ಎರಡೆದೆಗಳು ತುಡಿಯುತ್ತಿವೆ ಪ್ರೇಮಾಂಬುಧಿಗೆಳಸಿ
ಆ ಗಂಗಾ ಯಮುನೆಯರೂಲು ಚಿರ ಸಂಗಮ ಬಯಸಿ.
ನಡುದಾರಿಗೆ ಅಡ್ಡೈಸಿವೆ ಗುಡುಗಾಡಿವೆ ಮುಗಿಲು
ಹೆಡೆಯೆತ್ತುತ ಪೂತ್ಕರಿಸಿದ ಬಿರುಗಾಳಿಯ ಹುಯಿಲು.
ನಿಡು ಬಯಕೆಯ ಹಿಂದೂಡಿರೆ ಹರಿಗಡಿಸಿರೆ ಸೋಲು
ಗಿರಿದರಿಗಳು ಅವ್ವಳಿಸಿರೆ ತಿರುಗಣಿಯೊಲು ಹೊನಲು!
ಕಟ್ಟಳೆಗಳ ಕಟ್ಟೊಡೆಯುವೆ ಸ್ವಚ್ಛಂದದಿ ನಲಿವೆ-
ಎನ್ನುತ ಹಿರಿಯೊಲವಿನ ಝರಿ ಹರಿದಿರಲೇಗೈವೆ?
ಸವಿಯೊಲುಮೆಗೆ ರಂಗೆರಚಿದೆ ಬಾಂಬಿಲ್ಲಿನ ಬಣ್ಣ
ಮುಂಬಾಳಿಗೆ ಬಾಂಬಟ್ಟೆಯು ತರೆದಂತಿದೆ ಕಣ್ಣ!
ಬಾನವರನು ಬಿಟ್ಟೋಡುತ ಮಾನವರೆದೆ ಸೇರಿ
ವಿದ್ಯುನ್ನಟಿ ಇಳೆಗಿಳಿದಳೊ ಮಿಂಚಿನ ನಗೆ ಬೀರಿ!
ಹೆಣ್ಣಿನ ಕಣ್ಣಂಚಿನಲಿದೆ ಕಡೆಗಾಣದ ಆಶೆ
ಆ ಕಾಂತಿಯೆ ತಾರಾಪಥದೆಡೆಗೊಯ್ಯುವದೈಸೆ?
ಸವಿಸೊಲ್ಲಿಗೆ ನಗೆಮಲ್ಲಿಗೆ ಸಖಿ ಜೀವದ ಕಾಣ್ಕೆ
ರೋಮಾಂಚನ ಪಡೆದಂತಿದೆ ಹಸಿರುಟ್ಟಿಹ ನೆಲಕೆ!
ಪಂಜರದಲಿ ಅಗವಟ್ಟಿಹ ಗಿಳಿಗೆಲ್ಲಿದೆ ತ್ರಾಣ?
ಪಕ್ಕದಲಿಹ ರೆಕ್ಕೆಗಳಲಿ ಬಿಕ್ಕಳಿಸಿದೆ ಪ್ರಾಣ!
ಬಾನಾಡಿಯ ನುಣ್‌ಗೊರಲಿಗೆ ಗುಡಿಗಟ್ಟಿವೆ ದಿಕ್ಕು
ಎದೆ ಗೂಡಿನ ಗೆಡೆವಕ್ಕಿಗೆ ಬಹುದೆಂದಿಗೆ ಉಕ್ಕು?
ಓ ಎಂದಿಗೆ! ಇನ್ನೆಂದಿಗೆ ನೋಂತರ ಸಮ್ಮಿಲನ?
ಹೊಸಬಾಳಿನ ಹೊಸಹಾಡಿಗೆ ರಸಮಯ ಸಂಸ್ಕರಣ?
*****