ಪಕ್ಷಿಗಾಗಿ ಕಾದು

ಮೊದಲೊಂದು ಪಂಜರ ಬರಿ
ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ.

ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ
ಏನನ್ನೋ ಪಂಜರದಲ್ಲಿ ಬಿಡಿಸು

ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು.
ಮರದ ಹಿಂದೆ ಅಡಗಿಕೊ
ಅಲುಗಾಡಬೇಡ
ಸುಮ್ಮನೆ ಎಂದರೆ ಸುಮ್ಮನೆ ಇರು
ಕೆಲವೊಮ್ಮೆ ಪಕ್ಷಿ ಕೂಡಲೇ ಹಾಜರಾಗುವುದುಂಟು
ಅಥವಾ ಅದು ಆಗಮಿಸಲು ಬಹಳ ಕಾಲ ಕಾಯಬೇಕಾಗಬಹುದು
ಪಕ್ಷಿಗೂ ಮನಸ್ಸಾಗಬೇಕಲ್ಲ?

ಪಕ್ಷಿ ಬೇಗೆ ಬರೋದು, ತಡವಾಗಿ ಬರೋದು
ನಿನ್ನ ಚಿತ್ರದ ಯಶಸ್ಸಿಗೆ ಸಂಬಂಧಿಸಿದ್ದಲ್ಲ

ಪಕ್ಷಿ ಬರುವುದಾದರೆ
ಬಂದಾಗ!
ಮೌನವಾಗಿರು
ಅದು ಪಂಜರದ ಒಳಹೋಗುವ ತನಕ
ಆತುರಪಡದಂತೆ ಕಾದಿರು
ಹೊಕ್ಕ ಮೇಲೆ ಬ್ರಷ್‌ನಿಂದ ಒಂದೇ ಒಂದು ಗೆರೆ ಎಳೆದು
ಪಂಜರದ ಬಾಗಿಲನ್ನು ಮೃದುವಾಗಿ ಮುಚ್ಚು
ಆಮೇಲೆ ಪಂಜರದ ಸರಳುಗಳನ್ನು ಒಂದೊಂದಾಗಿ ಬಿಡಿಸು
ಬಿಡಿಸುವಾಗ ಪಕ್ಷಿಯ ಪುಕ್ಕ ಮುಟ್ಟದಂತೆ ಹುಷಾರಾಗಿರು

ಆಮೇಲೆ ಮರದ ಚಿತ್ರ ಬರಿ
ಅದರ ಅತ್ಯಂತ ಸುಂದರ ಕೊಂಬೆಯೊಂದನ್ನು ನಿನ್ನ ಪಕ್ಷಿಗಾಗಿ ಬಿಡಿಸು

ಹಸಿರಾದ ಎಲೆಗಳನ್ನು, ತಾಜಾಗಾಳಿಯನ್ನು, ಬಿರುಬಿಸಿಲಿನಲ್ಲಿ ಮಿನುಗುವ ಧೂಳನ್ನು
ಬಿಸಿಲಿನ ಬೇಗೆಯಿಂದಾಗಿ ಹುಲ್ಲಲ್ಲಿ ಅಡಗಿದ ಕೀಟಗಳ ಸದ್ದನ್ನು
ಆಮೇಲೆ ಬಿಡಿಸು
ಪಕ್ಷಿ ತನ್ನಷ್ಟಕ್ಕೆ ಹಾಡಿಕೊಳ್ಳುವುದನ್ನು ಆಲಿಸು
*****
(೮೦ರ ದಶಕದಲ್ಲಿ ಹಲವು ಐರೋಪ್ಯ ಕವಿಗಳನ್ನು ಓದುತ್ತಿದ್ದಾಗ ಗೀಚಿಕೊಂಡಿದ್ದ ಈ ಸಾಲುಗಳಿಗೆ ಪ್ರೇರಣೆ ಕೊಟ್ಟ ಕವಿಯ ಹೆಸರನ್ನು ಮರೆತಿದ್ದೇನೆ).