ಸಮೂಹ ಮಾಧ್ಯಮಗಳು

– ೧ –

ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು:
ಬೆಟ್ಟ ಮಾಡಿ ರವೆಯಷ್ಟನ್ನು
ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು.
ಅವುಗಳಿಗೆ ಅತಿ ಮುಖ್ಯ
ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ.
ಶಾಶ್ವತದ ಹೂರಣಕ್ಕೆ ಮಾಡಿ ದಖಲ್ ಪಟ್ಟಿ
ಮುಜುರೆ ಸಲ್ಲಿಸುತ್ತವೆ
ಸಾಮಯಿಕ ಕಣಕಕ್ಕೆ ಪಟ್ಟಿ ಕಟ್ಟಿ.

ತಾರಾಮೌಲ್ಯವಿರದ ಭೂಪ
ಅವುಗಳ ಪಾಲಿಗೆ ಮರೆವಿನ ಕೂಪ;
ಚಾಲ್ತಿಯಿಲ್ಲದ ಭೂಗತ ಸ್ತೂಪ.
ಎಂದೇ, ಆ ಮಾಧ್ಯಮಗಳ ಉದ್ದಗಲ
ಲೌಕಿಕ ಸಾಧಾರಣರದೇ ನಿತ್ಯ ಗದ್ದಲ:
ರಾಜಕಾರಣಿ ಶಕುನಿ, ಸಿನಿಮಾ ಮೊದ್ದು ಕಣ್ಮಣಿ,
ಕ್ರಿಕೆಟ್ ಶಿಖಾಮಣಿಗಳದೇ ಕೈಫಿಯತ್ತು;
ಅವರದೇ ದೇಖಾವೆಯ ದೊಂಬರಾಟದ ಗರ್ದಿ ಗಮ್ಮತ್ತು.

– ೨ –

ಸಾಧನಾಸಮರ್ಪಿತ ಅಂತರ್ಮುಖಿಗಳಾಗಿ
ಲೋಕ ಕಲ್ಯಾಣಾರ್ಥ ಜೀವವನೆ ಚಂದನಗಳಾಗಿ ನೀಗಿ
ದೂರದೇಕಾಂತದಜ್ಞಾತ ಎಡೆಗಳಲ್ಲಿ
ಪರಿಪಕ್ವವಾಗುತ್ತ ಆಧ್ಯಾತ್ಮ ಅನುಭಾವದಡೆಗಳಲ್ಲಿ,
ಕಂಗಾಲರನವರತ ಕೈಂಕರ್ಯದಾರೈಕೆಯಲ್ಲಿ,
ಸಚರಾಚರದ ಶ್ರೇಯಸಿನ ಹಾರ್ದ ಹಾರೈಕೆಯಲ್ಲಿ
ಬದುಕ ಕೃತಕೃತ್ಯತೆಗೆ ಹಾಯಿಸಿದ
ಯೋಗಿ ಸಂತ ದಾರ್ಶನಿಕ ಮಹಾಕವಿ ಸತ್ವಗಳ
ತೇಜೋಜ್ವಲ ಚಿರ ಚೇತನ ಮಹತ್ವಗಳ
ಅರಿವು ಬಾರದು ಸಮೂಹ ಮಾಧ್ಯಮಗಳಿಗೆ
ದಿನನಿತ್ಯದಾಗುಹೋಗುಗಲ ಬಾಲವನು
ನೇರ್ಪಡಿಸುವುದರಲ್ಲಿ ನಿಮಗ್ನವಾದ ನಫೆಯ ನಳಿಗೆಗಳಿಗೆ.

– ೩ –

ಲೋಕದ ಜಾಯಮಾನವೇ ಹೀಗೆ
ಸುಪ್ರಶಸ್ತ ಅದಕ್ಕೆ ಕಾಗೆ, ಡೇಗೆ;
ನೆನಪಾಗುವುದು ಅಪರೂಪ ಸೋಗೆ.
ಅದರ ಸ್ಥೂಲ ದೃಷ್ಟಿಗೆ ಬಿದ್ದು
ಕಾಣಿಸುವುದು ತತ್‌ಕ್ಷಣಕ್ಕೆದ್ದು
ಮೇಲುಗಡೆ ರಾರಾಜಿಸುವ ಹರಳಿನುಂಗುರದ
ನಾಲ್ಕು ಬೆರಳು ಮಾತ್ರ;
ತಗ್ಗಿನ ಹೆಬ್ಬೆಟ್ಟು ಅದರ ಕೃಪಾವಲೋಕನಕ್ಕೆ ಚಿರ ಅಪಾತ್ರ.
ಅದರದು ಕೆಳಗಿರುತ್ತಲೇ,
ಸ್ವಂತ ಮೇಲ್ಮನೆಯನು ಮರೆಸುತ್ತಲೇ
ಸಲ್ಲಿಸುತ್ತದೆ ಸತ್ಕಾಯಕವ, ನಿರಾಭರಣ.
ಎಂದೇ, ಎಲ್ಲ ಬೆರಳುಗಳಿಗಿಂತ ಅದು ಗಣ್ಯ, ಅಸಾಧಾರಣ.
ಅದರ ನೆರವಿರದೆ ಯಾವುದನು ತಾನೆ
ಹಿಡಿಯಲಾದೀತು ಗಟ್ಟಿ?
ಕಾರ್ಯ ನೆರವೇರಿಸಲಾದೀತು ಬೆರಳುಗಳು ಮುಟ್ಟಿ?
ಅದನುಳಿದು ಮುಚ್ಚಿದರೆ
ಅಪೂರ್ಣ, ಅಸಾರ್ಥಕ ಭದ್ರ ಮುಷ್ಟಿ.
*****
ಕೀಲಿಕರಣ: ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.