ಕಾವ್ಯಾಕ್ಷಿ

ಆ ಗಿಡಾ, ಈ ಗಿಡಾ
ಒಂದೊಂದೂ ಜೇಂಗೊಡಾ;
ಬಾಂದೇವಿಗೆ
ನೆಲದಾಯಿಯ
ಹೂಗೊಂಡೆಯ ಹೊಂಗೊಡಾ

ಯಾವ ಹಸಿರೊ, ಯಾವ ಹೆಸರೊ
ತರುಲತೆಗಳ ತೋರಣಾ;
ಬಂದುದೆಲ್ಲಿ?
ಬೆಳೆಯಿತಲ್ಲಿ?
ನಿಷ್ಕಾರಣ ಕಾರಣಾ

ನೀಲಾಂಗಣ, ತಿರೆ-ಕಂಕಣ
ಕೆಂದಳಿರಿನ ಕಾವಣಾ;
ಅಲ್ಲಿ ಇಲ್ಲಿ
ಎಲ್ಲೆಲ್ಲಿಯು
ಸವಿಹಾಡಿನ ರಿಂಗಣಾ

ಹೂ ಹೂವಿಗೆ ದುಂದುಂಬಿಯ
ಮೈ ಕೈಗಳ ಸ್ಪರ್ಶನಾ;
ಅಪರಂಜಿಯ
ಅನುರಾಗದ
ಮಾಧುರ್ಯದ ಬಂಧನಾ

ಮಾಂದಳಿರಿನ ಮೇಲ್ಮಾಳಿಗೆ
ಮಧುಕೋಗಿಲೆಗಾಸರಾ;
ಎದೆಯುಬ್ಬಿಸಿ
ಕುಕಿಲಿಡುತಿರೆ
ಎಲೆ ಎಲೆಗಳ ಮರ್‍ಮರಾ

ಅಳಲುಸಿರಿಗೆ ಸುಸಿಲುಸಿರಿನ
ತಂಪಿನ ತಳಿ ಚಿಮುಕಲಾ;
ಹಾಲುಗಳ್ಳಿ
ಜೋಲು ಬಳ್ಳಿ
ತೂಗುಮಂಚ ಚಂಚಲಾ

ಜುಳು ಜುಳು ನದಿ ಕಲ ಕಲ ರುತಿ
ಜೋಗುಳದುಲಿ ಕೇಳಲಾ;
ವಿಶ್ವದೊಡಲ
ತಣಿಸಲೆಂದ
ಹಾಲ್ಜೇನಿನ ಮಳೆಯಲಾ

ತಿರೆಯ ನವಿರು ಹುಲ್ಲು ಹಸಿರು
ಮಕಮಲ್ಲಿನ ಮುಸುಗಲಾ
ಮುಗುದೆ ತನ್ನ
ಮನೆಗೆಲಸದಿ
ಗುಣುಗುಣಿಸುವ ಹಾಡಲಾ
ಹಕ್ಕಿಜೋಡಿ ಒಂದುಗೂಡಿ
ಉಲಿಯುತಿರುವ ಹುಮ್ಮಸಾ;
ಬನದೈಸಿರಿ
ಕುಶಲ ಕುಂಚ
ಚಿತ್ರದಂತೆ ಹೊಸ ಹೊಸಾ
* * *

ತನಗೆ ತಾನೆ ತಿಳಿಯದಂತೆ
ತುಳುಕಿತಹಹ ಭಾವನಾ
ಕಮ್ಮಲರಿಗೆ
ಕವಿ-ಗಾಳಿಗೆ
ಕಾವ್ಯಾಕ್ಷಿಗೆ ವಂದನಾ
*****