ಗಾಂಧಿ ಮತ್ತು ಎಂಟನೇ ಹೆನ್ರಿ

ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ?
ಮಾತಾಡೋದು ಬಿಡಲ್ಲವೆ?
ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ
ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ?

ಅದೇ ಆಗ್ರಹದ ಗಾಂಧಿಗೆ
ದೇಶವೇ ಊರು ಅಂತ ಅನ್ನಿಸಿ
ಊರೇ ಮನೆಯಾಗಿಬಿಟ್ಟು
ಚರಿತ್ರೆ ಅಂದರೆ ಸಂಸಾರದ ಒಳಗಿನ ಕಳವಳ ಸಿಟ್ಟು ಸಿಡುಕು
ಕೆಲವೊಮ್ಮೆ ಕೋಲಾಹಲಗಳಂತೆಯೂ
ಕಂಡರೆ,

ಎಂಟನೇ ಹೆನ್ರಿ ಎನ್ನುವ ಬ್ರಿಟಿಷ್ ಪ್ರಭುವಿಗೆ
ತಾನೇ ದೇಶವೆನ್ನಿಸಿ
ದೇಶ ಉಳಿಯೋದೇ ತನ್ನ ಬೀಜದಿಂದ ಹುಟ್ಟುವ ಮಗನಿಂದ ಎನ್ನಿಸಿ
ಈ ಮಗರಾಯನನ್ನು ಪಡೆಯೋಕೆ ಅರ್‍ಹವಾದ ಯೋನಿ ಹುಡುಕುತ್ತ
ಸರದಿ ಮೇಲೆ ಮದುವೆಯಾಗಿ
ಗಂಡು ಹೆರಲಾರದ ಯೋನಿಗಳು ದೇಶದ್ರೋಹಿಗಳಾಗಿ ಕಂಡು
ಸರದಿ ಮೇಲೆ ಮದುವೆಯಾದವರನ್ನು ಸರದಿ ಮೇಲೆ ಕೊಂದು
ಆಳೋದು ಎಂಟನೇ ಹೆನ್ರಿಗೆ
ದೈವ ಸಂಕಲ್ಪವೇ ತನ್ನ ಮೂಲಕ ಈಡೇರಿ ಒಂಬತ್ತನೇ ಹೆನ್ರಿಯನ್ನು
ಹಡೆಯುವ ಚರಿತ್ರೆ
*****