ಎಪ್ಪತ್ತರ ಬೇಂದ್ರೆ

ಕಣ್ಣು ಮಿಂಚಿಸಿ, ನೂರು ಹಂಚಿಕೆಯ ಸಂಚಿಕೆಯ
ತುಂಬಿ ತಲೆಯಾಡಿಸುತ, ಯಾವುದೋ ಒಳದನಿಗೆ
ನಾದ ಕೂಡಿಸಿ, ನೆಲಕೆ ನೀರು ಬರಿಸುವ ಹಾಗೆ
ಬೀಸುಗಾಳಿಯ ಜೊತೆಗೆ ಬಂದರದೊ ಬೇಂದ್ರ! ಕೈಯ
ಮಾಟಕ್ಕೆ ಮಾತು ಮಾಂತ್ರಿಕನಾಟಃ ಅರಗಳಿಗೆ-
ಹೊರ-ಒಳಗೆ ತುಂಬಿ ತುಳುಕುವ ಬೆಡಗು. ಕಡಲ ಗುಟು-
ಕರಿಸಿ, ಚಿಕ್ಕೆಗಳ ಮುಕ್ಕಳಿಸುವರು; ತಟ್ಟನೆ ಒಗಟು
ಒಡೆಯುವ ಒಡಪು-ನುಡಿ: ಕುಡಿಮಿಂಚು ಬಾನ ಗುಡಿಗೆ.
ಇಪ್ಪತ್ತೊ? ಎಪ್ಪತ್ತೊ? ಮುಪ್ಪತ್ತು ಮುಂದೆ ನಡೆ;
ಅಂಬಿಕಾತನಯನಿಗೆ ದತ್ತು ಕೊಟ್ಟಂದು ಇವ-
ರೊಪ್ಪತ್ತು, ಜಗದಂಬೆ-ಹಡಲಿಗೆ ಹೊತ್ತು ಕುಣಿವ-
ಗೆಲ್ಲಿ ಪುರಸತ್ತು? ಹಣ್ಣಾದ ಕೇದಿಗೆಯ ಹೊಡೆ:
ಚೂಪಾದ ಗರಿ: ಹುಷಾರಿ; ಕಂಪಿಗೆಲ್ಲಿಯ ಕೊರತೆ?
ನಡೆದದ್ದೆ ಸಾಧನಕೇರಿ, ನುಡಿದದ್ದ ಕವಿತೆ.
*****