ಷೆಲ್ಲಿ ಕವಿಯನ್ನು ಕುರಿತು

ಭೋರ್‍ಗರೆವ ಕಡಲು ನಿನ್ನೊಡಲ ನುಂಗಿತೆ ಷೆಲ್ಲಿ?
“ನಿನ್ನ ಮುಳುಗಿಸಿದ ನೀರಿನ ಬಲವನೊಂದು ಕೈ
ನೋಡಿ ಬಿಡುವೆನು” ಎಂದ ಬೈರನ್-ಕವಿಯೆ ಸೈ!

ನೂರು ನೋವನ್ನುಂಡ ಕವಿಜೀವ ನಿನಗೆಲ್ಲಿ
ವಿಶ್ರಾಂತಿ? ಶಾಂತಿಯೆಂಬುದೆ ಭ್ರಾಂತಿ! ಚಿರಕಾವ್ಯ-
ನಂದನದ ಮಂದಾರ! ನವದೃಷ್ಟಿ ನೇತಾರ!
ನಿನ್ನಂತೆ ದಿವ್ಯಲೋಕದ ಕನಸ ಸವಿದದರ
ನನಸಿಂಗೆ ನವೆದರತಿ ವಿರಳ; ಬಗೆ ಸಂಭಾವ್ಯ,
ನಿರ್‍ವಿಕಾರದ ಬುದ್ಧಿ ಹೃದಯಗಳ ವಿದ್ಯುದಾ
ಲಿಂಗನಕೆ ಪ್ರೇಮವೆಂದೊರೆದೆ; ನಿನ್ನ ದುಃಖದ
ಪಾಡು ಜೇನ್ ಕರೆವ ಹಾಡು! ವಿಲಕ್ಷಣ ಜಗದ
ವಿಗುರ್‍ಭಣೆಗಂಜುವದ ಮನೋದೌರ್‍ಬಲ್ಯದಾ-
ಕಳಿಕೆ ನಿನಗಿರಲಿಲ್ಲ; ನಿನ್ನಾತ್ಮ ಶಕ್ತಿ ಖನಿ!
ನಿನ್ನ ನೆನೆದೊಡದೇಕೊ ದುಡುಗುಟ್ಟುವವು ಧಮನಿ!
*****