ್ಬು ಕತ್ತಲ ಮಳೆಯಲ್ಲಿ ಜಾರಿ ಪ್ರವಾಹ ಮಡುವಿನಲ್ಲಿ ಮುಳುಗಿತು!
ಸಿದ್ದ ಮತ್ತೆ ಹುಟ್ಟಿಗೆ ಕೈಯಿಕ್ಕಿದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ